ದ ಪಾಲಿಟಿಕ್

ಹೊಸ ನಾಯಕತ್ವ ಬೆಳೆಸಲು ಶೆಟ್ಟರ್‌ಗೆ ಟಿಕೆಟ್ ನಿರಾಕರಿಸಲಾಗಿದೆಯೇ?

ಸಿದ್ದಪ್ಪ ಮೂಲಗೆ

ಸಿದ್ದಪ್ಪ ಮೂಲಗೆ

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ತನ್ನ ರಾಜಕೀಯ ಬದುಕು ಆರಂಭಿಸಿದ್ದೇ ಬಿಜೆಪಿಯಿಂದ. ಅವರೆಂದೂ ಸಂಘದ ಅಥವಾ ಬಿಜೆಪಿ ವಿರುದ್ಧ ಏರು ಧ್ವನಿಯಲ್ಲಿ ಮಾತನಾಡಿದವರಲ್ಲ. ನಿಷ್ಠೆಗೆ ಹೆಸರಾದವರು. ಆದರಿಂದು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಹಾಗೂ ತನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಪಕ್ಷದೊಂದಿಗಿನ ತನ್ನ ಕಳ್ಳು ಬಳ್ಳಿ ಸಂಬಂಧವನ್ನು ಕಡಿದುಕೊಂಡಿದ್ದಾರೆ. ಬಿಜೆಪಿಗೆ ಅವರ ಈ ಅನಿರೀಕ್ಷಿತ ನಡೆ ಆಘಾತ ತಂದದ್ದು ಸುಳ್ಳಲ್ಲ. 

ನಿನ್ನೇ ಪಕ್ಷದ ರಾಜ್ಯ ಉಸ್ತುವಾರಿ ಧರ್ಮೇಂದ್ರ ಪ್ರಧಾನ್, ಜೋಶಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಸಂಧಾನಕ್ಕೆ ಮುಂದಾಗಿ ಅವರೆದುರು ಎರಡು ಬಿಗ್ ಆಫರ್ ಇಟ್ಟಿತ್ತು. ಒಂದು, ತಾವು ಸೂಚಿಸಿದ ವ್ಯಕ್ತಿಗೆ ಅಥವಾ ತಮ್ಮ ಕುಟುಂಬದವರೊಬ್ಬರಿಗೆ ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದಿಂದ ಟಿಕೆಟ್ ನೀಡುತ್ತೇವೆ. ಇನ್ನೊಂದು, ತಮಗೆ ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿ ಕ್ಷೇತ್ರದಿಂದ ಟಿಕೆಟ್ ನೀಡುತ್ತೇವೆ. ಆದರವರು ಎರಡೂ ಆಫರ್ ಗಳನ್ನು ನಯವಾಗಿಯೇ ತಿರಸ್ಕರಿಸಿ ಇಂದು ಪಕ್ಷದಿಂದಲೇ ಕಾಲ್ಕಿತ್ತಿದ್ದಾರೆ. 

ಈಗವರು ನನಗೆ ಪಕ್ಷ ಟಿಕೆಟ್ ನಿರಾಕರಿಸಿದ್ದೇಕೆಂದು ಪಕ್ಷದ ರಾಜ್ಯ ನಾಯಕರಿಗೆ ಹಾಗೂ ವರಿಷ್ಠರಿಗೆ ಕೇಳುತ್ತಿದ್ದಾರೆ. ಈಗ ಅನಿವಾರ್ಯವಾಗಿ ಮುಖ್ಯಮಂತ್ರಿ ಬೊಮ್ಮಾಯಿ ಅವರೇ ಸ್ವತಃ ಫೀಲ್ಡ್ ಗಿಳಿದು ‘ಹೊಸ ಪೀಳಿಗೆಗೆ ಅವಕಾಶ ನೀಡಬೇಕು, ಪಕ್ಷದಲ್ಲಿ ಹೊಸ ನಾಯಕತ್ವ ಬೆಳೆಸಬೇಕು ಎಂಬುದು ಪಕ್ಷದ ತೀರ್ಮಾನ. ಅದೇ ಸರಣಿಯಲ್ಲಿ ಶೆಟ್ಟರ್ ಅವರಿಗೆ ಪಕ್ಷ ಟಿಕೆಟ್ ನೀಡಿಲ್ಲ. ಯಾರನ್ನೂ ವೈಯಕ್ತಿಯವಾಗಿ ಗುರಿಯಾಗಿಸಿ ಈ ತೀರ್ಮಾನ ತೆಗೆದುಕೊಂಡಿಲ್ಲ” ಎಂದು ಸಮಜಾಯಿಷಿ ನೀಡುತ್ತಿದ್ದಾರೆ. ಆದರವರ ಈ ಸಮಜಾಯಿಷಿ ಸ್ವತಃ ಬೊಮ್ಮಾಯಿಗೆ ಸಮಾಧಾನ ತಂದಿರಲಿಕ್ಕಿಲ್ಲ.  

ಹೊಸ ಪೀಳಿಗೆಯ ನಾಯಕತ್ವ ಬೆಳೆಸಲು ಲಿಂಗಾಯತ ಸಮುದಾಯದ ಜಗದೀಶ್ ಶೆಟ್ಟರ್ ಅವರನ್ನೇ ಏಕೆ ಬಲಿ ನೀಡಲಾಗುತ್ತಿದೆ? ವಯಸ್ಸಂತು ಕಾರಣವಾಗಿರಲಕ್ಕಿಲ್ಲ! ಏಕೆಂದರೆ, ಈಗಿನ್ನೂ ಅವರು 67 ವಯಸ್ಸಿನ ಹರೆಯ. ಇದೇ ವಯಸ್ಸಿನ ಬ್ರಾಹ್ಮಣ ಸಮುದಾಯದ ಸುರೇಶ್ ಕುಮಾರ್ ಅವರಿಗೆ ಟಿಕೆಟ್ ನೀಡಿದ್ದಾರೆ. ಅದೇರೀತಿ 72 ವಯಸ್ಸಿನ ವಿ.ಸೋಮಣ್ಣನವರಿಗೂ ಒಂದಲ್ಲಾ ಎರಡೆರಡು ಕಡೆ ಟಿಕೆಟ್ ನೀಡಿದ್ದಾರೆ. ಶೆಟ್ಟರ್ ಅವರೇನು ಸಿಡಿ ಕೇಸಿನ ಗಿರಾಕಿಯೂ ಅಲ್ಲ, ಕೈ-ಬಾಯಿ ಅಷ್ಟೇನೂ ರಾಢಿ ಮಾಡಿಕೊಂಡವರೂ ಅಲ್ಲ, ಹಾಗೆಯೇ ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದಲ್ಲಿ ಸೋಲುವ ಆಸಾಮಿಯೂ ಅಲ್ಲ. ಆದಾಗ್ಯೂ ಅದರಿಗೆ ಟಿಕೆಟ್ ನಿರಾಕರಿಸಲಾಗಿದೆ.

ಟಿಕೆಟ್ ನಿರಾಕರಣೆಗೆ ಅಸಲಿ ಕಾರಣವೇನು?

ಶೆಟ್ಟರ್ ಆಕಸ್ಮಿಕವಾಗಿ ಲಕ್ಕಿ ಸಿಎಂ ಆಗಲು, ಆರಾರು ಸರ ಗೆಲ್ಲಲು, ಅನಾಯಾಸವಾಗಿ ಪಕ್ಷದಲ್ಲಿ ಬಲಾಢ್ಯವಾಗಿ ಬೆಳೆಯಲು ಕಾರಣ ಅವರು ಲಿಂಗಾಯತ ಸಮುದಾಯದವರೆಂಬುದು. ತಾನು ಲಿಂಗಾಯತ ಸಮುದಾಯದನೆಂಬುದೇ ಅವರ ಶಕ್ತಿ. ಆದರೀಗ ಅವರಿಗೆ ಅದೇ ಉರುಳಾಗಿದೆ. ಈ ಸಲ ಸಂಘ ಪರಿವಾರ ಶತಾಯ ಗತಾಯ ಬ್ರಾಹ್ಮಣ ಸಮುದಾಯದ ಪ್ರಲ್ಹಾದ ಜೋಶಿ, ಇಲ್ಲವೇ ಬಿ.ಎಲ್. ಸಂತೋಷಗೆ ಸಿಎಂ ಕುರ್ಚಿಯಲ್ಲಿ ಪ್ರತಿಷ್ಠಾಪಿಸಲು ಆಲೋಚಿಸಿದಂತಿದೆ. ಈ ಆಲೊಚೆನೆ ಕಾರ್ಯರೂಪಕ್ಕೆ ತರಲು ಅಡಗಲ್ಲಾಗಿದ್ದೆ ಲಿಂಗಾಯತ ಸಮುದಾಯದ ಹಾಗೂ ಅದರ ರಾಜಕಾರಣಿಗಳು. ಅದಕ್ಕಾಗಿಯೇ ಈ ಸಲ ಸಿಎಂ ರೇಸ್ ನಲ್ಲಿರುವ ಲಿಂಗಾಯತ ಸಮುದಾಯದ ವ್ಯಕ್ತಿಗಳನ್ನ ಗುರಿಯಾಗಿಸಿಕೊಂಡು ಅವರಿಗೆ ಟಿಕೆಟ್ ನಿರಾಕರಿಸಿಯೋ ಅಥವಾ ಪಕ್ಷದಿಂದ ನಿರ್ಲಕ್ಷಿಸಿಯೋ ಒಟ್ಟಿನಲ್ಲಿ ಅವರಾಗವರೇ ಪಕ್ಷ ತೊರೆಯುವಂತೆ ಮಾಡಲಾಗುತ್ತಿದೆ. ಈಗಾಗಲೇ ಲಕ್ಷ್ಮಣ ಸವದಿ ಕಾಲ್ಕಿತ್ತಾಗಿದೆ. ಈಗ ಶೆಟ್ಟರ್ ಸರದಿ. ಈಗ  ಪಕ್ಷದಲ್ಲಿ ಸಿಎಂ ರೇಸ್ ನಲ್ಲಿರುವರು ಬೊಮ್ಮಾಯಿ ಒಬ್ಬರೇ.  ಅಸಮರ್ಥ ಮುಖ್ಯಮಂತ್ರಿ ಎಂದು ಅವರು ಈಗಾಗಲೇ ಬಿಂಬಿತವಾಗಿದ್ದಾರೆ. ಅವರೀಗ ಮತ್ತೆ ಮುಖ್ಯಮಂತ್ರಿ ಕುರ್ಚಿ ಮೇಲೆ ಟವಲ್ ಹಾಕುವ ದುಸ್ಸಾಹಸಕ್ಕೆ ಕೈ ಹಾಕುವುದಿಲ್ಲವೆಂದು ವರಿಷ್ಠರಿಗೆ ಗೊತ್ತಿದೆ. 

ಶೆಟ್ಟರ್ ಬಿಜೆಪಿ ತೊರೆದು ಅವರು ಪ್ರತಿನಿಧಿಸುತ್ತಿದ್ದ ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದಿಂದಲೇ ಕಾಂಗ್ರೆಸ್ ಪಕ್ಷದಿಂದಲೋ ಅಥವಾ ಜೆಡಿಎಸ್ ಪಕ್ಷದಿಂದಲೋ ಮತ್ತೇ ಕಣಕ್ಕೆ ಇಳಿದರೆ ಅದು ಹೈವೋಲ್ಟೇಜ್ ಕ್ಷೇತ್ರವಾಗಿ ರೂಪಾಂತರಗೊಳ್ಳುವುದು ಶತಸಿದ್ಧ. ರಾಜ್ಯದಲ್ಲಿ ಕರಾವಳಿ ಭಾಗ ಬಿಟ್ಟರೆ ಸಂಘ ಪರಿವಾರ ಗಟ್ಟಿಯಾಗಿ ಬೇರು ಬಿಟ್ಟಿದ್ದು ಹುಬ್ಬಳ್ಳಿಯಲ್ಲಿಯೆ ಎನ್ನುವುದು ಸುಳ್ಳಲ್ಲ. ಆದಾಗ್ಯೂ ಶೆಟ್ಟರ್ ಸ್ಪರ್ಧೆಯಿಂದ ಅನಾಯಾಸವಾಗಿ ಸ್ವತಃ ಅವರಾಗಲಿ ಅಥವಾ ಬಿಜೆಪಿಯಾಗಲಿ ಗೆಲ್ಲಲಾಗದು. ಮತೀಯ ಧ್ರುವೀಕರಣದಿಂದ ಮತ್ತೇ ಆ ಕ್ಷೇತ್ರ ಬಿಜೆಪಿ ಉಳಿಸಿಕೊಂಡರು ಉಳಿಸಿಕೊಳ್ಳಬಹುದು. ಈಗಾಗಲೇ ಲಿಂಗಾಯತರು ಅನುಮಾನದ ದೃಷ್ಟಿಯಿಂದ ಬಿಜೆಪಿ ಕಡೆ ನೋಡಲು ಆರಂಭಿಸಿದ್ದಾರೆ. ಈ ಬೆಳವಣಿಗೆ ಲಿಂಗಾಯತರಿಗೆ ಬೇರೆಯದೇ ಮೆಸೇಜ್ ಹೋಗಿ, ಅವರು ಬಿಜೆಪಿಗೆ ಬೆನ್ನು ತಿರುಗಿಸಬಹುದು ಎಂಬ ಆತಂಕವೂ ಸಂಘಕ್ಕಿರುವುದೂ ಸುಳ್ಳಲ್ಲ. ಈಗಲ್ಲದಿದ್ದರೂ ಮುಂದೆಯಾದರೂ ಶೆಟ್ಟರ್ ಅವರ ನಡೆ ಬಿಜೆಪಿಗೆ ದೊಡ್ಡ ಪೆಟ್ಟು ನೀಡುವ ಸಾಧ್ಯತೆ ಇದೆ. 

ಶೆಟ್ಟರ್ ಈಗವರು ಯಾವ ಪಕ್ಷಕ್ಕೋ ಹಾರುತ್ತಾರೆ, ಮತ್ತವರನ್ನು ಆ ಪಕ್ಷ ಹೇಗೆ ಬಳಸಿಕೊಳ್ಳುತ್ತದೆ ಎಂಬುವುದರ ಮೇಲೆ ಎಲ್ಲವೂ ನಿರ್ಧಾರವಾಗುತ್ತದೆ. ಈಗಾಗಲೇ ಅವರ ಬೀಗರಾದ ದಾವಣಗೆರೆಯ ಶಾಮನೂರು ಶಿವಶಂಕರಪ್ಪ ಮೂಲಕ ಕಾಂಗ್ರೆಸ್ ಪಕ್ಷವು ಅವರನ್ನು ಸೆಳೆಯಲು ಯತ್ನಿಸುತ್ತಿದೆ.

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!