ದ ಪಾಲಿಟಿಕ್

ವರುಣಾದಲ್ಲಿ ಸಿದ್ದರಾಮಯ್ಯನ ಸೋಲಿಸಲು ಬಿಜೆಪಿಗೆ ಜೆಡಿಎಸ್, ಬಿಎಸ್‌ಪಿ ಸಾಥ್?

ದ ಪಾಲಿಟಿಕ್ ಡೆಸ್ಕ್

ದ ಪಾಲಿಟಿಕ್ ಡೆಸ್ಕ್

ಪ್ರಜಾತಂತ್ರ ವ್ಯವಸ್ಥೆಯಲ್ಲಿ ಎಲ್ಲರಿಗೂ ಮತದಾನ ಮಾಡುವ, ಒಂದು ಪಕ್ಷಕ್ಕೆ ಬಹಿರಂಗವಾಗಿ ಬೆಂಬಲ ಸೂಚಿಸುವ ಮತ್ತು ಒಂದು ಪಕ್ಷದ ಸದಸ್ಯನಾಗುವ ಹಕ್ಕು ಹೇಗಿದೆಯೋ ಹಾಗೆಯೇ ಪಕ್ಷಗಳಿಗೂ ಚುನಾವಣೆಯಲ್ಲಿ ಸ್ಪರ್ಧಿಸುವ, ತನ್ನ ಅಭ್ಯರ್ಥಿಗಳನ್ನ ನಿಲ್ಲಿಸುವ ಹಕ್ಕಿದೆ. ಇವು ಸಂವಿಧಾನದತ್ತ ಹಕ್ಕುಗಳು. ಇವುಗಳನ್ನು ಕಿತ್ತುಕೊಳ್ಳವ ಅಧಿಕಾರ ಯಾರಿಗೂ ಇಲ್ಲ. ಕಿತ್ತುಕೊಳ್ಳಲು ಮುಂದಾದರೆ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗುತ್ತದೆ. 

ಆದರೆ ಯಾವುದೇ ಒಂದು ಪಕ್ಷ, ಯಾವುದೋ ಒಂದು ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿಗಳನ್ನು ನಿಲ್ಲಿಸುತ್ತಿರುವುದು ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲೆಂದೋ ಅಥವಾ ಸುಪಾರಿ ಪಡೆದು ಯಾರನ್ನಾದರೂ ಸೋಲಿಸಲೆಂದೋ ಎನ್ನುವುದು ಕೂಡಾ ಮುಖ್ಯವಾಗುತ್ತವೆ. ಆ ಕ್ಷೇತ್ರದಲ್ಲಿ ಪಕ್ಷ ತನ್ನ ಅಭ್ಯರ್ಥಿಯನ್ನು ಹಾಕಿದ್ದೇಕೆ ಎನ್ನುವುದರ ಮೇಲೆ ಎಲ್ಲವೂ ನಿರ್ಧಾರವಾಗುತ್ತದೆ. ಇತ್ತಿಚೆಗೆ ಕೆಲವು ಪಕ್ಷಿಗಳು ‘ಐಟಿ’ , ‘ಇಡಿ’ಗೆ ಹೇದರಿಯೋ ಅಥವಾ ಬಲಾಢ್ಯ ಪಕ್ಷಗಳಿಂದ ಸುಪಾರಿ ಪಡೆದಿಯೋ ನಿರ್ದಿಷ್ಟ ವ್ಯಕ್ತಿಗಳನ್ನು, ನಿರ್ದಿಷ್ಟ ಪಕ್ಷವನ್ನು ಸೋಲಿಸಲೆಂದೇ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದೆ. ಇದಕ್ಕೆ ಸಾಕಷ್ಟು ಉದಾಹರಣೆಗಳು ಕಣ್ಣೆದುರಿಗೆ. 

ಪ್ರಸಕ್ತ ಕಾಂಗ್ರೆಸ್ ಪಕ್ಷದ ಸಂಭಾವ್ಯ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಂಬಿತವಾಗಿರುವ ಸಿದ್ದರಾಮಯ್ಯ ತಮ್ಮ ತವರು ಕ್ಷೇತ್ರವಾದ ವರುಣಾದಿಂದ ಸ್ಪರ್ಧಿಸುತ್ತಿದ್ದಾರೆ. ಅವರನ್ನು ಹೇಗಾದರೂ ಮಾಡಿ ಕಟ್ಟಿಹಾಕಬೇಕೆಂದು ಬಿಜೆಪಿ ತರಾವರಿ ತಂತ್ರಗಳನ್ನು ಹೆಣೆಯುತ್ತಿದೆ. ವರುಣಾದಲ್ಲಿ ಲಿಂಗಾಯತ ಮತಗಳೇ ನಿರ್ಣಾಯಕವಾಗಿರುವುದರಿಂದ ಲಿಂಗಾಯತ ಸಮುದಾಯದ ವಿ. ಸೋಮಣ್ಣನವರನ್ನು ಬಿಜೆಪಿ ಅಲ್ಲಿ ಕಣಕ್ಕಿಳಿಸಿದೆ. ಒಲ್ಲದ ಮನಸ್ಸಿನಿಂದಲೇ ವಿ. ಸೋಮಣ್ಣ ಸಿದ್ರಾಮಯ್ಯನ ವಿರುದ್ಧ ಸ್ಪರ್ಧಿಸುವಂತಾಗಿದೆ. 

ಇದನ್ನೂ ಓದಿ : ಕಲ್ಯಾಣ ಕರ್ನಾಟಕ | ಈ ಸಲ ಮಾದಿಗ ಸಮುದಾಯಕ್ಕೆ ಮಣೆ ಹಾಕದ ಕಾಂಗ್ರೆಸ್. 

ಕಳೆದ ಮೂರು ಅವಧಿಯಿಂದಲೂ ಅಲ್ಲಿ ಕಾಂಗ್ರೆಸ್ ಪಕ್ಷವೇ ಗೆಲ್ಲುತ್ತಿದೆ. ಸಿದ್ರಾಮಯ್ಯ ಎರಡು ಸಲ, ಅವರ ಮಗ ಯತೀಂದ್ರ ಸಿದ್ದರಾಮಯ್ಯ ಒಂದು ಸಲ ಅನಾಯಾಸವಾಗಿ ಗೆದ್ದಿದ್ದಾರೆ. ಬಿಜೆಪಿ ಈ ಸಲ ಅವರನ್ನು ಶತಾಯಗತಾಯ ಸೋಲಿಸಲೇಬೇಕೆಂಬ ಉಮೇದಿನಲ್ಲಿದೆ. ಅಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ನೇರ ಫೈಟ್ ಇದೆ. ಉಳಿದಿರುವ ಪಕ್ಷಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ. ಗೆಲ್ಲಲೆಂದೋ ಅಥವಾ ಯಾರನ್ನಾದರೂ ಸೋಲಿಸಲೆಂದೋ ಜೆಡಿಎಸ್ ಹಾಗೂ ಬಿಎಸ್‌ಪಿ ಪಕ್ಷಗಳು ಕೂಡಾ ವರುಣಾದಲ್ಲಿ ಕಣಕ್ಕೆ ಇಳಿದಿದ್ದಾವೆ. ತಮ್ಮ ಪಕ್ಷಕ್ಕೆ ಯಾವುದೇ ನೆಲೆ – ಬೆಲೆ ಇಲ್ಲದ ಕ್ಷೇತ್ರದಲ್ಲೂ ತಮ್ಮ ಅಭ್ಯರ್ಥಿಗಳನ್ನು ಹಾಕುವುದೇಕೆಂದು ಆ ಪಕ್ಷಗಳೆ ಉತ್ತರಿಸಬೇಕು.

ಜೆಡಿಎಸ್ ಆರಂಭದಲ್ಲಿ ಅಭಿಷೇಕ ಎಂಬ ಅಭ್ಯರ್ಥಿಯ ಹೆಸರು ತಮ್ಮ ಪಕ್ಷದಿಂದ ಘೋಷಣೆ ಮಾಡಿತ್ತು.ಆದರೆ, ಕೊನೆಯ ಗಳಿಗೆಯಲ್ಲಿ ದಲಿತ ಸಮುದಾಯದ ಮಾಜಿ ಶಾಸಕ ಭಾರತಿ ಶಂಕರ್ ಅವರಿಗೆ ಬಿ ಫಾರ್ಮ್ ನೀಡಿ ಕಣಕ್ಕಿಳಿಸಿದೆ. ಹಾಗೆಯೇ ಬಿಎಸ್‌ಪಿಯೂ ಕೊನೆಯ ದಿನ ಪಕ್ಷದ ರಾಜ್ಯಾಧ್ಯಕ್ಷರಾದ ಡಾ. ಎಂ.ಕೃಷ್ಣಮೂರ್ತಿ ಅವರನ್ನು ಕಣ್ಣಕ್ಕಿಳಿಸಿದೆ. ಇವೆರಡೂ ಪಕ್ಷಗಳ ಈ ನಡೆ ಸಿದ್ದರಾಮಯ್ಯನವರನ್ನು ಸ್ವಲ್ಪ ಡಿಸ್ಟರ್ಬ್ ಮಾಡುವ ಸಾಧ್ಯತೆ ಇದೆ. ಏಕೆಂದರೆ ಸಿದ್ದರಾಮಯ್ಯ ಹಾಗೂ ಅವರ ಮಗ ಯತೀಂದ್ರ ಸಿದ್ದರಾಮಯ್ಯ ಇಲ್ಲಿ ಮೂರು ಅವಧಿಯಿಂದಲೂ ಅಹಿಂದ ಸಮುದಾಯದ ಮತಬ್ಯಾಂಕ್ ನಿಂದ ಅನಾಯಾಸವಾಗಿ ಗೆಲ್ಲುತ್ತಾ ಬಂದಿದ್ದರು. ಕ್ಷೇತ್ರದಲ್ಲಿ ದಲಿತ ಸಮುದಾಯದ 43 ಸಾವಿರ ಮತಗಳಿವೆ. ದಲಿತ ಸಮುದಾಯದ ಮತಗಳನ್ನು ಒಡೆಯಲೆಂದೇ ಬಿಎಸ್‌ಪಿ ಮತ್ತು ಜೆಡಿಎಸ್ ಪಕ್ಷಗಳು ಜನರಲ್ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿಯ ವ್ಯಕ್ತಿಗಳನ್ನೇ ತಮ್ಮ ಪಕ್ಷದಿಂದ ಉದ್ದೇಶಪೂರ್ವಕವಾಗಿಯೇ ಕಣಕ್ಕಿಳಿಸಿವೆ ಎಂದು ರಾಜಕೀಯ ಪಡಸಾಲೆಯಲ್ಲಿ ಚರ್ಚೆ ಆಗುತ್ತಿದೆ.  

ವರುಣಾದಲ್ಲಿ ಮೂರು ಪಕ್ಷಗಳು ಸಿದ್ರಾಮಯ್ಯನವರನ್ನು ಸೋಲಿಸಲು ಒಂದಾಗಿ ಏನೋ ಒಳಒಪ್ಪಂದ ಮಾಡಿಕೊಂಡಂತಿವೆ ಎಂದು ಅಲ್ಲಿನ ಮತದಾರರು ಮಾತನಾಡುತ್ತಿದ್ದಾರೆ. ಅಲ್ಲಿನ ಜನರು ಇದನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುವುದರ ಮೇಲೆ ಎಲ್ಲವೂ ನಿರ್ಧಾರವಾಗುತ್ತದೆ. ಬಿಎಸ್‌ಪಿ ಅಭ್ಯರ್ಥಿ ಕೃಷ್ಣಮೂರ್ತಿಯವರು ಬದ್ಧತೆಗೆ ಹೆಸರಾದ ವ್ಯಕ್ತಿ. ಪ್ರಗತಿಪರ ವಲಯದಲ್ಲೂ ಅವರಿಗೆ ಒಳ್ಳೆಯ ಹೆಸರಿದೆ. ಅವರು ಸಿದ್ದರಾಮಯ್ಯನವರನ್ನು ಸೋಲಿಸುವ ಉದ್ದೇಶ ಇಟ್ಟುಕೊಂಡು ನಿಲ್ಲುವ ಸಾಧ್ಯತೆ ತೀರಾ ಕಡಿಮೆ.ಆದರೆ ಪಕ್ಷದ ಒತ್ತಡಕ್ಕೆ ಒಳಗಾಗದ ವ್ಯಕ್ತಿಗಳು ಈಗ ಯಾವ ಪಕ್ಷದಲ್ಲೂ ಸಿಗಲಾರರೇನೋ.  

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!