ದ ಪಾಲಿಟಿಕ್

ಡಿಯರ್ ಮೀಡಿಯಾ, ಕಣ್ತೇರೆದು ನೋಡು ನೀಲಿ ಧ್ಜಜಗಳ ಕೂಗು!

ದ ಪಾಲಿಟಿಕ್ ಡೆಸ್ಕ್

ದ ಪಾಲಿಟಿಕ್ ಡೆಸ್ಕ್

ಈ ದೇಶದಲ್ಲಿ ಸಂವಿಧಾನ ವಿರೋಧಿ ಚಟುವಟಿಕೆಗಳು ಹಾಗೂ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಅವಮಾನಿಸುವ ಕೃತ್ಯಗಳು ಆಗಾಗ್ಗೆ ನಡೆಯುತ್ತಲೇ ಇವೆ. ಪ್ರಜಾಪ್ರಭುತ್ವ ದೇಶದ ರಾಷ್ಟ್ರೀಯ ಗ್ರಂಥ ಸಂವಿಧಾನವನ್ನೇ ಸುಟ್ಟು ತಮ್ಮ ನೀಚತನ ತೋರಿದ ಶಕ್ತಿಗಳು ಅಂಬೇಡ್ಕರ್ ಅವರನ್ನು ಕಂಡರೆ ಒಳಗೊಳಗೆ ಉರಿದುಕೊಳ್ಳುತ್ತಾರೆ. ಜಾತ್ಯತೀತ ರಾಷ್ಟ್ರ ಭಾರತದಲ್ಲಿ ಅಸ್ಪ್ರಶ್ಯತೆ ಹಾಗೂಜಾತಿಯತೆ ಎಂಬ ಮನೋರೋಗ ಇನ್ನೂ ಆಳವಾಗಿ ಬೇರೂರಿದ ಕಾರಣವೇ ಇಂಥ ದುರ್ಘಟನೆಗಳು ನಡೆಯಲು ಸಾಧ್ಯ ಎಂಬುದು ನಮ್ಮೆಲ್ಲರಿಗೂ ತಿಳಿದಿರುವ ಸಂಗತಿ.

ಇಂಥದೇ ಮತ್ತೊಂದು ಘಟನೆ ನಮ್ಮ ರಾಜ್ಯದಲ್ಲಿ ಜನವರಿ 26 ರಂದು ನಡೆದೋಯ್ತು. ಧ್ವಜಾರೋಹಣ ಸಂದರ್ಭದಲ್ಲಿ ಡಾ.ಅಂಬೇಡ್ಕರ್ ಅವರ ಫೋಟೋ ತೆಗೆಯುವಂತೆ ಪಟ್ಟು ಹಿಡಿದು ಸಂವಿಧಾನ ಹಾಗೂ ಅಂಬೇಡ್ಕರ್ ಅವರನ್ನು ಅವಮಾನಿಸಿದ್ದು ಒಬ್ಬ ಸಾಮಾನ್ಯ ವ್ಯಕ್ತಿಯಲ್ಲ, ಒಬ್ಬ ನ್ಯಾಯಧೀಶ, ಈ ದೇಶದಲ್ಲಿ ಇದಕ್ಕಿಂತ ದೊಡ್ಡ ಅವಮಾನ ಮತ್ತೊಂದಿಲ್ಲ. 

ಡಾ.ಅಂಬೇಡ್ಕರ್ ಅವರನ್ನು ಅವಮಾನಿಸಿದ ನ್ಯಾಯಾಧೀಶನ ವಿರುದ್ಧ ಇಡೀ ರಾಜ್ಯದ್ಯಂತ ಹೋರಾಟಗಳು ನಡೆದವು, ನಡೆಯುತ್ತಿವೆ. ಹಲವು ಜಿಲ್ಲಾ ಕೇಂದ್ರಗಳು ಬಂದ್ ಮಾಡಿ ಅಕ್ರೋಶ ವ್ಯಕ್ತಪಡಿಸಿದರೂ ಸರ್ಕಾರ ಮಾತ್ರ ಆತನನ್ನು ಬಂಧಿಸಲಿಲ್ಲ, ಯಾವುದೇ ಕಾನೂನು ಕ್ರಮಗೊಳ್ಳಲಿಲ್ಲ, ಬದಲಿಗೆ ಆತನಿಗೆ ಬೆಚ್ಚನ ಮನೆಯಲ್ಲಿ ಬಿಂದಾಸ್ ದಿಂದ ಇರುವಂತೆ ಸಕಲ ವ್ಯವಸ್ಥೆ ಕಲ್ಪಿಸಿ ಕಾಪಾಡಿಕೊಂಡಿತ್ತು. (ಈ ಹೋರಾಟದ ಮುನ್ಸೂಚನೆಯ ಕಾರಣದಿಂದಲೇ ಏನೋ ನಿನ್ನೆ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರಿಗೆ ರಾಯಚೂರದಿಂದ ವರ್ಗಾವಣೆ ಮಾಡಿ ಕೈತೊಳೆದುಕೊಂಡಿದೆ).

ಆದರೆ ಹೋರಾಟಗಾರರ ಕಿಚ್ಚು ಅಷ್ಟಕ್ಕೆ ಆರಲಿಲ್ಲ, ರಾಯಚೂರಿನ ಮಲ್ಲಿಕಾರ್ಜುನ ಗೌಡ (ಪಾಟೀಲ) ಮೇಲೆ ಕಾನೂನಾತ್ಮಕ ಕ್ರಮಕೈಗೊಳ್ಳುವಂತೆ ಆಗ್ರಹಿಸಿರಾಜಧಾನಿ ಬೆಂಗಳೂರಿನಲ್ಲಿಂದು ಕರ್ನಾಟಕದ ಎಲ್ಲಾ ಸಂವಿಧಾನಪರ ಸಂಘ- ಸೇನೆ- ವೇದಿಕೆ-ಸಮಿತಿ-ಸಂಘಟನೆ-ಒಕ್ಕೂಟಗಳೆಲ್ಲಾ ಸೇರಿ ಒಂದೇ ಮಹಾ ಒಕ್ಕೂಟದಡಿ “ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟದಿಂದ ಬೃಹತ್ ಮೆರವಣಿಗೆ ಮತ್ತು ಸಮಾವೇಶವನ್ನು ಹಮ್ಮಿಕೊಂಡಿದರು.

ಇದನ್ನೂ ಓದಿ : ಸಿ.ಟಿ.ರವಿಯವರೇ, ಅಂದು ಆರೆಸ್ಸೆಸ್ ಕೇಂದ್ರ ಕಛೇರಿ ಮೇಲೆ ರಾಷ್ಟ್ರಧ್ವಜ ಹಾರಿಸಿದ್ದಕ್ಕೆ  ಕೇಸ್ ಹಾಕಿದ್ಯಾರು?

ಬೆಂಗಳೂರಿನ ರೈಲು ನಿಲ್ದಾಣದಿಂದ ವಿಧಾನಸೌಧ- ಬಾಬಾಸಾಹೇಬರ ಪ್ರತಿಮೆಯವರೆಗೆ ನಡೆದ ಹೋರಾಟದ ರ್ಯಾಲಿಯಲ್ಲಿ “ವಿಧಾನ ಸೌಧ – ಹೈಕೋರ್ಟ್ ಚಲೋ” ಎನ್ನುವಂತಿತ್ತು. ಕ್ರಾಂತಿಯ ಹಾಡು, ಟಮಟೆ, ಹಲಿಗೆ, ಕ್ರಾಂತಿ ಗೀತೆ ಸೇರಿದಂತೆ ಜೈ ಭೀಮ್ ಘೋಷಣೆಗಳು ಅಕ್ಷರಶಃ ಬೆಂಗಳೂರು ನಡಗಿಸಿದವು. ರಾಜ್ಯದ ಮೂಲೆಮೂಲೆಗಳಿಂದ ಆಗಮಿಸಿದ ಹೋರಾಟಗಾರರ ಕೈಯಲ್ಲಿ ಅಂಬೇಡ್ಕರ್ ಪೋಟೋ, ಕೊರಳಿಗೆ ನೀಲಿ ಶಾಲುಗಳು, ರಸ್ತೆಗಳು ಜನಸಾಗರವಾಗಿ ಮಾರ್ಪಟ್ಟಿದ್ದವು. ಮುನ್ನುಗಿ ನಡೆದರು…ಭೀಮ್ ಗರ್ಜನೆಯ ಹೋರಾಟಗಾರರು.

ಈ ನೆಲದಲ್ಲಿ ಅನ್ಯಾಯ, ಅವಮಾನ, ಶೋಷಣೆ, ದಬ್ಬಾಳಿಕೆ ನಡೆದಾಗೆಲ್ಲ ಇಂಥ ಪ್ರತಿರೋಧದ ಕಿಚ್ಚು ಹೊರಬರುವುದು ಸಹಜ, ಹಾಗೇ ಇಂದು ಹರಿದುಬಂದ ಜನಸಾಗರದಿಂದ ಬೆಂಗಳೂರು ಸಂಪೂರ್ಣ ನೀಲಿಮಯವಾಗಿತ್ತು. “ನಿಮ್ಮ ಅವಮಾನ ಸಹಿಸುಕೊಂಡು ಸುಮ್ಮನಿರಲಾರೆವು, ಅದಕ್ಕೆ ಪ್ರತಿಕಾರ ಇದೋ ನೋಡು ಉತ್ತರ ” ಎನ್ನುವಂತೆ ಜನಸಾಗರದ ಪ್ರತಿರೋಧ ಕೂಗು ಮುಗಿಲುಮುಟ್ಟಿತ್ತು. 
ರಾಜಧಾನಿಯಲ್ಲಿ ಸಾವಿರಾರು ಸಂಖ್ಯೆಯ ಜನ ಸೇರಿ ಬೃಹತ್ ಮಟ್ಟದ ಹೋರಾಟ ನಡೆಯುತ್ತಿದ್ದರೂ ನಮ್ಮ ಮುಖ್ಯವಾಹಿನಿ ಎಂದೆನಿಸಿಕೊಂಡ ಮಾಧ್ಯಮಗಳು ಮಾತ್ರ ದಿನನಿತ್ಯದಂತೆ ಭಜನೆ ಮಾಡುತ್ತಿದ್ದವು. ಹೋರಾಟದ ಬಗ್ಗೆ ಯಾವುದೇ ಬ್ರೇಕಿಂಗ್ ನ್ಯೂಸ್, ಲೈವ್ ತೋರಿಸದೆ ಎಂದಿನಂತೆಯೇ ಮತ್ತೆ ಮೌನತಾಳಿದ್ದು ದುರಂತವೇ ಸರಿ.

ಸಮಾಜದ ಕಾವಲುನಾಯಿಯಾಗಿ, ಈ ದೇಶದ ಕಟ್ಟಕಡೆಯ ವ್ಯಕ್ತಿಯ ದನಿಯನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕಾರ್ಯ ಮಾಧ್ಯಮಗಳು ಮಾಡಬೇಕಾಗಿದೆ, ಅಷ್ಟೇ ಅಲ್ಲದೇ ಯಾವುದೇ ಜಾತಿ, ಧರ್ಮ, ಭೇದವಿಲ್ಲದ ಸಮಾಜದ ಐಕ್ಯತೆ ಹಾಗೂ ಸರ್ವಾಂಗೀಣ ಏಳಿಗಾಗಿ ಕನ್ನಡಿಯಂತೆ ವಸ್ತುನಿಷ್ಠರಾಗಿ ಕಾರ್ಯನಿರ್ವಹಿಸಬೇಕು. ಜನರ ದನಿಯನ್ನು ಮುಖ್ಯವಾಹಿನಿಗೆ ತರದೆ ಆಳುವವರ ತುತ್ತೂರಿ ಊದುವುದು, ಸಾಕುನಾಯಿಯಂತೆ ಕೆಲಸ ಮಾಡುವುದು ಜರ್ನಲಿಸಂ ಅಲ್ಲವೇ ಅಲ್ಲ.

ಇಂದು ಬೆಂಗಳೂರಿನಲ್ಲಿ ನಡೆದ ಬೃಹತ್ ಹೋರಾಟದ ಸುದ್ದಿಯನ್ನು ಬಹುತೇಕ ಮಾಧ್ಯಮಗಳು ಮಾಡಲೇ ಇಲ್ಲ. ಇದಕ್ಕೆ ಕಾರಣ ಏನಿರಬಹುದು ಎಂದು ಬೇರೆ ಹೇಳಬೇಕಾಗಿಲ್ಲ. ಆದರೆ ಮಾಧ್ಯಮಗಳು ಇಂಥ ದುಸ್ಥಿತಿಗೆ ತಲುಪಿವೆ ಎಂದಾದರೆ ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಸಂಪೂರ್ಣ ಆಡಳಿತ ಪಕ್ಷದವರ ಅಧೀನಕ್ಕೆ ಒಳಪಟ್ಟಿದೆ ಎಂದಾಯ್ತು ಅಲ್ಲವೇ? ಇನ್ನೂ ನಾಲ್ಕನೇ ಅಂಗ ಅಂತ ಕರೆಸಿಕೊಳ್ಳುವ ಪತ್ರಿಕಾರಂಗ ಉಳಿಸುವವರು ಯಾರು?

ಬೇಡವೇ ಆಗಿರುವ ಅನಗತ್ಯ ವಿಷಯ, ಮನೆ -ಮನೆಯ ಜಗಳ ಬಾಗಿಲಿನಿಂದ ಲೈವ್ ಭಿತ್ತರಿಸುವುದು, ಸಿನಿಮಾ ತಾರೆಯರ ವೈಯುಕ್ತಿಕ ವಿಷಯ ಕೆಣಕುವುದು, ಧರ್ಮಗಳ ಮಧ್ಯೆ ದ್ವೇಷ ಬಿತ್ತುವುದು ಅದನ್ನೇ ಅತಿ ದೊಡ್ಡ ಸಮಾಜ ಬದಲಾವಣೆ ಸುದ್ದಿಯಂತೆ 24/7 ತೋರಿಸುವ ಮೀಡಿಯಾದವರಿಗೆ ಇಂದಿನ ನೀಲಿ ಧ್ವಜಗಳ ಕೂಗು ಕೇಳಿಸಲಿಲ್ಲವೇ? ಕಾಣಲಿಲ್ಲವೇ? ಯಾಕೆ?

ನ್ಯೂಟ್ರಾಲಿಟಿ ಕಾಪಾಡಿಕೊಂಡು ಪತ್ರಿಕೋದ್ಯಮದ ಘನತೆ, ಗೌರವ ಕಾಪಾಡಿ, ತಮ್ಮ ಕರ್ತವ್ಯ ನಿಭಾಯಿಸಬೇಕಾದ ಮಾಧ್ಯಮಗಳು ಕಣ್ಣಿದ್ದು ಕುರುಡರಂತೆ ಆಳುವವರ ಅಣತಿಯಂತೆ ಕುಣಿಯುತ್ತಿರುವುದು ವಿಪರ್ಯಾಸ ಅಷ್ಟೇ ಅಲ್ಲ ಬಹುದೊಡ್ಡ ದುರಂತವೂ ಹೌದು.

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!