ದ ಪಾಲಿಟಿಕ್

ಲಿಂಗಾಯತ ಪ್ರಥಮ ರಾಷ್ಟ್ರೀಯ ಮಹಾ ಅಧಿವೇಶನ ಮಾಡುವ ಮುನ್ನ

ಸಿದ್ದಪ್ಪ ಮೂಲಗೆ

ಸಿದ್ದಪ್ಪ ಮೂಲಗೆ

ಜಾಗತಿಕ ಲಿಂಗಾಯತ ಮಹಾಸಭೆಯ ಮುಂದಾಳುಗಳು ಮಾರ್ಚ್ ನಾಲ್ಕು ಮತ್ತು ಐದರಂದು ಶರಣಭೂಮಿ ಬಸವಕಲ್ಯಾಣದಲ್ಲಿ ಲಿಂಗಾಯತ ಪ್ರಥಮ ರಾಷ್ಟ್ರೀಯ ಮಹಾ ಅಧಿವೇಶನ ಮಾಡುತ್ತೆವೆಂದು ಘೋಷಿಸಿದ್ದಾರೆ. ಈ ಸಮಾವೇಶದಲ್ಲಿ ಒಂದು ಲಕ್ಷ ಜನರನ್ನು ಸೇರಿಸುತ್ತೇವೆ ಹಾಗೂ ಇದನ್ನು ರಾಜಕೀಯೆತರವಾಗಿ ಮಾಡುತ್ತೇವೆ; ಅಧಿವೇಶನಕ್ಕೆ ರಾಜಕಾರಣಿಗಳಿಂದ ಹಣವೂ ಪಡೆಯುವುದಿಲ್ಲ ಹಾಗೂ ಅವರನ್ನು ವೇದಿಕೆಗೂ ಬಿಟ್ಟಿಕೊಳ್ಳುವುದಿಲ್ಲ ಎಂದು ಬಹಿರಂಗವಾಗಿ ಮಾಧ್ಯಮಗಳೆದುರಿಗೆ ಗಟ್ಟಿಯಾಗಿ ಘೋಷಿಸಿದ್ದಾರೆ. ಇವರ ಈ ಹಠಾತ್ ವರಸೆ ಸಮುದಾಯದ ಅನೇಕರಿಗೆ ತಳಮಳ ಉಂಟುಮಾಡಿದೆ. ಅವರ ತಳಮಳಕ್ಕೆ ಸಕಾರಣವೂ ಇವೆ.  

ಆರಂಭದ ಸಭೆಯಲ್ಲೇ ಲಿಂಗಾಯತ ಮಠಾಧೀಶರ ಒಕ್ಕೂಟದ ಅಧ್ಯಕ್ಷರಾದ ಭಾಲ್ಕಿಯ ಬಸವಲಿಂಗ ಪಟ್ಟದೇವರು ‘ಈ ಚುನಾವಣೆ ಹೊಸ್ತಿಲಲ್ಲಿ ಸಮಾವೇಶ ಮಾಡುವುದು ಸೂಕ್ತವಲ್ಲ’ ಎಂದು ಬಹಿರಂಗವಾಗಿಯೇ ತಾಕಿತು ಮಾಡಿದ್ದರು. ಅವರ ಮಾತನ್ನೂ ಉಪೇಕ್ಷಿಸಿ, ಕೆಲವರು ಹಠಕ್ಕೆ ಬಿದ್ದವರಂತೆ ಸಮಾವೇಶ ಮಾಡೇ ತೀರುತ್ತೇವೆಂದು ಮುಂದಡಿ ಇಟ್ಟಿದ್ದಾರೆ. ಮಾಡಲಿ. ಅದು ಯಶಸ್ಸು ಆಗಲಿ. ಆಗಬೇಕು. ಆದರದು ಸಾಧ್ಯವೇ? ಈ ಪ್ರಶ್ನೆ ಈಗ ಅವರನ್ನು ಯಾರಾದರೂ ಕೇಳಿದರೆ, ಕೇಳಿದವರನ್ನೇ ಖಳನಾಯಕರೆಂದು ಬಿಂಬಿಸುತ್ತಿದ್ದಾರೆ ಹಾಗೂ ಅಂಥವರನ್ನು ಗುರಿ ಮಾಡಿ ಟೀಕೆ ಮಾಡುತ್ತಿದ್ದಾರೆ. ಇದು ಪ್ರಜಾಸತ್ತಾತ್ಮಕ ನಡೆಯಲ್ಲ;ಸರ್ವಾಧಿಕಾರಿ ನಡೆ. ಈ ಬೆಳವಣಿಗೆ ಆಘಾತಕಾರಿಯಾದದ್ದು. ತಮ್ಮವರದ್ದೇ ಭಿನ್ನ ಅಭಿಪ್ರಾಯವೇ ಸಹಿಸದ ಇವರು ಟೀಕೆ, ಟಿಪ್ಪಣಿ, ವಿಮರ್ಶೆ ಆದರೂ ಹೇಗೆ ಸಹಿಸುವರು? ಹೋರಾಟದ ರಥವನ್ನು ದಡಕ್ಕಾದರೂ ಹೇಗೆ ಸೇರಿಸುವರು?

ವಾಸ್ತವಿಕವಾಗಿ ಒಂದು ಲಕ್ಷ ದೂರದ ಮಾತು, ತಮ್ಮ ಸಂಸ್ಥೆಯ ನಾಮದ ಬಲದ ಮೇಲೆ ಒಂದು ಸಾವಿರ ಜನರನ್ನು ಒಂದೆಡೆ ಸೇರಿಸುವ ತಾಕತ್ತು ಜಾಗತಿಕ ಲಿಂಗಾಯತ ಮಹಾಸಭೆಗೆ ಇಲ್ಲ. ತಳಮಟ್ಟದಲ್ಲಿ ಅನೇಕ ವರ್ಷಗಳಿಂದ ಹಲವು ಲಿಂಗಾಯತ ಸಂಘಟನೆಗಳು ಹಾಗೂ ಮಠಾಧೀಶರು ಕಾರ್ಯನಿರ್ವಹಿಸುತ್ತಿದ್ದಾರೆ.ಇವರುಗಳ ಬಲದ ಮೇಲೆ, ಇವರ ಅಸಮಾಧಾನ ನಡುವೆಯೂ ತಮ್ಮ ಬ್ಯಾನರ್ ಅಡಿಯಲ್ಲಿ ‘ಮಹಾ ಅಧಿವೇಶನ’ ಮಾಡಲು ಮುಂದಾಗಿದ್ದು ಸಖೇದಾಶ್ಚರ್ಯವಾಗಿದೆ.

www.thepolitic.in

ಈ ಸಂಸ್ಥೆ ಹುಟ್ಟಿ ಐದು ವರ್ಷ ಆಯಿತು. ಗ್ರಾಸ್ ರೂಟ್ ಲೆವೆಲ್ಲಿಗೆ ಇಳಿದು ಒಂದಿನವೂ ಜಾಗೃತಿಯಾಗಲಿ ಅಥವಾ ಸಂಘಟನೆಯಾಗಲಿ ಮಾಡಿಲ್ಲ. ಆದರೂ ತಮ್ಮದು ‘ಲಿಂಗಾಯತರ ಪ್ರಾತಿನಿಧಿಕ ಸಂಸ್ಥೆ’ಯೆಂದು ಸಾರುತ್ತಿದ್ದಾರೆ. ನಾಲ್ಕು ವರ್ಷಗಳವರೆಗೆ ತಣ್ಣಗೆ ಮಲಗಿ ಈಗ ಹಠಾತ್ತಾಗಿ ಬುದ್ಕನೇ ಎದ್ದು ಕೂತಿದ್ದು ಸಮಾಧಾನಕರ ಸಂಗತಿ.‌ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಏಕವ್ಯಕ್ತಿಯ ಆಳ್ವಿಕೆ ಹೇಗೆ ಸರ್ವಾಧಿಕಾರಕ್ಕೆ ದಾರಿ ಮಾಡಿಕೊಡುತ್ತದೆಯೇ ಹಾಗೆಯೇ ಒಂದು ಸಂಸ್ಥೆ ಇಂತಹ ಬೃಹತ್ ಸಮುದಾಯದ ಪ್ರಾತಿನಿಧಿಕ ಸಂಸ್ಥೆಯಾಗುವುದು ‘ವರ್ಣಭೇದ ನೀತಿ’ಗೆ ದಾರಿಮಾಡಿಕೊಡುತ್ತದೆ.

ನಾಲ್ಕು ರಾಜ್ಯಗಳಲ್ಲಿ ಹರಡಿಕೊಂಡಿರುವ ಇಂತ ದೊಡ್ಡ ಸಮುದಾಯಕ್ಕೆ ಒಂದು ಸಂಸ್ಥೆ ಅಥವಾ ಒಂದು ಮಠ ಅಥವಾ ಒಂದು ಸಂಘಟನೆ ಪ್ರಾತಿನಿಧಿಕ ಸಂಸ್ಥೆಯಾಗುವುದು ಸಂಮಜಸವಲ್ಲ. ಅದು ಅಪಾಯಕಾರಿಯೂ ‌ಹೌದು‌. ರಾಜ್ಯ ಮತ್ತು ಹೋರ ರಾಜ್ಯಗಳಲ್ಲಿ ಈಗಾಗಲೇ ಸಮುದಾಯದ ನೂರೆಂಟು ಸಂಘಟನೆಗಳಿವೆ. ಇವುಗಳಂತೆ ಜಾಗತಿಕ ಲಿಂಗಾಯತ ಮಹಾಸಭೆಯೂ ಒಂದು ಸಂಘಟನೆಯೆ ವಿನಾ ಲಿಂಗಾಯತರ ಪ್ರಾತಿನಿಧಿಕ ಸಂಸ್ಥೆ ಅಲ್ಲ. ಎಲ್ಲಾ ಸಂಘಟನೆಗಳ ಆದ್ಯತೆ ಬೇರೆ ಬೇರೆಬೇರಯಾಗಿವೆ. ಅವುಗಳೆಲ್ಲವೂ ತಮ್ಮ ತಮ್ಮ ಆದ್ಯತೆಗೆ ಅನುಸಾರವಾಗಿ ಕಾರ್ಯನಿರ್ವಹಿಸುತ್ತಿವೆ.  

ಈ ಹೊರಾಟದ ರಥ ಸುಲಲಿತವಾಗಿ ಮುಂದೆ ಸಾಗಬೇಕಾದರೆ ಸಮುದಾಯದ ಎಲ್ಲಾ ಸಂಘಟನೆಗಳ, ಒಳಪಂಗಡಗಳ ಹಾಗೂ ಮಠಗಳ ಪ್ರತಿನಿಧಿಗಳು ಒಳಗೊಂಡಂತೆ ಒಂದು ‘ಮಹಾ ಒಕ್ಕೂಟದ’ ಅವಶ್ಯಕತೆ ಸಮಾಜಕ್ಕೆ ಇದೆ. ಇಲ್ಲದಿದ್ದರೆ ಮನೆಯೊಂದು ಮೂರು ಬಾಗಿಲು ಆಗುತ್ತದೆ. ಈ ಮಹಾ ಒಕ್ಕೂಟವೆ ಲಿಂಗಾಯತರ ಪ್ರಾತಿನಿಧಿಕ ಸಂಸ್ಥೆ ಆಗಬೇಕು. ಈ ಮಹಾ ಒಕ್ಕೂಟದ ಸಭೆಗಳಲ್ಲಾದರೂ ಒಬ್ಬರೇ ಮಾತನಾಡದೇ ಮುಕ್ತವಾಗಿ ಎಲ್ಲರಿಗೂ ಮಾತನಾಡಲು ಸಮಾನ ಅವಕಾಶ ಸಿಗಬಹುದೇನೋ ಮತ್ತು ಆಗಲಾದರೂ ಯಾರೂ ಆರ್ಡರ್ ಮಾಡದೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಭಿನ್ನ ದನಿಗಳಿಗೂ ಅಷ್ಟೇ ಗೌರವ ಕೊಟ್ಟು ಅದಾದರೂ ಪ್ರಜಾಸತ್ತಾತ್ಮಕವಾಗಿ ಕೆಲಸ ಮಾಡಬಹುದೇನೋ.

ಪ್ರಸಕ್ತ ಜಾಗತಿಕ ಲಿಂಗಾಯತ ಮಹಾಸಭೆಯ ಆಯಕಟ್ಟಿನ ಸ್ಥಳಗಳಲ್ಲಿ ‘ಪಂಚಮಸಾಲಿ’ ಹಾಗೂ ‘ಬಣಜಿಗ’ ಪಂಗಡದವರು ಹೊರತು ಪಡಿಸಿ ದುರ್ಬೀನು ಹಾಕಿ ಹುಡುಕಿದರೂ ಬೇರೊಂದು ಪಂಗಡದ ವ್ಯಕ್ತಿ ಸಿಗುವುದಿಲ್ಲ. ‘ಸಾದರು’ ಲಿಂಗಾಯತರಲ್ಲಿಯೇ ಮೂರನೇ ಅತಿದೊಡ್ಡ ಪಂಗಡದವರು. ಅವರಿಗೇ ಇಲ್ಲಿ ಪ್ರಾತಿನಿಧ್ಯ ಇಲ್ಲ. ಇನ್ನೂ ದನಿಯಿಲ್ಲದ ಸಮುದಾಯದ ನೂರೆಂಟು ಸಣ್ಣ ಸಣ್ಣ ಪಂಗಡಗಳಿಗೂ ಇಲ್ಲಿ ಪ್ರಾತಿನಿಧ್ಯ ಸಿಗಲು ಸಾಧ್ಯವೇ? 

ವೀರಶೈವ ಮಹಾ ಸಭೆಗೆ ಪರ್ಯಾಯವಾಗಿ ಜಾಗತಿಕ ಲಿಂಗಾಯತ ಮಹಾಸಭೆ ಹುಟ್ಟಿದ್ದು. ಇದಕ್ಕೆ ಇದ್ದದ್ದು ಎರಡೇ ಗುರಿ. ಒಂದು, ಲಿಂಗಾಯತ ಸಮುದಾಯದ ಎಲ್ಲಾ ಒಳ ಪಂಗಡದವರನ್ನು ಒಂದೆಡೆ ತರುವುದು. ಇನ್ನೊಂದು, ಲಿಂಗಾಯತರಿಗೆ ಧಾರ್ಮಿಕ ಅಲ್ಪಸಂಖ್ಯಾತ ಮಾನ್ಯತೆ ದೊರಕಿಸಿಕೊಡಲು ಬೀದಿಯಲ್ಲಿ ಹಾಗೂ ಕಾನೂನಾತ್ಮಕವಾಗಿ ಹೋರಾಡುವುದು. ಈ ಸಂಸ್ಥೆ ಇವೆರಡನ್ನೂ ಬಿಟ್ಟು ಮಿಕ್ಕಿದೆಲ್ಲವೂ ಮಾಡುತ್ತಿದೆ. ಅವರಡನ್ನೇ ಎಡೆಬಿಡದೆ ಮಾಡಿದರೆ ಇವತ್ತೂ ಲಿಂಗಾಯತರ ಪ್ರಾತಿನಿಧಿಕ ಸಂಸ್ಥೆಯಾಗುವ ಅರ್ಹತೆಯಾದರೂ ಅದು ಗಳಿಸುತ್ತಿತ್ತೆನೋ. 

ಸಮುದಾಯದ ಎಲ್ಲಾ ಪಂಗಡಗಳನ್ನು ಒಂದೆಡೆ ತರಲು ಇವರ ಕಾರ್ಯಸೂಚಿ ಏನೆಂದು ಇಲ್ಲಿಯವರೆಗೆ ಸ್ಪಷ್ಟಪಡಿಸಿಲ್ಲ. ಎಲ್ಲಾ ಪಂಗಡದವರನ್ನು ಕರೆದು, ಅವರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಉಸಾಬರಿಗೆ ಇವರು ಹೋಗಿಲ್ಲ. ಇಲ್ಲಿಯವರೆಗೆ ಹೋರಾಟದ ಕಿಚ್ಚು ಆರದಂತೆ ಇವರಿಂದ ಒಂದು ಸಣ್ಣ ಪ್ರಯತ್ನ ನಡೆದ ಕುರುಹೂ ಸಿಗುವುದಿಲ್ಲ. ಇನ್ನೂ ರಾಜ್ಯ ಸರ್ಕಾರದಿಂದ ‘ಅಲ್ಪಸಂಖ್ಯಾತ ಮಾನ್ಯತೆಗಾಗಿ’ ಕೇಂದ್ರ ಸರ್ಕಾರಕ್ಕೆ ಹೋದ ಅರ್ಜಿ ವಾಪಸ್ ಬಂದು ನಾಲ್ಕು ವರ್ಷ ಆಯಿತು. ಅದರ ಬಗ್ಗೆ ಸಣ್ಣ ದನಿಯೂ ಎತ್ತಿಲ್ಲ. ಆ ಅರ್ಜಿಯ ಹಣೆಬರಹ ಏನೆಂದು ಸಮುದಾಯದ ಜನಸಾಮಾನ್ಯರಿಗೆ ಅಲ್ಲದಿದ್ದರೂ ಮಠಾಧೀಶರಿಗೂ ತಿಳಿಸಿಲ್ಲ. ಇವರ ಕಾರ್ಯವೈಖರಿಯೇ ಗಮ್ಮತ್ತಾಗಿದೆ. 

ಐದು ವರ್ಷಗಳ ಹಿಂದೆ ಸಿದ್ದರಾಮಯ್ಯನವರಿಗೆ ‘ಸಾಮಾಜಿಕ ನ್ಯಾಯ’ದಲ್ಲಿರುವ ಬದ್ಧತೆ, ಕೆಲ ಲಿಂಗಾಯತ ರಾಜಕಾರಣಿಗಳ ಮುತುವರ್ಜಿ, ಒಗ್ಗಟ್ಟಿನಿಂದ ಧಾರ್ಮಿಕ ವ್ಯಕ್ತಿಗಳ – ಬಸವಾನುಯಾಯಿಗಳ ಸಕ್ರೀಯ ಪಾಲ್ಗೊಳ್ಳುವಿಕೆಯಿಂದ ಲಕ್ಷಾಂತರ ಜನರು ಹತ್ತಾರು ಸಮಾವೇಶದಲ್ಲಿ ಭಾಗವಹಿಸಿದರ ಫಲಶೃತಿ ಲಿಂಗಾಯತರ ಕೂಗು ಪ್ರಥಮ ಬಾರಿಗೆ ಸಾಗರದಾಚೆಯ ದಾಟಿತ್ತು. ಕರ್ನಾಟಕ ಸರ್ಕಾರ ಲಿಂಗಾಯತರೂ ಅಲ್ಪಸಖ್ಯಾತರೆಂದು ನಿರ್ಣಯಿಸಿ, ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಆಗಲೇ ‘ಬಸವ ಶಕ್ತಿ’ ಇಡೀ ನಾಡು ಕಂಡದ್ದು. ಅಂದು ಲಕ್ಷಾಂತರ ಜನರು ಸೇರುತ್ತಿದ್ದರು. ಈಗ ಈ ‘ಪ್ರಥಮ ಲಿಂಗಾಯತ ರಾಷ್ಟ್ರೀಯ ಮಹಾ ಅಧಿವೇಶನ’ದಲ್ಲಿ ನಾಲ್ಕಾರು ಸಾವಿರ ಜನ ಸೇರಿದರೆ ಸಮಾಜಕ್ಕೆ, ಮಾಧ್ಯಮಗಳಿಗೆ, ಕೇಂದ್ರ ಸರ್ಕಾರಕ್ಕೆ ಎಂಥಹ ಸಂದೇಶ ಹೋಗಬಹುದು. ಅಂತಿಮವಾಗಿ ಪೆಟ್ಟು ಬೀಳುವುದು ಹೋರಾಟಕ್ಕೆ ವಿನಾ ಜಾಗತಿಕ ಲಿಂಗಾಯತ ಮಹಾಸಭೆಗಲ್ಲ. ಇದರ ಹೊಣೆ ಯಾರು ಹೋರುವರು?  

ಇನ್ನೂ ಅಧಿವೇಶನಕ್ಕೆ ‘ಒಂದೂವರೆ ಕೋಟಿ’ ರೂಪಾಯಿ ಬೇಕೆಂದು ಅಂದಾಜು ವೆಚ್ಚ ಮಂಡಿಸಿದ್ದಾರೆ. ಈ ಹಣ ಎಲ್ಲಿಂದ ತರುತ್ತಾರೆ. ಇಷ್ಟೊಂದು ಖರ್ಚು ಮಾಡಿ ಈ ಸಮಾವೇಶ ಮಾಡುವಂತಹ ತುರ್ತಾದರೂ ಈಗ ಏನಿದೆ? 

ಅನೇಕರ ಅಸಮಾಧಾನದ ನಡೆವೆಯೂ ಹಠಕ್ಕೆ ಬಿದ್ದು ಹೊತ್ತಿಲದ್ದ ಹೊತ್ತಿನಲ್ಲಿ ಆತುರಾತುರವಾಗಿ ರಾಷ್ಟ್ರೀಯ ಮಹಾ ಅಧಿವೇಶನ ಮಾಡುತ್ತಿರುವುದೇಕೆ? ಈ ಅಧಿವೇಶನದ ಉದ್ದೇಶವಾದರೂ ಏನು? ಬಂದಿರುವ ಜನಕ್ಕೆ ನೆಕ್ಸ್ಟ್ ಪ್ರೋಗ್ರಾಂ ಆದರೂ ಏನು ಕೋಡುತ್ತಾರೆ? ಇವು ಸ್ಪಷ್ಟತೆ ಇದ್ದಂತೆ ಕಾಣುತ್ತಿಲ್ಲ. ಪಕ್ಕದ ಮಹಾರಾಷ್ಟ್ರದಲ್ಲಿ ಇಂದು ಲಿಂಗಾಯತ ಹೋರಾಟ ನಡೆಯುತ್ತಿದೆ. ಇದರಲ್ಲಿ ‘ಪ್ರಾತಿನಿಧಿಕ ಸಂಸ್ಥೆಯೆಂದು ಹೇಳಿಕೊಳ್ಳುವವರು ನೀವೇಕೆ ಪಾಲ್ಗೊಂಡಿಲ್ಲ’ ಎಂದು ಯಾರಾದರೂ ಗಟ್ಟಿ ಧೈರ್ಯ ಮಾಡಿ ಕೇಳಿದರೆ ನಿರುತ್ತರ ಆಗುತ್ತಾರೆ. ಈ ಸಂಘಟನೆ ಆರ್ಡರ್ ಮಾಡದೆ, ಮೊದಲು ಒಂದೆರಡು ವರ್ಷವಾದರೂ ಇವರು ಬೇಸ್ ಲೆವೆಲ್ಲಿಗೆ ಇಳಿದು ವರ್ಕ್ ಮಾಡಲಿ. 

ಈಗ ಈ ಸಂಘಟನೆ ಬೇಕಿರುವುದು ತಾಯಿ ಹೃದಯ,ರಾಷ್ಟ್ರೀಯ ಮಹಾ ಅಧಿವೇಶನ ಅಲ್ಲ. ಬೇಕಿದ್ದರೆ ಫೋಷಿಸಿದ ದಿನಾಂಕದಂದೇ, ಗೊತ್ತು ಪಡಿಸಿದ ಸ್ಥಳದಲ್ಲೇ ತಮ್ಮ ಸಂಘಟನೆಯ ಪದಾಧಿಕಾರಿಗಳ ಸಮಾವೇಶ ನಡೆಸಲಿ. ಇಲ್ಲದಿದ್ದರೆ ಸಮಾವೇಶ ಯಶಸ್ಸು ಮಾಡಲೇಬೇಕೆಂದು ಹಠಕ್ಕೆ ಬಿದ್ದು ಆರಂಭದ ದಿನವೇ ‘ಹಾರಕೂಡ ಸ್ವಾಮೀಜಿ’ಯವರ ಮಠಕ್ಕೆ ಹೋಗಿ ಅವರನ್ನೂ ಲಿಂಗಾಯತ ಅಧಿವೇಶನಕ್ಕೆ ರತ್ನಗಂಬಳಿ ಹಾಸಿ ಸ್ವಾಗತಿಸಿದಂತೆ, ಒಂದೆರಡು ವಾರದಲ್ಲಿ ವೀರಶೈವ ಮಹಾಸಭೆಯವರಿಗೂ ಕರೆಯಬೇಕಾದ ಪರಿಸ್ಥಿತಿ ಬಂದರೂ ಬರಬಹುದು. ಇಲ್ಲವೇ ಕಲ್ಯಾಣದ ಸುತ್ತಮುತ್ತಲಿನ ಹಳ್ಳಿಯ ಜನರನ್ನೇ ಕರೆದು ಮತ್ತೊಂದು ಜಾತ್ರೆ ಮಾಡಬೇಕಾಗುತ್ತದೆ.

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!