ನಮ್ಮ ಪುರಾತನ ಪುರಾಣ ಕತೆಗಳಲ್ಲಿ ಮಾಂಸದ ಭಕ್ಷಣೆಯ ಬಗ್ಗೆ ಅದ್ಭುತವಾದ ವಿವರಣೆಗಳಿವೆ.
ಆದರೂ ಸಹ ಸಾಮಾನ್ಯವಾಗಿ ಭಾರತೀಯರು ಸಸ್ಯಾಹಾರಿಗಳು ಎನ್ನುವ ಸಾರ್ವಜನಿಕ ಅಭಿಪ್ರಾಯ ಮುಂಚೂಣಿಯಲ್ಲಿದೆ. ದೇಶವಿದೇಶಗಳಲ್ಲಿ ಅನೇಕ ಸಮ್ಮೇಳನಗಳಲ್ಲಿ ಈ ರೀತಿಯಾಗಿ ಉದ್ಘರಿಸುವುದನ್ನು ಕೇಳಬಹುದು. ಶೇಕಡಾ ಅರವತ್ತರಷ್ಟು ಭಾರತೀಯರು ಮಾಂಸಹಾರಿಗಳಾಗಿದ್ದು, ಉಳಿದ ನಲವತ್ತಷ್ಟರಲ್ಲಿ ಅನೇಕರು ಸಂಪೂರ್ಣವಾಗಿ ಸಸ್ಯಾಹಾರಿಗಳಲ್ಲ. ಬಂಗಾಳದ ಬ್ರಾಹ್ಮಣರೂ ಸಹ ಮೀನನ್ನು ಬಳಸುತ್ತಾರೆ. ಆದರೆ ಅವರು ಜಾಣ್ಮೆಯಿಂದ ಇವು ನದಿಗಳಲ್ಲಿ ಬಿಡುವ ಫಲಪುಷ್ಟಗಳು ಎನ್ನುತ್ತಾರೆ. ಕೊಂಕಣಿ, ಗೌಡ್ ಸರಸ್ವತ್, ಕಶ್ಮೀರ, ಉತ್ತರಕಾಂಡ ಹೀಗೆ ಅನೇಕ ರಾಜ್ಯಗಳಲ್ಲಿ ಹೊರನೋಟಕ್ಕೆ ಸಸ್ಯಾಹಾರಗಳೇ ಎಂದು ಬಿಂಬಿಸಲಲ್ಪಟ್ಟ ಬ್ರಾಹ್ಮಣರೂ ಸಹ ಮಾಂಸಾಹಾರಿಗಳಾಗಿರುತ್ತಾರೆ. ಇನ್ನು ಮನೆಯಲ್ಲಿ ಸಸ್ಯಾಹಾರಿಗಳಾಗಿದ್ದು, ಹೊರಗಡೆ ಮಾಂಸಾಹಾರಿಗಳಾಗಿರುವವರು ಅನೇಕರಿದ್ದಾರೆ.
ಇನ್ನು ಕೆಲವರು ಸಸ್ಯಾಹಾರಿಗಳಾಗಿದ್ದರು ಹಾಲು ಮತ್ತು ಮೊಟ್ಟೆಯನ್ನು ಬಳಸುವ ಲ್ಯಾಕ್ಟೋ ಓವಾ ವೆಜಿಟೇರಿಯನ್ಸ್ ಎಂದೆನಿಸಿಕೊಳ್ಳುತ್ತಾರೆ. ಅಂದರೆ ಹಾಲು ಮತ್ತು ಮೊಟ್ಟೆಯನ್ನು ಬಳಸುವ ಸಸ್ಯಾಹಾರಿಗಳೆಂದು. ಅಮೇರಿಕಾದ ವೀಗನ್ಗಳು ಹಾಲನ್ನೂ ಕೂಡಾ ದ್ರವರೂಪದ ಮಾಂಸವೆಂದೇ ವರ್ಗಿಕರಿಸುತ್ತಾರೆ. ಕೆಲವು ವರ್ಷಗಳ ಹಿಂದೆ ಸಸ್ಯಹಾರಿಗಳಲ್ಲಿ ವಿಟಮಿನ್ ಬಿ12 ಕೊರತೆ ಭಾರತದಲ್ಲಿ ಕಾಣದಿರಲು ಒಂದು ವಿಚಿತ್ರ ಕಾರಣದ ಉಲ್ಲೇಖವಾಗಿತ್ತು. ಅದೇನೆಂದರೆ ತಮಗೆ ತಿಳಿಯದೇ ದವಸಧಾನ್ಯಗಳ ಮೂಲಕ ಕೀಟಭಕ್ಷಣೆಯಾಗುವುದರಿಂದವೆಂದು. ದವಸಧಾನ್ಯಗಳಿಗೆ ಕೀಟಬಾಧೆ ಸಹಜ. ಎಲ್ಲಾ ಮನೆಗಳಲ್ಲೂ ಇದು ತಿಳಿದಿರುವ ವಿಷಯ. ಕೀಟ ಹೊರಟುಹೋದರೂ ಕೈಕಾಲುಗಳು ಉದುರಿಹೋಗಿ ನಮ್ಮ ಉದರಕ್ಕೆ ಸೇರುವ ಎಲ್ಲಾ ಸಾಧ್ಯತೆಗಳು ಉಂಟು. ಹಿಂದಿನ ಆಹಾರ ಕಾಯಿದೆಯಲ್ಲಿಯೇ ಇಷ್ಟು ಕೀಟದ ಅಂಶ ಇದ್ದರೆ ತೊಂದರೆ ಇಲ್ಲ ಎನ್ನುವ ಉಲ್ಲೇಖವಿತ್ತು. ಭಾರತೀಯರು ಸಸ್ಯಾಹಾರಿಗಳೆನ್ನುವ ತಪ್ಪು ಕಲ್ಪನೆ ಮತ್ತು ಗರ್ವಕ್ಕೆ ವಿರುದ್ಧವಾಗಿ ಸುಮಾರು ಎರಡುಸಾವಿರದ ಆರುನೂರು ರೀತಿಯ ಕೀಟಭಕ್ಷಣೆಯೂ ಕೂಡಾ ಆಹಾರ ಸಂಸ್ಕೃತಿಯ ಭಾಗವೇ ಸರಿ.
ಮೂಲತಃ ನಾವು ಸಾವಿರಾರು ವರ್ಷಗಳ ಕಾಲ ಶಿಕಾರಿ ಮಾಡಿ ಬದುಕಿದ ಜೀವಿಗಳು. ಹಳೆಯ ಪಳೆಯುಳಿಕೆಯ ಮೂಳೆ ಮತ್ತು ಹಲ್ಲನ್ನು ಸ್ಟೇಬಲ್ ಐಸೋಟೋಪ್ಗಳ ಬಳಕೆ ವಿಧಾನದಿಂದ ಅವನ ಆಹಾರ ಪದ್ಧತಿ ಏನೆಂದು ವೈಜ್ಞಾನಿಕವಾಗಿ ಗುರುತಿಸಬಹುದು. ಸುಮಾರು ಮೂರು ನಾಲ್ಕು ಸಾವಿರ ವರ್ಷ ಹಿಂದೆನ ಯಾವ ಮನುಷ್ಯನ ಮೂಳೆ ಮತ್ತು ಹಲ್ಲಿನ ವಿಶ್ಲೇಷಣೆಯ ಪ್ರಕಾರ ಸಂಪೂರ್ಣ ಸಸ್ಯಾಹಾರಿಗಳಾಗಿರುವುದು ಕಂಡುಬರುವುದಿಲ್ಲ.ಡಾ. ಬಿ.ಆರ್. ಅಂಬೇಡ್ಕರ್ ಹೇಳುವಂತೆ ಬೌದ್ಧರು ಯಜ್ಞ ಯಾಗಗಳ್ಲಲಿ ಪ್ರಾಣಿವಧೆಯನ್ನು ಕಂಡು ಇದನ್ನು ತಮ್ಮ ಆಚರಣೆಯಲ್ಲಿ ನಿಷಿದ್ಧವೆಂದು ತೀರ್ಮಾನಿಸಿದರು. ಜೈನರು ಇದನ್ನು ಇನ್ನೂ ತೀವ್ರವಾಗಿ ಆಚರಿಸತೊಡಗಿದರು. ಈ ವಿಷಯದಲ್ಲಿ ಪೈಪೋಟಿಗಿಳಿದ ಹಿಂದೂ ವೈದಿಕರು ನಾವು ಯಜ್ಞಯಾಗಗಳಲ್ಲಿ ಮಾತ್ರವಲ್ಲದೆ ನಮ್ಮ ಆಹಾರ ಪದ್ಧತಿಯಿಂದಲೂ ಸಂಪೂರ್ಣ ನಿಷೇಧಿಸಿದ್ದೇವೆಂದು ಒಂದು ಹೆಜ್ಜೆ ಮುಂದೆ ಇಟ್ಟು ತಮ್ಮ ಶುದ್ಧತೆಯ ಶ್ರೇಷ್ಟತೆಯನ್ನು ಮೆರೆಯಲು ಹೊರಟರು. ಮೇಲು-ಕೀಳು ಎಂಬ ಶ್ರೇಣೀಕೃತ ವರ್ಗಕ್ಕೆ ಬುನಾದಿಯೇ ಈ ರೀತಿ ಆಚರಣೆಗೆ ಬಂದ ಆಹಾರಕ್ರಮವಾಯಿತು.
ಫ್ರಾನ್ಸ್ ದೇಶದ ಸಮಾಜಶಾಸ್ತ್ರಜ್ಞ ಪಿಯರ್ ಬರ್ಡ್ಯೂ (Pierre Bourdieu) ಹೇಳುವಂತೆ ಸಮಾಜದಲ್ಲಿ ವರ್ಗಬೇಧ ಕಲ್ಪನೆಗೆ ಆಧಾರವಾಗುವಂತದ್ದು ಒಂದು ವರ್ಗ ಬಳಸುವ ಆಹಾರ ಕ್ರಮ ಮತ್ತು ಅಲ್ಲಿ ಕೃತಕವಾಗಿ ಕಟ್ಟಲ್ಪಟ್ಟ ಶ್ರೇಷ್ಠತೆ. ಅವುಗಳನ್ನೇ ಒಂದು ಸಾಮಾಜಿಕ ಬಂಡವಾಳವಾಗಿ ಬಳಸಲಾಗುತ್ತದೆ. ಈ ಕೃತಕ ಮತ್ತು ಕಲ್ಪಿತ ಶ್ರೇಷ್ಠತೆಯೇ ತಮ್ಮ ವರ್ಗದ ಸುತ್ತ ಸಾಮಾಜಿಕ ಬೇಲಿಯಾಗಿ ಮಾರ್ಪಾಡಾಗುತ್ತದೆ. ಇಂತದ್ದೇ ವಾದವನ್ನು ಲಿ ಬೆಸ್ಕೋ ಮತ್ತು ನೆಖರಾಟ್ಟೋ ತಮ್ಮ ಎಡಿಬಲ್ ಐಡಿಯಾಲಜೀಸ್ ಎನ್ನುವ ಪುಸ್ತಕದಲ್ಲಿ ವಿಸ್ತರಿಸುತ್ತಾರೆ. ಇಂತಹ ವಿವರಗಳನ್ನು ಗಮನಿಸಲು ಎಲೀಟ್ ಅಥೆಂಟಿಸಿಟಿ ಎನ್ನುವ ಪುಸ್ತಕವನ್ನು ಗಮನಿಸಬಹುದು.
ಇನ್ನೊಂದೆಡೆ ಸುಮಾರು ಏಳುನೂರು ಸಸ್ಯಗಳು ಮಾಂಸಭಕ್ಷಕರು ಎನ್ನುವುದನ್ನು ಅನೇಕರು ಗಮನಿಸುವುದಿಲ್ಲ. ಇತ್ತೀಚೆಗೆ ನೇಚರ್ ನಿಯತಕಾಲಿಕ ಹೊಸ ಕೀಟಭಕ್ಷಕ ಸಸ್ಯವೊಂದರ ಬಗ್ಗೆ ಉಲ್ಲೇಖಿಸಿತ್ತು. ಕೀಟಗಳು ಗಿಡದ ಕೊಂಬೆಯ ಮೇಲೆ ಹರಿದಾಡುತ್ತಿದ್ದರೆ ತನ್ನ ಸೂಕ್ಷ್ಮ ಮುಳ್ಳುಗಳಿಂದ ಅಲ್ಲಿಯೇ ಬಂಧಿಸಿ ಕರಗಿಸಿ ನುಂಗಿ ನೊಣೆಯುವ ಸಸ್ಯಗಳ ವಿವರ ಸೋಜಿಗವೇ ಸರಿ. ಇಲಿ, ಹೆಗ್ಗಣಗಳನ್ನೇ ತಿಂದು ತೇಗುವ ಸಸ್ಯಗಳಿವೆ. ಶುದ್ಧ ಸಸ್ಯಹಾರಿ ಎನ್ನುವವರಿಗೆ ಇದು ಆಘಾತಕಾರಿಯೇ ಸರಿ.
ವಿಷಯ ಇಂತೆಲ್ಲಾ ಇರುವಾಗ ಬಡಮಕ್ಕಳಿಗೆ ಮೊಟ್ಟೆ ಕೊಡಬಾರದೆಂದು ಹೋರಾಟಕ್ಕಿಳಿದಿರುವವರ ಬಗ್ಗೆ ಏನು ಹೇಳಬೇಕೋ ತಿಳಿಯದು. ದಲಿತರ ಮಕ್ಕಳು ಇತರರಿಗಿಂತ ಶೇಕಡಾ ಹತ್ತರಿಂದ ಹದಿನೈದು ಪಟ್ಟು ಹೆಚ್ಚು ಅಪೌಷ್ಟಿಕತೆಯಿಂದ ನರಳತ್ತಿದ್ದಾರೆ. ಹಾಗೆಯೇ ದಲಿತರ ಜೀವಿತಾವಧಿ (Life expectancy at birth) ಕೂಡಾ ಉಳಿದವರಿಗಿಂತ ಸುಮಾರು ಹತ್ತು ವರ್ಷ ಕಮ್ಮಿಯಾಗಿರುವುದು ಸ್ವತಂತ್ರ್ಯ ಭಾರತದ ದುರಂತವೇ ಸರಿ. ಇಂದಿಗೂ ಹಸಿವು ಮತ್ತು ಅಪೌಷ್ಠಿಕತೆಯಿಂದ ಸುಮಾರು ಎಂಟು ಲಕ್ಷ ಮಕ್ಕಳು ಸಾವಿಗೀಡಾಗುತ್ತಾರೆ. ಕಡಿಮೆ ಆದಾಯವುಳ್ಳ ದೀನದಲಿತರಿಗೆ ಅತ್ಯಂತ ಹೆಚ್ಚು ಶಕ್ತಿ ಕೊಡುವ ಆಹಾರ ಪ್ರೋಟೀನ್ ಮತ್ತು ಕೊಬ್ಬುರಹಿತ ಏಕದಳ ಧಾನ್ಯಗಳೇ ಆಗಿರುತ್ತದೆ. ಅದರಲ್ಲೂ ಪಾಲೀಷ್ ಮಾಡಿದ ಅಕ್ಕಿ ಮತ್ತು ತೌಡು ತೆಗೆದ ಗೋಧಿ ಹಿಟ್ಟು ನಿತ್ಯ ಆಹಾರಕ್ಕೆ ಬಳಸುವ ಪದಾರ್ಥಗಳಾಗಿವೆ. ಹೀಗಾಗಿ ಬಡವರಲ್ಲಿ ಪ್ರೋಟೀನ್ ಮತ್ತು ಕೊಬ್ಬಿನ ಕೊರತೆ ಎದ್ದು ಕಾಣೂತ್ತದೆ. ನ್ಯಾಷನಲ್ ಸ್ಯಾಂಪಲ್ ಸರ್ವೆ ದತ್ತಾಂಶದ ಪ್ರಕಾರ ಇದು ಸ್ಪಷ್ಟವಾಗಿ ತಿಳಿದುಬರುತ್ತದೆ. ಮೊಟ್ಟೆ ಇವರ ಬದುಕಿನಲ್ಲಿ ಕೊರತೆಯುಂಟಾಗಿರುವ ಪ್ರೋಟೀನ್ ಮತ್ತು ಕೊಬ್ಬನ್ನು ಒದಗಿಸುವಲ್ಲಿ ಸರಿಯಾದ ಆಹಾರವಾಗಿರುತ್ತದೆ. ಇದರಲ್ಲಿ ಹೇರಳವಾಗಿ ದೊರಕುತ್ತಿರುವ ಕಾರ್ಬ್ಸ್ ಇಲ್ಲದಿರುವುದು ಮತ್ತು ಪ್ರೋಟೀನ್ ಮತ್ತು ಕೊಬ್ಬೇ ಹೆಚ್ಚಾಗಿ ಇರುವ ಏಕೈಕ ಆಹಾರವಾಗಿದೆ.
ಬೇಳೆಕಾಳುಗಳಲ್ಲಿ ಪ್ರೋಟೀನ್ ಇದ್ದರೆ ಕೊಬ್ಬು ಇರುವುದಿಲ್ಲ, ಎಣ್ಣೆ ಕಾಳುಗಳಲ್ಲಿ ಕೊಬ್ಬು ಮತ್ತು ಪ್ರೋಟೀನ್ ಇದ್ದರೂ ಮೊಟ್ಟೆಯಷ್ಟು ಸಾಂದ್ರತೆ ಮತ್ತು ಗುಣಮಟ್ಟ ಇರುವುದಿಲ್ಲ. ಇದಲ್ಲದೆ ಬಡವರಿಗೆ ಸಾಂಸ್ಕೃತಿಕವಾಗಿ ಮತ್ತು ಆರ್ಥಿಕವಾಗಿಯೂ ಬಯಸುವ ಆಹಾರವಾಗಿರುತ್ತದೆ. ವಿಶ್ವಸಂಸ್ಥೆಯ ಅಂಗಸಂಸ್ಥೆ ಫುಟ್ ಅಂಡ್ ಅಗ್ರಿಕಲ್ಚರ್ ಆರ್ಗನೈಸೇಷನ್ ತಿಳಿಸುವಂತೆ ಆಹಾರ ಭದ್ರತೆ ಆಹಾರ ಸಂಸ್ಕೃತಿಯ ಪ್ರಕಾರವಾಗಿರತಕ್ಕದ್ದು. ಈ ಬಹುಜನರ ಆಹಾರದ ಆಯ್ಕೆ ಮತ್ತು ಬಯಕೆಯನ್ನು ಧಿಕ್ಕರಿಸುವ ಮತ್ತು ಕಸಿದುಕೊಳ್ಳುವ ಹುನ್ನಾರವನ್ನು ಗ್ರಹಿಸಲಾಗದು. ಸಾಮಾನ್ಯವಾಗಿ ಹೀಗೆ ಹೇಳುವುದುಂಟು. ʼನಿಮಗೆ ನಿಮ್ಮ ಕೈಬೀಸುವ ಎಲ್ಲಾ ಸ್ವಾತಂತ್ರ್ಯವೂ ಇದೆ, ಆದರೆ ನನ್ನ ಮೂಗಿಗೆ ತಗುಲಕೂಡದುʼ.
ಬಡವರ ತಟ್ಟೆಗೆ ಕೈಹಾಕುವ ಈ ಪ್ರಯತ್ನ ನಿಜವಾಗಿಯೂ ಪ್ರಶ್ನಾರ್ಹವಾದುದು. ಮೇಲ್ವರ್ಗವೆಂದು ತಮಗೆ ತಾವೇ ಗ್ರಹಿಸಿಕೊಂಡಿರುವವರಲ್ಲಿ ಬಹುಜನರ ಆಯ್ಕೆಯನ್ನು ನಾವೇ ನಿರ್ಧರಿಸುತ್ತೇವೆ, ಅದು ನಮ್ಮ ಹಕ್ಕು ಎನ್ನುವ ಅಹಂಕಾರವಿದೆ. ಖ್ಯಾತ ಸಮಾಜಶಾಸ್ತ್ರಜ್ಞ ಆಂಡ್ರ್ಯೂ ಬೆಟೆಲ್ ಮಧುರೆಯ ಅಗ್ರಹಾರದಲ್ಲಿ ಕೆಲವು ಕಾಲ ಇದ್ದು ಅಗ್ರಹಾರದ ಮನೆಯ ಯಜಮಾನರಿಗೆ ನಾನು ಇನ್ನು ಕೆಲವು ಕಾಲ ದಲಿತರ ಬಗ್ಗೆ ಅಧ್ಯಯನ ಮಾಡಲು ಅವರ ಕೇರಿಯಲ್ಲಿ ವಾಸ ಮಾಡುತ್ತೇನೆ ಎಂದು ಹೊರಟಾಗ, ಅವರು ಹೀಗೆನ್ನುತ್ತಾರೆ. ʼಅವರ ಬಗ್ಗೆ ಅವರಿಗೇನು ಗೊತ್ತು? ನನ್ನನ್ನು ಕೇಳಿ ನಾನೇ ಹೇಳುತ್ತೇನೆʼ ಎಂದು. ಇದಕ್ಕೇ ಇರಬೇಕು ಮಹಾತ್ಮ ಗಾಂಧಿ ಒಮ್ಮೆ ತಮಗೆ ಅತ್ಯಂತ ಕಾಡುವ ಪ್ರಶ್ನೆ ಏನೆಂದು ಕೇಳಿದಾಗ ʼವಿದ್ಯಾವಂತರ ಕಲ್ಲುಹೃದಯ ʼ ಎಂದಿದ್ದರಂತೆ.
ಸಸ್ಯತಹಾರಿಗಳಿಗೆ ಮೊಟ್ಟೆಗೆ ತಕ್ಕ ಪರ್ಯಾಯ ಆಹಾರಗಳನ್ನು ಕೊಡತಕ್ಕದ್ದು. ಬಾಳೆಹಣ್ಣು ಒಂದಲ್ಲಾ ಹತ್ತು ಕೊಟ್ಟರೂ ಪರ್ಯಾಯವಲ್ಲ. ಬೇಳೆಕಾಳು, ಎಣ್ಣೆಕಾಳುಗಳನ್ನು ಸರಿದೂಗಿಸಿ ಕೊಡತಕ್ಕದ್ದು. ತಕ್ಷಣ ಕೆಲವರಿಗೆ ಅನ್ನಿಸಬಹುದು, ಇದನ್ನೇ ಅವರಿಗೂ ಕೊಡಬಹುದಲ್ಲಾ ಎಂದು. ಇಲ್ಲಿ ಅವರವರ ಸಾಂಸ್ಕೃತಿಕ ಆಯ್ಕೆ, ಬಯಕೆ ಮತ್ತು ಪೌಷ್ಟಿಕಾಂಶದ ಕೊರತೆಯನ್ನು ನೀಗಿಸುವ ಮಾಪನ ಗಮನಿಸತಕ್ಕದ್ದು.
ಕೊನೆಗೆ ಅಲ್ಲಮನ ವಚನವೊಂದನ್ನು ಅವಲೋಕಿಸುವುದು ಸೂಕ್ತ ಎನಿಸುತ್ತದೆ.
ಮದ್ಯ ಮಾಂಸಾದಿಗಳ ಮುಟ್ಟೆವೆಂದೆಂಬಿರಿ, ಕೀವು ಕೇಳಿರೆ.
ಮದ್ಯವಲ್ಲವೇನು ಅಷ್ಟಮದಂಗಳು
ಮಾಂಸವಲ್ಲವೇನು ಸಂಸಾರಸಂಗ?
ಈ ಉಭಯವನತಿಗಳದಾತನೆ
ಗುಹೇಶ್ವರಲಿಂಗದಲ್ಲಿ ಲಿಂಗೈಕ್ಯನು||
**
– ಕೆ.ಸಿ.ರಘು, ಖ್ಯಾತ ಆಹಾರ ತಜ್ಞ.