ದ ಪಾಲಿಟಿಕ್

ಇಂದು ಹಿಜಾಬ್, ಕುಂಕುಮ ಮತ್ತು ಬಳೆಗಿಂತ ಶಿಕ್ಷಣ ಮುಖ್ಯ : ಶಾರದಾ ಗೋಪಾಲ

ದ ಪಾಲಿಟಿಕ್

ದ ಪಾಲಿಟಿಕ್

ಕಾಲೇಜೊಂದರ ವಿದ್ಯಾರ್ಥಿನಿಯರ ಉಡುಪಿಗೆ ಸಂಬಂಧಿಸಿದಂತೆ ನಡೆದ ಚಿಕ್ಕ ಘಟನೆಯನ್ನು ಬೆಟ್ಟದಷ್ಟು ದೊಡ್ಡದು ಮಾಡಿದ್ದು ಅದು ಈಗ ಇಡೀ ರಾಜ್ಯಕ್ಕೆ ಹಬ್ಬಿದೆ. ನ್ಯಾಯಾಂಗ ಪ್ರವೇಶಿಸಿದೆ. ದೇಶ ವಿದೇಶಗಳಲ್ಲಿ ಸುದ್ದಿ ಮಾಡಿದೆ. ಉಡುಪಿ, ಚಿಕ್ಕಮಗಳೂರು, ಮಂಡ್ಯ ಶಿವಮೊಗ್ಗಗಳಲ್ಲಿ ಮುಸ್ಲಿಮ್ ಹುಡುಗಿಯರಿಗೆ ಅವರು ಹಿಜಾಬ್ ಧರಿಸುತ್ತಿದ್ದಾರೆಂಬ ಕಾರಣಕ್ಕೆ ಅವರ ಶಾಲೆ ಕಾಲೇಜುಗಳಲ್ಲಿ ಕ್ಲಾಸಿನಲ್ಲಿ ಪ್ರವೇಶಿಸಲಿಕ್ಕೂ ಬಿಡದೆ, ಪರೀಕ್ಷೆಗಳಲ್ಲಿ ಕೂಡಲಿಕ್ಕೂ ಬಿಡದಂಥಹ ದೊಡ್ಡಗುಲ್ಲು ಮಾಡಿರುವುದು ಬಹುದೊಡ್ಡ ಅಘಾತದ ವಿಷಯ. ಒಟ್ಟಿಗೆ ಕುಳಿತು ಕಲಿಯುತ್ತಿದ್ದ, ಹೆಗಲ ಮೇಲೆ ಕೈಹಾಕಿಕೊಂಡು ಅಪ್ಪಿಕೊಂಡoತೆಯೇ ಸಾಗುತ್ತಿದ್ದ ಮಿತ್ರವಿದ್ಯಾರ್ಥಿಗಳ ಮಧ್ಯೆ ವಿಷಧರ್ಮದ ಬೀಜ ಮೊಳಕೆಯೊಡೆದು ಹೆಮ್ಮರವಾಗಿ ಬೆಳೆದು ಹಿಂದೂ ಮುಸ್ಲಿಂ ಬೇರೆ ಬೇರೆ ಎಂಬ ಭಾವವನ್ನು ಎಳೆಯರ ಮನದಲ್ಲಿ ದಿನಾರ್ಧದಲ್ಲಿ ಬೆಳೆಸಿಬಿಟ್ಟಿತು.

ಸರಕಾರ ಮಾಡಿದ ಒಂದು ತಪ್ಪಿನಿಂದಾಗಿ ಕ್ಷುಲ್ಲಕ ವಿಚಾರ ಇಂದು ವಿಷದ ಹೊನಲಾಗಿ ಹರಿದಿದೆ. ತಡೆಯಲು ಯಾರಿಗೂ ಸಾಧ್ಯವಾಗಲಿಲ್ಲ. ವಿಷ ಕಕ್ಕುವವರು ಮತ್ತೂ ಕಕ್ಕುತ್ತಲೇ ಇದ್ದಾರೆ. ನೋವುಣ್ಣುವವರು ಮಾತ್ರ ಇನ್ನೂ ಜಗದ ಬೆಳಕಿಗೆ ಕಣ್ ಬಿಡುತ್ತಿರುವ ಮುಗ್ಧ ಬಾಲಿಕೆಯರು. ಓದುವ ಗಂಡುಮಕ್ಕಳಿಗೆ ಯಾವುದೇ ರೀತಿಯ ತೊಂದರೆಯಾಗಲಿಲ್ಲ. ಆದರೆ ಈ ಬಾಲಕಿಯರ ಓದಿಗೆ ಅಡ್ಡ ನಿಂತು ಅಟ್ಟಹಾಸ ಮೆರೆದದ್ದು ಮಾತ್ರ ಗಂಡುಮಕ್ಕಳೇ.

ಈಗಾಗಲೇ ಈ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ. ಆಗುತ್ತಲೇ ಇದೆ. ಎರಡೂ ಧರ್ಮದವರೂ ಬರೆದಿದ್ದಾರೆ, ಚರ್ಚೆಗಿಳಿದಿದ್ದಾರೆ, ನೊಂದು ಶಾಲಾ ಮಕ್ಕಳಿಗೆ ಪತ್ರ ಬರೆದು ಹೇಳಿದ್ದಾರೆ. ಎಲ್ಲಕ್ಕೂ ಜವಾಬ್ದಾರ ಆಗಿರುವ ಸರಕಾರದ ಮುಖ್ಯಸ್ಥರಿಗೆ ಮನವಿ ಮಾಡಿದ್ದಾರೆ. ಮಕ್ಕಳ ಶಿಕ್ಷಣ ಹಾಳಾದರೆ ಅದು ನಿಮ್ಮ ಜವಾಬ್ದಾರಿ ಎಂದು ಎಚ್ಚರಿಸಿದ್ದಾರೆ. ಆದರೆ ಬಹುಶಃ ಅದು ಅವರ ಕೈಯನ್ನೂ ಮೀರಿ ಹೋಯಿತೇನೋ. ಏನೋ ಗಲಭೆ ಎಬ್ಬಿಸಿ ಮಜಾ ನೋಡಲು ಹೊರಟಿದ್ದವರ ನಿರೀಕ್ಷೆ ಮೀರಿ ಕಿಚ್ಚು ಕಾಳ್ಗಿಚ್ಚಾಗಿ ಎಲ್ಲೆಡೆ, ಸಮಾಜವನ್ನೆಲ್ಲ ತುಂಬಿಕೊoಡಿದೆ, ಹೊಲಸು ಹೊಗೆ ಮೈ ಮನಗಳೊಳಗೆ ಹೋಗಿ ವಾತಾವರಣ ಕಲುಷಿತಗೊಳಿಸಿದೆ, ವಿಷಗಾಳಿ ಉಂಡoತಹ ನೋವನ್ನುಂಟುಮಾಡಿದೆ.

ಧರ್ಮದ ಹೆಸರಲ್ಲಿ ನಡೆಸುತ್ತಿರುವ ಈ ಹುಚ್ಚು ನಾಟಕಕ್ಕೆ ಎರಡೂ ಧರ್ಮದ ಅಂಧರೇ ಕಾರಣ ಎಂದು ನಾನಂತೂ ನಿರ್ಭೀತಿಯಿಂದ ಹೇಳುವೆ. ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡಲು ಹೋರಾಡಿದ ಈ ಎರಡು ಧರ್ಮಕ್ಕೆ ಸೇರಿದ ದೇಶದ ಮೊದಲ ಶಿಕ್ಷಕಿಯರಿಬ್ಬರ ಫೋಟೋದೆದುರು ತಲೆ ತಗ್ಗಿಸಿ ಈ ವಿಷ ಹರಡುವುದನ್ನು ತಡೆಯಲು ಸಮರ್ಥರಾಗದ್ದಕ್ಕೆ ಕ್ಷಮೆ ಬೇಡುವಂತಾಗಿದೆ. ಫಾತಿಮಾಬೀ, ಸಾವಿತ್ರಿಬಾ ನಮ್ಮನ್ನು ಕ್ಷಮಿಸುವಿರಾ?

ಇದನ್ನೂ ಓದಿ : ಹೆಣರಾಜಕಾರಣಕ್ಕೆ ಇಳಿದ ಸಚಿವ ಕೆ.ಎಸ್.ಈಶ್ವರಪ್ಪ ಮತ್ತು ಟೀಂ ..!

ಈ ಇಬ್ಬರು, ಮಹಾನ್ ಜೀವಗಳು ಅಂದು 1848ರಲ್ಲಿ ಹೆಣ್ಣುಮಕ್ಕಳಿಗಾಗಿ ಶಾಲೆ ತೆರೆದರು. ಎಲ್ಲಾ ಜಾತಿಯ ಹೆಣ್ಣುಮಕ್ಕಳಿಗೆ ಶಿಕ್ಷಣ ಸಲ್ಲಬೇಕೆಂದು ಯಾವುದೇ ರೀತಿಯ ಪ್ರತಿರೋಧಕ್ಕೂ ಬಾಗದೇ ಶಾಲೆಗಳನ್ನು ತೆರೆದರು, ನಡೆಸಿದರು. ಸಗಣಿ ತೂರುವುದೇನು, ರಾಡಿ ನೀರು ಎರಚುವುದೇನು, ಕಲ್ಲುತೂರುವುದೇನು, ಅಶ್ಲೀಲವಾಗಿ ಬಯ್ಯುವುದೇನು? ಒಂದೆರಡೇ? ಪ್ರತಿನಿತ್ಯ ದೇಹದ ಮೇಲೆಯೇ ಹಲ್ಲೆ. ಮಾನಸಿಕ ಹಿಂಸೆ. ಎಲ್ಲವನ್ನೂ ತಡೆದುಕೊಂಡು ಆ ಮಹಾನ್ ಮಾತೆ ಕಲ್ಲುಬಂಡೆಯoತೆ ನಿಂತಳು. ತನ್ನೂರ ಹೆಣ್ಣುಮಕ್ಕಳಿಗೆ ಅಕ್ಷರದ ಹಾದಿ ತೋರಿಸಿದಳು. ತನ್ನ ಜೊತೆಗಾತಿ ಫಾತಿಮಾಳ ಹಣೆಗೆ ಕಲ್ಲು ಬಡಿದು ರಕ್ತ ಸೋರಿದಾಗ ದುರ್ಗಾವತಾರ ತಾಳಿ ಕಲ್ಲು ಒಗೆಯುತ್ತಿದ್ದವನ ಎದೆಪಟ್ಟಿ ಹಿಡಿದು ಕೆನ್ನೆಗೆ ಬಾರಿಸಿ ಇನ್ನೊಮ್ಮೆ ನಮ್ಮ ದಾರಿಗಡ್ಡ ಬಂದರೆ ಜೋಕೆ! ಎಂದಬ್ಬರಿಸಿದಾಗ ಅವರ ಮೇಲಿನ ದೈಹಿಕ ಹಿಂಸೆ ನಿಂತಿತು.

ಅದಾಗಿ ಒಂದುನೂರಾ ಎಪ್ಪತ್ನಾಲ್ಕು ವರ್ಷಗಳು ದಾಟಿ ಹೋಗಿವೆ. ಇಂದು ಈ ಆಧುನಿಕ ಯುಗದಲ್ಲಿಯೂ ಕೂಡ ಅದೇ ನಡೆಯುತ್ತಿದೆಯೆಂದರೆ? ಶಾಲೆಯ ಗೇಟಿನ ಬಳಿ ಶಿಕ್ಷಕರು, ಶಿಕ್ಷಕಿಯರು ನಿಲ್ಲುತ್ತಾರೆ, ಕಲಿಯಲು ಬರುತ್ತಿರುವ ವಿದ್ಯಾರ್ಥಿನಿಯರನ್ನು ತಡೆಯುತ್ತಾರೆ. ನಿನ್ನ ಮುಖಗೌಸನ್ನು ತೆಗೆದರೆ ಮಾತ್ರ ಪ್ರವೇಶ ಎನ್ನುತ್ತಾರೆ! ಶಾಲಾ ಫೀಸ್ ತುಂಬದಿದ್ದರೂ ಕೆಲಕಾಲ ಸುಮ್ಮನಿರುವ ಶಾಲೆಯ ಆಡಳಿತವರ್ಗ ವಸ್ತçದ ನೆವವೊಡ್ಡಿ ಹೆಣ್ಮಕ್ಕಳಿಗೆ ಶಿಕ್ಷಣ ನಿರಾಕರಿಸುತ್ತಾರೆಂದರೆ? ಒಬ್ಬ ಹುಡುಗಿ ಹೇಳುತ್ತಾಳೆ, ಒಳಹೋಗಿ ಹಿಜಾಬ್ ತೆಗೆಯುವೆ ಎಂದು.

ಆ ಪುಟ್ಟ ಬಾಲಿಕೆಯ ಬೆನ್ನಟ್ಟಿ ಕ್ಯಾಮರಾ, ಮೈಕ್ ಹಿಡಿದು ಟಿವಿ ವರದಿಗಾರ ಓಡುತ್ತಾನೆ! ಮಹಾಭಾರತದ ಧುಃಶಾಸನ ಪುನರವತರಿಸಿದನೇ? ಅವಳು ಹಿಜಾಬ್‌ನ್ನು ತೆಗೆಯುವುದರ ವಿಡಿಯೋ ಮಾಡಲು ಹೊರಟಿದ್ದನೇ ಆತ? ಅದನ್ನು ದೃಶ್ಯಮಾಧ್ಯಮದಲ್ಲಿ ಮತ್ತೆ ಮತ್ತೆ ಎಳೆ ಎಳೆಯಾಗಿ ತೋರಿಸುವ ಹುನ್ನಾರವಿತ್ತೇ? ದ್ರೌಪದಿ ವಸ್ತ್ರಾಪಹರಣದ ಪುನರ್ ಶೋ? ಈ ವರದಿಗಾರನನ್ನು ಎಳೆದು ಎದೆಪಟ್ಟಿ ಹಿಡಿದು ಕೆನ್ನೆಗೆರಡು ಬಾರಿಸಲು ನಮಗೆ ಸಾಧ್ಯವಾಗಲಿಲ್ಲವಲ್ಲ! ಕ್ಷಮಿಸುತ್ತೀರಾ ಫಾತಿಮಾಬೀ, ಸಾವಿತ್ರಿಬಾ?

ದೃಶ್ಯ ಮಾಧ್ಯಮಗಳಿಗೆ ತಮ್ಮ ಟಿಆರ್ ಪಿ ಹೆಚ್ಚಿಸಿಕೊಳ್ಳಲು ಸಮೃದ್ಧ ಅವಕಾಶ ಸಿಕ್ಕಂತಾಗಿದೆ. ನಿನ್ನೆ ಒಬ್ಬ ಮಾಧ್ಯಮದವ ಒರಲುತ್ತಿದ್ದ; ನಾಳೆ ಪ್ರಾಕ್ಟಿಕಲ್ಸ್ ಇದೆ, ಆಗಲಾದರೂ ಹಿಜಾಬ್ ತೆಗೆದಿರಿಸಿ ಪರೀಕ್ಷೆಯಲ್ಲಿ ಭಾಗವಹಿಸುತ್ತಾರೋ, ಅಥವಾ ತಮ್ಮ ಶಿಕ್ಷಣಕ್ಕೇ ತಿಲಾಂಜಲಿ ಕೊಡ್ತಾರೋ ನೋಡಬೇಕು! ಎಂದು. ಕುಳಿತು ಮಜಾ ನೋಡುವ ಆತನ ಉದ್ದೇಶವಂತೂ ಬಹಳ ಸ್ಪಷ್ಟವಿತ್ತು.

ಇವರಾರಿಗೂ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಪಿಯು ಬೋರ್ಡಿನ ವರ್ಷದ ಕೊನೆಯಲ್ಲಿ ಪ್ರಕಟಿಸಲಾದ ನೂತನ ವಸ್ತ್ರನೀತಿ, ಅದನ್ನು ಕಣ್ಮುಚ್ಚಿ ಪಾಲಿಸಿದ ಕಾಲೇಜುಗಳ ಆಡಳಿತವರ್ಗ, ಶಿರಬಾಗಿ ಪಾಲಿಸುತ್ತ ಕಬ್ಬಿಣದ ಗೇಟಿಗಿಂತ ಗೇಟಾಗಿ ನಿಂತ ಶಿಕ್ಷಕವರ್ಗ ಇವರಾರೂ ಕಾಣಿಸುತ್ತಲೇ ಇಲ್ಲವಲ್ಲ? ಆ ಬಾಲಕಿಯರು ಹಠ ಹಿಡಿದಿದ್ದೇ ಎದ್ದು ಕಾಣುತ್ತಿದೆಯಲ್ಲ?

ಆ ಬಾಲಕಿಯರ ಬಾಯಲ್ಲಿ ನಮಗೆ ಧರ್ಮವೇ ಹೆಚ್ಚು, ಶಿಕ್ಷಣ ಹೋದರೆ ಹೋಗಲಿ, ಧರ್ಮ ಮುಖ್ಯ ಎಂದು ಹೇಳಿಸುವವರಾದರೂ ಯಾವುದೇ ರೀತಿಯಲ್ಲಿ ಕಡಿಮೆ ಇಲ್ಲ. ಇಷ್ಟು ದಿನಗಳ ಕಾಲ ತಮಗಿಷ್ಟ ಬಂದ ದಿರಿಸಿನಲ್ಲಿ ಕಾಲೇಜಿಗೆ ಬರುತ್ತಿದ್ದ ಎಲ್ಲಾ ಊರಿನ ಎಲ್ಲಾ ಹುಡುಗಿಯರೂ ಇಂದು ಬುರ್ಖಾ, ಹಿಜಾಬ್ ತೊಟ್ಟೇ ಕಾಲೇಜಿಗೆ ಬರುತ್ತಿದ್ದಾರೆಂದರೆ ಅವರ ಮನೆಯವರಿಂದ, ಧಾರ್ಮಿಕ ಮುಖಂಡರಿoದ ಎಷ್ಟು ಒತ್ತಡವಿರಬೇಕು? ಈ ಒತ್ತಡವೆಲ್ಲ ಯಾವಾಗಲೂ ಹುಡುಗಿಯರ ಮೇಲೇ ಇರುವುದೇಕೆ?

ಒಬ್ಬ ಹುಡುಗಿ ಕ್ರೋಧದಿಂದ ಪ್ರಶ್ನಿಸುತ್ತಾಳೆ; ಹಿಂದೂ ಹುಡುಗಿಯರು ತಮ್ಮ ಧರ್ಮದ ಗುರುತಾಗಿರುವ ಕುಂಕುಮ, ಬಿಂದಿ, ಬಳೆ, ಮಂಗಲಸೂತ್ರ, ಕಾಲುಂಗುರ ಹಾಕಿಕೊಂಡು ಬರ್ತಾರಲ್ಲಾ? ಆವಾಗ ಅವರಿಗೆ ಒಳಬರಲು ಹೇಗೆ ಬಿಡುತ್ತೀರಿ?
ಆ ಕ್ರೋಧಕ್ಕೆ ಪ್ರತಿಕ್ರೋಧವಾಗಿ, ಹಿಂದೂ ಧರ್ಮದ ಸ್ಪೀಕರ್ ಹುದ್ದೆ ತನ್ನದೇ ಎಂಬoತೆ ಇನ್ನಷ್ಟು ಕೋಪಾವಿಷ್ಠನಾಗಿ ಕಾವಿಧಾರಿಯೊಬ್ಬ ಆ ಹುಡುಗಿಯ ನಾಲಿಗೆ ಕತ್ತರಿಸಿ! ನಮ್ಮ ಹೆಣ್ಮಕ್ಕಳ ಕುಂಕುಮದ ಬಗ್ಗೆ ಮಾತಾಡಿದರೆ ಹುಷಾರ್! ಎಂದು ಕಿರುಚುತ್ತಾನೆ. ಅದನ್ನು ಮಜಾ ನೋಡುವ ದೃಶ್ಯಮಾಧ್ಯಮದವರು ಮತ್ತೆಮತ್ತೆ ದಿನದಿನವೂ ಬಿತ್ತರಿಸುತ್ತಾರೆ.

ಒಂದು ಧರ್ಮದ ಹುಡುಗಿಯರಿಗೆ ಬುರ್ಖಾ, ಹಿಜಾಬ್ ಧರಿಸಲು, ಇನ್ನೊಂದು ಧರ್ಮದ ಹೆಣ್ಮಕ್ಕಳಿಗೆ ಬಿಂದಿ, ಕುಂಕುಮ, ಬಳೆ, ಧರಿಸಲು ಒತ್ತಾಯ, ಕಡ್ಡಾಯ ಮಾಡಿದವರಾರು? ಗಂಡಸರಿಗಿಲ್ಲದ ಧರ್ಮ ಸಂಕೇತಗಳು ಹೆಣ್ಣುಮಕ್ಕಳಿಗೇ ಯಾತಕ್ಕೆ? ಇವೆರಡರ ಹಿಂದೆಯೂ ಇರುವುದು ಒಂದೇ, ಅದು ಪುರುಷಾಧಿಕಾರ ಅಲ್ಲವೇ? ಹುಡುಗಿಯರು ಮಾತ್ರ ಇಂಥಾದ್ದೇ ಧರ್ಮಕ್ಕೆ ಸೇರಿದವರೆಂದು ಗೊತ್ತಾಗಬೇಕೇಕೆ? ಧರ್ಮದ ಗುರುತು ಕೇವಲ ಹೆಣ್ಣುಮಕ್ಕಳ ಮೇಲೇಕೆ?

ಇದು ಇಂದಿನದಲ್ಲ, ಹಿಂದಿನಿoದಲೂ ಬಂದಿದ್ದು. 'ಹಿಜಾಬ್ ಮತ್ತು ಕುಂಕುಮದ ಬಗ್ಗೆ ಧರ್ಮಾಂಧರು ಹೇಳುತ್ತಿರುವುದನ್ನು ನಾನು ಹೇಳುತ್ತಿಲ್ಲ.ಇದು, ಈ ಪುರುಷಾಧಿಕಾರದ ಹೇರಿಕೆ ಇಂದಿನದಲ್ಲ, ಹಿಂದಿನಿoದಲೂ ಬಂದಿದ್ದು’ ಎಂದು ನಾನು ಹೇಳುತ್ತಿದ್ದೇನೆ. ಒಬ್ಬ ರಾಜ ಯುದ್ಧ ಮಾಡಿ ಗೆದ್ದಾಗ ಸೋತ ರಾಜನ ಅರಮನೆಯ ಮಹಿಳೆಯರನ್ನೆಲ್ಲ ಒತ್ತೆಯಾಳುಗಳನ್ನಾಗಿ ಮಾಡಿಕೊಳ್ಳುವುದು, ಸೋತ ರಾಜನ ರಾಜ್ಯದ ಹೆಂಗಳೆಯರ ಮೇಲೆ ಬಲಾತ್ಕಾರ ಮಾಡಿ ಹಿಂಸಿಸಿ ಆನಂದ ನೋಡುವುದು, ಪಗಡೆಯಾಟದಲ್ಲಿ ಸೋತ ಧರ್ಮರಾಯ ದ್ರೌಪದಿಯನ್ನೇ ಒತ್ತೆಯಿಟ್ಟಿದ್ದು ಇವೆಲ್ಲ ಏನನ್ನು ತೋರಿಸುತ್ತವೆ? ಎಲ್ಲಾ ರೀತಿಯ ಜೂಜಾಟವಿರಲಿ, ಯುದ್ಧವಿರಲಿ ಹೆಣ್ಣೇ ದಾಳ. ಕೈಯಲ್ಲಿ ಹಿಡಿದು ಗಡಗುಡಿಸಿ ನೆಲದ ಮೇಲೆ ಹಾಕುವ ದಾಳ.

ಗಾದೆಯ ಮೂಲಕ ಹೆಣ್ಣನ್ನು, ಹೊನ್ನು, ಮಣ್ಣಿಗೆ ಹೋಲಿಸುವುದು ಬೇರೆ.
ಮೊನ್ನೆ ಉಡುಪಿನ ಕಾಲೇಜಿನಲ್ಲಿ ಪರಸ್ಪರ ಕೈ ಹಿಡಿದು ಸೌಹರ್ದತೆಯನ್ನು ಮೆರೆದ ಹಿಂದೂ ಮುಸಲ್ಮಾನ ವಿದ್ಯಾರ್ಥಿನಿಯರು ಮುಂದಿನ ಹೆಜ್ಜೆ ಇರಿಸಬೇಕಾಗಿದೆ. ಅವರಷ್ಟೇ ಅಲ್ಲ, ಅವರೊಂದಿಗೆ ನಾವೂ; ಎರಡೂ ಧರ್ಮದ ಹೆಣ್ಣುಮಕ್ಕಳೆಲ್ಲರೂ ಪರಸ್ಪರ ಕೈ ಹಿಡಿದು ಆ ಹಿಜಾಬ್, ಕುಂಕುಮ, ಬುರ್ಖಾ, ಬಳೆ ಇವೆಲ್ಲವನ್ನೂ ಕಿತ್ತೆಸೆಯಬೇಕಾಗಿದೆ. ಧರ್ಮದ ಹೆಸರಿನಲ್ಲಿ ಪುರುಷಾಧಿಕಾರ ನಡೆಸುತ್ತಿರುವ ಈ ದಾಂಧಲೆಯನ್ನು ನಿಲ್ಲಿಸಲು ಅವರೆಲ್ಲರ ಕುತ್ತಿಗೆ ಪಟ್ಟಿ ಹಿಡಿದು ಫಟೀರನೆ ಬಾರಿಸಬೇಕಾಗಿದೆ. ಕುಂಕುಮವಿಲ್ಲ, ಹಿಜಾಬೂ ಇಲ್ಲ, ನಮ್ಮ ಶಿಕ್ಷಣಕ್ಕಡ್ಡ ಬಂದರೆ ಜೋಕೆ! ಎಂದು ಎಚ್ಚರಿಸಬೇಕಾಗಿದೆ.

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!