ಬಿಗಿಯಾದ ಬೇರುಗಳಿಲ್ಲದೇ ಹೋದರೆ ಅದು ಯಾವುದೇ ಜಾತಿಯ ಗಿಡವಾಗಲಿ, ಮರವಾಗಲಿ ಒಂದು ಸಣ್ಣ ಗಾಳಿಗೆ ಬಿದ್ದು ಹೋಗುತ್ತದೆ. ರಾಜಕಾರಣದಲ್ಲಿಯೂ ಅಷ್ಟೇ. ಎತ್ತರಕ್ಕೆ ಬೆಳೆಯುವುದಷ್ಟೇ ಮುಖ್ಯವಲ್ಲ, ಕೆಳಗಡೆ ಬೇರು ಬಿಟ್ಟುಕೊಳ್ಳುವುದು ಅದಕ್ಕಿಂತ ಮುಖ್ಯ. ಇಲ್ಲದಿದ್ದರೆ ಪತನಕ್ಕೇನು ಸಮಯವೇ ಬೇಡ. ಏಕ ಕಾಲದಲ್ಲಿಯೇ ಬೇರು ಬಿಟ್ಟುಕೊಳ್ಳುತ್ತಲೇ ಎತ್ತರಕ್ಕೇರುತ್ತಿರುವ ಸಿ.ಟಿ.ರವಿಯವರನ್ನು ಸೋಲಿಸಲೇಬೇಕೆಂಬ ಹಟ-ಹಗೆ ಇರುವುದು ಯಾವುದೋ ಲೋಕಲ್ ರಾಜಕಾರಣಿಗಳಿಗಲ್ಲ. ಖುದ್ದು ಸಿದ್ದರಾಮಯ್ಯ ಡಿಕೆಶಿ ಕ್ಯಾಂಪಿನಲ್ಲಿಯೇ ಸಿ.ಟಿ.ರವಿಯನ್ನು ಸೋಲಿಸುವ “ಟಾರ್ಗೆಟ್ ಸಿ.ಟಿ.ರವಿ” ಎಂಬ ಸ್ಕೆಚ್ಚು ಜನ್ಮತಾಳಿ ಚಿಗುರೊಡೆದಿದೆ.
ಕಾಂಗ್ರೆಸ್ಸಿನವರ ಅಷ್ಟು ಶುಗರ್ರು, ಬಿಪಿಗಳ riseಗೆ ಸಿ.ಟಿ.ರವಿಯವರ ಸ್ಟೇಟಮೇಂಟುಗಳದ್ದೇ ಸಿಂಹಪಾಲು ಕಾರಣ. ಬಿಜೆಪಿಯಲ್ಲಿ ಪಕ್ಷನಿಷ್ಠೆಯನ್ನು ತನ್ನ ಮೌನಗಳಿಂದ ಸಾಬೀತು ಮಾಡಲು ಅವಕಾಶಗಳೇ ಇಲ್ಲ. RSSನ ಕಮ್ಯುನಿಟಿಯವರಿಗೆ ಅಡಿಯಿಂದ ಮುಡಿಯವರೆಗೂ ಸಂತೋಷವಾಗುವಂತೆ
ಕಾಂಗ್ರೆಸ್ಸ್ ಪಕ್ಷವನ್ನು ಮತ್ತು ಕಾಂಗ್ರೆಸ್ಸಿಗರನ್ನು ಟೀಕಿಸಿದರೇ ಮಾತ್ರ ಬಿಜೆಪಿಯಲ್ಲಿ ಪ್ರಮೋಷನ್ನು. ಬಿಜೆಪಿಯೊಳಗಿನ ಈ ಸತ್ಯವನ್ನು ತಿಳಿದಿರುವ ಸಿ.ಟಿ.ರವಿಯವರು ಜಾತಿಯಿಂದ ಒಕ್ಕಲಿಗರಾದರೂ ನೀತಿಯಲ್ಲಿ RSSನ ಬ್ರಾಹ್ಮಣ್ಯವನ್ನೇ ರವಿ ಉಸಿರಾಡುತ್ತಿರುವುದು. ರವಿಯವರಲ್ಲಿ ಹರಿಯುತ್ತಿರುವ ರಕ್ತವೂ ಕೇಸರಿ ಬಣ್ಣದ್ದೇ ಎಂಬಷ್ಟರ ಮಟ್ಟಿಗೆ ಸೈದ್ಧಾಂತಿಕ ವಾದಗಳಿವೆ.
ಅವರ ಎರಡು ತುಟಿಗಳು, ಅವರ ನಾಲಗೆ ಸಿ.ಟಿ.ರವಿಯದ್ದೇ ಇರಬಹುದು. ಆದರೆ ರವಿಯವರ ಆ ತುಟಿಗಳ ನಡುವೆ ಹಾದು ಬರುವ ಮಾತುಗಳು ಮಾತ್ರ RSSನ ಬ್ರಾಹ್ಮಣ್ಯಗಳು ಹೇಳುವ ಮಾತುಗಳವು. ಈಗ ಸಿ.ಟಿ.ರವಿಯವರು ಕಾಂಗ್ರೆಸ್ ವಿರುದ್ಧ ಬೆಂಕಿ ಉಂಡೆಯಂತೆ ಸಿಡಿಯುತ್ತಿರವ “ಅಗ್ರೆಸ್ಸಿವ್ ಅಟ್ಯಾಕರ್”. RSSನ ಸ್ಟೋರಿಗಳಿಗೆ ಹಿರೋ ಆಗಲು ಸಿ.ಟಿ.ರವಿ ಕಾಂಗ್ರೆಸ್ ವಿರುದ್ಧ ಬ್ಲಾಸ್ಟಿಂಗ್ ಸ್ಟೆಟಮೆಂಟುಗಳನ್ನು ಕೊಡುವ ತಾಕತ್ತನ್ನು ನೋಡಿಯೇ ಸಂತೋಷಪ್ಪನ ಗ್ಯಾಂಗು ರಾಷ್ಟ್ರಮಟ್ಟದಲ್ಲಿ ಸಿ.ಟಿ.ರವಿಯವರನ್ನು ಬೆಳೆಸುತ್ತಿರುವುದು. ರಕ್ತ ಬಿಸಿ ಇರುವಷ್ಟು ದಿನ ಸಿ.ಟಿ.ರವಿಯವರ ತಾಕತ್ತನ್ನು RSSಬಳಸಿಕೊಳ್ಳಲಿದೆ.
ಸಿ.ಟಿ.ರವಿಯ ಹೆಗಲ ಮೇಲೆ RSS ತನ್ನ ಗನ್ನನ್ನು ಇಟ್ಟಿದೆ. ಆ ಗನ್ನನ್ನು ತನ್ನ ಹೆಗಲ ಮೇಲೆ ಇಡುಲು ಸಿ.ಟಿ ರವಿ ಎಷ್ಟು ದಿನ ಸಮರ್ಥರೋ ಅಷ್ಟು ದಿನ RSSಗೂ ಸಿ.ಟಿ.ರವಿ ಸಮರ್ಥ ಸೈನಿಕನೇ. ಈ ಕಾರಣಕ್ಕೆ ಕಾಂಗ್ರೆಸೆಂಬ ಕಾಂಗ್ರೆಸ್ಸು “ಟಾರ್ಗೆಟ್ ಸಿ.ಟಿ.ರವಿ” ಎಂಬ ಟೈಟಲ್ ಮೂಲಕ ಸಿ.ಟಿ.ರವಿಯನ್ನು ಮುಂದಿನ ಚುನಾವಣೆಯಲ್ಲಿ ಸೋಲಿಸಲು ರಾಜ್ಯದ ಪ್ರಮುಖ ಲೆಪ್ಟಿಸ್ಟುಗಳೆಲ್ಲಾ ಸೇರಿಕೊಂಡು ಸಿದ್ದು-ಡಿಕೆಶಿಯನ್ನು ಒಂದು ಮಾಡುವುದರ ಮೂಲಕ ಸ್ಕೆಚ್ಚುಗಳ ಮೇಲೆ ಸ್ಕೆಚ್ಚುಗಳನ್ನು ಸ್ಟಡಿ ಮಾಡಿ, ರೆಡಿ ಮಾಡಿ ಸಿ.ಟಿ.ರವಿಯನ್ನು ಸೋಲಿಸುವ ಬ್ಲೂಪ್ರಿಂಟ್ ಸದ್ಯದಲ್ಲೇ ಪೈನಲ್ ಆಗಲಿದೆ.
ಅಷ್ಟು ಲೆಪ್ಟಿಸ್ಟ್ ಕ್ಯಾಂಪುಗಳ ಪಾಲಿಗೆ ಸಿ.ಟಿ.ರವಿ ಮೊದಲಿನಿಂದಲೂ ವಿಲನ್. ಈಗ ಅದೇ ರವಿ ಕೇವಲ ವಿಲನ್ನಾಗಿ ಉಳಿದಿಲ್ಲ. ರೈಟಿಸ್ಟ್ ವಿಲನ್-ಗಳ ಗ್ಯಾಂಗಿಗೆ ರವಿ “ಮಾಸ್ಟರ್ ಆಪ್ ವಿಲನ್” ಆಗಿ ಎಮರ್ಜ್ ಆಗಿದ್ದಾರೆ. ಸಿ.ಟಿ.ರವಿ ಕೇವಲ ರಾಜಕೀಯಕ್ಕೆ ಅಂಟಿಕೊಂಡಿದ್ದರೆ ಲೆಪ್ಟುಗಳು ತಲೆನೂ ಕೆಡಿಸಿಕೊಳ್ಳುತ್ತಿರಲಿಲ್ಲ, ತೊಡೆನೂ ತಟ್ಟುತ್ತಿರಲಿಲ್ಲ. ಆದರೆ ಸಿ.ಟಿ.ರವಿ ಲೆಪ್ಟುಗಳ ಪಾಲಿಗೆ ಈಗ ಧರ್ಮ ಸಂಘರ್ಷಗಳ ಬೀಜ ಮತ್ತು ಬೆಂಕಿ. ಈ ಕೋಮು ಬೀಜದ ಮೊಳಕೆ, ಚಿಗುರನ್ನು ಚಿವುಟಲೆಂದೇ, ಧರ್ಮದ ಹೆಸರಲ್ಲಿ ಉರಿಯುವ ಸಿ.ಟಿ ರವಿ ಎಂಬ ಬೆಂಕಿಯನ್ನು ಆರಿಸಲೆಂದೇ ಸಿ.ಟಿ. ರವಿಯವರ ಸೋಲು ಲೆಪ್ಟುಗಳಿಗೆ ತೀರ ಅಗತ್ಯವಾಗಿದೆ.
ಡಿ.ಕೆ.ಶಿ, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಯಾವ ಮುಖಂಡರನ್ನೂ ಸಿ.ಟಿ.ರವಿ ಬಿಟ್ಟಿಲ್ಲ. ಬಿಡುತ್ತಲೂ ಇಲ್ಲ. ಇದು ಸಿ.ಟಿ.ರವಿಯವರ ಸ್ವಾತಂತ್ರ್ಯ ಎಂದು ಸುಮ್ಮನೆ ಕೂರಲಿಕ್ಕೆ ಕಾಂಗ್ರೆಸ್ಸಿಗರಿಗೆ ಇರುವ ಸೀನಿಯಾರಿಟಿಗೆ ಮುಖಭಂಗವಾಗಿದೆ. ಆ ಹುಡುಗನ (ರವಿ) ಕೈಯಲ್ಲಿ ಇಂತಹ ಆರೋಪಗಳನ್ನು ಕೇಳುವುದೇ? ಎಂಬ ಕೊರಗಿಗೆ ಉತ್ತರವಾಗಿ ಈ ಬಾರಿ ಸಿ.ಟಿ.ರವಿಯವರನ್ನು ಸೋಲಿಸಲೇಬೇಕೆಂಬ “ಗಟ್ಟಿ ನಿರ್ಣಯವೊಂದು “ಚಿಕ್ಕಮಗಳೂರು ಕ್ಷೇತ್ರದಲ್ಲಿ ಅಖಾಡಕ್ಕೆ ಇಳಿಯಲಿದೆ.
ಅಷ್ಟಕ್ಕೂ ಸಿ.ಟಿ.ರವಿ ವಿಧಾನಸಭೆಗೆ ಸ್ಪರ್ಧೆ ಮಾಡುತ್ತಾರಾ? ಅಥವಾ ಉಡುಪಿ ಚಿಕ್ಕಮಗಳೂರು ಲೋಕಸಭೆಗೆ ಹೋಗುತ್ತಾರಾ? ಎಂಬ ಪ್ರಶ್ನೆಗಳು ಎದ್ದು ಕುಂತಿವೆ. ಒಂದು ಊರಿಮಾರಮನನ್ನು ತಂದು ನಿಲ್ಲಿಸಿದರು ಬಿಜೆಪಿಯಲ್ಲಿ ಎಂ.ಪಿ ಆಗಲು ಸುಲಭವಿರುವ ಕ್ಷೇತ್ರವಿದು. ಅಂತದ್ದರಲ್ಲಿ ಸಿ.ಟಿ.ರವಿಯನ್ನು ಲೋಕಸಭೆ ಚುನಾವಣೆಯಲ್ಲಿ ಸೋಲಿಸುವುದು ಸಾಧ್ಯವೇ ಇಲ್ಲದ ಮಾತು. ರವಿಯವರು ಒಮ್ಮೆ ಲೋಕಸಭೆಗೆ ಹೋಗಿ ಸೆಂಟ್ರಲ್ ಮಿನಿಸ್ಟರ್ ಆಗುವ ಆಸೆ ಇದೆ. ಆದರೆ ಆ ಆಸೆಯನ್ನು ಸಿ.ಟಿ.ರವಿ ಬಚ್ಚಿಟ್ಟುಕೊಂಡಿದ್ದಾರಷ್ಟೇ..
ಇದನ್ನೂ ಓದಿ : ಸಿದ್ದೇಶ್ವರ ಸ್ವಾಮೀಜಿ ಮೋದಿಯನ್ನಲ್ಲದೆ, ಬಸವಣ್ಣನನ್ನ ಹೊಗಳುತ್ತಾರೆಯೇ?!
ಆದರೆ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಸಿ.ಟಿ.ರವಿಯನ್ನು ಸೋಲಿಸುವ ಪ್ಲಾನು ಕಳೆದ ಇಪತ್ತು ವರ್ಷದಿಂದ ಪ್ಲಾನಾಗಿಯೇ ಉಳಿದಿದೆ. ಇದಕ್ಕಾಗಿಯೇ ಈಗ ಸಾದು ಲಿಂಗಾಯತ ಜಾತಿಯ ಹರೀಶ್ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಮಾಡಿ, ಕಾಂಗ್ರೆಸ್ ಪಕ್ಷದಿಂದಲೇ ಬಂಡವಾಳ ಹೂಡುವ ಲೆಕ್ಕಚಾರವೂ ನಡೆದಿದೆ. ಜೆಡಿಎಸ್. ಸಿಪಿಐ, ದಲಿತ ಸಂಘಟನೆಗಳು, ಕೆಲವು ಕನ್ನಡ ಪರ ಸಂಘಟನೆಗಳ ಬೆಂಬಲ ಪಡೆದು ಹರೀಶನೆಂಬ ವ್ಯಕ್ತಿಯ ಮೂಲಕ ಲಿಂಗಾಯತರ ಸ್ಥಳೀಯರ ನಾಯಕತ್ವಕ್ಕೆ ಸಿದ್ದರಾಮಯ್ಯನ ಮೂಲಕ ಅಹಿಂದ ವರ್ಗವನ್ನೂ ಜೋಡಿಸಿ ಹರೀಶ್ ಅವರನ್ನು ಒಮ್ಮತದ ಅಭ್ಯರ್ಥಿಯನ್ನಾಗಿ ಮಾಡಲು ಎಲ್ಲ ಚರ್ಚೆಗಳು ನಡೆದಿವೆ.
ಇಷ್ಟಕ್ಕೂ ವಿಜಯೇಂದ್ರನ ದುಡ್ಡು ಇಲ್ಲಿಗೆ ಹರಿದು ಬಂದರೂ ಆಶ್ಚರ್ಯವಿಲ್ಲ. ಯಡಿಯೂರಪ್ಪನವರನ್ನು ಇಳಿಸಿದ್ದರಲ್ಲಿ, ವಿಜಯೇಂದ್ರನಿಗೆ ಪರಿಷತ್ ಟಿಕೆಟ್ ತಪ್ಪಿಸಿ ಮಂತ್ರಿ ಆಗುವುದನ್ನು ತಡೆದ ಸಂತೋಷಪ್ಪನ ಪ್ಲಾನಿನನಲ್ಲಿ ರವಿಯದ್ದು ಸಹ ಪ್ರೈಮ್ ಪಾಟ್ನರ್ ಶಿಪ್ ಇದೆ ಎಂಬುದು BSYಕ್ಯಾಂಪು ದಪ್ಪಕ್ಷರದಲ್ಲಿ ಬರೆದುಕೊಂಡು ಕುಂತಿದೆ.
ಸಿ.ಟಿ.ರವಿಯವರು ತನ್ನ ಎದುರಿನವರು ಅದೆಷ್ಟೇ ದೊಡ್ಡ ನಾಯಕನಾಗಿರಲಿ, ಅವರಿಂದ ನಷ್ಟವಾದರೂ ಸರಿ ಮೈಮೇಲೆ ಎಳೆದುಕೊಂಡು ವಾಗ್ದಾಳಿ ನಡೆಸಿ ನಾಗಪುರದ ಪುರೋಹಿತರಿಂದ ಮಾರ್ಕ್ಸುಗಳ ಮೇಲೆ ಮಾರ್ಕ್ಸುಗಳನ್ನು ಪಡೆದು ಮುಖ್ಯಮಂತ್ರಿ ಆಗದಿದ್ದರೂ ಪರವಾಗಿಲ್ಲ “ಮುಖ್ಯಮಂತ್ರಿ ಅಭ್ಯರ್ಥಿ” ಎನ್ನುವ ಮಟ್ಟವನ್ನು ತಲುಪಿದ್ದಾರೆ ಮತ್ತು RSSನವರು ತಲುಪಿಸಿದ್ದಾರೆ.
ಹಿಂದುತ್ವ, ದೇಶಪ್ರೇಮ, ಕಾಶ್ಮೀರ, ಇಂಡಿಯಾ ಪಾಕಿಸ್ತಾನದ ಗಡಿಯಲ್ಲಿನ ವಿವಾದಗಳು, ಮಂದಿರ ಮಸೀದಿ ಚರ್ಚುಗಳ ವಿವಾದಗಳು, ಮತಾಂತರ, ಮುಸ್ಲಿಂ ಕ್ರೈಸ್ತರ ವಿರುದ್ಧದ ವಿವಾದಗಳು, ಹಿಜಾಬು, ದೇವರು ಧರ್ಮದ ವಿವಾದಗಳು ಇಂತಹ ಪ್ರಕ್ಷುಬ್ಧ ವಿಚಾರಗಳಲ್ಲಿ ಬಿಜೆಪಿಯೇತರ ಎಲ್ಲಾ ಪಕ್ಷಗಳ ನಾಯಕರ ಮೇಲೆ ವಾಗ್ದಾಳಿ ನಡೆಸಿ RSSನ್ನು ಸಂತೃಪ್ತಗೊಳಿಸುವ ಪ್ರಮುಖರಲ್ಲಿ ಸಿ.ಟಿ.ರವಿ ಈಗ ಅಗ್ರಸ್ಥಾನದಲ್ಲಿದ್ದಾರೆ. ಇದೇ ವಿಚಾರಕ್ಕೆ ಸಿ.ಟಿ.ರವಿಯವರನ್ನು ಚುನಾವಣೆಯಲ್ಲಿ ಸೋಲಿಸುವ ವಿಶೇಷ ಬಂಡವಾಳದೊಂದಿಗೆ ಕಾಂಗ್ರೆಸ್ ಪಕ್ಷ ತೋಳು ಮುದುರಿಕೊಂಡು ಕುಸ್ತಿಗೆ ಇಳಿಯಲಿದೆ.
ಇಷ್ಟರ ನಡುವೆ ಸಿ.ಟಿ.ರವಿಯವರನ್ನು ಸೋಲಿಸುವುದು ಅಷ್ಟು ಸುಲಭವೇ ಎಂಬುದಕ್ಕೆ ಉತ್ತರ ಹುಡುಕುತ್ತ ಹೊರಟರೆ ಸಿ.ಟಿ.ರವಿಯನ್ನು ಸೋಲಿಸುವ ಕುರುಹು ಯಾರಿಗೂ ಸಿಗುತ್ತಿಲ್ಲ. ಆದರೆ ರವಿಯವರಿಗೆ ಈ ಸಲ ಚುನಾವಣೆ ಸುಲಭವಲ್ಲ ಎಂಬುದನ್ನು ಅಲ್ಲಗೆಳೆಯುವಂತಿಲ್ಲ. ಲಿಂಗಾಯತರು, ಮುಸ್ಲಿಮರು ಕ್ರೈಸ್ತರು, ಕುರುಬರು, ದಲಿತರು ಇತರೆ ಹಿಂದುಳಿದ ವರ್ಗದವರು ಸಿ.ಟಿ.ರವಿ ವಿರುದ್ಧ ತಿರುಗಿ ಬೀಳುವಂತೆ ಕಾಂಗ್ರೆಸ್ ಮಾಡುತ್ತಿರುವ ಪ್ಲಾನುಗಳು ಯಶಸ್ವಿ ಆದರೆ ಇದೇ ಸಿ.ಟಿ.ರವಿಯವರನ್ನು ಸೋಲಿನ ಮಾಲೆ ಹುಡುಕಿದರು ಆಶ್ಚರ್ಯವಿಲ್ಲ.
- ಮನಸೂಳಿ ಮೋಹನ
ಹೋರಾಟದ ಕ್ರೆಡಿಟ್‌ಗಾಗಿ ಕಾಂಗ್ರೆಸ್ – ಸಿಜೆಪಿ ನಡುವೆ ಸಂಘರ್ಷ…

2011, ಆಗಸ್ಟ್ 16ರಂದು ಸಾಮಾಜಿಕ ಕಾರ್ಯಕರ್ತ ಅಣ್ಣ ಹಜಾರೆ ದೆಹಲಿಯ ರಾಮಲೀಲಾ ಮೈದಾನದಲ್ಲಿ ʻಲೋಕಪಾಲ್ ಮಸೂದೆʼ ಜಾರಿಗಾಗಿ ಆಗ್ರಹಿಸಿ ಉಪವಾಸ ಸತ್ಯಾಗ್ರಹ ಕೂತಿದ್ದರು. ಅದು ಮರುದಿನ ಚಳವಳಿಯ ರೂಪ ಪಡೆದು ದೇಶದಾದ್ಯಂತ ಕಾಡ್ಗಿಚ್ಚಿನಂತೆ ವಿಸ್ತರಿಸಿತ್ತು.
ಚಳವಳಿಯ ನೇತಾರರು ʻಲೋಕಪಾಲ ಮಸೂದೆ ಜಾರಿಯಾದರೆ ದೇಶದ ಜನತೆಯ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತದೆʼ ಎಂದು ಜನರ ತಲೆಯಲ್ಲಿ ಹುಳು ಬಿಟ್ಟಿದ್ದರು. ತಮ್ಮ ಸಣ್ಣಪುಟ್ಟ ಕೆಲಸಕ್ಕಾಗಿ ಸರ್ಕಾರಿ ಕಚೇರಿಗೆ ಅಲೆದಾಡಿ ಲಂಚದ ಬಿಸಿಯಲ್ಲಿ ಬೆಂದು ಹೋಗಿದ್ದ ಮಧ್ಯಮವರ್ಗದ ಜನರಿಗೆ ಅವರ ಮಾತು ರುಚಿಸಿತ್ತು. ಅಣ್ಣ ಹಜಾರೆ ಅವರಲ್ಲಿ ತಮ್ಮ ಭಾಗ್ಯವಿಧಾತನನ್ನು ಕಂಡ ಜನರಲ್ಲಿ ಯುಪಿಎ ಸರ್ಕಾರದ ವಿರುದ್ಧ ಆಕ್ರೋಶ ಹುಟ್ಟುಹಾಕಲು ಆ ಚಳವಳಿ ಯಶಸ್ವಿಯಾಗಿತ್ತು.
ಈ ಚಳವಳಿಯ ಸಾರಥಿ ಅಣ್ಣಾ ಹಜಾರೆಯಲ್ಲ, ಸಂಘಪರಿವಾರವಾಗಿತ್ತು ಎಂಬ ಸಂಗತಿ ಬಹಿರಂಗವಾಗಿ ಕೆಲವರಿಗೆ ಸಿಡಿಲು ಬಡಿದಂತಾಗಿತ್ತು. ಈ ಚಳವಳಿಯ ಉದ್ದೇಶ ಕೇವಲ ಲೋಕಪಾಲ ಮಸೂದೆ ಮಾತ್ರವಾಗಿರಲಿಲ್ಲ, ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯುವುದಾಗಿತ್ತು ಎಂಬುದು ಅನೇಕರಿಗೆ ಖಾತ್ರಿಯಾಗಿತ್ತು.
ಅದೇ ಕಾವಿನಲ್ಲಿ ಅ ಕಡೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಸಾರ್ವತ್ರಿಕ ಚುನಾವಣೆಯಲ್ಲಿ ಜಯಗಳಿಸಿತ್ತು, ಈ ಕಡೆ ʼಆಮ್ ಆದ್ಮಿʼ ಪಕ್ಷ ಹುಟ್ಟಿತ್ತು. ಈಗದು ರಾಜಕೀಯ ಇತಿಹಾಸ.
ಹದಿನೈದು ವರ್ಷದ ನಂತರ ದೇಶದಲ್ಲಿ ಮತ್ತೆ ಜೆನ್-ಝೀ ಪೀಳಿಗೆಯಿಂದಾಗಿ ಒಂದು ದೊಡ್ಡ ಚಳವಳಿ ಆರಂಭವಾಗಿದೆ. ಸಿಜೆಪಿ (ಕಾಕ್ರೋಜ್ ಜನತಾ ಪಾರ್ಟಿ) ಹೋರಾಟದ ವೇದಿಕೆ ರೂಪಿಸಿಕೊಟ್ಟಿದ್ದೆ. ಇದೂ ಸಹ ಮತ್ತೊಂದು ಅಣ್ಣಾ ಚಳವಳಿ ಆಗಬಹುದೇನೋ ಎಂಬ ಶಂಕೆ ಕೆಲವರಲ್ಲಿದೆ. ಹಾಗಾಗಿಯೇ ಸಾಮಾಜಿಕ ಜಾಲತಾಣಗಳಲ್ಲಿ ದೀಪ್ಕೆ ಹಾಗೂ ನೇಹಾ ಇವರಿಬ್ಬರಲ್ಲಿ ಯಾರು ಉತ್ತಮರು ಎಂಬ ಚರ್ಚೆ ಹುಟ್ಟಿದೆ. ಹಲವರು ನೇಹಾ ಬೋರಾ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಅದೇನೇ ಇರಲಿ. ದೇಶದಲ್ಲಿ ಜನರು ಬಿಡಿ, ವಿರೋಧ ಪಕ್ಷದ ಘಟಾನುಘಟಿ ನಾಯಕರು ಸಹ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ವಿರುದ್ಧ ಮಾತಾಡಲು ಭಯ ಪಡುವಂತಹ ವಾತಾವರಣವಿತ್ತು. ಜೆನ್ – ಝೀಗಳು ಹತ್ತು ವರ್ಷಗಳ ಭಯ ಹತ್ತೇ ದಿನದಲ್ಲಿ ದೇಶದಿಂದ ಕಿತ್ತು ಹಾಕಿದ್ದಾರೆ.
ಪ್ರಧಾನಿ ಮೋದಿಯವರು ಜೆನ್-ಝೀ ಹೋರಾಟಕ್ಕೆ ತಲೆಬಾಗಿ ತಮ್ಮ ಸಚಿವ ಸಂಪುಟದ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಪಡೆದರು. ಜತೆಗೆ ಅರ್ಧರಾತ್ರಿಯಲ್ಲಿ ಎದ್ದು ಜೆನ್-ಝೀಗಳಿಗೆ ʻಫ್ರೇಂಡ್ಸ್ʼ ಎಂದು ಕರೆಯುವಂತಹ ಸ್ಥಿತಿಗೆ ಬಂದಿದ್ದಾರೆ. ನೇಹಾ ಬೋರಾ ಎಂಬ ದಿಟ್ಟ ಹುಡುಗಿ ದೇಶದ ಬೆಳಕಾಗಿ ಕಾಣುತ್ತಿದ್ದಾಳೆ. ಸಿಜೆಪಿಯ ಸೌರವ್ ದಾಸ್, ಅಶುತೋಷ್ ರಾಂಕಾ, ಅಭೀಜಿತ್ ದಿಪ್ಕೆ ದೇಶದ ಗಮನ ಸೆಳೆಯುತ್ತಿದ್ದಾರೆ.
ಈಗ ಚುನಾವಣಾ ಆಯೋಗದ ವಿರುದ್ಧ ದೇಶದ ಎಲ್ಲಾ ವಿರೋಧ ಪಕ್ಷಗಳು, ಜನಪರ ವಿದ್ಯಾರ್ಥಿ ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರು, ಜೆನ್-ಝೀಗಳು ಹೋರಾಡುತ್ತಿದ್ದಾರೆ. ರಾಹುಲ್ ಗಾಂಧಿ ಇವರೆಲ್ಲರನ್ನೂ ಒಂದೇ ವೇದಿಕೆಗೆ ತರಲು ಸತ್ಯಾಗ್ರಹ ಎಂಬ ಡಿಜಿಟಲ್ ವೇದಿಕೆ ಹುಟ್ಟುಹಾಕಿದ್ದಾರೆ. ಇಂದು ಮಧ್ಯಾಹ್ನದ ವೇಳೆಗೆ 28 ರಾಜ್ಯಗಳು ಹಾಗೂ 8 ಕೇಂದ್ರಾಡಳಿತ ಪ್ರದೇಶಗಳಿಂದ 31,669 ಜನರು ಈ ವೇದಿಕೆಯಲ್ಲಿ ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ ಶಿಕ್ಷಣ ವ್ಯವಸ್ಥೆಯ ಕುರಿತು 5606 ಹಾಗೂ ಭ್ರಷ್ಟಾಚಾರದ ವಿರುದ್ಧ 5328 ದೂರುಗಳು ದಾಖಲಾಗಿವೆ.
ಇದು ಈಗ ಸಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಕ್ರೆಡಿಟ್ ವಾರ್ ಹುಟ್ಟುಹಾಕಿದೆ. ಈ ಸತ್ಯಾಗ್ರಹ ಸ್ಥಾಪಿಸಿದ್ದೇ ಹೋರಾಟದ ಕ್ರೆಡಿಟ್ ತಮ್ಮದಾಗಿಸಿಕೊಳ್ಳಲು ಎಂದು ಸಿಜೆಪಿ ಟೀಕೆ ಮಾಡಿದರೆ, ಕಾಂಗ್ರೆಸ್ ಅದಕ್ಕೆ ತಿರುಗೇಟು ನೀಡಿದೆ.
ಸಿಜೆಪಿ ನಾಯಕರಾದ ಅಶುತೋಷ್ ರಾಂಕಾ ಹಾಗೂ ಸೌರವ್ ದಾಸ್ ʻಸ್ವಯಂಘೋಷಿತ ಉದಾರವಾದಿ ವ್ಯವಸ್ಥೆಯು ಸಿಜೆಪಿ ಸ್ಥಾಪಕ ಅಭೀಜಿತ ದೀಪ್ಕೆ ಅವರನ್ನು ಕುಗ್ಗಿಸಲು ಯತ್ನಿಸುತ್ತಿದೆ. ತಾವೇ ಪ್ರಜಾಪ್ರಭುತ್ವದ ಹಾಗೂ ಸಂವಿಧಾನದ ಗುತ್ತಿಗೆದಾರರು ಎಂಬಂತೆ ನಡೆದುಕೊಳ್ಳುತ್ತಿದ್ದಾರೆʼ ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ತಮ್ಮ ಟ್ವಿಟರ್ ಮೂಲಕ ಹರಿಹಾಯ್ದಿದ್ದಾರೆ.
ಇದಕ್ಕೆ ಕಾಂಗ್ರೆಸ್ ನಾಯಕ ವಿಜಯ್ ತೊಟ್ಟಿತ್ತಿಲ್ ʼಎನ್‌ಎಸ್‌ಯುಐ ಹಾಗೂ ಯೂತ್ ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸುವ ಪೊಲೀಸರು, ಸಿಜೆಪಿ ಪ್ರತಿಭಟನಾಕಾರರಿಗೆ ಮುಂಬೈಯಲ್ಲಿ ಮುಕ್ತವಾಗಿ ಓಡಾಡಲು ಏಕೆ ಬಿಟ್ಟಿದ್ದಾರೆʼ ಎಂದು ಪ್ರಶ್ನಿಸಿ, ತಿರುಗೇಟು ನೀಡಿದ್ದಾರೆ.
ಇದನ್ನು ಕಂಡು ʼಕಾಂಗ್ರೆಸ್ ತನ್ನ ಬೆಂಬಲಿಗರನ್ನು ನಿಯಂತ್ರಿಸಬೇಕು. ಸಿಜೆಪಿ, ಐಸಾ ಹಾಗೂ ಕಾಂಗ್ರೆಸ್ ಹೋರಾಡುತ್ತಿರುವುದು ಒಂದೇ ಶತ್ರುವಿನ ವಿರುದ್ಧ. ಈ ಸಮಯದಲ್ಲಿ ಒಬ್ಬರಿಗೊಬ್ಬರು ಕೆಸರೆರಚಾಟ ನಡೆಸುವುದು ಸರಿಯಲ್ಲʼ ಎಂದು ಕಾಂಗ್ರೆಸ್‌ನ ತುಷಾರ್ ಗಾಂಧಿ ಸಲಹೆ ನೀಡಿದ್ದಾರೆ.
ಈ ಟ್ವಿಟರ್ ವಾರ್ ಕೆಲವರಲ್ಲಿ ಸಿಜೆಪಿ ಮುಂದಾಳುಗಳು ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಅಣತಿಯಂತೆ ಕೆಲಸ ಮಾಡುತ್ತಿದ್ದಾರೇನೋ ಎಂಬ ಅನುಮಾನ ಹೆಚ್ಚಿಸಿದೆ. ಮುಂದೆ ಇದು ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದು ಕಾದುನೋಡಬೇಕಿದೆ.
ಪಶುವೈದ್ಯಾಧಿಕಾರಿ ಮಾತ್ರವಲ್ಲ, 13 ನೇಮಕಾತಿಗಳ ಬೆನ್ನುಬಿದ್ದ ಇ.ಡಿ.!

ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ನಡೆದ ಹಗರಣ ಬೆನ್ನುಹತ್ತಿರುವ ಇ.ಡಿ. ಅಧಿಕಾರಿಗಳು ಈಗ ಮಾಜಿ ಪರೀಕ್ಷಾ ನಿಯಂತ್ರಕ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವಧಿಯಲ್ಲಿ (ಜನವರಿ 2024 ರಿಂದ ಮಾರ್ಚ್ 2026ರವರೆಗೆ) ಕೆಪಿಎಸ್‌ಸಿ ಮೂಲಕ ನಡೆದ ಎಲ್ಲಾ 13 ನೇಮಕಾತಿಗಳ ಬಗ್ಗೆಯೂ ತನಿಖೆ ನಡೆಸಲು ಮುಂದಾಗಿದೆ. ಅವರ ಅವಧಿಯ ಇತರ ಪರೀಕ್ಷೆಗಳಲ್ಲಿಯೂ ಲಂಚದ ವಹಿವಾಟು ನಡೆದಿರುವ ಬಗ್ಗೆ ಸುಳಿವು ಸಿಕ್ಕಿರುವುದರಿಂದ ತನಿಖೆಯ ವ್ಯಾಪ್ತಿ ವಿಸ್ತರಿಸಿದೆ.
ಒಂದು ಕಡೆ ಇ.ಡಿ. (ಜಾರಿ ನಿರ್ದೇಶನಾಲಯ) ಮತ್ತೊಂದು ಕಡೆ ಎಸ್‌ಐಟಿ ಹಗರಣದ ಹಿಂದೆ ಬಿದ್ದಿರುವುದರಿಂದ ಈ ಹಗರಣಕ್ಕಾದರೂ ಮುಕ್ತಿ ಸಿಗಬಹುದೇನೋ? ಆಡಳಿತ ಪಕ್ಷದ (ಕೇಂದ್ರ ಹಾಗೂ ರಾಜ್ಯದ) ಅಧಿಕಾರಸ್ಥ ರಾಜಕಾರಣಿಗಳು ಯಾರನ್ನೋ ಉಳಿಸಲು ತನಿಖೆಯಲ್ಲಿ ಮೂಗುತೂರಿಸದಿದ್ದರೆ ಈ ಹಗರಣದ ಜಾತಕವಾದರೂ ಬಯಲಾಗಬಹುದು. ಈ ಹಗರಣದ ಕೈಕಾಲು ಮುರಿದು ಬೀದಿಯಲ್ಲಿ ಎಸೆದರೆ, ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷ ರಾಜಕೀಯ ಹೋರಾಟಗಳನ್ನು ಮಾಡಲು ನೈತಿಕತೆಯನ್ನು ಕಳೆದುಕೊಳ್ಳುತ್ತದೆ. ಇ.ಡಿ. ಸಂಸ್ಥೆಯ ಮೇಲೆ ಅಲ್ಪಸಲ್ಪ ಉಳಿದಿರುವ ಜನರ ವಿಶ್ವಾಸವೂ ಮಣ್ಣಿಗೆ ಸೇರುತ್ತದೆ.
ಮತಗಳ್ಳತನದ ವಿರುದ್ಧ ಬೀದಿಗೆ ಬಂದಿರುವ ರಾಜ್ಯದ ಬಹುತೇಕ ವಿದ್ಯಾರ್ಥಿ ಸಂಘಟನೆಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಕೆಪಿಎಸ್‌ಸಿ ಹಗರಣದ ಬಗ್ಗೆ ಇದುವರೆಗೆ ಒಂದೂ ಮಾತಾಡದೇ ಇರುವುದು ಆಶ್ಚರ್ಯಕರವಾಗಿದೆ. ಇಂತಹ ಸೆಲೆಕ್ಟಿವ್ ಹೋರಾಟಗಳಿಂದ ಆಡಳಿತ ಪಕ್ಷ ಹಾಗೂ ಆಯಕಟ್ಟಿನ ಜಾಗದಲ್ಲಿ ಕೂತಿರುವ ಭ್ರಷ್ಟ ಅಧಿಕಾರಿಗಳಿಗೆ ಮತ್ತಷ್ಟು ಲೂಟಿ ಮಾಡಲು ಮಾಡಲು ದಾರಿ ಮಾಡಿಕೊಡುತ್ತವೆ.
ಗ್ಯಾನೇಶ್ ಕುಮಾರ್‌ರ ಈ ಅನ್ಯಾಯ ನೋಡಾ…

ಭಾರತದಲ್ಲಿ ಸಂವಿಧಾನದೊಂದಿಗೆ ಹುಟ್ಟಿದ ಚುನಾವಣಾ ಆಯೋಗ ಒಂದು ಸಾಂವಿಧಾನಿಕ ಸಂಸ್ಥೆಯಾಗಿದೆ. ಅದು ಸ್ವತಂತ್ರವಾಗಿದೆ. ಈ ದೇಶ ಸುಕುಮಾರ್ ಸೇನ್‌ರಿಂದ ಗ್ಯಾನೇಶ್ ಕುಮಾರ್‌ವರೆಗೆ 26 ಜನ ಮುಖ್ಯ ಚುನಾವಣಾ ಆಯುಕ್ತರನ್ನು ಕಂಡಿದೆ.
ದೇಶದಲ್ಲಿ ಇದೇ ಮೊದಲ ಬಾರಿಗೆ ಎಸ್‌ಐಆರ್ (ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ) ನಡೆಯುತ್ತಿಲ್ಲ. ಈ ಹಿಂದೆ 1952–56, 1957, 1961, 1965, 1966, 1983–84, 1987-89, 1992, 1993, 1995, 2002, 2003, 2004ರಲ್ಲಿ ಚುನಾವಣಾ ಆಯೋಗ ತನ್ನ ಶಾಸನಬದ್ಧ ಅಧಿಕಾರ ಚಲಾಯಿಸಿ ದೇಶದ ಎಲ್ಲಾ ಅಥವಾ ಕೆಲ ಭಾಗಗಳಲ್ಲಿ ಎಸ್‌ಐಆರ್ ನಡೆಸಿದೆ.
ಆಗ ಆಡಳಿತಾರೂಢ ಪಕ್ಷದಿಂದಾಗಲಿ, ಅದರ ಮಿತ್ರ ಪಕ್ಷಗಳಿಂದಾಗಲಿ ಅಥವಾ ವಿರೋಧ ಪಕ್ಷಗಳಿಂದಾಗಲಿ ಅಥವಾ ನಾಗರಿಕರಿಂದಾಗಲಿ ವಿರೋಧ ಬಂದಿಲ್ಲ. ಆಗಿಲ್ಲದ ವಿರೋಧ ಈಗೇಕೆ? ಎಂದು ಬಿಜೆಪಿ ಪಕ್ಷದ ನಾಯಕರು, ಬೆಂಬಲಿಗರು ಪ್ರಶ್ನಿಸುತ್ತಿದ್ದಾರೆ.
ಈಗ ಆಯೋಗವು ದೇಶದ ಎಲ್ಲಾ ಭಾಗಗಳಲ್ಲಿ ಎಸ್‌ಐಆರ್ ನಡೆಸುತ್ತಿದೆ. ಸತ್ತಿರುವ ಮತದಾರರ ಹೆಸರುಗಳನ್ನು ಡಿಲೀಟ್ ಮಾಡುತ್ತಿದೆ. ಎರಡು ಕಡೆ ಮತದಾನದ ಹಕ್ಕು ಹೊಂದಿರುವರ ಹೆಸರನ್ನು ಒಂದು ಕಡೆ ಅಳಿಸುತ್ತಿದೆ. ನಕಲಿ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದು ಹಾಕುತ್ತಿದೆ ಮತ್ತು ಮುಖ್ಯವಾಗಿ ಅಕ್ರಮವಾಗಿ ದೇಶದೊಳಗೆ ನುಸುಳಿದ್ದಲ್ಲದೇ, ಮತದಾರರ ಪಟ್ಟಿಯಲ್ಲಿ ಸೇರಿರುವ ಬಾಂಗ್ಲಾದೇಶದವರನ್ನು ಮತ್ತೆ ಮಾಡಿ ಅವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಮಾಯ ಮಾಡುತ್ತಿದೆ… ಎಂದು ದೇಶದ ಜನರು ನಂಬಿದ್ದರು.
ಈ ಕೆಲಸಗಳನ್ನಷ್ಟೇ ಮಾಡಿದರೆ ಈಗ ಆಕ್ರೋಶದಿಂದ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಗ್ಯಾನೇಶ್ ಕುಮಾರ್ ಅವರ ಫೋಟೋಗಳನ್ನು ಯಾರು ಬೀದಿಯಲ್ಲಿ ಸುಡುತ್ತಿದ್ದಾರೋ ಪ್ರಾಯಶಃ ಅದೇ ಜನ ಅವರ ಮೂರ್ತಿ ಸ್ಥಾಪಿಸುತ್ತಿದ್ದರು.
ಆದರೆ, ಗ್ಯಾನೇಶ್ ಕುಮಾರ್‌ರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ಲಕ್ಷಾಂತರ ಅರ್ಹ ಮತದಾರರ ಹೆಸರುಗಳನ್ನು ಡಿಲೀಟ್ ಮಾಡುತ್ತಿದ್ದಾರೆ. ಅವರ ಈ ಕೆಲಸಕ್ಕೆ ಕೇಂದ್ರ ಸರ್ಕಾರದ ಬೆಂಬಲವಿದೆ. ಬೆಂಬಲವಿಲ್ಲದಿದ್ದರೆ ಅವರಿಗೆ ಈ ಧೈರ್ಯ ಎಲ್ಲಿಂದ ಬರುತ್ತಿತ್ತು? ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುವ ಸಾಹಸಕ್ಕೆ ಅವರು ಯಾಕೆ ಕೈ ಹಾಕುತ್ತಿದ್ದರು? ಇದರಿಂದ ಅವರಿಗೆ ಏನು ಲಾಭವಿದೆ?
ಈ ಎಸ್‌ಐಆರ್ ಮೂಲಕ ದೇಶದ ನಾಗರಿಕರನ್ನು ʻಮತದಾನದ ಹಕ್ಕಿಲ್ಲದವರುʼ ಮತ್ತು ʻಮತದಾನದ ಹಕ್ಕಿರುವವರುʼ ಎಂದು ಎರಡು ವರ್ಗಗಳಾಗಿ ವಿಂಗಡಿಸುತ್ತಿದ್ದಾರೆ. ಚುನಾವಣಾ ಆಯೋಗದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 13 ಕೋಟಿ ಮತದಾರರ ಹೆಸರುಗಳನ್ನು ಅಳಿಸಿ ಹಾಕಿದೆ. ಈ ಹಿಂದೆ ನಡೆದ ಎಲ್ಲಾ ಎಸ್‌ಐಆರ್‌ನಲ್ಲಿ ಡಿಲೀಟ್ ಮಾಡಿದ ಒಟ್ಟು ಮತದಾರರ ಸಂಖ್ಯೆ ಕೂಡಿಸಿದರೂ 13 ಕೋಟಿ ದಾಟುವುದಿಲ್ಲ.
ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಅಂದಿನ ಸರ್ಕಾರ ʻನೀವು ಭಾರತದ ನಾಗರಿಕರು ಎಂದು ಸಾಬೀತು ಪಡಿಸಿʼ ಎಂದು ಜನರಿಗೆ ಹೀಗೆ ಪಿಡಿಸಿದರೆ, ಆಗ ಮತದಾರರ ಪಟ್ಟಿಯಲ್ಲಿ ಸೇರಿದ 17.32 ಕೋಟಿ ಮತದಾರರಲ್ಲಿ ಬಹುತೇಕರು ತಮ್ಮ ಮತದಾನದ ಹಕ್ಕು ಕಳೆದುಕೊಳ್ಳುತ್ತಿದ್ದರು. ಬ್ರಿಟಿಷರ ಕಾಲದಲ್ಲಿ ತೆರಿಗೆ ಕಟ್ಟುವವರಿಗೆ, ಪದವಿ ಓದಿದವರಿಗೆ, ಶ್ರೀಮಂತರಿಗೆ, ಜಮೀನ್ದಾರರಿಗೆ ಮಾತ್ರ ದೇಶದಲ್ಲಿ ಮತದಾನದ ಹಕ್ಕು ಇತ್ತು.
ಸ್ವಾತಂತ್ರ್ಯ ಬಂದ ಮರುಗಳಿಗೆಯಲ್ಲೇ ಈ ದೇಶದಲ್ಲಿ ವಾಸಿಸುತ್ತಿರುವ ಎಲ್ಲಾ ನಾಗರಿಕರು ಸಮಾನರು, ಎಲ್ಲರಿಗೂ ಮತದಾನದ ಹಕ್ಕಿದೆ ಎಂದು ಹೇಳಿ, ಯಾವುದೇ ರಕ್ತ ಕ್ರಾಂತಿ ಇಲ್ಲದೆ ದೇಶದ ಎಲ್ಲಾ ಪ್ರಜೆಗಳಿಗೆ ಮತದಾನದ ಹಕ್ಕು ನೀಡಿದ್ದು ಪ್ರಾಯಶಃ ಭಾರತದಲ್ಲಿ ಮಾತ್ರ.
ಈಗ ಗ್ಯಾನೇಶ್ ಕುಮಾರ್ ಅವರು ಸಮಜಾಯಿಷಿ, ಸಬೂಬುಗಳನ್ನು ನೀಡಿ ಜನರ ಮತದಾನದ ಹಕ್ಕು ಕಿತ್ತುಕೊಳ್ಳಲು ಮುಂದಾಗಿದ್ದಾರೆ. ಅರ್ಹ ಮತದಾರರ ಹೆಸರುಗಳನ್ನು ಅಳಿಸಿ ಹಾಕಿದರೆ ದೇಶವು ದೇಶವಾಗಿ ಉಳಿಯುವುದಿಲ್ಲ.
ಮುಂದುವರೆದ ಡಿಕೆ – ಬಿಕೆ ಶೀತಲ ಸಮರ

ಆಡಳಿತಾರೂಢ ಕಾಂಗ್ರೆಸ್ ಪಕ್ಷ ಈಗ ಒಡೆದ ಮನೆಯಾಗಿದೆ. ನಾವು ಒಗ್ಗಟ್ಟಿನಿಂದ ಇದ್ದೇವೆ, ನಮ್ಮದು ಶಿಸ್ತಿನ ಪಕ್ಷ, ನಮ್ಮಲ್ಲಿ ಗುಂಪುಗಾರಿಕೆಯಾಗಲಿ, ಬಣರಾಜಕೀಯವಾಗಲಿ ಇಲ್ಲ…ಹೀಗೆ ಕೆಲವರು ಆಗಾಗ ಬಡಬಡಿಸುತ್ತಿರುತ್ತಾರೆ. ಅವು ತುಟಿ ಮಾತುಗಳಾಗಿವೆ ಎಂದು ಅರಿಯಲಾರದಷ್ಟು ಜನರು ದಡ್ಡರಲ್ಲ. ಪಕ್ಷದ ಅಧ್ಯಕ್ಷ ಬಿಕೆ ಹರಿಪ್ರಸಾದ್ ಹಾಗೂ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡುವಿನ ಶೀತಲ ಸಮರ ರಾಜಾರೋಷವಾಗಿ ಮುಂದುವರೆದಿದೆ.
ಅಂದು ಬಿಕೆ ಅವರಿಗೆ ಸರ್ಕಾರದ ನೂರು ದಿನದ ಸಂಭ್ರಮಾಚರಣೆಯ ವೇದಿಕೆ ಹತ್ತದಂತೆ ಡಿಕೆ ಅವರು ಮಾಡಿದರು. ಇಂದು ಬಿಕೆ ಅವರು ಪಕ್ಷದ ವತಿಯಿಂದ ನಡೆಯುತ್ತಿರುವ ಭಾರತ ಜೋಡೋ ಯಾತ್ರೆ 2.0 ಬಳಿ ಬರಲು ಡಿಕೆ ಅವರಿಗೆ ಬಿಟ್ಟಿಲ್ಲ. ಪಕ್ಷದ ಕಾರ್ಯಕರ್ತರಿಗೆ ನಿಗಮ ಮಂಡಳಿಗಳಲ್ಲಿ ಸ್ಥಾನಮಾನ ಕೊಡಿಸಲು ಬಿಕೆ ಅವರು ಮುಂದಾದರೆ, ಡಿಕೆ ಅವರು ನಾಲ್ಕು ತಿಂಗಳಾದರೂ ನೇಮಕ ಮಾಡಲು ಗುಣಾಕಾರ ಭಾಗಾಕಾರ ಹಾಕುತ್ತಿದ್ದಾರೆ.
ಮೇಲ್ನೋಟಕ್ಕೆ ಕಾಣುತ್ತಿರುವಂತೆ ಇದು ಕೇವಲ ಅಧಿಕಾರ ಹಾಗೂ ಸಂಘಟನೆಯ ನಡುವಿನ ಸಂಘರ್ಷವಾಗಲಿ ಅಥವಾ ಇಬ್ಬರು ವ್ಯಕ್ತಿಗಳ ನಡುವಿನ ಕಿತ್ತಾಟವಾಗಲಿ ಅಲ್ಲ. 2028ರ ಸಿಎಂ ಕುರ್ಚಿಗಾಗಿ ಎರಡು ಗುಂಪುಗಳ ನಡುವೆ ನಡೆಯುತ್ತಿರುವ ಶೀತಲ ಸಮರವಾಗಿದೆ. ಚುನಾವಣೆ ಸಮಯದಲ್ಲಿ ಇದು ಬೀದಿಗೆ ಬರುವ ಸಾಧ್ಯತೆ ದಟ್ಟವಾಗಿದೆ. ಇದರಲ್ಲಿ ಯಾರದೇ ಮೇಲುಗೈ ಆದರೂ ಗಾಯವಾಗುವುದು ʼಕೈʼಗೆ ಮಾತ್ರ.
ಈ ವಾರದ ರಾಜಕೀಯ ವಿದ್ಯಮಾನಗಳು | ಸೆ.28 – ಅ.೦4

ಈ ವಾರದಲ್ಲಿ ಪ್ರಮುಖ ಎರಡು ವಿದ್ಯಮಾನಗಳು ನಡೆದಿವೆ. ಒಂದನೆಯದು, ಕೆಪಿಎಸ್‌ಸಿ ಹಗರಣ ಕುರಿತು ಸರ್ಕಾರದ ಎಸ್‌ಐಟಿಗೆ ಪೂರ್ಣವಿರಾಮ ಹಾಕಿ, ಕರ್ನಾಟಕ ಹೈಕೋರ್ಟ್ ಹೊಸ ಎಸ್‌ಐಟಿ ರಚಿಸಿತ್ತು. ಜತೆಗೆ ತಂಡದ ಸದಸ್ಯರ ಹೆಸರುಗಳನ್ನೂ ಸೂಚಿಸಿತ್ತು. ಈ ತೀರ್ಪಿನ ವಿರುದ್ಧ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್ ಬಾಗಿಲು ತಟ್ಟಿ, ಆದೇಶಕ್ಕೆ ತಡೆ ತಂದಿದೆ. ರಾಜ್ಯ ಸರ್ಕಾರದ ಈ ಆಸಕ್ತಿ ಜನರಲ್ಲಿ ಅನುಮಾನ ಹುಟ್ಟಿಸಿದೆ.
ಎರಡನೆಯದು, ಚುನಾವಣಾ ಆಯೋಗದ ಫಾರಂ-7ನ್ನು ಬಳಸಿಕೊಂಡು ರಾಜ್ಯದ ಭಾಲ್ಕಿ, ಬೆಳಗಾವಿ, ಬಬಲೇಶ್ವರ… ಮತಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು ಮುಸ್ಲಿಂ ಸಮುದಾಯದ ಅರ್ಹ ಮತದಾರರ ಹೆಸರನ್ನು ಡಿಲೀಟ್ ಮಾಡಿಸಲು ಸಾವಿರಾರು ಅರ್ಜಿಗಳನ್ನು ಸಲ್ಲಿಸಿದರು. ಇದರ ವಿರುದ್ಧ ರಾಜ್ಯದ ಸಿಎಂ, ಸಚಿವರು ಹಾಗೂ ಕಾಂಗ್ರೆಸ್ ಪಕ್ಷದ ನಾಯಕರು ಚುನಾವಣಾ ಆಯೋಗದ ಮುಂದೆ ಐದು ಗಂಟೆ ಧರಣಿ ಕೂತಿದ್ದರು. ಧರಣಿಗೆ ಮಣಿದು ಅಕ್ರಮವಾಗಿ ಅರ್ಜಿ ಸಲ್ಲಿಸಿದವರ ವಿರುದ್ಧ ದೂರು ಸಲ್ಲಿಸಲು ಆಯೋಗ ನಿರ್ಣಯಿಸಿ, ಕೆಲವರ ವಿರುದ್ಧ ಎಫ್‌ಐಆರ್ ದಾಖಲಿಸಿದೆ.
ಚುನಾವಣಾ ಆಯೋಗದ ಮುಖ್ಯ ಆಯುಕ್ತ ಗ್ಯಾನೇಶ್ ಕುಮಾರ್ ವಿರುದ್ಧ ಸಿಜೆಪಿ (ಕಾಕ್ರೋಜ್ ಜನತಾ ಪಾರ್ಟಿ), ದೇಶದ ವಾಣಿಜ್ಯ ರಾಜಧಾನಿ ಮುಂಬೈಯಲ್ಲಿ ಹಾಗೂ ನೇಹಾ ಬೋರಾ, ಅನೇಕ ವಿದ್ಯಾರ್ಥಿ ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರು, ಆಮ್ ಆದ್ಮಿ ಪಕ್ಷ… ದೆಹಲಿಯ ಜಂತರ್-ಮಂತರ್‌ನಲ್ಲಿ ಹೋರಾಟ ನಡೆಸಿವೆ. ಕೇಂದ್ರ ಸರ್ಕಾರ ಪೊಲೀಸ್ ಬಲದಿಂದ ಜೆನ್-ಝೀಗಳ ದನಿ ಹತ್ತಿಕ್ಕಲು ಯತ್ನಿಸಿ ಮುಖಭಂಗ ಮಾಡಿಕೊಂಡಿದೆ. ಚಳವಳಿ ಯಶಸ್ವಿಯಾಗಿದೆ.


