ಉತ್ತರಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಅಷ್ಟೊಂದು ಹೀನಾಯಕರ ಸೋಲು ಕಂಡ ಕಾಂಗ್ರೆಸ್ ಸಂಪೂರ್ಣ ನೆಲಕಚ್ಚಿದೆ. ಈ ಬಗ್ಗೆ ಏನೆಲ್ಲ ಚರ್ಚೆ ನಡೆದರೂ “ಮೋದಿ” ಹವಾಕ್ಕಿಂತ ಸುಳ್ಳುಗಳೇ ದೇಶದಾದ್ಯಂತ ವಿಜೃಂಭಿಸಿರುವುದು ಸತ್ಯ. ಹೀಗೇ ಈ ಸುಳ್ಳುಗಳು ಮುಂದುವರೆದರೆ ಕಾಂಗ್ರೆಸ್ಸಿಗಿನ್ನು ದೇಶದಲ್ಲಿ ಅಷ್ಟೇ ಅಲ್ಲ, ರಾಜ್ಯದಲ್ಲೂ ಭವಿಷ್ಯ ಇಲ್ಲ ಎಂಬುದು ಖಾತ್ರಿ ಆಗಿದೆ. ಒಂದು ಕಾಲದಲ್ಲಿ ಉ.ಪ್ರ.ವನ್ನು ತನ್ನ ಹಿಡಿತದಲ್ಲಿಸಿಕೊಂಡಿದ್ದ ಕಾಂಗ್ರೆಸ್, ತವರು ಮನೆಯೆಂದೇ ಭಾವಿಸಿತ್ತು. ಆದರೆ, ಇಂದಿನ ಅಧೋಗತಿಯ ಫಲಿತಾಂಶದಲ್ಲಿ 2 ಸ್ಥಾನವನ್ನು ಮಾತ್ರ ಗೆದ್ದು ತೀರಾ ಅವಮಾನ ಹೊಂದಿದೆ.
ಸಮಾಜವಾದಿ ಪಕ್ಷಕ್ಕೆ ಇದ್ದ ಗೆಲ್ಲುವ ಅವಕಾಶವನ್ನು ಮಾಯಾವತಿಯ ಬಿಎಸ್ಪಿ ಅಡ್ಡಗಾಲು ಹಾಕಿ ಸೋಲಿಸಿದೆ. ಹಿಂದೆ ಅಧಿಕಾರದಲ್ಲಿದ್ದಾಗ ಬಿಎಸ್ಪಿ ಮಾಡಿಕೊಂಡ ಸ್ವಯಂಕೃತ ಅಪರಾಧ, ಅಹಂ, ದೌರ್ಜನ್ಯದಿಂದ ತನ್ನ ಗೋರಿ ತಾನೇ ತೋಡಿಕೊಂಡಿದೆ. ಇನ್ನು ಮುಸ್ಲಿಂ ಮತಗಳ ಮೇಲೆ ಕಣ್ಣಿಟ್ಟಿದ್ದ ಓವೈಸಿಯೂ ಸಮಾಜವಾದಿ ಪಕ್ಷಕ್ಕೆ ಮುಳ್ಳು ಹಾಕಿದ್ದು ಜಗಜ್ಜಾಹೀರು.
ಸನ್ಯಾಸಿಯೊಬ್ಬ ಆಡಳಿತ ನಡೆಸಲು ಸಮರ್ಥನೆ? ಎಂಬ ಐದು ವರ್ಷದ ಹಿಂದಿನ ಪ್ರಶ್ನೆ ಈಗ ಹಳಸಲಾಗಿದೆ. ಬಿಜೆಪಿಯ ಅನೇಕ ಅಪ್ರಜಾಸತ್ತಾತ್ಮಕ ನಿಲುವು, ಹಿಂದುತ್ವದ ಅಜೆಂಡ, ಮುಸ್ಲಿಂ ವಿರೋಧಿ ಧೋರಣೆ, ಸಾಂದರ್ಭಿಕವಾಗಿ ತಾನೆ ಹುಟ್ಟು ಹಾಕುವ ಸಮಸ್ಯೆಗಳಿಂದ ಜನತೆಯ ದೌರ್ಬಲ್ಯವನ್ನು ತನ್ನದಾಗಿಸಿಕೊಳ್ಳಲು ಸಫಲವಾಗಿದೆ. ಸನ್ಯಾಸಿ ಯೋಗಿ ಮತ್ತೆ ನಗು ಚೆಲ್ಲಿದ್ದಾರೆ.
ಕಾಂಗ್ರೆಸ್, ತನ್ನ ತೆಕ್ಕೆಯಲ್ಲಿದ್ದ ಪಂಜಾಬನ್ನು ಅನಾಯಾಸವಾಗಿ ಎಎಪಿಗೆ ರತ್ನಗಂಬಳಿ ಹಾಸಿ ಬಿಟ್ಟುಕೊಟ್ಟಿದೆ. ಗೋವಾದಲ್ಲಿ ಒಗ್ಗಟ್ಟಿನ ಮಂತ್ರ ಗಟ್ಟಿಗೊಳಿಸಿ, ಬಿಜೆಪಿಯ ಹಿಂದುತ್ವ ಅಜೆಂಡದ ಪೊಳ್ಳುತನ ಬಯಲು ಮಾಡಲು ಅದಕ್ಕೆ ಸಾಧ್ಯವಾಗಲೇ ಇಲ್ಲ.
ನೋಟ್ ಬ್ಯಾನ್ ನಂತರ ಕೇಂದ್ರ ಸರ್ಕಾರ ಆರ್ಥಿಕ ದಿವಾಳಿತನದತ್ತ ಹಾಕಿದ ಹೆಜ್ಜೆ, ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ, ಕನ್ನಡಿಗರೆ ಸ್ಥಾಪಿಸಿದ ಬ್ಯಾಂಕ್ ಮುಳುಗಿಸಿದ ಕತೆ, ಕೇಂದ್ರದ ಒಡೆತನದಲ್ಲಿದ್ದ ಕಾರಖಾನೆಗಳ ಮುಚ್ಚಿದ್ದು, ಅವುಗಳ ಮಾರಾಟ, ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ, ಕೋವಿಡ್ ನಂತರ ಜನಸಾಮಾನ್ಯರು ಕೆಲಸ ಕಳಕೊಂಡು ಸಂಕಷ್ಟದಲ್ಲಿ ಬೀದಿಗೆ ಬಂದ ಕತೆ, ಖಾಸಗೀಕರಣದಿಂದ ಜನರ ಬದುಕು ದುಸ್ತರವಾದದ್ದು ಇತ್ಯಾದಿ ಬಯಲು ಮಾಡಿ ಜನರಿಗೆ ತಲುಪಿಸುವಲ್ಲಿ ಕಾಂಗ್ರೆಸ್ ವಿಫಲವಾಗಿದೆ.
ಮುಖ್ಯವಾಗಿ ಪಕ್ಷ ಕಟ್ಟಲು, ಬೆಳೆಯಲು ಯುವಕ, ಯುವತಿಯರಿಗೆ ಭವಿಷ್ಯದ ಕನಸು ಚಿಗುರಿಸುವಲ್ಲಿಯೂ ಅದು ಸೋತಿದೆ. ಬಿಜೆಪಿ ಸುತ್ತಾ ಇರುವ ಚಿಲ್ಲರೆ ಅಂಗಡಿಗಳ ವಹಿವಾಟು, ಅವು ಮಾಡುವ ಗಲಾಟೆ, ಅಬ್ಬರಗಳು ಕಾಂಗ್ರೆಸ್ ಮನೆ ಸುತ್ತಾ ಇಲ್ಲ. ಇಲ್ಲಿ ಕೆಳ ಹಂತದ ಸಂಘಟನೆ ಬಲಪಡಿಸಲು ಅಡಿಪಾಯವೇ ಇಲ್ಲ.
ಇದನ್ನೂ ಓದಿ : ಬಿಜೆಪಿಯ ಗೆಲುವುಗಳು, ದೇಶದ ಪ್ರಜಾಪ್ರಭುತ್ವದ ಪ್ರಶ್ನೆಗಳೂ…!
ಇವತ್ತು ಮುದ್ರಣ ಮಾಧ್ಯಮಗಳಲ್ಲಿ ಕೆಲವಷ್ಟೇ ವಿಶ್ವಾಸಾರ್ಹತೆಯ ಸುದ್ದಿ, ಲೇಖನ, ಸಂಪಾದಕೀಯ ಪ್ರಕಟಿಸುತ್ತಿವೆ. ಸಾಮಾಜಿಕ ಜಾಲತಾಣಗಳು ಹೆಚ್ಚು ಶಕ್ತಿಶಾಲಿ ಹಾಗೂ ಕ್ರಿಯಾಶೀಲವಾಗಿರೋದ್ರಿಂದ ಅದನ್ನು ಹೆಚ್ಚು ಬಳಸಿ, ಸತ್ಯವನ್ನು ತಿಳಿಸುವ ಕೆಲಸವನ್ನು ನೆಲಕಚ್ಚಿರುವ ಕಾಂಗ್ರೆಸ್ ಮಾಡಬೇಕಿದೆ. ವಿದ್ಯುನ್ಮಾನ ಮಾಧ್ಯಮಗಳು ಗೋಸಂಬಿತನ ಪ್ರದರ್ಶನ ಮಾಡುತ್ತಿರೋದ್ರಿಂದ ಜನರನ್ನು ವಂಚಿಸಿವೆ. ಅದಕ್ಕೊಂದು ಪರ್ಯಾಯ ಮಾರ್ಗವನ್ನು ಆ ಪಕ್ಷ ಕಂಡುಕೊಳ್ಳಬೇಕಿದೆ.ಆದರೆ, ಕಾಂಗ್ರೆಸ್ಸಿನ ಹಿರಿಯ ತಲೆಗಳ ನಡುವೆ ಯುವ ಚಿಗುರಿನ ಬೆಳೆ, ಹೊಸ ಹಾಗೂ ಸಮಕಾಲೀನ ವಿಚಾರಗಳಿಗೆ ಮುಖಾಮುಖಿ ಆಗಲು ಸ್ಥಳಾವಕಾಶವೇ ಇಲ್ಲವಾಗಿರೋದ್ರಿಂದ ಅದು ಕೊಳೆತು ಹೋಗುತ್ತಿದೆ. ಅದಕ್ಕೆ ಸೂಕ್ತ ಶಸ್ತ್ರಚಿಕಿತ್ಸೆ ಬೇಕಿದೆ.
ಸಧ್ಯದ ಕರ್ನಾಟಕದ ಕಾಂಗ್ರೆಸ್ ಉತ್ತರ ಭಾರತಕ್ಕಿಂತ ಹಲವುಪಾಲು ಉತ್ತಮವಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡರೂ ಒಳಗಿನ ಪರಿಸ್ಥಿತಿ ಬೇರೆಯೇ ಇದೆ. ಇಲ್ಲಿ ಮೇಕೇದಾಟು ನೀರಿನ ವಿಚಾರವನ್ನು, ಆ ಹೋರಾಟವನ್ನು ಒಂದು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಯತ್ನಿಸುವಲ್ಲಿ ನಾಳೆಯ ಸ್ಥಾನಮಾನದ ಲೆಕ್ಕಾಚಾರ ಇದೆ. ಇದರಲ್ಲಿ ಮುಚ್ಚುಮರೆ ಏನಿಲ್ಲ. ಎಲ್ಲವೂ ಕನ್ನಡಿಯ ಬಿಂಬ. ಈ ಮೇಕೆದಾಟು ಹೋರಾಟ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ, ಮಧ್ಯ ಕರ್ನಾಟಕದ ಜನತೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂಬ ಅರಿವು ಆ ಭಾಗದ ಜನರಲ್ಲೂ ಇದೆ.
ತೆರೆಮರೆಯಲ್ಲಿ ಸಿದ್ದರಾಮಯ್ಯ ಹಾಗೂ ಶಿವಕುಮಾರ ನಡುವೆ ನಾಯಕತ್ವಕ್ಕೆ ಜಿದ್ದಾಜಿದ್ದಿ ಇರುವುದು ನೂರಕ್ಕೆ ನೂರರಷ್ಟು ಸತ್ಯ. ಅವರಲ್ಲಿ ಒಬ್ಬರು ಹಿಂದೆ ಸರಿದು, ಮುಂದೆ ಕಾಂಗ್ರೆಸ್ ಗೆದ್ದರೆ, ಇವರೇ ನಮ್ಮ ಮುಖ್ಯಮಂತ್ರಿ ಎಂದು ಘೋಷಣೆ ಮಾಡಬೇಕು. ಸಾಧ್ಯವೆ? ಜೊತೆಗೆ, ಕಲ್ಯಾಣ ಕರ್ನಾಟಕದ ನಾಯಕರೂ ಕನಸಿನ ಕ್ಯಾನ್ವಾಸ್ ಹರಡಿ ಕೂತಿದ್ದಾರಲ್ಲ! ಇಲ್ಲಿ ಏಕತೆ, ಸಾಮರಸ್ಯ, ಒಗ್ಗಟ್ಟು ಇಲ್ಲದಿದ್ದರೆ ಉ.ಪ್ರ, ಪಂಜಾಬ್, ಗೋವಾಗಳಿಗೆ ಬಂದ ಸ್ಥಿತಿಯೇ ಬರಬಹುದು.
ಸಿದ್ದರಾಮಯ್ಯನವರ ಭಕ್ತರು ಅವರು ಹೋದಲ್ಲಿ ಬಂದಲ್ಲಿ “ಹುಲಿಯಾ ಮುಂದಿನ ಮುಖ್ಯಮಂತ್ರಿ!” ಅಂತ ಘೋಷಣೆ ಕೂಗ್ತಾರೆ! ಈ ಸಿದ್ದರಾಮಯ್ಯ, ಅದನ್ನ ಕೇಳಿಸ್ಕಂಡು “ಆಕಾಸದಾಗೆ” ತೇಲಾಡ್ತಾರೆ!.
ನಿನ್ನೆ ಕೈಯಲ್ಲಿದ್ದ ಪಂಜಾಬ್, ಇವತ್ತು ಏನಾಯ್ತು? ಮುಂಬೈ ಪತ್ರಕರ್ತ ಮಿತ್ರರೊಬ್ಬರು ನನಗೆ ಅರ್ಥಪೂರ್ಣವಾಗಿ ಬರೆದರು: “ಪಂಜಾಬಲ್ಲಿ ಕಾಂಗ್ರೆಸ್ ಗೆಲ್ಲಬಹುದಾಗಿತ್ತು. ಒಳ ಜಗಳ ಸಾರ್ವಜನಿಕವಾಗಿ ಬಿಂಬಿತವಾಯ್ತು. ಅಲ್ಲನ ಒಬ್ಬ ಯಡವಟ್ಟು ಸಿದ್ದು, ‘ಹೈಕಮಾಂಡ್ ಯಾರು?!’ ಎಂದು ಉದ್ದಟತನ ತೋರಿ, ಅವರಿಗೇ ಸವಾಲು ಹಾಕಿ ಅಹಂ ಮೆರೆದಿದ್ದರಿಂದ “ಆಪ್” ಪಕ್ಷ ಬರಲು ಕಾರಣ ಆಯ್ತು”.
ಇದು ಸತ್ಯ. ಇದಕ್ಕೇನನ್ನೋಣ? ಮುಂದೆ ಕಾಂಗ್ರೆಸ್ ತನ್ನ ತಪ್ಪು ತಿದ್ದಿಕೊಳ್ಳದಿದ್ದರೆ ಪಂಜಾಬು, ಉತ್ತರ ಪ್ರದೇಶದಲ್ಲಾದ ಗತಿಯೇ ಕರ್ನಾಟಕಕ್ಕೂ ಕಾದಿದೆ. ಆಗಲೆ ಹಿಜಾಬನ್ನು ಕಿತ್ತು ಜೇಬಲ್ಲಿ ಇರಿಸಿರುವ ಕೋಮುವಾದಿಗಳು ಚುನಾವಣೆ ಸಮಯದಲ್ಲಿ ಮತ್ತೊಂದನ್ನು ಕೆದಕುತ್ತಾರೆ. ಕೆಣಕುತ್ತಾರೆ. ಈಗ ಎರಡು ಮೂರು ದಿನಗಳಿಂದ ಬಿಜೆಪಿಗೆ ಹೊಸ ಅಸ್ತ್ರವೊಂದು ಸಿಕ್ಕಿದೆ.
ಮೂರು ದಶಕಗಳ ಹಿಂದೆ ಭಯೋತ್ಪಾದಕರು ಕಾಶ್ಮೀರಿ ಪಂಡಿತರನ್ನು ಹಿಂಸೆಯಿಂದ ಕೊಂದು, ರಾಜ್ಯ ತೊರೆಯುವಂತೆ ಮಾಡಿದ್ದರೆಂಬ ಘಟನೆಯ ಎಳೆ ಇಟ್ಟುಕೊಂಡು ನಿರ್ಮಿಸಿದ “ಕಾಶ್ಮೀರಿ ಫೈಲ್” ಎಂಬ ಸಿನಿಮಾದ ಬಗ್ಗೆ ವೈಭವೀಕರಣದ ಪ್ರಚಾರ ನಡೆದಿದೆ. ರಾಜ್ಯದಲ್ಲೂ ಈ ಚಿತ್ರಕ್ಕೆ 100% ತೆರಿಗೆ ಮನ್ನಾ ಮಾಡಲಾಗಿದೆ! ಹೀಗಾಗಿ, ಒಂದಿಲ್ಲೊಂದು ವಿಚಾರ ಕೆದಕುತ್ತ, ಜನರಿಗೆ ಸಮಸ್ಯೆಯ ಮರೆ ಮಾಚಿಸುವಲ್ಲಿ ಬಿಜೆಪಿಯವರು ನಿಸ್ಸೀಮರಾಗಿದ್ದಾರೆ. ಯುವ ಜನಾಂಗವೂ ಆ ಪಕ್ಷದ ಸುಳ್ಳಿನ ಮೋಡಿಗೆ ಬಲಿ ಆಗುತ್ತಿದೆ. ಅವರಿಗೆ ತಪ್ಪು ಸರಿಗಳ ತುಲನೆಯೂ ಇಲ್ಲವಾಗಿದೆ. ಪ್ರತಿ ಚುನಾವಣೆ ಸಂದರ್ಭದಲ್ಲೂ ಹಿಂದುತ್ವವೇ ಮುನ್ನೆಲೆಗೆ ಬರಲಿದೆ.
ಇನ್ನು ಮುಖ್ಯವಾದ ವಿಚಾರ ಪ್ರಸ್ತಾಪಿಸುವೆ. ವೈಯಕ್ತಿಕವಾಗಿ ಹಲವರು ಒಪ್ಪುವ ರಾಹುಲ್ ಗಾಂಧಿಯನ್ನು ಸಾಮಾಜಿಕ ಜಾಲ ತಾಣಗಳು “ಪಪ್ಪು” ಎಂದು ಲೇವಡಿ ಮಾಡುತ್ತಿವೆ. ಹಾಗೆಂದು ಆತನೇನು ದಡ್ಡನಲ್ಲ. ಅದಕ್ಕೆ ಬಹುಸಂಖ್ಯೆಯ ಜನ ಹೇಳೋದು… ಕಾಂಗ್ರೆಸ್ ಉದ್ದಾರ ಆಗಬೇಕೆಂದ್ರೆ “ಪ್ರಿಯಾಂಕ ಗಾಂಧಿ”ಗೆ ಆಧ್ಯತೆ ನೀಡಿ, ಮುಂಚೂಣಿಗೆ ಬರುವಂತೆ ನೋಡಿಕೊಳ್ಳಬೇಕು. ಆದರೆ, ಸೋನಿಯಾಗಾಂಧಿ ಅವರು ಮಗನನ್ನು ಪಟ್ಟಕ್ಕೆ ತರುವ ಕನಸು ಕಾಣುತ್ತಿದ್ದಾರೆ! (ಇದನ್ನು ನನ್ನ ಸಂಪರ್ಕದಲ್ಲಿರೋ ಕಾಂಗ್ರೆಸ್ ಮಾಜಿ ಲೋಕಸಭಾ ಸದಸ್ಯರು, ಹಾಲೀ ರಾಜ್ಯಸಭಾ ಸದಸ್ಯರೇ ಹೇಳಿದ್ದಾರೆ!)ಎಲ್ಲೆಲ್ಲಿ ಸರಿಪಡಿಸಿ, “ಕರ್ನಾಟಕದಲ್ಲಿ ಕಾಂಗ್ರೆಸ್ ಉಳಿಸಿಕ್ಕೊಳ್ಳುತ್ತೀರಿ? ಅಧಿಕಾರಕ್ಕೆ ತರುತ್ತೀರಿ?” ಈ ವಿಚಾರಗಳು ಚರ್ಚೆ ಆಗಲಿ.