“ಬರಲಿರುವ ಚುನಾವಣೆಯಲ್ಲಿ ಬಿ.ಜೆ.ಪಿ.ಗೆ. ಸಂಪೂರ್ಣ ಬಹುಮತ ಸಿಗುತ್ತದೆ. ಆಗ ಜಾತಿ ವಿಚಾರ ಬರುವುದಿಲ್ಲ. ಮುಂದಿನ ಬಾರಿ ಬಿ.ಜೆ.ಪಿ.ಯಿಂದ ರಾಷ್ಟ್ರವಾದಿಯೊಬ್ಬರು ಮುಖ್ಯಮಂತ್ರಿಯಾಗುತ್ತಾರೆ” ಎಂದಿದ್ದಾರೆ ಕೆ.ಎಸ್.ಈಶ್ವರಪ್ಪ. (ಪ್ರ.ವಾ. ಆ.6 ಪು.8)
ಈ ಮಾತುಗಳ ಅರ್ಥ ಸ್ಪಷ್ಟವಾಗಿದೆ. ಅಂದರೆ ಬಿ.ಜೆ.ಪಿ.ಗೆ ಸಂಪೂರ್ಣ ಬಹುಮತ ಸಿಗದಿದ್ದಾಗ ಮಾತ್ರ ಅಧಿಕಾರ ದಕ್ಕಿಸಿಕೊಳ್ಳಲು ಜಾತಿಗಳನ್ನು ಓಲೈಸಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಈಬಾರಿ ಲಿಂಗಾಯತ ತುಷ್ಠೀಕರಣ ಮಾಡಿರುವುದು ಅಸಾಧ್ಯ ಸಂದರ್ಭದಲ್ಲಿ, ಅಧಿಕಾರ ಸಾಧ್ಯಮಾಡಿಕೊಳ್ಳುವ ನಿಟ್ಟಿನಲ್ಲಿ ಮಾಡಿರುವ ತಂತ್ರವಷ್ಟೆ, ಎಂಬುದನ್ನು ಸೂಚಿಸುತ್ತಿವೆ.
ಇನ್ನೂ ಮುಖ್ಯವಾಗಿ, ಇಂತಹ ಈಗಿನ ಬಿಕ್ಕಟ್ಟಿನ ಕಾಲದಲ್ಲಿ ಪಕ್ಷದ ಹಿಡಿತದಲ್ಲಿ ಅಧಿಕಾರ ಉಳಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಮಾತ್ರ ಬಸವರಾಜ ಬೊಮ್ಮಾಯಿ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ ಎಂಬುದು ಮೇಲ್ನೋಟಕ್ಕೇ ವ್ಯಕ್ತವಾಗಿದೆಯಾದರೂ, ಬಸವರಾಜ ಬೊಮ್ಮಾಯಿ ನೈಜ “ರಾಷ್ಟ್ರವಾದಿ” ಅಲ್ಲ, ಎಂಬ ಬಿ.ಜೆ.ಪಿ.ಯ ಆಂತರಿಕ ನಿಲುವು ಈಶ್ವರಪ್ಪನವರಿಂದ ಬಹಿರಂಗವಾದಂತಾಗಿದೆ.
ಹಾಗೆನ್ನುವುದಾದರೆ, ಪೂರ್ಣಬಹುಮತವಿದ್ದಾಗ ಮುಖ್ಯಮಂತ್ರಿಯಾಗಬಲ್ಲ ನಿಜವಾದ ರಾಷ್ಟ್ರವಾದಿ ಯಾರು ಎನ್ನುವ ಪ್ರಶ್ನೆಗೆ ಈಶ್ವರಪ್ಪನವರ ಮಾತುಗಳು ‘ಇನ್ನೂ ಮೇಲಿನ’ ಜಾತಿ ನಾಯಕರನ್ನೇ ಸೂಚಿಸುತ್ತಿವೆ.
ಅಂದರೆ; ಅಧಿಕಾರ ಪಡೆಯಲು ಲಿಂಗಾಯತ ಮತಗಳು, ಕಷ್ಟಕಾಲದಲ್ಲಿ ಅಧಿಕಾರ ಉಳಿಸಿಕೊಳ್ಳಲು, ಕಷ್ಟದಲ್ಲಿ ಪಕ್ಷ ಉಳಿಸಲು ಲಿಂಗಾಯತ ಮುಖಂಡರು ಬೇಕು. ಆದರೆ ಒಮ್ಮೆ ಪೂರ್ಣ ಬಹುಮತ ಬಂದರೆ ಇವರೂ ರಾಷ್ಟ್ರವಾದಿಗಳೆನಿಸಿಕೊಳ್ಳಲಾರರು! ಆಗ ಪೂರ್ಣ ಬಹುಮತದ, ನಿಶ್ಚಿಂತೆಯ ಸರ್ವಾಧಿಕಾರ ಅದು “ಸಂತೋಷ” “ಪ್ರಹ್ಲಾದ”ರ ಬೆರಳ ತುದಿಯಲ್ಲಿರುತ್ತದೆ.
ರಾಷ್ಟ್ರವಾದ, ದೇಶಭಕ್ತಿಯ ಪ್ರಶ್ನಾತೀತ ಅರ್ಹತೆಯನ್ನು ಅತಿ ಮೇಲಿನ ಜಾತಿಗೆ ಮಾತ್ರ ಎಂಬ ರಾಜಕೀಯ ಮೌಲ್ಯವನ್ನು ಸಂಘ ಪರಿವಾರ ಶಿಸ್ತುಬದ್ಧವಾಗಿಯೇ ಸ್ಥಾಪಿಸಿಬಿಟ್ಟಿದೆ. ಮುಂದಿನಬಾರಿ ರಾಷ್ಟ್ರವಾದಿ ಎಂದರೆ, ಈಬಾರಿ ಇರುವವರು ರಾಷ್ಟ್ರವಾದಿಯಲ್ಲ ಎಂಬ ನೇರ ಅರ್ಥವನ್ನು ಸಂಘ ಪರಿವಾರವು ಹೊರಡಿಸಿರುವುದನ್ನು ಬೊಮ್ಮಾಯಿಯವರನ್ನು ತಮ್ಮ ಜಾತಿಯ ಪ್ರತಿನಿಧಿ ಎಂದು ಭಾವಿಸಿರುವ ಸಮುದಾಯ ಅರ್ಥಮಾಡಿಕೊಳ್ಳುವ ಅಗತ್ತವಿದೆ.
ದೇಶ ಮಟ್ಟದಲ್ಲಿ ಕಾಂಗ್ರೆಸ್ ಮುಸ್ಲಿಮರ ತುಷ್ಟಿಕರಣ ಮಾಡುತ್ತಿದೆ ಎಂಬ ಆರೋಪದ ರಾಜನೀತಿಯ ಮೂಲಕ ಅಧಿಕಾರ ಪಡೆದುಕೊಂಡ ಬಿ.ಜೆ.ಪಿ. ಕರ್ನಾಟಕದಲ್ಲಿ ಲಿಂಗಾಯತ ತುಷ್ಟೀಕರಣದ ತಂತ್ರ ಜಾರಿಯಲ್ಲಿಟ್ಟಿದೆ. ಕಾಂಗ್ರೆಸ್, ಬಿ.ಜೆ.ಪಿ.ಗಳ ಈ ತುಷ್ಠೀಕರಣ ರಾಜಕಾರಣವನ್ನು ಮುಸ್ಲಿಂ ಮತ್ತು ಲಿಂಗಾಯತ ಸಮುದಾಯಗಳು ಅರ್ಥ ಮಾಡಿಕೊಳ್ಳದೇ ಹೋದರೆ ಈ ಸಮುದಾಯಗಳು ಬ್ರಹ್ಮ ಭೋಜನಕ್ಕೆ ಹಾಸಿದ ” ಬಾಳೆ ಎಲೆ” ಯಾಗುವುದರಲ್ಲಿ ಅನುಮಾನವಿಲ್ಲ.