ದ ಪಾಲಿಟಿಕ್

ಡಿಸೆಂಬರ್ ಆರು,ದೇಶಕ್ಕೆ ನೋವು, ವಿಷಾಧ, ಸಂಕಟ ಹಾಗೂ ಕರಾಳದಿನ..!!

ದ ಪಾಲಿಟಿಕ್ ಡೆಸ್ಕ್

ದ ಪಾಲಿಟಿಕ್ ಡೆಸ್ಕ್

ಇಂಡಿಯಾದ ವಿಚಾರದಲ್ಲಿ ಡಿಸೆಂಬರ್ ಆರು ಯಾವಾಗಲೂ ನೆನಪಿನಲ್ಲಿ ಇಡಬೇಕಾದ ದಿನವಾಗಿದೆ. 1956 ರ ಡಿಸೆಂಬರ್ ಆರರಂದು ಡಾ ಅಂಬೇಡ್ಕರ್ ರು ತಮ್ಮ ಸಂಘರ್ಷಮಯ ಜೀವನದ ಅಂತಿಮಯಾತ್ರೆ ಮುಗಿಸಿದರು. ಈ ಸುದ್ಧಿ ತಿಳಿದು ಅವರ ಅಂತಿಮ ದರುಶನಕ್ಕಾಗಿ ಲಕ್ಷಾಂತರ ಜನರು ಮುಂಬೈಯ ಅವರ ಮನೆಯ ಸುತ್ತ ಮುತ್ತ ನೆರೆದಿದ್ದರು. ತಡೆಯಲಾಗದ ದುಃಖಗಳಿಂದ ಕುಸಿದು ಹೋಗಿದ್ದರು. ಈ ದೇಶದ ಅತ್ಯಂತ ಶೋಷಣೆಗೊಳಗಾದ ಅಸ್ಪೃಷ್ಯರು ಇನ್ನಿತರ ದಲಿತ ದಮನಿತ ಬಡವರ ಪರವಾಗಿ ಚಿಂತಿಸಿ ಹೋರಾಡಿ, ವಿಚಾರ ಮಂಡಿಸಿ ದಣಿದ ಆ ಜೀವ ತನ್ನ ಕೊನೆಯ ಉಸಿರೆಳೆದು ಮಲಗಿದ್ದನ್ನು ಕಲ್ಪಸಲು ಕೂಡ ಅವರಿಗೆ ಸಾಧ್ಯವಾಗಿರಲಿಲ್ಲ. ಅದು ಅತೀವ ಸಂಕಟ, ನೋವು, ಭಾವೋದ್ವೇಗಗಳ ರಭಸದ ಗಳಿಗೆಯಾಗಿತ್ತು. ದನಿಯಿಲ್ಲದವರ ದನಿಯಾಗಿ, ಗುಲಾಮಿತನಕ್ಕೆ ಸಿಕ್ಕವರ ಅಭಿಮಾನದ ಸಂಕೇತವಾಗಿ, ಕ್ರೂರಾತಿಕ್ರೂರ ಜಾತಿ ಶೋಷಣೆಯಿಂದ ವಿಮೋಚನೆಯಾಗಬಯಸಿದವರಿಗೆ ಒಂದು ವೈಚಾರಿಕ ದಾರಿದೀಪವಾಗಿದ್ದ ಡಾ ಬೀಮರಾವ್ ರಾಮ್ ಜಿ ಅಂಬೇಡ್ಕರ್ ತಮ್ಮ ಭೌತಿಕ ಜೀವನಕ್ಕೆ ಅಂದು ವಿದಾಯ ಹೇಳಿದ್ದರು. ಆದರೆ ಅವರು ತಮ್ಮ ಹೋರಾಟ ಹಾಗೂ ಚಿಂತನೆಗಳಿಂದ ಈಗಲೂ ದಲಿತ ದಮನಿತ ಜನಸಾಮಾನ್ಯರ ಮದ್ಯೆ ಜೀವಂತವಾಗಿದ್ದಾರೆ.

ಅಂದಿನಿಂದಲೂ ಇಂಡಿಯಾದ ದಲಿತ ದಮನಿತರು ಪ್ರತೀ ವರ್ಷ ಡಿಸೆಂಬರ್ ಆರನ್ನು ಮಹಾಪರಿನಿರ್ವಾಣ ದಿನವನ್ನಾಗಿ ಆಚರಿಸುತ್ತಾ ಬಂದಿದ್ದರು. ಡಿಸೆಂಬರ್ ಆರರಂದು ಮುಂಬೈಯಲ್ಲಿರುವ ಅಂಬೇಡ್ಕರ್ ರ ಸ್ಮಾರಕವಾದ ಚೈತ್ಯಭೂಮಿಗೆ ಲಕ್ಷಾಂತರ ಜನರು ಭೇಟಿ ನೀಡುತ್ತಾರೆ. ಈ ಬಾರಿ ಕೋವಿದ್ ಕಾರಣವೊಡ್ಡಿ ಜನರು ಚೈತ್ಯಭೂಮಿಯಲ್ಲಿ  ನೆರೆಯುವುದನ್ನು ತಡೆಯುವ ಕಾರ್ಯ ಶುರುವಾಗಿದೆ. ಈಗಾಗಲೇ ಮಹಾರಾಷ್ಟ್ರ ಸರ್ಕಾರ ಈ ನಿಟ್ಟಿನಲ್ಲಿ ಪ್ರಕಟಣೆ ಹೊರಡಿಸಿದೆ.

ಅಂಬೇಡ್ಕರ್ ಬ್ರಿಟೀಷರ ನೇರ ವಸಾಹತು ಆಡಳಿತ ಕೊನೆಯಾದ ನಂತರ ರಚಿತವಾದ ಸಂವಿಧಾನ ರಚನಾ ಸಭೆಯ ಭಾಗವಾದರು. ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿ ಸಂವಿಧಾನ ಕರಡು ರಚನೆಯಲ್ಲಿ ಪ್ರಧಾನ ಪಾತ್ರ ವಹಿಸಿದರು. ಸಂವಿಧಾನದಲ್ಲಿ ದಲಿತ, ದಮನಿತ, ಮಹಿಳಾ ಪರ ಕಲಮುಗಳನ್ನು ಸೇರ್ಪಡೆಗೊಳಿಸಲು ನಿರಂತರವಾಗಿ ಶ್ರಮಿಸಿದರು. ಅದರ ಪರಿಣಾಮವಾಗಿ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ವರ್ಗದ ಒಂದಷ್ಟು ಜನರಿಗೆ ಕೆಲವು ಸವಲತ್ತುಗಳು ಸಿಗುವಂತಾಯಿತು. ಅದರಿಂದಾಗಿ ದಲಿತ ದಮನಿತರಲ್ಲಿ ಒಂದು ವಿದ್ಯಾವಂತ ಸಮೂಹ ಹುಟ್ಟಿ ಬೆಳೆದು ಮದ್ಯಮ ವರ್ಗ ಬೆಳೆಯಿತು. ಶ್ರೀಮಂತ ವರ್ಗದ ಒಂದು ಸ್ತರವೂ ಹುಟ್ಟಿತು. ಸರ್ಕಾರಗಳು ದಲಿತ ದಮನಿತರ ವಿಚಾರದಲ್ಲಿ ಒಂದಷ್ಟು ಕಾರ್ಯಗಳನ್ನು ಮಾಡಲೇ ಬೇಕಾದ ಅನಿವಾರ್ಯತೆ ನಿರ್ಮಾಣವಾಯಿತು. ಆಯವ್ಯಯದಲ್ಲೂ ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ವರ್ಗಗಳಿಗೆ ನಿಗದಿತ ಪ್ರಮಾಣದ ಹಣಕಾಸು ತೆಗೆದಿರಿಸಲೇಬೇಕಾಯಿತು. ಶಿಕ್ಷಣ, ಉದ್ಯೋಗ, ಇತರ ಸವಲತ್ತುಗಳಲ್ಲಿ ಒಂದಷ್ಟಾದರೂ ದಲಿತ ದಮನಿತ ಬಡಜನರಿಗೆ ದೊರೆಯುವ ಪರಿಸ್ಥಿತಿ ನಿರ್ಮಾಣವಾಯಿತು. ದಲಿತ ದಮನಿತರು ಸಂಘಟಿತವಾಗಿ ಆಳುವ ಜನಗಳು ಮಾನ್ಯ ಮಾಡಲೇಬೇಕಾದ ಒಂದು ಶಕ್ತಿಯಾದರು.

ಅಂಬೇಡ್ಕರ್ ದಲಿತ ದಮನಿತ ಸಮೂಹಕ್ಕೆ ಸ್ವಾಭಿಮಾನ, ಗೌರವ, ಹಕ್ಕು ಪ್ರತಿಪಾದನಾ ಗುಣ ಬೆಳೆಸಿದ ಪ್ರಮುಖರಲ್ಲಿ ಒಬ್ಬರಾಗಿ ಅವರ ಕಾಲದಲ್ಲಿ ಪ್ರಧಾನ ಪಾತ್ರ ವಹಿಸಿದರು. ಅಂಬೇಡ್ಕರ್ ತಮ್ಮ ಕೆಲಸ ಕಾರ್ಯಗಳಿಂದ ಮತ್ತು ಪ್ರತಿಪಾದಿಸಿದ ವಿಚಾರಗಳಿಂದ ದೇಶದ ಮಟ್ಟದಲ್ಲಿ ದಲಿತ ದಮನಿತರ ಸ್ವಾಭಿಮಾನ, ಅಸ್ಮಿತೆ, ಹಕ್ಕು ಪ್ರತಿಪಾದನೆಯ ಸಂಕೇತವಾಗಿ ಮಾನ್ಯರಾದರು. ಬಹಳ ಮುಖ್ಯವಾದ ವಿಚಾರವೆಂದರೆ ಅಂಬೇಡ್ಕರ್ ಹೋರಾಟ ಹಾಗೂ ವಿಚಾರಗಳಿಂದ ದಲಿತದಮನಿತ ಸಮೂಹದಲ್ಲಿ ದೊಡ್ಡ ಮಟ್ಟದ ಜಾಗೃತಿ ಮೂಡಿತು. ದಮನಶೋಷಣೆಗಳ ವಿರುದ್ಧ ಹೋರಾಡುವ ಮಾನಸಿಕ ಸ್ಥೈರ್ಯವನ್ನು ದಲಿತದಮನಿತರಲ್ಲಿ ಹೆಚ್ಚಿಸಿತು.

ಆದರೆ ಆಳುವ ಶಕ್ತಿಗಳಿಗೆ ದಲಿತದಮನಿತ ಸಮೂಹದಲ್ಲಿ ಮೂಡಿದ ಜಾಗೃತಿ ಹಾಗೂ ಹುಟ್ಟಿದ ಸಂಘಟಿತ ಶಕ್ತಿ ಅತ್ಯಂತ ದಿಗಿಲಿನ ವಿಚಾರವಾಗಿಬಿಟ್ಟವು. ಹಾಗಾಗಿ ಮೊದಲಿನಿಂದಲೂ ಅದನ್ನು ತಡೆಯುವ, ದಿಕ್ಕು ತಪ್ಪಿಸುವ, ಬಲಹೀನಗೊಳಿಸುವ ಕಾರ್ಯಗಳನ್ನು ಮಾಡುತ್ತಲೇ ಬಂದರು. ಅದು ಸಂವಿಧಾನ ಅಂಗೀಕಾರಗೊಳ್ಳುವ ಪ್ರಕ್ರಿಯೆಯಿಂದಲೇ ಪ್ರಾರಂಭವಾಯಿತೆನ್ನಬಹುದು. ಸಂವಿಧಾನವನ್ನು ತಮ್ಮಹಿತಾಸಕ್ತಿಗಳಿಗೆ ತಕ್ಕಂತೆ ರೂಪಿಸಿಕೊಳ್ಳಲು ಸಾವಿರಾರು ತಿದ್ದುಪಡಿಗಳು ಬಂದವು. ಅವುಗಳಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ತಿದ್ದುಪಡಿಗಳಿಗೆ ಅಂಗೀಕಾರ ನೀಡಲಾಯಿತು.ಅದಕ್ಕೆ ಪ್ರಧಾನ ಕಾರಣ ಸಂವಿಧಾನ ರಚನಾ ಸಭೆಯ ಸದಸ್ಯರುಗಳಲ್ಲಿ ಬಹುತೇಕರು ಶ್ರೀಮಂತ ಭೂಮಾಲಿಕತ್ವದ ಹಿನ್ನೆಲೆಯವರು, ರಾಜಮನೆತನಗಳ ಹಿನ್ನೆಲೆಯವರಾಗಿದ್ದರು. ಅದರಲ್ಲೂ ಕಾಂಗ್ರೆಸ್ ಸದಸ್ಯರುಗಳೇ ಹೆಚ್ಚಿನವರಾಗಿದ್ದರು.  ಅಂಬೇಡ್ಕರ್ ರಂತಹ ಕೆಲವೇ ಜನ ಮಾತ್ರ ದಲಿತ ದಮನಿತ ಜನಸಾಮಾನ್ಯ ಹಿನ್ನೆಲೆಯಿಂದ ಬಂದವರಾಗಿದ್ದರು.

ಅಂಬೇಡ್ಕರ್ ಮೂಕನಾಯಕ ಎಂಬ ಪತ್ರಿಕೆ, ಬಹಿಷ್ಕೃಥ ಹಿತಕಾರಿಣಿ ಸಭಾ, ಸ್ವತಂತ್ರ ಕಾರ್ಮಿಕ ಪಕ್ಷ, ಶೆಡ್ಯೂಲ್ಡ್ ಕ್ಯಾಸ್ಟ್ಸ್ ಫಡರೇಷನ್, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದಂತಹ ಸಂಘಟನೆಗಳನ್ನು ದಲಿತ ದಮನಿತರು, ಹಿಂದುಳಿದವರು ಹಾಗೂ ಕಾರ್ಮಿಕರ ಪರವಾಗಿ ಸಂಘಟಿಸಿದ್ದರು. ಮಹಿಳಾ ಹಾಗೂ ಕಾರ್ಮಿಕ ಪರವಾದ ಹಲವು ಕಾನೂನುಗಳನ್ನು ರೂಪಿಸುವಲ್ಲಿ, ತಿದ್ದುಪಡಿ ತರುವಲ್ಲಿ ಪ್ರಧಾನವಾಗಿ ಶ್ರಮಿಸಿದ್ದರು.

ದೇಶಕ್ಕೆ ನೈಜ ಸ್ವಾತಂತ್ರ್ಯ ಹಾಗೂ ಪ್ರಜಾ ಪ್ರಭುತ್ವ ಲಭಿಸುವುದು ದಲಿತ ದಮನಿತರಿಗೆ ಆರ್ಥಿಕ ಹಾಗೂ ಸಾಮಾಜಿಕ ಸಮಾನತೆ ಖಾತ್ರಿಯಾದಾಗ ಮಾತ್ರ ಎಂಬುದನ್ನು ಅಂಬೇಡ್ಕರರು ಗ್ರಹಿಸಿದ್ದರು. ಅದನ್ನು ಅವರು ಹಲವಾರು ಸಂಧರ್ಭದಲ್ಲಿ ಪ್ರಸ್ತಾಪಿಸಿದ್ದಾರೆ. ಅಂಗೀಕಾರಗೊಂಡು 1950ರಿಂದಲೇ ಚಾಲ್ತಿಗೆ ಬಂದ ಸಂವಿಧಾನದಿಂದ ದಲಿತದಮನಿತರಿಗೆ ಸ್ವಾತಂತ್ರ್ಯ ಸಮಾನತೆ ಸಿಕ್ಕಿ ಬಿಡುತ್ತದೆ ಎಂಬ ಕಲ್ಪನೆ ಅಂಬೇಡ್ಕರದಾಗಿರಲಿಲ್ಲ. ಅಂಗೀಕಾರಗೊಂಡ ಸಂವಿಧಾನದ ಬಗ್ಗೆ ಅವರಿಗೆ ಸಮಾಧಾನವೂ ಇರಲಿಲ್ಲ. ಅದು ಈ ದೇಶದ ಜನಸಾಮಾನ್ಯರ ಹಿತಕ್ಕನುಸಾರವಾಗಿಯೇ ಅಂತಿಮಗೊಂಡಿದೆ ಎಂಬ ಅಭಿಪ್ರಾಯ ಅಂಬೇಡ್ಕರದಾಗಿರಲಿಲ್ಲ. ಪ್ರಜಾಪ್ರಭುತ್ವವನ್ನು ಮೇಲಿನಿಂದ ಕಟ್ಟಲು ಸಾಧ್ಯವಿಲ್ಲ ಎಂಬ ಅರಿವು ಅಂಬೇಡ್ಕರದಾಗಿತ್ತು. ಪ್ರಜಾಪ್ರಭುತ್ವವು ನೈಜವಾಗಿ ಜನಸಾಮಾನ್ಯರಿಗೆ ದೊರೆಯಬೇಕಾದರೆ ಅದನ್ನು ಸಮಾಜದ ಬುಡಮಟ್ಟದಿಂದ ಕಟ್ಟಿಕೊಂಡು ಬರಬೇಕಾಗುತ್ತದೆ ಎಂಬ ನಿಲುವು ಅಂಬೇಡ್ಕರದಾಗಿತ್ತು. ಚುನಾವಣೆಯಲ್ಲಿ ಓಟು ನೀಡುವ ಹಕ್ಕು ಸಿಕ್ಕರೂ ಅದು ಸಮಾಜದ ಅಡಿಪಾಯದ ಜನಸಾಮಾನ್ಯರಾದ ದಲಿತ ದಮನಿತ ಬಡವರಿಗೆ ಆರ್ಥಿಕ ಸಾಮಾಜಿಕ ಹಾಗೂ ರಾಜಕೀಯ ಸಮಾನತೆ ಖಾತ್ರಿಯಾಗಿ ದೊರೆಯುವವರೆಗೂ ವ್ಯವಸ್ಥೆಯೊಂದು ಪ್ರಜಾಪ್ರಭುತ್ವ ವ್ಯವಸ್ಥೆಯಾಗಿ ಬೆಳೆಯಲಾಗದು ಎಂಬ ಸ್ಪಷ್ಟತೆ ಅಂಬೇಡ್ಕರರಿಗಿತ್ತು.

ಆದರೆ ಇಂಡಿಯಾದ ಆಳುವ ವರ್ಗ ಅಂಬೇಡ್ಕರ್ ರನ್ನು ಸಂವಿಧಾನಕ್ಕೆ ಪರ್ಯಾಯವೆಂಬಂತೆ ಬಿಂಬಿಸಿ ದಲಿತದಮನಿತರನ್ನು ಸಂವಿಧಾನವೇ ತಮ್ಮ ವಿಮೋಚನೆಯ ಅಸ್ತ್ರ ಎಂಬಂತಹ ಭ್ರಮೆಯಡಿ ಹೂತಿಡಲು ಶ್ರಮಿಸುತ್ತಾ ಬಂದಿತು. ದಲಿತ ದಮನಿತರಲ್ಲಿನ ಅನುಕೂಲಸ್ಥರು, ರಾಜಕೀಯ ಪುಡಾರಿಗಳು ಆಳುವ ಶಕ್ತಿಗಳ ಈ ಕುತಂತ್ರಕ್ಕೆ ಕೈಜೊಡಿಸಿದರು. ಹನ್ನೆರಡನೇ ಶತಮಾನದ ವಚನ ಚಳವಳಿಯಿಂದ ಹಿಡಿದು ಅಯ್ಯನ್ ಕಾಳಿ, ಜ್ಯೋತಿಭಾಫುಲೆ, ಸಾವಿತ್ರಿಭಾಯಿ ಫುಲೆ, ಶಾಹು ಮಹಾರಾಜ್, ಬಿರ್ಸಾಮುಂಡ, ಹೈದರಾಲಿ, ಟಿಪ್ಪುಸುಲ್ತಾನ್, ನಾರಾಯಣ ಗುರು, ಡಾ. ಅಂಬೇಡ್ಕರ್, ಪೆರಿಯಾರ್ ರಾಮಸ್ವಾಮಿ ನಾಯಕರ್, ಕುದ್ಮುಲ್ ರಂಗರಾವ್ ಸೇರಿದಂತೆ ಅಸಂಖ್ಯಾತ ಚಳವಳಿಗಳು ಹಾಗೂ ಜನರ ಹೋರಾಟ ಹಾಗೂ ತ್ಯಾಗ ಬಲಿದಾನಗಳ ಫಲ ಉಂಡು ದಲಿತದಮನಿತರಲ್ಲಿ ಶಿಕ್ಷಿತರಾದ ಮದ್ಯಮವರ್ಗವೊಂದು ಬೆಳೆದು ಬಂದಿತ್ತು. ಈ ಮಧ್ಯಮ ವರ್ಗದ ಸ್ತರವನ್ನೇ ಆಳುವ ವರ್ಗಗಳು ತಮ್ಮ ಹಿತಾಸಕ್ತಿಗಳ ರಕ್ಷಣೆಗಾಗಿ ದಾಳಗಳನ್ನಾಗಿ ಬಳಸಿಕೊಳ್ಳತೊಡಗಿತು. ಈ ವರ್ಗವನ್ನು ಬಳಸಿಕೊಂಡು ದಲಿತದಮನಿತರು ಸಂಘಟಿತರಾಗುವುದನ್ನು ತಡೆಯುವ, ಅವರ ಮೂಲಭೂತ ಸಮಸ್ಯೆಗಳಿಂದ ಅವರನ್ನು ದಿಕ್ಕು ತಪ್ಪಿಸುವ ಕಾರ್ಯವನ್ನು ಆಳುವ ಮೇಲ್ಜಾತಿ ಮೇಲ್ವರ್ಗದ ಶಕ್ತಿಗಳು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನಿರಂತರವಾಗಿ ಮಾಡುತ್ತಲೇ ಬಂದರು.

ಅಂಬೇಡ್ಕರ್ ರಲ್ಲಿ ಅವರ ಜೀವನದ ಕೊನೆಯ ಭಾಗದಲ್ಲಿ ಸಾಕಷ್ಟು ಅಸಮಾಧಾನ ಮಡುಗಟ್ಟಿತ್ತು. ಹಿಂದಿನವರ ಹೋರಾಟದ ಫಲಗಳನ್ನು, ಮೀಸಲಾತಿ ಇತ್ಯಾದಿ ಸೌಲಭ್ಯ ಅನುಭವಿಸಿ ಅನುಕೂಲಸ್ಥರಾದ ದಲಿತದಮನಿತ ಹಿನ್ನೆಲೆಯವರು ಸಮಾಜ ಹಾಗೂ ಸಮುದಾಯದ ಬಗ್ಗೆ ಅಸಡ್ಡೆ ಬೆಳೆಸಿಕೊಂಡು ಕೇವಲ ತಮ್ಮ ಸ್ವಾರ್ಥ ಮಾತ್ರ ನೋಡಿಕೊಳ್ಳುವ ಮಟ್ಟ ತಲುಪಿದ್ದನ್ನು ಅಂಬೇಡ್ಕರ್ ತಮ್ಮ ಜೀವಿತ ಕಾಲದಲ್ಲೇ ನೋಡಿದ್ದರು. ಹೋರಾಟವನ್ನು ಮುನ್ನೆಡೆಸುವ ಪ್ರಾಮಾಣಿಕ ನಾಯಕತ್ವದ ಕೊರತೆ ಅಂಬೇಡ್ಕರರನ್ನು ಕಾಡಿತ್ತು. ವೃದ್ದಾಪ್ಯದ ಬಲಹೀನತೆಯಿಂದಾಗಿ ತಮ್ಮಿಂದ ಹೆಚ್ಚಿನದನ್ನು ಮಾಡಲು ಸಾಧ್ಯವಾಗುತ್ತಿಲ್ಲವಲ್ಲ ಎಂಬ ಕೊರಗೂ ಇತ್ತು.

1956ರ ಅವಧಿಯಲ್ಲಿ ಅಂಬೇಡ್ಕರರು ಮಾತನಾಡುತ್ತಾ “ಬಹಳಷ್ಟು ಜನರು ನಮ್ಮ ಸಂವಿಧಾನದ ಬಗ್ಗೆ ಅತೀ ಉತ್ಸಾಹಿಗಳಾಗಿ ಕಾಣುತ್ತಾರೆ. ನನ್ನದಂತೂ ಹಾಗಲ್ಲ. ಸದ್ಯದ ಭಾರತೀಯ ಸಂವಿಧಾನವನ್ನು ಕಿತ್ತೆಸೆಯಬೇಕೆನ್ನುವ, ಕನಿಷ್ಠ ಮಟ್ಟಿಗೆ ಅದನ್ನು ಸಂಪೂರ್ಣವಾಗಿ ಸರಿಪಡಿಸಲು ಹೆಣಗುವ ಜನರನ್ನು ಸೇರಿಕೊಳ್ಳಲು ನಾನು ಸಿಧ್ಧ” ಎಂದು ಸ್ವತಹ ಹೇಳಿದ್ದರು. ಅಂಬೇಡ್ಕರರ ಈ ಮಾತು ಇಂಡಿಯಾದಲ್ಲಿ ಪ್ರಜಾ ಪ್ರಭುತ್ವದ ಯಶಸ್ಸಿಗೆ ಇರುವ ಸವಾಲುಗಳ ಕುರಿತಾದ ಮಾತಿನ ಭಾಗವಾಗಿತ್ತು ಎನ್ನುವುದನ್ನು ಇಲ್ಲಿ ಸ್ಪಷ್ಟವಾಗಿ ಗಮನಿಸಬೇಕು.

ಪ್ರಜಾಪ್ರಭುತ್ವವು ಯಶಸ್ವಿಯಾಗುವುದು ಹೇಗೆ ಎಂಬುದರ ಕುರಿತು ಮಾತನಾಡುತ್ತಾ ಅಂಬೇಡ್ಕರರು “ಮೊದಲನೆಯದಾಗಿ ಅಸಮಾನತೆ ಸಮಾಜದಲ್ಲಿ ಇರಕೂಡದು. ಪೀಡಿತರಾಗಿ ತುಳಿತಕ್ಕೊಳಗಾಗುವ ಜನವರ್ಗವು ಸಮಾಜದಲ್ಲಿ ಇರಬಾರದು. ಎಲ್ಲಾ ಬಗೆಯ ಹಕ್ಕು ಮತ್ತು ಅಧಿಕಾರಗಳು ಕೇಂದ್ರೀಕೃತಗೊಳಿಸಿಕೊಂಡ ವರ್ಗ ಒಂದು ಕಡೆ ಎಲ್ಲಾ ಬಗೆಯ ಹೊರೆಯನ್ನೂ ಹೊರುವ ವರ್ಗ ಮತ್ತೊಂದು ಕಡೆಗೆ ಎಂಬ ವಿಭಜನೆ ಇರಕೂಡದು .” ಆಗ ಮಾತ್ರ ಪ್ರಜಾ ಪ್ರಭುತ್ವ ಯಶಸ್ವಿಯಾಗಲು ಸಾಧ್ಯ ಎನ್ನುತ್ತಾರೆ.

        ಮುಂದುವರೆದು… “ಪ್ರತಿ ಐದು ವರ್ಷಗಳಿಗೊಮ್ಮೆ ಮಾತ್ರ ಜನಾಭಿಪ್ರಾಯದ ತೀರ್ಪನ್ನು ಪಡೆಯುವ ಮುನ್ನ, ನಡುವಿನ ಕಾಲದಲ್ಲಿ ಅನಿಯಂತ್ರಿತವಾದ ಅಧಿಕಾರವನ್ನು ಬಳಸಿಕೊಳ್ಳುವ ಈ ‘ಪಂಚವಾರ್ಷಿಕ’ ನಿಯಂತ್ರಣದಿಂದ ನಿಜವಾದ ಪ್ರಜಾಪ್ರಭುತ್ವವು ಬರಲಾರದು.ಪ್ರಜಾಪ್ರಭುತ್ವದಲ್ಲಿ ರಾಜಕೀಯ ಅಧಿಕಾರದ ಮೇಲೆ ಬರೀ ಜನಾಭಿಪ್ರಾಯದ ನಿಯಂತ್ರಣ ಬೇಕೆಂದಲ್ಲ, ಅದು ತಾತ್ಕಾಲಿಕವಾಗಿಯೂ ಸತತವಾಗಿಯೂ ಬೇಕುಎನ್ನುತ್ತಾರೆ.

ಆದರೆ ಅಂಬೇಡ್ಕರರ ಹೋರಾಟಗಳನ್ನು, ಅವರ ವಿಚಾರಗಳನ್ನು ಜನರೆಡೆಗೆ ತಲುಪಿಸುವ ಕಾರ್ಯ ಮಾಡದೇ ಚುನಾವಣೆಯ ಮೂಲಕ ರಾಜಕೀಯ ಅಧಿಕಾರವನ್ನು ದಲಿತದಮನಿತರು ಗಳಿಸಿ ಸಮಾನತೆ ಸ್ಥಾಪಿಸಬಹುದು ಎಂಬ ಹುಸಿ ಹಾಗೂ ಹಸಿ ಸುಳ್ಳುಗಳನ್ನು ಜನಸಾಮಾನ್ಯರ ನಡುವೆ ಬಿತ್ತುತ್ತಾ ರಾಜಕೀಯ ಪುಢಾರಿಗಿರಿ ಮಾಡುತ್ತಾ ಬಂದ ಹುಟ್ಟಿನಿಂದ ದಲಿತ ದಮನಿತ  ಹಿನ್ನೆಲೆಯ ಹಲವರು ದಲಿತ ದಮನಿತರ ವಿಮೋಚನಾ ಹೋರಾಟಕ್ಕೆ ದ್ರೋಹ ಮಾಡುತ್ತಾ ಬಂದರು. ದಲಿತ ದಮನಿತರು ಐಕ್ಯಶಕ್ತಿಯಾಗಿ ನಿಲ್ಲುವುದನ್ನು ತಡೆಯಲು ಶ್ರಮಿಸುತ್ತಾ ಬಂದರು. ಇದರಲ್ಲಿ ದಲಿತ ದಮನಿತರ ಹೋರಾಟ ತ್ಯಾಗ ಬಲಿದಾನದ ಪ್ರತಿಫಲವಾದ ಮೀಸಲಾತಿ ಇತ್ಯಾದಿ ಸೌಲಭ್ಯಗಳನ್ನು ತಾವು ಮಾತ್ರ ಬಳಸಿಕೊಳ್ಳಬೇಕೆನ್ನುವ ಮನೋಭಾವದ ಸರ್ಕಾರಿ ನೌಕರರು, ದಲಿತದಮನಿತರಲ್ಲಿನ ಬುದ್ಧಿಜೀವಿ ವರ್ಗ, ಅದರಲ್ಲಿನ ಮಧ್ಯಮ ಹಾಗೂ ಶ್ರೀಮಂತ ವರ್ಗದವರು ಪ್ರಧಾನವಾಗಿದ್ದಾರೆ.

ಇಂತಹವರುಗಳೇ ಇಂಡಿಯಾದ ಬ್ರಾಹ್ಮಣಶಾಹಿ ಆಳುವ ವರ್ಗಗಳ ಛೇಲಾಗಿರಿ ಮಾಡುತ್ತಾ ದಲಿತದಮನಿತರ ದನಿಯನ್ನು ಅಡಗಿಸಲು ಆಳುವವರ್ಗಗಳ ಸೇವೆಗೆ ನಿಂತಿದ್ದಾರೆ. ಅಂತಹ ಹಲವರು ಕೇಂದ್ರ ಹಾಗೂ ರಾಜ್ಯಗಳಲ್ಲಿ ಮಂತ್ರಿಗಳಾಗಿ, ಅಧಿಕಾರಶಾಹಿಗಳಾಗಿ ಕಾರ್ಯನಿರ್ವಹಿಸಿದ್ದಾರೆ. ಈಗಲೂ ಕಾರ್ಯನಿರ್ವಹಿಸುತ್ತಿದ್ದಾರೆ ಕೂಡ. ಆದರೆ ಬಹುಸಂಖ್ಯಾತ ದಲಿತ ದಮನಿತರ ಬದುಕುಗಳಿಗೆ ಇವರು ಮಾರಕವಾಗಿಯೇ ಪ್ರವರ್ತಿಸುತ್ತಾ ಬಂದಿದ್ದಾರೆ. ಬಹುಸಂಖ್ಯಾತ ದಲಿತದಮನಿತರೆಡೆಗೆ ಸಾಂವಿಧಾನಿಕ ರಕ್ಷಣೆಯಾಗಲೀ, ಹಕ್ಕುಗಳಾಗಲೀ, ಮೀಸಲಾತಿಯಂತಹ ಸೌಲಭ್ಯಗಳಾಗಲೀ ಈಗಲೂ ತಲುಪದಂತೆ ತಡೆಯುತ್ತಾ ಬರಲಾಗಿದೆ ಎಂಬ ಸತ್ಯ ಇವರುಗಳಿಗೆ ಗೊತ್ತಿಲ್ಲದ ವಿಚಾರವಲ್ಲ. ಆದರೆ ಜಾಣಗುರುಡು ಅಭಿನಯಿಸುತ್ತಾ ತಮಗೆ ಎಷ್ಟೆಲ್ಲಾ ಸಾಧ್ಯವೋ ಅಷ್ಟನ್ನೂ ಬಾಚಿಕೊಳ್ಳುವ ಕಡೆ ಮಾತ್ರ ನೋಡುತ್ತಾ ಬಂದಿದ್ದರ ಪರಿಣಾಮವನ್ನು ನಾವಿಂದು ಸ್ಪಷ್ಟವಾಗಿ ಕಾಣುತ್ತಿದ್ದೇವೆ.

 ಇದರ ಪರಿಣಾಮ ಹಲವು ವಿಧಗಳಲ್ಲಿವೆ. ಎಲ್ಲಕ್ಕಿಂತಲೂ ಪ್ರಧಾನವಾಗಿ ಈ ಸ್ತರ ಅಂಬೇಡ್ಕರರನ್ನು ದೇವರನ್ನಾಗಿ ಮಾಡಿ ಪೂಜಿಸುತ್ತಾ ಅಂಬೇಡ್ಕರರಿಗೆ ಸಂವಿಧಾನವನ್ನು ಪರ್ಯಾಯವನ್ನಾಗಿಸಿ ಅದನ್ನು ಪರಮ ಪವಿತ್ರವೆಂದು, ಧರ್ಮಗ್ರಂಥವೆಂದೂ  ಬಿಂಬಿಸುತ್ತಾ ದಲಿತ ದಮನಿತರಲ್ಲಿ ಸಂವಿಧಾನ ಹಾಗೂ ಇಂಡಿಯಾದ ಪ್ರಜಾಪ್ರಭುತ್ವದ ಬಗ್ಗೆ ಹುಸಿ ಭ್ರಮೆಯನ್ನು ಬಿತ್ತುತ್ತದೆ. ದಲಿತ ದಮನಿತರು ಜಾಗೃತಗೊಳ್ಳುವುದನ್ನು ತಡೆದು ಅವರನ್ನು ಕೇವಲ ಓಟು ಬ್ಯಾಂಕ್ ರಾಜಕೀಯಕ್ಕಾಗಿ ಮಾತ್ರ ಬಳಸಲು ಆಳುವ ವರ್ಗಕ್ಕೆ ಸಹಾಯ ಮಾಡುತ್ತಾರೆ. ಊಳಿಗಮಾನ್ಯ ಬ್ರಾಹ್ಮಣ್ಯವನ್ನೂ ತಾವೇ ಪಾಲಿಸುತ್ತಾ ನವ ಬ್ರಾಹ್ಮಣವಾದಿಗಳಾಗಿ ಘಳಿಗೆ ಜ್ಯೋತಿಷ್ಯ, ಸತ್ಯನಾರಾಯಣ ಪೂಜೆ, ವ್ರತ, ದಿನಗಳನ್ನು ಆಚರಿಸುತ್ತಾರೆ. ತಮ್ಮದು ಭೌದ್ಧ ಧರ್ಮವೆಂದು ಹೇಳುವವರಲ್ಲಿ ಹಲವರು ಕೂಡ ಇಂತಹವುಗಳನ್ನು ಬೇರೆ ವಿಧಗಳಲ್ಲಿ ಆಚರಿಸುತ್ತಿದ್ದಾರೆ.

ಇದೆಲ್ಲದರ ಪರಿಣಾಮಗಳು ಇಂದು ಬಹಳ ಗಂಭೀರವಾಗಿ ದಲಿತದಮನಿತ ಜನಸಮೂಹವನ್ನು ಭಾಧಿಸುತ್ತಿದೆ. ಈ ಕೆಲವು ಪರಿಣಾಮಗಳ ಕುರಿತು ಅಂಬೇಡ್ಕರರು ಅಂದು ಗ್ರಹಿಸಿ ಆ ಬಗ್ಗೆ ಹೇಳಿದ್ದರು ಕೂಡ. ಸಂವಿಧಾನವನ್ನು ಹಾಗೂ ಅಂಬೇಡ್ಕರ್ ಮೂರ್ತಿಯನ್ನು, ಬುದ್ಧನ ಮೂರ್ತಿಯನ್ನು ಮುಂದಿಟ್ಟುಕೊಂಡೇ ದೇಶದ ಬಹುಸಂಖ್ಯಾತ ಜನಸಮೂಹವಾಗಿರುವ ದಲಿತ ದಮನಿತ ಹಿಂದುಳಿದ, ಅಲ್ಪಸಂಖ್ಯಾತ ಬಡ ಜನಸಾಮಾನ್ಯರನ್ನು ವಂಚಿಸುತ್ತಾ ಬರಲಾಗಿತ್ತು. ಅವರ ಪ್ರಜಾತಾಂತ್ರಿಕ ಆಶೋತ್ತರಗಳು ಹಾಗೂ ಹಕ್ಕುಗಳಿಂದ ಕಳೆದ ಏಳು ದಶಕಗಳಿಂದಲೂ ವಂಚಿತರನ್ನಾಗಿ ಮಾಡುತ್ತಾ ಬರಲಾಗಿತ್ತು ಎನ್ನುವ ಕಣ್ಣಿಗೆ ರಾಚುವ ಸತ್ಯವನ್ನು ಇಂದಾದರೂ ಮನಗಂಡು ಆ ನಿಟ್ಟಿನಲ್ಲಿ ಜನಜಾಗೃತಿ ನಡೆಸಬೇಕಾದ ಅಗತ್ಯ ಬಹಳ ಅವಶ್ಯವಾಗಿದೆ. ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ವಿಮರ್ಶಾತ್ಮಕವಾಗಿ ಜನಸಾಮಾನ್ಯರು ಚಿಂತಿಸುತ್ತಾ ಕಾರ್ಯ ನಿರ್ವಹಿಸುವಂತೆ ಮಾಡಬೇಕಿದೆ.

ಯಾಕೆಂದರೆ ಇದುವರೆಗೂ ದಲಿತ ದಮನಿತರಲ್ಲಿನ ಕೆಲವರಿಗಾದರೂ ಮೇಲ್ಮಟ್ಟದಲ್ಲಿ ಸಿಗುತ್ತಿದ್ದ ಮೀಸಲಾತಿಯಂತಹ ಸವಲತ್ತುಗಳು ಸಂಪೂರ್ಣವಾಗಿ ರದ್ದಾಗತೊಡಗಿವೆ. ಜಾಗತೀಕರಣದ ನಂತರ ಇದು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ತೀವ್ರಗೊಳ್ಳುತ್ತಾ ಇಂದು ಅದರ ಪರಾಕಾಷ್ಠೆ ತಲುಪಿ ಮೀಸಲಾತಿ ಬಗ್ಗೆ ಪುನರಾಲೋಚಿಸಿ ತೀರ್ಮಾನಿಸಲು ಸಂಪುಟ ಉಪಸಮಿತಿಗಳನ್ನು ರಚಿಸುವ, ಮೇಲ್ಜಾತಿ ಮೇಲ್ವರ್ಗಗಳಿಗೆ ಮೀಸಲಾತಿ ಕಲ್ಪಿಸುವ ಇತ್ಯಾದಿ ನಾಟಕೀಯ ನಡೆಗಳವರೆಗೆ ತಲುಪಿವೆ. ಜೊತೆಗೆ ದಲಿತದಮನಿತರ ರಕ್ಷಣೆಗೆಂದು ರಚಿತವಾಗಿದ್ದ ಕಾಯ್ದೆಗಳನ್ನು ಸಡಿಲಗೊಳಿಸುವ, ರದ್ದುಮಾಡುವ ಕಾರ್ಯಗಳು ಬಿರುಸಾಗಿವೆ. ಸಾಂವಿ‍ಧಾನಿಕ ಬದ್ಧತೆಯಾಗಿದ್ದ ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ವರ್ಗಗಳಿಗೆ ಆಯವ್ಯಯದಲ್ಲಿ ನಿಗದಿತ ಪ್ರಮಾಣದಲ್ಲಿ ತೆಗೆದಿರಿಸಲೇಬೇಕಿದ್ದ ಹಣಕಾಸು ಪ್ರಮಾಣ ಕಡಿತಗೊಳಿಸಲಾಗದೆ. ಮೊದಲಿನಿಂದಲೂ ಮಾಡುತ್ತಾ ಬಂದಿದ್ದ ತೆಗೆದಿರಿಸುವ ಇಂತಹ ಹಣಕಾಸನ್ನು ದಲಿತದಮನಿತರ ಏಳಿಗೆಗಾಗಿ ವಚ್ಚಮಾಡದೇ ಇರುವ, ಬೇರೆ ಸಾಮಾನ್ಯ ಯೋಜನೆಗಳಿಗೆ ಹರಿಸುವ, ವೆಚ್ಚ ಮಾಡದೇ ವಾಪಾಸು ಕಳಿಸುವ ಕ್ರೂರ ಹಾಗೂ ನೀಚಾತಿನೀಚ ಜಾತೀಯತೆಯ ಸರಕಾರಿ ಹಾಗೂ ಅಧಿಕಾರಶಾಹಿ ಪ್ರವೃತ್ತಿಗಳು ಇಂದು ಎಗ್ಗಿಲ್ಲದೇ ನಡೆಯತೊಡಗಿದೆ. ಮಲಹೊರಿಸುವ ಪದ್ದತಿಯನ್ನು ನಿಷೇಧವಿದೆ ಎಂದು ಇದ್ದರೂ ಸರ್ಕಾರದ ಸಂಸ್ಥೆಗಳೇ ಶೌಚಗುಂಡಿಗಳ ಸ್ವಚ್ಚತೆಗೆ ದಲಿತರನ್ನೇ ಬಳಸುತ್ತಿವೆ. ಈಗ ಆ ನಿಷೇಧದ ಕಾಯಿದೆಯನ್ನೂ ಸಡಿಲಗೊಳಿಸಿರುವುದರ ಸುದ್ಧಿ ಇದೆ.  ಇದುವರೆಗೂ ಅಂಬೇಡ್ಕರ್ ಹೆಸರನ್ನು ಹಾಗೂ ಸಂವಿಧಾನವನ್ನು ತಮ್ಮ ಹಿತಾಸಕ್ತಿಗಳ ರಕ್ಷಣೆಗಾಗಿ ಬಳಸಿಕೊಂಡ ಆಳುವ ಶಕ್ತಿಗಳು ಇಂದು ಅಂಬೇಡ್ಕರರ ಜನಪರ ಪಾತ್ರವನ್ನು ನಿರಾಕರಿಸುವ, ಸಂವಿಧಾನವನ್ನು ಬದಲಾಯಿಸುವ ನಿಟ್ಟಿನಲ್ಲಿ ಸಾಗುತ್ತಿವೆ. ಅದೂ ಅಲ್ಲದೇ ಇದುವರೆಗೆ ಹಲವು ಮುಸುಕಗಳಡಿ ಕಾರ್ಯ ನಿರ್ವಹಿಸುತ್ತಿದ್ದ ಬ್ರಾಹ್ಮಣಶಾಹಿ ಫ್ಯಾಸಿಸ್ಟ್ ಶಕ್ತಿಗಳು ಸಂವಿಧಾನ ಬದ್ದ ಹಾಗೂ ಪ್ರಜಾಪ್ರಭುತ್ವವೆಂದು ಬಿಂಬಿಸಿಕೊಂಡು ಅಧಿಕಾರದ ಪೀಠದಲ್ಲಿ ನೇರವಾಗಿ ಕುಳಿತು ಭಾರಿ ಹಾಗೂ ದಲ್ಲಾಳಿ ಕಾರ್ಪೋರೇಟುಗಳ ಸೇವೆಯಲ್ಲಿ ತೊಡಗಿವೆ. ದೇಶದ ಜನಸಾಮಾನ್ಯರ ಸ್ವತ್ತುಗಳು, ತುಂಡು ಭೂಮಿ ಹಾಗೂ ಪ್ರತಿ ದುಡಿಮೆಯನ್ನೂ ಭಾರಿ ಕಾರ್ಪೋರೇಟುಗಳಿಗೆ ಯಾವುದೇ ಎಗ್ಗಿಲ್ಲದೇ ಎತ್ತಿ ಕೊಡತೊಡಗಿದೆ. ದೇಶದಲ್ಲಿ ನಡೆಯುವ ಚುನಾವಣೆಗಳಲ್ಲಿ ಜನಸಾಮಾನ್ಯರದೇನೂ ಪ್ರಧಾನ ಪಾತ್ರವಿಲ್ಲ ಎಂಬ ಸತ್ಯ ಕೂಡ ಈಗಂತೂ ರಟ್ಟಾಗಿ ಬಹಿರಂಗವಾಗಿರುವ ವಿಚಾರ ತಾನೇ.

ಬಾಬರೀ ಮಸೀದಿ ಕೆಡವಿದ ಕರಾಳತೆ

ಡಿಸೆಂಬರ್ ಆರಕ್ಕೆ 1992ರ ನಂತರ ಮತ್ತೊಂದು ರೀತಿಯಲ್ಲಿ ಸ್ಮರಿಸಬೇಕಾದ ಅಗತ್ಯವನ್ನು ಬ್ರಾಹ್ಮಣಶಾಹಿ ಫ್ಯಾಸಿಸ್ಟ್ ವರ್ಗ ಸೃಷ್ಟಿಸಿದೆ. ಅದು ಬಾಬರೀ ಮಸೀದಿಯನ್ನು ಅಕ್ರಮವಾಗಿ ಕೆಡವಿ ಹಾಕಿದ್ದು. ಸಾವಿರಾರು ಜನಸಾಮಾನ್ಯರ ಮಾರಣಹೋಮಕ್ಕೆ ಕಾರಣವಾಗಿದ್ದು. ಅದು ನೇರವಾಗಿ ಹಾಗೂ ಪರೋಕ್ಷವಾಗಿ ಮುಸ್ಲಿಂ ಅಲ್ಪಸಂಖ್ಯಾತರನ್ನು, ದಲಿತ ದಮನಿತರನ್ನು, ಹಿಂದುಳಿದ ಜನಸಮುದಾಯಗಳನ್ನು ಗುರಿಮಾಡಿ ಕೋಮು ದ್ವೇಷದ ದಳ್ಳುರಿಯಲ್ಲಿ ಅವರನ್ನು ಹೂತುಹಾಕುವ ಮಹಾಕುತಂತ್ರದ ಭಾಗವಾಗಿತ್ತು. ಆ ದಳ್ಳುರಿಯನ್ನು ದೇಶದಾದ್ಯಂತ ಹರಡುವ ಸಂಘಪರಿವಾರದ ಹಾಗೂ ಆಳುವ ಶಕ್ತಿಗಳ ಕುತಂತ್ರದ ಭಾಗವಾಗಿ ಜರುಗಿರುವ ಘಟನೆ ಅದೆಂಬುದು ಈಗ ಗುಟ್ಟೇನೂ ಅಲ್ಲ. ಡಾ. ಅಂಬೇಡ್ಕರ್ ನಿಧನರಾದ ದಿನವನ್ನೇ ಬಾಬರೀ ಮಸೀದಿ ಉರುಳಿಸಲು ಆಯ್ಕೆ ಮಾಡಿದ್ದು ಮಹಾ ಕುತಂತ್ರದ ಭಾಗವಾಗಿಯೇ ಎಂಬುದನ್ನು ಇಲ್ಲಿ ಗಮನಿಸಬೇಕು.  ಅದಕ್ಕೆ ಜಾತ್ಯಾತೀತ ಸೆಕ್ಯುಲರ್ ಎಂದೆಲ್ಲಾ ಹಲವಾರು ಬುದ್ಧಿಜೀವಿಗಳಿಂದ ಈಗಲೂ ಬಣ್ಣಿಸಲ್ಪಡುವ ಕಾಂಗ್ರೆಸ್ ಪಕ್ಷದ ಆಗಿನ ಸರ್ಕಾರದ ಪಾತ್ರವೂ ಇತ್ತು ಎನ್ನುವುದು ಸಾಕಷ್ಟು ಜನರಿಗೆ ಗೊತ್ತಿರುವ ವಿಚಾರ. ಬಾಬರಿ ಮಸೀದಿ ಹಾಗೂ ಅಯೋಧ್ಯಾ ರಾಮನನ್ನು ಬಳಸುತ್ತಾ ಆಳುವ ಶಕ್ತಿಗಳು ಸಂಘ ಪರಿವಾರವನ್ನು, ಜನರನ್ನು ಮರುಳುಗೊಳಿಸುವ ಶಕ್ತಿ ಕಳೆದುಕೊಂಡ ಕಾಂಗ್ರೆಸಿಗೆ ಪರ್ಯಾಯವಾಗಿ ತಂದು ಅಧಿಕಾರ ಪೀಠದಲ್ಲಿ ಕೂರಿಸಿಕೊಂಡು ಯಾವುದೇ ಎಗ್ಗಿಲ್ಲದೇ ದೇಶ ಹಾಗೂ ಜನಸಾಮಾನ್ಯರನ್ನು ಹಾಗೂ ಅವರ ದುಡಿಮೆಯನ್ನು ಕೊಳ್ಳೆ ಹೊಡೆಯತೊಡಗಿರುವುದು ಈಗ ಹೊಸ ವಿಚಾರವೇನಲ್ಲ. ಈಗ ನ್ಯಾಯಾಂಗದ ತೀರ್ಪುಗಳು ಕೂಡ ಈ ಶಕ್ತಿಗಳ ಪರವಾಗಿಯೇ ಹೊರಬರುತ್ತಿರುವುದು ಕೇವಲ ಕಾಕತಾಳೀಯ ಎನ್ನಲಾಗದು.

ಅದರಲ್ಲೂ ಇದುವರೆಗೂ ಸಾಪೇಕ್ಷವಾಗಿ ಸಾಂವಿಧಾನಿಕ ಹಕ್ಕುಗಳು ಅಭಿವ್ಯಕ್ತಿ ಸ್ವಾತಂತ್ರ್ಯ ಮೊದಲಾದವನ್ನು ಅನುಭವಿಸುತ್ತಾ ಬಂದಿದ್ದ ಶಿಕ್ಷಿತ ಮದ್ಯಮ ವರ್ಗ, ಬುದ್ಧಿಜೀವಿಗಳು, ಸಾಹಿತಿಗಳು, ಪತ್ರಕರ್ತರು ಮೊದಲಾದವರಿಗೆ ಕೂಡ ಅಂತಹ ಹಕ್ಕುಗಳನ್ನು ನಿರಾಕರಿಸಲಾಗುತ್ತಿದೆ.  ಈ ವರ್ಗ ಗಳಿಸುವ ವರಮಾನ ಹಾಗೂ ಜೀವಮಾನದ ಉಳಿತಾಯಗಳನ್ನೂ ಹಲವು ರೂಪಗಳಲ್ಲಿ ಕಸಿದು ಭಾರಿ ಕಾರ್ಪೋರೇಟುಗಳಿಗೆ ತಲುಪುವಂತೆ ಇಂದಿನ ಪ್ರಭುತ್ವ ಮಾಡತೊಡಗಿದೆ. ಆದರೆ ಅದರ ಅರಿವು ಈ ವರ್ಗದವರಲ್ಲಿ ಬಹುತೇಕರಿಗೆ ಈಗಲೂ ಬಂದಿಲ್ಲ ಎನ್ನಬಹುದೇನೋ. ಯಾಕೆಂದರೆ ಈ ವರ್ಗವನ್ನೇ ಪ್ರಧಾನವಾಗಿ ಅಧಿಕಾರ ರಾಜಕಾರಣದ ಪೀಠಕ್ಕೇರಲು ಸಂಘಪರಿವಾರ ಬಳಸಿಕೊಳ್ಳುತ್ತಾ ಬಂದಿತ್ತು. ಭಾರಿ ಕಾರ್ಪೋರೇಟುಗಳು ಅವರ ಬೆನ್ನಿಗೆ ನಿಂತಿತ್ತು. ಈಗಲೂ ಅದು ಸಾಗುತ್ತಿದೆ. ಅವರಲ್ಲಿನ ಒಂದು ಸ್ತರ ಒಂದು ಮಟ್ಟಕ್ಕೆ ಸರಿಯಾದ ರೀತಿಯಲ್ಲಿ ಈ ವಾಸ್ತವ ಸತ್ಯವನ್ನು ಈಗ ಗ್ರಹಿಸಲಾರಂಭಿಸಿದೆ

ಹೀಗೆ ಇಂಡಿಯಾ ದೇಶ ಡಿಸೆಂಬರ್ ಆರನ್ನು ಸ್ಮರಿಸದೇ ಇರಲು ಸಾಧ್ಯವಾಗದಂತಹ ನೋವಿನ, ಸಂಕಟದ, ವಿಷಾಧದ, ಧಾರುಣ  ಹಾಗೂ ಕರಾಳ ಘಟನೆಗಳಿಗೆ ಚಾರಿತ್ರಿಕ ಸಾಕ್ಷಿಯಾಗಿಬಿಟ್ಟಿದೆ. ಈ ಹಿನ್ನೆಲೆಯಲ್ಲಿ ಎಲ್ಲರೂ ಸರಿಯಾದ ನಿಟ್ಟಿನಲ್ಲಿ ಚಿಂತಿಸಿ ಕಾರ್ಯಪ್ರವೃತ್ತರಾಗಬೇಕಾದ ದಿನವನ್ನಾಗಿ ಡಿಸೆಂಬರ್ ಆರನ್ನು ನೋಡುವ ಅಗತ್ಯವಿದೆ. ಅದನ್ನು ಕೇವಲ ಭಾವಾವೇಷದ ದಿನವನ್ನಾಗಿ ಮಾತ್ರ ನೋಡದೇ ವಿವೇಚನೆ ಹಾಗೂ ನೈಜ ಪ್ರಜಾಸತ್ತಾತ್ಮಕ  ಜನಪರ ಚಿಂತನೆಯಡಿ ತರಬೇಕಿದೆ.

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!