ಇದೆ ಡಿಸೆಂಬರ್ ೨೪-೨೫ ರಂದು ವೀರಶೈವ /ಲಿಂಗಾಯತ ಧರ್ಮದ ಸಮಾವೇಶ ಮಾಡುವುದಾಗಿ ವರದಿಯಾಗಿದೆ. ಚುನಾವಣೆಗಳು ಸಮೀಪಿಸುತ್ತಿರುವಂತೆ ರಾಜಕಾರಣ ಗಳು ಸುಮ್ಮನೆ ಕೂಡುವವರಲ್ಲ. ಅವರು ಏನಾದರೊಂದು ಕಿತಾಪತಿಯನ್ನು ಮಾಡುತ್ತ ತಮ್ಮ ಬೇಳೆ ಬೇಯಿಸಿಕೊಳ್ಳಲು ಮುಂದಡಿ ಇಡುತ್ತಾರೆ. ಬಹುಶಃ ಈ ಸಮಾವೇಶದಲ್ಲೂ ಅಂಥದ್ದೊಂದು ಹುನ್ನಾರ ಇಲ್ಲ ಎಂದು ಅಲ್ಲಗಳೆಯಲು ಯಾವ ಕಾರಣಗಳೂ ಇಲ್ಲ.
ಅಖಿಲ ಭಾರತ ವೀರಶೈವ/ಲಿಂಗಾಯತ ಮಹಾಸಭಾ ಕರ್ನಾಟಕದ ಲಿಂಗಾಯತರ ಪ್ರಾತಿನಿಧ್ಯವನ್ನು ಪಡೆದ ಸಂಸ್ಥೆ ಅಲ್ಲವೆ ಅಲ್ಲ. ಈ ಹಿಂದೆ ಬಹಳಷ್ಟು ಜನ ಆರೋಪಿಸಿದಂತೆ ಅದೊಂದು ವೃದ್ಧ ರಾಜಕಾರಣ ಗಳ ಆಡಂಬೋಲ. ಲಿಂಗಾಯತ ಸಮಾಜದಲ್ಲಿ ತಮ್ಮ ಹಿಡಿತ ಯಾವತ್ತೂ ಇರಲಿ ಎಂಬ ಕಾರಣಕ್ಕಾಗಿ ಕೆಲವರು ಮಾಡಿಕೊಂಡ ಸಂಸ್ಥೆ. ಈ ಸಂಸ್ಥೆಯಿಂದ ಯಾವ ವೀರಶೈವರಿಗಾಗಲಿ, ಲಿಂಗಾಯತರಿಗಾಗಲಿ ಎಳ್ಳಷ್ಟು ಉಪಕಾರವಾಗಿಲ್ಲ. ಬೆಂಗಳೂರಿನಲ್ಲೊಂದು ಭವ್ಯವಾದ ಕಟ್ಟಡ ಇದೆ. ಕೆಲವರು ಅಲ್ಲಿ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿರಬಹುದು. ಹಲವು ಮಕ್ಕಳು ಈ ಸಂಸ್ಥೆಯಿಂದ ಲಾಭ ಪಡೆಯುತ್ತಿರಬಹುದು.
ಆದರೆ ಇದುವರೆಗೆ ಅದು ತನ್ನ ಸಮುದಾಯಕ್ಕೆ ಮಾಡಬೇಕಾದ ಯಾವೊಂದು ಗಟ್ಟಿ ಕೆಲಸವನ್ನೂ ಅದು ಮಾಡಿಲ್ಲ ಎಂದು ಹೇಳಿದರೆ ಅತಿಶಯೋಕ್ತಿಯ ಮಾತು ಆಗಲಾರದು.ಬಸವಣ್ಣನವರೆ ಲಿಂಗಾಯತ ಧರ್ಮದ ಸ್ಥಾಪಕ ಎಂದು ಬೈಲಾದಲ್ಲಿದ್ದರೂ ಸಹ ಅದನ್ನು ಎಂದೂ ಗಟ್ಟಿಯಾದ ಧ್ವನಿಯಲ್ಲಿ ಹೇಳಿದವರಲ್ಲ. ವಚನ ಸಾಹಿತ್ಯ ಬಿಟ್ಟು ವೀರಶೈವರಿಗೆ ಯಾವ ಅಸ್ತಿತ್ವ ಇಲ್ಲದಿದ್ದರೂ ಸಹ ವೀರಶೈವ ಎಂಬ ಪದವನ್ನು ತಗಲು ಹಾಕಿಕೊಂಡು ಕುಳಿತವರು. ತೀರಾ ಇತ್ತೀಚೆಗೆ ಜನ ಸಾಮಾನ್ಯರ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಅದನ್ನು ವೀರಶೈವ/ ಲಿಂಗಾಯತ ಎಂದು ಮಾಡಿದ್ದಾರೆ ಹೊರತು, ಅವರ ಮನಸ್ಥಿತಿ ವೀರಶೈವವಾದದಲ್ಲಿಯೆ ತಗಲು ಹಾಕಿಕೊಂಡಿದೆ.
ಇದನ್ನೂ ಓದಿ : ಮುರುಘಾ ಪ್ರಕರಣ: ಹತ್ತಾರು ಹೆಣ್ಣು ಮಕ್ಕಳು, ಎಂಟು ಪ್ರಶ್ನೆಗಳು – ಉತ್ತರಿಸುವ ಹೊಣೆ ಪೊಲೀಸರದ್ದು
ವೀರಶೈವ ಪದ ಬಳಕೆ ಮಾಡಿಕೊಂಡು ಲಿಂಗಾಯತರು ಕುಲಗೆಟ್ಟರು ಎಂಬ ಡಾ.ಎಂ.ಎಂ. ಕಲಬುರ್ಗಿಯವರ ಮಾತು ಅಕ್ಷರಶಃ ಸತ್ಯ. ವಚನ ಸಾಹಿತ್ಯವನ್ನು ಸಂಪೂರ್ಣ ಗ್ರಹಿಸಿಯಾದ ಮೇಲೆಯೆ ಲಿಂಗಾಯತರು ಯಾರು ? ಎಂಬುದು ಅರ್ಥವಾಗುತ್ತದೆ. ವಚನ ಸಾಹಿತ್ಯದ ಆಳ ಅಗಲ ಅರಿಯುತ್ತ ಹೋದಂತ್ತೆಲ್ಲ ಲಿಂಗಾಯತದ ಅರ್ಥ ಸ್ಪಷ್ಟವಾಗುತ್ತ ಹೋಗುತ್ತಿದೆ. ಆದರೆ ವಚನ ಸಾಹಿತ್ಯದ ಗಂಧಗಾಳಿ ಇಲ್ಲದ ಬಹುತೇಕ ವೀರಶೈವ ಮಹಾಸಭೆಯ ಮುಖಂಡರು ತಾವು ಹಿಡಿದ ಮೊಲಕ್ಕೆ ಮೂರು ಕಾಲು ಎಂದು ವಾದಿಸುತ್ತಿದ್ದಾರೆ.
ಅಧಿಕೃತವಾಗಿ ಮೂರು ಸಲ ಕೇಂದ್ರ ಸರಕಾರಕ್ಕೆ ವೀರಶೈವ ಮಹಾಸಭೆಯಿಂದ ಅಲ್ಪಸಂಖ್ಯಾತ ಮಾನ್ಯತೆಗಾಗಿ ಕಳಿಸಿದ ಅರ್ಜಿ ತಿರಸ್ಕೃತಗೊಂಡು ಬಂದಿದ್ದರೂ ಸಹ ವೀರಶೈವ ಮಹಾಸಭೆಗೆ ಯಾವುದೆ ರೀತಿಯ ಜ್ಞಾನೋದಯವಾದಂತೆ ಕಾಣುವುದಿಲ್ಲ. ಈಗಲೂ ತಮ್ಮ ಮೊದಲಿನ ಮೊಂಡು ಹಠಕ್ಕೆ ತಗಲು ಬಿದ್ದಂತೆ ಕಾಣುತ್ತದೆ. ವೀರಶೈವ ಕೂಡ ಶೈವ ಧರ್ಮದ ಮೂಲ ಎಂಬುದು ಕೇಂದ್ರ ಸರಕಾರಕ್ಕೆ ಸ್ಪಷ್ಟವಾಗಿ ಗೊತ್ತಿದೆ. ಆದ್ದರಿಂದ ಅಲ್ಪಸಂಖ್ಯಾತರ ಮಾನ್ಯತೆಗಾಗಿ ಇನ್ನೂ ಸಾವಿರ ವರುಷ ಹೋರಾಟ ಮಾಡಿದರೂ ಕೇಂದ್ರ ಸರಕಾರದಿಂದ ಸಿಗಲಾರದು.
ಆದರೆ ವೀರಶೈವ ಮಹಾಸಭೆಗೆ ಇದಾವುದೂ ಬೇಕಿಲ್ಲ. ಅದಕ್ಕೆ ಬೇಕಿರುವುದು ಆ ಸಂಸ್ಥೆಯ ಹುದ್ದೆ ಮಾತ್ರ. ಇದನ್ನು ತೋರಿಸಿ ರಾಜಕೀಯದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಬೇಕೆಂಬುದು ಅವರ ಹುನ್ನಾರ. ಇದನ್ನು ಸ್ಪಷ್ಟವಾಗಿ ಅರಿತುಕೊಂಡ ಕರ್ನಾಟಕದ ಲಿಂಗಾಯತರು ತಮ್ಮದೆ ಪ್ರಾತಿನಿಧಿಕ ಸಂಸ್ಥೆಯೊಂದು ಇರಲಿ ಎಂಬ ಕಾರಣಕ್ಕೆ ಜಾಗತಿಕ ಲಿಂಗಾಯತ ಮಹಾಸಭೆಯನ್ನು ರಚಿಸಿಕೊಂಡು ಕಾರ್ಯೋನ್ಮುಖರಾಗಿದ್ದಾರೆ. ಡಾ.ಎಸ್.ಎಂ.ಜಾಮದಾರರ ಕರ್ಣಧಾರತ್ವದಲ್ಲಿ ಅದಾಗಲೆ ಕಾರ್ಯತತ್ಪರವಾಗಿದೆ.
ಹಿಂದಿನ ಸಿದ್ದರಾಮಯ್ಯ ಸರಕಾರ ತನ್ನ ರಾಜಕೀಯ ಕಾರಣಕ್ಕೋ , ಅಥವಾ ಇನ್ನಾವ ಕಾರಣಕ್ಕೋ ಕೇಂದ್ರ ಸರಕಾರಕ್ಕೆ ಡಾ.ನಾಗಮೋಹನದಾಸ ಅವರ ನೇತೃತ್ವದಲ್ಲಿ ರಚಿಸಿದ ಸಮಿತಿಯ ವರದಿಯನ್ನು ಕೇಂದ್ರ ಕಳಿಸಿದೆ. ಆ ವರದಿಯ ಪ್ರಕಾರ ಕರ್ನಾಟಕದ ಲಿಂಗಾಯತರಿಗೆ ಅಲ್ಪಸಂಖ್ಯಾತ ಸ್ಥಾನಮಾನ ಸಿಗಲೇಬೇಕು.ರಾಜಕೀಯ ಇಚ್ಛಾಶಕ್ತಿ ಇದ್ದರೆ ಅದೇನು ಕನ್ನಡಿಯೊಳಗಿನ ಗಂಟೇನು ಅಲ್ಲ. ಆದರೆ ಆ ಧೀರತವನ್ನು ತೋರಿಸಬೇಕಾದ ರಾಜಕಾರಣ ಗಳು ಯು ಟರ್ನ ಹೊಡೆದಿದ್ದಾರೆ.
ಈ ಹಿಂದೆ ಲಿಂಗಾಯತ ರ‍್ಯಾಲಿಗಳಲ್ಲಿ ಕಾಣ ಸಿಕೊಂಡ ಡಾ.ಶರಣಪ್ರಕಾಶ ಪಾಟೀಲ, ಎಂ.ಬಿ.ಪಾಟೀಲ, ಬಿ.ಆರ್.ಪಾಟೀಲ ಹಾಗೂ ಬಸವರಾಜ ಹೊರಟ್ಟಿ ಮುಂತಾದ ರಾಜಕೀಯ ನಾಯಕರಲ್ಲಿ ಮೊದಲಿನ ಉತ್ಸಾಹ ಕಾಣುತ್ತಿಲ್ಲ. ಬದಲಾಗಿ ಒಬ್ಬೊಬ್ಬರೆ ಖಾಸಗಿಯಾಗಿ ವೀರಶೈವವಾದಿಗಳೆಂದು ತೋರಿಸಿಕೊಳ್ಳುವ ಪಂಚಪೀಠಾಧ್ಯಕ್ಷರಿಗೆ ಭೇಟಿಯಾಗಿ ಕಪ್ಪ ಕಾಣಿಕೆ ಸಲ್ಲಿಸಿದ್ದಾಗಿ ನಂಬಲರ್ಹ ಮೂಲಗಳು ತಿಳಿಸುತ್ತಿವೆ. “ಜನ ಸಾಮಾನ್ಯರಿಗೆ ಸಾಕಷ್ಟು ಕಷ್ಟ ಕೋಟಲೆಗಳಿಗೆ ಗುರಿಯಾದ ಅಪ್ಪ ಬಸವಣ್ಣನವರು ಲಿಂಗಾಯತ ಧರ್ಮವನ್ನು ಕಟ್ಟಿ ಬೆಳೆಸಿದ್ದಾರೆ. ಅದು ನನ್ನ ಸುಕೃತ. ನಾನು ಯಾವುದೆ ಕಾರಣಕ್ಕೂ ಅಪ್ಪ ಬಸವಣ್ಣನವರ ತತ್ವವನ್ನು ಹಾಗೂ ಈ ಧರ್ಮಕ್ಕೊಂದು ಮಾನ್ಯತೆಯನ್ನು ಕೊಡಿಸದೆ ಬಿಡಲಾರೆ” ಎಂಬ ಶಪಥವನ್ನು ಮಾಡಿದ್ದ ಎಂ.ಬಿ.ಪಾಟೀಲರು ಠುಸ್ ಆಗಿದ್ದಾರೆ. ಪಂಚಾಚಾರ್ಯರು ಅವಾಸ್ಥವಿಕ ಜನ ಎಂದು ಭಾವಿಸಿದ್ದ ಬಿ.ಆರ್.ಪಾಟೀಲ ಅವರ ಪದತಲದಲ್ಲಿ ನಿಂತು ಬಂದಿದ್ದಾರೆ. ಬಸವರಾಜ ಹೊರಟ್ಟಿಯವರು ಜಾಗತಿಕ ಲಿಂಗಾಯತ ಮಹಾಸಭೆಯ ಬಗ್ಗೆ ಮಾತನಾಡದೆ ಗಪ್ ಚುಪ್ ಕುಳಿತಿದ್ದಾರೆ.
ಇವರೆಲ್ಲರಂತೆ ತಾವೂ ಕೂಡ ಎಲ್ಲರಂತೆ ಎಂದು ಹೇಳಬಹುದಾಗಿದ್ದ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಮಾತ್ರ ಸಮರ್ಥ ಉತ್ತರ ಕೊಡುತ್ತ ನಿಜ ಲಿಂಗಾಯತ ತತ್ವ ಪ್ರೇಮಿಯಾಗಿದ್ದಾರೆ ಎಂದು ಹೇಳಬೇಕಿದೆ. ಬಸವಣ್ಣನವರ ಕನಸಿನ ಲಿಂಗಾಯತವನ್ನು ಸಿದ್ದರಾಮಯ್ಯವರಂತೆ ಅರ್ಥ ಮಾಡಿಕೊಂಡ ರಾಜಕಾರಣ ಗಳು ಸಿಗುವುದು ಅಪರೂಪ. ಇದೇನೆ ಇರಲಿ. ಒಂದು ಕಡೆ ಜಾಗತಿಕ ಲಿಂಗಾಯತ ಮಹಾಸಭೆಯ ಪದಾಧಿಕಾರಿಗಳಾಗಿ, ಇನ್ನೊಂದು ಕಡೆ ವೀರಶೈವ ವಾದದ ಕಡೆಗೆ ಹೊರಟಿರುವ ರಾಜಕೀಯ ನಾಯಕರಿಗೆ ಹೇಳುವುದಿಷ್ಟೆ.
ರಾಜಕೀಯ ಕಾರಣಕ್ಕಾಗಿ ತಾವು ಯಾರು ಮತ್ತೆ ಇನ್ನಾರನ್ನೋ ಓಲೈಸಿಕೊಂಡು ಹೊರಟಿರಬಹುದು. ಆದರೆ ನೀವು ಹೋಗುವಾಗ ಜಾಗತಿಕ ಲಿಂಗಾಯತ ಮಹಾಸಭೆಯ ಪದಾಧಿಕಾರವನ್ನು ತೊರೆದು ಹೋಗಿರಿ. ತಾವು ಈ ಹಿಂದೆ ಲಿಂಗಾಯತರ ಬೆನ್ನ ಹಿಂದೆ ನಿಂತು, ನಿಮ್ಮ ಸರಕಾರದಿಂದ ರಚಿಸಲ್ಪಟ್ಟ ವರದಿಯನ್ನು ಲಿಂಗಾಯತರು ಕೃತಜ್ಞತೆಯಿಂದ ನೋಡುತ್ತಾರೆ. ನಿಮ್ಮನ್ನು ಯಾವತ್ತೂ ಮರೆಯಲಾರರು. ಆದರೆ ನಿಮ್ಮ ಸ್ಥಾರ್ಥಕ್ಕಾಗಿ ಲಿಂಗಾಯತರ ಪ್ರಾತಿನಿಧಿಕ ಸಂಸ್ಥೆಯನ್ನು ಜೊತೆಗೆ ತೆಗೆದುಕೊಂಡು ಹೋಗಿ ಟೀಕೆ ಟಿಪ್ಪಣ ಗೆ ಗುರಿಯಾಗಬೇಡಿ.