ದ ಪಾಲಿಟಿಕ್

ಕರ್ನಾಟಕದಲ್ಲಿ ಬಿಜೆಪಿಯ ಹೊಸ ವರಸೆ!

ಸಿದ್ದಪ್ಪ ಮೂಲಗೆ

ಸಿದ್ದಪ್ಪ ಮೂಲಗೆ

ಬಾಯ್ತೆರೆದರೆ‌ ಹಿಂದೂ ರಾಷ್ಟ್ರ, ಹಿಂದುತ್ವ, ರಾಷ್ಟ್ರೀಯತೆ, ಮೋದಿ ಎಂದು ಬಡಬಡಿಸುವ ಹಾಗೂ ಸದಾ ಮುಸ್ಲಿಂ ದ್ವೇಷ ಕಾರುವ ರಾಜ್ಯದ ಪ್ರತಾಪ್ ಸಿಂಹ, ಕೆ.‌ ಎಸ್‌. ಈಶ್ವರಪ್ಪ ಅವರ ಮಗನಿಗೆ, ನಳಿನ್ ಕುಮಾರ್ ಕಟೀಲ್ ಮತ್ತು ಅನಂತಕುಮಾರ್ ಹೆಗಡೆ ಅವರನ್ನು ಈ ಸಲ ಬಿಜೆಪಿ ಟಿಕೆಟ್‌ ನೀಡದೆ ಮನೆಯಲ್ಲಿ ಕೂರಿಸಿದೆ. ಯಡಿಯೂರಪ್ಪ ಕೈಗೆ ಮತ್ತೆ ಪಕ್ಷದ ಚುಕ್ಕಾಣಿ ಬಂದದ್ದು ಹಾಗೂ ಇವರು ದೆಹಲಿಯ ತಮ್ಮ ದಣಿಗಳನ್ನು ಮೆಚ್ಚಿಸಲು ಆಡಿದ ಮಾತುಗಳೇ ಇವತ್ತು ಇವರಿಗೆ ಮುಳುವಾದಂತಿದೆ.

ಇಲ್ಲದಿದ್ದರೆ ಇವರಿಗೆ ಟಿಕೆಟ್‌ ನಿರಾಕರಿಸಲು ಯಾವುದೇ ಬಲವಾದ ಕಾರಣಗಳು ಕಂಡು ಬರುತ್ತಿಲ್ಲ. ಕಟೀಲ್‌ ಮತ್ತು ಹೆಗಡೆ ಅವರಿಗೆ ಸ್ಥಳೀಯ ಆಡಳಿತ ವಿರೋಧಿ ಅಲೆ ಇದ್ದದ್ದು ನಿಜ. ಇವರಿಗೆ ಮಾತ್ರವಲ್ಲ ರಾಜ್ಯದ ಬಹುತೇಕ ಬಿಜೆಪಿ ಸಂಸದರಿಗೂ ಆಡಳಿತ ವಿರೋಧಿ ಅಲೆ ಇದೆ.  ರಾಜ್ಯದ ಬಹುತೇಕ ಸಂಸದರು ಮೋದಿ ನಾಮ ಬಲದ ಮೇಲೆ ಗೆದ್ದಿದ್ದಾರೆ. ಈ ಸಲವೂ ಇವರೆಲ್ಲರೂ ಮತ ಕೇಳುತ್ತಿರುವುದು ತಮಗಾಗಿ ಅಲ್ಲ, ಮೋದಿಯವರಿಗಾಗಿ ಎಂಬುದು ಸೂರ್ಯಸ್ಪಷ್ಟ.ಹಾಗಾಗಿ ಇಲ್ಲಿ ಸ್ಥಳೀಯ ಆಡಳಿತ ವಿರೋಧಿ ಅಲೆಯ ಪ್ರಶ್ನೆಯೇ ಬರುವುದಿಲ್ಲ. ಅಭ್ಯರ್ಥಿ ಯಾರಿದ್ದರೇನು? ಹೇಗಿದ್ದರೇನು?

ಇದೇ ಸಾಲಿನಲ್ಲಿ ಶೋಭಾ ಕರಂದ್ಲಾಜೆ ಅವರು ಇದ್ದರು. ಯಡಿಯೂರಪ್ಪ ಕೃಪಾಕಟಾಕ್ಷದಿಂದ ಬಚಾವಾಗಿದ್ದಾರೆ. ಇಲ್ಲದಿದ್ದರೆ ಅವರಿಗೂ ಅದೇ ಗತಿ ಕಾದಿತ್ತು. ಇವರೆಲ್ಲರೂ ನಾವು ಬದುಕಿದ್ದದ್ದು ಹಿಂದುತ್ವಕ್ಕಾಗಿಯೇ ಎಂಬಂತೆ ಮಾತನಾಡುತ್ತಿದ್ದರು. ಆದರೆ ಇವರಿಗೆ ಸಿಕ್ಕಿದೇನು? ಇದೇ ಪ್ರಶ್ನೆ ಕೇಳಿಯೇ ಈಶ್ವರಪ್ಪ ಬಂಡಾಯ ಸಾರಿದ್ದು. ಈ ಚುನಾವಣೆಯಲ್ಲಿನ ಬೆಳವಣಿಗೆಗಳು ಕಂಡು ಕಟ್ಟಾ ಹಿಂದುತ್ವ ಕಾರ್ಯಕರ್ತರು ʼಹಿಂದುತ್ವಕ್ಕಾಗಿ ಬಡಿದಾಡಿದವರಿಗೆ ಸಿಕ್ಕಿದ್ದೇನುʼ? ಎಂದು ಪ್ರಶ್ನಿಸುವಂತಾಗಿದೆ.

ಜಗದೀಶ್‌ ಶೆಟ್ಟರ್‌ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಟಿಕೆಟ್‌ ಕೈ ತಪ್ಪಿದ್ದರಿಂದ ʼಕೈʼ ಪಾಳೆಯಕ್ಕೆ ಹಾರಿ ಬಿಜೆಪಿ ವಿರುದ್ಧ ಲಿಂಗಾಯತ ಕಾರ್ಡ್‌ ಉಪಯೋಗಿಸಿ ಯುದ್ಧವೆ ಸಾರಿದರು. ತಮ್ಮ ಮಾತಿನಿಂದ ಪಕ್ಷಕ್ಕೆ ಮುಜುಗರ ಉಂಟುಮಾಡಿದಲ್ಲದೆ, ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷಕ್ಕೆ ಭಾರಿ ಡ್ಯಾಮೇಜ್‌ ಉಂಟು ಮಾಡಿದರು. ಆದಾಗ್ಯೂ ಅವರನ್ನು ಪಕ್ಷಕ್ಕೆ ಮರಳಿ ಕರೆದುಕೊಂಡು ಬಂದು ಬೆಳಗಾವಿ ಕ್ಷೇತ್ರದಿಂದ ಟಿಕೆಟ್‌ ನೀಡಿದ್ದಾರೆ.

ಇನ್ನು 2013 ರಲ್ಲಿ ಕೆಜೆಪಿ ಕಟ್ಟಿ ರಾಜ್ಯದಲ್ಲಿ ಬಿಜೆಪಿಯನ್ನು ಹೀನಾಯವಾಗಿ ಸೋಲಿಸಿದ ಯಡಿಯೂರಪ್ಪ ಅವರನ್ನು ಮತ್ತೇ ಪಕ್ಷಕ್ಕೆ ಕರೆ ತಂದು 2019 ರಲ್ಲಿ ಮುಖ್ಯಮಂತ್ರಿ ಮಾಡಿದ್ದಾರೆ. ಸಿಎಂ ಕುರ್ಚಿಯಿಂದ ಇಳಿಸಿದ ಮೇಲೂ ಸಂಸದೀಯ ಮಂಡಳಿಯಲ್ಲಿ ಸ್ಥಾನ ನೀಡಿದ್ದಾರೆ. ಅವರೆಂದು ಏರು ಧ್ವನಿಯಲ್ಲಿ ಹಿಂದುತ್ವದ ಬಗ್ಗೆ ಮಾತನಾಡಿದವರಲ್ಲ. ಹಿಂದುತ್ವವನ್ನು ಗಟ್ಟಿಯಾಗಿ ಸಮರ್ಥಿಸಿದವರಲ್ಲ. ಹೀಗಿದ್ದರೂ ರಾಜ್ಯದಲ್ಲಿ ಪಕ್ಷದ ಜುಟ್ಟನ್ನು ಮತ್ತೇ ಅವರ ಕೈಗೆ ನೀಡಿದ್ದಾರೆ. ಯಾವ ವಿಜೇಂದ್ರನ ಕಾರಣಕ್ಕಾಗಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗೆ ಇಳಿಸಿದರೋ ಇಂದು ಅದೇ ವಿಜೇಂದ್ರನನ್ನು ಪಕ್ಷದ ರಾಜ್ಯಾಧಕ್ಷ ಹುದ್ದೆ ಕರುಣಿಸಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಿಂದುತ್ವ, ರಾಷ್ಟ್ರೀಯವಾದ, ರಾಮ ಮಂದಿರ, ಉರಿ ಗೌಡ – ನಂಜೆ ಗೌಡ ಚುನಾವಣಾ ವಿಷಯಗಳಾಗಿದ್ದವು. ಬಿಜೆಪಿಗರು ಹಿಂದುತ್ವದ ಹೆಸರಿನಲ್ಲಿ ಭಾವನಾತ್ಮಕ ಯುದ್ಧವನ್ನೇ ಸಾರಿದರು. ಆದರೀಗ ಎಲ್ಲವೂ ಉಲ್ಟಾ ಪಲ್ಟಾ ಆಗಿದೆ. ಪ್ಲೇಟ್‌ ಬದಲಾಯಿಸಿದ್ದಾರೆ.

ರಾಜ್ಯ ಸರ್ಕಾರದ ಗ್ಯಾರಂಟಿಗಳಿಗೆ ಪರ್ಯಾಯವಾಗಿ ʼಮೋದಿ ಗ್ಯಾರಂಟಿʼ ಘೋಷಣೆ ಮಾಡಿದ್ದಾರೆ. ಮಾತ್ತೆತ್ತಿದ್ದರೆ ಕುಟುಂಬ ರಾಜಕಾರಣದ ವಿರುದ್ಧ ಮಾತನಾಡಿತ್ತಿದ್ದ ಪ್ರಧಾನಿ ಮೋದಿ ಅವರು ಈಗ ತಮ್ಮ ಎಡಬಲದಲ್ಲಿ  ಕುಟುಂಬ ರಾಜಕಾರಣವನ್ನೇ ಹೊದ್ದಿಕೊಂಡಿರುವ ದೇವೆಗೌಡರನ್ನು ಮತ್ತು ಯಡಿಯೂರಪ್ಪ ನವರನ್ನು ಕೂರಿಸಿಕೊಳ್ಳುತ್ತಿದ್ದಾರೆ.

ತಮ್ಮ ಪಕ್ಷದ ಡಜನ್‌ ಗಟ್ಟಲೆ ಶಾಸಕರು, ಸಂಸದರು ಸಂವಿಧಾನ ಬದಲಾಯಿಸುತ್ತೇವೆ ಎಂದಾಗ ಬಾಯಿಬಿಡದ ಪ್ರಧಾನಿ ಮೋದಿ ಇವತ್ತು ಸ್ವತಃ ಅಂಬೇಡ್ಕರ್‌ ಬಂದರೂ ಸಂವಿಧಾನ ಬದಲಾಯಿಸಲಾಗದು ಎನ್ನುತ್ತಿದ್ದಾರೆ. ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಪಕ್ಷ ಹೀನಾಯವಾಗಿ ಸೋತಿರುವುದರಿಂದ ಚುನಾವಣೆ ತಂತ್ರಗಾರಿಗೆ ಬದಲಾಯಿಸಿ ಕೊಂಡಂತಿದೆ.

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!