ಕಳೆದ ಲೋಕಸಭಾ ಚುನಾವಣೆಯ ನಂತರ ಭಾರಿ ಸುದ್ಧಿಗೆ ಎಡೆಯಾಗಿದ್ದ ಬಿಹಾರದ ವಿಧಾನ ಸಬಾ ಚುನಾವಣೆ ಮುಗಿದು ಪಲಿತಾಂಶ ಬಂದಾಯಿತು. ಹಾಗೆ ಬಂದಿರುವ ಫಲಿತಾಂಶವು ಟಿ ಆರ್ ಪಿ ಮಾಧ್ಯಮಗಳ ಎಲ್ಲಾ ಚುನಾವಣೋತ್ತರ ಸಮೀಕ್ಷೆಗಳನ್ನೂ ಬಡಮೇಲು ಮಾಡಿದ್ದು ಸಧ್ಯದ ಸುದ್ಧಿಯಾಗಿದೆ. ಬಿಹಾರ ವಿಧಾನ ಸಬಾ ಚುನಾವಣೆಯನ್ನು ಕೇಂದ್ರದ ಮೋದಿ ಸರ್ಕಾರದ ಒರೆಗಲ್ಲಾಗಿಯೇ ಕಾಣಲಾಗಿತ್ತು. ಅದಕ್ಕೆ ಕಾರಣವೂ ಇತ್ತು ಬಿಡಿ.
ಕೇಂದ್ರ ಸರ್ಕಾರ ನಡೆಸಿದ ಆರ್ಥಿಕ ರಾಜಕೀಯ ಹಾಗೂ ಆಡಳಿತಾತ್ಮಕ ಧಾಳಿಗಳಿಂದಾಗಿ ಸಂಕಷ್ಟಕ್ಕೊಳಗಾದವರಲ್ಲಿ ಬಿಹಾರ ರಾಜ್ಯದ ಬಡ ಜನಸಾಮಾನ್ಯರದು ಒಂದು ದೊಡ್ಡ ಪಾಲಿರುವುದು ಸುಳ್ಳೇನಲ್ಲವಲ್ಲ. ಅದರಲ್ಲೂ ಉದ್ಯೋಗ ಹಾಗೂ ವಲಸೆ ಕಾರ್ಮಿಕರ ವಿಚಾರದಲ್ಲಿ ಮಾಡಿದ ಅನಾಹುತಗಳನ್ನು ಜನರು ಸುಲಭದಲ್ಲಿ ಮರೆಯಲಾರರು. ಅದು ಖಂಡಿತಾ ಮೋದಿ ಯ ಬಿ ಜೆ ಪಿಯನ್ನು ಈ ಚುನಾವಣೆಯಲ್ಲಿ ಭಾಧಿಸಲಿದೆ ಎನ್ನುವುದು ಸಾಮಾನ್ಯ ಲೆಕ್ಕಾಚಾರವಾಗಿತ್ತು. ಬಿಜೆಪಿಯ ಅಂಗವಾಗಿರುವುದರಿಂದಾಗಿ ನಿತೀಶ್ ಕುಮಾರ್ ಸರ್ಕಾರಕ್ಕೂ ಇವೆಲ್ಲಾ ಕಂಟಕವಾಗಿ ಪರಿಣಮಿಸಬಹುದು ಎಂಬ ಲೆಕ್ಕಾಚಾರವೂ ಇತ್ತಲ್ಲ.
ಲಾಲು ಪ್ರಸಾದ್ ಯಾದವ್ ರ ಆರ್ ಜೆ ಡಿ ಹಾಗೂ ಎಡ ಪಕ್ಷಗಳು ಹಾಗೂ ಕಾಂಗ್ರೆಸ್ ಪಕ್ಷ ಒಗ್ಗೂಡಿ ಮಹಾಘಟಬಂಧನ್ ಅಂತ ಮಾಡಿಕೊಂಡು ಉದ್ಯೋಗಾವಕಾಶ, ಕೇಂದ್ರದ ಮೋದಿ ಸರ್ಕಾರದ ರೈತ ವಿರೋಧಿ ಮಸೂದೆಗಳನ್ನು ಬಿಹಾರ ರಾಜ್ಯದಲ್ಲಿ ಜಾರಿ ಮಾಡದಂತೆ ತಡೆಯುತ್ತೇವೆ. ಬಿಹಾರದ ಅಭಿವೃದ್ದಿಗೆ ಕಂಟಕವಾಗಿರುವ ಬಿಜೆಪಿ ನೇತೃತ್ವದ ಎನ್ ಡಿ ಎ ಯನ್ನು ಅಧಿಕಾರದಿಂದ ದೂರವಿಡುತ್ತೇವೆ ಇತ್ಯಾದಿ ಭರವಸೆಗಳು ಈ ಚುನಾವಣಾ ಹೊಂದಾಣಿಕೆಯ ರಾಜಕೀಯ ಕೂಟದ್ದಾಗಿತ್ತು. ಆದರೆ ಸೀಟು ಹಂಚಿಕೆಯಲ್ಲಿ ಆರ್ ಜೆ ಡಿ ಬಿಟ್ಟರೆ ಸಿಂಹಪಾಲು ಕಾಂಗ್ರೆಸ್ ಪಕ್ಷದ್ದಾಗಿತ್ತು. ಲಾಲು ಪ್ರಸಾದ್ ಯಾದವ್ ರ ಮಗ ತೇಜಸ್ವಿಯಾದವ್ ನೇತೃತ್ವದ ಆರ್ ಜೆ ಡಿ ನೂರ ನಲವತ್ತ ನಾಲ್ಕು ಸ್ಥಾನಗಳಲ್ಲಿ, ಕಾಂಗ್ರೆಸ್ ಎಪ್ಪತ್ತು ಸ್ಥಾನಗಳಲ್ಲಿ ಸ್ಪರ್ದಿಸಿದ್ದವು. ಇನ್ನು ಈ ಮಹಾ ಘಟಬಂಧನ್ ಭಾಗವಾದ ಎಡಪಕ್ಷಗಳಲ್ಲಿ ಸಿಪಿಐ (ಎಮ್ ಎಲ್) ಲಿಬರೇಷನ್ ಹತ್ತೊಂಬತ್ತು ಸ್ಥಾನಗಳಲ್ಲಿ ಸಿಪಿಐ 6 ಸ್ಥಾನಗಳಲ್ಲಿ, ಸಿಪಿಐ (ಎಂ) ನಾಲ್ಕು ಸ್ಥಾನಗಳಲ್ಲಿ ಸ್ಪರ್ದಿಸಿದ್ದವು.
ಫಲಿತಾಂಶ ಬಂದಾಗ ಮೊದಲಿದ್ದ ಎಲ್ಲಾ ಲೆಕ್ಕಾಚಾರಗಳೂ ತಪ್ಪಿವೆ. ಈ ಚುನಾವಣೆಯಲ್ಲಿ ಬಿಹಾರದಲ್ಲಿ ಮೋದಿಯ ಬಿಜೆಪಿ ಗರಿಷ್ಠ ರಾಜಕೀಯ ಲಾಭ ಗಳಿಸಿರುವುದು ಕಾಣಿಸುತ್ತಿದೆ. ಇದನ್ನು ಇಂದಿನ ಸಂಧರ್ಭದಲ್ಲಿಟ್ಟು ಗ್ರಹಿಸಬೇಕಾಗಿದೆ. ಯಾಕೆಂದರೆ ನೋಟು ರದ್ದತಿ ಮತ್ತು ಜಿ ಎಸ್ ಟಿ ಹೇರಿಕೆ, ಉದ್ಯೋಗಾವಕಾಶಗಳ ನಾಶ, ರೈತವಿರೋಧಿ ಕಾನೂನು, ಅವೈಜ್ಞಾನಿಕ ಹಾಗೂ ಅನುಚಿತ ಲಾಕ್ ಡೌನ್ ಹೇರಿ ಜನಸಾಮಾನ್ಯರನ್ನು ಇನ್ನಿಲ್ಲದಂತೆ ಹಿಂಸಿಸಿದ್ದು, ದೇಶದ ಜಿಡಿಪಿಯ ಗರಿಷ್ಠವಾಗಿ ಕುಸಿಯುವಂತಾಗಿದ್ದು ಮುಸ್ಲಿಮರು ದಲಿತರು, ಮಹಿಳೆಯರು, ಪ್ರಜಾತಂತ್ರವಾದಿಗಳ ಮೇಲಿನ ಸರಕಾರಿ ಹಾಗೂ ಪುಂಡರ ಧಾಳಿಗಳ ಗರಿಷ್ಟ ಹೆಚ್ಚಳ ಇತ್ಯಾದಿಗಳಿಂದಾಗಿ ಮೋದಿಯ ಬೆಂಬಲ ವಲಯ ಕುಸಿಯ ತೊಡಗಿದ್ದ ಕಾಲವಾಗಿತ್ತು. ಜನಜೀವನದಲ್ಲಿ ಮೋದಿಯ ಆಡಳಿತದಿಂದಾಗಿ ಕನಿಷ್ಠ ಸುಧಾರಣೆಯ ಬದಲು ಗರಿಷ್ಠ ಕಷ್ಟನಷ್ಟಗಳ ಸರಣಿಗಳೇ ಮುಂದುವರೆಯುತ್ತಿರುವ ಸಂಧರ್ಭವಿದು. ಕೊರೋನಾ ನಿರ್ವಹಣೆಯಂತೂ ಯಾರೂ ಊಹಿಸಲಾರದಂತೆ ನಿರ್ವಹಿಸಲಾಗಿತ್ತು. ಅದರ ಮರೆಯಲ್ಲಿ ರಾಜಕೀಯವಾಗಿ ಆಡಳಿತಾತ್ಮಕವಾಗಿ, ಕಾನೂನಾತ್ಮಕವಾಗಿ ಎಷ್ಟೆಲ್ಲಾ ಸಾಧ್ಯವೋ ಅಷ್ಟೆಲ್ಲಾ ಜನವಿರೋಧಿ, ಸಂವಿಧಾನ ವಿರೋಧಿ ಕಾರ್ಯಗಳು, ಕಾನೂನುಗಳು, ತಿದ್ದುಪಡಿಗಳನ್ನು ಹೇರಿದ ಸರ್ಕಾರ ಮೋದಿಯ ಕೇಂದ್ರ ಸರ್ಕಾರವೆನ್ನುವುದು ಸಾಕಷ್ಟು ಜನರಿಗೆ ಅನುಭವಕ್ಕೆ ಬಂದ ವಿಚಾರವಾಗಿತ್ತು.
ನಿತೀಶ್ ಕುಮಾರ್ ರಾಜಕೀಯವಾಗಿ ಗರಿಷ್ಠ ನಷ್ಟವನ್ನು ಅನುಭವಿಸಿದ್ದಾರೆ. ಇದುವರೆಗೂ ಬಿಹಾರ ರಾಜಕೀಯದಲ್ಲಿ ಮುಂಚೂಣಿಯಲ್ಲಿದ್ದ ನಿತೀಶ್ ಈಗ ಅದನ್ನು ಬಿಜೆಪಿಗೆ ಬಿಟ್ಟುಕೊಡಬೇಕಾಗಿ ಬಂದಿದೆ. ನಿತೀಶ್ ಕುಮಾರ್ ಬಿಜೆಪಿ ನೇತೃತ್ವದ ಎನ್ ಡಿ ಎ ಸರ್ಕಾರದ ಮುಖ್ಯ ಮಂತ್ರಿಯಾಗಿ ಮುಂದುವರೆಯಬಹುದು. ಆದರೆ ಮೋದಿ ಹಾಕುವ ಗೆರೆಯನ್ನು ದಾಟಲು ಸಾಧ್ಯವಾಗದು. ಯಾಕೆಂದರೆ ಬಿಹಾರ ವಿಧಾನ ಸಭೆಯಲ್ಲಿ ಆರ್ ಜೆ ಡಿ ಅತೀ ದೊಡ್ಡ ಪಕ್ಷವಾಗಿದ್ದರೆ ಬಿಜೆಪಿ ಎರಡನೆಯ ಅತೀ ದೊಡ್ಡ ಪಕ್ಷವಾಗಿದೆ. ಬಿಜೆಪಿಗೆ ಮತಗಳಿಕೆ ಕುಸಿದಿದ್ದರೂ ಇಪ್ಪತ್ತೊಂದು ಸ್ಥಾನಗಳನ್ನು ಹೆಚ್ಚಿಸಿಕೊಂಡಿದೆ.
ಹದಿನೈದು ವರುಷಗಳ ಮುಖ್ಯ ಮಂತ್ರಿಯಾಗಿಯೇ ಅಧಿಕಾರ ಅನುಭವಿಸಿದ ನಿತೀಶ್ ಕುಮಾರ್ ರ ಜೆಡಿಯು ಪಕ್ಷ ಕೇವಲ 43 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾದ ಸ್ಥಿತಿ ತಲುಪಿದೆ. ನಿತೀಶ್ ಚುನಾವಣಾ ರಾಜಕೀಯ ಭವಿಷ್ಯ ಸದ್ಯಕ್ಕೆ ಮಂಕಾಗಿದೆಯೆನ್ನಬಹುದು. ಅದೇ ವೇಳೆಯಲ್ಲಿ ಆರ್ ಜೆ ಡಿಯ ತೇಜಸ್ವಿ ಯಾದವ್ ರ ಚುನಾವಣಾ ರಾಜಕೀಯ ಭವಿಷ್ಯ ಸಧ್ಯಕ್ಕೆ ಗಣನೀಯವಾಗಿ ಹೆಚ್ಚಾಗಿಲ್ಲ. ಲಾಲು ಪ್ರಸಾದ್ ರ ಹಗರಣಗಳು, ಬಂಧನ, ಶಿಕ್ಷೆ ಇತ್ಯಾದಿಗಳಿಂದ ಅದರ ಎಲ್ಲಾ ವರಸೆಗಳ ನಡುವೆಯೂ ಆರ್ ಜೆ ಡಿ ಕಳೆದ ಹದಿನೈದು ವರುಷಗಳಿಂದ ಮಂಕಾಗಿ ಕುಳಿತಿತ್ತು. ಆದರೆ ಲಾಲು ಪ್ರಸಾದ್ ರಾಜಕೀಯ ಮಾಡಿದಂತಹ ಸಂಧರ್ಭ ಈಗಿನದಕ್ಕಿಂತ ಬಹಳ ಭಿನ್ನವಾಗಿರುವುದರಿಂದ ಅವರ ಮಗ ತೇಜಸ್ವಿ ಯಾದವ್ ಸ್ವಂತವಾಗಿ ತನ್ನ ಚುನಾವಣಾ ರಾಜಕೀಯ ಭವಿಷ್ಯ ನಿರ್ಮಿಸಿಕೊಳ್ಳುವುದು ಅಷ್ಟು ಸುಲಭದ್ದೇನೂ ಅಲ್ಲವೆಂಬುದನ್ನು ಊಹಿಸಬಹುದು. ಕಾರಣ ನಿತೀಶ್ ಕುಮಾರ್ ತನ್ನ ಚುನಾವಣಾ ರಾಜಕೀಯ ನಿರ್ಮಿಸಿಕೊಂಡಿದ್ದ ಕತೆಯನ್ನು ಕೆದಕಿದರೆ ಹಲವು ಕುಟಿಲತೆಗಳ ಹಂದರವೇ ಎದ್ದು ಕಾಣುತ್ತವೆ.
ಭಾರಿ ಭೂಮಾಲಿಕರ, ಜಾತಿವಾದಿ, ಮತೀಯವಾದಿ, ಕೋಮುವಾದಿ, ಬ್ರಾಹ್ಮಣಶಾಹಿ ಫ್ಯಾಸಿಸ್ಟ್ ನಿರಂಕುಶತೆ ಇತ್ಯಾದಿಗಳೊಂದಿಗೆ ರಾಜಿಕಬೂಲಿಗಳೇ ಎದ್ದು ಕಾಣುತ್ತವೆ. ಈ ಪ್ರತಿಗಾಮಿ ಶಕ್ತಿಗಳು ಹಾಗೂ ಅವರ ರಾಜಕೀಯದೊಂದಿಗಿನ ಸಖ್ಯದ ಮೂಲಕವೇ ನಿತೀಶ್ ಕುಮಾರ್ ಲಾಲು ಪ್ರಸಾದ್ ಯಾದವ್ ರ ಪ್ರಭಾವವನ್ನು ಮಸುಕುಗೊಳಿಸಿ ಅಧಿಕಾರಕ್ಕೇರಿದ್ದು ಎನ್ನುವುದನ್ನು ಮರೆಯಕೂಡದು. ಎರಡು ದಶಕಗಳ ಹಿಂದೆ ಭಾರಿ ಸುದ್ಧಿ ಮಾಡಿದ್ದ ಬಿಹಾರದ ಭಾರಿ ಭೂಮಾಲಿಕರ ಖಾಸಗೀ ಸೇನೆಯಾಗಿದ್ದ ರಣವೀರ್ ಸೇನಾ ಅಲ್ಲಿನ ಜನಸಾಮಾನ್ಯರ ಮೇಲೆ ನಡೆಸಿದ ಕಗ್ಗೊಲೆಗಳು ಹಾಗೂ ಇನ್ನಿತರ ಸಮಾಜ ವಿರೋಧಿ ವಿಧ್ವಂಸಕ ಕೃತ್ಯಗಳ ವಿಚಾರಣೆ ನಡೆಸಲು ನೇಮಿಸಿದ್ದ ನ್ಯಾಯಾಧೀಶ ಅಮೀರ್ ದಾಸ್ ಆಯೋಗ ನೀಡಿದ್ದ ವರದಿಯ ಮೇಲೆ ಕ್ರಮ ಕೈಗೊಳ್ಳುವುದರ ಬದಲಾಗಿ ಆ ವರದಿಯನ್ನೇ ಮುಚ್ಚಿಟ್ಟು ಆಡಳಿತ ನಡೆಸಿದ ಕುಖ್ಯಾತಿಯೂ ಲೋಹಿಯಾವಾದಿಯೆಂದು ಹೇಳಿಕೊಳ್ಳುವ ನಿತೀಶ್ ಕುಮಾರರದಾಗಿದೆ. ಇದು ದಲಿತ ದಮನಿತ ಜನಸಾಮಾನ್ಯರೆಡೆಗಿನ ಅವರ ನೈಜ ಮುಖಕ್ಕೆ ಒಂದು ಉದಾಹರಣೆಯಾಗಿದೆ.
ಈ ಬಾರಿಯ ಚುನಾವಣೆಯಲ್ಲಿ ಸ್ಥಾನಗಳಿಕೆಯಲ್ಲಿ ಬಿಜೆಪಿ ಗಣನೀಯ ಯಶಸ್ಸು ಸಾಧಿಸಿದ್ದರೂ ಮತಗಳಿಕೆಯಲ್ಲಿ ಕುಸಿತ ಕಂಡಿದೆ. ಅಲ್ಲದೇ ನೂರ ಮೂವತ್ತು ಕ್ಷೇತ್ರಗಳಲ್ಲಿ ಗೆಲುವಿನ ಅಂತರ ಶೇ 0.03 ಮಾತ್ರ ಎಂಬ ಮಾಹಿತಿಯೂ ಹೊರಬಿದ್ದಿದೆ. ಅಲ್ಲದೇ ಎನ್ ಡಿ ಎ ಹಾಗೂ ಮಹಾ ಘಟಬಂಧನ್ ನಡುವಿನ ಗಳಿಸಿದ ಒಟ್ಟು ಮತಗಳ ಅಂತರ ಕೇವಲ 12,768 ಮತಗಳೆಂಬ ಮಾಹಿತಿಯೂ ಇದೆ.
ತೇಜಸ್ವಿ ಯಾದವರ ಆರ್ ಜೆ ಡಿ ಕಳೆದ ವಿದಾನ ಸಭೆಯಲ್ಲಿ ಎಂಬತ್ತು ಸ್ಥಾನಗಳನ್ನು ಗಳಿಸಿದ್ದರೆ ಈ ಬಾರಿ ಅದು ಎಪ್ಪತೈದಕ್ಕೆ ಇಳಿದಿದೆ. ಕಾಂಗ್ರೆಸ್ ಹಿಂದೆ ಇದ್ದ ಎಂಟು ಸ್ಥಾನಗಳನ್ನು ಕಳೆದುಕೊಂಡು ಹತ್ತೊಂಬತ್ತಕ್ಕೆ ಸ್ಥಾನಗಳಿಗೆ ಬಂದು ಕುಳಿತಿದೆ. ಎಡಪಕ್ಷಗಳಲ್ಲಿ ಸಿ ಪಿ ಐ (ಲಿಬರೇಷನ್) 12 ಸ್ಥಾನ ಗಳಿಸಿದ್ದರೆ ಸಿ ಪಿ ಐ ಹಾಗೂ ಸಿಪಿಐ(ಎಂ) ತಲಾ ಎರಡು ಸ್ಥಾನಗಳನ್ನು ಗಳಿಸಿದೆ. ಇತರೆ ಪಕ್ಷಗಳಲ್ಲಿ ರಾಮ
ವಿಲಾಸ ಪಾಸ್ವಾನರ ಎಲ್ ಜೆಪಿ ಒಂದು, ಆಲ್ ಇಂಡಿಯಾ ಮಜ್ಲಿಸೆ ಇತ್ತೆಹಾದುಲ್ ಮುಸ್ಲಮೀನ್ (ಎಐಎಂಎಂ) ಐದು ಸ್ಥಾನಗಳನ್ನು ಗಳಿಸಿವೆ.
ಈಗ ಚುನಾವಣೆಯಲ್ಲಿ ಅಕ್ರಮಗಳು ನಡೆದಿವೆಯೆಂಬ ಆರೋಪಗಳೂ ಕೇಳಿಬರುತ್ತಿವೆ. ಆರ್ ಜೆ ಡಿ ನಾಯಕ ತೇಜಸ್ವಿ ಯಾದವ್, ಗೆಲುವಿನ ನೂರಾರು ಕ್ಷೇತ್ರಗಳಲ್ಲಿ ಗೆಲುವಿನ ಅಂತರ ಬಹಳ ಕಡಿಮೆಯಿರುವುದು, ಅಂತಿಮ ಘೋಷಣೆಯಲ್ಲಿ ಮಾಡಿದ ವಿಳಂಬ, ಅಂಚೆ ಮತ ಎಣಿಕೆ ಪಾರದರ್ಶಕವಾಗಿ ಮಾಡದೇ ಇರುವುದನ್ನು ಮುಖ್ಯವಾಗಿ ಹೆಸರಿಸಿ ಈ ಆರೋಪಕ್ಕೆ ಪುಷ್ಟಿ ಒದಗಿಸಲು ಶ್ರಮಿಸಿದ್ದಾರೆ.
ಚುನಾವಣಾ ರಾಜಕೀಯದ ಈ ಎಲ್ಲಾ ನಾಟಕಗಳು, ಹೊಂದಾಣಿಕೆಗಳು, ಲೆಕ್ಕಾಚಾರಗಳು, ಅಕ್ರಮಗಳು, ಜಾತಿಯ ಮೇಲಾಳ್ವಿಕೆ, ಹಣ ನೀಡಿ ಮತ ಕೊಳ್ಳುವಿಕೆ, ಹಾಗೂ ಗೂಂಡಾಗಿರಿಗಳು ನಮ್ಮ ದೇಶದಲ್ಲಿ ಅದರಲ್ಲೂ ಬಿಹಾರದಂತಹ ರಾಜ್ಯಗಳಲ್ಲಿ ಮೊದಲಿನಿಂದಲೂ ನಡೆದುಕೊಂಡುಬಂದ ಸಾಮಾನ್ಯ ಸಂಗತಿಗಳೇ ತಾನೇ. ಅದರಲ್ಲಿ ಕಾಂಗ್ರೆಸ್ ಪಕ್ಷದ್ದೇ ಸಿಂಹಪಾಲೆನ್ನುವುದನ್ನು ಮರೆಯಲು ಸಾಧ್ಯವೇ. ನಮ್ಮ ದೇಶದ ಚುನಾವಣೆ ಅದರಲ್ಲಿ ಜಯ ಇಲ್ಲವೇ ಸೋಲು ಎನ್ನುವುದರಲ್ಲಿ ಜನಸಾಮಾನ್ಯರ ಪಾತ್ರ ಪ್ರಧಾನವಾದುದಲ್ಲ ಎನ್ನುವುದು ಸತ್ಯ ತಾನೆ. ಹಿಂದೆ ಮತ ಪತ್ರಗಳ ರಿಗ್ಗಿಂಗ್ ನಡೆಯುತ್ತಿದ್ದರೆ ಈಗ ಇವಿಎಮ್ ಹ್ಯಾಕಿಂಗ್ ನಡೆಯುತ್ತಿದೆ ಎಂಬ ಆರೋಪಗಳು ಕೇಳುತ್ತಿವೆ.
ನಮ್ಮ ದೇಶದ ಚುನಾವಣೆಯಲ್ಲಿ ದಲಿತ ದಮನಿತ ಬಹುಸಂಖ್ಯಾತ ಜನಸಮೂಹಕ್ಕೆ ಪ್ರಜಾಪ್ರಭುತ್ವವೂ ಇಲ್ಲ ವಿಚಾರವಂತರೆಂದು ಹೇಳುವ ಹಲವರು ಕರೆಯುವ ‘ಪ್ರಜಾಪ್ರಭುತ್ವದ ಸೌಂದರ್ಯ’ವೂ ಇಲ್ಲ. ಹೆಚ್ಚು ಕಡಿಮೆ ಎರಡು ದಶಕದ ಹಿಂದಿನವರೆಗೂ ಇವುಗಳು ಮದ್ಯಮ, ಮೇಲ್ಮದ್ಯಮ ಶ್ರೀಮಂತ ವರ್ಗದ ಜನರಿಗೆ ಸಾಪೇಕ್ಷವಾಗಿ ಅನುಭವದಲ್ಲಿದ್ದ ಸಂಗತಿಗಳಾಗಿದ್ದವು. ಅಂದರೆ ಅವರುಗಳ ಹಕ್ಕುಗಳು, ಅಭಿವ್ಯಕ್ತಿ ಸ್ವಾತಂತ್ರ್ಯ, ವ್ಯಕ್ತಿ ಸ್ವಾತಂತ್ರ್ಯ ಇತ್ಯಾದಿ ಪ್ರಜಾತಾಂತ್ರಿಕ ಸಂಗತಿಗಳನ್ನು ಒಂದು ಮಟ್ಟಕ್ಕೆ ಅನುಭವಿಸಬಲ್ಲರಾಗಿದ್ದರು. ಆದರೆ ಅವೆಲ್ಲಾ ಈಗ ಕೇವಲ ಮಾಧ್ಯಮ ವರದಿಯ, ವಾಹಿನಿಗಳ ಚರ್ಚೆಯ, ಸಂಜೆಯ ಹೊತ್ತಿನ ಕೆಲವು ಬುದ್ದಿಜೀವಿ ಕೂಟದ ಹರಟೆಯ ವಸ್ತು ಮಾತ್ರ ಎನ್ನಬಹುದು.
ಬಿಹಾರದ ವಿಚಾರವನ್ನೇ ನೋಡಿದರೂ ಅಲ್ಲಿನ ಭೂಮಿಯ ಮೇಲಿನ ಹಿಡಿತ ಈಗಲೂ ಇರುವುದು ಮೇಲ್ಜಾತಿಯ ಭಾರಿ ಭೂಮಾಲಿಕರ ಕೈಯಲ್ಲೇ. ಭಾರಿ ಪ್ರಚಾರದ ಭೂಸುಧಾರಣೆ ಬಿಹಾರದಂತಹ ರಾಜ್ಯಗಳಲ್ಲಿ ಹಲವು ಪಕ್ಷಗಳ ಸರ್ಕಾರಗಳು ಆಳುತ್ತಾ ಬಂದರೂ ಇನ್ನೂ ಕಾರ್ಯಗತವಾಗಿಲ್ಲ ಎನ್ನುವುದೇ ವಾಸ್ತವ. ಇನ್ನು ಮೂಲಭೂತವಾಗಿ ಬಹುಸಂಖ್ಯಾತ ಜನರು ತೀರಾ ಬಡತನದಲ್ಲಿ ಬೆಂದು ನಲುಗಿ ಹೋಗುತ್ತಿರುವವರು. ಹಾಗಾಗಿಯೇ ವಲಸೆ ಕಾರ್ಮಿಕರೆಂದಾಗ ಬಿಹಾರದ ಪಾಲು ದೊಡ್ಡದಾಗಿಯೇ ಕಾಣುತ್ತದೆ. ಇದರಿಂದಾಗಿ ಶಿಕ್ಷಣದ ಕೊರತೆ, ಆರೋಗ್ಯ ಸೌಲಭ್ಯಗಳ ಕೊರತೆ, ಅಪೌಷ್ಟಿಕತೆ ಇತ್ಯಾದಿಗಳು ಈಗಲೂ ಸಾಮಾನ್ಯ ಸಂಗತಿಗಳು ಇಲ್ಲಿ. ಜಾತಿ ಹಾಗೂ ಲಿಂಗ ದೌರ್ಜನ್ಯಗಳ ಲೆಕ್ಕ ಕೂಡ ಸಿಗುವುದಿಲ್ಲ. ಯಾಕೆಂದರೆ ಅಷ್ಟು ಸಹಜವೆನ್ನುವ ಹಾಗಿದೆ. ಬಿಹಾರ ದೇಶದಲ್ಲಿ ದಲಿತರ ಸಂಖ್ಯೆಯಲ್ಲಿ ಒಂದು ದೊಡ್ಡ ಪಾಲಿರುವ ರಾಜ್ಯ. ಅಲ್ಲಿನ ಜನಸಂಖ್ಯೆಯ ಶೇ 9.1ರಷ್ಟು ದಲಿತರಿದ್ದಾರೆ. ಅವರಲ್ಲಿ ಕೇವಲ ಶೇ 18.1ರಷ್ಟು ದಲಿತರು ಮಾತ್ರ ತುಂಡು ಭೂಮಿಯನ್ನು ಹೊಂದಿದ್ದಾರೆ. ಉಳಿದ ಶೇ 81.9 ದಲಿತರು ಸಂಪೂರ್ಣ ಭೂ ಹೀನರೆಂದರೆ ಪರಿಸ್ಥಿತಿಯ ಕರಾಳತೆಯ ಅರಿವಾಗಬಹುದು. ಇಂತಹವರನ್ನು ತಮ್ಮ ಅಡಿಯಾಳಾಗಿಸಲೆಂದೇ ಹಿಂದೆ ಅಲ್ಲಿ ಭಾರಿ ಭೂಮಾಲಿಕರ ಸನ್ ಲೈಟ್ ಸೇನಾ, ರೋರಿಕ್ ಸೇನಾ, ರಣವೀರ್ ಸೇನಾಗಳಂತಹ ಖಾಸಗಿ ಸಶಸ್ತ್ರ ಸೇನೆಗಳು ಚಾಲ್ತಿಯಲ್ಲಿದ್ದವು.
ಬಿಹಾರದಲ್ಲಿ ದಿನಗೂಲಿಯ ಮೇಲೆ ಬದುಕುವವರ ಸಂಖ್ಯೆ ದೇಶದ ಸರಾಸರಿಗಿಂತ ಬಹಳ ಹೆಚ್ಚು ಎಂದು ಕೇಂದ್ರ ಸರ್ಕಾರದ 2011ರ ಸಮಾಜೋ ಆರ್ಥಿಕ ಜಾತಿ ಸಮೀಕ್ಷೆಯ ವರದಿ ಇದೆ. ದೇಶದ ಸರಾಸರಿ 38.27 ಆಗಿದ್ದರೆ ಬಿಹಾರದ್ದು ಶೇ 54.33 ಎಂದು ಆ ವರದಿಯೇ ಹೇಳುತ್ತದೆ.
ಹಾಗೇನೆ ಬುಡಕಟ್ಟು ಜನರ ಸಂಖ್ಯೆಯಲ್ಲೂ ಬಿಹಾರ ತನ್ನ ಒಟ್ಟು ಜನಸಂಖ್ಯೆಯ ಶೇ 9.8ನ್ನು ಹೊಂದಿದೆ ನೀತಿ ಆಯೋಗ ಹೇಳುತ್ತದೆ. ಆದರೆ ಅವರನ್ನು ರಾಜ್ಯದ ನಾಗರೀಕರಾಗಿ ನೋಡುವ ಪರಿಪಾಟ ಈಗಲೂ ಇಲ್ಲವೆನ್ನುವುದು ಕರಾಳ ಸತ್ಯ. ಆದರೆ ಈ ಎಲ್ಲಾ ಸಂಗತಿಗಳು ಈ ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆಗಳ ವಿಚಾರಗಳಾಗುತ್ತಿಲ್ಲ ಎಂದರೆ ಏನರ್ಥ !?
ಈ ಎಲ್ಲಾ ದಲಿತ, ಆದಿವಾಸಿ, ಬಡ ಜನಸಾಮಾನ್ಯರ ಬದುಕುಗಳು ಲೋಹಿಯಾ ಸಮಾಜವಾದಿಗಳೆಂದು ಹೇಳುವ ಲಾಲು ಪ್ರಸಾದ್ ಯಾದವ್ ರ ಹಾಗೂ ನಿತೀಶ್ ಕುಮಾರರ ಹೆಚ್ಚೂ ಕಡಿಮೆ ಮೂವತ್ತು ವರುಷಗಳ ಆಳ್ವಿಕೆಯಲ್ಲಿ ಮೂಲಭೂತ ಬದಲಾವಣೆ ಕಾಣಲಿಲ್ಲ, ಅದಕ್ಕೂ ಹಿಂದಿನ ಕಾಂಗ್ರೆಸ್ ಆಡಳಿತದಲ್ಲೂ ಅದೇ ಕತೆಯೇ ಎನ್ನುವ ಸತ್ಯವನ್ನು ಹೊರಗಿಟ್ಟು ನೋಡುವವರಿಗೆ ಮಾತ್ರ ಈ ಚುನಾವಣೆ, ಮತ ಗಳಿಕೆ, ಪಕ್ಷಗಳ ಬಲಾಬಲ, ವಿದಾನ ಸಭೆ, ಲೋಕಸಭೆ ಇತ್ಯಾದಿಗಳು ಪ್ರಜಾಪ್ರಭುತ್ವದ ಸೌಂದರ್ಯವಾಗಿ ಕಾಂಗ್ರೆಸ್ ನಂತಹ ಪಕ್ಷಗಳು ಪ್ರಗತಿಪರ, ಜನಪರ, ಸಂವಿಧಾನಪರ, ಪ್ರಜಾತಾಂತ್ರಿಕ ಎಂದೆಲ್ಲಾ ಕಾಣಲು ಸಾಧ್ಯ.
ಬಹುಸಂಖ್ಯಾತ ಜನಸಾಮಾನ್ಯರ ಶ್ರಮದ ಮೇಲೆ ನಿಂತಿರುವ ಈ ರಾಜ್ಯ ಈಗ ಸಂಪೂರ್ಣವಾಗಿ ಬ್ರಾಹ್ಮಣಶಾಹಿ ಫ್ಯಾಸಿಸ್ಟ್ ಆಡಳಿತದಡಿ ತರುತ್ತಿರುವುದರಲ್ಲಿ ಕಾಂಗ್ರೆಸ್ ಸೇರಿದಂತೆ ಆಳುತ್ತಾ ಬಂದ ಹಾಗೇನೆ ಚುನಾವಣಾ ರಾಜಕೀಯ ಮಾತ್ರ ಮಾಡುತ್ತಾ ಬಂದ ಎಲ್ಲಾ ಪಕ್ಷಗಳು ಹಾಗೂ ಶಕ್ತಿಗಳ ಪಾಲಿದೆ ಎನ್ನುವ ಕಾರ್ಕೋಟಕ ಸತ್ಯವನ್ನು ಮರೆಯದೇ ಬಿಹಾರದ ಚುನಾವಣಾ ಫಲಿತಾಂಶದ ವಿಶ್ಲೇಷಣೆಗಿಳಿಯಬೇಕಾದುದು ಅಗತ್ಯ. ಇಲ್ಲದಿದ್ದರೆ ಅವರು ಅಭ್ಯರ್ಥಿಗಳನ್ನು ಕಣಕ್ಕಿಳಿಸಬಾರದಿತ್ತು… ಇವರು ಹೊಂದಾಣಿಕೆಗೆ ಬಾರದೇ ದ್ರೋಹವೆಸಗಿದರು.. ಇತ್ಯಾದಿ ಚರ್ಚೆಯ ಉಪಯೋಗಕ್ಕೆ ಬಾರದ ತೌಡು ಕುಟ್ಟುವಿಕೆ ಮಾತ್ರವಾಗುತ್ತದೆ.