ದ ಪಾಲಿಟಿಕ್

ಪ್ರತಿಯೊಬ್ಬರಿಗೂ ನ್ಯಾಯಾಂಗವನ್ನು ವಿಮರ್ಶೆಗೆ ಒಳಪಡಿಸುವ ಹಕ್ಕಿದೆ : ನ್ಯಾ. ದಾಸ್

ದ ಪಾಲಿಟಿಕ್

ದ ಪಾಲಿಟಿಕ್

ನಿವೃತ್ತ  ಹೈಕೋರ್ಟ್ ನ್ಯಾಯಮೂರ್ತಿ ನಾಗಮೋಹನ ದಾಸ್ ಅವರೊಂದಿಗೆ ಶಶಾಂಕ್ ಎಸ್ ಆರ್ ನಡೆಸಿರುವ  ವಿಶೇಷ ಸಂದರ್ಶನ. 

ಇತ್ತೀಚಿಗೆ ಕರ್ನಾಟಕದಲ್ಲಿ ತಮಗೆ ಬೇಡದವರ ಮೇಲೆ ಸುಮೋಟೋ ಕೇಸ್ ದಾಖಲಿಸಿಕೊಳ್ಳುತ್ತಿದ್ದಾರೆ,ದುರ್ಬಳಕೆ ಮಾಡಿಕೊಳ್ಳುತ್ತಿರುವ ಈ ಕಾಯ್ದೆಯ ಅವಶ್ಯಕತೆ ಇದೆಯೇ? 

ಸುಮೋಟೋ ಅಂದರೆ ಸ್ವಯಂಪ್ರೇರಿತ. ಸ್ವಯಂಪ್ರೇರಿತವಾಗಿ ಒಂದು ಪ್ರಕರಣವನ್ನು ದಾಖಲಿಸಿಕೊಂಡು ಕಾನೂನಾತ್ಮಕವಾಗಿ ಕ್ರಮವನ್ನು ಜರುಗಿಸಬಹುದು. ಅದಕ್ಕೆ ಕಾನೂನಲ್ಲಿ ಅವಕಾಶವಿದೆ. ಆದರೆ, ಯಾವ ಪ್ರಕರಣಗಳನ್ನ ಸುಮೋಟೋ ಪ್ರಕರಣವನ್ನಾಗಿ ದಾಖಲಿಸಬೇಕು? ಯಾವ್ಯಾವ ಪರಿಸ್ಥಿತಿಯಲ್ಲಿ ಅವನ್ನು ದಾಖಲಿಸಬೇಕು? ಅದಕ್ಕೆ ನಿಯಮಗಳೇನು? ಅಥವಾ ಮಾರ್ಗಸೂಚಿಗಳೇನು (Guidelines) ಅನ್ನುವುದು ಇನ್ನೂ ನಿರ್ಧಾರವಾಗಿಲ್ಲ. ಹೀಗಿರುವಾಗ ಸುಮೋಟೋ ಪ್ರಕರಣಗಳು ಬೇಕಾ? ಬೇಡವಾ? ಎನ್ನುವ ಪ್ರಶ್ನೆ ಬರುತ್ತದೆ. ಶಾಸಕಾಂಗ ಮತ್ತು ಕಾರ್ಯಾಂಗ ತನ್ನ ಕರ್ತವ್ಯವನ್ನ ನಿರ್ವಹಿಸದೇ, ಜನರ ಸಮಸ್ಯೆಗಳಿಗೆ ಸ್ಪಂದಿಸದಿದ್ದ ಸಂದರ್ಭಗಳಲ್ಲಿ ಸುಮೋಟೋ ಪ್ರಕರಣಗಳನ್ನ ದಾಖಲಿಸಿಕೊಳ್ಳಬೇಕಾದ ಅವಶ್ಯಕತೆ ಇರುತ್ತದೆ. ಹಾಗಾಗಿ ಭಾರತದಂತಹ ಪೊಲಿಟಿಕಲ್ ಸೆಟಪ್ ನಲ್ಲಿ ಸುಮೋಟೋ ಅನ್ನುವಂತಹ ಅಧಿಕಾರ ಬೇಕು. ಆದರೆ, ಇದರ ಸದ್ಬಳಕೆ ಆಗಬೇಕೇ ಹೊರತು ದುರ್ಬಳಕೆ ಆಗಬಾರದು ಮತ್ತು ನನಗೆ ಬೇಕಿದ್ದ ಹಾಗೆ ಮಾಡುತ್ತೇನೆ ಅನ್ನುವ ಸ್ವೇಚ್ಚಾಚಾರ ಇಲ್ಲಿ ಬರಬಾರದು. ಆದ್ದರಿಂದ, ನನ್ನ ಅಭಿಪ್ರಾಯದಲ್ಲಿ ಸುಮೋಟೋ ಅಧಿಕಾರ ಬೇಕು ಮತ್ತು  ಅದಕ್ಕೆ ಸರಿಯಾದ ಮಾನದಂಡಗಳನ್ನೋ ಅಥವಾ ಮಾರ್ಗಸೂಚಿಗಳನ್ನೋ ರೂಪಿಸಿಕೊಳ್ಳಬೇಕು. ಆಗ ಸ್ವೇಚ್ಛಾಚಾರ ಮತ್ತು  ಅದರ ದುರ್ಬಳಕೆ ಕಡಿಮೆಯಾಗುತ್ತದೆ.  

ಇದನ್ನು ರೂಪಿಸುವ ಜವಾಬ್ದಾರಿ ಯಾರದು? ನ್ಯಾಯಾಂಗದ್ದೇ? 

ಸುಮೋಟೋ ಎನ್ನುವುದು ಬರೀ ನ್ಯಾಯಾಂಗಕ್ಕೆ ಅನ್ವಯಿಸುವುದಿಲ್ಲ. ಉದಾಹರಣೆಗೆ ನಟ ಚೇತನ್ ಅವರ ಪ್ರಕರಣವನ್ನು ಸುಮೋಟೋ ಪ್ರಕರಣವಾಗಿ ದಾಖಲಿಸಿಕೊಂಡಿದ್ದು ಪೊಲೀಸರು. ಹಾಗೆಯೇ, ಎಷ್ಟೋ ಬಾರಿ ದೂರು ನೀಡಲು ಯಾರೂ ಮುಂದುಬರದೇ ಇದ್ದರೂ ಪೊಲೀಸರ ಪ್ರಕರಣಗಳನ್ನು ಪೊಲೀಸರೇ ದಾಖಲಿಸಿಕೊಳ್ಳುತ್ತಾರೆ. ಅಲ್ಲದೇ Prohibition of Land Alienation Act ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗೆ ಮಂಜೂರು ಆಗಿರುವ ಜಮೀನನ್ನು ಅದರ ನಿಯಮಗಳನ್ನು ಉಲ್ಲಂಘಿಸಿ ಇನ್ಯಾರಿಗೋ ಮಾರಾಟ ಮಾಡಿದಾಗ,  ರೆವೆನ್ಯೂ ಡಿಪಾರ್ಟ್ಮೆಂಟ್ ನ ಅಧಿಕಾರಿಗಳು ಸುಮೋಟೋ ಪ್ರಕರಣವನ್ನು ದಾಖಲಿಸಿಕೊಳ್ಳುತ್ತಾರೆ.  ಹಾಗಾಗಿ, ಸುಮೋಟೋ ಅಧಿಕಾರ ಕೇವಲ ನ್ಯಾಯಾಂಗಕ್ಕೆ ಮಾತ್ರ ಸೀಮಿತವಾಗಿಲ್ಲ, ಕಾರ್ಯಾಂಗಕ್ಕೂ ಈ ಅಧಿಕಾರವಿದೆ. ಆದರಿಂದ,  ಸುಮೋಟೋ ಪ್ರಕರಣ ದಾಖಲಿಸಿಕೊಳ್ಳಲು ನಾವು ರಚಿಸಬೇಕಾಗಿರುವ ಮಾನದಂಡಗಳು ನ್ಯಾಯಾಂಗಕ್ಕೂ, ಕಾರ್ಯಾಂಗಕ್ಕೂ ಅನ್ವಯವಾಗುವಂತೆ ಇರಬೇಕು. 

ಫ್ರೀಡಂ ಪಾರ್ಕನ್ನು ಹೊರತುಪಡಿಸಿ ಬೇರೆ ಎಲ್ಲೂ ಪ್ರತಿಭಟನೆಗಳು ನಡೆಯಬಾರದು ಎಂದು ಇತ್ತೀಚಿಗೆ  ಕರ್ನಾಟಕ ಉಚ್ಛ ನ್ಯಾಯಾಲಯ ನೀಡಿರುವ ನಿರ್ದೇಶನದ ಬಗ್ಗೆ ನೀವೇನು ಹೇಳುತ್ತೀರಿ? 

ಏಕಾಏಕಿ ಆರ್ಡರ್ ಪಾಸ್ ಮಾಡುವುದು ಸರಿಯಲ್ಲ. ಆದರೆ, ಪ್ರತಿಭಟನೆಗೆ ಒಂದು ಸ್ಪೇಸ್ ಬೇಕು. ಆದರೆ, ಅದರಿಂದ ಇತರರಿಗೆ ತೊಂದರೆಯಾಗಬಾರದು. ಇದು ಎರಡನ್ನೂ ಬ್ಯಾಲನ್ಸ್ ಮಾಡುವ ಥರಾ ವ್ಯವಸ್ಥೆ ಬೇಕು. ಸರ್ಕಾರವಾಗಲಿ, ನ್ಯಾಯಾಂಗವಾಗಲಿ ಇದರ ಬಗ್ಗೆ ಸಂಬಂಧಪಟ್ಟವರ ಜೊತೆ ಕೂಲಂಕುಷವಾಗಿ ಚರ್ಚಿಸಬೇಕು, ಜನಪರವಾಗಿ ನಡೆದುಕೊಳ್ಳಬೇಕು ಆಗ ಜನರೂ ಒಪ್ಪಿಕೊಳ್ಳುತ್ತಾರೆ. 

ಇತ್ತೀಚಿಗೆ ನ್ಯಾಯಾಂಗದ ಬಗ್ಗೆ ಬಹಳಷ್ಟು  ಆರೋಪಗಳು ಕೇಳಿಬರುತ್ತಿವೆ – ಅದರಲ್ಲೂ ಭ್ರಷ್ಟಾಚಾರದ, ಜಾತಿವಾದ ಅಥವಾ ನ್ಯಾಯಾಂಗದ ಕೇಸರೀಕರಣದ ಆರೋಪಗಳು. ಇದನ್ನು ತಾವು ಹೇಗೆ ಗ್ರಹಿಸುತ್ತೀರಿ? 

ನಮ್ಮದೇಶದಲ್ಲಿ ಮೊದಲಿಂದಲೂ ಕಾರ್ಯಾಂಗ ಮತ್ತು ಶಾಸಕಾಂಗಗಳು ನ್ಯಾಯಾಂಗದ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸುತ್ತಲೇ ಇವೆ. ಅದು ಈ ದಿನಗಳಲ್ಲಿ ಸ್ವಲ್ಪ ಹೆಚ್ಚೇ ಆಗಿದೆ. ಆದರೆ, ಅಲ್ಲೋ ಇಲ್ಲೋ ಒಂದೊಂದು ಸಂದರ್ಭಗಳನ್ನು ಹೊರತುಪಡಿಸಿ, ಈ ಹಿಂದೆ, ಎಲ್ಲಾ ಸಂದರ್ಭದಲ್ಲಿ, ನ್ಯಾಯಾಂಗ ಆ ರೀತಿಯ ಪ್ರಯತ್ನಗಳನ್ನು ಮೆಟ್ಟಿ ನಿಂತಿದೆ ಮತ್ತು ತನ್ನ ಸ್ವಾತಂತ್ರ್ಯವನ್ನು ಕಾಪಾಡಿಕೊಂಡು ಬಂದಿದೆ.  ಆದರೆ ಈ ದಿನಗಳಲ್ಲಿ ಕಾರ್ಯಾಂಗದ ಪ್ರಭಾವಕ್ಕೆ ಒಳಾಗಾಗುವಂತ, ಕಾರ್ಯಾಂಗದ ಮನವೊಲಿಸುವುದು ರೀತಿಯಲ್ಲಿ ತೀರ್ಪುಗಳನ್ನು ಬರೆಯತಕ್ಕಂತ, ಆಡಳಿತದಲ್ಲಿರುವ ಜನರನ್ನು ಓಲೈಸುವಂತ ಘಟನೆಗಳು, ಪ್ರಕ್ರಿಯೆಗಳು ಹೆಚ್ಚುತ್ತಿವೆ. ಆದಕಾರಣ ನ್ಯಾಯಾಂಗದ ಬಗ್ಗೆ ಜನರಿಗೆ ನಂಬಿಕೆ ಕಡಿಮೆಯಾಗುತ್ತಿದೆ. ಉದಾಹರಣೆಗೆ, ಪ್ರಧಾನ ಮಂತ್ರಿಗಳನ್ನು ಸಾರ್ವಜನಿಕವಾಗಿ ಹೊಗಳುವುದು, ವೈಯಕ್ತಿಕ ಹಿತದ ಹಕ್ಕುಗಳಿಗೆ ಮಹತ್ವ ಕೊಡುವುದು ಮತ್ತು ಸಮುದಾಯದ ಹಕ್ಕುಗಳ ಮಹತ್ವ ಕಡಿಮೆಯಾಗಿಸುವುದು. ಈ ಸಂದರ್ಭಗಳಲ್ಲಿ ಜನರ ಅಭಿಪ್ರಾಯ ಕಡಿಮೆಯಾಗುತ್ತಿರುವುದು ಸತ್ಯ. ಆದರೆ, ನ್ಯಾಯಾಂಗದಲ್ಲಿ ಇರುವ ಎಲ್ಲಾ ನ್ಯಾಯಮೂರ್ತಿಗಳೂ ಹೊರಗಿನ ಪ್ರಭಾವಕ್ಕೆ ಒಳಗಾಗುತ್ತಿಲ್ಲ ಎಂಬುದನ್ನು ಅರಿತು ಒಂದು ಕತ್ತಲಕೋಣೆಯ ಕೊನೆಯಲ್ಲಿ ಕಾಣುತ್ತಿರುವ ಬೆಳಕನ್ನು ಹಿಡಿದೇ ದಾರಿ ಕಂಡುಕೊಳ್ಳುವ ಹಾಗೆ ನಾವು ಇಂದು ನ್ಯಾಯಾಂಗವನ್ನು ಆಧಾರಿಸಬೇಕಿದೆ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅಮೇರಿಕಾದ ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿ ಜಸ್ಟೀಸ್ ಜಾಕ್ಸನ್ ನ್ಯೂ ಯಾರ್ಕ್ ಟೈಮ್ಸ್ ಗೆ ಒಂದು ಲೇಖನವನ್ನು ಬರೆದು, ಅದರ ಕೊನೆಯಲ್ಲಿ ಹೀಗೆ ದಾಖಲಿಸುತ್ತಾರೆ.  ‘Judges are more often bribed not by money but by their vested interests and loyalty to the others’. ಇವತ್ತು ಹಣದ ವಿಚಾರಕ್ಕಿಂತಲೂ ಹೆಚ್ಚಿಗೆ ಜನ ವಿರೋಧಿ, ಸಂವಿಧಾನ ವಿರೋಧಿ  ತೀರ್ಪುಗಳು ಬರುತ್ತಿರುವುದು ಕೆಲವು ನ್ಯಾಯಮೂರ್ತಿಗಳ ಸ್ವಾರ್ಥದ ಪರಿಣಾಮವಾಗಿ. 

ಇದಕ್ಕೆ ಪರಿಹಾರವೇನು ಸರ್ ? 

ನ್ಯಾಯಾಂಗ ನೀಡುವ ತೀರ್ಪನ್ನು ಅನುಸರಿಸಬೇಕು, ನಾವು ಅದನ್ನು ಪಾಲಿಸಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಈ ದೇಶದ ಪ್ರತಿಯೊಬ್ಬ ಪ್ರಜೆಗೂ ನ್ಯಾಯಾಂಗವನ್ನು ವಿಮರ್ಶೆಗೆ ಒಳಪಡಿಸುವ ಹಕ್ಕಿದೆ. 

ಆದರೆ, ಇತ್ತೀಚಿಗೆ ನ್ಯಾಯಾಂಗ ನಿಂದನೆಯ ಪ್ರಕರಣಗಳೂ ಹೆಚ್ಚುತ್ತಿವೆಯಲ್ಲ? 

ಹಾ. ಇಲ್ಲಿ ನೀವು ಜಸ್ಟೀಸ್ ನಾಗಮೋಹನ್ ದಾಸ್ ಅಂತ ನೀವು ವಿಮರ್ಶೆ ಮಾಡಬೇಡಿ. ಕರ್ನಾಟಕ ಹೈ ಕೋರ್ಟ್ ತೀರ್ಪನ್ನು ವಿಮರ್ಶಿಸಿ. ಆದರೆ, ಆ ವಿಮರ್ಶೆಗೂ ಕೂಡ ಒಂದು ಚೌಕಟ್ಟಿದೆ. ಏನು? ಅದು ಆರೋಗ್ಯಕರ ಮತ್ತು ರಚನಾತ್ಮಕವಾದ ವಿಮರ್ಶೆ ಆಗಿರಬೇಕು. ನ್ಯಾಯಾಂಗವನ್ನು ಇನ್ನೂ ಮೇಲ್ಮಟ್ಟಕ್ಕೆ ಕೊಂಡೊಯ್ಯುವ ರೀತಿಯ ವಿಮರ್ಶೆ ಆಗಿರಬೇಕು. ನ್ಯಾಯಾಂಗದಲ್ಲಿ  ಜನರು ಇರಿಸಿರುವ ನಂಬಿಕೆಯನ್ನು ಹಾಳುಗೆಡಿಸುವ ರೀತಿಯ ವಿಮರ್ಶೆ ಆಗಕೂಡದು. ಹಾಗೇನಾದರೂ ಆದಲ್ಲಿ, ದೇಶದಲ್ಲಿ ಅರಾಜಕತೆ ಉಂಟಾಗುತ್ತದೆ. ನಮ್ಮ ಹಿರಿಯರು ಬಹಳ ಶ್ರಮವಹಿಸಿ ಕಟ್ಟಿರುವ ಪ್ರಜಾಪ್ರಭುತ್ವದ ಸಂಸ್ಥೆ  ನ್ಯಾಯಾಂಗ. ಅದನ್ನು ನಾವು ಧ್ವಂಸ ಮಾಡಬಾರದು. ಈ ಚೌಕಟ್ಟನ್ನು ಹಾಕಿಕೊಂಡು ನಾವು ವಿಮರ್ಶಿಸಬೇಕು. ನ್ಯಾಯಾಂಗವು, ನ್ಯಾಯಾಲಯಗಳೂ ಟೀಕಾತೀತ ಅಲ್ಲ.

ನ್ಯಾಯಾಂಗದ ಉನ್ನತ ದರ್ಜೆಗಳಲ್ಲಿ ವ್ಯವಸ್ಥಿತವಾಗಿ ಬ್ರಾಹ್ಮಣರ ಸೇರ್ಪಡೆಯಾಗುತ್ತಿದೆ ಎಂದು ಬಹಳ ಆಪಾದನೆಗಳು ಇತ್ತೀಚಿಗೆ ಕೇಳಿಬರುತ್ತಿದೆ. ಬಹಳ ಮಹತ್ವಪೂರ್ಣವಾದ ಎರಡು ಸಂಸ್ಥೆಗಳಾದ ನ್ಯಾಯಾಲಯ ಮತ್ತು ಸೈನ್ಯದಲ್ಲಿ ಮೀಸಲಾತಿ ನೀಡದಿರುವುದೂ ಇದಕ್ಕೆ ಕಾರಣ ಎನ್ನುವುದೂ ಒಂದು ಅಭಿಪ್ರಾಯವಿದೆ. ಇದರ ಬಗ್ಗೆ ನಿಮ್ಮ ನಿಲುವುಗಳೇನು? 

ಭಾರತದ ನ್ಯಾಯಾಂಗದಲ್ಲಿ, ತಾಲ್ಲೂಕು ಮತ್ತು ಜಿಲ್ಲಾ ನ್ಯಾಯಾಲಯಗಳಲ್ಲಿ ನಾವು ಮೀಸಲಾತಿ ಕೊಟ್ಟಿದ್ದೀವಿ. ನನ್ನ ಅಭಿಪ್ರಾಯದಲ್ಲಿ ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಲಯದ ಸಂರಚನೆಯು ಇಡೀ ದೇಶವನ್ನು ಪ್ರತಿನಿಧಿಸುವಂತಿರಬೇಕು.  ಅದು ಹಾಗಿರಬೇಕಾದರೆ, ಎಲ್ಲಾ ಪ್ರದೇಶಗಳ ಮತ್ತು ಸಮುದಾಯಗಳ ಪ್ರಾತಿನಿಧ್ಯ ಬೇಕು. ವಿಶೇಷವಾಗಿ ಮಹಿಳೆಯರು, ದಲಿತರು, ಅಲ್ಪಸಂಖ್ಯಾತರು ಮತ್ತು ಆದಿವಾಸಿಗಳ ಪ್ರಾತಿನಿಧ್ಯ ಬೇಕು. ಇಲ್ಲಿ ಎರಡು ವಿಚಾರಗಳನ್ನು ನಾವು ಮನಗಾಣಬೇಕು.

ಮೊದಲನೆಯದಾಗಿ, ಕೆ ಆರ್ ನಾರಾಯಣನ್ ರಾಷ್ಟ್ರಪತಿಯಾಗಿದ್ದಾಗ,  ಹೈ ಕೋರ್ಟ್ ಮತ್ತು ಸುಪ್ರೀಂ ಕೋರ್ಟಿನ ನೇಮಕಾತಿಯ ಬಗ್ಗೆ ಸುಪ್ರೀಮ್ ಕೋರ್ಟಿನ ಒಂದು ಶಿಫಾರಸ್ಸಿನ ಫೈಲೊಂದನ್ನು ಕ್ಲಿಯರ್ ಮಾಡುವ ಸಂದರ್ಭದಲ್ಲಿ ‘ಮಹಿಳೆಯರು ಮತ್ತು ದಲಿತರಿಗೆ ಪ್ರಾತಿನಿಧ್ಯ ನೀಡುವ ಬಗ್ಗೆ ಸುಪ್ರೀಮ್ ಕೋರ್ಟು ಚಿಂತಿಸಬೇಕು’ ಎಂದು ಒಂದು ವಿಚಾರವನ್ನು ಮುಂದು ಮಾಡುತ್ತಾರೆ. ಅದೊಂದು ಹೇಳಿಕೆಯಿಂದಾಗಿ, ಇವತ್ತು ಎಲ್ಲಾ ರಾಜ್ಯಗಳಲ್ಲಿಯೂ ಮಹಿಳೆಯರನ್ನು ಮತ್ತು ದಲಿತರನ್ನು ಹುಡುಕಿ ಹುಡುಕಿ ಒಬ್ಬರೋ ಇಬ್ಬರನ್ನೋ ನೇಮಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. 

 ಎರಡನೆಯದಾಗಿ 1950ರಲ್ಲಿ ನಾವು ಸಂವಿಧಾನವನ್ನು ರಚನೆ ಮಾಡಿದಾಗ, ದಲಿತರು ಮತ್ತು ಹಿಂದುಳಿದವರು ಲೀಗಲ್ ಪ್ರೊಫೆಷನ್ ಗೆ ಬರುವುದು ಬಹಳ ಅಪರೂಪವಾಗಿತ್ತು. ಕಾರಣ, ಅವರಿಗೆ ಶಿಕ್ಷಣವನ್ನು ನಿರಾಕರಿಸಲಾಗಿತ್ತು. ಶೂದ್ರ ಸಮುದಾಯಕ್ಕೆ ಸೇರಿದ ನಾನು 1977 ರಲ್ಲಿ ಲಾಯರ್ ಆಗಿ ಕೆಲಸಕ್ಕೆ ಸೇರಿದಾಗ, ಬೆಂಗಳೂರಿನಲ್ಲಿ ಕೆಲವೇ ಕೆಲವು ದಲಿತರು ಲಾಯರ್ ಗಳಿದ್ದರು, ಬೆರಳಣಿಕೆಯಷ್ಟು ಮಾತ್ರ ಮಹಿಳೆ ಲಾಯರ್ ಗಳಿದ್ದರು. ಹಾಗಾಗಿ, ಆಗಿನ ಕಾಲಕ್ಕೆ ಮೀಸಲಾತಿ ಕಲ್ಪಿಸಿರಲಿಲ್ಲ. ಇವತ್ತು ಬಡ ಮತ್ತು ಹಿಂದುಳಿದ ಸಮುದಾಯಗಳ ಹಿನ್ನಲೆಯಿಂದ ಬರುವ ಬಹಳ ಸಮರ್ಥರಾದ ಲಾಯರ್ ಗಳು ಇದ್ದಾರೆ. ಅವರಿಗೆ ಪ್ರಾತಿನಿಧ್ಯ ಬೇಕು. ನೀವು ಅದನ್ನು ಮೀಸಲಾತಿ ಎಂದು ಕರೆಯುವಿರೋ, ಅಥವಾ ಪ್ರಾತಿನಿಧ್ಯ ಎಂದು ಅವಕಾಶ ಕೊಡುವಿರೋ, ಒಟ್ಟಿನಲ್ಲಿ ಇದು ಬೇಕು. ಉನ್ನತ ಹಂತದ ನ್ಯಾಯಾಲಯದಲ್ಲೂ ಇದು ಬೇಕಿದೆ. 

ಸಂವಿಧಾನದ ಮೂಗಿನಡಿಯಲ್ಲೇ ಆರ್ಥಿಕ ಅಸಮಾನತೆ, ಕೋಮು ರಾಜಕಾರಣದಂತಹ ಸಂವಿಧಾನದ ಆಶಯಕ್ಕೆ ವಿರುದ್ಧವಾದ ಪ್ರಕ್ರಿಯೆಗಳು ಹೆಚ್ಚಾಗುತ್ತಿವೆ. ಇದಕ್ಕೆ ಕಾರಣವೇನು? 

ಸಂವಿಧಾನವನ್ನು ಜಾರಿಗೊಳಿಸುವುದರಲ್ಲಿ ನಾವು ಎಡವಿದ್ದೇವೆ. ಇತ್ತೀಚಿಗೆ ಐಎಎಸ್  ಅಧಿಕಾರಿಗಳ ಅಸೋಸಿಯೇಷನ್ ನ ಕಾರ್ಯಕ್ರಮ ಒಂದರಲ್ಲಿ  ಭಾಗವಹಿಸುತ್ತಾ ಹೇಳುತ್ತಿದ್ದೆ. ಸರ್ಕಾರಗಳು ಸಂವಿಧಾನವನ್ನು ನಮ್ಮ ದೇಶದ ಜನರಿಗೆ ತಿಳಿ ಪಡಿಸುವ ಕೆಲಸವನ್ನು ಮಾಡಲೇ ಇಲ್ಲ. ಜನರೂ ಕೂಡ ಸ್ವ ಇಚ್ಛೆಯಿಂದ ಸಂವಿಧಾನವನ್ನು ತಿಳಿದುಕೊಳ್ಳಬೇಕು ಎಂದು ಪ್ರಯತ್ನಗಳೂ ಮಾಡಲಿಲ್ಲ. ಇದು ಒಂದು ಕಡೆಯಾದರೆ, ಸಂವಿಧಾನವನ್ನು ತಿಳಿದ ಜನರು ಕೆಲವು ಜನ ಅದನ್ನು ಸರಿಯಾಗಿ ಅರ್ಥೈಸಿಲ್ಲ. ಕೆಲವರು ಅರ್ಥಿಸಿದ್ದರೂ, ಅನುಸ್ಠಾನಗೊಳಿಸಲಿಲ್ಲ. 
ಇದಕ್ಕೆ ಉದಾಹರಣೆ ನೀಡುತ್ತೇನೆ. ಪಾರ್ಲಿಮೆಂಟರಿ ಪ್ರಜಾಪ್ರಭುತ್ವ ಎಂಬುದು ನಮ್ಮ ಸಂವಿಧಾನದ ಮೂಲತತ್ವ. ಕಳೆದ 73 ವರ್ಷಗಳಲ್ಲಿ ನಾವು ಪ್ರಜಾಪ್ರಭುತ್ವ ಎಂದರೆ ಏನು ಚರ್ಚೆ ಮಾಡಿದ್ದೀವಿ? ಕಾಲಕಾಲಕ್ಕೆ ಚುನಾವಣೆ ನಡೆಸುವುದು, 18 ಮೇಲ್ಪಟ್ಟ ವಯಸ್ಸಿನವರು ಮತದಾನ ಮಾಡುವುದು, ಬಹುಮತ ಬಂದವರು ಸರ್ಕಾರ ನಡೆಸುವುದು. ಇಷ್ಟೇ. ಆದರೆ, ಪ್ರಜಾಪ್ರಭುತ್ವ ಎಂದರು ಅದು ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಪ್ರಜಾಪ್ರಭುತ್ವವನ್ನು ಒಳಗೊಂಡಿದೆ. ಆದರೆ, ದುರಾದೃಷ್ಟವಷಾತ್ ಕಳೆದ 73 ವರ್ಷಗಳಲ್ಲಿ ನಾವು ಆರ್ಥಿಕ ಮತ್ತು ಸಾಮಾಜಿಕ ಪ್ರಜಾಪ್ರಭುತ್ವದ ಬಗ್ಗೆ ಚರ್ಚೆಯನ್ನೇ ನಡೆಸಲಿಲ್ಲ ಮತ್ತು ಅದನ್ನು ರಾಜಕೀಯ ಪ್ರಜಾಪ್ರಭುತ್ವದೊಂದಿಗೆ ಸಮೀಕರಿಸಲಿಲ್ಲ. ಹಾಗಾಗಿ ಚುನಾವಣೆಗಳ ಸಂದರ್ಭಗಳಲ್ಲಿ ಭಾವನಾತ್ಮಕ ವಿಚಾರಗಳು ಮುನ್ನಲೆಗೆ ಬರುತ್ತವೆ ಹೊರತು ಬದುಕಿನ ವಿಚಾರಗಳಲ್ಲ. ಚುನಾವಣೆ ಬಂದರೆ ಜಾತಿ – ಧರ್ಮ ಬರುತ್ತೆ, ರಾಮ ಮಂದಿರ – ಬಾಬ್ರಿ ಮಸೀದಿ ಬರುತ್ತೆ. ರೈತರ ಆತ್ಮಹತ್ಯೆ ಬರಲ್ಲ, ಗುಣಾತ್ಮಕ ಶಿಕ್ಷಣ ಬರಲ್ಲ, ಮಹಿಳೆಯರು ಮತ್ತು ದಲಿತರ ಮೇಲಿನ ದೌರ್ಜನ್ಯ ಬರಲ್ಲ.  ಸಂವಿಧಾನವನ್ನು ಅರ್ಥೈಸಿ ಅನುಸ್ಠಾನಗೊಳಿಸುವಲ್ಲಿ ಇಡೀ ದೇಶದ ಜನರಾಗಿ ನಾವು ಸೋತಿದ್ದೇವೆ. 

ಎರಡನೆಯದಾಗಿ, ಜಾತ್ಯಾತೀತ ಎಂದರೆ ಏನು? ನಾನು ಕಳೆದ ಮೂರುವರೆ ವರ್ಷಗಳಿಂದ ‘ಸಂವಿಧಾನ ಓದು’ ಕಾರ್ಯಕ್ರಮಗಳಿಗೆ ರಾಜ್ಯದೆಲ್ಲೆಡೆ ಶಾಲಾ-ಕಾಲೇಜುಗಳಿಗೆ ಹೋದೆ. ಅಲ್ಲಿ, ಮಕ್ಕಳು-ಪೋಷಕರು ಮತ್ತು ಶಿಕ್ಷಕರ ಜೊತೆ ಸಂವಾದ ಮಾಡಿದ್ದೇನೆ. ಎಲ್ಲಾ ಕಡೆಯಲ್ಲೂ ಜಾತ್ಯಾತೀತ ಎಂದರೆ ಎಲ್ಲಾ ಧರ್ಮವನ್ನು ಸರ್ಕಾರ ಸಮನಾಗಿ ಕಾಣುವುದು ಎಂದೇ ಎಲ್ಲರೂ ಅರ್ಥೈಸಿದ್ದಾರೆ. ಆದರೆ ಅದು ತಪ್ಪು.  ಜಾತ್ಯಾತೀತ ಎಂದರೆ ಸರ್ಕಾರಕ್ಕೆ ಒಂದು ಧರ್ಮ ಇಲ್ಲದೇ ಇರುವುದು ಅಥವಾ ಧರ್ಮ ಮತ್ತು ರಾಜಕಾರಣವನ್ನು ಬೇರ್ಪಡಿಸುವ ವ್ಯವಸ್ಥೆ (Seperation of Religion from Politics). ಪ್ರಭುತ್ವವು ಧರ್ಮಗಳ ಮಧ್ಯೆ ತಾರತಮ್ಯ ತೋರದಿರುವ ಮತ್ತು ಸರ್ಕಾರದ ಯೋಜನೆಗಳು, ಕಾರ್ಯಕ್ರಮಗಳು ಹಾಗೂ ಕಾನೂನುಗಳು ಯಾವುದೇ ಧರ್ಮದ ಫರ್ಮಾನುಗಳಿಂದ ಪ್ರೇರಿತವಾಗದಿರುವ ವ್ಯವಸ್ಥೆಯೇ ಜಾತ್ಯಾತೀತ ವ್ಯವಸ್ಥೆ. ಆದರೆ ಜಾತ್ಯಾತೀತ ಧರ್ಮವಿರೋಧಿಯಲ್ಲ. ನಾವಿದೆಲ್ಲವನ್ನು ಅರ್ಥೈಸಲಿಲ್ಲ. ಅದಕ್ಕೇ ಮಕ್ಕಳ ಮೊಟ್ಟೆ ವಿಚಾರದಲ್ಲಿ ಧರ್ಮ ಬರುತ್ತೆ. ಮೊಟ್ಟೆ ತಿನ್ನಲೇ ಬೇಕು ಎಂದು ಒತ್ತಾಯಿಸುವುದಲ್ಲ, ತಿನ್ನುವವರು ತಿನ್ನಲಿ. ಈಗ ಸಿಎಎ (Citizenship Amendment Act) ವಿಚಾರ. ನಾವು ಈ ಷರತ್ತುಗಳಿಗೆ ಒಳಪಟ್ಟು ನಾಗರಿಕತ್ವ ಕೊಡುತ್ತೇವೆ. ಆದರೆ, ಈ ಧರ್ಮದವರಿಗೆ ಅದೇ ಷರತ್ತುಗಳು ಅನ್ವಯ ಆದರೂ ನಾವು ನಾಗರಿಕತ್ವ ಕೊಡುವುದಿಲ್ಲ. ಇದು ಧರ್ಮಾಧಾರಿತ ಕಾನೂನು. 

ಮೂರನೆಯದಾಗಿ, ಎಲ್ಲಾ ಕಾಲೇಜುಗಳಲ್ಲಿ ಕಂಡುಬಂದಿದ್ದು ಸಾಮಾಜಿಕ ನ್ಯಾಯದ ಎಂದರೆ ಮೀಸಲಾತಿ,ಮೀಸಲಾತಿ ಎಂದರೆ ಸಾಮಾಜಿಕ ನ್ಯಾಯ ಮೀಸಲಾತಿ ಅಂದರೆ ಅಂಬೇಡ್ಕರ್, ಅಂಬೇಡ್ಕರ್ ಅಂದರೆ ಮೀಸಲಾತಿ.
ನಾನು ಅದಕ್ಕೆ ಹೇಳುತ್ತಿದ್ದೆ ಅವರಿಗೆ. ಮೀಸಲಾತಿ ಸಾಮಾಜಿಕ ನ್ಯಾಯದ ಒಂದು ಅಣು. ಮೀಸಲಾತಿಯೇ ಸಾಮಾಜಿಕ ನ್ಯಾಯ ಅಲ್ಲ. ಸಾಮಾಜಿಕ ನ್ಯಾಯ ಎಂದರೆ ಮೀಸಲಾತಿ ಮಾತ್ರ ಅಲ್ಲ. ಅನ್ಯಾಯಕ್ಕೆ ಒಳಪಟ್ಟಿರುವ ಜನರಿಗೆ ನ್ಯಾಯ ಒದಗಿಸುವುದು ಸಾಮಾಜಿಕ ನ್ಯಾಯ. ಈ ದೇಶದಲ್ಲಿ ಕಳೆದ 25 ವರ್ಷಗಳಲ್ಲಿ 8 ಲಕ್ಷ ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಏನು ತಪ್ಪು ಮಾಡಿದ್ದಾರೆ? ಸರಕಾರದ ತಪ್ಪು ನೀತಿಗಳಿಂದಾಗಿ ಅವರು ಆತ್ಮಹತ್ಯೆ ಮಾಡಿಕೊಳ್ಳಬೇಕಿದೆ. ಅವರ ನೆರವಿಗೆ ಹೋಗುವುದು ಸಾಮಾಜಿಕ ನ್ಯಾಯ ಆಗಬೇಕಾ? ಬೇಡವಾ?

ನಾವು ಯುವಕರಾಗಿದ್ದಾಗ ಒಂದಿಲ್ಲೊಂದು ರೀತಿಯಲ್ಲಿ ಕಷ್ಟಪಟ್ಟಿರುತ್ತೇವೆ. ಆದರೆ, ವಯಸ್ಸಾದ ನಂತರ ಕಷ್ಟ ಪಡಲು ಆಗುವುದಿಲ್ಲ. ಆಗ, ಕನಿಷ್ಠ ಜೀವನ ನಡೆಸುವುದಕ್ಕೆ ಸವಲತ್ತು ಒದಗಿಸುವುದು ಬೇಡವಾ? ಅದು ಸಾಮಾಜಿಕ ನ್ಯಾಯ ಅಲ್ಲವಾ? 

ಮೀಸಲಾತಿಯ ಬಗ್ಗೆ ನಿಮ್ಮ ಅಭಿಪ್ರಾಯವೇನು? 

ಇವತ್ತು ನಮ್ಮ ಮುಂದಿರುವ ಸಮಸ್ಯೆಗೆ ಮೀಸಲಾತಿ ಒಂದು ತಾತ್ಕಾಲಿಕ ಪರಿಹಾರ. ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ನಾವು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಅಸಮಾನತೆಯನ್ನು ಹೋಗಲಾಡಿಸಿ ಮೀಸಲಾತಿಯನ್ನು ಕೊನೆಗಾಣಿಸಬೇಕು. ಅಲ್ಲಿವರೆಗೂ, ಇರುವ ಅವಕಾಶಗಳನ್ನು ನಾವು ಎಲ್ಲರ ಮಧ್ಯೆ ಹಂಚಬೇಕು. ಆದರೆ, ನಮ್ಮ ಸಮಾಜದಲ್ಲಿ ಜಾತಿ ವ್ಯವಸ್ಥೆಯಿದೆ ಮತ್ತು ಅದರಿಂದ ಅವರು ಶೋಷಣೆಗೆ ಒಳಪಟ್ಟಿದ್ದಾರೆ. ಅವರು ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದಿದ್ದಾರೆ. ಅದಕ್ಕೆ ಅವರಿಗೆ ವಿಶೇಷವಾಗಿ ಒಂದು ಪ್ರಾತಿನಿಧ್ಯ ನೀಡಬೇಕೆಂದು ಮೀಸಲಾತಿ ತರಲಾಯಿತು. ಅದು ಬಡತನ ನಿರ್ಮೂಲನೆ ಕಾರ್ಯಕ್ರಮವಲ್ಲ, ಜಾತಿ ವಿನಾಶದ ಕಾರ್ಯಕ್ರಮವಲ್ಲ. ಯಾವ ಸಮುದಾಯವನ್ನು ನಾವು ಶತಮಾನಗಳ ಕಾಲ ಸರಿಯಾಗಿ ನಡೆಸಿಕೊಳ್ಳಲಿಲ್ಲವೋ ಆ ಸಮುದಾಯಕ್ಕೆ ಒಂದು ಘನತೆ, ಒಂದು ಪ್ರಾತಿನಿಧ್ಯ. 

ಪ್ರಾತಿನಿಧ್ಯದ ವಿಚಾರ ಚರ್ಚಿಸುತ್ತಿರುವ ಕಾರಣ ಈ ಪ್ರಶ್ನೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಗಳಿಗೆ ಪ್ರಾತಿನಿಧ್ಯವನ್ನು ನಿರ್ಧರಿಸುವ ಬಗ್ಗೆ ನಿಮ್ಮ ಸಮಿತಿ ಒಂದು ವರದಿ ನೀಡಿತ್ತು. ಅದರ ಶಿಫಾರಸ್ಸು ಏನಿತ್ತು? ವರದಿ ನೀಡಿದ ನಂತರ ಏನಾಗಿದೆ? ಅದನ್ನು ಸರ್ಕಾರ ಅನುಷ್ಟಾನಗೊಳಿಸಿದೆಯೆ? 

ನಮ್ಮ ಸಮಿತಿಗೆ ಸರಕಾರ ನೀಡಿದ terms of reference ಹೀಗಿತ್ತು: ಪರಿಶಿಷ್ಟ ಜಾತಿಗಳಿಗೆ ಇರುವ ಮೀಸಲಾತಿಯನ್ನು 15% ರಿಂದ 17%ಕ್ಕೆ ಹೆಚ್ಚಿಸಬಹುದೆ? ಪರಿಶಿಷ್ಟ ಪಂಗಡ ಇರುವ ಮೀಸಲಾತಿಯನ್ನು 3% ಇಂದ 7% ಗೆ ಹೆಚ್ಚಿಸಬಹುದ? ಎಂಬುದು. ನಾವು ಸರ್ಕಾರ ನೀಡಿದ ಗಡುವಿನೊಳಗೆ ಅದನ್ನು ಅಧ್ಯಯನ ಮಾಡಿ, ಈ ಹೆಚ್ಚಳವನ್ನು ಮಾಡಬಹುದು ಎಂಬುದು ಮಾತ್ರವಲ್ಲ, ಅದನ್ನು ಹೇಗೆ ಮಾಡಬಹುದು ಎಂದೂ ವಿಸ್ತೃತ ವರದಿ ನೀಡಿದ್ದೇವೆ. ಈ ವರದಿಯನ್ನು ಸರ್ಕಾರ ಈಗ ಜಸ್ಟೀಸ್ ಸುಭಾಷ್ ಆಡಿ, ರತ್ನಪ್ರಭ ಮತ್ತು ಮೈಸೂರಿನ ಒಬ್ಬರು ಪ್ರೊಫೆಸರ್ ಸದಸ್ಯರಾಗಿರುವ ಒಂದು ಸಮಿತಿಗೆ ನಮ್ಮ ಸಮಿತಿಯ ವರದಿಯನ್ನು ಯಾವ ರೀತಿಯಲ್ಲಿ ಅನುಷ್ಟಾನಗೊಳಿಸಬಹುದು ಎಂದು ಕೇಳಿ ರೆಫರ್ ಮಾಡಿದ್ದಾರೆ.

ಆದರೆ, ದುರಾದೃಷ್ಟವಶಾತ್, ಈ ಹೆಚ್ಚಳವನ್ನು ಅನುಷ್ಟಾನಗೊಳಿಸಲು ಕಾನೂನಾತ್ಮಕ ತೊಡಕುಗಳು ಏನಿವೆ? ಅದನ್ನು ಹೀಗೆ ಪರಿಹರಿಸಿಕೊಳ್ಳಬಹುದು ಎಂಬುದನ್ನೂ ನಾವು ನಮ್ಮ ವರದಿಯಲ್ಲಿ ತಿಳಿಸಿದ್ದೇವೆ. ಇಂದಿರಾ ಸ್ವಾಹ್ನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟು ಮೀಸಲಾತಿಯು 50% ಕ್ಕಿಂತ ಹೆಚ್ಚಿರಬಾರದು ಎಂದು ಆದೇಶಿಸಿತ್ತು. ಕರ್ನಾಟಕದಲ್ಲಿ ಈಗಾಗಲೇ 50% ಮೀಸಲಾತಿಯನ್ನು ನೀಡಲಾಗಿದೆ. ನಮ್ಮ ವರದಿ ಪ್ರಕಾರ ಅದನ್ನು ಇನ್ನೂ 6% ಹೆಚ್ಚು ಮಾಡಬೇಕು.

ಅದಕ್ಕೆ ಇಂದಿರಾ ಸಾಹ್ನಿ ಪ್ರಕರಣವನ್ನು ಅಧ್ಯಯನ ಮಾಡಿ, ಆ ಆದೇಶವು ತೊಡಕಾಗುವುದಿಲ್ಲ. ಸುಪ್ರೀಂ ಕೋರ್ಟು ಆದೇಶಿಸಿದಂತೆ exceptional circumstances ನಲ್ಲಿ ಮೀಸಲಾತಿಯು 50% ಅನ್ನು ಮೀರಬಹುದಾಗಿದ್ದು, ದೇಶದ 9 ರಾಜ್ಯಗಳಲ್ಲಿ ಈಗಾಗಲೇ 50% ಕ್ಕೂ ಹೆಚ್ಚಿನ ಮೀಸಲಾತಿಯು ಜಾರಿಯಲ್ಲಿದೆ ಎಂದು ತಿಳಿಸಿದ್ದೇವೆ. ಎರಡನೆಯದಾಗಿ, ಒಕ್ಕೂಟ ಸರ್ಕಾರವು ಈಗಾಗಲೇ ನೀಡಲಾಗಿದ್ದ 49.5% ಮೀಸಲಾತಿಯ ಮಿಗಿಲಾಗಿ 10% ನ್ನು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ (Economically Weaker Sections)  ಗೆ ಕೊಡಲು ಸಾಧ್ಯವಿದ್ದಾಗ ರಾಜ್ಯ ಸರ್ಕಾರಕ್ಕೇಕೆ ಸಾಧ್ಯವಿಲ್ಲ? ಮೂರನೆಯದಾಗಿ, ತಮಿಳುನಾಡು ಸೇರಿದಂತೆ 50% ಗೂ ಹೆಚ್ಚಿನ ಮೀಸಲಾತಿಯು ಜಾರಿಯಲ್ಲಿರುವ ರಾಜ್ಯಗಳ ಪ್ರಕರಣಗಳೂ ಇನ್ನೂ ಸುಪ್ರೀಂ ಕೋರ್ಟಿನಲ್ಲಿ ಪೆಂಡಿಂಗ್ ಉಳಿದಿದೆ. ಅವರು ಗೆದ್ದರೆ  ನಾವೂ ಗೆಲ್ಲುತ್ತೇವೆ. ಅವರು ಸೋತರೆ ನಾವೂ ಸೋಲುತ್ತೇವೆ. ಆದಕಾರಣ, Subject to the verdict of the Su Court, ನಾವೂ ಕೊಡುವುದು ಕೊಡೋಣ. ಕೊಡೋಣ ಎಂದಾಗ ಎಲ್ಲಿಂದ ಎಂಬ ಪ್ರಶ್ನೆ ಬರುತ್ತದೆ. 

ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೇನೆ ಮೀಸಲಾತಿ ಕೇಳುತ್ತಿರುವ ಕಾರಣ ಉಳಿದಿರುವುದು ಹಿಂದುಳಿದ ವರ್ಗ ಹಾಗೂ ಸಾಮಾನ್ಯ ವರ್ಗ. ಇದರಲ್ಲಿ ಹಿಂದುಳಿದ ವರ್ಗದ ಜನಸಂಖ್ಯೆ 52% ಇದ್ದು, ಅವರಿಗಿರುವ ಮೀಸಲಾತಿ 27% ಮಾತ್ರ. ಆದ್ದರಿಂದ, 24% ಜನಸಂಖ್ಯೆ ಹೊಂದಿದ್ದು 50% ಸೀಟು ಹೊಂದುವ ಜನರಲ್ ಕೆಟಗರಿ ಇಂದ ಕೊಡಬೇಕು.  ಇಷ್ಟೆಲ್ಲಾ ವಿವರಿಸಿದ ಮೇಲೂ ಇನ್ನೊಂದು ಸಮಿತಿ ನೇಮಿಸಿದೆ. ಅಂದರೆ, ಇದು ರಾಜಕೀಯ ಇಚ್ಛಾಶಕ್ತಿಯ ಕೊರತೆ. 

ಲಿಂಗಾಯತ ಧರ್ಮ ಒಂದು ಸ್ವತಂತ್ರ ಧರ್ಮವಾಗಿದೆ ಹಾಗಾಗಿ ಈ ಸಮುದಾಯಕ್ಕೆ ಧಾರ್ಮಿಕ ಅಲ್ಪಸಂಖ್ಯಾತ ಮಾನ್ಯತೆ ನೀಡಬಹುದು ಎಂದು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಿರಿ,  ನಂತರದಲ್ಲಿ ಅದು ಏನಾಯಿತು?

ಆ ವರದಿಯಲ್ಲಿ ನಾವು ಏನು ಹೇಳುತ್ತೇವೆ ಎಂದರೆ, ನಮ್ಮ ಸಂವಿಧಾನದಲ್ಲಿ ಪ್ರತ್ಯೇಕ ಧರ್ಮವನ್ನು  ಗುರುತಿಸಿ ಅದನ್ನು recognize ಮಾಡಲಿಕ್ಕೆ ಅವಕಾಶ ಇಲ್ಲ. ಆದರೆ, ಯಾವುದೇ ಒಂದು ಸಮುದಾಯವನ್ನು ಧಾರ್ಮಿಕ ಮತ್ತು ಭಾಷಿಕ ಅಲ್ಪಸಂಖ್ಯಾತರು ಎಂದು ಘೋಷಿಸುವುದಕ್ಕೆ ಇಂಡಿಯನ್ ಮೈನಾರಿಟೀಸ್ ಆಕ್ಟ್ ಅಡಿಯಲ್ಲಿ ಅವಕಾಶವಿದೆ. ಅದರ ಪ್ರಕಾರವೇ ಬೌದ್ಧರು, ಜೈನರು, ಸಿಖ್ಖರು, ಮುಸಲ್ಮಾನರು, ಪಾರ್ಸಿಗಳು ಮತ್ತು ಕ್ರೈಸ್ತರನ್ನು ಧಾರ್ಮಿಕ ಅಲ್ಪಸಂಖ್ಯಾತರೆಂದು ಗುರುತಿಸಿ ಉದ್ಯೋಗ ಮತ್ತು ಶಿಕ್ಷಣ ಸೇರಿದಂತೆ ಕೆಲವು ಕ್ಷೇತ್ರಗಳಲ್ಲಿ ಅವರಿಗೆ ಮೀಸಲಾತಿ, ಮತ್ತಿತರ ಸೌಕರ್ಯ ಒದಗಿಸಲಾಗಿದೆ.

ಈ ಆಕ್ಟಿನ ಅಡಿಯಲ್ಲೇ ಲಿಂಗಾಯತರನ್ನೂ ಧಾರ್ಮಿಕ ಅಲ್ಪಸಂಖ್ಯಾತರು  ಎಂದು ಗುರುತಿಸಬಹುದು. ಅದಕ್ಕೆ ಕಾರಣ, ಒಕ್ಕೂಟ ಸರ್ಕಾರ ಯಾವ ಮಾನದಂಡಗಳನ್ನು ಬಳಸಿ ಜೈನರನ್ನು  ಅಲ್ಪಸಂಖ್ಯಾತರು ಎಂದು ಗುರುತಿಸಿತೋ ಅದಕ್ಕೆ ನೂರಕ್ಕಿಂತಲೂ ಹೆಚ್ಚು ಪಾಲು ಲಿಂಗಾಯತರನ್ನು ಧಾರ್ಮಿಕ ಅಲ್ಪಸಂಖ್ಯಾತರೆಂದು ಗುರುತಿಸಲು ಅರ್ಹವಾಗಿದೆ.ಸಮಿತಿ ನೀಡಿದ ವರದಿಯನ್ನು ರಾಜ್ಯ ಸರ್ಕಾರ ಒಪ್ಪಿತ್ತು. ಅದರ ಪ್ರಕಾರ ಆ ವರದಿಯನ್ನು ಅವರು ಕೇಂದ್ರ ಸರ್ಕಾರಕ್ಕೆ ರವಾನೆ ಮಾಡಿದರು. ಒಕ್ಕೂಟ ಸರ್ಕಾರ ಅದನ್ನು ರಿಜೆಕ್ಟ್ ಮಾಡಿದೆ ಮತ್ತು ಅದು ಕೋರ್ಟಿಗೆ ಹೋಗುವ ಹಂತದಲ್ಲಿದೆ.

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!