ನಂದಿನಿ: ಲಂಕೇಶ್ ಪತ್ರಿಕೆಯ ವರದಿಗಾರ್ತಿಯಾಗಿ ಮೊದಲು ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ನೀವು ಆ ಕಾಲಘಟ್ಟದ ಪತ್ರಿಕಾ ಮಾಧ್ಯಮದ ಸ್ವರೂಪ ಹಾಗೂ ಇಂದಿನ ಮಾಧ್ಯಮದ ಸ್ವರೂಪಕ್ಕೂ ಯಾವ ರೀತಿಯ ಬದಲಾವಣೆಗಳನ್ನು ಗುರುತಿಸುವಿರಿ?
ಬಿ.ಟಿ.ಎಲ್ – ನಾನು ಲಂಕೇಶ್ ಪತ್ರಿಕೆಯಲ್ಲಿ ಕೆಲಸಮಾಡುತ್ತಿದ್ದ 70ರ ದಶಕದಲ್ಲಿ, ಮಾಧ್ಯಮವನ್ನು ತಮ್ಮ ಬದುಕಿನ ಮುಖ್ಯ ಗುರಿಯಾಗಿಸಿಕೊಂಡು ಪತ್ರಿಕೆಯನ್ನು ನಡೆಸಲಾಗುತ್ತಿತ್ತು. 80ರ ದಶಕದಲ್ಲಿ ಕೇವಲ ಮೂರು-ನಾಲ್ಕು ಪತ್ರಿಕೆಗಳಿದ್ದವು. ಅಂದಿನ ಪತ್ರಿಕಾ ವರದಿಗಳಲ್ಲಿ ನೈಜತೆ ಇರುತ್ತಿತ್ತು; ಹಾಗಾಗಿ ಜನರಿಗೆ ಪತ್ರಿಕೆಗಳ ಬಗ್ಗೆ ಮೆಚ್ಚಿಗೆ ಇತ್ತು. ಜನರ ಮನೋಧೋರಣೆ, ಅಭಿಪ್ರಾಯಗಳ ಮೇಲೆ ಆಳವಾದ ಪ್ರಭಾವನ್ನು ಅಂದಿನ ಪತ್ರಿಕೆಗಳು ಬೀರುತ್ತಿದ್ದವು. ಪತ್ರಿಕೋಧ್ಯಮ ಅಷ್ಟೇ ಅಲ್ಲದೆ ಅಂದಿನ ರಾಜಕೀಯ ಕ್ಷೇತ್ರದಲ್ಲಿಯೂ ಈ ಮಟ್ಟಿಗಿನ ಅನ್ಯಾಯ, ಲಜ್ಜೆಗೆಡಿತನ ಇರಲ್ಲಿಲ್ಲ; ಹಾಗಾಗಿ ಇಂದಿನ ಪತ್ರಿಕೋದ್ಯಮ ಮಾರಾಟ ಸಂಸ್ಥೆ ಯಾಗಿರುವಂತಹದು; ಒತ್ತೆ ಬಿದ್ದಿರುವಂತಹದು ಅಥವಾ ಯಾವದೋ ಒಂದು ಭಯಕ್ಕೆ ಬಾಯಿ ಮುಚ್ಚಿಕೊಂಡಿರುವಂತಹದು.ಈ ರೀತಿಯಲ್ಲಿ ಪತ್ರಿಕೋದ್ಯಮ ದಿವಾಳಿಯಾಗಿರುವುದನ್ನು ನಾನು ಕಾಣ್ತಾ ಇದ್ದೀನಿ.
ನಂದಿನಿ: ಪ್ರಜಾಪ್ರಭುತ್ವದ ಕಣ್ಗಾವಲು ಎಂದೇ ಕರೆಸಿಕೊಳ್ಳುವ ಮಾಧ್ಯಮ ಪೂರ್ಣವಾಗಿ ತಾನು ನಿರ್ವಹಿಸಬೇಕಾದ ಗುರುತರ ಜವಾಬ್ದಾರಿಗೆ ಬೆನ್ನು ಹಾಕಿರುವ ಹಿನ್ನೆಲೆಯಲ್ಲಿ, ಈ ಹೊತ್ತಿನಲ್ಲಿ ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಉಳಿವಿದೆ ಎಂದು ನಿಮಗನಿಸುತ್ತಿದೆಯೆ?
ಬಿ.ಟಿ.ಎಲ್ – ಯಾವ ಪ್ರಜಾಪ್ರಭುತ್ವದ ಆಡಳಿತ ವ್ಯವಸ್ಥೆಗೆ ಸಹಿಷ್ಣುತಾ ಮನೋಭಾವ ಇರಬೇಕಾಗಿತ್ತೋ ಅಲ್ಲಿ ಅಸಹಿಷ್ಣುತೆ ಇದೆ.ಎಲ್ಲರನ್ನೂ ಸಮಾನವಾಗಿ ಕಾಣುವಂತಹ ಮನೋಭಾವ ಇರಬೇಕಾಗಿತ್ತೋ ಅಲ್ಲಿ ಅಸಮಾನತೆ ಇದೆ. ಜಾತಿಯತೆ ಒಳಗೊಳಗೆ ದ್ವೇಷ ಕಾರುತ್ತಿದೆ. ಜಾತಿಯತೆ ಹೆಚ್ಚಾಗುತ್ತಿದೆ. ಸ್ವತಂತ್ರ ಭಾರತದ ಮತ್ತು ಸಂವಿಧಾನದ ಪ್ರಜಾಸತ್ತೆಯ ಅಂತರಂಗದ ಕೂಗು ಸಮಾನತೆ, ಸ್ವಾತಂತ್ರ್ಯ ಮತ್ತು ಘನತೆಯ ಬದುಕು. ನಮ್ಮದು ವಿವಿಧತೆಯಲ್ಲು ಏಕತೆಯನ್ನು ಕಂಡುಕೊಂಡಿರುವ ದೇಶ. ಆದರೆ ಈ ದಿನಗಳಲ್ಲಿ ಈ ಮನೋಭಾವವೇ ಇಲ್ಲವಾಗುತ್ತಿದೆ. ಎಲ್ಲರು ದರ್ಪ, ದಬ್ಬಾಳಿಕೆ ಕಡೆಗೆ ಆಡಳಿತ ವೈಖರಿ ಜಾರುತ್ತಿದೆ. ಎಲ್ಲಾ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಆದಷ್ಟು ನಾಶ ಮಾಡಿ, ಸಂವಿಧಾನದ ತತ್ವಗಳನ್ನು ನಿಧಾನವಾಗಿ, ಜನರ ಅರಿವೆಗೆ ಬಾರದಂತೆ, ಅವರನ್ನು ಮೈಮರೆಸಿ, ಭ್ರಮಾಲೋಕ ಸೃಷ್ಟಿಸಲಾಗಿದೆ.ಆ ಭ್ರಮಾಲೋಕದಲ್ಲಿ ಜನರು ಸತ್ಯವನ್ನೆ ಅರಿಯಲು ಸಾಧ್ಯವಾಗದೆ ಕೂಗುಮಾರಿಗೆ ಬಲಿಯಾಗಿದ್ದಾರೆ.ಸರ್ವಾಧಿಕಾರತ್ವವನ್ನು ಒಪ್ಪಿಕೊಳ್ಳುವವರು ಮಾತ್ರ ಈ ವ್ಯವಸ್ಥೆಯಲ್ಲಿ ಬದುಕುಳಿಯುವ ಸಾಧ್ಯತೆಗಳಿವೆ. ವಿರೋಧಿಗಳ ಬಾಯಿಯನ್ನು ಮುಚ್ಚಿಸಿ ದಮನಗೊಳಿಸಲಾಗುತ್ತಿದೆ.ಇದು ದುರಂತ.ಇದು ಭವಿಷ್ಯದಲ್ಲಿ ಸರಿಹೋಗುತ್ತದೆಯೆಂದು ನನಗೆ ಅನಿಸುತ್ತಿಲ್ಲ. ಚುನಾವಣೆಗಳಲ್ಲಿ ಮೋಸ ನಡೆಯುತ್ತಿದೆ, ಆದರೆ ಅದಕ್ಕೆ ದಾಖಲೆ, ಸಾಕ್ಷಿಗಳು ಒದಗಿಸಲಾಗುವುದಿಲ್ಲ. ಒಂದು ವೇಳೆ ಒದಗಿಸಿದರೂ, ಅಂಥವರಿಗೆ ಉಳಿಗಾಲವಿಲ್ಲ. ಸಂವಿಧಾನದ ಆಶಯಗಳು ನಿಧಾನವಾಗಿ ಸಾಯುತ್ತಿವೆ.
ನಂದಿನಿ: ನೀವು ರಾಮಕೃಷ್ಣ ಹೆಗಡೆಯವರ ಕಾಲಾವಧಿಯಲ್ಲಿ ಎಮ್.ಎಲ್.ಸಿ ಆಗಿ ಕಾರ್ಯನಿರ್ವಹಿಸಿದವರು.ಆ ಅವಧಿಯಲ್ಲಿ ಅಲಕ್ಷಿತ ಸಮುದಾಯದ ಪ್ರತಿನಿಧಿಯಾಗಿ ಹಾಗೂ ಒಬ್ಬ ಮಹಿಳೆಯಾಗಿ ನಿಮ್ಮ ಸಾಧನೆಯನು?
ಬಿ.ಟಿ.ಎಲ್ – ಎಮ್‍ಎಲ್‍ಸಿ ಆಗಿದ್ದ 6 ವರ್ಷಗಳ ಕಾಲಾವಧಿಯಲ್ಲಿ ಯಾವ ರೀತಿಯ ಅಧಿಕಾರವೂ ಇರಲಿಲ್ಲ. ಆದರೂ ಈ ಅವಧಿಯಲ್ಲಿ ರಾಜ್ಯಾದಾದ್ಯಂತ ತಿರುಗಾಡಿ, ಸಿಗುವ ಅಲ್ಪಸ್ವಲ್ಪ ಸೌಲಭ್ಯಗಳನ್ನು ಬಳಸಿಕೊಂಡು ಅಲಕ್ಷಿತ ಸಮುದಾಯದ ಯುವಕ,ಯುವತಿಯರನ್ನು ಸಂಘಟಿಸಿದೆ.
ನಂದಿನಿ: ಅಂದಿನ ಜನಾಶ್ರಿತ ರಾಜಕಾರಣ, ಇಂದಿನ ಧನಾಶ್ರಿತ ರಾಜಕಾರಣ – ಏರಡೂ ಮನ್ವಂತರಗಳನ್ನು ಹತ್ತಿರದಿಂದ ಕಂಡವರು ನೀವು? ಏನನಿಸುತ್ತದೆ ನಿಮಗೆ?
ಬಿ.ಟಿ.ಎಲ್ – ನಾನೂ ಯಾರು ಅಲ್ಲ. ಲಂಕೇಶ್ ಪತ್ರಿಕೆಗೆ ವರದಿಗಳನ್ನು ಬರೆಯುತ್ತಿದ್ದವಳು,ಯಾವ ಅಧಿಕಾರವು, ಕೌಟಂಬಿಕ ರಾಜಕೀಯ ಹಿನ್ನೆಲೆಯೂ ನನಗೆ ಇರಲಿಲ್ಲ. ನನ್ನಂಥವಳನ್ನು ಗುರುತಿಸಿ ಹೆಗಡೆಯವರು ಎಮ್‍ಎಲ್‍ಸಿ ಮಾಡಿದ್ದರು. ನಜೀರ್, ದೇವೆಗೌಡ್ರು ಹೀಗೆ ಬಹಳಷ್ಟು ಮಂದಿ ಇದ್ದರು.
ಅಂದು ರಾಜಕಾರಣಿಗಳಲ್ಲಿ ಭ್ರಷ್ಟಾಚಾರ ಇದ್ದರೂ, ಲಜ್ಜೆ ಇತ್ತು. ಪ್ರಾಮಾಣಿಕವಾಗಿ ರಾಜಕೀಯ ಮಾಡಬೇಕು ಎಂಬ ಛಲ ಇತ್ತು. ಅಂತಹ ರಾಜಕಾರಣಿಗಳು ಇಂದು ಇಲ್ಲ ಎನ್ನುವಂತಹದ್ದೇ ಇಂದಿನ ದುರಂತ. ಅಂದಿನ ರಾಜಕಾರಣಿಗಳು ಎತ್ತರದ ವ್ಯಕ್ತಿತ್ವ ಹೊಂದಿದ್ದರು.ಇಂದಿನ ರಾಜಕಾರಣಗಳಲ್ಲಿ ಅಂತಹ ಮೇರು ಗುಣಗಳನ್ನು ಕಾಣುವುದಕ್ಕೆ ಸಾಧ್ಯವಿಲ್ಲ. ಇಂದಿನ ರಾಜಕಾರಣಿಗಳು ತಮ್ಮ ವಿರೋಧವನ್ನು ಸಹಿಸುವ ಗುಣವನ್ನು ಹೊಂದಿಲ್ಲ. ವಿರೋಧ, ಟೀಕೆಗಳನ್ನು ಸ್ವೀಕರಿಸಿ, ತಿದ್ದಿಕೊಳ್ಳುವ ಹಿರಿತನವೇ ಇಲ್ಲ ಇಂದಿನ ರಾಜಕಾರಣಿಗಳಲ್ಲಿ. ಇಂದಿನ ರಾಜಕಾರಣಿಗಳು ಯಾವ ನಾಚಿಕೆಯಿಲ್ಲದೆ ಮಂತ್ರಿ ಪದವಿಗಾಗಿ ಗೋಗರೆಯುತ್ತಾರೆ.ತನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಜನಪ್ರತಿನಿಧಿಗಳು ಅಂಕಿ-ಅಂಶಗಳನ್ನಿಟ್ಟುಕೊಂಡು,ಪ್ರಾಮಾಣಿಕವಾಗಿ ಅಭಿವೃದ್ಧಿ ಕಾರ್ಯಗಳು ಸಾಗಿಸಬಹುದು. ರಾಜಕೀಯದಲ್ಲಿ ಪರಿಶುದ್ಧತೆ ಇರಬೇಕಿತ್ತು. ಆದರೆ ಇಲ್ಲ
ನಂದಿನಿ: ನಿಮ್ಮ ರಾಜಕಾರಣದಲ್ಲಿ, ಜೀವನದಲ್ಲಿ ಸಮಾಜವಾದಿ ತತ್ವಗಳನ್ನು ಅಳವಡಿಸಿಕೊಂಡ ಬಗೆ ಯಾವುದು?
ಬಿ.ಟಿ.ಎಲ್ – ನನ್ನಲ್ಲಿ ಮೊದಲು ಯಾವ ಸಮಾಜವಾದಿ ಗುಣಗಳು ಇರಲಿಲ್ಲ. ಆದರೆ ನಾನು ಲಂಕೇಶ್ ಪತ್ರಿಕೆಗೆ ಬರೆಯಲು ಆರಂಭಿಸಿದ ಮೊದಲು ಸಾಹಿತ್ಯ ಓದುತ್ತಿದ್ದೆ. ಅದರಲ್ಲೂ ಕುವೆಂಪು ಅವರ ಸಾಹಿತ್ಯ ಓದಿದ ಮೇಲೆ ನನ್ನ ಸೀಮಿತ ಗ್ರಹಿಕೆ ಮಿರಿದ ಸಮಾಜ ಇದೆ ಎಂಬ ಚಿಂತನೆಗಳು ಮೂಡಿದವು. ಬಂಡಾಯ ಸಾಹಿತ್ಯ ಸಂದರ್ಭದಲ್ಲಿ ನನ್ನ ಸಾಹಿತ್ಯ ಒಳಗೊಳ್ಳಬೇಕಾದ ಸಮಾಜಮುಖಿ ಅಂಶಗಳ ಕಡೆಗೆ ಗಮನ ಹರಿಸಿದೆ. ಆಗ ನನ್ನಲ್ಲಿ ಸಮಾಜದ ಬಗ್ಗೆ ಅರಿವು ಹುಟ್ಟಿತ್ತು.ಅಂಬೇಡ್ಕರ್, ಕುವೆಂಪು,ಬರಗೂರು, ಚಂಪಾ ಮೊದಲಾದವರ ಚರ್ಚೆಗಳಿಂದ ಸಮಾಜವಾದಿ ತತ್ವಗಳ ಬಗೆಗಿನ ಅರಿವು ಆಳವಾಯಿತು. ಬಸವಣ್ಣ-ಮೊದಲಾದ ಶರಣರ ವಚನ ಚಳುವಳಿಯ ಬಗ್ಗೆ ಚಂತನ-ಮಂಥನಗಳಿಂದ ಸಮಾಜವಾದಿ ತತ್ವಗಳ ಬಗೆಗೆ ಗೌರವ ಉಂಟಾಯಿತು. ನಾನು ನನ್ನ ವೈಯಕ್ತಿಕ ಜೀವನದಲ್ಲಿ ಅವುಗಳನ್ನು ಅಳವಡಿಸಿಕೊಂಡಿದ್ದೆ. ಜಯಪ್ರಕಾಶ ನಾರಾಯಣ ಬಗೆಗೆ ನನಗೆ ತುಂಬಾ ಗೌರವ. ಅವರ ಬಗ್ಗೆ ನಾನು ಒಂದು ಕವನ ಬರದಿದ್ದೆ. ಗೋಪಾಲಗೌಡರ ಚಿಂತನೆಗಳಂತೂ ಅತ್ಯಂತ ಅದ್ಭುತ.ಅವರೆಲ್ಲರೂ ಲೋಹಿಯಾ ಓದಿಕೊಳ್ಳುತ್ತಿದ್ದರು. ಇವರೆಲ್ಲರೂ ಜನರ ಮೇಲೆ ಪ್ರಭಾವ ಬಿರುವ ಮೂಲಕ ಇಂದಿರಾಗಾಂಧಿ ಸರ್ಕಾರಕ್ಕೆ ಚುಚ್ಚುಮದ್ದನ್ನು ಕೊಟ್ಟವರು. ಆದರೆ ಇಂದಿರಾ ಸರ್ಕಾರಕ್ಕೆ ಪರ್ಯಾಯ ಸರ್ಕಾರ ರಚಿಸಿದ ಜನತಾ ಸರ್ಕಾರ ವೈಫಲ್ಯಗೊಂಡಾಗ ನಾನು ಇಂದಿರಾಗಾಂಧಿಯವರತ್ತ ಹೊರಳಿದೆ. ನಾಯಕರ ಮನಸ್ಥಿತಿ,ಅನುಯಾಯಿಗಳ ಮನಃಸ್ಥಿತಿಗೂ ವೈರುಧ್ಯಗಳಿದ್ದಾಗ ಯಾವ ಸರ್ಕಾರವೂ ಉಳಿಯುದಿಲ್ಲ. ಜನತಾ ಸರ್ಕಾರದ ಪರಿಸ್ಥಿತಿಯೂ ಇದೇ ಆಗಿತ್ತು. ಬೌದ್ಧ ಧರ್ಮಕ್ಕೆ ಯಾವ ಆಶಯಗಳೊಂದಿಗೆ ಅಂಬೆಡ್ಕರ್ ಮತಾಂತರವಾದರೋ ಅವರ ಅನುಯಾಯಿಗಳು ಅವರ ಆಶಯಗಳನ್ನು ಇದುವರೆಗೂ ಅರ್ಥಮಾಡಿಕೊಂಡಿಲ್ಲ. ಬಸವಣ್ಣನ ಅನುಯಾಯಿಗಳು ಬಸವಣ್ಣನನ್ನ ಅರ್ಥಮಾಡಿಕೊಂಡಿಲ್ಲ; ಮೂರ್ತಿಪೂಜೆಗೆ ಸೀಮಿತರಾಗಿದ್ದಾರೆ. ಹಾಗೆಯೇ ಪರ್ಯಾಯ ನಾಯಕತ್ವ ಒದಗಿಸಲು ಹೊಸ ರಾಜಕೀಯ ವ್ಯವಸ್ಥೆ ಕಟ್ಟಿದ ನಾಯಕರ ಮನಸ್ಸನ್ನು ಅವರ ಅನುಯಾಯಿಗಳು ಅರ್ಥಮಾಡಿಕೊಂಡಿಲ್ಲ. ಏಕೆಂದರೆ ನಮ್ಮಲ್ಲಿ ತರಬೇತಿ ಇಲ್ಲ
ನಂದಿನಿ: ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿಯನ್ನು ತರಲು ಹೊರಟಿರುವ ಸರ್ಕಾರದ ನಡೆಯನ್ನು ಒಬ್ಬ ಸಮಾಜವಾದಿಯಾಗಿ ಹೇಗೆ ವಿಶ್ಲೇಷಿಸುತ್ತೀರಿ?
ಬಿ.ಟಿ.ಎಲ್ – ಸಮಾಜವಾದ ತತ್ವಗನುಸಾರವಾಗಿ ಈ ಹಿಂದೆ ಕೃಷಿ ಭೂಮಿಯು ಸಮಾನವಾಗಿ ಹಂಚಿಕೆ ಆಗಿತ್ತು. ಮತ್ತು ಅದರ ಹಕ್ಕನ್ನು ಅವರೇ ಅನುಭವಿಸುವಂತಹ ಸ್ಥಿತಿ ಇತ್ತು. ಬ್ಯಾಂಕುಗಳ ರಾಷ್ಟ್ರೀಕರಣದಂತಹ ಕ್ರಮಗಳಿಂದ ಸಂಪತ್ತಿನ ವಿಕೇಂದ್ರೀಕರಣಕ್ಕೆ ಇಂದಿರಾಗಾಂಧಿ ಪ್ರಯತ್ನಿಸಿದರು.ಬಂಡವಾಳಶಾಹಿಗಳಿಗೆ ಅವಕಾಶ ಇಲ್ಲದಂತೆ ಸಾರ್ವಜನಿಕ ಹಿತಾಸಕ್ತಿಗಾಗಿ ಅನೇಕ ಯೋಜನೆ, ನೀತಿಗಳನ್ನು ಜಾರಿಗೊಳಿಸಿದರು.ಈಗ ಬಂಡವಾಳಶಾಹಿಗಳ ಹಿತಾಸಕ್ತಿಯನ್ನು ಕಾಯ್ದೆಗಳಾಗುತ್ತಿವೆ.ರೈತರ ಸ್ವಾತಂತ್ರ್ಯ, ಸ್ವಾಲಂಭನೆಯನ್ನು ಕಿತ್ತುಕೊಂಡು ಜೀತದಾಳುಗಳಾಗಿ ಪರಿವರ್ತಿಸಲು ಅವಕಾಶವಾಗುತ್ತಿದೆ.ಇಂದು ರಾಯಚೂರಿನ ದೇವದುರ್ಗ ಕ್ಷೇತ್ರದಲ್ಲಿ ಎಷ್ಟು ಜನ ಆಂಧ್ರದ ಶ್ರೀಭಂತರ ಕೈಕೆಳಗೆ ಇದ್ದಾರೆ. ಬಹಳಷ್ಟು ರೈತರು ತಮ್ಮ ಜಮೀನಗಳನ್ನು ಮಾರಿ ಶ್ರೀಮಂತರ ಗುಲಾಮರಾಗಿ ಬಾಳುತ್ತಿದ್ದಾರೆ.ಹೀಗೆ ಹೆಚ್ಚು ಹೆಚ್ಚಾಗಿ ಗುಲಾಮರು ತಯಾರಾಗುತ್ತಾರೆ.ಗುಲಾಮರ ರಾಜ್ಯ ಸ್ಥಾಪನೆಯಾಗಬೇಕೆಂಬ ಮನಸ್ಥಿತಿ ಇದೆ.ಆದುದರಿಂದ ಭೂಸುಧಾರಣಾ ಕಾಯ್ದೆ ಜಾರಿಗೆ ತಂದು ಬಡಜನರನ್ನು ಬೀದಿಗೆ ಹಾಕಲಾಗುತ್ತಿದೆ.ಇಂದು ಖಾಸಗೀಕರಣದ ಮೂಲಕ ಜನರನ್ನು ಅತಂತ್ರಗೋಳಿಸಲಾಗುತ್ತಿದೆ.ಬಡವರ ರೈಲು, ಸಾರಿಗೆ.ಅವರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಉದ್ಯೋಗಕ್ಕಾಗಿ ವಲಸೆ ಹೋಗುವರು ಆದರೆ ರೈಲು,ಸಾರಿಗೆಯನ್ನು ಖಾಸಗೀಕರಣ ಗೊಳಿಸಲಾಗುತ್ತಿದೆ. ಈ ವ್ಯವಸ್ಥೆಯಲ್ಲಿ ಬಡವರು ಹೆಚ್ಚಿನ ದರವನ್ನು ನೀಡಿ ರೈಲು ಪ್ರಯಾಣವನ್ನು ಮಾಡಬೇಕಾಗಿದೆ. ಜನರಿಗೆ ಅರ್ಥವಾಗುತ್ತಿಲ್ಲ. ಅರ್ಥವಾಗಿದರೆ ಜನರು ಇಷ್ಟೊತ್ತಿಗೆ ದಂಗೆ ಎಳಬೇಕಿತ್ತು.ಎಲ್ಲಾ ವಿಷರಗಳಲ್ಲಿಯೂ ಜನ ಪರಾವಲಂಬಿಗಳಾಗಿ ಸರ್ಕಾರ ಮಾಡುತ್ತಿದೆ.ಜನರ ಸ್ವಾತಂತ್ರ್ಯವನ್ನು ಹರಣ ಮಾಡುವ ಪ್ರಯತ್ನ ಮಾಡುತ್ತಿದೆ.ಸ್ವತಂತ್ರ ಭಾರತದ ಯಾವ ಲಕ್ಷಣಗಳು ಇಲ್ಲ.
ನಂದಿನಿ: ಈ ದಿನಗಳಲ್ಲಿ ಜನಪರವಾದ ಹಕ್ಕೊತ್ತಾಯಗಳನ್ನು ಮಾಡಬಲ್ಲ ಚಳುವಳಿಗಳನ್ನು ಜನರು ರೂಪಿಸಲು ಸಾಧ್ಯವಾಗುತ್ತಿಲ್ಲ ಏಕೆ ?
ಬಿ.ಟಿ.ಎಲ್ – ಜನಕ್ಕೆ ಅರ್ಥವಾಗುತ್ತಿದೆಯೋ,ಇಲ್ಲವೋ ತಿಳಿಯುತ್ತಿಲ್ಲ. ಖಾಸಗೀಕರಣದ ಮೂಲಕ ಜನರನ್ನ ಪರಾವಲಂಬಿಗಳಾಗಿ ಮಾಡುತ್ತಿದೆ ಸರ್ಕಾರ. ಈ ಮೂಲಕ ಜನರ ಸ್ವಾತಂತ್ರ್ಯವನ್ನು ಹರಣ ಮಾಡಿದೆ.ಜನರಿಗೂ ಸರ್ವರನ್ನು ಸಮಾನತೆಯಿಂದ ನೋಡುವ ಮನಸ್ಥಿತಿ ಇದ್ದಿದ್ದರೆ ಸರ್ಕಾರ ಇಂಥ ಸರ್ವಾಧಿಕಾರತ್ವದ ಕೆಲಸಗಳು ಗಮನಕ್ಕೆ ಬರುತ್ತಿದ್ದವು. ಜಾತಿವಾದಿಗಳಾಗಿ ಸೀಮಿತಲಾಗಿ ಯೋಚಿಸುತ್ತಿರುವುದರಿಂದ,ಮಠಾಧೀಶರು, ದೇವಸ್ಥಾನದ ಟ್ರಸ್ಟಿಗಳಿಗೆ ಸರ್ಕಾರದ ಹಣ ಬರುವುದರಿಂದ ಅವು ಕೂಡಾ ಇಂಥವರನ್ನು ಬೆಂಬಲಿಸುತ್ತಿವೆ.ಜಾತಿ, ಧರ್ಮಗಳು ಚುನಾವಣೆಯ ಸೋಲು, ಗೆಲವು ನಿರ್ಧರಿಸುವ, ಜನರಲ್ಲಿ ಮಬ್ಬನ್ನು ಆವರಿಸುವಂತೆ ಮಾಡುತ್ತಿವೆ.ಈ ಮಬ್ಬನ್ನು ತೆಗೆಯಬಲ್ಲಂತಹ ಯಾವ ಶಕ್ತಿಯೂ ಇಲ್ಲವಾಗಿವೆ.ಜನಗಳಿಗೆ ಆ ಅರಿವೆ ಇಲ್ಲ. ಜಾತಿ,ದೇವರು, ಧರ್ಮ, ಧರ್ಮದ ಮುಖವಾಡ ಹಾಕಿಕೊಂಡು ಧರ್ಮ ನಕಲಿತನಗಳಿಂದ ಮನುಷ್ಯ ತನ್ನನ್ನು ತಾನು ಕಳೆದುಕೊಂಡಿರುವುದರಿಂದ ದೇಶ ಈ ಅಪಾಯಗಳನ್ನು ಎದುರಿಸುತ್ತಿದೆ.ಎಲ್ಲಿಯವರೆಗೆ ಇವುಗಳಿಂದ ಹೊರಬರುವ ತನಕ ಇವೆಲ್ಲವೂ ಮುಂದುವರೆಯುತ್ತವೆ.ಮನುಷ್ಯ ಗುಲಾಮಗಿರಿಯಲ್ಲಿ ಒದ್ದಾಡಿ ಹೇಗೆ ಬ್ರಿಟಿಷರಿಂದ ಒದ್ದಾಡಿ ಹೇಗೆ ಸ್ವಾತಂತ್ರ್ಯ ಪಡೆದೇವೋ, ಹಾಗೆಯೇ, 2-3 ತಲೆಮಾರುಗಳ ನಂತರ ಹೋರಾಟ ಮಾಡಿ ಈ ಬಲೆಯಿಂದ ಬಿಡಿಸಿಕೊಳ್ಳುತ್ತಾರೇನೋ!ಕೆಲವು ಚಿಂತಕರು ಇಂತಹ ವ್ಯವಸ್ಥೆಗೆ ಬಗ್ಗಿಕೊಳ್ಳುತ್ತಿರುವುದು ದುರಂತ.
ಬಿ.ಟಿ.ಲಲಿತಾನಾಯಕ್
ಪ್ರಗತಿಪರ ಚಿಂತಕಿ, ಕವಯತ್ರಿಯಾಗಿ ತಮ್ಮನ್ನು ಗುರುತಿಸಿಕೊಂಡು ಲಂಕೇಶ್ ಪತ್ರಿಕೆಗೆ ವರದಿಗಾರರಾಗಿಯೂ ಸೇವೆಯನ್ನು ಸಲ್ಲಿಸಿದವರು. ಅನಿರೀಕ್ಷಿತವಾಗಿ ರಾಜಕೀಯಕ್ಷೇತ್ರಕ್ಕೆ ಪ್ರವೇಶಿಸಿದವರೂ ಅಲ್ಲಿಯೂ ತಮ್ಮ ಪ್ರಾಮಾಣಿಕತೆಯಿಂದ ತಮ್ಮ ಛಾಪನ್ನು ಮೂಡಿಸಿದವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆಯಾಗಿಯೂ ದಕ್ಷತೆಯಿಂದ ಕಾರ್ಯನಿರ್ವಹಿಸಿದ್ದಾರೆ. ಬಂಡಾಯ ಚಳುವಳಿಯ ಪ್ರಮುಖ ಬರಹಗಾರ್ತಿಯಾಗಿರುವ ಇವರು ಹಬ್ಬ ಮತ್ತು ಬಲ, ನೆಲೆ ಬೆಲೆ, ಗತಿ, ನಂ ರೂಪ್ಲಿ, ಇದೇಕೂಗು ಮತ್ತೆ ಮತ್ತೆ, ಒಡಲಬೇಗೆ,ಸವಾಸೇರು, ಬಿದಿರಿ ಮೆಳೆ ಕಂಟಿಯಲಿ ಇವರ ಕೃತಿಗಳಾಗಿವೆ.
ಬಿ.ಟಿ.ಲಲಿತಾನಾಯಕ್ ಅವರು ಹುಟ್ಟಿದ್ದು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ತಂಗಲಿ ತಾಂಡ್ಯದಲ್ಲಿ . ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಇವರು ಹೆಚ್ಚು ಕಲಿತವರಲ್ಲ ಎಂಬುದು ಅಚ್ಚರಿಯನ್ನುಂಟುಮಾಡುತ್ತದೆ. ಇವರು ಅನೇಕ ರಾಜಕೀಯ ಪಕ್ಷಗಳಲ್ಲಿ ವಿವಿಧ ಹುದ್ದೆಗಳನ್ನು ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಇಂದಿಗೂ ಅತ್ಯಂತ ಕ್ರಿಯಾಶಿಲರಾಗಿ ವಿವಿಧ ಸಂಘಟನೆಗಳ ಸದಸ್ಯರಾಗಿ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿರುವ ಉತ್ಸಾಹದ ಚಿಲುಮೆಯಾಗಿದ್ದಾರೆ.
ನಂದಿನಿ: ಹಿಂದುಳಿದ ವರ್ಗದಿಂದ ಬಂದ ಶಾಸಕಿಯಾಗಿ, ಅಧಿಕಾರಾವಧಿಯಲ್ಲಿ ನೀವು ಇರಿಸುಮುರಿಸನ್ನು ಎದುರಿಸಿದ್ದಿರಾ?
ಬಿ.ಟಿ.ಎಲ್ – ಹೌದು, ನನ್ನನ್ನು ಬಹಳ ಗೌರವದಿಂದ ಕಾಣುತ್ತಿದ್ದರು. ನನ್ನ ಮೇಲೆ ಯಾವ ಆರೋಪಗಳು ಇರಲಿಲ್ಲ. ನಾನು ಲಂಕೇಶ್ ಪತ್ರಿಕೆಯಲ್ಲಿ ಬರೆಯುತ್ತಿದ್ದ ರೀತಿಯಲ್ಲೇ ನಡೆದುಕೊಳ್ಳಲು ಹೋದಾಗ ನನ್ನ ಮೇಲೆ ಸರ್ಕಾರದಲ್ಲಿದ್ದುಕೊಂಡು,ಸರ್ಕಾದೊಳಗಿನ ವಿಷಯಗಳನ್ನು, ಸತ್ಯಗಳನ್ನು ಪತ್ರಿಕೆಯವರಿಗೆ ತಿಳಿಸುತ್ತಾರೆ. ಸರ್ಕಾರದ ವಿರುದ್ಧ ಕೆಲಸ ಮಾಡುತ್ತಾರೆ ಎಂಬ ಮಾತು ಹುಟ್ಟಿಕೊಂಡಿತು. ಮಹಿಳಾ ಮತ್ತು ಮಕ್ಕಳ ಇಲಾಖೆಯಲ್ಲಿ ಗುತ್ತಿಗೆ ನೀಡುವ ವಿಷಯದಲ್ಲಿ ನಡೆದ ಅಕ್ರಮವನ್ನು ನಾನು ಬಯಲಿಗೆ ತಂದಿದೆ. ನಾನು ಅದನ್ನು ಮುಖ್ಯಮಂತ್ರಿಗಳಿಗು ತಿಳಿಸಿದ್ದೆ. ಗುತ್ತಿಗೆದಾರರ ಮತ್ತು ಮಂತ್ರಿಗಳ ನಡುವೆ ಈ ಕುರಿತು ಹೊಂದಾಣಿಕೆ ಎಷ್ಟೋ ವರ್ಷಗಳಿಂದ ನಡೆದುಕೊಂಡು ಬಂದಿತ್ತು. ಆದರೆ ನಾನು ಆಕ್ರಮವನ್ನು ಮುಖ್ಯಮಂತ್ರಿಗಳ ಗಮನಕ್ಕೂ ತಂದರೂ, ಅವರು ನಿರುತ್ಸಾಹ ತೋರಿದರು. ಆದರೆ ಪತ್ರಿಕೆಯವರಿಗೆ ಈ ಎಲ್ಲಾ ಅಕ್ರಮಗಳನ್ನೆಲ್ಲಾ ತಿಳಿಸಿಬಿಟ್ಪೆ. ಆ ನಂತರ ನನ್ನ ಬಗ್ಗೆ ಮಂತ್ರಿಗಳಲ್ಲಿ ಅಸಮಾಧಾನ ಹುಟ್ಟಿತು. ಇವರನ್ನು ಸರ್ಕಾರದ ಮಂತ್ರಿಮಂಡಳದಲ್ಲಿ ಇರಲು ಬಿಡುವುದರಿಂದ ಸರ್ಕಾರಕ್ಕೆ ಅಪಾಯ ಎಂಬ ಅಭಿಪ್ರಾಯ ನನ್ನ ಬಗ್ಗೆ ಮೂಡಿತು. ಮಕ್ಕಳಿಗೆ ಮಧ್ಯಾಹ್ನದ ಉಪಹಾರ, ಸಮವಸ್ತ್ರ ಯೋಜನೆಗಳೆಲ್ಲಾ 25 ವರ್ಷಗಳ ಹಿಂದೆ ನಾನು ಸಚಿವೆಯಾಗಿದ್ದ ಸಂದರ್ಭದಲ್ಲಿ ಜಾರಿಗೆ ತಂದಿದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿ,ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್ ಸೌಲಭ್ಯ ಬಂದಿದ್ದು ಈ ಸಂದರ್ಭದಲ್ಲಿಯೇ.
party Fund ಕೋಡಬೇಕಾಗಿತ್ತು. ನಾನು ನನ್ನ 6000 ರೂಪಾಯಿಗಳ ಸಂಬಳದಲ್ಲೇ ಕಂತಿನಲ್ಲಿ ಕೋಡುತ್ತೇನೆಂದು ಹೇಳಿದಾಗ, ನಾಯಕರು ಅಧಿಕಾರಿಗಳಿಂದ ವಸೂಲಿ ಮಾಡಿ party Fund ಕೊಡಲು ಹೇಳಿದರು. ಆದರೆ ನನಗೆ ಇದು ಅಧಿಕಾರಿಗಳನ್ನು ಭ್ರಷ್ಟಾಚಾರಿಗಳನ್ನಾಗಿ ನಾವೇ ಎಡೆಮಾಡಿಕೊಟಂತಾಗೀತ್ತದೆ ಎಂದು ವಿರೋಧಿಸಿದೆ.
ಈ ಎಲ್ಲಾ ಕಾರಣಗಳಿಂದ ಒಂದು ವರ್ಷದ ಅವಧಿಯೊಳಗೆ ನನ್ನನ್ನು ಇಳಿಸಲಾಯಿತು.ನನ್ನ ಸ್ಥಾನಕ್ಕೆ ಶಂಕರ್ ನಾಯ್ಕ್ ನಮ್ಮ ಸಮುದಾಯದವರೇ ಆದ ಜಾಲಪ್ಪನವರ ಬೆಂಬಲ ಪಡೆದು ಆಯ್ಕೆಯಾದರು.
ನಂದಿನಿ: ನೀವು ಜಾತ್ಯತೀತ ಜನತಾದಳದ ದೇವೇಗೌಡರ ನಾಯಕತ್ವವನ್ನು ಒಪ್ಪಿಕೊಂಡಂತಹವರು.ಆದರೆ ಜೆಡಿಎಸ್ ಪಕ್ಷ ತೊರೆದು ಹೊರಗೆ ಬರುತ್ತೀರಿ? ಏಕೆ?
ಬಿ.ಟಿ.ಎಲ್ – ನಾನು ಬಿ.ಎಲ್. ಶಂಕರ್,ದತ್ತಾ,ರಮೇಶ್ ಕುಮಾರ್ ಇವರೆಲ್ಲರೂ ಮೂಲತಃ ಜೆಡಿಎಸ್ ನವರು. ಯಾವಾಗ ದೇವೇಗೌಡರು ಬಿಜೆಪಿ ಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಕುಮಾರಸ್ವಾಮಿ ಮುಖ್ಯಮಂತ್ರಿ, ಬಿಜೆಪಿ ಯವರಿಗೆ ಉಪಮುಖ್ಯಮಂತ್ರಿ ಮಾಡುವ ವ್ಯವಸ್ಥೆಗೆ ಒಪ್ಪಿದರೋ,ನಾನು ರಾಜೀನಾಮೆ ಕೊಟ್ಟೆ.ಅಲ್ಲಿಯವರೆಗೂ ನಾನು ಜನತಾದಳದಲ್ಲೇ ಇದ್ದೆ. ಬಿಜೆಪಿ ಯನ್ನು ನಾನು ಯಾವಾಗಲೂ ಕೋಮುವಾದಿ ಎಂದೆ ಕಂಡುಕೊಂಡಿದ್ದೇನೆ. ಅದು ನನಗೆ ಸರಿ ಅನಿಸಲಿಲ್ಲ, ಆದುದರಿಂದ ನಾನು ಹೊರಗೆ ಬಂದೆ.ಮತ್ತೆ ದೇವೆಗೌಡರೂ ಕರೆದರೂ, ಪ್ರಜಾಸತ್ತಾತ್ಮಕ, ಕೋಮುವಾದಿಗಳ ನಡುವೆ ವ್ಯತ್ಯಾಸ ಎನಿಸದೆ ಒಂದಾಗುವುದಾದರೆ ನಾನು ಕೆಲಸ ಮಾಡಲಾರೆ ಎಂದು ತಿಳಿಸಿದೆ.
ನಂದಿನಿ: ಜೆಡಿಎಸ್ ನಿಂದ ಹೊರಗೆ ಬಂದ ನಂತರ ನಿಮ್ಮ ಮುಂದಿನ ರಾಜಕೀಯ ನಡೆ ಏನಾಗಿತ್ತು?
ಬಿ.ಟಿ.ಎಲ್ – ಆನಂತರ ನಾನು ಬಂಗಾರಪ್ಪ ನವರ ಸಮಾಜವಾದಿ ಪಾರ್ಟಿ ಸೇರಿದೆ.ನನಗೆ ಸಮಾಜವಾದಿ ತತ್ವಗಳ ಬಗ್ಗೆ ಗೌರವ ಇತ್ತು. ಬಂಗಾರಪ್ಪನವರು ರಾತ್ರೋರಾತ್ರಿ ಕಾಂಗ್ರೆಸ್ ಸೇರಿದರು.ನಮಗೆ ಗೊತ್ತೆ ಇರಲಿಲ್ಲ. ಹೆಬ್ಬಾಳದಿಂದ ನನಗೆ ಚುನಾವಣೆಗೆ ನಿಲ್ಲಲು ತಿಳಿಸಿದರು.ಆನಂತರ ಅವರು ಆಸ್ಪತ್ರೆಗೆ ಸೇರಿದರು. ಸಿದ್ದರಾಮಯ್ಯ, ಪರಮೇಶ್ವರಯ್ಯ ಎಲ್ಲರೂ ಕಾಂಗ್ರೆಸ್ ಗೆ ಸೇರಿದರು. ಭ್ರಮನಿರಸನ ಆಯಿತು. ಆದರೆ ನನಗೆ ಕಾಂಗ್ರೆಸ್ ಸೇರುವ ಮನಸ್ಸು ಇರಲಿಲ್ಲ.
ನಂದಿನಿ : 2014 ರಲ್ಲಿ ಸಮಾಜವಾದಿ ಪಕ್ಷದಿಂದ ಆಮ್ ಆದ್ಮಿ ಪಕ್ಷಕ್ಕೆ ಬಂದಿದ್ದು,ಅಲ್ಲಿ ಗುಲ್ಬರ್ಗ ಲೋಕಸಭಾ ಕ್ಷೇತ್ರದಿಂದ ಖರ್ಗೆ ಯವರ ಎದುರಾಗಿ ಚುನಾವಣೆ ಎದುರಿಸಿದ ನೀವು ಸೋಲು ಕಂಡಿರಿ.ಆ ಚುನಾವಣೆ ಸೋಲಿಗೆ ಕಾರಣಗಳನ್ನು ಹೇಗೆ ವಿಶ್ಲೇಷಿಸುವಿರಿ?
ಬಿ.ಟಿ.ಎಲ್ -ದೊರೆಸ್ವಾಮಿ ಯವರು ಆ್ಯಪ್ ಪಕ್ಷದಿಂದ ಗುಲಬರ್ಗಾ ಲೋಕಸಭೆಗೆ ನಿಲ್ಲುವಂತೆ ತಿಳಿಸಿದರು. ಭ್ರಷ್ಟಾಚಾರ ಮುಕ್ತ ಆಡಳಿತ, ಚುನಾವಣಾ ವ್ಯವಸ್ಥೆಯ ಪರಿಕಲ್ಪನೆಯನ್ನು ಜನರಲ್ಲಿ ಬಿತ್ತಿ, ಜನರಲ್ಲಿ ಅರಿವು ಮೂಡಿಸಬೇಕೆಂದು ತಿಳಿಸಿದಾಗ ನಾನು ಒಪ್ಪಿಕೊಂಡು ಚುನಾವಣೆಗೆ ನಿಂತೆ. ಚುನಾವಣೆಗೆ ಐದು ಲಕ್ಷ ರೂಪಾಯಿ ಖರ್ಚಾಯಿತಂತೆ. ನನಗೆ ಗೊತ್ತಿಲ್ಲ. ಓಣಿ ಓಣಿ ತಿರುಗಿ ಜನರಲ್ಲಿ ತಿಳಿವಳಿಕೆ ಮೂಡಿಸಿದೆವು ಹತ್ತು ಸಾವಿರ ಓಟುಗಳು ಬಂದವು, ಅಷ್ಟು ಜನರಾದರೂ ನಮ್ಮ ತತ್ವಗಳನ್ನು ಅರ್ಥಮಾಡಿಕೊಂಡರಲ್ಲ ಎಂಬ ತೃಪ್ತಿ ಆಗಿತ್ತು. ಜನರಲ್ಲಿರುವ ಜಾತಿಯತೆ, ಸಂಕುಚಿತತೆಗಳ ಪ್ರತ್ಯಕ್ಷ ಅರಿವು ನನಗಾಯಿತು. ಜನರ ಮನಸ್ಸನ್ನು ಅರ್ಥ ಮಾಡಿಕೊಳ್ಳಲು ಸಹಾಯಕವಾಯಿತು.
ನನ್ನ ಎದುರಾಳಿ ಖರ್ಗೆಯವರಾಗಿರಲಿಲ್ಲ. ನನ್ನ ಎದುರಾಳಿ ರೇವುನಾಯಕ್. ಅವರು ಬಹಳ ವರ್ಷಗಳಿಂದ ಚುನಾವಣಯಲ್ಲಿ ನಿಂತು ಗೆಲ್ಲುತ್ತಿದ್ದರು. ಅವರ ಕಡೆಯವರು ಹಾಗೂ ಸ್ವತಃ ರೇವುನಾಯಕ್, ಅವರೇ ನಾಮಪತ್ರವನ್ನು ವಾಪಸ್ ತೆಗೆದುಕೊಳ್ಳುವಂತೆ ಕೇಳಿಕೊಂಡಿದ್ದರು. ರೇವುನಾಯಕ್ ಧರ್ಮ, ಸೇವಾಲಾಲ್ ಹೆಸರನ್ನು ದುರ್ಬಳಕೆ ಮಾಡಿಕೊಂಡು ಚುನಾವಣೆಯಲ್ಲಿ ಗೆಲ್ಲುತ್ತಾ ಬಂದಿದ್ದವರು. ಯಾರು ರಾಜಕೀಯ ಪ್ರವೇಶಿಸುತ್ತಾರೋ, ಅವರು ಯಾವ ಭೇದವಿಲ್ಲದೆ ಆಸ್ತಿ ಸಂಪಾದಿಸುತ್ತಾರೆ. ರೇವುನಾಯಕ್ ಮೊದಲಾದವರೂ ರಾಜಕೀಯ ಅಧಿಕಾರದಿಂದ ಆಸ್ತಿ ಸಂಪಾದಿಸಿದರೂ ಸಮಾಜದ ಮೇಲ್ವರ್ಗದ ಅಡಿಯಾಳಗಿ ಬದುಕಿದರು. ಇದು ಕೇವಲ ಒಬ್ಬ ರೇವುನಾಯಕ್ ವಿಚಾರವಲ್ಲ, ಆ ಭಾಗದ ಯಾವ ಯಾವ ದಲಿತ, ಶೂದ್ರ ನಾಯಕರು ಇದ್ದಾರೋ ಅವರೆಲ್ಲರೂ ಮೇಲ್ವರ್ಗದ ಜಾತಿ ನಾಯಕರಿಗೆ ಜೀ ಹೂಜೂರ ಎಂದು ದೀನತೆಯಿಂದ ಬದುಕುವವರು. ಇಂತಹ ಜನರ ಮಧ್ಯೆ ಬಂಡಾಯದ ಮಾತನಾಡುವ ನಾನು ಲೇವಡಿಗೊಳಗಾದೆ.ಮುಸ್ಲಿಮರು ಕಾಂಗ್ರೆಸ್ ಗೆ ಬೆಂಬಲ ಕೊಟ್ಟಿದ್ದರು.ಕಾಂಗ್ರೆಸ್ ಪಕ್ಷದ ರಕ್ತ ಮಾಂಸವೇ,ಪಕ್ಷದ ಅಂತರಾಳವೇ ಜಾತ್ಯತೀತತೆ ವಿಶ್ವನಾಥ್,ಶ್ರೀನಿವಾಸ್ ಪ್ರಸಾದ್, ಎಸ್. ಎಮ್. ಕೃಷ್ಣ – ಇವರೆಲ್ಲಾ ಸಿದ್ದಾಂತ ವಿಚಾರಗಳನ್ನು ತೊರೆದು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಬಿಜೆಪಿ ಸೇರಿದರು.
ನಂದಿನಿ: ನೀವು ರಾಜೀನಾಮೆ ಕೊಡಲು ಕಾರಣವಾದ ಘಟನೆ ಆಕಸ್ಮಿಕವೇ
ಅಥವಾ ರಾಜಕೀಯ ಷಡ್ಯಂತ್ರದ ಭಾಗವೇ?
ಬಿ.ಟಿ.ಎಲ್ – ಹೌದು.ಅದು ಪೂರಾ ಪೂರಾ ರಾಜಕೀಯ ಷಡ್ಯಂತ್ರವೇ.ರಾಜಕೀಯವಾಗಿ ಇವರು ಮಂತ್ರಿಮಂಡಳದಲ್ಲಿರುವುದು ಸರಿಯಲ್ಲ ಎಂಬ ಭಾವನೆ ಇತ್ತು. ನಾನು ಸಚಿವೆ ಆದ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯವರು ಸಂಘದ ಚಟುವಟಿಕೆಗೆ ಐದು ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದರು. ನಾನು ರಾಜಕೀಯ ಕಾರ್ಯದರ್ಶಿ ಬಿ.ಎಲ್. ಶಂಕರ್ ಅವರಿಗೆ ತಿಳಿಸಿದೆ.ಅವರು ಹಣ ಕೊಡದಂತೆ, ನನ್ನ ಹೆಸರು ಸೂಚಿಸುವಂತೆ ಹೇಳಿದರು.ಆದರೆ ದಲಿತ ಸಂಘರ್ಷ ಸಮಿತಿಯವರು ಅವರ ಮಾತಿಗೆ ಕಿಮ್ಮತ್ತು ಕೊಡಲಿಲ್ಲ.ಹಣ ಕೊಡಲಿಲ್ಲ ಎಂಬುದನ್ನೇ ಮನಸ್ಸಿನಲ್ಲಿಟ್ಟುಕೊಂಡ ಈ ಸಂದರ್ಭದಲ್ಲಿ ನನ್ನ ವಿರುದ್ಧ ಧಿಕ್ಕಾರ ಕೂಗಿದರು.
ಬಡ ಗರ್ಭಿಣಿ ಸ್ತ್ರೀಯರಿಗೆ ಪೌಷ್ಟಿಕಾಂಶ ಕುರಿತು ಮಾಹಿತಿ ನೀಡುವ ಪುಸ್ತಕವನ್ನು ಪ್ರಕಟಿಸಲಾಗಿತ್ತು.ನಾನು ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗದಂತೆ,ಸಚಿತ್ರವಾದ ಮಾಹಿತಿಪೂರ್ಣ ಕಡಿಮೆ ಬೆಲೆಯ ಪುಸ್ತಕವನ್ನು ಆರಿಸಿದ್ದೆ. ಅಷ್ಟರಲ್ಲಿ ಎಂ.ಪಿ.ಪ್ರಕಾಶ್ ಅವರ ಕಡೆಯಿಂದ ಫೋನ್ ಮಾಡಿಸಿ, ಮತ್ತೊಬ್ಬ ಪ್ರಕಾಶಕರು ತಮ್ಮ ಪುಸ್ತಕವನ್ನು ಆಯ್ಕೆ ಮಾಡುವಂತೆ ಪ್ರಭಾವ ಬೀರಿದರು. ಆದರೆ ನಾನು ಒಪ್ಪಲಿಲ್ಲ. ಇದು ಮಂತ್ರಿಮಂಡಳ ಸಭೆಯಲ್ಲಿ ಮುಖ್ಯಮಂತ್ರಿಗಳ ಗಮನಕ್ಕೂ ಬಂತು. ಎಂ.ಪಿ.ಪ್ರಕಾಶ್ ಈವಿಷಯವನ್ನು ಪ್ರಸ್ತಾಪಿಸಿದಾಗ ನಾನು ಸಮರ್ಥಿಸಿಕೊಂಡಿದ್ದೆ. ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಿದುದ್ದರಿಂದ ಪ್ರಕಾಶ್ ಅವರಿಗೆ ಮುಖಭಂಗವಾಯಿತು. ಅಂದಿನಿಂದ ನನ್ನ ಮೇಲೆ ದ್ವೇಷ ಭಾವನೆಗಳು ಹುಟ್ಟಿ ಕೊಂಡವು.
ನನ್ನ ಮನೆ ಚಿಕ್ಕದು. ಹಾಗೂ ಈ ನಡುವೆ ಜನಜಂಗುಳಿ. ಎಂಬಿಬಿಎಸ್ ಓದುತ್ತಿದ್ದ ಮಗನಿಗೆ ಓದಲು ಅನುಕೂಲ ಇರಲಿಲ್ಲವಾದ್ದರಿಂದ ಡಾ. ಅಂಬೇಡ್ಕರ್ ಹಾಸ್ಟೆಲ್ ನಲ್ಲಿ ಉಳಿದು ಓದಿಕೊಳ್ಳುವಂತೆ ವ್ಯವಸ್ಥೆ ಮಾಡಿದೆ. ಒಂದು ಭಾವನಾತ್ಮಕ ವಿಷಯದಲ್ಲಿ ವಿವಾದವೆಬ್ಬಿಸಿ,ಮಂತ್ರಿಸ್ಥಾನದಿಂದ ತೆಗೆಯಲು ಎಲ್ಲರೂ ಮಾತನಾಡಿಕೊಂಡರಂತೆ. ಅಂಬೇಡ್ಕರ್ ಮೂರ್ತಿಯ ಕನ್ನಡಕವನ್ನು ಕಿತ್ತು ಹಾಕಿ ಅಂಬೇಡ್ಕರ್ ಮೂರ್ತಿಗೆ ಅವಮಾನ ಮಾಡಿದ ಪ್ರಕರಣದಲ್ಲಿ 7-8 ಹುಡುಗರನ್ನು ಒಳಗೊಂಡಂತೆ ಕೇಸ್ ಮಾಡಲಾಗಿತ್ತು. ಅದರಲ್ಲಿ ನನ್ನ ಮಗನ ಹೆಸರು ಅನಾವಶ್ಯಕವಾಗಿತ್ತು. ಪೋಲಿಸ್ ಕಮಿಷನರ್ ನನಗೆ ಫೋನ್ ಮಾಡಿ ಬಂದು ಭೇಟಿಯಾಗಲು ತಿಳಿಸಿದರು. ನನಗೆ ಕಾರ್ಯದೊತ್ತಡದಿಂದ ಹೋಗಲು ಸಾಧ್ಯವಾಗಲಿಲ್ಲ. ನಾನು ನನ್ನ ಪಿ.ಎ ಗೆ ಹೋಗಿ ಪೋಲೀಸ್ ಕಮೀಷನರ್ ಅವರನ್ನು ಭೇಟಿ ಮಾಡಲು ತಿಳಿಸಿದರು. ಮರುದಿನ ಪತ್ರಿಕೆಗಳಲ್ಲಿ ವರದಿ ಬಂತು. ದೊಡ್ಡ ರಂಪಾಟವಾಯಿತು.ದಲಿತ ಸಂಘಟನೆಗಳು ಪ್ರತಿಭಟನೆ ಮಾಡಿದವು.ಗುಲ್ಬರ್ಗಾದಲ್ಲಿ ಖರ್ಗೆಯವರು ಗಲಾಟೆ ಮಾಡಿದರು. ನಂತರ ನಾನು ರಾಜೀನಾಮೆ ನೀಡಲು ನಿರ್ಧರಿಸಿದೆ. ಪ್ರಕರಣ ತನಿಖೆಗಾಗಿ ಭಟ್ ಆಯೋಗವನ್ನು ನೇಮಿಸಲಾಗಿತ್ತು. ಆಯೋಗವು ನನ್ನ ಮಗನನ್ನು ನಿರ್ದೋಷಿಯಾಗಿ ವರದಿ ನೀಡಿತ್ತು. ಕಾಲೇಜಿನಿಂದ ಸಸ್ಪೆಂಡ್ ಆದ ಮಗ ಆಯೋಗದ ವರದಿಯ ಆಧಾರದ ಮೇಲೆ ಮತ್ತೆ ಕಾಲೇಜಿಗೆ ಹೋಗಲು ಶುರು ಮಾಡಿದ. ದೇವೆಗೌಡರು ಪ್ರಧಾನಿಯಾಗಿ ದೆಹಲಿಗೆ ಹೋದರು,ನಂತರ ಜೆ.ಎಚ್. ಪಟೇಲರು ಮುಖ್ಯಮಂತ್ರಿಯಾದರು.ಅವರು ಶಂಕರ್ನಾಯ್ಕ್ ಗೆ ಆಪ್ತರಾಗಿದ್ದರು. ಒಮ್ಮೆ ನಾನು ಕೇಳಿದರು ಜೆ.ಎಚ್. ಪಟೇಲ್ ನನ್ನನ್ನು ಮಂತ್ರಿ ಮಾಡುವ ಮನಸ್ಸು ಮಾಡಲಿಲ್ಲ.
ನಂದಿನಿ: ನೀವು ರಾಜಿನಾಮೆ ಕೊಡುವಾಗ, ಕೊಟ್ಟ ನಂತರ ನಿಮ್ಮ ಕ್ಷೇತ್ರದ ಜನರ ಪ್ರತಿಕ್ರಿಯೆ ಹೇಗಿತ್ತು? ಅವರು ನಿಮ್ಮ ಬೆಂಬಲಕ್ಕೆ ನಿಲ್ಲಲಿಲ್ಲವೆ?
ಬಿ.ಟಿ.ಎಲ್ – ನಾನು ಯಾವ ಗುಂಪು ಕಟ್ಟಿರಲಿಲ್ಲ.ಯಾವುದೇ ಒಂದು ಜಾತಿಗೂ ಹೆಚ್ಚಿನ ಆದ್ಯತೆ ನೀಡದೆ,ಎಲ್ಲರನ್ನೂ ಸಮಾನವಾಗಿ ಕಾಣುತ್ತಿದೆ. ಹೆಂಡ ಸಾರಾಯಿಗಳಿಗೆಲ್ಲಾ ನನ್ನ ಕ್ಷೇತ್ರದಲ್ಲಿ ಅವಕಾಶ ಕೊಟ್ಟಿರಲಿಲ್ಲ. ಜನರಿಗೆ ರಾಜಕೀಯ ಪ್ರಜ್ಞೆ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೆ.ದೇವದಾಸಿ ಪದ್ಧತಿ ನಿಷೇಧಿಸಲು ಹೋರಾಟ ಮಾಡಿದ್ದೆ.ಇವೆಲ್ಲಾ ಜನರಿಗೆ ವಿರೋಧವಾಗಿ ಕಂಡವು. ಮೊದಲಬಾರಿ ಚುನಾವಣೆಗೆ ನಿಂತಾಗ ಯಾವ ಚುನಾವಣಾ ವೆಚ್ಚವಿಲ್ಲದೆ ಆಯ್ಕೆಯಾಗಿದೆ. ಏಕೆಂದರೆ ದೇವೆಗೌಡರು ಲಲಿತಾನಾಯಕ್ ರನ್ನು ಗೆಲ್ಲಿಸಿದರೆ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಮಾಡುವುದಾಗಿ ಮಾತು ಕೊಟ್ಟಿದ್ದರು. ಕೊಟ್ಟಂತೆ ಅದರ ಪ್ರಕಾರ ನಡೆದು ಕೊಂಡರು. ನಾನು ಆ ಯೋಜನೆಗೆ ಬಹಳ ಕಷ್ಟ ಪಟ್ಟಿದೆ.2ನೇ ಬಾರಿ ನಾನು ಚುನಾವಣೆಗೆ ನಿಂತ ಸಂದರ್ಭದಲ್ಲಿ ನನ್ನನ್ನು ಬೆಂಬಲಿಸುವ ಜನರ ಬೆಂಬಲ ಇಲ್ಲವಾಗಿತ್ತು. ಭ್ರಷ್ಟಾಚಾರಕ್ಕೆ ನನ್ನ ಅವಧಿಯಲ್ಲಿ ಕಡಿವಾಣ ಬಿದ್ದಿತ್ತು. ಜನ ಬಡತನದಲ್ಲೆ ಇರುವಂತೆ ಪರಿಸ್ಥಿತಿ ನಿರ್ಮೀಸಿದ್ದರು. ನಾನು ಕೈಗೊಂಡ ಸುಧಾರಣೆಗಳು ಸ್ಥಳೀಯ ನಾಯಕರಿಗೆ ಆಪತ್ಕಾರಕವೆನಿಸಿದವು.
ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಉದ್ಘಾಟನೆ ಮಾಡಿದ ಸಂದರ್ಭದಲ್ಲಿ, ದೇವೆಗೌಡರು 100 ಕೋಟಿಗಿಂತಲೂ ಹೆಚ್ಚಿನ ಹಣ ಬೇಕಾಗಿರುವುದರಿಂದ ಜನಸಾಮಾನ್ಯರು ಸರ್ಕಾರಿ ಬಾಂಡ್ ಗಳನ್ನು ಖರಿದಿಸಿ ಸಹಾಯ ಮಾಡಲು ಜನರಲ್ಲಿ ಮನವಿ ಮಾಡಿದರು..ನಾನು ನನ್ನ ಚಿನ್ನದೊಡೆವೆಗಳನ್ನು ಕೊಟ್ಟೆ.ಅಂದಿನಿಂದ ನಾನು ಮುಂದೆ ಚಿನ್ನದೊಡೆವೆಗಳನ್ನು ಧರಿಸಲಿಲ್ಲ.
ನಂದಿನಿ: ದೇವೆಗೌಡರ ನಾಯಕತ್ವದ ಜಾತ್ಯತೀತ ಜನತಾದಳದವನ್ನು ತೊರೆದು ಜನತಾ ಪಕ್ಷ ಸೆರಿದಿರಿ? ಅಲ್ಲಿನ ಅನುಭವ ಹೇಗಿತ್ತು?
ಬಿ.ಟಿ.ಎಲ್ – ಜನತಾ ಪಕ್ಷವನ್ನು ರಾಮಕೃಷ್ಣ ಹೆಗಡೆಯವರು, ವಿಜಯ್ ಮಲ್ಯ ಅವರ ಬಲದೊಂದಿಗೆ ಸಂಘಟಿಸಿದರು. ಹೆಗೆಡೆಯವರು ಅದಾಗಲೇ ಖಾಯಿಲೆಯಿಂದ ಬಳಲುತ್ತಿದ್ದರು.ಹೆಗಡೆಯವರ ಮಾತಿಗೆ ಒಪ್ಪಿ,ವಿಜಯ್ ಮಲ್ಯ ಅವರ ನೇತೃತ್ವದಲ್ಲಿ ಪಕ್ಷವನ್ನು ನಡೆಸಿಕೊಂಡು ಹೋಗಲು ಸೂಚಿಸಿದರು. ಪಕ್ಷದ ಕೆಲಸಗಳನ್ನು ನೋಡಿಕೊಳ್ಳುತ್ತಾ ಎಂಟು ತಿಂಗಳುಗಳು ಕಳೆಯುಲಷ್ಟರಲ್ಲೇ ರಾಮಕೃಷ್ಣ ಹೆಗಡೆ ತೀರಿಕೊಂಡರು. ತದನಂತರ ಜನತಾ ಪಕ್ಷ, ಜಾತ್ಯತೀತ ಜನತಾದಳದೊಂದಿಗೆ ವಿಲೀನವಾಯಿತು. ವಿಜಯ್ ಮಲ್ಯ ಅವರು ಪಕ್ಷದ ಕಾರ್ಯಕರ್ತರನ್ನ ಮದ್ಯಮಾರಾಟಕ್ಕೆ ಬಳಸಿಕೊಳ್ಳುತ್ತಿರುವುದು ತಿಳಿದು ಆಘಾತವಾಗಿ,ನಾನು ಜನತಾ ಪಕ್ಷದ ಸದಸ್ಯತ್ವವನ್ನು ತೊರೆದು ಹೊರಬಂದಿದೆ.
ನಂದಿನಿ: ಜನತಾದಳ ಒಡೆದು ಇಬ್ಭಾಗವಾಗಲು,ವಿಘಟನೆಗೆ ಕಾರಣವಾದರೂ ಏನು?
ಬಿ.ಟಿ.ಎಲ್ – ನನಗೆ ತಿಳಿದ ಮಟ್ಟಿಗೆ ಅಧಿಕಾರಕ್ಕಾಗಿ ಕಚ್ಚಾಟ.ದೇವೆಗೌಡ,ಎಸ್. ಆರ್.ಬೊಮ್ಮಾಯಿ, ಜೆ.ಎಚ್. ಪಟೇಲ್ ಇವರ ನಡುವೆ ಅಧಿಕಾರಕ್ಕಾಗಿ ಸ್ಪರ್ಧೆ ಏರ್ಪಟ್ಟಿತ್ತು. ಪಟೇಲ್ ಮತ್ತು ಬೊಮ್ಮಾಯಿ ಒಂದಾಗಲಿಲ್ಲ; ಪಟೇಲರು ದೇವೆಗೌಡರತ್ತ ಸರಿದರು; ಹಾಗಾಗಿ ಜನತಾದಳ ಒಡೆಯಿತು.ರಾಮಕೃಷ್ಣ ಹೆಗಡೆ ಮತ್ತು ದೇವೆಗೌಡರ ನಡುವೆ ಜಗಳ ನಡೆದು ಹೆಗೆಡೆಯವರನ್ನು ತಪ್ಪಿಸಿ,ದೇವೆಗೌಡರು ಮುಖ್ಯಮಂತ್ರಿ ಯಾಗಿದ್ದರು. ರಾಮಕೃಷ್ಣ ಹೆಗಡೆ ಅನಾರೋಗ್ಯಕ್ಕೆ ತುತ್ತಾದ ನಂತರ ಬೊಮ್ಮಾಯಿ ಮತ್ತು ದೇವೆಗೌಡರ ನಡುವೆ ಅಧಿಕಾರಕ್ಕಾಗಿ ತೀವ್ರ ಜಟಾಪಟಿ ಪ್ರಾರಂಭವಾಯಿತು.
ನಂದಿನಿ: ನಮ್ಮ ಅಕ್ಕಪಕ್ಕದ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಗಳು ತುಂಬಾ ದುರ್ಬಲವಾಗಿವೆ? ಇದಕ್ಕೆ ಕಾರಣಗಳೇನು?
ಬಿ.ಟಿ.ಎಲ್ – ಪ್ರಾದೇಶಿಕ ಪಕ್ಷ ಒಳ್ಳೆಯದು. ನೆಲ,ಜಲ,ಭಾಷೆ ಎಲ್ಲವನ್ನೂ ಕಾಪಾಡಿಕೊಳ್ಳುವ ಆದ್ಯತೆ,ಪ್ರೀತಿ ಪ್ರಾದೇಶಿಕ ಪಕ್ಷಗಳಿಗಿರುತ್ತದೆ.ಆ ಯೋಗ್ಯತೆ ಉಳಿಯಬೇಕೆಂದರೆ,ಪ್ರಾದೇಶಿಕ ಪಕ್ಷಗಳಿಗೆ ಉದಾರವಾದಿ ಮನಸ್ಥಿತಿ ಇರಬೇಕು. ಕೌಟುಂಬಿಕ ರಾಜಕಾರಣ ಇರಬಾರದು.ಈ ಕೌಟುಂಬಿಕ ರಾಜಕಾರಣ ಇಂದು ದೇಶದ ಎಲ್ಲಾ ಪಕ್ಷಗಳಿಗೂ ಅಂಟಿಕೊಂಡಿದೆ. ಇದು ಪ್ರಾದೇಶಿಕ ಪಕ್ಷಗಳಲ್ಲಿ ತೀರಾ ಹೆಚ್ಚಾಗಿದೆ. ರಾಷ್ಟ್ರೀಯ ಪಕ್ಷಗಳಲ್ಲಿದ್ದರೂ,ಅಷ್ಟಾಗಿ ಗಮನಕ್ಕೆ ಬರಲ್ಲ.ಅಲ್ಲಿ ಯೋಗ್ಯರಾದವರನ್ನ ನಾರಕರನ್ನಾಗಿ ಆರಿಸಲಾಗುತ್ತದೆ.
ನಿಜವಾದ ಜಾತ್ಯಾತೀತರೆಂದರೆ ಹೆಗಡೆ, ಜೀವರಾಜ್ ಆಳ್ವ. ಇಂದು ಜಾತ್ಯತೀತ ಪಕ್ಷವೆಂದರೆ ನಗೂ ಬರುತ್ತದೆ. ಅದಕ್ಕೆ ಏನೂ ಅರ್ಥವಿಲ್ಲ. ಅವು ಜಾತ್ಯತೀತ ಪಕ್ಷವಲ್ಲ; ಜಾತಿಯ ಪಕ್ಷವೇ ಆಗಿವೆ. ಗೌಡಿಕೆ, ಹಣಕ್ಕೆ ಮಾನ್ಯತೆ ಕೊಡುತ್ತಿರುವುದರಿಂದ, ಪ್ರಾದೇಶಿಕ ಪಕ್ಷಗಳು ಎಷ್ಟು ಒಳ್ಳೆಯ ರೀತಿಯಲ್ಲಿ ಕೆಲಸ ಮಾಡಬಹುದಿತ್ತು, ಅದು ಆಗಿಲ್ಲ! ಅದು ಮೂಢನಂಬಿಕೆಯಿಂದ ಕೂಡಿವೆ, ಭ್ರಷ್ಟಾಚಾರದಿಂದ ಕೂಡಿವೆ.