ಬೀದರ ಲೋಕಸಭಾ ಕ್ಷೇತ್ರದಲ್ಲಿ ಈವರೆಗೆ 18 ಬಾರಿ ಲೋಕಸಭಾ ಚುನಾವಣೆ ನಡೆದಿದೆ. ಇದರಲ್ಲಿ 11 ಸಲ ಕಾಂಗ್ರೆಸ್ ಜಯಗಳಿಸಿದರೆ, 07 ಸಲ ಬಿಜೆಪಿ ಗೆದ್ದು ಬೀಗಿದೆ. ಇಲ್ಲಿ ಕಾಂಗ್ರೆಸ್ – ಬಿಜೆಪಿ ಹೊರತು ಪಡಿಸಿ ಬೇರೊಂದು ಪಕ್ಷವಾಗಲಿ, ಪಕ್ಷೇತರ ಅಭ್ಯರ್ಥಿಯಾಗಲಿ ಗೆದ್ದಿರುವ ನಿದರ್ಶನವಿಲ್ಲ. 18 ಬಾರಿ ಚುನಾವಣೆ ನಡೆದರೂ ಆಯ್ಕೆಯಾದವರು 07 ಜನರು ಮಾತ್ರ. ಮುಸ್ಲಿಂ ಸಮುದಾಯದ ವ್ಯಕ್ತಿಯೂ ಇಲ್ಲಿ ಗೆದ್ದದ್ದು ಈ ಕ್ಷೇತ್ರದ ವಿಶೇಷಗಳಲ್ಲೊಂದು. ಇಲ್ಲಿ ತನ್ನ 28ನೆಯ ವಯಸ್ಸಿನಲ್ಲಿ ನರಸಿಂಗ್‌ರಾವ್ ಸೂರ್ಯವಂಶಿಯವರು ಗೆದ್ದಿದ್ದರೆ, 95ನೆಯ ವಯಸ್ಸಿನ ರಾಮಚಂದ್ರ ವೀರಪ್ಪನವರೂ ಗೆದ್ದಿದ್ದಾರೆ. ಇಲ್ಲಿ ವ್ಯಕ್ತಿಗಿಂತ ಪಕ್ಷಕ್ಕೆ ಮತದಾರರು ಮಣೆ ಹಾಕಿದ್ದಾರೆ.
ಇಲ್ಲಿ ಹುರಿಯಾಳುಗಳ ನಡುವೆ ಪರಸ್ಪರ ಆರೋಪ, ಪ್ರತ್ಯಾರೋಪಗಳು ವಿನಿಮಯವಾಗುತ್ತಿದ್ದವು ವಿನಾ ಅಭ್ಯರ್ಥಿಗಳು ವೈಯಕ್ತಿಕ ನಿಂದನೆಗೆ ಎಂದೂ ಇಳಿಯುತ್ತಿರಲಿಲ್ಲ. ಆದರೆ ಈ ಸಲ ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಭಗವಂತ ಖೂಬಾ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಸಾಗರ ಖಂಡ್ರೆಯವರ ತಂದೆ ಸಚಿವ ಈಶ್ವರ ಖಂಡ್ರೆ ಮಧ್ಯೆ ರಾಜಕೀಯ ಅರೋಪ -ಪ್ರತ್ಯಾರೋಪ, ಟೀಕೆ – ಟಿಪ್ಪಣಿಗಿಂತಲೂ ಪರಸ್ಪರ ದಾಳಿ, ಪ್ರತಿದಾಳಿ, ವೈಯಕ್ತಿಕ ನಿಂದನೆ ಯಾವ ಎಗ್ಗಿಲ್ಲದೆ ನಡೆಯತ್ತಿವೆ. ಕಳೆದ ಚುನಾವಣೆಯಲ್ಲಿ ಇವರಿಬ್ಬರ ನಡುವೆ ರಾಜಕೀಯ ವೈರತ್ವ ಚಿಗುರಿ, ಅದೀಗ ರಾಜಕೀಯ ದ್ವೇಷವಾಗಿ ಬೆಳೆದು ನಿಂತಿದೆ. ಇವರಿಬ್ಬರ ಮಾತುಗಳು ಕ್ಷೇತ್ರದ ಜನರಿಗೆ ರೇಜಿಗೆ ಹುಟ್ಟಿಸಿದೆ. ಉರಿ ಬಿಸಿಲಿನಲ್ಲಿನಲ್ಲಿ ಚುನಾವಣೆ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಇಬ್ಬರಿಗೂ ಈ ಚುನಾವಣೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.
ಭಗವಂತ ಖೂಬಾ ಎರಡು ಸಲ ಮೋದಿ ನಾಮ ಬಲದಿಂದಲೇ ಅನಾಯಾಸವಾಗಿ ಗೆದ್ದಿದ್ದಾರೆ. ಈ ಸಲವೂ ಮೋದಿ ಬಲವೇ ನಂಬಿದ್ದಾರೆ. ಮಾತೆತ್ತಿದ್ದರೆ ಇವರ ಪ್ರತಿ ಮಾತಿನಲ್ಲೂ ಮೋದಿ ಮೋದಿ ಮೋದಿ. ಇವರ ʼಮೋದಿ ಜಪʼ ಇಲ್ಲಿ ಸ್ಪರ್ಧಿಸುತ್ತಿರುವುದು ಇವರೋ ಅಥವಾ ಮೋದಿಯೋ ಎಂಬ ಗೊಂದಲ ಹುಟ್ಟಿಸುವಂತಿದೆ. [ಇವರೊಬ್ಬರೆ ಅಲ್ಲ ದೇಶದ ಬಹುತೇಕ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳ ಹಣೆ ಬರಹ ಇದೇ ಆಗಿದೆ] ತಕ್ಕ ಮಟ್ಟಿಗೆ ಕ್ಷೇತ್ರದಲ್ಲಿ ಕೆಲಸವೂ ಮಾಡಿದ್ದಾರೆ. ಇವರ ಮೇಲೆ ಗುರುತರವಾದ ಭ್ರಷ್ಟಾಚಾರದ ಆರೋಪವೂ ಇಲ್ಲ. ಮಾತಿಗೆ – ಮಾತು, ಏಟಿಗೆ – ಎದುರೇಟು ನೀಡುವುದರಲ್ಲಿ ಖೂಬಾ ಎತ್ತಿದ ಕೈ. ಆದಾಗ್ಯೂ ʼಸ್ವನಾಮʼಗಿಂತಲೂ ಮೋದಿನಾಮವೇ ಮೆಚ್ಚಿಕೊಂಡು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.
ಒಂದೆಡೆ ಈ ಸಲವೂ ಗೆದ್ದೇ ಗೆಲ್ಲುವೆ ಎಂಬ ಆತ್ಮವಿಶ್ವಾಸ, ಇನ್ನೊಂದೆಡೆ ಒಳೇಟಿನ ಭೀತಿ ಅವರಿಗೆ ಕಾಡುತ್ತಿದೆ. ಸ್ವಪಕ್ಷದ ಕೆಲ ಮುಖಂಡರಿಗೆ ಮತ್ತು ಕಾರ್ಯಕರ್ತರಿಗೆ ಖೂಬಾ ಅವರ ಮೇಲೆ ಭಾರಿ ಅಸಮಾಧಾನವಿದೆ. ಅದರಲ್ಲೂ ತನ್ನದೆ ಆದ ವರ್ಚಸ್ಸು ಮತ್ತು ವೋಟ್ ಬ್ಯಾಂಕ್ ಹೊಂದಿರುವ ಔರಾದ ಶಾಸಕ ಪ್ರಭು ಚೌಹಾಣ್ ಯಾರೇನೇ ಹೇಳಿದರೂ ಖೂಬಾ ಜತೆಗೆ ಕೈಜೋಡಿಸಲು ಸುತಾರಾಂ ಒಪ್ಪುತ್ತಿಲ್ಲ. ಆರೋಗ್ಯದ ನೇಪ ಮಾಡಿಕೊಂಡು ಪ್ರಚಾರದಿಂದ ದೂರವೆ ಉಳದಿದ್ದಾರೆ. ಉಳಿದವರ ಅಸಮಾಧಾನ ಹೇಗೋ ಸರಿದೂಗಿಸಿಕೊಂಡು ಹೋಗಬಹುದು. ಆದರೆ ಚೌಹಾಣ್ ಅವರ ಅಸಮಾಧಾನ ಮತ್ತು ಕಡು ಕೋಪ ಖೂಬಾ ಅವರಿಗೆ ದುಬಾರಿಯಾಗುವ ಸಾಧ್ಯತೆಯಿದೆ. ಏಕೆಂದರೆ ಚೌಹಾಣ್‌ಗೆ ತಾಲೂಕಿನ ಪ್ರತಿ ಗ್ರಾಮದಲ್ಲಿ ತಮ್ಮದೆ ಆದ ಒಂದು ಕಟ್ಟಾ ಕಾರ್ಯಕರ್ತ ಪಡೆಯಿದೆ. ಜತೆಗೆ ಎಲ್ಲಕ್ಕಿಂತ ಮಿಗಿಲಾಗಿ ಅವರಿಗೂ ಒಂದು ಜಾತಿ ಇದೆ. ಕ್ಷೇತ್ರದಲ್ಲಿ ಲಂಬಾಣಿ ಸಮುದಾಯದ ಲಕ್ಷಾಂತರ ಮತಗಳಿವೆ. ಇದು ಖೂಬಾಗೆ ಆತಂಕಕ್ಕೆ ದೂಡಿದೆ.
ಮತ್ತೊಂದೆಡೆ ಬಿಜೆಪಿಯ ಸಾಂಪ್ರದಾಯಿಕ ಮತದಾರರಾದ ಮರಾಠ ಸಮುದಾಯವರು ನಮ್ಮ ಸಮುದಾಯಕ್ಕೆ ಎರಡೂ ರಾಷ್ಟ್ರೀಯ ಪಕ್ಷಗಳು ಕ್ಷೇತ್ರದಲ್ಲಿ ಟಿಕೆಟ್ ನೀಡದೆ ಕಡೆಗಣಿಸುತ್ತಿವೆ ಎಂದು ಆರೋಪಿಸಿ ಸಮುದಾಯದ ಡಾ. ಧಿನಕರ ಮೋರೆ ಅವರನ್ನು ಪಕ್ಷೇತರರಾಗಿ ನಿಲ್ಲಿಸಲು ಮುಂಖಡರು ಒಮ್ಮತದಿಂದ ನಿರ್ಣಯ ತೆಗೆದುಕೊಂಡಿದ್ದಾರೆ. ಚೌಹಾಣ್ ಅಸಮಾಧಾನವನ್ನು ಕಾಂಗ್ರೆಸ್ ಪಕ್ಷ ಎಷ್ಟು ಮತವಾಗಿ ಪರಿವರ್ತಿಸಿಕೊಳ್ಳುತ್ತದೆ ಮತ್ತು ಮರಾಠ ಅಭ್ಯರ್ಥಿ ಎಷ್ಟು ಮತ ಪಡೆಯತ್ತಾರೆ ಎಂಬುವುದರ ಮೇಲೆ ಖೂಬಾ ಮತ್ತು ಸಾಗರ ಖಂಡ್ರೆ ಸೋಲು – ಗೆಲವು ನಿರ್ಧರಿಸಲಿದೆ.
ಈಕಡೆ ಸಚಿವ ಈಶ್ಚರ ಖಂಡ್ರೆ ತನ್ನ ಮಗನನ್ನು ಗೆಲ್ಲಿಸಿಕೊಂಡು ಬರಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ತನ್ನ ಮಗನಲ್ಲದೆ ಬೇರಾರು ನಿಂತಿದ್ದರೂ ಪ್ರಾಯಶಃ ಇವರು ಇಷ್ಡು ಬೇವರು ಸುರಿಸುತ್ತಿರಲಿಲ್ಲವೇನೋ? ಚುನಾವಣೆ ತಂತ್ರ ಮತ್ತು ಬಿರುಸಿನ ಪ್ರಚಾರ ತನ್ನ ಎದುರಾಳಿ ಅಭ್ಯರ್ಥಿಗಿಂತಲೂ ಜೋರಾಗಿಯೇ ನಡೆಸುತ್ತಿದ್ದಾರೆ. ಇವರ ನಡವಳಿಕೆ, ಮಾತು ಹಾಗೂ ಟಿಕೆಟ್ ವಿಚಾರದಲ್ಲಿ ಮೇಲುಗೈ ಸಾಧಿಸಿದ್ದು ಪಕ್ಷದ ಕೆಲ ಮುಖಂಡರಿಗೆ ಅಸಮಾಧಾನ ಉಂಟು ಮಾಡಿದಂತಿದೆ. ಅದರಲ್ಲೂ ಆಳಂದ ಶಾಸಕ ಬಿ ಆರ್ ಪಾಟೀಲ್ ಅವರು ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರ ಹಾಕಿದರು.
ತನ್ನ ಮಗನಿಗೆ ಟಿಕೆಟ್ ಕೊಡಿಸಲು ಶ್ರಮಿಸುತ್ತಿರುವುದು ಕಂಡಾಗಿನಿಂದಲೂ ಹುಮಾನಬಾದ್ ಮಾಜಿ ಶಾಸಕ ರಾಜಶೇಖರ್ ಪಾಟೀಲರೂ ಒಳಗೊಳಗೆ ತೀವ್ರ ಅಸಮಾಧಾನ ಹೊಂದಿದ್ದರೆಂದು ಅವರ ಮಾತುಗಳೆ ಹೇಳುತ್ತಿದ್ದವು. ಈ ಬೆಳವಣಿಗೆಗಳು ರಾಜಕೀಯ ಪಡಶಾಲೆಯಲ್ಲಿ ಬಗೆಬಗೆಯ ತೀವ್ರ ಚರ್ಚೆ ಹುಟ್ಟು ಹಾಕಿದವು. ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯೆ ಪ್ರವೇಶಿಸಿದ ಮೇಲೆಯೇ ಅವರಿಬ್ಬರು ಪ್ರಚಾರಕ್ಕೆ ಧುಮುಕಿದ್ದು. ಇಲ್ಲದಿದ್ದರೆ ಅವರ ಅಸಮಾಧಾನ ಕಾಂಗ್ರೆಸ್ ಅಭ್ಯರ್ಥಿಗೆ ಭಾರಿ ದುಬಾರಿ ಆಗುವ ಸಾಧ್ಯತೆ ಇತ್ತು. ಈಗಲೂ ಸಹ ಒಳೇಟಿನ ಭೀತಿ ಖಂಡ್ರೆಯವರಿಗಿದೆ.
ತನ್ನ ತಂದೆಯ ಒತ್ತಾಸೆಯ ಮೇರೆಗೆ ಚುನಾವಣಾ ಆಖಾಡಕ್ಕಿಳಿದಿರುವ ಸಾಗರ ಖಂಡ್ರೆ ಆರಂಭದ ದಿನದಲ್ಲಿ ಎಲ್ಲದ್ದಕ್ಕೂ ತಮ್ಮ ತಂದೆಯ ಕಡೆ ಮುಖ ನೋಡುತ್ತಿದ್ದರು. ಆದರೀಗ ಬರುಬರುತ್ತಾ ಜೋರಾಗಿಯೇ ಮಾತನಾಡುತ್ತಿದ್ದಾರೆ. ಖೂಬಾ ತನ್ನ ಎದುರಾಳಿ ಅಭ್ಯರ್ಥಿ ಇನ್ನೂ ಎಳಸು ಎಂದು ವ್ಯಂಗ್ಯ ಮಾಡಿದಾಗ, ಸಾಗರ ಖಂಡ್ರೆ ಅದನ್ನು ಸವಾಲಾಗಿ ಸ್ವೀರಿಸಿ ಬಹಿರಂಗ ಚರ್ಚೆಗೆ ಆಹ್ವಾನಿಸಿದ ಮೇಲೆ ʼಸಾಗರʼ ಇಮೇಜ್ ಸ್ವಲ್ಪ ಬದಲಾಗಿದೆ.
ನಾಗಮಾರಪಳ್ಳಿ ಕುಟುಂಬ ಬಿಜೆಪಿ ಬೆಂಬಲಿದ್ದು ಹಾಗೂ ಜಿಲ್ಲೆಯ ಜೆಡಿಎಸ್ ಮುಖಂಡರು ಖೂಬಾ ಜತೆಗೆ ನೇರವಾಗಿ ನಿಂತಿರುವುದು, ಅಹಿಂದ ಮತಗಳನ್ನೇ ನೆಚ್ಚಿಕೊಂಡಿರುವ ಖಂಡ್ರೆಗೆ ಮತ ವಿಭಜನೆಯ ಚಿಂತೆ ಶುರುವಾಗಿ ಎದೆಯುಸಿರು ಬಿಡುವಂತಾಗಿದೆ. ಪ್ರಶಕ್ತ ನೇರಾನೇರ ಹಣಾವಣಿ ನಡೆಯುತ್ತಿದೆ. ಚುನಾವಣೆ ತಂತ್ರಗಾರಿಗೆಯಲ್ಲಿ ಯಾರು ಮೇಲುಗೈ ಸಾಧಿಸುತ್ತಾರೋ ಮತ್ತು ಒಳೇಟು ಯಾರು ತಪ್ಪಿಸಿಕೊಳ್ಳುತ್ತಾರೋ ಅವರೇ ಇಲ್ಲಿ ವಿಜಯಿಸಾಲಿ.