ದ ಪಾಲಿಟಿಕ್

ಬೆಂಕಿ ಹಾಗೂ ಬೆಳದಿಂಗಳಿನಂಥ ದಮನ್ ಪಾಟೀಲ್

ದ ಪಾಲಿಟಿಕ್

ದ ಪಾಲಿಟಿಕ್

ಬೀದರ್ ನಲ್ಲಿ ಕೋಳಾರ ಕೈಗಾರಿಕಾ ಪ್ರದೇಶ ಮಾಲಿನ್ಯ ವಿರೋಧಿ ಸಂಬಂಧವಾಗಿ ನಾನು ಬೀದರಿಗೆ ಹೋದಾಗಲೆಲ್ಲ ತಪ್ಪದೇ ಭೇಟಿಯಾಗುತ್ತಿದ್ದ ಹಿರಿಯ ಹಿತೈಷಿ ಎಂದರೆ ವಿಶ್ವನಾಥ ಪಾಟೀಲ್ ಅಲಿಯಾಸ್ ದಮನ್ ಪಾಟೀಲ್. ನಮ್ಮ ಸಂಘಟನೆಯ ಚಟುವಟಿಕೆಗಳಿಗೆ ಅವರು ನೀಡಿದ ನೈತಿಕ ಹಾಗೂ ಭೌತಿಕ ಬೆಂಬಲ ಅಪಾರವಾದದ್ದು. ಅವರು ನಮ್ಮ ಹೋರಾಟಕ್ಕೆ ಮುಕ್ತ ಮನಸ್ಸಿನ ಬೆಂಬಲ ನೀಡಿದರು ಮಾತ್ರವಲ್ಲದೆ ಅವರ ಸ್ನೇಹಿತರು, ಶಿಷ್ಯರು ಎಲ್ಲರಿಂದಲೂ ಬೆಂಬಲ ಕೊಡಿಸಿದರು. ಕೈಗಾರಿಕಾ ಪ್ರದೇಶದ ಮಾಲಿನ್ಯದಿಂದ ಜನಸಾಮಾನ್ಯರಿಗೆ ಉಂಟಾಗುತ್ತಿದ್ದ ಹಾನಿಯ ಬಗ್ಗೆ ಅವರಿಗೆ ತೀವ್ರ ಕೋಪವಿತ್ತು. ಅದನ್ನು ವಿರೋಧಿಸಿ ಹೋರಾಟ ಸಂಘಟಿಸಲು ಕರ್ನಾಟಕ ವಿಮೋಚನಾ ರಂಗ ಮುಂದಾದಾಗ ಅದಕ್ಕೆ ನೈತಿಕ ಬಲ ತುಂಬಿದ್ದು ದಮನ್ ಪಾಟೀಲ್ ಹಾಗೂ ಬೀದರ್ ನ ಪತ್ರಕರ್ತರು.

ಮೂಲತಃ ದಮನ್ ಪಾಟೀಲ್ ಒಬ್ಬ ಪತ್ರಕರ್ತ ಹೋರಾಟಗಾರ ಅಥವಾ ಹೋರಾಟಗಾರ ಪತ್ರಕರ್ತ. ಅವರಿಗೆ ಎಡಪಂಥೀಯ ಚಿಂತನೆಗಳ ಒಲವಿತ್ತು. ಆದರೆ ಆ ಸಿದ್ಧಾಂತಗಳ ಕುರುಡು ಬೆಂಬಲಿಗರೇ ನಾಗಿರಲಿಲ್ಲ. ಆದರೆ ಪಟ್ಟಭದ್ರ ಹಿತಾಸಕ್ತಿಗಳು ಜನತೆಯ ಹಿತಾಸಕ್ತಿಗಳಿಗೆ ವಿರುದ್ಧವಾಗಿ ನಡೆಸುತ್ತಿದ್ದ ಚಟುವಟಿಕೆಗಳಿಗೆ ವಿರೋಧವಾಗಿ ನಿಲ್ಲಲು ಎಂದೂ ಹಿಂದೆಮುಂದೆ ನೋಡುತ್ತಿರಲಿಲ್ಲ. ಈ ಕಾರಣಕ್ಕಾಗಿಯೇ ಈ ಬೆಂಬಲವನ್ನು ನಮಗೆ ಒದಗಿಸಿಕೊಟ್ಟರು. ಅಂತಹ ಹಿರಿಯರ ಬೆಂಬಲವಿಲ್ಲದಿದ್ದರೆ ನಾವು ಬೀದರ್ ನ ಆ ನೆಲದಲ್ಲಿ ಯಶಸ್ವಿ ಹೋರಾಟವನ್ನು ರೂಪಿಸಿ ನಡೆಸಿ ಪೂರೈಸಲಾಗುತ್ತಿರಲಿಲ್ಲ. ದಮನ್ ಪಾಟೀಲರಿಗೆ ಕಲ್ಯಾಣ ಕರ್ನಾಟಕದ ಪ್ರದೇಶಗಳಲ್ಲಿ ಜಾರಿಯಲ್ಲಿದ್ದ ಊಳಿಗಮಾನ್ಯ ಧಣಿಗಳ ಶೋಷಣೆಯ ಬಗ್ಗೆ ವಿರೋಧವಿತ್ತು. ಈ ವಿಷಯದಲ್ಲಿ ಅವರು ಸದಾ ತಮ್ಮ ವಿರೋಧವನ್ನು ದಾಖಲಿಸಿಕೊಂಡು ಬಂದವರೇ ಆಗಿದ್ದರು.

ಪತ್ರಕರ್ತರಿಗೆ ಮಾತ್ರವಲ್ಲದೆ ರಾಜಕಾರಣಿಗಳಿಗೆ ಕೂಡ ದಮನ್ ಪಾಟೀಲರ ಬಗ್ಗೆ ಗೌರವವಿತ್ತು. ಈ ಗೌರವದ ಹಿಂದೆ ಒಂದು ಅವಿಸಿಟ್ಟ ಕೋಪವೂ ಇತ್ತು ಎಂದು ನಾನು ಭಾವಿಸುತ್ತೇನೆ. ಇವರು ಸುಲಭವಾಗಿ ಮಣಿಯುವ ಸ್ವಭಾವದವರಾಗಿರಲಿಲ್ಲ. ಅಧಿಕಾರಸ್ಥರ ಮರ್ಜಿಯಿಂದ ಸದಾ ದೂರವಿರುವ ಒಂದು ಧೋರಣೆಯನ್ನು ಅವರು ಕಾಪಾಡಿಕೊಂಡಿದ್ದರು. ಮಂತ್ರಿಗಳು, ರಾಜಕೀಯ ಮುಖಂಡರು ಬರುವ ಪತ್ರಿಕಾಗೋಷ್ಠಿಗಳಿಗೆ ಹಾಜರಾಗಿ, ಮುಂದಿನ ಸಾಲಲ್ಲಿ ಕುಳಿತು ಅವರ ಮೆಚ್ಚುಗೆಯನ್ನು ಗಳಿಸುವ ಜಾಯಮಾನವನ್ನು ಅವರೆಂದೂ ಬೆಳೆಸಿಕೊಳ್ಳಲಿಲ್ಲ. ವಿಮರ್ಶಾತ್ಮಕ ನಿಲುವಿನಿಂದ ಎಂತಹವರಲ್ಲೂ ಒಂದು ಎಚ್ಚರವನ್ನು ಮೂಡಿಸುವ ಪರಿಪಾಠವನ್ನು ವಿಶ್ವನಾಥ ಪಾಟೀಲ್ ಬೆಳೆಸಿಕೊಂಡಿದ್ದರು. ಯಾವುದೇ ವಿಷಯವನ್ನು ಅವರ ಎದುರು ಹೇಳಿದಾಗಲೂ ಅದರ ಸಾಧಕ-ಬಾದಕಗಳನ್ನು ವಿವರಿಸಿದ ನಂತರವೇ ಒಂದು ರೀತಿಯ ಅರೆಮನಸ್ಸಿನ ಒಪ್ಪಿಗೆಯನ್ನು ಸೂಚಿಸುತ್ತಿದ್ದರು. ಅದಕ್ಕೆ ಕಾರಣ ಅವರು ತಮ್ಮ ವ್ಯಕ್ತಿಗತ ಜೀವನದಲ್ಲಿ ಅಪಾರ ಕಹಿ ಅನುಭವಗಳನ್ನು ಕಂಡವರಾಗಿದ್ದರು.

ದಮನ್ ಎನ್ನುವ ಒಂದು ಸ್ಥಳೀಯ ಹಿಂದಿ ಪತ್ರಿಕೆಯನ್ನು ಒಂದು ಪ್ರದೇಶದ ಮನಃಸಾಕ್ಷಿಯ ರೂಪಕವೆನ್ನುವಂತೆ ಅವರು ಬೆಳೆಸಿದ್ದರು. ದಮನ್ ಪಾಟೀಲ್ ಬರೆಯುವ ವರದಿ, ಲೇಖನ, ವಿಶ್ಲೇಷಣೆ ಯಾವುದೇ ಇರಲಿ ಅದು ಸತ್ಯದ ಪರವಾಗಿ ಇರುತ್ತಿತ್ತು. ಯಾರನ್ನೋ ಮೆಚ್ಚಿಸುವುದಕ್ಕೆ ಅವರು ತಮ್ಮ ಲೇಖನಿಯನ್ನು ಬಳಸಿಯೇ ಇಲ್ಲ ಎಂದರೆ ತಪ್ಪಿಲ್ಲ. ನಾವು ಅತ್ಯುತ್ಸಾಹದಿಂದ ಕಾರ್ಯಕ್ರಮಗಳನ್ನು ರೂಪಿಸಿ ಅವರ ಮುಂದೆ ಮಂಡಿಸಿದಾಗಲೂ ಅವರ ಮೊದಲ ಮಾತು ‘ನಿಮಗೆ ಇಲ್ಲಿನ ಮಂದಿಯ ರೀತಿ ಪೂರ್ಣ ಗೊತ್ತಿಲ್ಲ’ಎಂತಲೇ. ಅವರ ದೀರ್ಘ ಹೋರಾಟದ ಅನುಭವದಲ್ಲಿ, ಪತ್ರಕರ್ತನ ಜೀವನದಲ್ಲಿ ಅವರು ಎದುರಿಸಿದ್ದ ನೂರು ನಿರಾಸೆಗಳು ಅವರಿಂದ ಈ ಮಾತುಗಳನ್ನು ಆಡಿಸುತ್ತಿದ್ದವು. ಆದರೆ ಎಂದೂ ಕ್ರಿಯಾಶೀಲತೆಗೆ ಅಡ್ಡ ಬರುತ್ತಿರಲಿಲ್ಲ. ಅಲ್ಲದೆ ಸದ್ದಿಲ್ಲದೆ ತಮ್ಮ ಕೈಲಾದ ನೆರವನ್ನು ಒದಗಿಸಲು ಅವರು ಸದಾ ಮುಂದಿರುತ್ತಿದ್ದರು.

ಹೋರಾಟದ ಭಾಗವಾಗಿ ನಾನು ಮತ್ತು ಹಲವು ಸಂಗಡಿಗರು ಬಂಧನಕ್ಕೊಳಗಾಗಿ ಜೈಲು ಸೇರಿದಾಗ ನನ್ನ ಆರೋಗ್ಯದ ಬಗ್ಗೆ ಅವರು ವಹಿಸಿದ ಕಾಳಜಿ ಅಪರೂಪದ್ದು. ಬೆಂಕಿಯಂತಹ ಮನುಷ್ಯನ ಹೃದಯದೊಳಗಿನ ಬೆಳದಿಂಗಳು ಅದು. ಊರುಕೇರಿ ಅರಿಯದ ನನ್ನನ್ನು ಅವರ ಮಗನೇ ಇರಬಹುದೇನೋ ಅನ್ನುವಷ್ಟು ಕಕ್ಕುಲಾತಿಯಿಂದ ಅವರು ಕಾಳಜಿ ಮಾಡಿದ್ದು ನನಗೆ ಹಚ್ಚಹಸುರಾಗಿ ನೆನಪಿದೆ. ಜೈಲಿನ ಅಧಿಕಾರಿಗಳೊಂದಿಗೆ ವಾದ ಮಾಡಿ ನನ್ನನ್ನು ಆಸ್ಪತ್ರೆಗೆ ದಾಖಲಿಸುವಂತೆ ಮಾಡಿದರು. ಅದಕ್ಕಾಗಿ ಅವರು ಖರ್ಚುಮಾಡಿದ ಮಾತುಗಳಿಗೆ ಲೆಕ್ಕವಿಲ್ಲ. ಅವರು ನನ್ನನ್ನು ಜೈಲಿನಲ್ಲಿ ಭೇಟಿಯಾಗಲು ಬಂದಾಗ ಜೈಲು ಅಧೀಕ್ಷಕರ ಕೊಠಡಿಯಲ್ಲಿ ಸಂದರ್ಶನ ಏರ್ಪಾಟಾಗಿತ್ತು. ಅಲ್ಲಿದ್ದ ಎರಡು ಖುರ್ಚಿಗಳ ಪೈಕಿ ಒಂದರಲ್ಲಿ ಅವರು ಕೂತಿದ್ದರು. ಇನ್ನೊಂದರಲ್ಲಿ ಕೂರುವಂತೆ ದಮನ್ ಪಾಟೀಲ್ ನನಗೆ ಹೇಳಿದರು. ಕುಳಿತುಕೊಳ್ಳಲು ನೋಡುವಷ್ಟರಲ್ಲಿ ಜೈಲಿನ ಅಧಿಕಾರಿ ‘ ನಮ್ಮ ಬಂಧನದಲ್ಲಿರುವ ವ್ಯಕ್ತಿ ನಮ್ಮೆದುರು ಕೂರುವಂತಿಲ್ಲ, ಜೈಲಿನ ನಿಯಮಾವಳಿಗಳಿಗೆ ಇದು ವಿರೋಧ ಎಂದು ಹೇಳಿದರು. ದಮನ್ ಪಾಟೀಲ್ ನನ್ನ ಬಗ್ಗೆ, ಅಖಿಲ ಭಾರತ ಕ್ರಾಂತಿಕಾರಿ ಸಾಂಸ್ಕೃತಿಕ ಸಂಘಟನೆಯಲ್ಲಿ ನಾನು ಹೊಂದಿರುವ ಸ್ಥಾನಮಾನ ಇತ್ಯಾದಿಗಳನ್ನು ವಿವರಿಸಿ ಅಂತಹವರನ್ನು ನಿಲ್ಲಿಸಿಕೊಂಡು ಮಾತನಾಡುವುದು ಅವಮಾನಕಾರಿ, ಅವರನ್ನು ನೀವು ಬಂಧಿಸಿರಬಹುದು, ಆದರೆ ಆ ಬಂಧನವೇ ಅಕ್ರಮವಾದದ್ದು, ಅವರು ಯಾರು ಎನ್ನುವುದು ನಿಮ್ಮ ಅಂದಾಜಿಗೇ ಬಂದಿಲ್ಲ ಎಂದು ಹೇಳಿದರು. ಮಾತ್ರವಲ್ಲ ಅವರು ಕೂಡ ಕುರ್ಚಿಯಿಂದ ಎದ್ದು ನಿಂತುಕೊಂಡೇ ಸಂದರ್ಶನವನ್ನು ಮುಗಿಸಿದರು.

ಜೈಲಿನ ವೈದ್ಯಾಧಿಕಾರಿ ನನ್ನ ಆರೋಗ್ಯದ ಪರಿಸ್ಥಿತಿಯ ಆಧಾರದಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸುವ ಅಗತ್ಯವಿಲ್ಲ ಎಂದು ಹೇಳಿದಾಗ ಅದರ ವಿರುದ್ಧ ಹೆಚ್ಚಿನ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವಂತೆ ಒತ್ತಾಯಿಸಿ ಒಪ್ಪಿಗೆ ಪಡೆದುಕೊಂಡರು. ಸರ್ಕಾರಿ ಆಸ್ಪತ್ರೆಯ ವೈದ್ಯರಿಗೆ ನಾನೊಬ್ಬ ಬರಹಗಾರ, ಪರಿಸರವಾದಿ ಹೋರಾಟಗಾರ ಹಾಗೂ ಆರೋಗ್ಯದ ಸಮಸ್ಯೆ ಉಳ್ಳವ ಎಂದು ಅರ್ಥಮಾಡಿಸಿ, ಕಡೆಗೂ ಆಸ್ಪತ್ರೆಗೆ ದಾಖಲಾತಿ ಮಾಡಿಸಿ ನನಗೆ ಸೂಕ್ತ ಚಿಕಿತ್ಸೆ ದೊರೆಯುವಂತೆ ನೋಡಿಕೊಂಡರು.ಅವರ ಕೆಲಸಗಳ ಒತ್ತಡದಲ್ಲೂ ತಪ್ಪದೇ ಆಸ್ಪತ್ರೆಗೆ ಬಂದು ನನ್ನ ಯೋಗಕ್ಷೇಮ ನೋಡಿಕೊಂಡಿದ್ದೇ ಅಲ್ಲದೆ ಅವರ ಬಳಗದವರ ಮನೆಗಳಿಂದ ದಿನವೂ ಹೊತ್ತುಹೊತ್ತಿಗೆ ಬಿಸಿ ಊಟ ತಲುಪುವಂತೆ ನೋಡಿಕೊಂಡರು. ವಿಚಾರದ ವಿಷಯದಲ್ಲಿ ಬೆಂಕಿಯಂಥ ಮನುಷ್ಯ ಅಂತಃಕರಣದ ವಿಷಯದಲ್ಲಿ ಬೆಳದಿಂಗಳಂತಹ ಮನುಷ್ಯ. ನಾವು ಎಷ್ಟೇ ಜನ ಅವರ ಮನೆಗೆ ಹೋದಾಗಲೂ ನಮಗೆ ತಿಂಡಿ ಅಥವಾ ಊಟ ಕೊಡದೆ ಅವರು ಕಳುಹಿಸಿದ್ದೇ ಇಲ್ಲ . ಅವರ ಶ್ರೀಮತಿಯವರು ಈ ಬಗೆಯ ಉಪಚಾರವನ್ನು ತುಂಬ ತಾಯ್ತನದಿಂದ ಒದಗಿಸುತ್ತಿದ್ದರು. ಇದರಿಂದ ಅವರಿಗೆ ಲೌಕಿಕವಾದ ಲಾಭವೇನು ಇರಲಿಲ್ಲ. ನಮ್ಮಂತಹವರನ್ನು ಬೆಂಬಲಿಸದೆ ಅಧಿಕಾರಸ್ಥ ವಲಯಗಳಿಗೆ ಇವರ ನಾಮಮಾತ್ರ ಬೆಂಬಲ ತೋರಿಸಿದ್ದರೂ ಅವರು ಪಡೆದುಕೊಳ್ಳಬಹುದಾದ ಲಾಭಗಳು ಎಷ್ಟೋ ಇದ್ದವು.

ಮೌಲ್ಯನಿಷ್ಠ ಪತ್ರಿಕೋದ್ಯಮ, ಜನಪರವಾದ ಕಾಳಜಿಗಳ ಬದ್ಧತೆ, ಸ್ವಂತ ಜಾತಿಯವರನ್ನೂ ಲೆಕ್ಕಿಸದ ನಿರ್ಮಮಕಾರ, ತನ್ನ ಲೇಖನಿಯನ್ನು ಎಂದಿಗೂ ಅಧಿಕಾರಸ್ಥರ ಹಿತ ರಕ್ಷಿಸಲು ಬಳಸದೆ ಬದುಕಿದ ವೃತ್ತಿಪರತೆ ಇವು ದಮನ್ ಪಾಟೀಲರನ್ನು ಅನನ್ಯಗೊಳಿಸಿವೆ. ಬೀದರ್ ನಲ್ಲಿ ನಾಳೆಯೂ ಬೆಳೆಯಬಹುದಾದ, ಬೆಳೆಯಲೇಬೇಕಾಗಿರುವ ಜನಪರ ಹೋರಾಟಗಳಿಗೆ ತಮ್ಮ ಸ್ವಾರ್ಥರಹಿತ ಬೆಂಬಲ ನೀಡುತ್ತಿದ್ದ ಪತ್ರಕರ್ತ ಹೋರಾಟಗಾರ ದಮನ್ ಪಾಟೀಲ್ ನಮ್ಮನ್ನು ಅಗಲಿದ್ದಾರೆ. ಎಷ್ಟು ವರ್ಷ ಬದುಕಿದೆ ಎನ್ನುವುದು ಲೆಕ್ಕವಲ್ಲ ಯಾವ ರೀತಿ ಬದುಕಿದ್ದೆ ಎನ್ನುವುದೇ ಲೆಕ್ಕ. ದಮನ್ ಪಾಟೀಲ್ ಎಲ್ಲಾ ದೃಷ್ಟಿಯಿಂದ ಸಂಘರ್ಷಮಯವಾದ ಸಾರ್ಥಕ ಬದುಕನ್ನು ಬದುಕಿ ಹೋಗಿದ್ದಾರೆ. ಅವರ ಬದುಕಿನ ದುಃಖ ದುಮ್ಮಾನಗಳಿಗಿಂತ, ಸ್ವಂತ ಸುಖ ಸನ್ಮಾನಗಳಿಗಿಂತ ಸಮಾಜ ಮುಖ್ಯ, ಸಮಾಜದ ಸಾಮಾನ್ಯ ಜನ ಮುಖ್ಯ ಎನ್ನುವ ದೃಷ್ಟಿಕೋನದಿಂದ ಬಾಳಿ ಬೆಳಗಿದ್ದಾರೆ. ಅವರಿಗೆ ನನ್ನ ಅಶ್ರುತರ್ಪಣ ಒಬ್ಬ ಹಿರಿಯ ಬಂಧು ಕಳೆದುಕೊಂಡ ದುಃಖ ನನ್ನೊಳಗೆ ನೆಲೆಸಿದೆ. ಬೀದರ್ ಕಡೆ ಹೋದರೆ ತಪ್ಪದೇ ಭೇಟಿ ಮಾಡಿ ನಮಸ್ಕರಿಸಿ ಬರಬೇಕು ಎನ್ನುವ ಮಮಕಾರಪೂರಿತ ಗೌರವ ಹುಟ್ಟಿಸುವ ಜೀವ ಇಲ್ಲವಾಗಿದೆ. ಆದರೆ ಅವರು ನಮ್ಮೆದುರು ಬಿಟ್ಟುಹೋಗಿರುವ ಮಾದರಿ ಜೀವನದ ಆದರ್ಶ ನಮ್ಮ ಕಣ್ಣೆದುರಿಗಿದೆ. ಅವರಿಗೆ ಮನಃಪೂರ್ವಕ ಶ್ರದ್ಧಾಂಜಲಿಗಳು.

  • ಬಂಜಗೆರೆ ಜಯಪ್ರಕಾಶ.

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!