ದ ಪಾಲಿಟಿಕ್

ದಿಂಗಾಲೇಶ್ವರರ ಹೋಗಳಿಕೆ ಮತ್ತು ಕಾಂಗ್ರೆಸ್ ಅಭ್ಯರ್ಥಿ ಮೇಲೆ ಬೀರುತ್ತಿರುವ ಪರಿಣಾಮಗಳು

ಸಿದ್ದಪ್ಪ ಮೂಲಗೆ

ಸಿದ್ದಪ್ಪ ಮೂಲಗೆ

ದಿಂಗಾಲೇಶ್ವರ ಸ್ವಾಮಿ ಈ ಸಲ ಧಾರವಾಡ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಪಕ್ಷೇತರರಾಗಿ ಸ್ಪರ್ಧಿಸುವೆ ಎಂದು ಮೊನ್ನೆ ಬೆಂಗಳೂರಿನಲ್ಲಿ ಘೋಷಣೆ ಮಾಡಿದ್ದಾಗಿನಿಂದ ಧಾರವಾಡ ಚುನಾವಣಾ ಅಖಾಡ ರಂಗೇರಿದೆ.  ಘೋಷಿಸಿದ ನಂತರ ಮೊದಲ ಬಾರಿಗೆ ಮೊನ್ನೆ [ಗುರುವಾರ] ಹುಬ್ಬಳಿಗೆ ಆಗಮಿಸಿದ ಸ್ವಾಮೀಜಿ ಅವರಿಗೆ ಅವರ ಭಕ್ತ ಪಡೆಯಿಂದ ಅದ್ಧೂರಿ ಸ್ವಾಗತವೂ ದೊರೆಯಿತು. ನೆಹರೂ ಮೈದಾನದಿಂದ ಮೂರು ಸಾವಿರ ಮಠದವರೆಗೆ ತೆರೆದ ಜೀಪಿನಲ್ಲಿ ಅವರನ್ನು  ಮೆರವಣಿಗೆ ಮಾಡಲಾಯಿತು.

ಈ ಸಂದರ್ಭದಲ್ಲಿ ಸ್ವಾಮೀಜಿಯವರು ಆಡಿರುವ ಮಾತುಗಳು ಗಮನಾರ್ಹವಾಗಿವೆ ʼನನ್ನನು ಚುನಾವಣೆಯಿಂದ ಹಿಂದೆ ಸರಿಸುವ ವ್ಯಕ್ತಿ ಭೂಮಿ ಮೇಲೆ ಹುಟ್ಟಿಲ್ಲ…..ʼ ʼಅಖಾಡದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ…..ʼ  ʼಕಾಂಗ್ರೆಸ್‌ನಿಂದ ಸ್ಪರ್ಧಿಸಲು ನನಗೆ ಆಹ್ವಾನ ಬಂದರೆ ಅದನ್ನು ಭಕ್ತರ ಎದುರು ಇಡುತ್ತೇನೆ. ಅವರ ಜೊತೆ ಚರ್ಚಿಸಿದ ನಂತರ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ……ʼ ʼಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್‌ ನನಗೆ ರಾಜಕೀಯವಾಗಿ ಆದರ್ಶ. ಅವರಂತೆ ನಾನೂ ಸಹ ಒಳ್ಳೆಯ ಆಡಳಿತ ನೀಡುವೆ. ಅವರೇ ನಮ್ಮ ಆಡಳಿತ ನೋಡಿ ಕಲಿಯಬೇಕು ಹಾಗೆ ಆಡಳಿತ ನೀಡುವೆ…ʼ ಎಂಬಿತ್ಯಾದಿ ಮಾತುಗಳು ಆಡಿದ್ದಾರೆ.

ದಿಂಗಾಲೇಶ್ವರರಿಗೆ ಕೋಪವಿರುವುದು ಜೋಷಿ ಮೇಲೆ ವಿನಾ ಬಿಜೆಪಿ ಮೇಲಲ್ಲ. ಆರಂಭದಿಂದಲೂ ಅವರು ಕೇವಲ ಜೋಶಿ ವಿರುದ್ಧ ಮಾತ್ರ ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ. ಎಲ್ಲಿಯೂ ಅವರು ಅಪ್ಪಿತಪ್ಪಿ ಬಿಜೆಪಿ ವಿರುದ್ಧವಾಗಲಿ ಹಾಗೂ ಮೋದಿ ವಿರುದ್ಧವಾಗಲಿ ಅಥವಾ ಆರೆಸ್ಸೆಸ್‌ ವಿರುದ್ಧವಾಗಲಿ ಮಾತನಾಡುತ್ತಿಲ್ಲ. ಈ ಮಾತುಗಳೆ ಅವರ ರಾಜಕೀಯ ನಡೆ, ಉದ್ದೇಶ ಮತ್ತು ಸಿದ್ಧಾಂತ ಎಲ್ಲವೂ ಸ್ಪಷ್ಟಪಡಿಸುತ್ತಿದೆ.

ಆದಾಗ್ಯೂ ಕೆಪಿಸಿಸಿ ಅಧ್ಯಕ್ಷರೂ ಆದ ಉಪಮುಖಮಂತ್ರಿ ಡಿಕೆ ಶಿವಕೂಮಾರ್‌ ಅವರು  ಧಾರವಾಡ ಕ್ಷೇತ್ರದಿಂದ ಅವರಿಗೆ ಕಾಂಗ್ರೆಸ್‌ ಟಿಕೆಟ್ ಕೋಡಿಸಲು ಉತ್ಸುಕರಾಗಿದ್ದಾರೆಂಬ ಸುದ್ದಿಗಳು ಬರುತ್ತಿವೆ. ವಿನಯ್‌ ಕುಲಕರ್ಣಿ ಹಾಗೂ ಸಂತೋಷ ಲಾಡ್‌ ಅವರ ಸ್ಪರ್ಧೆಯನ್ನು ಅತ್ಯುತ್ಸಾಹದಿಂದ ಸ್ವಾಗತಿಸುತ್ತಿದ್ದಾರಲ್ಲದೆ ಸ್ವಾಮೀಜಿಯವರಿಗೆ ಪಕ್ಷದ ಹೈಕಮಾಂಡ್‌ ಟಿಕೆಟ್‌ ನೀಡಿದರೆ ನಮ್ಮದೇನು ಅಭ್ಯಂತರವಿಲ್ಲ ಎಂಬರ್ಥತದ ಮಾತುಗಳು ಆಡುತ್ತಿದ್ದಾರೆ.   ಈ ಉತ್ಸುಕತೆ ಕಾಂಗ್ರೆಸ್ ಪಕ್ಷದ ರಾಜಕೀಯ ಆತ್ಮಹತ್ಯಾಕಾರಿ ಆಗಿದೆ. 

ಈಗಾಗಲೇ ಧಾರವಾಡ ಕ್ಷೇತ್ರಕ್ಕೆ ಕುರುಬ ಸಮುದಾಯದ ವಿನೋದ ಅಸೂಟಿ ಅವರಿಗೆ‌ ಪಕ್ಷ ಟಿಕೆಟ್‌ ಘೋಷಣೆ ಮಾಡಿದೆ. ಕುರುಬ ಸಮುದಾಯದಿಂದ ಇವರೊಬ್ಬರಿಗೆ ಟಿಕೆಟ್‌ ನೀಡಲಾಗಿದೆ. ಇವರನ್ನು ಕಣದಿಂದ ಹಿಂದೆ ಸರಿಸಿದರೆ ರಾಜ್ಯದಲ್ಲಿ ಐದನೆಯ ಅತಿ ದೊಡ್ಡ ಸಮುದಾಯವಾದ ಕುರುಬ ಸಮುದಾಯಕ್ಕೆ ಯಾವ ಸಂದೇಶ ಹೋಗುತ್ತದೆ? ಅದು ಅಧಿಕಾರ ಹಂಚಿಕೆಯ ಸೂತ್ರದ ಅನ್ವಯ ಎರಡೂವರೆ ವರ್ಷದ ನಂತರ ಡಿಕೆ ಶಿವಕುಮಾರ್‌ ಅವರಿಗೆ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಅಧಿಕಾರ ಹಸ್ತಾಂತರ ಮಾಡಬೇಕೆಂಬ ಮಾತುಗಳು ವೇಗ ಪಡೆದುಕೊಳ್ಳುತ್ತಿರುವ ಈ ಚುನಾವಣೆ ಹೊತ್ತಿನಲ್ಲಿ.

ಈ ಹಿಂದೆ ರಾಜೀವ ಗಾಂಧಿಯವರು ಅಪ್ರಜಾಸತಾತ್ಮವಾಗಿ ವಿಮಾನ ನಿಲ್ದಾಣದಲ್ಲೇ ಮುಖ್ಯಮಂತ್ರಿ ವಿರೇಂದ್ರ ಪಾಟೀಲ್‌ ಅವರನ್ನು ಅಧಿಕಾರದಿಂದ ಪದಚ್ಯುತಿ ಮಾಡಿದ್ದರ ಫಲವಾಗಿ ಲಿಂಗಾಯತ ಸಮುದಾಯ ಕಾಂಗ್ರೆಸ್‌ ಪಕ್ಷದಿಂದ ದೂರ ಸರದಿದ್ದು ಈವರೆಗೂ ಮತ್ತೇ ಸನಿಹ ಬರುತ್ತಿಲ್ಲ. ಮತ್ತೇ ಅಂಥದ್ದೆ ಅಪ್ರಬುದ್ಧ ನಡೆ ಮರು ಕಳಿಸಿದರೆ ಪಕ್ಷ ಭಾರಿ ಬೆಲೆ ತೆತ್ತಬೇಕಾಗುತ್ತದೆ.

ಇದನ್ನೂ ಓದಿ : ದಿಂಗಾಲೇಶ್ವರ ಸ್ವಾಮೀಜಿ ಮತ್ತು ಜೋಶಿ ಮಧ್ಯ ನಡೆಯುತ್ತಿರುವುದು ʼಶುದ್ಧ ರಾಜಕೀಯʼ

ಮೇಲಾಗಿ ವಿನೋದ ಅಸೂಟಿ ಅತ್ಯಂತ ಪ್ರಬಲ ಅಭ್ಯರ್ಥಿ. ಅವರ ಪರ ಕ್ಷೇತ್ರದಾದಂತ್ಯ ದಿನದಿಂದ ದಿನಕ್ಕೆ ಒಂದು ಅಲೆ ಸೃಷ್ಟಿಯಾಗುತ್ತಿದೆ. ಕ್ಷೇತ್ರದಲ್ಲಿ 2.5 ಲಕ್ಷ ಕುರುಬ ಸಮುದಾಯದ ಮತಗಳಿವೆ. ಆದಾಗ್ಯೂ ಅಭ್ಯರ್ಥಿ ಬದಲಾಯಿಸುವ ಮಾತುಗಳು ಕೇಳಿ ಬರುತ್ತಿರುವುದು ಅದನ್ನು ಅಪ್ರಬುದ್ಧ ನಡೆ ಎನ್ನದೆ ಇನ್ನೇನು ಎನ್ನಲಾದಿತು. ತಮ್ಮ ಅಭ್ಯರ್ಥಿಯ ಗೆಲುವಿಗಾಗಿ ಶ್ರಮಿಸಬೇಕಾದವರು ಸ್ವಾಮೀಜಿಯವರನ್ನು ಬಹುಪರಾಕ್‌ ಹೇಳುವ ಮೂಲಕ ತಮ್ಮ ಪಕ್ಷದ ಕ್ಯಾಂಡಿಡೇಟ್ ಡಮ್ಮಿ ಎಂದು ತಾವೇ ಪರೋಕ್ಷವಾಗಿ ಸಾರುತ್ತಿದ್ದಾರೆ. ಇದು ಜಾಣ್ಮೆಯ ನಡೆಯಲ್ಲ. ಇದರಿಂದ ಮತದಾರರ ಮೇಲೆ, ತಮ್ಮ ಪಕ್ಷದ ಕಾರ್ಯಕರ್ತರ ಮೇಲೆ‌, ಪಕ್ಷದ ಕ್ಯಾಂಡಿಡೇಟ್ ಮತ್ತು ಚುನಾವಣೆ ಮೇಲೆ ಒಳ್ಳೆಯ ಪರಿಣಾಮವಂತೂ ಬೀರುವುದಿಲ್ಲ.

ಈ ಹಿಂದೆ ನಾಲ್ಕು ಬಾರಿ ಲಿಂಗಾಯತ ಸಮುದಾಯಕ್ಕೆ ಕಾಂಗ್ರೆಸ್‌ ಪಕ್ಷ ಮಣೆ ಹಾಕಿದರೂ ಅನಾಯಾಸವಾಗಿ ಅದು ಭಾರಿ ಬಹುಮತದಿಂದ ಜೋಶಿ ಗೆದ್ದಿದ್ದಾರೆ. ಇದೇ ಕ್ಷೇತ್ರದಿಂದ ಕನ್ನಡ ನಾಡು ಪಕ್ಷದಿಂದ ಮಾತೆ ಮಹಾದೇವಿ ಅವರು 2004 ರಲ್ಲಿ ಸ್ಪರ್ಧಿಸಿ ಕೇವಲ 25 ಸಾವಿರ ಮತಗಳನ್ನು ಪಡೆದಿದ್ದರು. ಈಗ ದಿಂಗಾಲೇಶ್ವರರು ಪಕ್ಷೇತರರಾಗಿ ಸ್ಪರ್ಧಿಸಿದರೆ ಅವರ ವಿಷಯದಲ್ಲೂ ಮತ್ತದೇ ಫಲಿತಾಂಶ ಮರುಕಳಿಸುವ ಸಾದ್ಯತೆ ಹೆಚ್ಚಾಗಿವೆ.

ಕಾಂಗ್ರೆಸ್‌ ಟಿಕೆಟ್‌ ಬದಲಾಯಿಸಿ ನನಗೆ ಬಿ ಫಾರಂ ನೀಡುತ್ತದೆ ಎಂಬ ವಿಶ್ವಾಸದ ಮೇಲೆ ಅವರು ತುಸು ಜೋರಾಗಿಯೇ ಅವಾಸ್ತವಿಕ ಹಾಗೂ ಅತಿರೇಕದ ಮಾತಗಳು ಆಡುತ್ತಿದ್ದಾರೆ. ತಲೆಯ ಮೇಲೆ ಚುನಾವಣೆಯಿದೆ ಸಂಪನ್ಮೂಲ ಕ್ರೋಡೀಕರಿಸಬೇಕು, ಸಾವಿರ ಬೂತ್‌ಗಳಲ್ಲಿ ಏಜೆಂಟ್‌ರನ್ನು ಹುಡುಕಬೇಕು. ತನ್ನ ಪರವಾಗಿ ಪ್ರಚಾರ ಮಾಡಲು ಸಾವಿರಾರು ಕಾರ್ಯಕರ್ತರ ಪಡೆಬೇಕು, ಸ್ವತಃ ಸ್ವಾಮೀಜಿ ಸಾವಿರಾರು ಹಳ್ಳಿಗಳಿಗೆ ತೆರಳಿ ಕ್ಷೇತ್ರದಲ್ಲಿ ಜೋಶಿ ವಿರುದ್ಧ ಅಲೆ ಎಬ್ಬಿಸಬೇಕು. ಮಾತನಾಡಿದಷ್ಟು, ಪ್ರವಚನ ಮಾಡಿದಷ್ಟು ಸುಲಭವಲ್ಲ ಪಕ್ಷೇತರರಾಗಿ ಚುನಾವಣೆ ಎದುರಿಸುವುದು. ರಾಜಕೀಯ ಸುಳಿಗಳು, ಒಳ ಸುಳಿಗಳು, ಚಕ್ರ ಸುಳಿಗಳು ಏನೇನು ಅರಿಯದ ಸ್ವಾಮೀಜಿ ಚುನಾವಣೆಯಲ್ಲಿ ಸ್ಪರ್ಧಿಸಿ, ಗೆಲ್ಲುವುದು ಅವರ ಅಬ್ಬರದ ಭಾಷಣದಷ್ಟು ಸುಲಭವಲ್ಲ.

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!