ದ ಪಾಲಿಟಿಕ್

ಭಗತ್ ಸಿಂಗ್ : ಕೋಮು ದಂಗೆಗಳು ಮತ್ತು ಪರಿಹಾರ ಮಾರ್ಗಗಳು – ಭಾಗ ೨

ದ ಪಾಲಿಟಿಕ್

ದ ಪಾಲಿಟಿಕ್

ಅಸಹಕಾರ ಚಳವಳಿಯ ಸಂದರ್ಭದಲ್ಲಿ ದುರಾಸೆ, ಅಸೂಯೆಯನ್ನು ಹೊಂದಿದ್ದ ಜನರೂ ಬದಲಾಗಿ ಸರಳ ಸಜ್ಜನರಾಗಿ ರೂಪುಗೊಂಡಿದ್ದರು. ಕೋಮು ಹಿಂಸೆ ಮತ್ತು ದಂಗೆಗಳಿಗೆ ಆರ್ಥಿಕ ಕಾರಣಗಳೇ ಮೂಲ. ಅಸಹಕಾರ ಚಳವಳಿಯ ಸಂದರ್ಭದಲ್ಲಿ ನಾಯಕರು ಮತ್ತು ಪತ್ರಿಕಾ ವರದಿಗಾರರು ಅನೇಕ ರೀತಿಯ ತ್ಯಾಗ ಮಾಡುವ ಮೂಲಕ ಚಳವಳಿಗೆ ಜೀವ ತುಂಬಿದ್ದರು. ಈ ತ್ಯಾಗ ಬಲಿದಾನಗಳ ಫಲವಾಗಿ ಅವರ ಆರ್ಥಿಕ ಸ್ಥಿತಿಗತಿಯೂ ಸಾಕಷ್ಟು ಶಿಥಿಲವಾಯಿತು. ಅಸಹಕಾರ ಚಳವಳಿ ತನ್ನ ಕಾವು ಕಳೆದುಕೊಂಡ ಅನಂತರ ಜನರು ತಮ್ಮ ನಾಯಕರ ಮೇಲೆ ವಿಶ್ವಾಸ ಕಳೆದುಕೊಂಡರು. ಏಕೆಂದರೆ ಇಂದು ಕಾಣುತ್ತಿರುವ ಅನೇಕ ಕೋಮುವಾದಿ ನಾಯಕರು ಆರ್ಥಿಕವಾಗಿ ದಿವಾಳಿಯಾಗಿದ್ದರು. ಜಗತ್ತಿನಲ್ಲಿ ಏನೇ ಸಂಭವಿಸಿದರೂ, ಅದರ ಹಿಂದೆ ಹಣವೇ ಪ್ರಧಾನ ಕಾರಣ ಎನ್ನುವುದನ್ನು ಸುಲಭವಾಗಿ ಗುರುತಿಸಬಹುದು. ಇದು ಮಾರ್ಕ್ಸ್‌ವಾದಿ ತತ್ವಗಳ ಮೂರು ಪ್ರಮುಖ ಅಂಶಗಳಲ್ಲೊಂದು. ತಬ್ಲಿಗಿ ಮತ್ತು ಶುದ್ಧಿ ಸಂಘಟನೆಗಳು ಉಗಮಿಸಿದ್ದನ್ನು ಮಾರ್ಕ್ಸ್‌ನ ಈ ತತ್ವದ ನೆಲೆಯಲ್ಲಿ ನೋಡಬಹುದು. ಈ ಅಂಶವೇ ನಮ್ಮನ್ನು ಇಂತಹ ದುಃಸ್ಥಿತಿಗೆ ನೂಕಿದೆ.


ಆದ್ದರಿಂದ, ಕೋಮು ದಂಗೆಗಳಿಗೆ ಯಾವುದಾದರೂ ಪರಿಹಾರ ಮಾರ್ಗಗಳು ಇದ್ದಲ್ಲಿ, ಅದು ಭಾರತದಲ್ಲಿ ಜನಸಾಮಾನ್ಯರ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುವುದೇ ಆಗಿದೆ. ವಾಸ್ತವವಾಗಿ, ಭಾರತದ ಸಾಮಾನ್ಯ ಪ್ರಜೆಯ ಆರ್ಥಿಕ ಪರಿಸ್ಥಿತಿ ಎಷ್ಟು ಕೆಟ್ಟದಾಗಿದೆಯೆಂದರೆ, ಯಾವುದೇ ವ್ಯಕ್ತಿ ಮತ್ತೊಬ್ಬರಿಗೆ ನಾಲ್ಕಾಣೆ ಕಾಸು ನೀಡುವ ಮೂಲಕ ಮತ್ತೊಬ್ಬನ ಮೇಲೆ ಹಲ್ಲೆ ನಡೆಸಲು ಪ್ರಚೋದಿಸಬಹುದು. ಹಸಿವು ಮತ್ತು ಸಂಕಷ್ಟಗಳೊಡನೆ ಸಂಘರ್ಷ ನಡೆಸುತ್ತಿರುವ ಜನಗಳಿಗೆ, ಮಾಡು ಇಲ್ಲವೇ ಮಡಿ ಆಯ್ಕೆಯನ್ನು ಮುಂದಿಟ್ಟಾಗ, ಸಹಜವಾಗಿಯೇ ಜನರು ತಮ್ಮ ತತ್ವಾದರ್ಶಗಳನ್ನು ಬದಿಗಿಡುತ್ತಾರೆ ಅಲ್ಲವೇ ? ಇಂದಿನ ಪರಿಸ್ಥಿತಿಯಲ್ಲಿ ಜನರ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯಾಗುವುದು ಅಸಾಧ್ಯದ ಮಾತು. ಏಕೆಂದರೆ ನಮ್ಮಲ್ಲಿ ವಿದೇಶದ ಸರ್ಕಾರವಿದೆ. ಈ ಸರ್ಕಾರಕ್ಕೆ ಜನಸಾಮಾನ್ಯರ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸುವುದರಲ್ಲಿ ಯಾವುದೇ ಆಸಕ್ತಿ ಇರುವುದಿಲ್ಲ. ಈ ಕಾರಣಕ್ಕಾಗಿಯೇ ಜನರು ವಿದೇಶಿ ಸರ್ಕಾರದ ವಿರುದ್ಧ, ಆ ಸರ್ಕಾರ ತೊಲಗುವವರೆಗೂ ಹೋರಾಡಲು ಸಜ್ಜಾಗಬೇಕಿದೆ.


ಜನರು ಪರಸ್ಪರ ಕಚ್ಚಾಡುವುದನ್ನು ತಪ್ಪಿಸಲು, ಇಂದು ವರ್ಗ ಪ್ರಜ್ಞೆ ಬೆಳೆಸುವುದು ಅತ್ಯವಶ್ಯವಾಗಿದೆ. ಬಡ ಕಾರ್ಮಿಕರು ಮತ್ತು ರೈತರಿಗೆ ಅವರ ನಿಜವಾದ ಶತ್ರುಗಳು ಬಂಡವಾಳಶಾಹಿಗಳೇ ಎಂದು ಮನವರಿಕೆ ಮಾಡಬೇಕಿದೆ. ಅವರ ತಂತ್ರಗಾರಿಕೆಗಳ ಬಗ್ಗೆ ಎಚ್ಚರಿಕೆಯಿಂದಿದ್ದು, ಅಂಧರಂತೆ ಅವರನ್ನು ಹಿಂಬಾಲಿಸದಂತೆ ಜಾಗೃತಿ ಮೂಡಿಸಬೇಕಿದೆ. ಜನಾಂಗ, ವರ್ಣ, ಮತ, ಧರ್ಮ ಮತ್ತು ದೇಶ ಯಾವುದೇ ಇರಲಿ ಜಗತ್ತಿನ ಬಡಜನತೆಯ ಹಕ್ಕುಗಳು ಒಂದೇ ಆಗಿರುತ್ತವೆ. ಹಾಗಾಗಿ ವರ್ಣ, ಕುಲ, ಜನಾಂಗ, ಮತ, ಧರ್ಮ, ಪ್ರಾಂತೀಯ ತೆಗಳನ್ನಾಧರಿಸಿದ ಎಲ್ಲ ರೀತಿಯ ತಾರತಮ್ಯಗಳನ್ನೂ ಹೋಗಲಾಡಿಸಬೇಕಿದೆ. ತನ್ಮೂಲಕ ಐಕ್ಯತೆಯನ್ನು ಸಾಧಿಸಿ ಬಡ ಜನರು ಸರ್ಕಾರದ ಅಧಿಕಾರವನ್ನು ತಾವೇ ವಹಿಸಿಕೊಳ್ಳಬೇಕಿದೆ. ಈ ಪ್ರಯತ್ನ ಮಾಡುವ ಮೂಲಕ ನೀವು ಏನನ್ನೂ ಕಳೆದುಕೊಳ್ಳುವುದಿಲ್ಲ. ಆದರೆ ಮುಂದೊಂದು ದಿನ ಸಂಕೋಲೆಗಳಿಂದ ಮುಕ್ತರಾಗಿ ಆರ್ಥಿಕ ದಬ್ಬಾಳಿಕೆಯಿಂದ ವಿಮೋಚನೆ ಪಡೆಯುತ್ತೀರಿ.


ರಷ್ಯಾದ ಚರಿತ್ರೆಯನ್ನು ಬಲ್ಲವರು ನಿಮಗೆ ಇದನ್ನು ಹೇಳಿರಬಹುದು. ತ್ಸಾರ್ ದೊರೆಯ ಅಧಿಕಾರಾವಧಿಯಲ್ಲಿಯೂ ಜನಸಮುದಾಯಗಳು ಪರಸ್ಪರ ಸುಳ್ಳುಗಳನ್ನು ಹರಡುತ್ತಾ ದ್ವೇಷ ಸಾಧಿಸುತ್ತಿದ್ದವು. ರಷ್ಯಾದಲ್ಲಿ ಬೋಲ್ಷೇವಿಕರು ಅಧಿಕಾರಕ್ಕೆ ಬಂದ ಮೇಲೆ ಪರಿಸ್ಥಿತಿ ಸಂಪೂರ್ಣ ಬದಲಾಯಿತು. ಆಗಿನಿಂದಲೂ ರಷ್ಯಾದಲ್ಲಿ ಯಾವುದೇ ದಂಗೆಗಳ ಸುದ್ದಿ ಕೇಳಿಬರುತ್ತಿಲ್ಲ. ರಷ್ಯಾದಲ್ಲಿ ಈಗ ಪ್ರತಿಯೊಬ್ಬರನ್ನೂ ಮನುಷ್ಯನನ್ನಾಗಿ ಕಾಣಲಾಗುತ್ತದೆ. ಯಾವುದೇ ಧಾರ್ಮಿಕ ಅಸ್ಮಿತೆಗಳನ್ನು ಹೊಂದಿರುವುದಿಲ್ಲ. ತ್ಸಾರ್ ದೊರೆಯ ಅಧಿಕಾರಾವಧಿಯಲ್ಲಿ ಜನಸಾಮಾನ್ಯರ ಆರ್ಥಿಕ ಪರಿಸ್ಥಿತಿ ಅಧೋಗತಿಗಿಳಿದಿತ್ತು. ಈ ಕಾರಣದಿಂದಲೇ ಅನೇಕ ದಂಗೆಗಳು ನಡೆಯುತ್ತಿದ್ದವು. ಕೋಮು ಗಲಭೆಗಳು ನಡೆಯುತ್ತಿದ್ದವು. ಆದರೆ ಇಂದು ರಷ್ಯನ್ನರ ಆರ್ಥಿಕ ಪರಿಸ್ಥಿತಿ ಸಾಕಷ್ಟು ಸುಧಾರಿಸಿದ್ದು, ಆರ್ಥಿಕ ವರ್ಗಗಳ ಬಗ್ಗೆ ಜನರಲ್ಲಿ ಜಾಗೃತಿಯೂ ಮೂಡಿದೆ. ಈ ಬದಲಾವಣೆ ಆದ ದಿನದಿಂದ ರಷ್ಯಾದಲ್ಲಿ ಕೋಮು ಗಲಭೆಯಾಗಲೀ, ದಂಗೆಗಳಾಗಲೀ ಸಂಭವಿಸಿದ ವರದಿಯಾಗಿಲ್ಲ.


ಸಾಮಾನ್ಯವಾಗಿ, ದಂಗೆಗಳು ತೀವ್ರವಾದ ಶೋಚನೀಯ ಸುದ್ದಿಗಳನ್ನು ಉಂಟುಮಾಡುತ್ತವೆ. ಆದರೆ ಕೊಲ್ಕತ್ತಾದಲ್ಲಿ ನಡೆದ ಒಂದು ಗಲಭೆಯ ಸಂದರ್ಭದಲ್ಲಿ ಮನಸ್ಸಿಗೆ ಮುದ ನೀಡುವಂತಹ ವರದಿಯೊಂದಿತ್ತು. ಈ ಗಲಭೆಗಳಲ್ಲಿ ಒಂದು ಕಾರ್ಮಿಕ ಸಂಘಟನೆಗೆ ಸೇರಿದ ಕಾರ್ಮಿಕರು ಪಾಲ್ಗೊಳ್ಳಲಿಲ್ಲ. ಕೋಮು ಸಂಘರ್ಷದಲ್ಲೂ ಈ ಕಾರ್ಮಿಕರು ಪಾಲ್ಗೊಳ್ಳಲಿಲ್ಲ. ಬದಲಾಗಿ ಹಿಂದೂಗಳು ಮತ್ತು ಮುಸ್ಲಿಮರು ಕಾರ್ಖಾನೆಗಳಲ್ಲಿ ಒಟ್ಟಾಗಿ ಕೆಲಸ ಮಾಡುವ ಮೂಲಕ ಅಸಾಧಾರಣ ಸೋದರತ್ವ, ಸಮನ್ವಯ ತೋರಿದ್ದರು. ಪರಿಸ್ಥಿತಿಯನ್ನು ತಿಳಿಗೊಳಿಸುವುದರಲ್ಲೂ ಸಕ್ರಿಯವಾಗಿ ತೊಡಗಿದ್ದರು. ಇದು ಸಾಧ್ಯವಾಗಿದ್ದು ಏಕೆಂದರೆ ಈ ಕಾರ್ಮಿಕರಲ್ಲಿ ವರ್ಗ ಪ್ರಜ್ಞೆ ಜಾಗೃತವಾಗಿತ್ತು ಮತ್ತು ಒಂದು ಸಮೂಹವಾಗಿ ತಮ್ಮ ಹಿತಾಸಕ್ತಿಯನ್ನು ಇವರು ಅರಿತವರಾಗಿದ್ದರು. ವರ್ಗ ಪ್ರಜ್ಞೆಯ ಈ ಸುಂದರ ನಿದರ್ಶನವನ್ನೇ ಅನುಸರಿಸುವುದಾದರೆ ಕೋಮು ಹಿಂಸೆಯನ್ನು ನಾವು ತಡೆಗಟ್ಟಬಹುದು.


ಇಂದು ಭಾರತದ ಅಸಂಖ್ಯಾತ ಯುವಜನತೆ ಕೋಮು ಹಿಂಸೆ ಮತ್ತು ದ್ವೇಷವನ್ನು ಬೋಧಿಸುವಂತಹ ಮತಗಳಿಂದ ದೂರ ಸರಿಯುತ್ತಿದ್ದಾರೆ ಎಂಬ ಸಂತೋಷದಾಯಕ ವಿಚಾರ ಕೇಳಿಬರುತ್ತಿದೆ. ಅವರ ದೃಷ್ಟಿಕೋನಗಳು ಎಷ್ಟು ವಿಶಾಲವಾಗಿವೆ ಎಂದರೆ ಅವರು ಜನರನ್ನು ಹಿಂದೂ, ಮುಸ್ಲಿಂ ಅಥವಾ ಸಿಮ್ ಎಂದು ಗುರುತಿಸುವುದಿಲ್ಲ. ಮನುಷ್ಯರಾಗಿ ಕಾಣುತ್ತಾರೆ, ಭಾರತೀಯರನ್ನಾಗಿ ಕಾಣುತ್ತಾರೆ. ಭಾರತದ ಯುವಜನತೆಯಲ್ಲಿ ಈ ಆಲೋಚನೆಗಳು, ಚಿಂತನೆಗಳು ಜಾಗೃತವಾಗುತ್ತಿರುವುದರಿಂದ, ನನಗೆ ಭಾರತದ ಭವಿಷ್ಯ ಉಜ್ವಲವಾಗಿ ಕಾಣುತ್ತಿದೆ. ಈ ಕೋಮು ಗಲಭೆಗಳ ಸುದ್ದಿಗಳಿಂದ ಭಾರತೀಯರು ವಿಚಲಿತರಾಗಬಾರದು ಆದರೆ ಯಾವುದೇ ಸಂದರ್ಭದಲ್ಲಾದರೂ ಇಂತಹ ದಂಗೆಗಳಿಗೆ ಅವಕಾಶ ಉಂಟುಮಾಡುವಂತಹ ಕೋಮುವಾದಿ ವಾತಾವರಣವನ್ನು ಸೃಷ್ಟಿಸಲು ಇವರು ನೆರವಾಗಕೂಡದು.


೧೯೧೪-೧೫ರ ಸಂದರ್ಭದ ಹುತಾತ್ಮರು ಧರ್ಮ ಮತ್ತು ರಾಜಕಾರಣವನ್ನು ಪ್ರತ್ಯೇಕವಾಗಿಯೇ ಕಂಡಿದ್ದರು. ಮತ ಅಥವಾ ಧರ್ಮ ಎನ್ನುವುದು ವ್ಯಕ್ತಿಯ ಖಾಸಗಿ ವಿಚಾರ ಎನ್ನುವುದನ್ನು ಅರಿತಿದ್ದ ಅವರು ಮತ್ತೊಬ್ಬರ ವ್ಯವಹಾರದಲ್ಲಿ ಇದು ಹಸ್ತಕ್ಷೇಪ ಮಾಡಕೂಡದು ಎಂಬುದನ್ನು ಅರಿತಿದ್ದರು. ಅವರೆಲ್ಲರೂ ಮತ ಅಥವಾ ಧರ್ಮ ರಾಜಕೀಯವನ್ನು ಪ್ರವೇಶಿಸಕೂಡದು ನಂಬಿದವರಾಗಿದ್ದರು. ಏಕೆಂದರೆ ಇದರಿಂದ ಜನರು ಸಮಾನ ಧೈಯಕ್ಕಾಗಿ ಹೋರಾಡಲು ತೊಡಕುಂಟಾಗುತ್ತದೆ. ಈ ಕಾರಣಕ್ಕಾಗಿಯೇ ಗದರ್ ಪಕ್ಷ ಕ್ರಾಂತಿಯ ಕರೆ ನೀಡಿದ ಸಂದರ್ಭದಲ್ಲಿ ಜನರು ಐಕ್ಯದೊಂದಿಗಿದ್ದರು. ಇಲ್ಲಿ ಸಿಖ್ಖರು, ಹಿಂದೂಗಳು ಮತ್ತು ಮುಸ್ಲಿಮರು ಕ್ರಾಂತಿಯ ಹರಿಕಾರರಾಗಿ ನೇಣುಗಂಬ ಏರಿದ್ದರು. 


ಇಂದು ಸ್ವಾತಂತ್ರ್ಯ ಸಂಗ್ರಾಮವನ್ನು ಹೊಸದಾಗಿ ಪ್ರವೇಶಿಸಿರುವ ರಾಜಕೀಯ ನಾಯಕರೂ ರಾಜಕೀಯವನ್ನು ಮತ ಮತ್ತು ಧರ್ಮದಿಂದ ಪ್ರತ್ಯೇಕವಾಗಿರಿಸಲು ಯೋಚಿಸುತ್ತಿದ್ದಾರೆ. ಇದು ಕೋಮು ಹಿಂಸೆ ಎಂಬ ವ್ಯಾಧಿಗೆ ಒಂದು ಪರಿಣಾಮಕಾರಿ ಮದ್ದು. ನಮ್ಮಲ್ಲಿ ವಿಭಿನ್ನವಾದ ಧಾರ್ಮಿಕ ನಂಬಿಕೆಗಳು ಇದ್ದರೂ, ನಾವು ರಾಜಕೀಯದಿಂದ ಧರ್ಮವನ್ನು ಪ್ರತ್ಯೇಕಿಸಿದರೆ, ರಾಜಕಾರಣ ಮತ್ತು ರಾಷ್ಟ್ರದ ಹಿತಾಸಕ್ತಿಗಾಗಿ ನಾವು ಒಗ್ಗಟ್ಟಿನಿಂದ ಹೋರಾಡಲು ಸಾಧ್ಯ. ಭಾರತದ ಬಗ್ಗೆ ನೈಜ ಅನುಕಂಪ ಇರುವ ಎಲ್ಲರೂ ನಾವು ಸೂಚಿಸಿರುವ ಪರಿಹಾರ ಮಾರ್ಗಗಳ ಬಗ್ಗೆ ಆಲೋಚನೆ ಮಾಡಿ, ಭಾರತ ತನ್ನಿಂದ ತಾನೇ ಧ್ವಂಸವಾಗುವುದರಿಂದ ತಪ್ಪಿಸಲು ನೆರವಾಗುತ್ತಾರೆ ಎಂದು ಆಶಿಸೋಣ.

ಭಾಗ ೨
ಮೂಲ : ಭಗತ್ ಸಿಂಗ್ ಅನುವಾದ : ನಾ. ದಿವಾಕರ

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!