ಜಿಲ್ಲೆಯ ಸೆಕ್ಷ್ ಸ್ಕ್ಯಾಂಡಲ್‌ನ ಫೋಟೊಗಳು ಹಾಗೂ ವಿಡಿಯೋಗಳು ರಾಜ್ಯದೆಲ್ಲೆಡೆ ಹರಿದಾಡುತ್ತಿವೆ. ಅವುಗಳನ್ನು ನೋಡಿದವರು ಬೆಚ್ಚಿಬೀಳುತ್ತಿದ್ದಾರೆ. ಆಕ್ರಮವಾಗಿ ನೂರಾರು ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಂಡಿದಲ್ಲದೆ, ಅವುಗಳನ್ನು ತನ್ನ ಮೋಬೈಲ್‌ನಲ್ಲಿ ರೆಕಾರ್ಡ್ ಮಾಡಿಟ್ಟುಕೊಂಡವನನ್ನು ಮತ್ತು ರಾಜಕೀಯ ದುರುದ್ದೇಶದಿಂದಲೋ ಅಥವಾ ಇನ್ಯಾವ ಕಾರಣದಿಂದಲೋ ಅವುಗಳನ್ನು ಸಾಮಾಜಿಕ ಜಾಲತಾಣದ ಮೂಲಕ ಹರಿಬಿಟ್ಟ ವ್ಯಕ್ತಿಯನ್ನು ಸುಮೊಟೋ ಕೇಸ್ ದಾಖಲಿಸಿಕೊಂಡು ಬಂಧಿಸಲು ಸರ್ಕಾರ ಮೀನಮೇಷ ಎಣಿಸುತ್ತಿದೆ ಎಂದು ಜನರು ಮಾತನಾಡುತ್ತಿದ್ದಾರೆ.
ಮೇಲ್ನೋಟಕ್ಕೆ ಲೈಂಗಿಕ ದೌರ್ಜನ್ಯ ಎಸಗಿರುವುದು ಕಂಡುಬರುತ್ತಿದೆ. ಹೀಗಿದ್ದರೂ ಸರ್ಕಾರ ಬಾಯಿ ಮುಚ್ಚಿಕೊಂಡಿದೆ. ಇದೆಲ್ಲಾ ಹೊಂದಾಣಿಕೆ ರಾಜಕೀಯದ ಫಲ. ಆರೋಪಿ ಪ್ರಭಾವಿ ರಾಜಕೀಯ ಕುಟುಂಬಕ್ಕೆ ಸೇರಿದವನಾಗಿರದೇ, ಬೇರೆ ಸಾಮಾನ್ಯ ವ್ಯಕ್ತಿ ಆಗಿದ್ದರೆ ಇದರ ವಾಸನೆ ಬರುವ ಮುಂಚೆಯೇ ಅವನನ್ನು ಬಂಧಿಸುತ್ತಿತ್ತು ಎನ್ನುತ್ತಿದ್ದಾರೆ.
ಮಹಿಳಾ ಆಯೋಗದ ಅಧ್ಯಕ್ಷರು ಇದನ್ನು ಎಸ್‌ಐಟಿ ಮೂಲಕ ತನಿಖೆ ನಡೆಸುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದರು. ಅವರ ಮನವಿಗೆ ಸ್ಪಂದಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಸ್‌ಐಟಿ ತನಿಖೆಗೆ ಇಂದು ಆದೇಶಿಸಿದ್ದಾರೆ. ಇನ್ನೊಂದು ಕಡೆ ʼಹಾಸನ ಜಿಲ್ಲಾ ಜನಪರ ಚಳವಳಿಗಳ ಒಕ್ಕೂಟʼ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಏ. 29 ಕ್ಕೆ ಹಾಸನದ ಮಹಾರಾಜ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದೆ.
ಮುಕ್ತ ಮತ್ತು ನ್ಯಾಯಸಮ್ಮತ ತನಿಖೆ ನಡೆದರೆ ಆರೋಪಿಗಳು ಎಷ್ಟೇ ಪ್ರಭಾವಿಗಳಿದ್ದರು ಇದರಿಂದ ತಪ್ಪಿಸಿಕೊಳ್ಳುವುದು ಕಷ್ಟ. ತನಿಖೆ ನಿಷ್ಪಕ್ಷವಾಗಿ ನಡೆಯತ್ತದೆಯೇ ಎಂಬುವುದೇ ಯಕ್ಷ ಪ್ರಶ್ನೆಯಾಗಿದೆ. ಎಸ್‌ಐಟಿ ತನಿಖೆ ಇರುವುದೇ ಪ್ರರಣಗಳನ್ನು ಮುಚ್ಚಿಹಾಕಲು ಎಂಬ ಮಾತು ಜನಜನಿತವಾಗಿದೆ. ಕೆ. ಎಸ್. ಈಶ್ವರಪ್ಪ ಅವರ ಲಂಚಗುಳಿತನದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದ ಸಂತೋಷ ಎಂಬ ಗುತ್ತಿಗೆದಾರನ ಪ್ರಕರಣದ ಉದಾಹರಣೆ ಜನರ ಈ ಮಾತಿಗೆ ಪುಷ್ಠಿ ನೀಡುವಂತಿವೆ. ಇಂತಹ ಸಾಕಷ್ಟು ನಿದರ್ಶನಗಳು ಎಸ್‌ಐಟಿಯ ಇತಿಹಾಸದ ಪುಟದಲ್ಲಿ ಸೀಗುತ್ತವೆ.