ದ ಪಾಲಿಟಿಕ್

ಭಾಲ್ಕಿ ಶ್ರೀಗಳ ಕಣ್ಣೀರು ಪ್ರತಿಷ್ಠಾನದವರ ಎದೆಗೆ ತಾಗುವುದೇ…

ಸಿದ್ದಪ್ಪ ಮೂಲಗೆ

ಸಿದ್ದಪ್ಪ ಮೂಲಗೆ

ʼಅಕ್ಕ ಅನ್ನಪೂರ್ಣ ತಾಯಿʼ ಕಳೆದ ಮೂರು ವರ್ಷಗಳಿಂದ ಸಾವನ್ನು ಹೊಸ್ತಿಲಲ್ಲಿ ನಿಲ್ಲಿಸಿ, ಅದರೊಂದಿಗೆ ಗುದ್ದಾಡಿ ಕೊನೆಗೆ ದಾರಿ ಕಾಣದೆ ಕೈಚೆಲ್ಲಿದ್ದಾರೆ. ಇದಕ್ಕಾಗಿಯೇ ಕಾದು ಕೂತವರಂತೆ ಸಾವು ತಡಮಾಡದೆ ಮೇಲುಗೈ ಸಾಧಿಸಿದೆ. ʼಅಕ್ಕʼ ಸಾವಿನೆದುರು ಸೋತರು. ಅವರು ಹೋರಾಡುತ್ತಿದ್ದಾಗ ಅವರೇ ಕಟ್ಟಿದ ʼಬಸವ ಸೇವಾ ಪ್ರತಿಷ್ಠಾನʼದ ಎಲ್ಲಾ ಸೈನಿಕರು ಅವರೊಂದಿಗೆ ಮೈದಾನದಲ್ಲಿ ನಿಂತಿದ್ದರೇ ಪ್ರಾಯಶಃ ಅಕ್ಕ ಇಷ್ಟು ಬೇಗ ಶಸ್ತ್ರತ್ಯಾಗ ಮಾಡುತ್ತಿರಲಿಲ್ಲವೇನೋ? ಅಕಾಲಕ್ಕೆ ಸಾವು ಅವರ ಸನಿಹಕ್ಕೆ ಬರಲು ಹೆದರುತ್ತಿತ್ತೇನೋ?

ಎಲ್ಲರೂ ಪ್ರೀತಿಯಿಂದ ಒಂದು ಕುಟುಂಬವಾಗಿ ಇದ್ದಿದ್ದರೇ ಪ್ರಾಯಶಃ ಅವರು ಕ್ಯಾನ್ಸರ್‌ ರೋಗ ಬಚ್ಚಿಡತ್ತಿರಲಿಲ್ಲವೇನೋ, ಆರಂಭದಲ್ಲಿ ತಮ್ಮ ರೋಗ ಬಚ್ಚಿಟ್ಟಿದ್ದೇ ಅವರಿಗೆ ಮುಳುವಾಯಿತು ಅನಿಸುತ್ತಿದೆ.  ಈಗಲೂ ಇವೆಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಲಾರವು. ಈಗ ಹುಡುಕಿದರೂ ಸಿಗುವ ಉತ್ತರಗಳಿಂದ ಪ್ರಯೋಜನವೂ ಇಲ್ಲ. ಒಂದಂತೂ ಸತ್ಯ ಅವರು ತಮ್ಮ ಕೊನೆಯ ದಿನಗಳಲ್ಲಿ ನೆಮ್ಮದಿಯಾಗಿ ಬದುಕಲಿಲ್ಲ, ನೆಮ್ಮದಿಯಾಗಿ ತಮ್ಮ ಕೊನೆಯ ಉಸಿರು ಬಿಡಲಿಲ್ಲ.

ಐಡೆಂಟಿಟಿ ಮತ್ತು ಆಸ್ತಿಗಾಗಿ ಆರಂಭವಾದ ಜಗಳ ಯಾರೆಷ್ಟೇ ಪ್ರಯತ್ನಿಸಿದರು ಅದು ನಿಲ್ಲಲೇ ಇಲ್ಲ. ಬಸವ ಕುಮಾರ್ ಪಾಟೀಲ್‌, ಸಾಣೆಹಳ್ಳಿ ಶ್ರೀಗಳು, ನಿಜಗುಣಾನಂದ ಸ್ವಾಮಿಜಿ ಮತ್ತು ಭಾಲ್ಕಿ ಶ್ರೀಗಳು ಜಗಳ ನಿಲ್ಲಿಸಲು ಪ್ರಾಮಾಣಿಕವಾಗಿ ಯತ್ನಿಸಿದರು. ಅವರ ಪ್ರಯತ್ನದ ಮೀತಿಯೋ ಅಥವಾ ಕಾಣದ ಕೈಗಳ ಮೇಲಾಟವೋ, ಈ ಜಗಳವಂತೂ ಕೇಕೆ ಹಾಕುತ್ತಾ ಮುಂದುವರೆದಿದೆ. ಒಂದತ್ತೂ ನಿಜ ಈ ಜಗಳದಲ್ಲಿ ಅಕ್ಕಂದಿರಿಬ್ಬರೂ ಪಡೆದುಕೊಂಡಿದ್ದಕ್ಕಿಂತ ಕಳೆದುಕೊಂಡದ್ದೆ ಹೆಚ್ಚು. ಅದು ಅವರಿಬ್ಬರಿಗೂ ಅರ್ಥವಾಗಲೇ ಇಲ್ಲ. ಅರ್ಥ ಮಾಡಿಸುವವರಾರು ಅವರ ಸುತ್ತೂಲು ಇರಲಿಲ್ಲ. ಇದ್ದಿದ್ದರೆ ಈ ಮಟ್ಟಕ್ಕೆ ಅದು ಬರುತ್ತಿರಲಿಲ್ಲ. ಜಗಳದಲ್ಲಿ ಇಬ್ಬರ ಕಣ್ಣೀರು ಬತ್ತಿವೆ. ಅಕ್ಕ ಗಂಗಾಂಬೀಕೆ ಅವರ ಕಣ್ಣೀರು ಹೋರಗಡೆ ಯಾರಿಗೂ ಕಾಣಿಸಲಿಲ್ಲ ಅಷ್ಟೇ. ಈ ಜಗಳದ ʼಸೃಷ್ಠಿ, ಸ್ಥಿತಿ ಮತ್ತು ಲಯʼಕ್ಕೆ ಕಾರಣರಾರು ಎಂಬುವುದು ಈಗ ಯಕ್ಷ ಪ್ರಶ್ನೆಯಾಗಿ ಉಳಿದಿಲ್ಲ.

ಅದೇನೇ ಕಾರಣ ಇದ್ದರೂ, ಅದೆಷ್ಟೇ ಅಸಮಾಧಾನ ಇದ್ದರೂ ಕ್ಯಾನ್ಸರ್‌ ರೋಗದೊಂದಿಗೆ ʼಅಕ್ಕʼ ಹೋರಾಡುತ್ತಿದ್ದಾಗ ಅವರ ಜತೆ ಪ್ರತಿಷ್ಠಾನದ ಬಳಗ ಇಡೀಯಾಗಿ ನಿಲ್ಲಬೇಕಾಗಿತ್ತು. ಅದು ಅವರ ಕರ್ತವ್ಯವಾಗಿತ್ತು, ಅದು ಬಸವನ ಕರೆಯೂ ಆಗಿತ್ತು. ʼತನ್ನವರಷ್ಷೇ ಅಲ್ಲ, ಯಾರೇ ಕಷ್ಟದಲ್ಲಿದ್ದರು ಅವರ ಜತೆಗೆ ನಿಲ್ಲಬೇಕೆಂದು ʼಬಸವ ತತ್ವದ ಮೋದಲನೇ ಪಾಠ ಹೇಳುತ್ತದೆʼ. ಅದೂ ತಮಗೆ ಬಸವ ತತ್ವವನ್ನು ಹೇಳಿಕೊಟ್ಟ ತಮ್ಮ ʼಗುರುʼ ಕ್ಯಾನ್ಸರ್‌ ರೋಗದೊಂದಿಗೆ ಹೋರಾಡುತ್ತಿದ್ದಾಗ ಈ ʼಭಕ್ತಗಣʼ ಅವರೊಂದಿಗೆ ನಿಲ್ಲದೇ ದೂರವೇ ಉಳಿಯಿತು. ಆಸ್ಪತ್ರೆಯಲ್ಲಿ ಅವರ ಜತೆ ಇರಬೇಕಾದ ʼಮುಖ್ಯರುʼ ಬದಲಾದ ಪರಿಸ್ಥಿತಿಯಿಂದಾಗಿ ನ್ಯಾಯಕ್ಕಾಗಿ ನ್ಯಾಯಾಲಯಕ್ಕೆ ಹೋದರು. ಆಗ ಅವರೆದುರು ಬೇರೆ ಮಾರ್ಗ ಕಾಣಿಸದೆ ಅನಿವಾರ್ಯವಾಗಿ ನ್ಯಾಯಲಯದ ಕದ ತಟ್ಟಿರಬಹುದು. ಆದರೆ ನಂತರದ ದಿನಗಳಲ್ಲಿ ಹತ್ತಾರು ಬಾಗಿಲುಗಳು ಅವರಿಗಾಗಿ ತೆರೆದಿದ್ದರೂ ಅವರು [ಇಬ್ಬರೂ ಅಕ್ಕಂದಿರು] ಅಲ್ಲೇ ಉಳಿದರು. ಇದಕ್ಕೆ ಈಗ ಯಾರೇನೇ ಸಮಜಾಯಿಷಿ, ಸಬೂಬು ಹೇಳಿದರೂ ಅದು ತಿಪ್ಪೆ ಸಾರಿಸುವ ಉತ್ತರ ವಾಗುತ್ತದೆ ವಿನಾ ಸೂಕ್ತ ಉತ್ತರವಾಗದು.

ಬೀದರ್‌ನ ತಥಾಕಥಿತ ಲಿಂಗಾಯತ ಮುಖಂಡರು ತಮ್ಮ ಕಣ್ಣೇದುರಿನಲ್ಲೆ ಬಸವ ತತ್ವದ ಒಂದು ಸಂಸ್ಥೆ ಹಾಳಾಗುತ್ತಿದ್ದರು, ಅದಕ್ಕೂ ನಮಗೂ ಸಂಬಂಧವೇ ಇಲ್ಲದಂತೆ ಉಳಿದರು.  ಈ ಮೂಲಕ ದೊಡ್ಡವರೆನಿಸಿಕೊಂಡವರು ತಮ್ಮ ಸಣ್ಣತನ ಮತ್ತು ತಮ್ಮ ಅಸಾಮರ್ಥ್ಯ ತಾವೇ ಬಯಲು ಮಾಡಿಕೊಂಡರು.  ಈ ಜಗಳ ಎಲ್ಲಿಂದ ಮತ್ತು ಯಾಕೆ ಆರಂಭವಾಯಿತು, ಇದು ಯಾಕೆ ನಿಲ್ಲುತ್ತಿಲ್ಲ, ಇದಕ್ಕೆ ಕಾರಣಕರ್ತರು ಯಾರು, ಇದರಲ್ಲಿ ಯಾರ ಪಾಲು ಎಷ್ಟಿದೆ ಎಂಬುವುದು ಈಗದು ಬಚ್ಚಿಟ್ಟ ರಹಸ್ಯವಾಗಿ ‍ಏನು ಉಳಿದಿಲ್ಲ. ಎಲ್ಲರಿಗೂ ಎಲ್ಲವೂ ಗೊತ್ತಿದೆ. ಆದರೆ ಯಾರೂ ಬಾಯ್ಬಿಟ್ಟು ಮಾತನಾಡುತ್ತಿಲ್ಲ ಅಷ್ಟೇ.

ಬಸವ ಅನುಯಾಯಿ ಎನಿಸಿಕೊಂಡವರು ತಮ್ಮ ಪ್ರಾಣ ಹೋದರು ಹಿಂದೊಂದು, ಮುಂದೊಂದು ಮಾತನಾಡದೆ, ನೇರವಾಗಿ ಇದ್ದದ್ದು ಇದ್ದಂತೆ ಮಾತನಾಡಬೇಕು. ಲಾಭ – ನಷ್ಟದ ಲೆಕ್ಕಹಾಕಿ  ಮಾತನಾಡುವುದು ವ್ಯಾಪಾರಿಗಳೇ ವಿನಾ ಬಸವ ಅನುಯಾಯಿಗಳಲ್ಲ. ಈಗ ಅದೆಲ್ಲವೂ ಮುಗಿದು ಹೋದ ಕಥೆ. ಈಗ ಯಾರೇನೇ ಮಾತಾಡಿದರೂ ಅವರ ಮಾತಿಗೂ, ಮಾತನಾಡುವವರಿಗೂ ಒಂದಿನಿತೂ ಬೆಲೆ ಇರುವುದಿಲ್ಲ.

ಅಕ್ಕ ಇಂದು ನಮ್ಮೊಂದಿಗೆ ಇಲ್ಲ. ಅವರ ಬದ್ಧತೆ, ಬಸವ ನಿಷ್ಠೆ, ಛಲ ಮತ್ತು ತನ್ನನ್ನು ನಂಬಿದವರಿಗೆ ಕೈ ಹಿಡಿಯುವ ಅವರ ಗುಣ ಹಾಗೆ ಚೆಲ್ಲಿ ಹೊಗಿದ್ದಾರೆ. ಅದನ್ನು ಎತ್ತಿಕೊಳ್ಳವುದು ಅವರ ಆಪ್ತ ಭಕ್ತರೆನಿಸಿಕೊಂಡವರ ಕರ್ತ್ಯವವಾಗಿದೆ. ಅವರು ಅವಸರವಸರವಾಗಿ ಕಾವಿ ಹಾಕಿದ್ದು, ಪ್ರಭುದೇವರಿಗೆ ಕಾವಿ ತೊಡಸಿ, ಉತ್ತರಾಧಿಕಾರಿಯೆಂದು ಘೋಷಿಸಿದ್ದು ಸರಿಯೋ ತಪ್ಪೋ ಎಂಬುವುದು ಕಾಲವೇ ನಿರ್ಧರಿಸುತ್ತದೆ.

ಅವರಿದ್ದಾಗಲೇ ಈ ವಿವಾದ ಮುಗಿಸಬೇಕಾಗಿತ್ತು. ಎಲ್ಲವೂ ಸೂಸುತ್ರವಾಗಿ ಮಾಡಬೇಕಾಗಿತ್ತು. ಈಗ ಎಲ್ಲವೂ ಗೋಜಲು – ಗೋಜಲಾಗಿದೆ. ಅಕ್ಕ ಅನ್ನಪೂರ್ಣ ಅವರು ಸಾರ್ವಜನಿಕ ಸ್ವತ್ತಾಗಿದ್ದರು. ಸಾರ್ವಜನಿಕ ಸಭೆಯೊಂದನ್ನು ಕರೆದು, ಜನರೆದುರು ತಮ್ಮ ವಿಚಾರವನ್ನು ಇಟ್ಟು, ಎಲ್ಲವೂ ಇತ್ಯರ್ಥ ಮಾಡಬೇಕಾಗಿತ್ತು. ಉಯಿಲು ಬರೆಯಲು ಮತ್ತು ಪ್ರಭು ದೇವರಿಗೆ ತನ್ನ ಉತ್ತರಾಧಿಕಾರಿಯಾಗಿ ಮಾಡಲು ಅವರಿಗೆ ಎಲ್ಲಾ ಹಕ್ಕುಗಳು ಇದ್ದವು. ಆದರೆ ಈ ನಿರ್ಧಾರಕ್ಕೆ ಅವರು ಬರಲು ಸೂಕ್ತ ಕಾರಣವನ್ನು ಜನರೆದುರು ಇಡಬೇಕಾಗಿತ್ತು ಮತ್ತು ಸಾರ್ವಜನಿಕರ ಅಭಿಪ್ರಾಯ ಪಡೆದು ಮುಂದುವರೆಯಬೇಕಾಗಿತ್ತು. ಆದರೆ ಅವರು ಅದು ಮಾಡಲಿಲ್ಲ. ಹಾಗೆ ಮಾಡಿದರೆ ಅವರಿಗೂ ಮತ್ತು ಅವರು ತಮ್ಮ ಉತ್ತರಾಧಿಕಾರಿಯೆಂದು ಘೋಷಿಸಿದ ಪ್ರಭುದೇವರಿಗೂ ಪ್ರಶ್ನೆಗಳು ಎದುರಾಗುತ್ತಿರಲಿಲ್ಲ.

ಭಾಲ್ಕಿ ಶ್ರೀಗಳು ಲಿಂಗೈಕ್ಯ ಸಂಸ್ಕಾರದ ಸಂದರ್ಭದಲ್ಲಿ ಕಣ್ಣೀರು ಹಾಕಿದ್ದು ಅಲ್ಲಿದ್ದ ಬಹುತೇಕ ಬಸವ ಭಕ್ತರ ಎದೆಗೆ ತಾಗಿದೆ. ಆಗ ಅಲ್ಲಿದ್ದವರೆಲ್ಲರೂ ಭಾವುಕರಾಗಿ ಶ್ರೀಗಳೊಂದಿಗೆ ಕಣ್ಣೀರು ಹಾಕಿದರು. ಆದರೆ ತಾಗ ಬೇಕಾದವರ ಎದೆಗೆ ತಾಗಿದೇಯೋ ಇಲ್ಲವೋ ಎಂಬುವುದು ಬಸವನೇ ಬಲ್ಲ. ಒಂದುವೇಳೆ ತಾಗಿದರೆ ಖಂಡಿತ ಜಗಳ ಅಲ್ಲಿಂದ ಕಾಲ್ಕಿತ್ತುಕೊಂಡು ಓಡಿ ಹೋಗುತ್ತದೆ. ಈಗ ಅವರು ಒಂದಾಗುತ್ತಾರೋ  ಅಥವಾ ಬೇರೆ – ಬೇರೆಯಾಗಿಯೇ ಮುಂದುವರೆಯುತ್ತಾರೋ ಎಂಬುವುದು ಪ್ರಶ್ನೆಯಾಗಿ ಉಳಿದಿಲ್ಲ. ತಮ್ಮ ಜಗಳವನ್ನು ಕೋರ್ಟ್‌ನಲ್ಲಾಗಲಿ ಅಥವಾ ಹಾದಿಬೀದಿಯಲ್ಲಾಗಲಿ ಮುಂದುವರೆಸದೆ ಅದಕ್ಕೆ ಇತಿಶ್ರೀ ಹಾಡಿ, ಬಸವ ತತ್ವ ಪ್ರಸಾರವನ್ನು ಅವರು ಹೇಗೆ ಮುಂದುವರೆಸಿಕೊಂಡು ಹೋಗುತ್ತಾರೆ ಎಂಬುದಷ್ಠೇ ಇಲ್ಲಿ ಮುಖ್ಯವಾಗಿದೆ. ಆಗ ಜಗಳದ ಮುಂಚೂಣಿಯಲ್ಲಿದ್ದವರು ಬಸವ ಭಕ್ತರ ಭಾವನೆಗಳಿಗಂತೂ ಬೆಲೆ ಕೊಡಲಿಲ್ಲ, ಈಗ ಭಾಲ್ಕಿ ಶ್ರೀಗಳ ಕಣ್ಣೀರಿಗಾದರೂ ಬೆಲೆ ಕೋಡುತ್ತಾರೆಯೇ ಎಂಬುವುದು ಉತ್ತದ ಸೀಗದ ಪ್ರಶ್ನೆಯಾಗಿದೆ.

ಈಗಲಾದರೂ ಅವರವರ ಹಿಂಬಾಲಕರೂ, ಮುಂಬಾಲಕರೂ ಸಮಾಜದ ಹಿತಕ್ಕಾದರೂ  ಈ ಜಗಳದಲ್ಲಿ ಕಡ್ಡಿ ಆಡಿಸದೇ ಮೌನವಾಗಬೇಕು. ಎಲ್ಲರೂ ಹಿಂದೆ ನಡೆದುದೆಲ್ಲವನ್ನೂ  ಮರೆತು, ಭಾಲ್ಕಿ ‍ಸ್ವಾಮಿಜಿಯವರ ನೇತೃತ್ವದಲ್ಲಿ ಬಸವ ಜ್ಯೋತಿಗೆ ತೈಲ ಎರೆಯುವ ಕೆಲಸ ಮಾಡಲು ಮುಂದಡಿ ಇಡಬೇಕು. ಇದು ಭಾಲ್ಕಿ ಸ್ವಾಮಿಜಿಯವರ ಆಶಯ ಮಾತ್ರವಲ್ಲ, ಬಸವನ ಆಶಯವೂ ಇದೇ ಅಗಿದೆ.

ಈ ಜಗಳ ಇಲ್ಲಿಗೆ ನಿಲ್ಲದೆ ಅದು ಹೀಗೆ ಮುಂದುವರೆದರೆ ಇದರಿಂದಾಗಿ ಇಬ್ಬರಿಗೂ [ಪ್ರಭುದೇವರು- ಅಕ್ಕ ಗಂಗಾಂಬಿಕೆ] ಹಾನಿ ಇದೆ. ಈವರೆಗೂ ಅದು ಕೋಳಿ ಜಗಳವಾಗಿತ್ತು. ಈಗದು ಕಾಳ್ಗಿಚ್ಚಿನಂತೆ ಹರಡಿ ಬೇರೆಯದೇ ಸ್ವರೂಪ ಪಡೆಯಬಹುದು. ಈ ವಿವಾದ ಕಾಲ್ಬೆಡಿಯಾಗಿ ಕಾಡುತ್ತದೆ. ಯಾರೆಷ್ಟೇ ಮುಂದೆ ಹೋಗಲು ಯತ್ನಿಸಿದರು ಅವರನ್ನು ಮತ್ತೇ ಹಿಂದಕ್ಕೆ ತಂದು ಅಲ್ಲೇ ನಿಲ್ಲಿಸುತ್ತದೆ. ಇದು ಹೀಗೆ ಮುಂದುವರೆದು ಮುಂದೊಂದು ದಿನ ಯಾರೇ ಗೆದ್ದರೂ ಇಲ್ಲಿ ಸೋಲುವುದು ʼಬಸವ ತತ್ವʼ ಮಾತ್ರ.

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!