ಸಾಮಾನ್ಯವಾಗಿ ಗೋ ಹತ್ಯೆ ಪ್ರತಿಬಂಧಕ ಕಾನೂನೆಂದ ಕೂಡಲೇ ನಮ್ಮ ಜನತೆ ಅದನ್ನು ಕೇವಲ ಮುಸ್ಲಿಂ ವಿರೋಧಿ ಕಾನೂನೆಂದೇ ನಂಬಿ ಬಿಡುತ್ತಾರೆ. ಗೋ ರಾಜಕೀಯ ಮಾಡುವ ಬಿಜೆಪಿಗೆ ಬೇಕಾಗಿರುವುದೂ ಅದೇ ಆಗಿದೆ. ನೀವು ಎಷ್ಟೇ ಪ್ರತಿಬಂಧಕಾಜ್ಞೆಗಳನ್ನು ಹೇರಿದರೂ ದನದ ಮಾಂಸ ತಿನ್ನಲೇಬೇಕೆನ್ನುವವರು ಹೇಗಾದರೂ ಮಾಡಿ ತಿನ್ನುತ್ತಾರೆ ಬಿಡಿ. ಉದಾಹರಣೆಗೆ ನಮ್ಮ ರಾಜ್ಯದಲ್ಲಿ ಸಾರಾಯಿಗೆ ನಿಷೇಧವಿದೆ. ನಿಷೇಧವಿದೆಯೆಂದ ಮಾತ್ರಕ್ಕೆ ತಯಾರಿಸುವವರು ಸಂಪೂರ್ಣವಾಗಿ ತಯಾರಿಕೆ ನಿಲ್ಲಿಸಿದ್ದಾರೆಯೇ…? ಬಹಿರಂಗವಾಗಿ ಮಾರಾಟ ಮಾತ್ರ ಇಲ್ಲವೇ ಹೊರತು,ಬೇಕಾದವರು ಸೇವಿಸುವುದೇ ಇಲ್ಲ ಎನ್ನಲಾಗದು. ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕೆಲವರು ಈಗಲೂ ತಮ್ಮ ಉಪಯೋಗಕ್ಕೆ ಬೇಕಾಗುವಷ್ಟು ಸಾರಾಯಿಯನ್ನು ಈಗಲೂ ತಯಾರಿಸುತ್ತಾರೆ. ಅದು ಅಬಕಾರಿ ಇಲಾಖೆಗೆ, ಸರಕಾರಕ್ಕೆ ಗೊತ್ತಿಲ್ಲವೆಂದಲ್ಲ.. ಗೊತ್ತಿದ್ದ ಮಾತ್ರಕ್ಕೆ ಅದನ್ನು ಸಂಪೂರ್ಣವಾಗಿ ಇಲ್ಲವಾಗಿಸಲು ಸಾಧ್ಯವಿಲ್ಲ. ನಮ್ಮ ದೇಶದ ಕತೆ ಬಿಡಿ. ಕಟ್ಟರ್ ಪಂಥೀಯ ಇಸ್ಲಾಮಿಕ್ ರಾಷ್ಟ್ರದಲ್ಲಿ ಸಾರಾಯಿ ತಯಾರಿಸಿದರೆ ಕಠಿಣ ಶಿಕ್ಷೆಯಿದೆ. ಅದಾಗ್ಯೂ ಅಲ್ಲಿ ಸಾರಾಯಿ ತೀರಾ ಸಿಗುವುದಿಲ್ಲವೆಂದೇನಿಲ್ಲ.
ನೆನಪಿಟ್ಟುಕೊಳ್ಳಿ, ಪ್ರಸ್ತುತ ರಾಜ್ಯ ಸರಕಾರ ಜಾರಿಗೆ ತರಲು ಹವಣಿಸುತ್ತಿರುವ ಗೋ ಹತ್ಯಾ ಪ್ರತಿಬಂಧಕ ಕಾನೂನು ತಿನ್ನುವವರ ವಿರುದ್ಧ ಅಲ್ಲವೇ ಅಲ್ಲ… ಬದಲಾಗಿ ಅದು ಮಾರುವವರ ವಿರುದ್ಧ. ಜಾನುವಾರುಗಳನ್ನು ಮಾರುವವರು ಯಾರು…? ಯಾರು ಸಾಕುತ್ತಾರೋ, ಅವರು ಮಾರಲೇಬೇಕು. ಸಾಕುವವರು ಮತ್ತು ಮಾರುವವರಲ್ಲಿ ಹೆಚ್ಚಿನವರು ರೈತರು. ನೀವು ಕೇಳಬಹುದು ಮಾರುವವರಿಗೆ ಕಡಿವಾಣ ಹಾಕಿದರೆ ತಿನ್ನುವವರಿಗೆ ಎಲ್ಲಿಂದ ಸಿಗುತ್ತೆ…? ಬಿಜೆಪಿ ಮತ್ತು ಸಂಘ ಪರಿವಾರಕ್ಕೆ ಬೇಕಾಗಿರುವುದೇ ಅದು.. ಗೋ ಶಾಲೆಗಳನ್ನು ನಡೆಸುವವರೆಲ್ಲರೂ ಸಂಘಪರಿವಾರದ ಅತ್ಯಂತ ಸುಪೀರಿಯರ್ ಕ್ಲಾಸಿನ ಜನರು. ಗೋ ರಕ್ಷಕರು ಯಾರು? ನೂರಕ್ಕೆ ನೂರು ದಲಿತ-ಶೂದ್ರ ವರ್ಗದವರು. ಇವರಿಗೆ ಧರ್ಮರಕ್ಷಣೆಯ ಪುಣ್ಯ ಮತ್ತು ಒಂದಷ್ಟು ಕಾಸು ಸಿಗುತ್ತೆ.ಅದರ ಭರಪೂರ ಲಾಭ ಪಡೆಯುವವರು ಗೋ ಶಾಲೆ ನಡೆಸುವ ಸುಪೀರಿಯರ್ ಕ್ಲಾಸ್ ಮಂದಿಗಳು. ಇವರು ಹೊಡೆದು ಬಡಿದು ಗಲಾಟೆ ಮಾಡಿ, ಸ್ವಯಂ ಪೆಟ್ಟು ತಿಂದು ಅಪಾಯವನ್ನು ಮೈ ಮೇಲೆಳೆದು ಹಿಡಿದು ತಂದ ಜಾನುವಾರುಗಳನ್ನು ಗೋ ಶಾಲೆಗೆ ಒಪ್ಪಿಸುತ್ತಾರೆ.
ಗೋ ಶಾಲೆಯವರು ತಮ್ಮ ಗೋಶಾಲೆಗೆ ಬಂದ ಎಲ್ಲಾ ಜಾನುವಾರುಗಳನ್ನು ಸಾಕುತ್ತಾರೆಯೇ…? ಗೋ ಶಾಲೆಯವರೂ ತಮಗೆ ಲಾಭ ತರುವ ಹಾಲು ನೀಡುವ ಹಸುಗಳನ್ನು ಮಾತ್ರ ಸಾಕುತ್ತಾರೆ. ಗೊಡ್ಡು ದನಗಳನ್ನು, ಹೋರಿಗಳನ್ನು ಕಸಾಯಿಗಳಿಗೆ ಮಾರಾಟ ಮಾಡುವ ಜಾಲ ಅವರಲ್ಲೂ ಇದೆ. ಅವರಿಂದ ಖರೀದಿಸಿದರೆ ಕಸಾಯಿಗೂ ಲಾಭ. ಹೇಗೆಂದರೆ ದನವನ್ನು ಸಾಕಿದವ ತನಗೆ ನಷ್ಟ ಮಾಡ್ಕೊಂಡು ಕಡಿಮೆ ಬೆಲೆಗೆ ಯಾವತ್ತೂ ಮಾರಲಾರ.ಉದಾಹರಣೆಗೆ ಐವತ್ತು ಕಿಲೋ ಮಾಂಸ ಸಿಗಬಹುದಾದ ಒಂದು ಹಸುವನ್ನು ಸಾಕಿದವ ಮಾರುವಾಗ ಹತ್ತು ಸಾವಿರ ರೂಪಾಯಿ ಬೆಲೆ ಕೇಳುತ್ತಾನೆ. ಗೋ ಶಾಲೆಯವ ಅದರ ಅರ್ಧ ಬೆಲೆಗೂ ಮಾರುತ್ತಾನೆ. ಯಾಕೆಂದರೆ ಅವನಿಗೆ ಸಿಕ್ಕಿದ್ದೆಲ್ಲವೂ ಲಾಭ. ಅವ ಅವುಗಳನ್ನು ಸಾಕಿರುವುದಿಲ್ಲ, ಅವುಗಳಿಗಾಗಿ ಖರ್ಚು ಮಾಡಿರುವುದಿಲ್ಲ.ಅವ ಅದನ್ನು ದುಡ್ಡು ಕೊಟ್ಟು ಕೊಂಡದ್ದಲ್ಲ.
ಗೋ ಹತ್ಯಾ ಪ್ರತಿಬಂಧಕ ಖಾಯಿದೆಯನ್ನು ಮುಸ್ಲಿಂ ವಿರೋಧೀ ಖಾಯಿದೆಯೆಂದು ಪ್ರಚಾರ ಮಾಡಿದರೆ ಆಳುವವರಿಗೂ ಲಾಭವಿದೆ. ಗೋ ಹತ್ಯೆ ಮಹಾಪಾಪ, ಗೋ ಹತ್ಯೆ ಹಿಂದೂ ಧರ್ಮ ವಿರೋಧಿಯೆಂದು ಮೆದುಳು ತೊಳೆಸಲ್ಪಟ್ಟವರನ್ನು ಖುಷಿ ಪಡಿಸಿದಂತೆಯೂ ಆಗುತ್ತದೆ. ತನ್ಮೂಲಕ “ತಮ್ಮದು ಹಿಂದೂ ಧರ್ಮದ ಹಿತರಕ್ಷಣೆ ಮಾಡುವ ಸರಕಾರ ” ಎಂದು ನಂಬಿಸಿದಂತೆಯೂ ಆಗುತ್ತದೆ
ಈಗಿನ ಗೋ ಹತ್ಯಾ ಪ್ರತಿಬಂಧಕ ಖಾಯಿದೆಯಲ್ಲಿ ಕಾರ್ಪೋರೇಟ್ ಬಂಡವಾಳಶಾಹಿಗಳ ಹಿತ ಕಾಪಾಡುವ ಹುನ್ನಾರವೂ ಇದೆ. ರೈತ ಸ್ವತಂತ್ರವಾಗಿ ಹೈನುಗಾರಿಕೆ ಮಾಡಬೇಕಾದರೆ ಹಸುಗಳನ್ನು ಮಾರುತ್ತಾ, ಖರೀದಿಸುತ್ತಾ ಇರಬೇಕು. ಮಾರಲು ಸಾಧ್ಯವಾಗುವುದಿಲ್ಲವೆಂದಾಗ ಸಹಜವಾಗಿಯೇ ಖರೀದಿಸಲೂ ಹಿಂಜರಿಯುತ್ತಾನೆ.ಆ ಮೂಲಕ ಗ್ರಾಮೀಣ ರೈತಾಪಿ ವರ್ಗದ ಜೀವನಾಡಿಯಾದ ಹೈನುಗಾರಿಕೆಗೆ ತನ್ನಿಂತಾನೇ ಪೆಟ್ಟು ಬೀಳುತ್ತದೆ.
ಒಮ್ಮೆ ರೈತಾಪಿ ವರ್ಗದ ಸ್ವತಂತ್ರ ಹೈನುಗಾರಿಕೆಗೆ ಪೆಟ್ಟು ಬಿತ್ತೆಂದಾದರೆ ದೊಡ್ಡ ಮಟ್ಟದ ಕಾರ್ಪೋರೇಟ್ ಹೈನುಗಾರಿಕೆ ಪ್ರಾರಂಭವಾಗುತ್ತದೆ. ಕಾರ್ಪೋರೇಟ್ ಬಂಡವಾಳಶಾಹಿಗಳಿಗೆ ಬೇಕಾಗುವ ಜಾನುವಾರುಗಳನ್ನು ಖರೀದಿಸುವ ಎಲ್ಲಾ ವ್ಯವಸ್ಥೆಗಳನ್ನು ಸರಕಾರವೇ ಮಾಡಿ ಕೊಡುತ್ತದೆ. ಚಿಕ್ಕ ಪುಟ್ಟ ಕಸಾಯಿಗಳನ್ನು ಹೊಡೆದು ಬಡಿದು ನಿತ್ರಾಣಗೊಳಿಸಿದಂತೆ ಅಂತಾರಾಷ್ಟ್ರೀಯ ಬೀಫ್ ಮಾರುಕಟ್ಟೆಯ ದೊಡ್ಡ ದೊಡ್ಡ ಕುಳಗಳನ್ನು ಹೇಗೆ ಬೆದರಿಸಲು ಸಾಧ್ಯವಿಲ್ಲವೋ,ಹಾಗೆಯೇ ಚಿಕ್ಕ , ಪುಟ್ಟ ಬಡ ರೈತರನ್ನು ಬಗ್ಗಿಸಿದಂತೆ ಕಾರ್ಪೋರೇಟ್ ಹೈನುಗಾರಿಕೆಯ ಕುಳಗಳನ್ನು ಬಗ್ಗಿಸಲು ಸಾಧ್ಯವಿಲ್ಲ. ಈ ಪ್ರಕ್ರಿಯೆ ಬೆಳೆದು ಗ್ರಾಮೀಣ ಹೈನುಗಾರಿಕೆ ಇಲ್ಲವಾಗಿ ಅದರ ಜಾಗಕ್ಕೆ ಕಾರ್ಪೋರೇಟ್ ಹೈನುಗಾರರು ಬಂದು ಕೂತರೆ ನಾವು ಒಂದು ಲೀಟರ್ ಹಾಲಿಗೆ ಇನ್ನೂರೈವತ್ತು- ಮುನ್ನೂರು ರೂಪಾಯಿ ಕೊಟ್ಟು ಖರೀದಿಸಬೇಕಾದ ಕಾಲವೂ ದೂರವಿಲ್ಲ.
ಇವಿಷ್ಟು ಗೋ ಹತ್ಯಾ ಪ್ರತಿಬಂಧಕ ಖಾಯಿದೆಯಿಂದ ರೈತಾಪಿ ವರ್ಗ ನಲುಗುವುದರ ಒಂದು ಮುಖವಾದರೆ.. ಇನ್ನೊಂದು ಮುಖ ಬೇರೆಯೇ ಇದೆ. ಅದು ಹೇಗೆಂದು ಸಂಕ್ಷಿಪ್ತವಾಗಿ ನೋಡೋಣ.
ನಾನು ಕರಾವಳಿ ಜಿಲ್ಲೆಯ ಗ್ರಾಮೀಣ , ಕೃಷಿಕ ಕುಟುಂಬದ ಹಿನ್ನೆಲೆಯವ.. ನಾನು ನೋಡಿದಂತೆ ನಮ್ಮೂರಲ್ಲಿ ಅಳಿದುಳಿದ ಆಹಾರ ಕೃಷಿಗಾಗಿ ಉಳುಮೆ ಮಾಡುವ ಹೆಚ್ಚಿನೆಲ್ಲರೂ ಕೋಣಗಳನ್ನೇ ಬಳಸುತ್ತಾರೆ.ಅದು ಅವರ ಕೃಷಿಭೂಮಿಯ ಅನಾನುಕೂಲತೆಯಕಾರಣಕ್ಕಾಗಿಯೂ ಹೌದು.. ಅವರ ಭೂಮಿಯ ಫಲವತ್ತತೆಯ ಕಾರಣಕ್ಕೂ ಹೌದು.
– ನಮ್ಮೂರು ಮಾತ್ರವಲ್ಲದೇ, ನಮ್ಮ ದಕ್ಷಿಣ ಕನ್ನಡ, ಉಡುಪಿ, ಮಲೆನಾಡು ಜಿಲ್ಲೆಗಳಾದ ಮಡಿಕೇರಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯ ಹೆಚ್ಚಿನ ಕೃಷಿ ಭೂಮಿಗಳಿಗೆ ರಸ್ತೆ ಸಂಪರ್ಕವಿಲ್ಲ ಮತ್ತು ಹೆಚ್ಚಿನೆಲ್ಲಾ ಕೃಷಿ ಭೂಮಿಗಳಿಗೆ ಸಾಗುವ ದಾರಿಯೂ ಎತ್ತರ-ತಗ್ಗುಗಳನ್ನು ದಾಟಿಯೇ ಹೋಗಬೇಕು. ಅಂತಹ ಪ್ರದೇಶಗಳಲ್ಲಿ ಇಂದಿಗೂ ಉಳುಮೆಯ ಸಾರಥಿ ಕೋಣಗಳು.
– ಕೆಲವೆಡೆ ಕೃಷಿಭೂಮಿಗೆ ಟ್ರ್ಯಾಕ್ಟರ್ ಕೊಂಡೊಯ್ಯುವ ಮಾರ್ಗದ ವ್ಯವಸ್ಥೆಯಿದ್ದರೂ ಅವರಿಗೆ ಟ್ರ್ಯಾಕ್ಟರ್ ಯಾವತ್ತಿದ್ದರೂ ನಷ್ಟದ ಬಾಬ್ತು. ಜಾನುವಾರುಗಳಿದ್ದರೆ ಕೃಷಿಗೆ ಬೇಕಾಗುವ ನೈಸರ್ಗಿಕ ಗೊಬ್ಬರ ಅನಾಯಾಸವಾಗಿ ಸಿಗುತ್ತದೆ. ಟ್ರ್ಯಾಕ್ಟರ್ ಬಳಸುವವ ಗೊಬ್ಬರಕ್ಕಾಗಿಯೇ ಜಾನುವಾರುಗಳನ್ನು ಸಾಕಬೇಕಾಗುತ್ತದೆ. ಸಣ್ಣ ಕೃಷಿಕರಿಗೆ ಗೊಬ್ಬರಕ್ಕಾಗಿ ಜಾನುವಾರು ಮತ್ತು ಉಳುಮೆಗಾಗಿ ಟ್ರ್ಯಾಕ್ಟರ್ ಹೀಗೆ ಏಕಕಾಲಕ್ಕೆ ಜಾನುವಾರುಗಳು ಮತ್ತು ಟ್ರ್ಯಾಕ್ಟರ್ ಇವೆರಡನ್ನೂ ಸಾಕುವುದು ನಷ್ಟದ ಬಾಬ್ತು.
-ಕೋಣಗಳನ್ನು ಬಳಸಿ ಉಳುಮೆ ಮಾಡುವುದಾದರೆ ಟೂ ಇನ್ ವನ್ ಆಗುತ್ತದೆ.
-ಇಂದು ಒಂದು ಜೋಡಿ ಉಳುವ ಕೋಣಗಳನ್ನು ಖರೀದಿಸಬೇಕೆಂದರೆ ಕನಿಷ್ಠವೆಂದರೂ ಒಂದು ಲಕ್ಷ ರೂಪಾಯಿಗಳಾದರೂ ಬೇಕು. ಹದಿಮೂರು ವರ್ಷ ವಯಸ್ಸಾಗುವವರೆಗೆ ಕೋಣಗಳು ಉಳುಮೆಗೆ ಸಮರ್ಥವಾಗಿರುವುದಿಲ್ಲ. ಅಬ್ಬಾಬ್ಬಾ ಎಂದ್ರೆ ಹತ್ತರಿಂದ ಹನ್ನೊಂದು ವರ್ಷ ವಯಸ್ಸಿನವರೆಗೆ ಕೋಣಗಳನ್ನು ಉಳುಮೆಗೆ ಬಳಸಬಹುದು.. ಆ ಬಳಿಕದ ಎರಡರಿಂದ ಮೂರು ವರ್ಷಗಳ ಕಾಲ ರೈತ ಅವುಗಳನ್ನು ಸಾಕಬೇಕೆಂದರೆ ದಿನವೊಂದಕ್ಕೆ ಕನಿಷ್ಠ ಇನ್ನೂರೈವತ್ತರಿಂದ ಮುನ್ನೂರು ರೂಪಾಯಿಗಳವರೆಗೆ ಅವುಗಳ ಆಹಾರಕ್ಕೆಂದು ಖರ್ಚು ಮಾಡಬೇಕು.. ಎಷ್ಟು ಕಡಿಮೆಯೆಂದರೂ ತಿಂಗಳಿಗೆ ಏಳೂವರೆ ಸಾವಿರ ರೂಪಾಯಿಗಳು, ವರ್ಷಕ್ಕೆ ತೊಂಬತ್ತು ಸಾವಿರ ರೂಪಾಯಿಗಳು… ಈ ಮೊತ್ತವನ್ನು ಗೋ ಹತ್ಯೆ ನಿಷೇಧ ಖಾಯಿದೆ ಜಾರಿಗೆ ತಂದವರು ನೀಡುತ್ತಾರೆಯೇ..?ರೈತ ತನ್ನ ಕೋಣಗಳನ್ನು ಕಸಾಯಿಗೆ ಮಾರಿದರೆ ಮಾತ್ರ ಆತನಿಗೆ ಬದಲಿಗೆ ಹೊಸ ಕೋಣಗಳನ್ನು ಖರೀದಿಸುವಷ್ಟು ದುಡ್ಡು ಸಿಗುತ್ತದೆ.
-ಇನ್ನು ಉಳುಮೆಗೆ ಬಳಸುವ ಕೋಣಗಳಿಗೆ ಗಾಯವಾಗುವುದು ಸಹಜ. ಅದೆಷ್ಟೋ ಬಾರಿ ಕಾಲುಗಳಿಗೆ ಏಟಾಗುವುದೂ ಇದೆ. ಅಂತಹ ಕೋಣಗಳನ್ನು ಉಳುಮೆಗೆ ಬಳಸಲು ಸಾಧ್ಯವಿಲ್ಲ. ಹಾಗೆ ಕೆಲಸಕ್ಕೆ ಬಾರದ ಕೋಣಗಳನ್ನು ಸುಮ್ಮನೇ ಹಟ್ಟಿಯೊಳಗಿಟ್ಟು , ಆಹಾರ ಕೊಟ್ಟು ಸಾಕಲು ಸಾಧ್ಯವೇ..? ಅಂತಹ ಸಂಕಷ್ಟ ಕಾಲದಲ್ಲಿ ರೈತನ ಪಾಲಿಗೆ ಆಶಾಕಿರಣ ಕಸಾಯಿಗಳು.
-ಇನ್ನು ಗಂಡು ಕರುಗಳನ್ನು ಹದಿಮೂರು ವರ್ಷಗಳ ಕಾಲ ಗೊಬ್ಬರಕ್ಕೆಂದಾದರೂ ಸಾಕಲು ಸಾಧ್ಯವೇ…?
ಇವು ನಾನು ಅರಿತ ಮೂಲಭೂತ ಪ್ರಶ್ನೆಗಳಷ್ಟೇ.. ಇವುಗಳಾಚೆಗೆ ಇನ್ನೂ ಹಲವು ಸವಾಲು ಮತ್ತು ಸಮಸ್ಯೆಗಳಿವೆ. ಅಧಿಕಾರದ ಕುರ್ಚಿಯಲ್ಲಿ ಕೂತು ಮತಬ್ಯಾಂಕ್‌ಗಾಗಿ ಓಲೈಸುವವರಿಗೆ ನಾಡಿನ ಅನ್ನದಾತನ ಬದುಕು ಮತ್ತು ಸಂಕಷ್ಟಗಳು ಹೇಗೆ ಅರ್ಥವಾದೀತು..?
- ಇಸ್ಮತ್ ಪಜೀರ್