ದ ಪಾಲಿಟಿಕ್

ಪರ್ಯಾಯ ರಾಜಕಾರಣ ಕಟ್ಟುವ ಬಗೆ : ಡಿ ಉಮಾಪತಿ

ದ ಪಾಲಿಟಿಕ್

ದ ಪಾಲಿಟಿಕ್

ಪರ್ಯಾಯ ರಾಜಕಾರಣ. ಹಾಗೆಂದರೇನು? ಮುಖ್ಯಧಾರೆಯ ರಾಜಕಾರಣಕ್ಕಿಂತ ಅದು ಹೇಗೆ ಭಿನ್ನ?
ಉತ್ತಮ ಆಯ್ಕೆ ಸಿಗದೆ ಹೋದಾಗ ಮತದಾರ ಕೆಟ್ಟದ್ದರಲ್ಲಿ ಕಡಿಮೆ ಕೆಟ್ಟದ್ದನ್ನು ಆರಿಸುತ್ತಾನೆ. ಅದು ಡೆಡ್ ಎಂಡ್ ಪಾಲಿಟಿಕ್ಸ್ ಎನ್ನುತ್ತಾರೆ ಯೋಗೇಂದ್ರ ಯಾದವ್.
ಸ್ಪರ್ಧಿಸಿದ ಯಾವ ಅಭ್ಯರ್ಥಿಯೂ ತನ್ನ ಪ್ರತಿನಿಧಿಯಾಗಲು ಯೋಗ್ಯನಲ್ಲ ಎಂದು ಭ್ರಮನಿರಸನ ಹೊಂದಿದ ಮತದಾರರು ತೀರ್ಮಾನಿಸಿದರೆ ಅವರ ಮುಂದಿರುವ ಆಯ್ಕೆ ಏನು?

ಸ್ಪರ್ಧಿಸಿರುವ ಯಾವ ಅಭ್ಯರ್ಥಿಗೂ ನಾನು ಮತ ಹಾಕುವುದಿಲ್ಲ ಎಂಬುದಾಗಿ ಚುನಾವಣಾ ಆಯೋಗ ಮತದಾನ ಯಂತ್ರದಲ್ಲಿ ಒದಗಿಸಿರುವ ‘ನೋಟಾ’ ಗುಂಡಿಯನ್ನು ಒತ್ತುವುದ ಬಿಟ್ಟರೆ ಬೇರೆ ದಾರಿ ಇಲ್ಲ. ಹೀಗೆ ಇಂತಹ ಗುಂಡಿ ಒತ್ತುವ ಮತದಾರರ ಸಂಖ್ಯೆ ಚುನಾವಣೆಯಿಂದ ಚುನಾವಣೆಗೆ ಹೆಚ್ಚಾಗಿದೆಯೇ ವಿನಾ ಬೇರೇನೂ ಲಾಭವಾಗಿಲ್ಲ. ಗೆಲ್ಲಬಾರದೆಂದು ಮತದಾರ ಬಯಸುವ ಹುರಿಯಾಳು ಸೋಲುವುದಿಲ್ಲ. ಸೋಲಬಾರದೆಂದು ಬಯಸುವ ಅಭ್ಯರ್ಥಿ ಗೆಲ್ಲುವುದಿಲ್ಲ. ಅರ್ಥಾತ್ ನೋಟಾ ಆಯ್ಕೆ ಸೋಲು ಗೆಲುವುಗಳನ್ನು ತೀರ್ಮಾನಿಸುವುದಿಲ್ಲ. ಇನ್ನು ಪರ್ಯಾಯ ರಾಜಕಾರಣ ದೂರ ದೂರದಲ್ಲೂ ಗೋಚರಿಸುವುದಿಲ್ಲ. ಸಮಾಜಘಾತಕ ಶಕ್ತಿಗಳು ಚುನಾವಣೆಗೆ ಸ್ಪರ್ಧಿಸಿ ಗೆಲ್ಲುತ್ತವೆ. ಪಕ್ಕಾ ಪಾತಕಿಗಳು ಮುಖ್ಯಧಾರೆಯ ರಾಜಕೀಯ ಪಕ್ಷಗಳಿಂದ  ಪ್ರಜಾಪ್ರತಿನಿಧಿಗಳಾಗಿ ಆರಿಸಿಬಂದು ಶಾಸನಸಭೆಗಳಲ್ಲಿ ಕುಳಿತುಕೊಳ್ಳುತ್ತಾರೆ.

ಎಲ್ಲ ರಾಜಕೀಯ ಪಕ್ಷಗಳು ಭ್ರಷ್ಟಾಚಾರ ನಿರ್ಮೂಲನದ ಮಾತಾಡುತ್ತವೆ. ಆದರೆ ಜನಸಾಮಾನ್ಯರ ಕಷ್ಟದ ದುಡಿಮೆಯನ್ನು ಲೂಟಿ ಹೊಡೆದು ಇಲ್ಲವೇ ಎಲ್ಲ ಪ್ರಜೆಗಳಿಗೂ ಪಾಲಿರಬೇಕಾದ ನೈಸರ್ಗಿಕ ಸಂಪತ್ತನ್ನು ಸೂರೆ ಮಾಡಿ ತಮ್ಮ ಸಾಮ್ರಾಜ್ಯಗಳು- ಮಹಲುಗಳನ್ನು ಕಟ್ಟಿಕೊಂಡವರು ಈ ಪಕ್ಷಗಳ ಬಗಲುಗಳಲ್ಲಿ ಬೆಚ್ಚಗಿರುತ್ತಾರೆ. ಚುನಾವಣೆಗಳಲ್ಲಿ ಹಣಬಲ ತೋಳ್ಬಲಗಳು ಮೆರೆಯುತ್ತವೆ. ಅನೀತಿ ಅಕ್ರಮಗಳ ಕುರಿತು ಪಕ್ಷಗಳು ತಲೆಕೆಡಿಸಿಕೊಳ್ಳುವುದಿಲ್ಲ. ಗೆಲ್ಲುವುದೊಂದೇ ಗುರಿ. ಅಧಿಕಾರ ಹಿಡಿದ ನಂತರ ಚುನಾವಣೆಗೆ ಹಣ ನೀಡಿದವರ ಋಣ ತೀರಿಸಬೇಕಲ್ಲ. ಆಗ ಜನಹಿತ ಕಾಲಕಸವಾದರೂ ಚಿಂತೆಯಿಲ್ಲ ಮುಖ್ಯಧಾರೆಯ ಪಕ್ಷಗಳಿಗೆ. ಹಗಲಿಪ್ಪತ್ತನಾಲ್ಕು ತಾಸು ಎದುರಾಳಿಗಳ ಹಣಿದು ಕುರ್ಚಿಯನ್ನು ಗಟ್ಟಿ ಮಾಡಿಕೊಂಡು ಹಣ ಆಸ್ತಿಪಾಸ್ತಿ ಮಾಡುವುದೇ ಮುಖ್ಯ ದಂಧೆ. ಸ್ವಜನಪಕ್ಷಪಾತ ಕುರಿತು ಅಂಕೆ ಶಂಕೆಯಿಲ್ಲ. ಸುಳ್ಳು ಭರವಸೆಗಳಿಗೆ ಸ್ವಾರ್ಥಕ್ಕೆ ಇತಿಮಿತಿಯಿಲ್ಲ. ಅವಕಾಶವಾದಕ್ಕೆ ಅಂಕುಶವಿಲ್ಲ. ಪಕ್ಷಾಂತರ ನಿಷೇಧ ಕಾಯಿದೆ ತಂದರೂ ರಂಗೋಲಿ ಕೆಳಗೆ ನುಸುಳುವ ಧೂರ್ತತೆ ಮೆರೆದಿದೆ.

ಕಾಯಿದೆಯ ಬಲೆಯಿಂದ ತಪ್ಪಿಸಿಕೊಳ್ಳಲು ಒಂದು ನಿರ್ದಿಷ್ಟ ಪಕ್ಷದ ಶಾಸಕರು ಸಂಸದರಿಂದ ತಮ್ಮ ಸದಸ್ಯತ್ವಗಳಿಗೆ ರಾಜೀನಾಮೆ ಕೊಡಿಸ ಸದನಗಳ ಸರಳಬಹುಮತದ ಸಂಖ್ಯೆಯನ್ನೇ ತಮ್ಮ ಅಗತ್ಯಕ್ಕೆ ತಕ್ಕಂತೆ ಕುಗ್ಗಿಸುವ ಮತ್ತು ರಾಜೀನಾಮೆ ನೀಡಿದ ಸದಸ್ಯರಿಗೆ ತಮ್ಮ ಪಕ್ಷದ ಟಿಕೆಟ್ ನೀಡಿ ಅದೇ ಕ್ಷೇತ್ರದಲ್ಲಿ ಹೂಡಿ ಗೆಲ್ಲಿಸಿ ತರುವ ‘ಆಪರೇಷನ್ ಕಮಲ’ ದಂತಹ ಸೋಜಿಗದ ಜನತಂತ್ರ ವಿರೋಧೀ ಸಂಶೋಧನೆ ನಮ್ಮ ದೇಶದಲ್ಲಿ ಮಾತ್ರವೇ ಸಾಧ್ಯವಿದ್ದೀತು.  ಇಂತಹ ರಾಜಕೀಯ ಪಕ್ಷಗಳ ಮೇಲೆ ಮತದಾರನಿಗೆ ಯಾವ ನಿಯಂತ್ರಣವೂ ಇಲ್ಲ. ಐದು ವರ್ಷಗಳಿಗೊಮ್ಮೆ ಮತ ಹಾಕಿದ ನಂತರ ಅವನ ಬತ್ತಳಿಕೆ ಬರಿದೋ ಬರಿದು. ಮತದಾರ ಮತ್ತು ಜನಪ್ರತಿನಿಧಿಯ ನಡುವೆ ಭಾರೀ ಕಂದಕ ಬಾಯಿ ತೆರೆದಿದೆ.

ರಾಜಕಾರಣ ಕೆಸರು ಕೊಳೆ ಕಳಂಕ ಅಸಹ್ಯ ಹೇಯ ಎಂಬ ಭಾವನೆ ಜನಸಾಮಾನ್ಯರಲ್ಲಿ ನೆಲೆಸಿದ್ದು ಅವರು ಅದರಿಂದ ದೂರ ದೂರ ಉಳಿಯುವಂತಾಗಿದೆ. ಜನಸಾಮಾನ್ಯರು ಹೀಗೆ ದೂರ ಉಳಿಯುವುದನ್ನೇ ಬಯಸುತ್ತದೆ ಪಟ್ಟಭದ್ರ ರಾಜಕಾರಣ. ಹೀಗಾಗಿ ಒಂದು ರೀತಿಯಲ್ಲಿ ಪ್ರಜ್ಞಾಪೂರ್ವಕವಾಗಿ ನೆಲೆಗೊಳಿಸಿಕೊಂಡಿರುವ ಜನದ್ರೋಹಿ ರಾಜಕೀಯ ಪರಿಭಾಷೆಯಿದು.

ಆಳಕ್ಕೆ ಬೇರಿಳಿಸಿರುವ ಈ ಜನದ್ರೋಹಿ ಭಾಷೆಯನ್ನು ಉಲ್ಲಂಘಿಸಿ, ಜನರ ನಡುವಿದ್ದು ಜನಹಿತವನ್ನೇ ಕೇಂದ್ರವಾಗಿ ಇರಿಸಿಕೊಂಡು, ಐತಿಹಾಸಿಕವಾಗಿ ಅಧಿಕಾರ ರಾಜಕಾರಣದಿಂದ ದೂರವಿಟ್ಟು ಅಂಚಿಗೆ ನೂಕಲಾಗಿರುವ ಜನಸಮುದಾಯಗಳನ್ನು ಹತ್ತಿರ ಕರೆದುಕೊಂಡು ಪ್ರಾತಿನಿಧ್ಯ ನೀಡಿ, ಅಸಮಾನತೆ ತುಂಬಿ ತುಳುಕಿರುವ ಜಾತಿ ಆಧಾರಿತ ಸಮಾಜದಲ್ಲಿ ಸಮಾನತೆಯನ್ನು ಸಾಧಿಸುವ ಹಾಗೂ ರಾಜಕಾರಣವನ್ನು ಸಾಮಾಜಿಕ ಬದಲಾವಣೆಯ ಸಾಧನವನ್ನಾಗಿ ಹೂಡಿ, ಮಹಿಳೆಗೆ ಪ್ರಾತಿನಿಧ್ಯ ಒದಗಿಸಿ ಅಲ್ಪಸಂಖ್ಯಾತರು ಅನುಭವಿಸುವ ಪರಕೀಯತೆಯನ್ನು ನಿವಾರಿಸಿ, ಕಟ್ಟಕಡೆಯ ಮನುಷ್ಯನ ಹಿತ ಕಾಯುವ ನೈತಿಕ ರಾಜಕಾರಣ ಮಾಡುವುದಾದರೆ ಅದನ್ನು ಹೆಚ್ಚೂ ಕಡಿಮೆ ಪರ್ಯಾಯ ರಾಜಕಾರಣವೆಂದು ಕರೆಯಲು ಬಂದೀತು. ಅದು ನ್ಯಾಯಪರ ಸಾಮಾಜಿಕ ವ್ಯವಸ್ಥೆಯ ಸೃಷ್ಟಿಯೆಡೆಗಿನ ನಡಿಗೆ. ಬಹುಮುಖಿ ಸ್ವರೂಪದ್ದು.

ಇತ್ತೀಚಿನ ವರ್ಷಗಳಲ್ಲಿ ಪರ್ಯಾಯ ರಾಜಕಾರಣ ಎಂಬ ಪದಗುಚ್ಛ ಕೇಳಿ ಬಂದದ್ದು ದೆಹಲಿಯಲ್ಲಿ. ಭ್ರಷ್ಟಾಚಾರದ ನಿಗ್ರಹಕ್ಕೆ ಲೋಕಪಾಲ ಮಸೂದೆಗಾಗಿ ಆಗ್ರಹಪಡಿಸಿದ ಅರವಿಂದ್ ಕೇಜ್ರೀವಾಲ್- ಅಣ್ಣಾ ಹಜಾರೆ-ಪ್ರಶಾಂತ್ ಭೂಷಣ್- ಪ್ರೊ.ಯೋಗೇಂದ್ರ ಯಾದವ್ ಸಂಗಾತಿಗಳು ಸಿಡಿಸಿದ ಆಂದೋಲನ ಅಪಾರ ಜನಬೆಂಬಲ ಗಳಿಸಿತ್ತು. ಅಲ್ಲಿಯತನಕ ಆಂದೋಲನವಾಗಿದ್ದದ್ದು ಹಠಾತ್ತನೆ ಆಮ್ ಆದ್ಮಿ ಪಾರ್ಟಿಯಾಗಿತ್ತು.

ಹುಟ್ಟಿದಾಗ ಆಮ್ ಆದ್ಮಿ ಪಾರ್ಟಿ ಮುಖ್ಯಧಾರೆಯ ರಾಜಕಾರಣದ ಭಾಷೆಯನ್ನು ಉಲ್ಲಂಘಿಸಿದ ಪ್ರಯೋಗವಾಗಿತ್ತು. 2013 ಮತ್ತು 2015ರಲ್ಲಿ ದೊಡ್ಡ ಸಂಖ್ಯೆಯ ಜನಸಾಮಾನ್ಯರನ್ನು ಮತ್ತು ನಾನಾ ಕ್ಷೇತ್ರಗಳಲ್ಲಿ ದುಡಿಯುತ್ತಿದ್ದ ಹೊಸ ಮುಖಗಳನ್ನು ರಾಜಕಾರಣಕ್ಕೆ ತಂದಿತು. ಸರ್ಕಾರಿ ಶಾಲೆಗಳನ್ನು ಚಮತ್ಕಾರವೆಂಬ ರೀತಿಯಲ್ಲಿ ಸುಧಾರಿಸಿ ರೂಪಾಂತರಿಸಿ ರೆಕ್ಕೆ ಕಟ್ಟಿತು. ಜಡ್ಡು ಜಾಪತ್ತುಗಳಿಗೆ ದೊಡ್ಡಾಸ್ಪತ್ರೆಗಳ ಹುಡುಕಿಕೊಂಡು ಹೋಗುವ ತಾಪತ್ರಯ ತಪ್ಪಿಸಲು ನೆರೆಹೊರೆಯ ಮೊಹಲ್ಲಾ ಕ್ಲಿನಿಕ್ ಗಳನ್ನು ನೂರಾರು ಸಂಖ್ಯೆಯಲ್ಲಿ ತೆರೆಯಿತು. ಬಡಜನರು ಕೆಳಮಧ್ಯಮವರ್ಗಗಳಿಗೆ ಅತ್ಯಂತ ಸುಲಭ ದರಗಳಲ್ಲಿ ನೀರು ಬೆಳಕನ್ನು ಒದಗಿಸಿತು.

ಆದರೆ ವರ್ಷಗಳು ಉರುಳಿದಂತೆ ತಾನು ಆರಂಭದಲ್ಲಿ ಆಡಿದ್ದ ಹೊಸ ರಾಜಕಾರಣದ ಪರಿಭಾಷೆಯನ್ನು ಹೆಚ್ಚು ಕಡಿಮೆ ಮರೆತೇ ಹೋಯಿತು. ಭಿನ್ನಮತವನ್ನು ಉಕ್ಕಿನ ಹಸ್ತಗಳಿಂದ ಹತ್ತಿಕ್ಕಿತು. ಯೋಗೇಂದ್ರ ಯಾದವ್, ಪ್ರಶಾಂತ್ ಭೂಷಣ್ ಮುಂತಾದ ಸಂಗಾತಿಗಳನ್ನು ಹೊರಹಾಕಿತು. ಏಕವ್ಯಕ್ತಿ ಪಕ್ಷವಾಯಿತು. ಎಲ್ಲ ಅಧಿಕಾರಗಳನ್ನು ಕೇಜ್ರೀವಾಲ್ ಕೈಗಿಟ್ಟಿತು. ಅವರ ಸುತ್ತ ವರ್ಚಸ್ಸಿನ ಪ್ರಭಾವಳಿಯ ಕಟ್ಟಿ ಎಲ್ಲರಿಗಿಂತ ಮೇಲೆ ಕುಳ್ಳಿರಿಸಿತು.

ಜಾತಿ ಸಮುದಾಯ ಪ್ರದೇಶವನ್ನು ಆಧರಿಸಿದ ರಾಜಕಾರಣವನ್ನು ಮೀರಿದ ಕಾರಣಕ್ಕಾಗಿ ಆಪ್ ಪ್ರಯೋಗವನ್ನು ಸುಲಭಕ್ಕೆ ತಳ್ಳಿ ಹಾಕಬಾರದೆನ್ನುತ್ತಾರೆ ರಾಜಕೀಯ ವೀಕ್ಷಕ ಸುಹಾಸ್ ಪಲ್ಶೀಕರ್.

ಆಪ್ ಮಾದರಿಯ ಪ್ರಯೋಗಗಳನ್ನು ಮಾತ್ರವೇ ಪರ್ಯಾಯ ರಾಜಕಾರಣ ಎಂದು ಕರೆಯಬೇಕೇ? ನೆಲೆಯೂರಿದ ಪಕ್ಷಗಳ ಸರ್ಕಾರಗಳಾಗಿದ್ದು ಜನಪರ ರಾಜಕಾರಣ ನಡೆಸಿದರೆ ಅದು ಪರ್ಯಾಯ ರಾಜಕಾರಣ ಎನಿಸಿಕೊಳ್ಳಬಾರದೇಕೆ ಎಂಬ ಪ್ರಶ್ನೆಯೂ ಉಂಟು.

ಈ ಸಾಲಿನಲ್ಲಿ ಮೊದಲನೆಯದಾಗಿ ಕಾಣಿಸಿಕೊಳ್ಳುವುದು ಕೇರಳದ ಇ.ಎಂ.ಶಂಕರನ್ ನಂಬೂದರಿಪಾದ್ ಅವರ ಸಿಪಿಐ ಸರ್ಕಾರ. 1957ರ ವಿಧಾನಸಭಾ ಚುನಾವಣೆಗಳಲ್ಲಿ ಆರಿಸಿ ಬಂದಿತ್ತು.  ಎಡ ಮತ್ತು ಪ್ರಗತಿಪರ ಶಕ್ತಿಗಳು ಈ ಗೆಲುವನ್ನುನಂಬೂದರಿಪಾದ್ ಸರ್ಕಾರ ಕೈ ಹಾಕಿದ ಕ್ರಾಂತಿಕಾರಕ ಭೂಸುಧಾರಣೆಗಳು ಮತ್ತು ಶೈಕ್ಷಣಿಕ ಸುಧಾರಣೆಗಳು ಕ್ಯಾಥೊಲಿಕ್ ಚರ್ಚ್, ಮುಸ್ಲಿಂ ಲೀಗ್, ನಾಯರ್ ಸರ್ವೀಸ್ ಸೊಸೈಟಿ ಹಾಗೂ ಕಾಂಗ್ರೆಸ್ಸಿಗರ ಕೆಂಗಣ್ಣಿಗೆ ಗುರಿಯಾದವು. ಕಮ್ಯೂನಿಸ್ಟ್ ವಿರೋಧಿ ಆಂದೋಲನವನ್ನು ಭುಗಿಲೆಬ್ಬಿಸುವಲ್ಲಿ ಅಮೆರಿಕೆಯ ಬೇಹುಗಾರಿಕೆ ಸಂಸ್ಥೆ ಸಿ.ಐ.ಎ. ಪಾತ್ರವಿತ್ತು ಬಹುವಾಗಿ ಸಂಭ್ರಮಿಸಿದವು. ಕಮ್ಯೂನಿಸ್ಟ್ ಸರ್ಕಾರ ರಚನೆಯನ್ನು ತಡೆಯಲು ಕಾಂಗ್ರೆಸ್ ಬಹುವಾಗಿ ಪ್ರಯತ್ನಿಸಿತು. ಜನತಾಂತ್ರಿಕವಾಗಿ ಆಯ್ಕೆಯಾಗಿದ್ದ ಸರ್ಕಾರವೊಂದನ್ನು ಕೇಂದ್ರದಲ್ಲಿನ ನೆಹರೂ ಸರ್ಕಾರ ವಜಾ ಮಾಡಿ ರಾಷ್ಟ್ರಪತಿ ಆಳ್ವಿಕೆ ಹೇರಿತು. ಹೀಗೆ ಭಂಗಗೊಂಡ ಭೂಸುಧಾರಣೆಗಳು ಪೂರ್ಣಪ್ರಮಾಣದಲ್ಲಿ ಜಾರಿಯಾದದ್ದು ನಂಬೂದರಿಪಾದ್ ಸರ್ಕಾರ ಎರಡನೆಯ ಬಾರಿಗೆ 1967ರಲ್ಲಿ ಆರಿಸಿ ಬಂದಾಗಲೇ.

ಪಶ್ಚಿಮ ಬಂಗಾಳವನ್ನು ಸತತ ಏಳು ಅವಧಿಗಳ ಕಾಲ (1977-2011) ಆಳಿದ ವಾಮರಂಗ ಸರ್ಕಾರ ಮೊದಲ ಸಲ ಆರಿಸಿ ಬಂದಾಗ ಅದು ಪರ್ಯಾಯ ರಾಜಕಾರಣವಾಗಿಯೇ ಕಂಡಿತ್ತು. ತ್ರಿಪುರಾದ ಮುಖ್ಯಮಂತ್ರಿಯಾಗಿ ಹತ್ತು ವರ್ಷ ಕಾಲ ಸೇವೆ ಸಲ್ಲಿಸಿದ ನಂತರವೂ ಆರಂಭದಲ್ಲಿ ತಂದಿದ್ದ ಪುಟ್ಟ ಕಬ್ಬಿಣದ ಅದೇ ಟ್ರಂಕನ್ನು ಹಿಡಿದು ಮುಖ್ಯಮಂತ್ರಿ ನಿವಾಸದಿಂದ ಹೊರಬಿದ್ದು ಸೈಕಲ್ ರಿಕ್ಷಾ ಏರಿದ ನೃಪೇನ್ ಚಕ್ರವರ್ತಿಯವರು ಮತ್ತು ನಾಲ್ಕು ಸಲ ಆಯ್ಕೆಯಾದ ಅವರ ಉತ್ತರಾಧಿಕಾರಿ ಮಾಣಿಕ್ ಸರ್ಕಾರ್ ನಡೆಸಿದ್ದೂ ಪರ್ಯಾಯ ರಾಜಕಾರಣವೇ.  ಕಾಂಗ್ರೆಸ್ ವಿರುದ್ಧ ತಮಿಳುನಾಡಿನಲ್ಲಿ ತಲೆಯೆತ್ತಿದ ದ್ರಾವಿಡ ರಾಜಕಾರಣ ಆರಂಭದಲ್ಲಿ ಪರ್ಯಾಯ ರಾಜಕಾರಣವೇ ಆಗಿತ್ತು. ಕರ್ನಾಟಕದಲ್ಲಿ ದೇವರಾಜ ಅರಸರು ತಮ್ಮ ವೈಯಕ್ತಿಕ ನೆಲೆಯಲ್ಲಿ ನಡೆಸಿದ ತಳವರ್ಗಗಳು ಮತ್ತು ಅಶಕ್ತರನ್ನು ಹಿಡಿದೆತ್ತುವ ರಾಜಕಾರಣಕ್ಕೆ ಪರ್ಯಾಯ ರಾಜಕಾರಣವೆಂದೇ ಕರೆಯಬೇಕಾಗುತ್ತದೆ. ತೆಲುಗು ಸ್ವಾಭಿಮಾನವನ್ನು ಅವಮಾನಿಸಿದ ಕಾಂಗ್ರೆಸ್ ವಿರುದ್ಧ ಸಿಡಿದೆದ್ದು ಹುಟ್ಟಿದ ತೆಲುಗುದೇಶಂ ಶುರುವಾತಿನಲ್ಲಿ ಪರ್ಯಾಯ ರಾಜಕಾರಣವಾಗಿಯೇ ತಲೆಯೆತ್ತಿತ್ತು. ಹೀಗೆ ಈ ಪಟ್ಟಿಯನ್ನು ಇನ್ನಷ್ಟು ಬೆಳೆಸಲು ಬಂದೀತು.

ಈಗಾಗಲೆ ಚರ್ಚಿಸಲಾಗಿರುವಂತೆ ತೀವ್ರ ಅಸಮಾನತೆ, ಪಾಳೇಗಾರಿಕೆ, ಹಣಬಲ, ಜಾತಿಪದ್ಧತಿಯ ಮೇಲುಕೀಳುಗಳ  ವಿರೋಧಾಭಾಸಗಳು ವೈರುಧ್ಯಗಳ ಭಾರತೀಯ ಸಮಾಜದ ರಾಜಕಾರಣದಲ್ಲಿ ಪರ್ಯಾಯ ರಾಜಕಾರಣ ಮೊಳಕೆಯೊಡೆದು ಹೆಮ್ಮರವಾಗಿ ಬೆಳೆಯುವುದು ಪವಾಡವೇ ಎನಿಸೀತು. ಪರ್ಯಾಯ ರಾಜಕಾರಣ ಹಠಾತ್ತನೆ ಎದ್ದು ನಿಲ್ಲುವುದು, ಎದ್ದು ನಿಂತು ಬದುಕಿ ಬಾಳುವುದು ಅಸಾಧ್ಯ.  ತುರ್ತುಪರಿಸ್ಥಿತಿಯ ಕರಾಳ ಅಧ್ಯಾಯದ ನಂತರ ಜೇಪಿ ನೇತೃತ್ವದಲ್ಲಿ ಹೊಮ್ಮಿದ ಜನತಾ ಪಕ್ಷದ ಪ್ರಯೋಗ ಅದೆಷ್ಟು ಶೋಚನೀಯವಾಗಿ ಮಣ್ಣುಮುಕ್ಕಿತು ಎಂಬ ಉದಾಹರಣೆ ನಮ್ಮ ಕಣ್ಣ ಮುಂದಿದೆ. 1989ರಲ್ಲಿ ಜನತಾದಳವಾಗಿ ವಿ.ಪಿ.ಸಿಂಗ್ ನೇತೃತ್ವದಲ್ಲಿ ಮತ್ತೊಮ್ಮೆ ತಲೆಯೆತ್ತಿದ ಕೇಂದ್ರ ಸರ್ಕಾರದ ರಾಜಕಾರಣವೂ ಪರ್ಯಾಯವೇ. ಅದು ಕೂಡ ಅನತಿ ಕಾಲದಲ್ಲೇ ಕುಸಿದು ಬಿದ್ದಿತು.

ಏಳುಬೀಳುಗಳಿಲ್ಲದೆ ಪ್ರಯೋಗವು ಪ್ರಯೋಗ ಎಂದು ಹೇಗೆ ಅನಿಸಿಕೊಂಡೀತು? ಆದರೆ ಪರ್ಯಾಯ ರಾಜಕಾರಣದ ಪ್ರಯೋಗಗಳು ಸೋಲುವುದನ್ನೇ ಬಯಸುತ್ತಿರುತ್ತದೆ ಪಟ್ಟಭದ್ರ ರಾಜಕಾರಣ. ಕೆಳಗೆ ಬಿದ್ದ ಕೂಡಲೇ ಆಳಿಗೊಂದು ಕಲ್ಲೆಸೆದು ಸಮಾಧಿ ಮಾಡುತ್ತದೆ. ಇಲ್ಲವೇ ಅಂತಹ ರಾಜಕಾರಣವನ್ನು ದಾರಿ ತಪ್ಪಿಸಿ ತನ್ನ ದಾರಿಗೆ ಜಗ್ಗಿ ಪಳಗಿಸಿಬಿಡುತ್ತದೆ.ಈಗಾಗಲೆ ಪಳಗಿಸಿದ ಆನೆಗಳು ಕಾಡಾನೆಗಳನ್ನು ಖೆಡ್ಡಾಕ್ಕೆ ಕೆಡವಿದಂತೆ. ದಿನಬೆಳಗಾಗುವುದರಲ್ಲಿ ಎದ್ದು ನಿಲ್ಲಬೇಕೆಂದು ಬಯಸುವವರು ಪರ್ಯಾಯ ರಾಜಕಾರಣದ ನಿರೀಕ್ಷೆಯನ್ನು ಇಟ್ಟುಕೊಳ್ಳಬಾರದು. ಅಚ್ಚಿಗೆ ಎರಕ ಹೊಯ್ದು ರೂಪಿಸಿದಷ್ಟು ಪರಿಪೂರ್ಣವಾಗಿರಬೇಕೆಂಬ ನಿರೀಕ್ಷೆಯೂ ಸಲ್ಲದು. ಪರ್ಯಾ ರಾಜಕಾರಣ ದೂರದ ಹಾದಿ ದೀರ್ಘಾವಧಿಯ ಹಾದಿ ಎಂದು ನೋಡಬೇಕಿದೆ

ದೆಹಲಿಯಲ್ಲಿ ಆಮ್ ಆದ್ಮೀ ಪಾರ್ಟಿಯ ಪ್ರಯೋಗವನ್ನೂ ಹೀಗೆ ಪಟ್ಟಭದ್ರ ರಾಜಕಾರಣ ಪಳಗಿಸತೊಡಗಿದೆ. ಆಮ್ ಆದ್ಮಿ ಪಾರ್ಟಿಯ ಆರಂಭದ ಪ್ರತಿರೋಧ ಕೂಡ ತಣ್ಣಗಾಗತೊಡಗಿದೆ. ಈ ಪ್ರಯೋಗ ದೆಹಲಿಯಲ್ಲಿ ಯಶಸ್ಸು ಕಂಡಿತು. ಇತರೆ ರಾಜ್ಯಗಳಲ್ಲಿ ಈ ಯಶಸ್ಸನ್ನು ಪುನರಾವರ್ತಿಸುವುದು ಕಡು ಕಠಿಣ. ಯಾಕೆಂದರೆ ಪಟ್ಟಭದ್ರ ರಾಜಕಾರಣದ ಎಲ್ಲ ಅನಿಷ್ಠಗಳು ಇತರೆ ರಾಜ್ಯಗಳಲ್ಲಿ ಬೇರಿಳಿಸಿ ಬಾನೆತ್ತರಕ್ಕೆ ಬೆಳೆದು ನಿಂತಿವೆ. ದೆಹಲಿ ಒಂದು ನಗರ ರಾಜ್ಯ. ಪೂರ್ಣಪ್ರಮಾಣದ ರಾಜ್ಯ ಕೂಡ ಅಲ್ಲ. ಇತರೆ ರಾಜ್ಯಗಳ ಸಾಮಾಜಿಕ ರಾಜಕೀಯ ಸಂಕೀರ್ಣತೆ ದೆಹಲಿಗೆ ಇಲ್ಲ. ಇಲ್ಲಿನ ಜನಸಂಖ್ಯೆ ಪ್ರಧಾನವಾಗಿ ವಲಸೆ ಬಂದು ನೆಲೆ ನಿಂತದ್ದು. ಚುನಾವಣಾ ರಾಜಕಾರಣದಲ್ಲಿ ಅಬ್ಬರಿಸುವ ಹಂತಕ್ಕೆ ಜಾತಿಯ ಅನಿಷ್ಟ ಬೆಳೆದು ನಿಂತಿಲ್ಲ. ಆಪ್ ಪ್ರಯೋಗದ ಯಶಸ್ಸಿಗೆ ಈ ಅಂಶಗಳು ಬಹುದೊಡ್ಡ ಕೊಡುಗೆ ನೀಡಿವೆ.

ರಾಜಕೀಯ ಪ್ರಕ್ರಿಯೆಯ ಒಳತಿರುಳೇ ಭಿನ್ನಾಭಿಪ್ರಾಯ. ಅದನ್ನು ಹತ್ತಿಕ್ಕಿ ದೇಶದ್ರೋಹವೆಂಬ ಹೊಸ ಹೆಸರನ್ನು ಅದಕ್ಕೆ ನೀಡಲಾಗಿದೆ. ಪ್ತತಿಪಕ್ಷ ರಾಜಕಾರಣ ಕಾಲು ಮುರಿದುಕೊಂಡು ಬಿದ್ದಿದೆ. ಪಕ್ಷರಹಿತ ರಾಜಕೀಯ ಆಂದೋಲನಗಳು ಹೇಳಹೆಸರಿಲ್ಲವಾಗುತ್ತಿವೆ. ಮಂಡಲ್ ಆಯೋಗದ ಜಾರಿಯಿಂದ ಸೃಷ್ಟಿಸಲಾಗಿದ್ದ ಕೆಳಜಾತಿಗಳ ಒಕ್ಕೂಟವನ್ನು ಬಲಪಂಥೀಯ ಶಕ್ತಿಗಳ ಕೈವಶವಾಗಿವೆ. ಅಧಿಕಾರ ವಿಕೇಂದ್ರೀಕರಣದ ಚೈತನ್ಯ ಉಡುಗಿ ಹೋಗಿದೆ. ಜನತಾಂತ್ರಿಕ ಶಕ್ತಿಗಳ ವಿರುದ್ಧ ಆಕ್ರಮಣ ಶುರುವಾಗಿದೆ. ಪ್ರತಿಭಟನೆಯ ದನಿಗಳನ್ನು ಮತ್ತು ಬೌದ್ಧಿಕ ಭಿನ್ನಮತವನ್ನು ಹೊಸಕಿ ಹಾಕಲಾಗುತ್ತಿದೆ ಇಲ್ಲವೇ ಬೆದರಿಕೆ- ಆಮಿಷವೊಡ್ಡಿ ಒಳಹಾಕಿಕೊಳ್ಳಲಾಗುತ್ತಿದೆ. ಹೊಸ ಸಂವಿಧಾನವಿರೋಧಿ ಯಜಮಾನ್ಯಗಳು ಗಹಗಹಿಸಿವೆ. ಸ್ವಾರ್ಥ- ದುರಾಸೆಗೆ ಬಲಿಬಿದ್ದಿರುವ ಮೀಡಿಯಾ ತನ್ನ ಬೆನ್ನುಮೂಳೆಯನ್ನುಆಳುವವರ ಕೈಗಿಟ್ಟು ಜನತಂತ್ರ ವಿರೋಧಿ ಚಹರೆ ಧರಿಸಿದೆ. ನ್ಯಾಯಾಂಗ ಆಳುವವರ ಮರ್ಜಿ ಅನುಸರಿಸುತ್ತಿರುವ ಟೀಕೆ ಎದುರಿಸತೊಡಗಿದೆ.

ಬಿಜೆಪಿಯ ಪ್ರಾಬಲ್ಯದ ಜೊತೆ ಜೊತೆಗೆ ಕಂಡು ಬಂದಿರುವ ಹೊಸ ಅಂಶವೆಂದರೆ ಹಿಂದಿ ರಾಜ್ಯಗಳಲ್ಲಿ ‘ಮೇಲ್ಜಾತಿ’ಗಳ ಪ್ರಾತಿನಿಧ್ಯ ಹೆಚ್ಚಿರುವುದು. ನೀತಿ ಸಂಶೋಧನಾ ಕೇಂದ್ರ (ಸಿ.ಪಿ.ಆರ್) ನಡೆಸಿದ ಅಧ್ಯಯನ ಈ ಅಂಶವನ್ನು ಹೊರ ಹಾಕಿದೆ. ಅದು ಮಂಡಲ್ ವರದಿ ಜಾರಿಯ ಮುನ್ನಾ ದಿನಗಳ ಪ್ರಮಾಣಕ್ಕೆ ಹಿಂತಿರುಗಿದೆ. ಈ ಹಿಂದೆ ಮಂಡಲ್ ಗೆ ವಿರುದ್ಧವಾಗಿ ‘ಕಮಂಡಲ’ವನ್ನು ಹೂಡಿ ಚಿಗುರಿಕೊಂಡು ಬಲಿತ ಬಿಜೆಪಿ ಇದೀಗ ಮಂಡಲ ಮತ್ತು ಮಂದಿರದ ನಡುವೆ ಮೋಸದ ಒಡಂಬಡಿಕೆಯನ್ನು ನಟಿಸಿ ಅದರ ಲಾಭ ಸೂರೆ ಹೊಡೆಯತೊಡಗಿದೆ. ಕಳೆದ ಎರಡು ದಶಕಗಳಲ್ಲಿ ಭಾರತೀಯ ಮತದಾರರ ಜನಸಂಖ್ಯಾ ಸ್ವರೂಪ ಬದಲಾಗತೊಡಗಿದೆ. ಮಧ್ಯಮವರ್ಗದ ಮತದಾರರ ಪ್ರಮಾಣ ಗಣನೀಯವಾಗಿ ಹಿಗ್ಗತೊಡಗಿದೆ. ಮತದಾನ ಮಾಡುವ ಮಹಿಳೆಯರ ಪ್ರಮಾಣದಲ್ಲೂ ಹೆಚ್ಚಳ ಕಂಡಿದೆ. ಈ ಬೆಳವಣಿಗೆಗಳ ಪೂರ್ಣಪ್ರಮಾಣದ ಸಾಧಕ ಬಾಧಕಗಳು ಇನ್ನೂ ನಿಚ್ಚಳವಾಗಿಲ್ಲ. ಆದರೆ ಸಾಮಾಜಿಕ ರಾಜಕೀಯ ರೂಪಾಂತರಗಳು ಭಾರತೀಯ ಸಮಾಜದಲ್ಲಿ ಕಾಣಿಸಿಕೊಳ್ಳುವುದು ನಿಶ್ಚಿತ ಎನ್ನುತ್ತದೆ ಈ ಅಧ್ಯಯನ.

ರಾಜಕೀಯ ವ್ಯವಸ್ಥೆಯಾಗಿ ಮಾತ್ರವೇ ಅಲ್ಲ ಜನತಾಂತ್ರಿಕ ಪರಿಕಲ್ಪನೆಯಾಗಿಯೂ ಜನತಂತ್ರ ಇತ್ತೀಚಗೆ ವಿಫಲವಾಗಿದೆ. ಅದರಲ್ಲೂ ವಿಶೇಷವಾಗಿ ಸಾಮಾಜಿಕ ವ್ಯವಸ್ಥೆಯ ಕೆಳಹಂತಗಳಲ್ಲಿರುವ ಜನರನ್ನು ಮುಟ್ಟುವ ಮೂಲಭೂತ ಕೆಲಸದಲ್ಲಿ ಈ  ವೈಫಲ್ಯ ಕಂಡು ಬಂದಿರುವುದು ಹೆಚ್ಚು ಆತಂಕಕಾರಿ ಎಂದು ರಾಜಕೀಯ ವಿಜ್ಞಾನಿ ಮತ್ತು ಚಿಂತಕ ರಜನಿ ಕೊಠಾರಿ 15-20 ವರ್ಷಗಳ ಹಿಂದೆ ವ್ಯಥೆಪಟ್ಟುಕೊಂಡಿದ್ದರು.

ಹಿಂದೂ ಧರ್ಮವನ್ನು ವಿಕೃತಗೊಳಿಸಿ ಹುಟ್ಟಿ ಹಾಕಲಾಗಿರುವ ಆಕ್ರಮಣಕಾರಿ ಕೋಮುವಾದಿ ಹಿಂದುತ್ವದ ಧೃವೀಕರಣದ ನಂಜಿನ ರಾಜಕಾರಣವು ಪ್ರತಿಸ್ಪರ್ಧಿಗಳನ್ನು ನೆಲಕಚ್ಚಿಸಿದೆ. ಭಯೋತ್ಪಾದನೆಯ ಗುಮ್ಮನನ್ನು ಮುಂದೆ ಮಾಡಿ ಭಯ ಆತಂಕಗಳನ್ನು ಸೃಷ್ಟಿಸಲಾಗಿದೆ. ಭದ್ರತೆ- ಸುರಕ್ಷತೆ- ಸೇನಾಪಡೆಗಳ ಪ್ರಭಾವವನ್ನು ದಟ್ಟವಾಗಿ ಕವಿಸಲಾಗುತ್ತಿದೆ. ಜನಸಾಮಾನ್ಯರ ಬದುಕುಗಳನ್ನೇ ರಾಜಕೀಯಗೊಳಿಸಲಾಗಿರುವ ವಿಕೃತಿಯಿದು. ಬಹುಮುಖೀ ಜನತಾಂತ್ರಿಕ ಉದಾರವಾದಿ ರಾಜಕಾರಣದ ನೆಲೆಯನ್ನು ಅಪಹರಿಸಲಾಗಿದೆ.

2014ರ ಫಲಿತಾಂಶಗಳು ಸಮ್ಮಿಶ್ರ ಸರ್ಕಾರಗಳ ಶಕೆಯ ಅವಸಾನದತ್ತ ಇಶಾರೆ ಮಾಡಿದ್ದವು. 2019ರಲ್ಲಿ ರಜನಿ ಕೊಠಾರಿಯವರು ಹೇಳಿದ್ದ ಏಕಪಕ್ಷ ಪ್ರಾಬಲ್ಯದ ಮುಖ ಬದಲಾಯಿಸಿತ್ತು. ಅದು ಈಗ ಕಾಂಗ್ರೆಸ್ ಬದಲು ಬಿಜೆಪಿಯ ಚಹರೆ ಧರಿಸಿತ್ತು. ಆದರೆ ಈ ಪ್ರಾಬಲ್ಯಗಳ ಒಳರೂಪಗಳು ಭಿನ್ನವಾದವು. ಕಾಂಗ್ರೆಸ್ಸಿನ ಏಕಪಕ್ಷ ಪ್ರಾಬಲ್ಯಕ್ಕೆ ಪಕ್ಷದ ಹೊರಗೆ ಸವಾಲೆಸೆಯುವ ಪ್ರತಿಪಕ್ಷಗಳಿದ್ದವು. ಆದರೆ ಬಿಜೆಪಿ ಪ್ರಾಬಲ್ಯದ ಮುಂದೆ ಪ್ರತಿಪಕ್ಷ ರಾಜಕಾರಣ ಸೋತು ಸೊರಗಿ ನೆಲಕ್ಕೊರಗಿದೆ.

ಅಭಿವೃದ್ಧಿಶೀಲ ಸಮಾಜಗಳ ಅಧ್ಯಯನ ಕೇಂದ್ರ (ಸಿ.ಎಸ್.ಡಿ.ಎಸ್.) ಮತ್ತು ಲೋಕನೀತಿ ನಡೆಸಿದ ಸಮೀಕ್ಷೆಗಳ ಪ್ರಕಾರ ಬಿಜೆಪಿಯೊಂದಿಗೆ ಗುರುತಿಸಿಕೊಳ್ಳುವ ಪಕ್ಷಪಾತಿ ಮತದಾರರ ಪ್ರಮಾಣದಲ್ಲಿ ಭಾರೀ ಹೆಚ್ಚಳ ಕಂಡು ಬಂದಿದೆ. 1970ರಿಂದ ಕಳೆದ ಐದು ದಶಕಗಳಲ್ಲಿ ಹೀಗೆ ಪಕ್ಷವೊಂದರ ಜೊತೆ ಗುರುತಿಸಿಕೊಳ್ಳುವವರ  ಒಟ್ಟು ಪ್ರಮಾಣದಲ್ಲಿ ಬದಲಾವಣೆ ಕಂಡು ಬಂದಿಲ್ಲ. ಅದು ಒಟ್ಟು ಮತದಾರರ ಮೂರನೆಯ ಒಂದರ ಪ್ರಮಾಣದಲ್ಲೇ ಉಳಿದಿದೆ. ಆದರೆ ಈ ಮೂರನೆಯ ಒಂದರಷ್ಟು ಪ್ರಮಾಣದ ಮತದಾರರ ಆದ್ಯತೆಯಲ್ಲಿ ಭಾರೀ ಬದಲಾವಣೆ ಆಗಿದೆ. 1971ರಲ್ಲಿ ಈ ಮತದಾರರ ಪೈಕಿ ಶೇ.70ರಷ್ಟು ಮಂದಿ ಕಾಂಗ್ರೆಸ್ಸನ್ನು ಆಯ್ದುಕೊಂಡಿದ್ದರು. 1996ರ ಹೊತ್ತಿಗೆ ಈ ಆದ್ಯತೆ ಅಥವಾ ಪಕ್ಷಪಾತ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಸಮನಾಗಿ (ತಲಾ ಶೇ.27) ಹಂಚಿಕೆಯಾಗಿಹೋಗಿತ್ತು. 2019ರಲ್ಲಿ ಬಿಜೆಪಿ ಪಕ್ಷಪಾತಿಗಳ ಪ್ರಮಾಣ ಶೇ.41ಕ್ಕೆ ಜಿಗಿಯಿತು. ಕಾಂಗ್ರೆಸ್ ಪಕ್ಷಪಾತಿಗಳ ಪ್ರಮಾಣ ಶೇ.18ಕ್ಕೆ ಕುಸಿದಿತ್ತು. ಈ ಪ್ರಮಾಣಗಳು ಪಕ್ಷಗಳ ತಿರುಳು ಬೆಂಬಲಿಗರದು. ಈ ಪ್ರಮಾಣವನ್ನು ಆಧಾರವಾಗಿಟ್ಟುಕೊಂಡು ಹೊಸ ಬೆಂಬಲ ನೆಲೆಯನ್ನು ವಿಸ್ತರಿಸಿಕೊಳ್ಳಲು ಬರುತ್ತದೆ.

50-60-70ರ ದಶಕಗಳ ಕಾಂಗ್ರೆಸ್ ನ ಏಕಪಕ್ಷ ಪ್ರಾಬಲ್ಯ ಕೇಂದ್ರ ಮತ್ತು ರಾಜ್ಯಗಳೆರಡರಲ್ಲಿಯೂ ಇತ್ತು. ಇಂದಿನ ಬಿಜೆಪಿ ವಿಧಾನಸಭಾ ಚುನಾವಣೆಗಳಲ್ಲಿ ಪ್ರಾದೇಶಿಕ ಪಕ್ಷ ಅಥವಾ ಕಾಂಗ್ರೆಸ್ಸಿಗೆ ಸೋಲತೊಡಗಿದೆ. ಒಂದು ವೇಳೆ ಗೆದ್ದರೂ ಮತದಾನ ಗಳಿಕೆ ಪ್ರಮಾಣ ಕುಸಿದಿದೆ. ಒಡಿಶಾದಲ್ಲಿ 2019ರಲ್ಲಿ ಲೋಕಸಭೆ ಮತ್ತು ವಿಧಾನಸಭೆ ಎರಡಕ್ಕೂ ಏಕಕಾಲದಲ್ಲಿ ನಡೆದ ಚುನಾವಣೆ ಈ ಮಾತಿಗೆ ಒಡೆದು ಕಾಣುವ ನಿದರ್ಶನ. 2019ರ ಲೋಕಸಭಾ ಚುನಾವಣೆಯಲ್ಲಿ ದೆಹಲಿ, ಹರಿಯಾಣ, ಝಾರ್ಖಂಡ್ ನಲ್ಲಿ ಘನ ಗೆಲುವು ಸಾಧಿಸಿತ್ತು ಬಿಜೆಪಿ. ಆದರೆ ಮರುವರ್ಷ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಅದರ ಮತಗಳಿಕೆ ಪ್ರಮಾಣ ಶೇ.18ರಷ್ಟು ಕುಸಿದಿತ್ತು. ಮೋದಿಯವರ ವರ್ಚಸ್ಸನ್ನು ಎತ್ತರದಲ್ಲೇ ಕಾಪಾಡಲು ಪ್ರಾದೇಶಿಕ ನಾಯಕರನ್ನು ಅದುಮಿಟ್ಟಿರುವ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಸ್ಥಳೀಯ ಅಂಶಗಳು ಮುನ್ನೆಲೆಗೆ ಬರುವುದರ ದ್ಯೋತಕವಿದು.

ಪರ್ಯಾಯ ರಾಜಕಾರಣ ರೂಪಿಸುವ ಕ್ಷೀಣ ಪ್ರಯತ್ನಗಳು ಆಗಾಗ ಅಲ್ಲಲ್ಲಿ ಕಂಡು ಬರುತ್ತಲೇ ಇವೆ. ಆದರೆ ಅವು ‘ಮುಖ್ಯಧಾರೆ’ಯನ್ನು ಅಲ್ಲಾಡಿಸುವಷ್ಟುು ಪ್ರಬಲವಾಗಿ ಅರಳಲು ಸಾಧ್ಯವಾಗಿಲ್ಲ

ಚುನಾವಣಾ ವ್ಯೂಹ ರಚನೆಯ ಕಸಬುದಾರ ಪ್ರಶಾಂತ್ ಕಿಶೋರ್ ಸಕ್ರಿಯ ರಾಜಕಾರಣಕ್ಕೂ ಕಾಲಿರಿಸಿ ಸಂಯುಕ್ತ ಜನತಾದಳ ಸೇರಿದ್ದರು. ನಿತೀಶ್ ಕುಮಾರ್ ಜೊತೆ ಭಿನ್ನಾಭಿಪ್ರಾಯದ ನಂತರ ಅಲ್ಲಿಂದ ಹೊರಬಿದ್ದಿರುವ ಅವರು ‘ಬಾತ್ ಬಿಹಾರ್ ಕೀ’ ಎಂಬ ಹೊಸ ರಾಜಕೀಯ ಆಂದೋಲನದ ಸಸಿ ನೆಟ್ಟಿದ್ದಾರೆ. ಪಂಚಾಯಿತಿ ಹಂತದಲ್ಲಿ ಯುವಜನರು ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳ ಕುರಿತು ನೂರು ದಿನಗಳ ಒಳಗಾಗಿ 10 ಲಕ್ಷ ಮಂದಿಯನ್ನು ಕಲೆ ಹಾಕುವುದು ಅವರ ಗುರಿ. ಮುಂಬರುವ ಹತ್ತು ವರ್ಷಗಳಲ್ಲಿ ಹೊಸ ಬಿಹಾರ ನಿರ್ಮಾಣಕ್ಕಾಗಿ ಯುವಜನರಿಗಾಗಿ ವೇದಿಕೆ ಕಲ್ಪಿಸುವುದು ಅವರ ಉದ್ದೇಶ. ಯಾವುದೇ ಪಕ್ಷದ ಜೊತೆ ಸಂಬಂಧ ಇರಿಸಿಕೊಳ್ಳದಿರಲು ಅವರು ತೀರ್ಮಾನಿಸಿದ್ದಾರೆ. ಪ್ರತಿ ಪಂಚಾಯತಿಯಲ್ಲಿ ಸಾವಿರ ಯುವಜನರ ದಳವಿದ್ದರೆ ದೀರ್ಘಾವಧಿಯಲ್ಲಿ ಪರ್ಯಾಯ ರಾಜಕಾರಣದ ಪರಿವರ್ತನಾ ಹರಿಕಾರರಾಗಿ ಅವರು ಕೆಲಸ ಮಾಡಲಿದ್ದಾರೆ ಎಂಬುದು ಅವರ ನಂಬಿಕೆ. ಆದರೆ ಜಾತಿಯಲ್ಲಿ ಮುಳುಗೇಳುವ ರಾಜಕಾರಣದಲ್ಲಿ ಕಿಶೋರ್ ಯಶಸ್ಸು ಕಾಣುವರೆಂದು ನಂಬುವುದು ಕಷ್ಟ.

ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ವಿರುದ್ಧ ದೇಶಾದ್ಯಂತ ನಡೆದ ಪ್ರತಿಭಟನೆಗಳು ಪರ್ಯಾಯ ರಾಜಕಾರಣದ ಮಿಂಚು ಹೊಳೆಯಿಸಿದ್ದು ಹೌದು. ಆದರೆ ಹರಳುಗಟ್ಟುವ ಮುನ್ನವೇ ಅವುಗಳ ಹೆಸರು ಕೆಡಿಸಿ ಕೋಮುವಾದೀ ಬಣ್ಣ ಬಳಿಯುವ ಆಳುವವರ ಹುನ್ನಾರ ಫಲಿಸಿಬಿಟ್ಟಿತು.  ಸಮೂಹ ಮಾಧ್ಯಮಗಳು ಆಳುವವರ ಮುಂದೆ ಮಂಡಿಯೂರಿರುವ ಮತ್ತು ಸಾಮಾಜಿಕ ಅಂತರ್ಜಾಲ ಮಾಧ್ಯಮಗಳನ್ನು ಆಳುವವರು ಕೈವಶ ಮಾಡಿಕೊಂಡು ಮಸೆದು ಹರಿತ ಹತಾರನ್ನಾಗಿ ಬೀಸತೊಡಗಿರುವ ಈ ದಿನಗಳಲ್ಲಿ ಕೋಮುವಾದಿ ಧೃವೀಕರಣದ ಪ್ರಚಾರ ಸಮರ ಬೆಣ್ಣೆಯಿಂದ ಕೂದಲು ತೆಗೆದಷ್ಟು ಸಲೀಸು. ಹೊಸ ಮಾಹಿತಿ ವ್ಯವಸ್ಥೆಯಲ್ಲಿ ಸತ್ಯ ಮತ್ತು ಸಂದೇಹವನ್ನು ಬೇರ್ಪಡಿಸುವ ಆಯತ ಕಳೆದು ಹೋಗಿದೆ. ಹೀಗಾಗಿಯೇ ಸಿಎಎ ವಿರೋಧಿ ಪ್ರತಿಭಟನೆಗಳು ನಮಗೆ ಪ್ರತಿರೋಧದ ಕಾವ್ಯ ನೀಡಲು ಸಾಧ್ಯವಾಯಿತೇ ವಿನಾ, ಪರ್ಯಾಯ ರಾಜಕಾರಣದ ಹಾದಿ ನಿರ್ಮಿಸುವ ಹಾರೆ, ಗುದ್ದಲಿ, ಸನಿಕೆಗಳನ್ನು ನೀಡದೆ ಹೋದವು ಎನ್ನುತ್ತಾರೆ ಚಿಂತಕ ಪ್ರತಾಪ್ ಭಾನು ಮೆಹ್ತಾ. ಪ್ರತಿರೋಧದ ಸತ್ಯದ ವಿರುದ್ಧ ಕೋಮುವಾದಿ ಸಂದೇಹವನ್ನು ಬಡಿದೆಬ್ಬಿಸಿದರೆ ಸಾಕು. ಪ್ರತಿರೋಧವನ್ನು ಬಗ್ಗು ಬಡಿವ ಹತಾರು ತಂತಾನೇ ಕೆಲಸ ಮಾಡತೊಡಗುತ್ತದೆ. ಅದಕ್ಕೆ ತಕ್ಕಂತೆ ವಾತಾವರಣವನ್ನು ಕಾಯಿಸಿ ಬಡಿದು ಬಗ್ಗಿಸಿ ಹದ ಮಾಡುವ ಕೆಲಸ ವರ್ಷಗಳಿಂದ ನಡೆದಿದೆ.

ಇಂತಹ ದುರ್ದಿನಗಳಲ್ಲಿ ಪರ್ಯಾಯ ರಾಜಕಾರಣ ತಲೆಯೆತ್ತುವಂತಾದರೆ ಅದು ಬಹುದೊಡ್ಡ ಚಮತ್ಕಾರವೇ ಸರಿ.

ಲೇಖಕರು – ಡಿ ಉಮಾಪತಿ

ಚಿಂತಕರು, ಹಿರಿಯ ಪತ್ರಕರ್ತರು

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!