ಕೆ.ಎಸ್. ಈಶ್ಚರಪ್ಪ ಹಾವೇರಿ – ಗದಗ ಲೋಕಸಭಾ ಕ್ಷೇತ್ರದಿಂದ ತಮ್ಮ ಪುತ್ರ ಕಾಂತೇಶ್‌ನಿಗೆ ಶತಾಯ ಗತಾಯ ಟಿಕೆಟ್ ಕೊಡಿಸಬೇಕೆಂದು ಇನ್ನಿಲ್ಲದಂತೆ ಪ್ರಯತ್ನಿಸಿದರು. ಈ ಚುನಾವಣೆಯಲ್ಲಿ ತನ್ನ ಮಗನಿಗೆ ಚುನಾವಣಾ ರಾಜಕೀಯಕ್ಕೆ ಎಂಟ್ರಿ ಮಾಡಿಸದಿದ್ದರೆ ನಮ್ಮ ಕುಟುಂಬ ರಾಜಕೀಯದಿಂದಲೇ ಮರೆಯಾಗಿ ಹೋಗಬೇಕಾಗುತ್ತದೆ ಎಂಬ ಭೀತಿಯಿಂದ ಆ ಕಡೆ ಹೈಕಮಾಂಡ್ ಮಟ್ಟದಲ್ಲಿ ಲಾಬಿ ನಡೆಸಿದರೆ, ಈ ಕಡೆ ಯಡಿಯೂರಪ್ಪ ಮನೆ ಬಾಗಿಲಿಗೂ ಹತ್ತಾರು ಸಲ ಹೋಗಿಬಂದರು. ಆದಾಗ್ಯೂ ಟಿಕೆಟ್ ಸೀಗಲಿಲ್ಲ.
ʼಹಾವೇರಿ-ಗದಗ ಲೋಕಸಭಾ ಕ್ಷೇತ್ರದಿಂದ ನನ್ನ ಮಗನಿಗೆ ಟಿಕೆಟ್ ನೀಡಲು ಹೈಕಮಾಂಡ್ ನಿರ್ಣಯಿಸಿತು. ಆದರೆ ಯಡಿಯೂರಪ್ಪ ಒತ್ತಡಕ್ಕೆ ಮಣಿದು ಕೊನೆಗಳಿಗೆಯಲ್ಲಿ ಬಸವರಾಜ್ ಬೊಮ್ಮಾಯಿ ಅವರ ಹೆಸರು ಘೋಷಣೆ ಮಾಡಿದೆ. ಅಷ್ಟಕ್ಕೂ ಬೊಮ್ಮಾಯಿಯವರು ಟಿಕೆಟ್ ಆಕಾಂಕ್ಷಿಯೇ ಆಗಿರಲಿಲ್ಲ. ನನ್ನ ಮಗನಿಗೆ ಟಿಕೆಟ್ ತಪ್ಪಿಸಬೇಕೆಂಬ ಒಂದೇ ಉದ್ದೇಶದಿಂದ ಅವರಿಗೆ ಟಿಕೆಟ್ ಕೊಡಸಿದಲ್ಲದೆ, ಅವರು ಸ್ಪರ್ದಿಸುವಂತೆ ಒತ್ತಡ ಸೃಷ್ಡಿಸಿದ್ದಾರೆʼ ಎಂದು ಅವಲತ್ತುಕೊಂಡು ಯಡಿಯೂರಪ್ಪ ಆಂಡ್ ಕುಟುಂಬದ ವಿರುದ್ಧ ಬಹಿರಂಗವಾಗಿಯೇ ಬಂಡಾಯ ಸಾರಿದ್ದಾರೆ. ಅವರು ಮಾಡುತ್ತಿರುವ ಆರೋಪ ನಿಜವೇ ಅಥವಾ ಸುಳ್ಳೇ ಎಂಬುವುದು ಪಕ್ಷದ ಹೈಕಮಾಂಡ್ ಮತ್ತು ಯಡಿಯೂರಪ್ಪಗೆ ಮಾತ್ರ ಗೊತ್ತು.
ಅದೇನೇ ಇರಲಿ ಪಕ್ಷದ ಇತಿಹಾಸದಲ್ಲೇ ಅತ್ಯಂತ ಬಲಿಷ್ಟವಾಗಿರುವ ಹೈಕಮಾಂಡ್ ಮನಸು ಮಾಡಿದರೆ ಅವರನ್ನು ಐಟಿ, ಇಡಿ ಗುಮ್ಮ ತೋರಿಸಿಯೋ ಅಥವಾ ಪ್ರೀತಿಯಿಂದ ತಿಳಿಹೇಳಿಯೋ ಕ್ಷಣಮಾತ್ರದಲ್ಲಿ ಅವರ ಬಂಡಾಯ ಶಮನ ಮಾಡಬಹುದಿತ್ತು. ಆದರೇಕೋ ಈವರೆಗೂ ಅಂತಹ ಯಾವುದೇ ಪ್ರಯತ್ನಯೂ ನಡೆದಿಲ್ಲ. ಯಾಕೆ ನಡೆದಿಲ್ಲ ಎಂಬುವುದೇ ಇಲ್ಲಿ ಯಕ್ಷ ಪ್ರಶ್ನೆಯಾಗಿದೆ. ಇಲ್ಲೇ ನೂರೆಂಟು ಪ್ರಶ್ನೆಗಳು ಹುಟ್ಟುಹಾಕಿದೆ. ಈ ಪ್ರಶ್ನೆಗಳಿಗೆಲ್ಲಾ ಅವರು ನಾಮಪತ್ರ ಸಲ್ಲಿಸಿ, ಅದನ್ನು ವಾಪಸ್ ಪಡೆಯದೆ ಚುನಾವಣಾ ಅಖಾಡಕ್ಕೆ ಇಳಿದರೆ ಯಡಿಯೂರಪ್ಪನವರ ಪ್ರತಿಕ್ರಿಯೆಗಳು ಮತ್ತು ಬಿಜೆಪಿ ಹೈಕಮಾಂಡ್ ನಡೆಯೇ ಉತ್ತರ ನೀಡುತ್ತವೆ.
ಸ್ವತಃ ಪ್ರಧಾನಿ ಮೋದಿ ಚುನಾವಣಾ ಪ್ರಚಾರಕ್ಕಾಗಿ ಶಿವಮೊಗ್ಗಕ್ಕೆ ಬಂದಾಗ ಅವರನ್ನು ಭೇಟಿಯಾಗದೆ ದೂರವೇ ಉಳಿಯಲು ಹಾಗೂ ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ಬಂಡಾಯ ಸಾರಲು ಈಶ್ವರಪ್ಪ ಮುಂದಡಿ ಇಟ್ಟಿದ್ದು ಸಾಮಾನ್ಯ ಸಂಗತಿಯಲ್ಲ. ಇದಕ್ಕೆ ಎರಡು ರೀತಿಯ ಅಭಿಪ್ರಾಯಗಳು ಬಿಜೆಪಿ ಪಡಸಾಲೆಯಿಂದಲೇ ತೇಲಿ ಬರುತ್ತಿವೆ. ಒಂದು ತನ್ನ ಮಗನಿಗೆ ಟಿಕೆಟ್ ತಪ್ಪಿದ್ದರಿಂದ ಹತಾಶರಾಗಿ ಬಂಡಾಯ ಸಾರಿದ್ದಾರೆಂದು. ಇನ್ನೊಂದು ಬಿಜೆಪಿ ಟಿಕೆಟ್ ವಂಚಿತರು ಮತ್ತು ಆರೆಸ್ಸೆಸಿನ ಒಂದು ಸಣ್ಣ ಗುಂಪು ಯಡಿಯೂರಪ್ಪನನ್ನು ಕಟ್ಟಿ ಹಾಕಲು ಈಶ್ವರಪ್ಪನನ್ನು ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆಂಬ ಮಾತುಗಳೂ ಕೇಳಿ ಬರುತ್ತಿವೆ.
ಹಾಗೇ ನೋಡಿದರೆ ಈಶ್ವರಪ್ಪ ಮಾಸ್ ಲೀಡರ್ ಏನಿಲ್ಲ. ಸ್ವಂತ ಬಲದ ಮೇಲೆ ಒಂದು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಚುನಾವಣೆಯಲ್ಲಿ ಗೆಲ್ಲುವಷ್ಟು ಅಥವಾ ಯಾರನ್ನಾದರೂ ಸೋಲಿಸುವಷ್ಟು ವರ್ಚಸ್ಸಾಗಲಿ, ಶಕ್ತಿಯಾಗಲಿ ಅವರಲ್ಲಿಲ್ಲ. ಬಿಜೆಪಿ ಮತ್ತು ಆರೆಸ್ಸೆಸ್ ಹೊರತಾಗಿ ಈಶ್ವರಪ್ಪನಿಗೆ ನಯಾಪೈಸೆಯ ರಾಜಕೀಯ ಅಸ್ತಿತ್ವವಿಲ್ಲ. ಅದು ಅವರಿಗೂ ಚನ್ನಾಗಿ ಗೊತ್ತು. ಯಡಿಯೂರಪ್ಪ 2013ರ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿಯಿಂದ ಹೊರನಡೆದು ಕೆಜೆಪಿ ಕಟ್ಟಿ,ದರು. ಶಿವಮೊಗ್ಗ ನಗರ ಕ್ಷೇತ್ರದಿಂದ ಉದ್ಯಮಿ ರುದ್ರೇಗೌಡ ಅವರಿಗೆ ಕೆಜೆಪಿಯಿಂದ ಟಿಕೆಟ್ ನೀಡಲಾಗಿತ್ತು. ಆಗ ಬಿಜೆಪಿಯಿಂದ ಸ್ಪರ್ಧಿಸಿದ ಈಶ್ವರಪ್ಪ ಮೂರನೇ ಸ್ಥಾನಕ್ಕೆ ಸರಿದಿದ್ದರು. [ಈ ಚುನಾವಣೆ ನಂತರವೇ ಯಡಿಯೂರಪ್ಪ – ಈಶ್ವರಪ್ಪ ನಡುವೆ ವೈಮನಸ್ಸು ಆರಂಭವಾಗಿದ್ದು]
ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ʼನೀವು ಚುನಾವಣಾ ರಾಜಕೀಯದಿಂದ ನಿವೃತ್ತರಾಗಬೇಕೆಂದು ಪಕ್ಷದ ಹೈಕಮಾಂಡ್ ತಾಕೀತು ಮಾಡಿದಾಗ ತುಟಿಪಿಟಕ್ ಎನ್ನದೆ ಬಾಯಿಮುಚ್ಚಿಕೊಂಡಿದ್ದರು. ಅವರಲ್ಲಿ ಸ್ವಂತ ರಾಜಕೀಯ ಐಡೆಂಟಿಟಿ ಅಥವಾ ಶಕ್ತಿ – ಸಾಮರ್ಥ್ಯವಿದ್ದಿದ್ದರೆ ಹೈಕಮಾಂಡ್‌ಗೆ ಸೆಡ್ಡು ಹೊಡೆದು ಸ್ವತಂತ್ರವಾಗಿ ಪಕ್ಷೇತರ ಅಭ್ಯರ್ಥಿಯಾಗಿ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದರು. ಶಿವಮೋಗ್ಗ ಸಿಟಿಯಲ್ಲಿ ಅವರಿಗೆ ಸ್ವಲ್ಪ ವರ್ಚಸ್ಸು ಇದೆ. ಸ್ಪರ್ಧಿಸಿ ಗೆದ್ದಿದ್ದರೆ ಅವರಿಗೆ ಸ್ವಂತ ರಾಜಕೀಯ ಐಡೆಂಟಿಟಿಯಾದರೂ ಬರುತಿತ್ತು. ಆಗ ಅವರನ್ನು ಪ್ರಾಯಶಃ ಯಡಿಯೂರಪ್ಪ ಹೀಗೆ ಎದುರು ಹಾಕಿಕೊಳ್ಳುವ ಉಸಾಬರಿಗೆ ಹೋಗುತ್ತಿರಲಿಲ್ಲವೇನೋ; ಹೈಕಮಾಂಡ್ ಇವರನ್ನು ಇಷ್ಟೊಂದು ಲಘುವಾಗಿ ಕಾಣುತ್ತಿರಲಿಲ್ಲವೇನೋ?
ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ರಾಜ್ಯಕ್ಕೆ ಮೋದಿ-ಶಾ ಕರ್ನಾಟಕಕ್ಕೆ ಹತ್ತಾರು ಸಲ ಬಂದು, ರಾಜ್ಯದ ಗಲ್ಲಿ -ಗಲ್ಲಿ ಸುತ್ತಾಡಿ ರೋಡ್ ಶೋ ಮಾಡಿದರೂ ಬಿಜೆಪಿ ಹೀನಾಯವಾಗಿ ಸೋತಿತ್ತು. ಆಗೇನಾದರೂ ಬಿಜೆಪಿ ಗೆದ್ದಿದ್ದರೆ ಯಡಿಯೂರಪ್ಪ ಆಂಡ್ ಕುಟುಂಬಕ್ಕೆ ಬಿಜೆಪಿಯಿಂದ ಗೇಟ್ ಪಾಸ್ ನೀಡುತ್ತಿದ್ದರು. ಜತೆಗೆ ʼಐಟಿ, ಇಡಿʼಯಿಂದ ಅವರ ಮನೆಯ ಮೇಲೆ ರೈಡ್ ಆಗುತ್ತಿತ್ತೇನೋ?
ಅಸೆಂಬ್ಲಿಯಲ್ಲಿ ಪಕ್ಷ ಸೋತಿದ್ದರಿಂದ ಈ ಚುನಾವಣೆಯಲ್ಲಿ ಅನಿವಾರ್ಯವಾಗಿ ಒಲ್ಲದ ಮನಸ್ಸಿನಿಂದಲೇ ಬಿಜೆಪಿ ಹೈಕಮಾಂಡ್ ಸಂತೋಷ ಆಂಡ್ ಟೀಂಗೆ ಸೈಡ್ ಲೈನ್ ಮಾಡಿ ಯಡಿಯೂರಪ್ಪಗೆ ಮಣೆ ಹಾಕಿದೆ. ಇದರ ಸಂಪೂರ್ಣ ಲಾಭ ಪಡೆದು ತಮಗೆ ಕಾಡಿದದವರನ್ನು ಮುತುವರ್ಜಿವಹಿಸಿ ಟಿಕೆಟ್ ತಪ್ಪಿಸಿರುವ ಸಾಧ್ಯತೆಯೂ ಇದೆ.