ದ ಪಾಲಿಟಿಕ್

ಭಾರತದ ಜರ್ನಲಿಸಂನಲ್ಲಿ ಕರಾಳ ಯುಗ : ರವೀಶ್ ಕುಮಾರ್

ದ ಪಾಲಿಟಿಕ್

ದ ಪಾಲಿಟಿಕ್

ಭಾರತೀಯ ಪತ್ರಿಕೋದ್ಯಮದಲ್ಲಿ ಸುವರ್ಣಯುಗ ಎಂಬುದಿಲ್ಲ. ಆದರೆ ಪರಿಸ್ಥಿತಿ ಇಂದಿನಷ್ಟು ಹದಗೆಟ್ಟಿರಲಿಲ್ಲ. ಪತ್ರಿಕೋದ್ಯಮದಲ್ಲಿ ಪ್ರತಿಯೊಂದು ಒಳ್ಳೆಯ ವಿಷಯವೂ ವೇಗವಾಗಿ ನಾಶವಾಗುತ್ತಿದೆ. ಇದನ್ನು ನಿರೀಕ್ಷಿಸಲಾಗಿದೆ. ಆದರೆ, ಇಂದು ನಿಜವಾಗಿ ನಡೆಯುತ್ತಿರುವುದು ಪತ್ರಿಕೋದ್ಯಮದ ‘ಕರಾಳ ಯುಗ’. ದೇಶದಲ್ಲಿ ಲೆಕ್ಕವಿಲ್ಲದಷ್ಟು ಸುದ್ದಿ ವಾಹಿನಿಗಳಿವೆ ಆದರೆ ಅವೆಲ್ಲವೂ ಅನೈತಿಕವಾಗಿವೆ. ನಮ್ಮ ಪ್ರಚಾರೋಧ್ಯಮದ ಪರಿಸರ ಕುಸಿಯುತ್ತಿದೆ ಮತ್ತು ಧ್ವಂಸವಾಗುತ್ತಿದೆ.

ಇಂದು ಎಲ್ಲರೂ ತನ್ನನ್ನು ತಾನು ಪತ್ರಕರ್ತರೇ ಎಂದು ಹೇಳಿಕೊಳ್ಳುತ್ತಾರೆ. ಬಹಳ ಮುಖ್ಯವಾಗಿ ಅಧಿಕಾರದಲ್ಲಿರುವವರಿಗೆ ಹತ್ತಿರವಿರುವವರು ಅಥವಾ ಅವರೊಂದಿಗೆ ಇರುವವರು. ಈ ದೇಶದಲ್ಲಿ ಪತ್ರಿಕೋದ್ಯಮದ ಅವನತಿಗೆ ನಿಜವಾದ ಕಾರಣ ಈ ಪತ್ರಕರ್ತರ ಮುಖಗಳು ಮತ್ತು ಅವರ ಸಂಘಟನೆಗಳೇ ಎಂಬುದು ವಿಚಿತ್ರ. ಒಳ್ಳೆಯ ಪತ್ರಿಕೋದ್ಯಮ ತರುತ್ತಿದ್ದೇವೆ ಎಂದೂ ಹೇಳಿಕೊಳ್ಳುತ್ತಿದ್ದಾರೆ. ಅವರ ಬಗ್ಗೆ ಜಾಗರೂಕರಾಗಿರಿ ಮತ್ತು ಅನುಮಾನದಿಂದಿರಿ ಎಂದು ನಾನು ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ.

ಈ ಪ್ರಶ್ನೆಗಳೇ ಇಲ್ಲದ ಪತ್ರಕರ್ತರು ಮತ್ತು ಅಂತಿಮವಾಗಿ ಸರ್ಕಾರವು ಪತ್ರಿಕೋದ್ಯಮದ ಅವರ ವ್ಯಾಖ್ಯಾನವನ್ನು ನಿಮ್ಮ ಗಂಟಲಿಗೆ ತಳ್ಳಲು ಪ್ರಯತ್ನಿಸುತ್ತಾರೆ.

NDTV ಜೊತೆಗಿನ ನನ್ನ ನೆನಪುಗಳು..

ಈ ದೇಶದಲ್ಲಿ ನಾನು ಇಲ್ಲಿಯವರೆಗೆ ಕೆಲಸ ಮಾಡಿದ ಸಂಸ್ಥೆಯ ಕುರಿತು ಮಾತನಾಡಲು ಬಯಸುವುದಿಲ್ಲ. ಏಕೆಂದರೆ ಭಾವುಕರಾದಾಗ ವಸ್ತುನಿಷ್ಠವಾಗಿರುವುದು ಅಸಾಧ್ಯ. ಭಾವನೆಗಳು ಸತ್ಯಗಳಿಗಿಂತ ಮೇಲುಗೈ ಸಾಧಿಸುತ್ತವೆ. ಆದ್ದರಿಂದ ಭಾವನೆಗಳನ್ನು ಬದಿಗಿಡೋಣ.

ಎನ್‌ಡಿಟಿವಿಯೊಂದಿಗೆ ನನಗೆ ಅನೇಕ ಆಸಕ್ತಿದಾಯಕ ನೆನಪುಗಳಿವೆ. ಯಾರಿಗಾದರೂ ಧನ್ಯವಾದ ಹೇಳುವುದು ಕಷ್ಟ. ನಿಮ್ಮ ವೃತ್ತಿಪರ ಪ್ರಯಾಣಕ್ಕೆ ಅನೇಕರು ಕೊಡುಗೆ ನೀಡಿದಾಗ ಒಬ್ಬ ವ್ಯಕ್ತಿಗೆ ನೀವು ಹೇಗೆ ಧನ್ಯವಾದ ಹೇಳಬಹುದು? ನನ್ನ ಹಿಂದಿನ ಮತ್ತು ಪ್ರಸ್ತುತ ಸಹೋದ್ಯೋಗಿಗಳು ನನ್ನಲ್ಲಿ ತಮ್ಮ ಒಂದು ಭಾಗವನ್ನು ನೋಡುತ್ತಾರೆ ಎಂದು ನನಗೆ ತಿಳಿದಿದೆ. ಅದೂ ಸರಿ ಕೂಡ. ಹಾಗೆಯೇ ನಾನು ಕೂಡ ಪ್ರತಿಯೊಬ್ಬರಿಂದಲೂ ಬಹಳಷ್ಟು ತೆಗೆದುಕೊಂಡಿದ್ದೇನೆ. ಅದಕ್ಕಾಗಿ ನಾನು ಕೃತಜ್ಞನಾಗಿರುತ್ತೇನೆ.

ವಧು ತವರು ಮನೆಯಿಂದ ಹೊರಟು ಹೋದಾಗ, ಜನ್ಮಕೊಟ್ಟ ಮನೆಗಾಗಿ ಕಣ್ಣೀರು ಹಾಕುತ್ತಾಳೆ. ಬೇರೆ ಮನೆಗೆ ಹೋದ ಮೇಲೂ ಕಣ್ಣಿಗೆ ತನ್ನ ತವರು ಮನೆ ನೆನಪಾಗುತ್ತದೆ. ಇಂದು ನಾನು ಆ ವಧುವಿನಂತೆಯೇ ಇದ್ದೇನೆ. ಬಹುಶಃ ಇದು ಅಂತಹ ಭಾವನೆಗೆ ಒಳಗಾಗುವ ಕ್ಷಣವಾಗಿದೆ. ಭವಿಷ್ಯದಲ್ಲಿ ನಾನು ಅಂತಹ ಭಾವರಹಿತ ಸಮಚಿತ್ತದಿಂದ NDTV ಬಗ್ಗೆ ಮಾತನಾಡುತ್ತೇನೆ.

ಒಂದು ಟಿವಿಯನ್ನು ನಿರ್ಮಿಸುವುದು ತಂಡಗಳೇ ಎಂಬುದನ್ನು ಎನ್‌ಡಿಟಿವಿ ನನಗೆ ಕಲಿಸಿದೆ. ಆಂಕರ್‌ಗಳು ಹೆಚ್ಚು ಪ್ರಾಮುಖ್ಯತೆ ಪಡೆದು, ತಾರೆಗಳಾದಾಗ, ಈ ಪರಿಕಲ್ಪನೆಯು ಸ್ವಲ್ಪಮಟ್ಟಿಗೆ ಹಾನಿಗೊಳಗಾಗುತ್ತದೆ. ಆದಾಗ್ಯೂ, ಇಂದಿಗೂ ನಾನು ನಂಬುತ್ತೇನೆ, ನಿಮ್ಮ ತಂಡವು ಉತ್ತಮವಾಗಿದ್ದರೆ, ನಿಮ್ಮ ಕೆಲಸವು ಉತ್ತಮವಾಗಿರುತ್ತದೆ ಎಂದು.

ನಾನು ಔಪಚಾರಿಕವಾಗಿ ಆಗಸ್ಟ್ 1996 ರಲ್ಲಿ ಅನುವಾದಕನಾಗಿ NDTV ಗೆ ಸೇರಿಕೊಂಡೆ. ಆದರೆ ಅದಕ್ಕೂ ಮುನ್ನ ಎನ್‌ಡಿಟಿವಿಯಲ್ಲಿ ವೀಕ್ಷಕರು ಬರೆದ ಕೈಬರಹದ ಪತ್ರಗಳನ್ನು ಓದಿ ಕೆಲಸ ಮಾಡುತ್ತಿದ್ದೆ. ಈ ಪತ್ರಗಳು ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಆಯಾ ಆಂಕರ್ ಗಳನ್ನು ಉದ್ದೇಶಿಸಿ ಇರುತ್ತಿತ್ತು. ಆ ಪತ್ರಗಳನ್ನು ಓದುವಾಗ, ದೇಶದಲ್ಲಿ ಟಿವಿ ವೀಕ್ಷಕರು ಹೇಗೆ ತಯಾರಾಗುತ್ತಿದ್ದಾರೆ ಎಂಬುದು ನನಗೆ ತಿಳಿಯಿತು. ಆ ಪತ್ರಗಳನ್ನು ಓದಿ, ಅದರ ಆಧಾರದ ಮೇಲೆ ವರದಿಗಳನ್ನು ಸಿದ್ಧಪಡಿಸಿ ಆಯಾ ಕಾರ್ಯಕ್ರಮಗಳ ನಿರ್ಮಾಪಕರಿಗೆ ನೀಡುವುದು ನನ್ನ ಕೆಲಸವಾಗಿತ್ತು. ಆಗ ನಾನು ದಿನಗೂಲಿ ನೌಕರನಾಗಿದ್ದೆ. ಹಾಗೆ ನನಗೆ ಹಣ ಕೊಡುತ್ತಿದ್ದರು.

ಪ್ರೇಕ್ಷಕರೊಂದಿಗೆ ಪ್ರಾಮಾಣಿಕವಾಗಿರುವುದು..

ನಾನು ಇನ್ನೂ ಅಂತಹ ಕೆಲಸವನ್ನು ಮಾಡುತ್ತಿದ್ದೇನೆ ಎಂದು ನಾನು ಭಾವಿಸುತ್ತೇನೆ. ಇಂದಿಗೂ ಸಾವಿರಾರು ಜನ ನನಗೆ ಪತ್ರ ಬರೆಯುತ್ತಾರೆ. ನಿಮ್ಮಲ್ಲಿ ಕೆಲವರಿಂದ ನಾನು ಇನ್ನೂ ಕೈಬರಹದ ಪತ್ರಗಳನ್ನು ಸ್ವೀಕರಿಸುತ್ತೇನೆ. ನಾನು ಅವುಗಳಲ್ಲಿ ಹೆಚ್ಚಿನದನ್ನು ಓದುತ್ತೇನೆ ಮತ್ತು ಸಾಧ್ಯವಾದಷ್ಟು ಉತ್ತರಿಸುತ್ತೇನೆ. ನಾನು ನಿಮ್ಮ ಮುಂದೆ ನನ್ನನ್ನು ಬಹಿರಂಗಪಡಿಸುತ್ತೇನೆ. ನಾನು ನಿಮ್ಮ ಬಗ್ಗೆ ಏನು ಯೋಚಿಸುತ್ತೇನೆ ಎಂದು ಪ್ರಾಮಾಣಿಕವಾಗಿ ಹೇಳಲು ಬಯಸುತ್ತೇನೆ. ನಾನು ನನ್ನ ಆಲೋಚನೆಗಳನ್ನು ಕತ್ತರಿಸಿದರೆ, ಅದು ನಿಮ್ಮೊಂದಿಗೆ ಅಪ್ರಾಮಾಣಿಕ ವಾಗಿರುತ್ತದೆ. ಒಂದು ರೀತಿಯಲ್ಲಿ ನಾನು ಫುಲ್ ಸರ್ಕಲ್ ತಿರುಗಿ ಬಂದಿದ್ದೇನೆ ಅನಿಸುತ್ತದೆ. ನಾನು ವೀಕ್ಷಕರ ಅಭಿಪ್ರಾಯ ಪತ್ರಗಳನ್ನು ಓದುತ್ತಿದ್ದೆ ಮತ್ತು ಈಗಲೂ ನಾನು ಓದುತ್ತೇನೆ.

ನಿಮ್ಮ ಸಲಹೆಗಳು, ಪ್ರತಿಕ್ರಿಯೆಗಳು, ಭರವಸೆಗಳು, ಟೀಕೆಗಳು ಮತ್ತು ಸಾಂದರ್ಭಿಕ ಆರೋಪಗಳ ನಡುವೆ ನನ್ನ ಇಡೀ ಜೀವನ ಸಾಗಿದೆ. ಅದೇ ನನ್ನನ್ನು ನಿನಗೆ ಹತ್ತಿರವಾಗಿಸಿದೆ. ನಾನು ನಿಮ್ಮ ನಡುವೆ ಇರುವಾಗ, ನಾನು ನಿಜವಾಗಿಯೂ ನನಗಾಗಿ ಬದುಕುವುದಿಲ್ಲ. ಈಗ, ನಾನು ಅದಕ್ಕಾಗಿ ಸಮಯವನ್ನು ಕಂಡುಕೊಳ್ಳುತ್ತೇನೆ ಎಂದು ನಾನು ಭಾವಿಸುತ್ತೇನೆ.

ಯಾರೋ ಎಳೆದಿದ್ದರಿಂದ ಗೂಡು ಕಳೆದುಕೊಂಡ ಪಕ್ಷಿ ಯಂತಾಗಿದೆ ನನ್ನ ಪರಿಸ್ಥಿತಿ. ಆದರೆ ಪಕ್ಚಿಗೆ ಈಗ ಹಾರಲು ವಿಶಾಲವಾದ ಆಕಾಶವಿದೆ. ಪತ್ರಕರ್ತರು ಬರೆದ ವರದಿಗಳು ಮತ್ತು ಲೇಖನಗಳನ್ನು ನಾನು ಇಂಗ್ಲಿಷ್‌ನಿಂದ ಹಿಂದಿಗೆ ಅನುವಾದಿಸುತ್ತಿದ್ದೆ. ಆ ನಂತರ ನಾನು ವರದಿಗಾರನಾದೆ. ನಾನು ರವೀಶ್ ಕೀ ರಿಪೋರ್ಟ್ ಎಂಬ ದೈನಂದಿನ ಕಾರ್ಯಕ್ರಮದ ನಿರ್ಮಾಪಕನಾದೆ.

ಪತ್ರಗಳನ್ನು ಓದುವ ಕೆಲಸಕ್ಕೆ ಸೇರಿದ ವ್ಯಕ್ತಿ ಗುಂಪಿನ ಸಂಪಾದಕರಾದರು. ಅದು ಎನ್‌ಡಿಟಿವಿಯಲ್ಲಿ ಮಾತ್ರ ಸಾಧ್ಯ. ಇಂದು ಆ ವ್ಯಕ್ತಿ ತನ್ನ ರಾಜೀನಾಮೆಯನ್ನು ಸಮರ್ಥಿಸುತ್ತಿದ್ದಾರೆ. ಈ ಸಂಸ್ಥೆಯ ಹಿಂದೆ ದಾರವನ್ನು ಎಳೆಯುವ ಪ್ರಬಲ ವ್ಯಕ್ತಿಗಳಿದ್ದಾರೆ. ಹಾಗಾಗಿ ಅಂತಹ ದಿನ ಬರುವುದು ನಿಶ್ಚಿತ. ಆದರೆ ಈಗ ಆ ದಿನ ಬಂದಿರುವುದರಿಂದ ಅದು ಅವನತಿ ಹೊಂದುವಂತೆ ತೋರುತ್ತಿದೆ.

ನನ್ನನ್ನು ಮೌಲ್ಯಮಾಪನ ಮಾಡುವಾಗ, ನಾನು ಬಹಳ ಕೆಳ ಸ್ಥಾಯಿಯಲ್ಲಿ ಪ್ರಾರಂಭಿಸುತ್ತಿದ್ದೇನೆಂದು ನನ್ನ ಬಗ್ಗೆ ವಿಷಾದಿಸುವುದಿಲ್ಲ ಎಂದು ನಾನು ಭಾವಿಸುತ್ತೇನೆ. ನಾವು ಅತ್ಯಂತ ಕೆಳ ಸ್ಥಾಯಿಯಲ್ಲಿ ಪ್ರಾರಂಭಿಸಿದ್ದೇವೆ ಎಂದು ಹೇಳುವ ಮೂಲಕ ನಾನು ಸಹಾನುಭೂತಿ ಗಳಿಸುವವನಲ್ಲ. ಅಂತವರು ಬಾಲ್ಯದಲ್ಲಿ ಚಾಯ್ ಅಂಗಡಿಯಲ್ಲಿ ತನ್ನ ಬಾಲ್ಯವನ್ನು ಹೇಗೆ ಕಳೆದನು ಎಂದು ಇದ್ದಕ್ಕಿದ್ದಂತೆ ಹೇಳುತ್ತಾರೆ. ಅದೇ ಸಮಯದಲ್ಲಿ ಅವರು ಅತ್ಯಂತ ದುಬಾರಿ ವಿಮಾನಗಳಲ್ಲಿ ಪ್ರಯಾಣಿಸುತ್ತಾರೆ.

ನನ್ನ ಜೀವನ ಪ್ರಯಾಣವು ಅಸಾಮಾನ್ಯವಾದುದು ಎಂದು ನಾನು ಭಾವಿಸುವುದಿಲ್ಲ. ಈ ದೇಶದ ಪ್ರತಿಯೊಬ್ಬರ ಜೀವನವೂ ಕಷ್ಟಕರವಾಗಿದೆ. ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಲ್ಲಿ ರೋಗಿಗಳ ಕುಟುಂಬಗಳೊಂದಿಗೆ ಮಾತನಾಡಿ ನೋಡಿ. ಅಲ್ಲಿಗೆ ತಲುಪಲು ಅವರು ಎಷ್ಟು ಬೆಟ್ಟಗಳನ್ನು ಹತ್ತಿದರು ಎಂದು ಊಹಿಸಲೂ ಸಾಧ್ಯವಿಲ್ಲ. ಅವರಿಗೆ ಹೋಲಿಸಿದರೆ ನಮ್ಮ ಕಷ್ಟಗಳು ಅಲ್ಪವಾಗಿದೆ.

“ನಾನು ನಿಮಗಾಗಿ ಕೆಲಸ ಮಾಡಲು ಪ್ರಯತ್ನಿಸಿದೆ”

ಇಂದು ನಾನು ನಿಮ್ಮೊಂದಿಗೆ ಟಿವಿ ವೀಕ್ಷಕರ ಬಗ್ಗೆ ಮಾತನಾಡಲು ಬಯಸುತ್ತೇನೆ. ಇತ್ತೀಚೆಗೆ ನಾವೆಲ್ಲರೂ ವ್ಯವಸ್ಥೆಗಳು ಮತ್ತು ರಚನೆಗಳು ಕುಸಿಯುತ್ತಿರುವುದನ್ನು ಮತ್ತು ಸಮಾಜದಲ್ಲಿ ದ್ವೇಷದ ಅಲೆಗಳು ವ್ಯಾಪಿಸುತ್ತಿರುವುದನ್ನು ನೋಡುತ್ತಿದ್ದೇವೆ. ಆದರೆ ಹೊಸ ವ್ಯವಸ್ಥೆ ರೂಪುಗೊಂಡಿರುವುದನ್ನು ನಾನು ನನ್ನ ಕಣ್ಣಾರೆ ನೋಡುತ್ತಿದ್ದೇನೆ. ಆ ವ್ಯವಸ್ಥೆಯನ್ನು ಪೌರತ್ವ ಎಂದು ಕರೆಯಲಾಗುತ್ತದೆ. NDTV ನನಗೆ ಅವಕಾಶ ಕೊಟ್ಟಾಗಲೆಲ್ಲ ನಾನು ನಿಮಗಾಗಿ ಕೆಲಸ ಮಾಡಲು ಪ್ರಯತ್ನಿಸಿದೆ. ನನ್ನ ಅವಕಾಶವನ್ನು ನಿಮ್ಮ ಕಥೆಗಳಿಂದ ತುಂಬಿಸಿದೆ.

– ಮುಂದುವರಿಯುತ್ತದೆ.

ಅನುವಾದ : ರೇಣುಕಾ ಭಾರತಿ

(ರವೀಶ್ ಕುಮಾರ್ ಅವರು ಅತ್ಯಂತ ಗೌರವಾನ್ವಿತ ಭಾರತೀಯ ಪತ್ರಕರ್ತರಾಗಿದ್ದಾರೆ. ಅವರು 1996 ರಲ್ಲಿ NDTV ಗೆ ಸೇರಿದರು. ಮತ್ತು ರವೀಶ್ ಕೀ ರಿಪೋರ್ಟ್, ದೇಶ್ ಕೀ ಬಾತ್, ಪ್ರೈಮ್ ಟೈಮ್ ವಿಥ್ ರವೀಶ್ ಮುಂತಾದ ಅನೇಕ ಕಾರ್ಯಕ್ರಮಗಳನ್ನು ನಿರ್ವಹಿದ್ದಾರೆ. ಏಷಿಯಾದಲ್ಲೇ ಅತ್ಯಂತ ಶ್ರೀಮಂತ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಆಪ್ತ ಸ್ನೇಹಿತರಾದ ಗೌತಮ್ ಅದಾನಿ NDTVಯನ್ನು ಕೊಂಡುಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಹೊರಬಂದ ಕೆಲವೇ ಗಂಟೆಗಳಲ್ಲಿ ರವೀಶ್ ಕುಮಾರ್ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ NDTV ಗೆ ರಾಜೀನಾಮೆ ನೀಡುವುದಾಗಿ ಘೋಷಿಸಿದರು. ಅವರು ರಾಜೀನಾಮೆ ನೀಡಿದ ಸಂದರ್ಭದಲ್ಲಿ ಡಿಸೆಂಬರ್ 1, 2022 ರಂದು ಅವರು ಮಾಡಿದ ಉಪನ್ಯಾಸದ ಅನುವಾದ)

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!