ದ ಪಾಲಿಟಿಕ್

ಬೀದರ ಲೋಕಸಭಾ ಕ್ಷೇತ್ರ :  ಕೂತುಹಲ ಮೂಡಿಸಿದ ಟಿಕೆಟ್‌ ಲಾಬಿ

ಸಿದ್ದಪ್ಪ ಮೂಲಗೆ

ಸಿದ್ದಪ್ಪ ಮೂಲಗೆ

ಬರುವ ಮಾರ್ಚ್‌ ಎರಡನೇ ವಾರದಲ್ಲಿ ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗುವ ಸಾಧ್ಯತೆಯಿದೆ. ರಾಜ್ಯದ ಆಡಳಿತರೂಢ ಸರ್ಕಾರದ ಕಾಂಗ್ರೆಸ್‌ ಪಕ್ಷದಲ್ಲಿ ಮತ್ತು ಬಿಜೆಪಿಯಲ್ಲಿ ಟಿಕೆಟ್‌ಗಾಗಿ ಲಾಬಿ ಜೋರಾಗಿಯೆ ನಡೆಯುತ್ತಿದೆ. ತಮ್ಮ ತಮ್ಮ  ಶಕ್ತಿಗನುಸಾರವಾಗಿ ಮಠಾಧೀಶರ ಮೂಲಕ, ರಾಜಕೀಯ ಗಾಡ್‌ ಫಾದರ್‌ಗಳ ಮೂಲಕ ತಂತಮ್ಮ ಪಕ್ಷದ ರಾಜ್ಯ ನಾಯಕರ ಮೇಲೆ, ಹೈಕಮಾಂಡ್‌ ಮೇಲೆ ಒತ್ತಡ ಹಾಕುತ್ತಿದ್ದಾರೆ. ಚುನಾವಣೆ ಅಂದಮೇಲೆ ಟಿಕೆಟ್‌ಗಾಗಿ ನಾನಾ ಬಗೆಯ ಕಸರತ್ತು ನಡೆಸುವುದು ಸಹಜ. ಆದರೆ ಈ ಸಲ ಜಿಲ್ಲೆಯಲ್ಲಿ ಕಾಂಗ್ರೆಸ್‌ಗಿಂತಲೂ ಬಿಜೆಪಿಯಲ್ಲಿ ಟಿಕೆಟ್‌ಗಾಗಿ ಅಕ್ಷರಶಃ ಅಂತರ್ಯುದ್ಧವೆ  ನಡೆಯುತ್ತಿದೆ.

ಹಾಲಿ ರಾಜ್ಯ ಸಚಿವ ಈಶ್ವರ್‌ ಖಂಡ್ರೆ ತಮ್ಮ ಮಗ ಸಾಗರ ಖಂಡ್ರೆಯವರಿಗೆ ಚುನಾವಣಾ ಅಖಾಡಕ್ಕೆ ಇಳಿಸಲು ಇನ್ನಿಲ್ಲದಂತೆ ಪ್ರಯತ್ನಿಸುತ್ತಿದ್ದಾರೆ. ಜಿಲ್ಲೆಯ ಪ್ರತಿ ಗ್ರಾಮ, ಪಟ್ಟಣ, ನಗರಗಳಲ್ಲಿ ತಮ್ಮ ಪುತ್ರನ ದೊಡ್ಡ ದೊಡ್ಡ ಫ್ಲೆಕ್ಸ್‌ಗಳನ್ನು, ಬ್ಯಾನರ್‌ಗಳನ್ನು ಹಾಕಿಸಿದ್ದಾರೆ. ಇದು ಕಾಂಗ್ರೆಸ್‌ ಪಕ್ಷದ ಟಿಕೆಟ್‌ ಅಕಾಂಕ್ಷಿಗಳಾದ ಅಶೋಕ್‌ ಖೇಣಿ, ಆನಂದ ದೇವಪ್ಪ, ಬಸವರಾಜ ಬುಳ್ಳಾ, ಅಬ್ದುಲ್‌ ಮನ್ನಾರ್‌ ಸೇಠ್‌ ಮತ್ತಿತರರಿಗೆ ದಿಗಿಲುಂಟು ಮಾಡಿದೆ. ಈ ಮಧ್ಯೆ ಹುಮನಾಬಾದ್‌ ಮಾಜಿ ಶಾಸಕ ರಾಜಶೇಖರ್‌ ಪಾಟೀಲ್‌ ಅವರ ಮೌನ ಕುತೂಹಲ ಮೂಡಿಸಿದೆ.  ಹಾಲಿ ರಾಜ್ಯ ಸಚಿವ ಈಶ್ವರ್‌ ಖಂಡ್ರೆ ಇಲ್ಲವೆ ರಾಜಶೇಖರ್‌ ಪಾಟೀಲ್‌ ಅವರಿಗೆ ಟಿಕೆಟ್‌ ನಿಡಲು ಪಕ್ಷದ ಹೈಕಮಾಂಡ್‌ ಚಿಂತನ ನಡೆಸುತ್ತಿದೆ. ಆದರೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಪಾಟೀಲ್‌ರು ಹಿಂದೆಟು ಹಾಕುತ್ತಿದ್ದಾರೆಂದು ಪಕ್ಷದ ಮೂಲಗಳು ಹೇಳುತ್ತಿವೆ.  ಪಾಟೀಲ್‌ರು ಹಿಂಜರೆದರೆ ಅನಿವಾರ್ಯವಾಗಿ ಈಶ್ವರ್‌ ಖಂಡ್ರೆಯವರ ಮನೆ ಬಾಗಿಲಿಗೆ ಪಕ್ಷದ ಬಿ – ಫಾರಂ ಒಲಿದು ಬರುವ ಸಾಧ್ಯತೆಯಿದೆ.

ಮೋದಿ ನಾಮಬಲದ ಮೇಲೆ ಎರಡು ಸಲ ಅನಾಯಾಸವಾಗಿ ಗೆದ್ದು, ಲಕ್ಕಿಯಿಂದ ಕೇಂದ್ರ ಮಂತ್ರಿಯೂ ಆಗಿರುವ ಭಗವಂತ್‌ ಖೂಬಾ ಅವರು ಈ ಸಲವೂ ಚುನಾವಣೆಯಲ್ಲಿ ಸ್ಪರ್ಧಿಸಿ ಮೂರನೆಯ ಸಲ ಲೋಕಸಭೆಗೆ ಹೊಗಲು ಆಗಲೆ ಪ್ರಚಾರಕ್ಕೆ ಇಳಿದಿದ್ದಾರೆ. ಆದರೆ ಅವರ ಈ ಕನಸಿಗೆ ಸ್ವಪಕ್ಷದ ಜಿಲ್ಲೆಯ ಹಾಲಿ – ಮಾಜಿ ಶಾಸಕರು, ಅವರ ಕಾರ್ಯಕರ್ತರು ತಡೆಗೊಡೆ ನಿರ್ಮಿಸುತ್ತಿದ್ದಾರೆ. ಬಹಿರಂಗವಾಗಿಯೇ ಖೂಬಾಗೆ ಬಿಟ್ಟು ಬೇರೆಯವರಿಗೆ ಟಿಕೆಟ್‌ ನೀಡಬೇಕೆಂದು ಪಟ್ಟು ಹಿಡದಿದ್ದಾರೆ. ಇದು ಖೂಬಾ ಅವರಿಗೆ ತಲೆ ನೋವಾಗಿ ಪರಿಣಮಿಸಿದೆ. ಶತಾಯ ಗತಾಯವಾಗಿ ಟಿಕೆಟ್‌ ಪಡದೆ ತಿರಲು ತೀವ್ರ ಲಾಬಿ ನಡೆಸುತ್ತಿದ್ದಾರೆಂದು ಬಿಜೆಪಿ ಮೂಲಗಳು ತಿಳಿಸಿವೆ. ಈಗಾಗಲೇ ಮತ್ತೇ ರಾಮದೇವ್‌ ಬಾಬಾ ಅವರ ಮೊರೆ ಹೋಗಿದ್ದಾರೆ. ಅವರ ಮೂಲಕ ಪಕ್ಷದ ಹೈ ಕಮಾಂಡ್‌ ಮೇಲೆ ಒತ್ತಡ ಹಾಕಿಸುತ್ತಿದ್ದಾರೆಂದು  ರಾಜಕೀಯ ಪಡಸಾಲೆಯಲ್ಲಿ ಮಾತು ಕೇಳಿ ಬರುತ್ತಿದೆ. ಈ ಮಧ್ಯೆ  ಬಸವಕಲ್ಯಾಣ ಶಾಸಕ ಶರಣು ಸಲಗರ ಹೆಸರು ಮುನ್ನೆಲೆಗೆ ಬಂದದ್ದು ಕೇಂದ್ರ ಸಚಿವರ ತಳಮಳ ಇನ್ನೂ  ಹೆಚ್ಚಿಸಿದೆ. ಮೇಲಾಗಿ ಖೂಬಾ ಅವರ ಬಗ್ಗೆ ಯಡಿಯೂರಪ್ಪನವರಿಗೆ ಒಲವು ಇಲ್ಲವೆಂದು ಬಿಜೆಪಿ ಕಾರ್ಯಕರ್ತರು ಅಲ್ಲಲ್ಲಿ ಮಾತನಾಡುತ್ತಿದ್ದಾರೆ.

ಚನ್ನಬಸವ ಬಳತೆ ಬಿಜೆಪಿ ಟಿಕೆಟ್‌ಗಾಗಿ ತೀವ್ರ ಕಸರತ್ತು ನಡೆಸುತ್ತಿದ್ದಾರೆ. ಸಂಘಪರಿವಾರದವರ ಜೊತೆಗೆ, ಪಕ್ಷದ ಉನ್ನತ ನಾಯಕರ ಜೊತೆಗೆ ಬಳತೆ ಅವರಿಗೆ ಒಳ್ಳೆಯ ಒಡನಾಟವೂ ಬೆಳದಿದೆ. ಜಿಲ್ಲೆಯ ಗ್ರಾಮ, ಪಟ್ಟಣ, ನಗರ ಒಂದೂ ಬಿಡದಂತೆ ಎಲ್ಲೆಡೆ ಫ್ಲೆಕ್ಸ್‌, ಬ್ಯಾನರ್‌ ಹಾಕಿಸುತ್ತಿದ್ದಾರೆ. ಅವರ ಈ ಬಿರುಸಿನ ಪ್ರಚಾರ, ಆತ್ಮವಿಶ್ವಾಸದ ನಡೆ ಕಂಡು ಕೇಂದ್ರ ಸಚಿವರು ಕೊಂಚ ಆತಂಕಕ್ಕೆ ಒಳಗಾದಂತೆ ಕಾಣುತ್ತಿದೆ. ಗುತ್ತಿಗೆದಾರ ಗುರುನಾಥ್‌ ಕೊಳ್ಳುರ್‌ ಅಟಲ್‌ ಬಿಹಾರಿ ವಾಜಪೇಯ್‌ ಹೆಸರಿನಲ್ಲಿ ಫೌಂಡೆಶನ್‌ ತೆಗೆದು ಟಿಕೆಟ್‌ಗಾಗಿ ಏನೇನೋ ಕಸರತ್ತು ನಡೆಸುತ್ತಿದ್ದಾರೆ. ಇವೆಲ್ಲ ಎದುರಿಸಿ, ದಾಟಿ ಸಂಸದರು ಟಿಕೆಟ್‌ ಪಡೆಯಲು ಯಶಸ್ವಿಯಾದರೂ ಔರಾದ – ಬಸವಕಲ್ಯಾಣ ಶಾಸಕರು ತೆರೆಮರೆಯಲ್ಲಿ ನಿಂತು ಅವರನ್ನು ಸೋಲಿಸಲು ಶತಪ್ರಯತ್ನ ನಡೆಸುವ ಸಾಧ್ಯತೆಯಿದೆ.

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!