ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜಾತ್ಯಾತೀತ ಜನತಾ ದಳ ಮೈತ್ರಿ ಮಾಡಿಕೊಂಡಿದ್ದವು. ಆಗ ಅನಾಯಾಸವಾಗಿ ಜೆಡಿಎಸ್‌ಗೆ ಹಾಸನ, ಮಂಡ್ಯ, ತುಮಕೂರು, ಉಡುಪಿ – ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಉತ್ತರ ಕನ್ನಡ – ಆರು ಕ್ಷೇತ್ರಗಳು ದೊರಕಿದವು. ಇವುಗಳಲ್ಲಿ ಅದಕ್ಕೆ ಹಾಸನ ಕ್ಷೇತ್ರದಲ್ಲಿ ಮಾತ್ರ ಗೆಲ್ಲಲು ಸಾಧ್ಯವಾಗಿತ್ತು. ಕಾಂಗ್ರೆಸ್ ಕೂಡಾ ಒಂದೇ ಒಂದು ಕ್ಷೇತ್ರದಲ್ಲಿ ಗೆಲುವು ತನ್ನದಾಗಿಸಿಕೊಂಡಿತ್ತು. ಮೈತ್ರಿಕೂಟದ ಈ ಕಳಪೆ ಸಾಧನೆಗೆ ಎರಡು ಕಾರಣಗಳಿದ್ದವು. ಮೊದಲನೆಯದು, ಕರ್ನಾಟಕದ ಜನತೆ ಈ ಮೈತ್ರಿಯನ್ನು ಒಪ್ಪಿರಲಿಲ್ಲ. ಎರಡನೆಯದು, ಆ ಚುನಾವಣೆಯಲ್ಲಿ ಮೋದಿ ಅಲೆ ಇತ್ತು.
ಬದಲಾದ ರಾಜಕೀಯ ಪರಿಸ್ಥಿತಿಯಿಂದಾಗಿ ಈ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್, ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡಿದೆ. ಮೊದಲೆರಡು ಚುನಾವಣೆಯಲ್ಲಿ ಇದ್ದಂತೆ ಈ ಚುನಾವಣೆಯಲ್ಲಿ ಮೋದಿ ಅಲೆ ಇಲ್ಲ. ಜನರು ಈ ಮೈತ್ರಿಯೂ ಒಪ್ಪಿದ್ದಾರೋ ಅಥವಾ ಇಲ್ಲವೋ ಎಂದು ಜೂನ್ ನಾಲ್ಕರಂದು ಗೊತ್ತಾಗುತ್ತದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭಾರಿ ಬಹುಮತದಿಂದ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ ಗೆಲುವಿನ ಓಟಕ್ಕೆ ತಡೆ ಒಡ್ಡಬೇಕು ಹಾಗೂ ಸಿದ್ದರಾಮಯ್ಯ ಮತ್ತು ಡಿ. ಕೆ. ಶಿವಕುಮಾರ್ ಅವರಿಗೆ ಮುಖಭಂಗ ಮಾಡಬೇಕೆಂದು ಎರಡು ಪಕ್ಷಗಳು ಮೈತ್ರಿ ಮಾಡಿಕೊಂಡಿವೆ. ಈ ಮೈತ್ರಿ ಕೇವಲ ಈ ಲೋಕಸಭಾ ಚುನಾವಣೆಗೆ ಮಾತ್ರ ಸಿಮೀತವಾಗಿರದೇ, ಮುಂಬರುವ ಎಲ್ಲಾ ಚುನಾವಣೆಯಲ್ಲಿ ಇದು ಮುಂದುವರೆಯುತ್ತದೆ ಎಂದು ಎರಡು ಪಕ್ಷದ ರಾಜ್ಯ ನಾಯಕರು ಚುನಾವಣೆಯ ಉದ್ದಕ್ಕೂ ಹೇಳುತ್ತಾ ಬಂದಿದ್ದಾರೆ. ಅದರಲ್ಲೂ ಕುಮಾರಸ್ವಾಮಿ ಕಾಂಗ್ರೆಸ್‌ನವರಿಗೆ ಕೇಳಿಸುವಂತೆ ತುಸು ಜೋರಾಗಿಯೇ ಹೇಳಿದ್ದಾರೆ.
ಈ ಮೈತ್ರಿ ರಾಜ್ಯ ಬಿಜೆಪಿ ನಾಯಕರಿಗೆ ಇಷ್ಟ ಇರಲಿಲ್ಲ. ಹಾಗಾಗಿಯೇ ಕುಮಾರಸ್ವಾಮಿ ಮತ್ತು ದೇವೇಗೌಡರು ಬಿಜೆಪಿ ಹೈಕಮಾಂಡ್ ಜತೆಗೆ ನೇರವಾಗಿ ಮಾತನಾಡಿ ಮೈತ್ರಿ ಮಾಡಿಕೊಂಡಿದ್ದರು. ಬಿಜೆಪಿ ಹೈಕಮಾಂಡ್ ಸಹ ತಮ್ಮ ಪಕ್ಷದ ರಾಜ್ಯ ನಾಯಕರ ಅಭಿಪ್ರಾಯವನ್ನು ನೇಪಕ್ಕಾದರೂ ಕೇಳಿರಲಿಲ್ಲ.
ಕಲಬುರ್ಗಿ ಮತ್ತು ಶಿವಮೊಗ್ಗಕ್ಕೆ ಚುನಾವಣಾ ಪ್ರಚಾರಕ್ಕಾಗಿ ಪ್ರಧಾನಿ ಮೋದಿ ಅವರು ಬಂದಾಗ ಜೆಡಿಎಸ್‌ನ ಕುಮಾರಸ್ವಾಮಿ ಮತ್ತು ಎಚ್. ಡಿ. ದೇವೇಗೌಡರನ್ನು ಕರಿಯಲೇ ಇಲ್ಲ. ಎಟಲಿಸ್ಟ್ ಸ್ಥಳೀಯ ಜೆಡಿಎಸ್ ಮುಖಂಡರನ್ನೂ ಕರೆದಿರಲಿಲ್ಲ.
ಬಹಳ ಉತ್ಸುಕತೆಯಿಂದ ದೂರಾಲೋಚನೆ ಇಟ್ಟುಕೊಂಡು ಮೈತ್ರಿ ಮಾಡಿಕೊಂಡರೂ ಕ್ಷೇತ್ರ ಹಂಚಿಕೆ ವಿಷಯದಲ್ಲಿ ಕುಮಾರಸ್ವಾಮಿ ಅವರು ʼಎರಡು ಸೀಟು ಪಡೆಯಲು ನಾನು ಇಷ್ಟೆಲ್ಲ ಪ್ರಯತ್ನ ಪಡಬೇಕಾʼ ಎಂದು ಆರಂಭದಲ್ಲೇ ಅಸಮಾಧಾನ ಹೊರ ಹಾಕಿದರು.
ಜೆಡಿಎಸ್ ಕೇಳಿದ್ದು ಐದು ಕ್ಷೇತ್ರಗಳು. ಪಡೆದದ್ದು ಮಂಡ್ಯ, ಹಾಸನ ಮತ್ತು ಕೋಲಾರ – ಮೂರು ಕ್ಷೇತ್ರಗಳು ಮಾತ್ರ. ಅದು ಕೋಲಾರ ಕ್ಷೇತ್ರ ಪಡೆಯಲು ಎರಡು ಸಲ ದೆಹಲಿ ಹೈ ಕಮಾಂಡ್‌ನ ಬಾಗಿಲು ತಟ್ಟ ಬೇಕಾಯಿತು.
ಹಾಸನದಲ್ಲಿ ಪ್ರೀತಂ ಗೌಡ, ಜಿ. ದೇವರಾಜೇಗೌಡ ಮತ್ತಿತರರು ಪ್ರಚಾರದ ಕಣದಿಂದ ದೂರವೇ ಉಳಿದಿದ್ದಾರೆ. ತೋರಿಕೆಗಾದರೂ ಮೈತ್ರಿ ಅಭ್ಯರ್ಥಿ ಪರ ಪ್ರಚಾರ ಮಾಡಿದರೂ ಪ್ರಜ್ವಲ್ ರೇವಣ್ಣ ಅವರ ಹೆಸರೇ ಎತ್ತಲಿಲ್ಲ. ಕುಮಾರಸ್ವಾಮಿ ಸ್ಪರ್ಧಿಸಿರುವ ಮಂಡ್ಯ ಕ್ಷೇತ್ರದಲ್ಲೂ ಇದೇ ಕಥೆ. ಅಲ್ಲೂ ಹಾಲಿ ಸಂಸದೆ ಸುಮಲತಾ ಅಂಬರೀಶ್ ಮೈತ್ರಿ ಅಭ್ಯರ್ಥಿ ಪರ ಪ್ರಚಾರಕ್ಕೆ ಬರಲೇ ಇಲ್ಲ. ಇವೆರಡೂ ಕ್ಷೇತ್ರದಲ್ಲಿ ಸ್ಥಳೀಯ ಬಿಜೆಪಿ ಮುಖಂಡರಾಗಲಿ, ಕಾರ್ತಕರ್ತರಾಗಲಿ ಚುನಾವಣೆ ಪ್ರಚಾರದಲ್ಲಿ ಹೆಚ್ಚಾಗಿ ಕಾಣಿಸಲಿಲ್ಲ.
ʼಹಾಸನ ಕ್ಷೇತ್ರದಲ್ಲಿ ಹಾಲಿ ಎಂಪಿ ಪ್ರಜ್ವಲ್ ರೇವಣ್ಣ ಅವರನ್ನು ಮೈತ್ರಿ ಅಭ್ಯರ್ಥಿ ಮಾಡಲು ಬಿಜೆಪಿ ಹೈ ಕಮಾಂಡ್‌ಗೆ ಇಷ್ಟ ಇದ್ದಿಲ್ಲʼ ಎಂದು ಸ್ವತಃ ಕುಮಾರಸ್ವಾಮಿಯವರೇ ಖಾಸಗಿ ಚಾನೆಲ್‌ವೊಂದರ ಜತೆ ಮಾತನಾಡುವಾಗ ಹೇಳಿದ್ದಾರೆ. ಸ್ವತಃ ಅಮಿತ್ ಶಾ ಅವರೇ ʼಹಾಸನ ಟಿಕೆಟ್ ಪ್ರಜ್ವಲ್ ರೇವಣ್ಣ ಅವರಿಗೆ ಕೊಡುವುದು ಬೇಡ, ಬೇರೆ ಯಾರಿಗಾದರೂ ಕೊಡಿ. ಬೇಕಿದ್ದರೆ ಭವಾನಿ ರೇವಣ್ಣ ಅವರಿಗೆ ಕೊಡಿ. ಆದರೆ ಯಾವುದೇ ಕಾರಣಕ್ಕೂ ಪ್ರಜ್ವಲ್‌ಗೆ ಕೊಡುವುದು ಬೇಡʼ ಎಂದು ಕುಮಾರಸ್ವಾಮಿಯವರಿಗೆ ಹೇಳಿದ್ದಾರೆ ಎಂದು ಮಾದ್ಯಮದಲ್ಲಿ ವರದಿಗಳು ಬಂದಿವೆ.
ಬಿಜೆಪಿ ಮುಖಂಡ ಜಿ. ದೇವರಾಜೇಗೌಡ ಪ್ರಜ್ವಲ್ ಪೆನ್ ಡ್ರೈ ವಿಷಯ ಬಿಜೆಪಿ ರಾಜ್ಯ ನಾಯಕರಿಗೂ, ಹೈಕಮಾಂಡ್‌ಗೂ ಪತ್ರ ಬರೆದು ಗಮನಕ್ಕೆ ತಂದಿದ್ದರು. ʼಇದು ಚುನಾವಣೆಯಲ್ಲಿ ಹೊರಗೆ ಬಂದರೆ ನಾವೆಲ್ಲರೂ ಮುಜುಗರ ಅನುಭವಿಸಬೇಕಾಗುತ್ತದೆʼ ಎಂದು ಮನಗಂಡೇ ಪ್ರಜ್ವಲ್ ಬಿಟ್ಟು ಬೇರೆಯವರಿಗೆ ಟಿಕೆಟ್ ನೀಡಿ ಎಂದು ಕುಮಾರಸ್ವಾಮಿಯವರಿಗೆ ಅಮೀತ್ ಶಾ ಕೀವಿಮಾತು ಹೇಳಿದರು ಎಂದು ಮೂಲಗಳು ಹೇಳುತ್ತಿವೆ. ರೇವಣ್ಣ ಕುಟುಂಬದ ಒತ್ತಡಕ್ಕೆ ಮಣಿದು ದೇವೇಗೌಡರು ಧಿಡೀರನೇ ಹಾಸನ ಕ್ಷೇತ್ರಕ್ಕೆ ಪ್ರಜ್ವಲ್ ಹೆಸರು ಏಕಪಕ್ಷೀಯವಾಗಿ ಘೋಷಣೆ ಮಾಡಿದರು.
ಚುನಾವಣೆ ಮೂರು ದಿನಗಳು ಇರುವಾಗ ಯಾರೋ ರಾಜಕೀಯ ಕುತಂತ್ರಿಗಳು ವಿಡಿಯೊಗಳು ಹೊರಹಾಕಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಹೊರಗೆ ಹಾಕಿದರ ಹಿಂದೆ ರಾಜಕೀಯ ಲಾಭದ ಲೆಕ್ಕಚಾರ ಇದೆ. ವಿಡಿಯೊದಲ್ಲಿರುವ ಸಂತ್ರೆಸ್ತರ ಮುಖವನ್ನು ಮಸುಕು ಮಾಡದೆ ಯಥವತ್ತಾಗಿ ಹರಿಬಿಟ್ಟಿದ್ದಾರೆ.
ಈಗ ಈ ವಿಷಯ ಅಂತರಾಷ್ಟ್ರೀಯ ಸುದ್ದಿ ಆಗಿದೆ. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಇದೇ ವಿಷಯ ಮುಂದಿಟ್ಟುಕೊಂಡು ʼಒಬ್ಬ ʼಮಾಸ್ ರೇಪಿಸ್ಟ್ʼ ಪರವಾಗಿ ಮಾನ್ಯ ಮೋದಿಜೀ ಅವರು ಪ್ರಚಾರ ಮಾಡಿದಲ್ಲದೇ ಅವನು ಹೊರದೇಶಕ್ಕೆ ಪರಾರಿ ಆಗಲು ನೆರವಾಗಿದ್ದಾರೆʼ ಎಂದು ದಾಳಿ ಮಾಡುತ್ತಿದ್ದಾರೆ. ಇದು ಬಿಜೆಪಿಗೆ ಅದರಲ್ಲೂ ಮೋದಿ ಅವರಿಗೆ ಮುಜುಗರಕ್ಕೆ ದೂಡಿದೆ.
ಪ್ರಜ್ವಲ್‌ನನ್ನು ಮೋದಿ ಅವರು ಚುನಾವಣೆಯಲ್ಲಿ ಹಾಡಿ ಹೊಗಳಿದ ವಿಡಿಯೊಗಳು ಮತ್ತು ಅವರೊಂದಿಗೆ ಪ್ರಜ್ವಲ್ ಇರುವ ಫೋಟೊಗಳು ಜನರ ಎದುರಿಗಿಟ್ಟು ಮೋದಿ ಅವರ ಮೇಲೆ ರಾಹುಲ್ ಗಾಂಧಿ ವಾಗ್ದಾಳಿ ನಡೆಸುತ್ತಿದ್ದಾರೆ. ಇದು ಮತವಾಗಿ ಪರಿವರ್ತನೆ ಆಗುತ್ತದೋ ಇಲ್ಲವೋ. ಆದರೆ ಇದು ಮೋದಿ ಅವರ ವರ್ಚಸ್ಸಿಗೆ ಧಕ್ಕೆ ತರುತ್ತಿದೆ. ಇದರಿಂದ ತಪ್ಪಿಸಿಕೊಳ್ಳಬೇಕಾದರೆ ಅವರೆದುರು ಇರುವುದು ಎರಡೇ ದಾರಿ. ಒಂದು, ಈ ಪ್ರರಣವೇ ಸುಳ್ಳು ಎಂದು ಸಾಬೀತುಪಡಿಸಲು ಕುಮಾರಸ್ವಾಮಿ ಅವರಿಗೆ ಕೇಂದ್ರ ಸರ್ಕಾರ ನೆರವಾಗಬೇಕು. ಇಲ್ಲವೇ ಜೆಡಿಎಸ್ ಜತೆಗಿನ ಮೈತ್ರಿ ಮುರಿದು ಕೊಳ್ಳಬೇಕು. ಬಿಜೆಪಿ ಎರಡನೇ ದಾರಿಯೇ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಾಗಿವೆ.