‘ಮೋದಿ’ ಉಪನಾಮ ಟೀಕೆಗೆ ಸಂಬಂಧಿಸಿದ ಮಾನನಷ್ಟ ಪ್ರಕರಣದ ಶಿಕ್ಷೆಗೆ ತಡೆ ಕೋರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿಯನ್ನು ಸೂರತ್‌ನ ನ್ಯಾಯಾಲಯ ತಿರಸ್ಕರಿಸಿದೆ. ಹೀಗಾಗಿ ಎರಡು ವರ್ಷಗಳ ಜೈಲು ಶಿಕ್ಷೆಯ ಕತ್ತಿ ರಾಹುಲ್ ತಲೆಯ ಮೇಲೆ ತೂಗಿದೆ. ನಿವಾರಿಸಿಕೊಳ್ಳಲು ಉಳಿದಿರುವ ದಾರಿ ಮತ್ತು ಸಮಯ ಅತ್ಯಲ್ಪ. ಉಚ್ಚ ನ್ಯಾಯಾಲಯ-ಸರ್ವೋಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡದೆ ಹೋದರೆ ಅವರು ಜೈಲಿಗೆ ಹೋಗಬೇಕಾಗುವುದೇ? ಕಾದು ನೋಡಬೇಕಿದೆ.
ಅದಾನಿ ಮೋದಿ ಸಂಬಂಧವನ್ನು ನಿರಂತರವಾಗಿ ಪ್ರಶ್ನಿಸಿ ಪ್ರಧಾನಿಯವರಿಗೆ ಮುಜುಗರ ಮೂಡಿಸುತ್ತಿರುವ ರಾಹುಲ್ ಅವರನ್ನು ಹೇಗಾದರೂ ಮಾಡಿ ಜೈಲಿಗೆ ಕಳಿಸಿಯೇ ತೀರಬೇಕೆಂದು ಮೋದಿ ಸರ್ಕಾರ ಮಿಂಚಿನ ವೇಗದಲ್ಲಿ ತೀರ್ಮಾನಿಸಿದಂತಿದೆ. ಇಲ್ಲವಾದರೆ ರಾಹುಲ್ ವಿರುದ್ಧದ ಮಾನಹಾನಿ ಮೊಕದ್ದಮೆ ಇಷ್ಟು ಅಸಹಜ ವೇಗದಲ್ಲಿ ಇತ್ಯರ್ಥ ಆಗುವುದು ಅನುಮಾನವಿತ್ತು.
ಕೋಲಾರದ ಚುನಾವಣಾ ಪ್ರಚಾರ ಸಭೆಯಲ್ಲಿ ರಾಹುಲ್ ಆಡಿದ ಮಾತಿನಿಂದ ಮಾನಹಾನಿಯಾಗಿದೆ ಎಂದು ಗುಜರಾತಿನ ಬಿಜೆಪಿ ಶಾಸಕ ಸೂರತ್‌ನಲ್ಲಿ ದೂರು ನೀಡಿದ್ದು, ೨೦೧೯ರ ಏಪ್ರಿಲ್ ೧೬ರಂದು. ಆಗ ದವೆ ಎಂಬವರು ಮ್ಯಾಜಿಸ್ಟ್ರೇಟ್ ಆಗಿದ್ದರು. ೨೦೨೧ರ ಜೂನ್ ತಿಂಗಳಲ್ಲಿ ರಾಹುಲ್ ಗಾಂಧಿ ಸೂರತ್ ನ್ಯಾಯಾಲಯದಲ್ಲಿ ಹಾಜರಾಗಿ ತಮ್ಮ ಹೇಳಿಕೆಯನ್ನು ನೀಡಿದ್ದಾರೆ. ರಾಹುಲ್ ಹೇಳಿಕೆಯ ಸಾಕ್ಷ್ಯಗಳನ್ನು ಮಂಡಿಸಿ ರಾಹುಲ್ ಗಾಂಧೀ ಅವರನ್ನು ಪುನಃ ನ್ಯಾಯಾಲಯದ ಮುಂದೆ ಕರೆಯಬೇಕೆಂದು ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ೨೦೨೨ರ ಮಾರ್ಚ್ ತಿಂಗಳಲ್ಲಿ ನ್ಯಾಯಾಲಯವನ್ನು ಕೋರಿದ್ದಾರೆ. ನ್ಯಾಯಾಧೀಶ ದವೆ ಈ ಅರ್ಜಿಯನ್ನು ತಳ್ಳಿ ಹಾಕಿದ್ದಾರೆ. ಈ ಬೆಳವಣಿಗೆಯ ಅನಂತರ ತಾವೇ ನಡೆಸಿದ್ದ ಸಭೆಗೆ ಹೈಕೋರ್ಟಿನಿಂದ ತಡೆಯಾಜ್ಞೆ ತಂದಿದ್ದಾರೆ ಪೂರ್ಣೇಶ್. ಒಂದು ವರ್ಷ ಕಾಲ ತಣ್ಣಗೆ ಕುಳಿತಿದ್ದ ಪೂರ್ಣೇಶ್ ಇದೇ ಫೆಬ್ರವರಿ ೧೬ರಂದು ಹಠಾತ್ತನೆ ಹೈಕೋರ್ಟ್ ಮುಂದೆ ಹೋಗಿದ್ದಾರೆ. ಮೊಕದ್ದಮೆಗೆ ಅಗತ್ಯವಿರುವ ಸಾಕ್ಷ್ಯ ಪುರಾವೆಗಳು ಸಂಗ್ರಹವಾಗಿವೆಯೆಂದು ನಿವೇದಿಸಿಕೊಂಡು, ತಡೆಯಾಜ್ಞೆ ತೆರವು ಮಾಡಿಸಿದ್ದಾರೆ. ಪೂರ್ಣೇಶ್ ಪುನಃ ಸೂರತ್ ಮ್ಯಾಜಿಸ್ಟ್ರೇಟ್ ಕೋರ್ಟಿನ ಮುಂದೆ ಸಕ್ರಿಯರಾಗಿದ್ದಾರೆ. ಈ ನಡುವೆ ನ್ಯಾಯಾಧೀಶ ದವೆಯವರ ಸ್ಥಾನಕ್ಕೆ ನ್ಯಾಯಾಧೀಶ ಎಚ್.ಎಚ್.ವರ್ಮ ಬಂದಿದ್ದಾರೆ. ತಿಂಗಳೊಪ್ಪತ್ತಿನಲ್ಲಿ ಶಿಕ್ಷೆಯ ತೀರ್ಪು ಪ್ರಕಟವಾಗಿದೆ.
ಕಳೆದ ೧೯ ವರ್ಷಗಳಿಂದ ವಾಸವಿದ್ದ ಸರ್ಕಾರಿ ಬಂಗಲೆಯನ್ನು ಖಾಲಿ ಕೇಂದ್ರ ಸರ್ಕಾರದ ನೋಟಿಸಿಗೆ ತಡಮಾಡದೆ ಪ್ರತಿಕ್ರಿಯಿಸಿರುವ ರಾಹುಲ್ ತೆರವು ಮಾಡಿ ಬೀಗದ ಕೈಗಳನ್ನು ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಒಂದು ವೇಳೆ ರಾಹುಲ್ ಜೈಲಿಗೆ ಹೋಗಬೇಕಾಗಿ ಬಂದರೂ ರಾಜಕೀಯವಾಗಿ ಅವರು ಕಳೆದುಕೊಳ್ಳುವುದಕ್ಕಿಂತ ಗಳಿಸಿಕೊಳ್ಳುವುದೇ ಹೆಚ್ಚು. ಮಂಕಾಗಿರುವ ಕಾಂಗ್ರೆಸ್ಸು ಮತ್ತು ಪ್ರತಿಪಕ್ಷ ರಾಜಕಾರಣ ಸಂಘರ್ಷದ ದಾರಿ ಹಿಡಿಯಲು ಈ ಘಟನೆ ವೇಗವರ್ಧಕ ಆದರೂ ಆಶ್ಚರ್ಯವಿಲ್ಲ.
೧೯೭೭ರ ಅಕ್ಟೋಬರ್‌ನಲ್ಲಿ ಅಂದಿನ ಜನತಾ ಪಕ್ಷದ ನೇತೃತ್ವದ ಕೇಂದ್ರ ಸರ್ಕಾರ ಇಂದಿರಾ ಗಾಂಧಿ ಅವರನ್ನು ಬಂಧಿಸಿ ಸೆರೆಮನೆಗೆ ಕಳಿಸಿತ್ತು. ಈ ಸೇಡಿನ ಕ್ರಮ ಜನತಾಪಕ್ಷಕ್ಕೆ ತಿರುಗುಬಾಣವಾಗಿ ಪರಿಣಮಿಸಿತು. ೧೯೭೮ರ ನವೆಂಬರ್‌ನಲ್ಲಿ ಇಂದಿರಾ ಗಾಂಧಿ ಚಿಕ್ಕಮಗಳೂರಿನಿಂದ ಲೋಕಸಭೆಗೆ ಆರಿಸಿ ಬಂದರು. ಜನತಾ ಸರ್ಕಾರ ಪತನವಾಗಿ ಎರಡೇ ವರ್ಷಗಳಲ್ಲಿ ಇಂದಿರಾ ಅಧಿಕಾರಕ್ಕೆ ಮರಳಿದ್ದರು. ಅಂದಾಕ್ಷಣ ದೇಶದ ಮೇಲೆ ಇಂದಿರಾ ಹೇರಿದ್ದ ತುರ್ತುಪರಿಸ್ಥಿತಿಯನ್ನು ಜನ ಸಮರ್ಥಿಸಿದರೆಂದು ಅರ್ಥವಲ್ಲ. ಇಂದಿರಾ ಅವರ ಈ ಪ್ರಕರಣ ಇಂದಿನ ರಾಜಕಾರಣದಲ್ಲಿ ಕಾಂಗ್ರೆಸ್ ಅಥವಾ ರಾಹುಲ್ ಅಂದಿನ ರೂಪದಲ್ಲೇ ಮರುಕಳಿಸಬೇಕೆಂದೇನೂ ಇಲ್ಲ. ರಾಜಕಾರಣದಲ್ಲಿ ಸೇಡು ತೀರಿಸಿಕೊಳ್ಳಲು ವ್ಯಕ್ತಿಯ ಹಿಂದೆ ಬೆನ್ನು ಬಿದ್ದು ಬೇಟೆಯಾಡುವ ಅಧಿಕಾರಸ್ಥರ ಪ್ರವೃತ್ತಿಯನ್ನು ಮತದಾರರು ಸುಲಭಕ್ಕೆ ಒಪ್ಪುವುದಿಲ್ಲ ಎಂಬ ಕಟು ಸತ್ಯವನ್ನು ಇಂದಿರಾ ಪ್ರಕರಣ ಎತ್ತಿ ತೋರಿದೆ.
ಇತ್ತೀಚೆಗೆ ಲೋಕಸಭೆಯಲ್ಲಿ ರಾಹುಲ್ ಭಾಷಣಗಳು ಆಳುವ ಪಕ್ಷವನ್ನು ಮುಜುಗರಕ್ಕೆ ಸಿಲುಕಿಸಿದ್ದವು. ಭಾರತ್ ಜೋಡೊ ಯಾತ್ರೆಯ ಯಶಸ್ಸಿನ ಅನಂತರ ರಾಹುಲ್ ಆಕ್ರಮಣಕ್ಕೆ ಮತ್ತಷ್ಟು ಮೊನಚು ಮೂಡಿತ್ತು. ಅದಾನಿ ಮೋದಿಯವರ ಸಂಬಂಧವನ್ನು ಸದನದಲ್ಲಿ ಪ್ರಶ್ನಿಸಿದ್ದರು. ಅದಾನಿ ಷೇರು ಹಗರಣದ ತನಿಖೆಗೆ ಜಂಟಿ ಸದನ ಸಮಿತಿ ರಚಿಸುವಂತೆ ಆಗ್ರಹಿಸಿದ್ದರು. ಅದಾನಿ ಕುರಿತ ಯಾವ ಆಪಾದನೆಗಳಿಗೂ ಮೋದಿಯವರು ಸದನದಲ್ಲಿ ಉತ್ತರ ನೀಡಿರಲಿಲ್ಲ.
ರಾಹುಲ್ ಅವರನ್ನು ತೀವ್ರ ತೇಜೋವಧೆ ಮಾಡಿ, ಪಪ್ಪು ಎಂಬ ಸುಳ್ಳನ್ನೇ ಸಾವಿರ ಬಾರಿ ಹೇಳಿ ಸತ್ಯವಾಗಿಸುವ ಗೊಬೆಲ್ಸ್ ಪ್ರಚಾರ ತಂತ್ರ ಬಹುತೇಕ ಫಲ ನೀಡಿತ್ತು. ಈ ತೇಜೋವಧೆ ತಮ್ಮನ್ನು ತಾಕಿಯೇ ಇಲ್ಲವೆಂಬ ಮಾನಸಿಕ ಗಟ್ಟಿತನ ತೋರಿ ನೆಲಕಚ್ಚಿ ನಿಂತಿರುವ ಕಾಂಗ್ರೆಸ್ ತಲೆಯಾಳು ಸುಲಭವಾಗಿ ಸೋಲೊಪ್ಪುತ್ತಿಲ್ಲ. ಭಾರತ್ ಜೋಡೊ ಯಾತ್ರೆಯು ರಾಹುಲ್ ತೇಜೋವಧೆಯ ತಂತ್ರವನ್ನು ದುರ್ಬಲವಾಗಿಸಿದೆ.
ಕಡು ಕೋಮುವಾದಿ ರಾಜಕಾರಣದ ವಿಜೃಂಭಣೆಯ ನಡುವೆ ಪ್ರತಿಪಕ್ಷಗಳು ನಿಸ್ತೇಜವಾಗಿ ಅಡ್ಡ ಮಲಗಿರುವ ದಿನಗಳಿವು. ಭಾರತ್ ಜೋಡೊ ಯಾತ್ರೆಯ ಅನಂತರ ರಾಹುಲ್ ಗಾಂಧಿ ಅವರಲ್ಲಿ ಹೊಸ ಆತ್ಮವಿಶ್ವಾಸ ತುಳುಕಿದ್ದು ಮತ್ತು ಅವರ ಕುರಿತು ಹರಡಲಾಗಿದ್ದ ಪೂರ್ವಗ್ರಹಗಳು ಚೆದುರುತ್ತಿರುವುದು ಸ್ಪಷ್ಟವಿತ್ತು.
ಒಂದೊಮ್ಮೆ ಹದಿನೆಂಟು ತಿಂಗಳುಗಳ ಕಾಲ ನಾಗರಿಕ ಹಕ್ಕುಗಳನ್ನು ತುಳಿದಿಟ್ಟಿದ್ದ ಪಕ್ಷವೊಂದರ ನಾಯಕನಾಗಿ ರಾಹುಲ್ ಗಾಂಧಿ ಸರ್ವಾಧಿಕಾರದ ವಿರುದ್ಧ, ಮೂಲಭೂತ ಹಕ್ಕುಗಳ ದಮನದ ವಿರುದ್ಧ ದನಿ ಎತ್ತಿರುವುದು ಆಶಾದಾಯಕ ಬೆಳವಣಿಗೆ. ಹೀಗಾಗಿ ಹೊಸದಾಗಿ ಹೊಮ್ಮಿರುವ ರಾಹುಲ್ ಗಾಂಧಿಯನ್ನು ಮರಳಿ ಕೆಡವಲು ಮೋ-ಶಾ ಜೋಡಿ ಹೊಸ ಹೊಸ ತಂತ್ರಗಳನ್ನು ಹೆಣೆಯುತ್ತಿದೆ. ಸಾಮ ದಾನ ದಂಡ ಭೇದದ ಎಲ್ಲ ನಾಲ್ಕೂ ಮಾರ್ಗಗಳಿಂದ ರಾಹುಲ್ ಅವರನ್ನು ಹಣಿಯುತ್ತಿದೆ. ಲೋಕಸಭೆಯಲ್ಲಿ ಅವರು ಮಾತಾಡಲು ಬಿಡಲಿಲ್ಲ. ಅವರ ಸಂಸತ್ ಸದಸ್ಯತ್ವವನ್ನು ಕಿತ್ತುಕೊಳ್ಳಲಾಯಿತು. ವಿದೇಶೀ ನೆಲದಲ್ಲಿ ಭಾರತದ ವರ್ಚಸ್ಸನ್ನು ಕುಗ್ಗಿಸಿದರೆಂದು ಮಿಥ್ಯಾಪ್ರಚಾರ ಮಾಡಲಾಯಿತು.
ಗಾಂಧಿ ಪರಿವಾರದ ಸಮೀಪವರ್ತಿಗಳಾಗಿದ್ದ ಜ್ಯೋತಿರಾದಿತ್ಯ ಸಿಂಧ್ಯ ಮತ್ತು ಗುಲಾಮ್ ನಬಿ ಆಜಾದ್ ಅವರ ಮೂಲಕ ರಾಹುಲ್ ಗಾಂಧಿ ಮೇಲೆ ಮೋದಿ-ಶಾ ದಾಳಿ ನಡೆದಿದೆ. ಇಬ್ಬರೂ ಬಿಜೆಪಿ ಹಸ್ತವನ್ನು ಅಲಂಕರಿಸಿರುವ ಹತಾರುಗಳಾಗಿದ್ದಾರೆ. ಗುಲಾಮ್ ನಬಿ ಸಂದರ್ಶನಗಳ ಸರಣಿಯನ್ನೇ ನೀಡಿ ರಾಹುಲ್ ಗಾಂಧಿಯನ್ನು ಬೀಳುಗಳೆದು ಮೋದಿಯವರ ಕೊಂಡಾಟದಲ್ಲಿ ತೊಡಗಿದ್ದಾರೆ. ಅವರ ಸಂದರ್ಶನಗಳನ್ನು ಗೋದಿ ಮೀಡಿಯಾ ಅಬ್ಬರದ ಪ್ರಚಾರ ನೀಡಿ ಪ್ರಸಾರ ಮಾಡುತ್ತಿದೆ. ಕಾಂಗ್ರೆಸ್ ತೊರೆದು ಬಿಜೆಪಿಯನ್ನು ಸೇರಿ ಕೇಂದ್ರ ಮಂತ್ರಿಯಾಗಿರುವ ಜ್ಯೋತಿರಾದಿತ್ಯ ಸಿಂಧ್ಯ ಇಂತಹುದೇ ಸೇವೆಯಲ್ಲಿ ತೊಡಗಿದ್ದಾರೆ.
ಯಾವುದೇ ದಮನ ನಿತ್ಯ ನಿರಂತರವಲ್ಲ. ಅದಕ್ಕೊಂದು ಅಂತ್ಯವಿದ್ದೇ ಇರುತ್ತದೆ. ರಾಹುಲ್ ಗಾಂಧಿ ಮತ್ತು ಅವರ ಪಕ್ಷವನ್ನು ಹಾಲಿ ಮಾನಹಾನಿ ಮೊಕದ್ದಮೆಯ ಅದು ನಿತ್ಯ ನಿರಂತರವಲ್ಲ. ಹೊಸ ಭರವಸೆ ಮೂಡಿಸಿರುವ ವಿದ್ಯಮಾನ ಮತ್ತಷ್ಟು ಗಟ್ಟಿಗೊಳಿಸೀತು.