ಚಿತ್ರದುರ್ಗದ ಮುರುಘಾ ಶರಣರ ವಿರುದ್ಧ ಪೋಕ್ಸೋ ಮತ್ತು ಎಸ್ಸಿ-ಎಸ್ಟಿ ದೌರ್ಜನ್ಯದ ಕೇಸ್ ದಾಖಲಾಗಿ, ಮೋನ್ನೆ CRPC 164ರ ಅಡಿಯಲ್ಲಿ ಸಂತ್ರಸ್ತರ ಹೇಳಿಕೆ ದಾಖಲಾದರೂ ಅವರ ಬಂಧನವಾಗದಿರುವುದು ಈ ನೆಲದ ಕಾನೂನು ಮತ್ತು ಸಂವಿಧಾನದ ಅಣಕವಾಗಿದೆ. ಬಂಧಿಸಲು ಮೀನಾಮೇಷ ಎಣಿಸುತ್ತಿರುವ ಬೊಮ್ಮಾಯಿ ನೇತೃತ್ವದ ಸರ್ಕಾರ ಈ ಸಮಾಜಕ್ಕೆ ಕೊಡುತ್ತಿರುವ ಸಂದೇಶವಾದರೂ ಏನು? ಈ ರಾಜ್ಯದಲ್ಲಿ ಬಲಾಢ್ಯರು ದುರ್ಬಲರ ಮೇಲೆ ಅನ್ಯಾಯ, ದೌರ್ಜನ್ಯ ನಡೆಸಿದರು ಅವರನ್ನು ಉಳಿಸಿಕೊಳ್ಳಲು ನಾವಿದ್ದೇವೆ ಎನ್ನುವ ಸಂದೇಶ ರವಾನಿಸುತ್ತಿದೆಯೇ? ಅಥವಾ ಧನಾಢ್ಯರಿಗೆ ದುರ್ಬಲ ವರ್ಗಗಳ ಮೇಲೆ ದೌರ್ಜನ್ಯ ಎಸಗಲು ಪರೋಕ್ಷವಾಗಿ ಪರವಾನಗಿ ನೀಡುತ್ತಿದೆಯೇ?
ಕೇಸ್ ದಾಖಲಾಗಿ ಆರು ದಿನವಾದರೂ ಸ್ವಾಮೀಜಿ ನಿರಾಂತಕವಾಗಿ ಸಭೆ ನಡೆಸಲು, ಸಂಧಾನ ನಡೆಸಲು, ಸಾವಿರಾರು ಜನರನ್ನು ಉದ್ದೇಶಿಸಿ ಮಾತನಾಡಲು ಅವಕಾಶ ನೀಡುವ ಮೂಲಕ ಈ ನೆಲದಲ್ಲಿ ಬಲಾಢ್ಯರಿಗೊಂದು, ದುರ್ಬಲರಿಗೊಂದು ಕಾನೂನಿದೆ ಎಂದು ಸರ್ಕಾರವೇ ಪರೋಕ್ಷವಾಗಿ ಸಾರುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ತಮ್ಮ ಸಾವಿರಾರು ಬೆಂಬಲಿಗರೊಂದಿಗೆ ಸ್ವಾಮೀಜಿ ಮಠದಲ್ಲಿರುವಾಗಲೇ ಸಂತ್ರಸ್ತ ಯುವತಿಯರನ್ನ ಮಠಕ್ಕೆ ಕರೆದೊಯ್ದು ಸ್ಥಳ ಮಹಜರು ಮಾಡಿದ್ದು ಪೋಲಿಸ್ ವ್ಯವಸ್ಥೆಯ ಪತನದ ಸಂಕೇತವಾಗಿದೆ.
ಸರ್ಕಾರ ಸ್ವಾಮೀಜಿಯನ್ನು ವಿಶೇಷವಾಗಿ ಕಾಣುತ್ತಿರುವುದೇ ನ್ಯಾಯದ ಅಣಕವಾಗಿದೆ. ಈಗವರು ಆರೋಪಿ. ಆರೋಪಿಯನ್ನು ಆರೋಪಿಯಂತೆ ಕಾಣಬೇಕು ವಿನಾ ಬೇರೆನೂ ಅಲ್ಲ. ಇದೇ ಜಾಗದಲ್ಲಿ ಬೇರೆ ಯಾರಾದರೂ ದುರ್ಬಲ ಸ್ವಾಮೀಜಿ ಇದ್ದಿದ್ದರೆ ಸರ್ಕಾರ ಹೀಗೆ ನಿರ್ಲಜ್ಜ ತನದಿಂದ ನಡೆದುಕೊಳ್ಳುತ್ತಿತ್ತೆ? ಎಫ್ಐಆರ್ ದಾಖಲಾದ ದಿನವೇ ಅವರ ಹೆಡೆಮುರಿ ಕಟ್ಟುತ್ತಿತ್ತು ಎನ್ನುವುದು ನಿಸ್ಸಂಶಯ!
ಅಪ್ರಾಪ್ತ ಬಾಲಕಿಯರಲ್ಲಿ ನಿಷ್ಪಕ್ಷಪಾತ ತನಿಖೆಯ, ನ್ಯಾಯದ ಭರವಸೆ ತುಂಬಬೇಕಾಗಿದ್ದ ಸರ್ಕಾರ ಅವರಲ್ಲಿ ಅನಾಥ ಪ್ರಜ್ಞೆ ಮೂಡಿಸುತ್ತಿರುವುದು ನಿಜಕ್ಕೂ ಕಳವಳಕಾರಿ ಸಂಗತಿಯಾಗಿದೆ. ಈ ಪ್ರಕರಣದಲ್ಲಿ ಸರ್ಕಾರವೇ ಸ್ವಾಮೀಜಿಯನ್ನು ಉಳಿಸಿಕೊಳ್ಳಲು ಎಲ್ಲಾ ರೀತಿಯ ಪ್ರಯತ್ನ ನಡೆಸುತ್ತಿರುವುದು ನಾವಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿಯೇ ಎನ್ನುವ ಅನುಮಾನ ಮೂಡುತ್ತಿದೆ. ಸರ್ಕಾರದ ತುಷ್ಟೀಕರಣದ ಈ ನಿಲುವು ಆಪಾದಿತ ಸ್ವಾಮೀಜಿಯವರಿಗೆ ಬಲ ತಂದುಕೊಡುತ್ತಿರಬಹುದು. ಆದರದು ತಾತ್ಕಾಲಿಕ ಮಾತ್ರ. ಒಂದು ರೀತಿಯಲ್ಲಿ ಸ್ವಾಮೀಜಿಗೆ ಇದು ಮುಳುವಾಗಿ ಪರಿಣಮಿಸುತ್ತಿದೆ. ಸರ್ಕಾರದ ಈ ನಡೆಯೇ ದಿನದಿಂದ ದಿನಕ್ಕೆ ಸಾರ್ವಜನಿಕರಲ್ಲಿ ಆಕ್ರೋಶ ಹೆಚ್ಚಾಗಲೂ, ರಾಷ್ಟ್ರೀಯ ಮಾಧ್ಯಮಗಳು ಈ ಕಡೆಗೆ ತಿರುಗಿ ನೋಡಲು ಕಾರಣವಾಗಿದೆ.
ಇದನ್ನೂ ಓದಿ : ಫೈರ್ ಬ್ರ್ಯಾಂಡ್ ತೋಂಟದಾರ್ಯ ಸ್ವಾಮೀಜಿ ಇವತ್ತಿಗೆ ಏಕೆ ಮುಖ್ಯ?
ಒಂದುವೇಳೆ ಸ್ವಾಮೀಜಿ ಹೇಳುತ್ತಿರುವಂತೆ ಇದೊಂದು ಷಡ್ಯಂತ್ರವಾಗಿದ್ದು ಮುಂದೆ ನಿಷ್ಪಕ್ಷಪಾತ ತನಿಖೆ ನಡೆದು ಅವರು ಇದರಿಂದ ಹೊರಗೆ ಬಂದರೂ ಜನರು ನ್ಯಾಯಯುತ ಮಾರ್ಗದಿಂದಲೇ ಇವರು ಹೊರಗೆ ಬಂದಿದ್ದಾರೆಂದು ನಂಬುವುದಿಲ್ಲ. ಈಗ ಸರ್ಕಾರದ ವಿರುದ್ಧ ಸಾರ್ವಜನಿಕರಲ್ಲಿ ಆಕ್ರೋಶ ಭುಗಿಲೆದ್ದಿದೆ. ಸರ್ಕಾರ ಹೆಚ್ಚಿಂದರೆ ತಾತ್ಕಾಲಿಕವಾಗಿ ಅವರ ಬಂಧನವಾಗದಂತೆ ತಡೆದು, ಇನ್ನೂ ನಾಲ್ಕು ದಿನ ಕಾಲ ದೂಡಬಹುದೇ ವಿನಾ ಇದಕ್ಕಿಂತ ಹೆಚ್ಚೆನು ಮಾಡಲು ಸಾಧ್ಯ?
ಆರಂಭದಲ್ಲಿ ಇದು ‘ಮಾಜಿ ಶಾಸಕ ಮತ್ತು ಮಠದ ಆಡಳಿತಾಧಿಕಾರಿ ಬಸವರಾಜನ್ ಅವನ ಷಡ್ಯಂತ್ರ, ಸ್ವಾಮೀಜಿಯನ್ನು ಹೆಣೆಯಲು ಈ ಬಾಲಕಿಯರನ್ನು ಟೂಲ್ ಆಗಿ ಬಳಸಿಕೊಳ್ಳುತ್ತಿದ್ದಾನೆ’ ಎಂಬ ವಿಷಯ ಮುನ್ನೆಲೆಗೆ ಬಂದು ಎಲ್ಲೆಡೆ ಸದ್ದು ಮಾಡಿತ್ತು. ಇದರಲ್ಲಿ ನೀಜವೂ ಇರಬಹುದು ಅಥವಾ ಇದೇ ನಿಜ ಎಂದೆ ಇಟ್ಟಿಕೊಳ್ಳೋಣ. ಆದರೆ ಇಲ್ಲದು ಗೌಣವಾಗುತ್ತದೆ. ಈಗದು ಗೌಣವೂ ಆಗಿದೆ. ಸ್ವಾಮೀಜಿ ಮತ್ತು ಬಸವರಾಜನ್ ಮಧ್ಯದ ಗುದ್ದಾಟವೆ ಬೇರೆ, ಈ ಪ್ರಕರಣವೇ ಬೇರೆ. ಅದಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಸಂಬಂಧ ಕಲ್ಪಿಸಲುಬಾರದು. ಸಂಬಂಧ ಕಲ್ಪಿಸುವುದೇ ಒಂದು ವಿಕೃತಿ.
ಇದನ್ನೂ ಓದಿ : ಲಿಂಗಾಯತ ಹೋರಾಟಕ್ಕೆ ಇರುವ ಏಕೈಕ ಭರವಸೆ ಶಿವಾನಂದ ಜಾಮದಾರ್ !
ಬಸವರಾಜನ್ ಹೆಸರು ಮುಂದೆ ತರುತ್ತಿರುವುದರ ಹಿಂದೆ ಸ್ವಾಮೀಜಿ ನಿರಾಪರಾಧಿ, ಹಾಗೇ ಈಗೇ ಎಂದು ಸಾರಲು ಮತ್ತು ಜತೆಗೆ ತನಿಖೆಗೆ ಮುನ್ನವೇ ಅವರಿಗೆ ಆಪಾದಿತ ಸ್ವಾಮೀಜಿಗೆ ‘ನಿರಪರಾಧಿ’ ಸರ್ಟಿಫಿಕೇಟ್ ನಿಡಲು ಎನ್ನುವುದು ನಿರ್ವಿವಾದ. ಅವರಿಬ್ಬರ ನಡುವಿನ ಗುದ್ದಾಟವೇ ಈ ಪ್ರಕರಣ ಹೊರಗೆ ಬಂದು, ಕೇಸ್ ದಾಖಲಾಗಲು ನೆರವಾಗಿರಬಹುದು ಅಷ್ಟೇ. ಈಗ ಅಮಾಯಕ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ನೀಜವೋ ಸುಳ್ಳೋ ಎನ್ನುವುದು ಮಾತ್ರ ಮುಖ್ಯವಾಗಿದೆ. ಈಗ ಮಕ್ಕಳ ಮತ್ತು ಸ್ವಾಮೀಜಿ ಮಧ್ಯೆ ನಿಂತಿರುವುದು ‘ಸಂವಿಧಾನ’ವೆ ಹೊರತು ಬಸವರಾಜನ್ ಅಲ್ಲ.
ಆರಂಭದಲ್ಲಿ ಸ್ವಾಮೀಜಿಯವರ ಮೇಲೆ ಕೇಸ್ ದಾಖಲಾಗಿದ್ದು ಕೇಳಿ ವೈಯಕ್ತಿಕವಾಗಿ ನಾನಂತೂ ಬೆಚ್ಚಿಬಿದ್ದಿದ್ದು ಸುಳ್ಳಲ್ಲ. ಏಕೆಂದರೆ 1992 ರಿಂದ 2014 ರವರೆಗೆ ಮುರುಘಾ ಶರಣರು ನಾಡಿನಾದ್ಯಂತ ಬಸವತತ್ವ ಪಸರಿಸಲು ಸುರಿಸಿದ ಬೆವರು ಅಷ್ಟಿಷ್ಟಲ್ಲ. ಬಸವ ಕೇಂದ್ರದ ಸ್ಥಾಪನೆ, ಸಾಮೂಹಿಕ ಸಹಜ ಶಿವಯೋಗ ಒಳಗೊಂಡಂತೆ ಹತ್ತಾರು ವೈಚಾರಿಕ ಚಟುವಟಿಕೆಗಳು ಮೂಲಕ ಬಸವತತ್ವಕ್ಕೆ ಅವರು ನೀಡಿದ ಕೊಡುಗೆ ಚರಿತ್ರಾರ್ಹವಾದದ್ದು. ಬಸವತತ್ವಕ್ಕೆ ಮತ್ತೆ ವೈಚಾರಿಕ ಸ್ಪರ್ಶ ನೀಡಿದ್ದು ಮುರುಘಾ ಶರಣರು ಎನ್ನುವುದು ಸುಳ್ಳಲ್ಲ. ನಾಡಿನಾದ್ಯಂತ ಇಂದು ಬಸವತತ್ವದ ಕಂಪು ಕಾಣುತ್ತಿದ್ದರೆ ಅದರಲ್ಲಿ ಮುರುಘಾ ಶರಣರ ಪಾಲು ಇದೆ. ಆ ಮುರುಘಾ ಶರಣರು ಎತ್ತ ಕಳೆದು ಹೊದರು ಎನ್ನುವ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ!
ಈಗಲೂ ಮುರುಘಾ ಶರಣರು ಆರೋಪಿಯೇ ವಿನಾ ಅಪರಾಧಿಯಲ್ಲ. ತನ್ನ ಮೇಲೆ ಬಂದಿರುವ ಆರೋಪ ಸುಳ್ಳೆಂದು ಸಾಬೀತು ಪಡಿಸಲು ಅವರಿಗೆ ಎಲ್ಲಾ ಹಕ್ಕುಗಳಿವೆ. ಅವರ ಪರವಾಗಿ ಅವರ ಭಕ್ತರಿಗೂ ದನಿ ಎತ್ತುವ ಹಕ್ಕು ಇದೆ. ಈಗ ಅವರ ಮುಂದಿರುವುದು ಕಾನೂನಿನ ಮೂಲಕ ತನ್ನ ನಿರಪರಾಧಿತನವನ್ನು ಸಾಬೀತು ಪಡಿಸುವ ಮಾರ್ಗವೇ ವಿನಾ ಸಂಧಾನದ ಮಾರ್ಗವಲ್ಲ.
ಎಫ್ಐಆರ್ ದಾಖಲಾದ ದಿನವೇ ಅವರು ಪೀಠದಿಂದ ಕೆಳಗಿಳಿದು, ಕಾನೂನಿಗೆ ಶರಣಾಗಿ ಕಾನೂನಿನ ಮೂಲಕ ಹೋರಾಟಕ್ಕೆ ಇಳಿದಿದ್ದರೇ ಅವರ ಮೇಲೆ ಸಾರ್ವಜನಿಕರಲ್ಲಿ ಒಂದು ಗೌರವ, ನಂಬಿಕೆ ಮತ್ತು ಸಿಂಪತಿ ಮೂಡುತ್ತಿತ್ತು. ‘ನಾನು ಸಂಧಾನಕ್ಕೂ ಸಿದ್ಧ, ಸಮರಕ್ಕೂ ಸಿದ್ಧ’ ಹಾಗೂ ‘ಬುದ್ಧಿವಂತಿಕೆಯಿಂದ ಇದನ್ನು ಎದುರಿಸೋಣ ‘ ಎಂದು ಹೇಳುವ ಮೂಲಕ ಅಂತಹ ಅವಕಾಶವನ್ನು ತಾನಾಗಿಯೇ ಕಳೆದುಕೊಂಡಿದ್ದಲ್ಲದೇ, ಈ ಪ್ರಕರಣದಲ್ಲಿ ಅವರ ಮೇಲೆ ಸಾರ್ವಜನಿಕರಲ್ಲಿ ಒಂದು ಅನುಮಾನ ಮತ್ತು ಆಕ್ರೋಶ ಚಿಗುರಲು ಕಾರಣವಾಗಿದ್ದು ಸುಳ್ಳಲ್ಲ.
ಸರ್ಕಾರ ಈಗಲಾದರೂ ತುರ್ತಾಗಿ ಸ್ವಾಮೀಜಿಯನ್ನ ಅರೆಸ್ಟ್ ಮಾಡಿ, ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಒಂದು ನಿಷ್ಪಕ್ಷಪಾತವಾದ ತನಿಖೆ ನಡೆಸಲು ಮುಂದಾಗಬೇಕು ಅಥವಾ ಈ ಪ್ರಕರಣವನ್ನು ಹೊರರಾಜ್ಯಕ್ಕೆ ವರ್ಗಾವಣೆ ಮಾಡಬೇಕು. ಇಲ್ಲದಿದ್ದರೆ ಈ ನಾಡಿನ ಬಡವರಿಗೆ, ಶೋಷಿತರಿಗೆ, ದಲಿತರಿಗೆ, ಲೈಂಗಿಕ ದೌರ್ಜನ್ಯಕ್ಕೆ ತುತ್ತಾಗುವ ತಳಸಮುದಾಯದ ಬಾಲಕಿಯರಿಗೆ/ ಮಹಿಳೆಯರಿಗೆ ಈ ಸರ್ಕಾರಗಳು ನಮ್ಮದಲ್ಲ ಎನ್ನುವ ಭಾವನೆ ಮೂಡಲು ಕಾರಣವಾಗುತ್ತದೆ. ಇದು ದೇಶದ ಹಿತದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯೂ ಅಲ್ಲ, ಶುಭ ಸೂಚಕವೂ ಅಲ್ಲ.