ದ ಪಾಲಿಟಿಕ್

ಪಂಚಮಸಾಲಿ ಮೀಸಲಾತಿ : ಬಿಜೆಪಿ ಪಾಲಿಗೆ ಅತ್ತ ಧರಿ – ಇತ್ತ ಪುಲಿ!

ಸಿದ್ದಪ್ಪ ಮೂಲಗೆ

ಸಿದ್ದಪ್ಪ ಮೂಲಗೆ

ಕಳೆದ ಆರೇಳು ತಿಂಗಳಿನಿಂದ ಪಂಚಮಸಾಲಿ ಸಮುದಾಯ 2A ಮೀಸಲಾತಿಗಾಗಿ ಸರ್ಕಾರದ ಮೇಲೆ ಇನ್ನಿಲ್ಲದ ಒತ್ತಡ ಹಾಕುತ್ತಿದೆ. ಹೋರಾಟದ ಮುಂಚೂಣಿಯಲ್ಲಿರುವ ಸಮುದಾಯದ ರಾಜಕಾರಣಿಗಳು ಹಾಗೂ ಜಯಮೃತ್ಯುಂಜಯ ಸ್ವಾಮೀಜಿ ಮುಖ್ಯಮಂತ್ರಿ ಬೊಮ್ಮಾಯಿಗೆ ‘ನಮ್ಮ ಬೇಡಿಕೆ ಈಡೇರಿಸದಿದ್ದರೆ ಯಡಿಯೂರಪ್ಪಗೆ ಆದ ಗತಿಯೇ ನಿಮಗೂ ಆಗುತ್ತದೆ’ ಎಂದು ಬಹಿರಂಗವಾಗಿ ಬೆದರಿಕೆ ಹಾಕುತ್ತಿದ್ದಾರೆ. ಈ ರೀತಿ ಬೆದರಿಕೆ ಹಾಕಿ, ಕೆಲಸ ಮಾಡಿಸಿಕೊಳ್ಳುವುದು ನಮ್ಮ ಜನ್ಮಸಿದ್ಧ ಹಕ್ಕು ಎಂದು ಪ್ರಬಲ ಸಮುದಾಯಗಳು ಭಾವಿಸಿ ಕಾಲವೇ ಆಗಿದೆ. 

ರಾಜಕೀಯ ವ್ಯಾಕರಣ ಚೆನ್ನಾಗಿ ಬಲ್ಲ ಬಿಜೆಪಿಗರು ಪಂಚಮಸಾಲಿ ಸಮುದಾಯಕ್ಕೆ ಬೆಳಗಾವಿಯ ಅಧಿವೇಶನ ಮುಗಿಯುವುದರ ಒಳಗಾಗಿಯೇ ಸಿಹಿಸುದ್ದಿ ನೀಡುವ ಸಾಧ್ಯತೆಯೇ ಹೆಚ್ಚಾಗಿವೆ. ಇಲ್ಲದಿದ್ದರೆ ಚುನಾವಣೆಯಲ್ಲಿ ಖಂಡಿತಾ ಪಕ್ಷಕ್ಕೆ ಡ್ಯಾಮೇಜ್ ಆಗುವ ಸಾದ್ಯತೆಯಿದೆ. ಮತ್ತೊಮ್ಮೆ ನಾವೇ ಸರ್ಕಾರ ರಚಿಸಬೇಕೆಂಬ ಉಮೆದಿನಲ್ಲಿರುವ ಭಾಜಪದವರು ಪಂಚಮಸಾಲಿಗರ ಬೇಡಿಕೆ ನಿರಾಕರಿಸಿ ರಿಸ್ಕ್ ತೆಗೆದುಕೊಳ್ಳುವ ಸಾಹಸಕ್ಕೆ ಕೈ ಹಾಕುವ ಸ್ಥಿತಿಯಲ್ಲಿ ಪಕ್ಷದ ಹೈಕಮಾಂಡ್ ಆಗಲಿ ಅಥವಾ ರಾಜ್ಯ ನಾಯಕರಾಗಲಿ ಇಲ್ಲ. 

ಈಗಾಗಲೇ ಮುಖ್ಯಮಂತ್ರಿಗಳು ಸಿಹಿಸುದ್ದಿ ನೀಡಲು ಎಲ್ಲಾ ತಯಾರಿ ಮಾಡಿಕೊಂಡಿದ್ದಾರೆಂದು ಬಲ್ಲ ಖಚಿತ ಮೂಲಗಳು ತಿಳಿಸಿವೆ. ಯತ್ನಾಳ್ ಆತ್ಮವಿಶ್ವಾಸದ ಮಾತುಗಳು ಇದಕ್ಕೆ ಪುಷ್ಟಿ ನೀಡುವಂತಿವೆ.  ಹಿಂದುಳಿದ ವರ್ಗಗಳ ಆಯೋಗದಿಂದ ವರದಿ (ಮಧ್ಯಂತರ) ತರಿಸಿಕೊಂಡು, ಅದು ಕ್ಯಾಬಿನೆಟ್ ಮುಂದಿಟ್ಟು , ಚರ್ಚಿಸಿ,  ಸದಸ್ಯರ ಒಪ್ಪಿಗೆ ಪಡೆದು ಮುಖ್ಯಮಂತ್ರಿಗಳು ಘೋಷಣೆ ಮಾಡುವ ಸಾಧ್ಯತೆ ದಟ್ಟವಾಗಿದೆ‌. ಯಡಿಯೂರಪ್ಪ ಸಹ ಪಂಚಮಸಾಲಿಗರಿಗೆ ಮಿಸಲಾತಿ ಹೆಚ್ಚಿಸಲು ಆಸಕ್ತರಾಗಿದ್ದಾರೆ.  ಇಂದು ಸದನ ನಡೆಯುತ್ತಿದ್ದಾಗಲೇ ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಯಡಿಯೂರಪ್ಪ ಅಕ್ಕಪಕ್ಕ ಕೂತು ಗುಸುಗುಸು ಮಾತಾಡಿದ್ದು ಪಾಸಿಟಿವ್ ಮೆಸೇಜ್ ಪಂಚಮಸಾಲಿಗರಿಗೆ ತಲುಪಿದೆ.  ಯಡಿಯೂರಪ್ಪ ಮುಖ್ಯಮಂತ್ರಿಗಳಿಗೆ ಈ ದಿಶೆಯಲ್ಲಿ ತಾಕೀತು ಮಾಡಿದ್ದಾರೆ ಎಂದು ಬಲ್ಲ ಮೂಲಗಳು ಖಚಿತ ಪಡಿಸಿವೆ. 

www.thepolitic.in

ಘೋಷಣೆ ಮಾಡಿದರೆ ಬಿಜೆಪಿ ನಾಯಕರು ಭಾವಿಸಿದಂತೆ ಚುನಾವಣೆಯಲ್ಲಿ ಪಂಚಮಸಾಲಿಗರಿಂದ ಪಕ್ಷಕ್ಕೆ  ಅನುಕೂಲವೇ ಆಗುತ್ತದೆ. ಸರ್ಕಾರದ ಈ ನಡೆ ಒಂದು ಕಡೆಯಿಂದ ಒಳಿತಾದರೆ ಇನ್ನೊಂದು ಕಡೆಯಿಂದ ಡ್ಯಾಮೇಜ್ ಆಗುವ ಸಾದ್ಯತೆಯೂ ಇದೆ. ಕಳೆದ ಮೂರು ದಶಕಗಳಿಂದ ‘ಒಳಮೀಸಲಾತಿ’ಗಾಗಿ ದನಿ ಎತ್ತಿರುವ ದಲಿತ ಸಮುದಾಯದ ಮಾದಿಗರಿಗೆ ಮತ್ತು ಈಗಾಗಲೇ 2A ಯಲ್ಲಿರುವ ಪ್ರಬಲ ಸಮುದಾಯಗಳಿಗೆ ಮತ್ತು ದನಿ ಇಲ್ಲದೆ ತಬ್ಬಲಿ ಸಮುದಾಯಗಳಿಗೆ ಸರ್ಕಾರದ ಈ ಉತ್ಸುಕತೆ ಕೆರಳಿಸುತ್ತದೆ. 

ಸಹಜವಾಗಿ ಸರ್ಕಾರ ಪಂಚಮಸಾಲಿಗರ ಮಿಸಲಾತಿಗೆ ತೋರಿಸುತ್ತಿರುವ ಉತ್ಸಾಹ ನಮ್ಮ ಸಮುದಾಯದ ಬೇಡಿಕೆಯಾದ ಒಳಮೀಸಲಾತಿಗೆ ತೊರಿಸುತ್ತಿಲ್ಲ ಎನ್ನುವ ಆಕ್ರೋಶ ಮಾದಿಗ ಸಮುದಾಯದಲ್ಲಿ ಭುಗಿಲೇಳಬಹುದು. ಈಗಾಗಲೇ ಬಿಜೆಪಿಯ ಬುಟ್ಟಿಯಲ್ಲಿರುವ ಮಾದಿಗ ಸಮುದಾಯದ ಮತಗಳು ಚದುರಿ ಹೋಗುವ ಸಾಧ್ಯತೇ ಹೆಚ್ಚಾಗಿವೆ. ಈ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಮಾನ್ಯತೆ ಕೊಡಿಸಲು ತೋರಿಸಿದ ಉತ್ಸುಕತೆ, ಮಾದಿಗರ ಶತಮಾನದ ಬೇಡಿಕೆಗೆ ತೋರಿಸಿಲ್ಲವೆಂದು ಮುನಿದು ಮಾದಿಗರ ಬಹುತೇಕ ಮತಗಳು ಕಾಂಗ್ರೆಸ್ ವಿರುದ್ಧವೇ ಬಿದ್ದಿದ್ದವು. ಮತ್ತೆ ಅದು ಈಗ ಬಿಜೆಪಿ ವಿಷಯದಲ್ಲಿ ಮರುಕಳಿಸುವ ಸಾಧ್ಯತೆ ಇದೆ. 

ಇದನ್ನೂ ಓದಿ : ಯತ್ನಾಳ್ ಬಿಜೆಪಿ ಪಕ್ಷದ ಮಿತ್ರನೋ?, ಶತ್ರುವೋ?

ಹಾಗೆಯೇ ಈಗಾಗಲೇ 2A ಕೆಟಗರಿಯಲ್ಲಿರುವ ಬಲಾಢ್ಯ ಸಮುದಾಯಗಳಿಗೆ ಮತ್ತು ದನಿಯಿಲ್ಲದ ತಬ್ಬಲಿ ಸಮುದಾಯಗಳಿಗೆ ಸರ್ಕಾರದ ಈ ನಡೆ ಅಘಾತ ತಂದು, ಬಿಜೆಪಿ ವಿರುದ್ಧ ತಿರುಗಿ ಬಿಳುವು ಸಾಧ್ಯತೆಗಳೂ ಇವೆ. ಪಂಚಮಸಾಲಿ ಮೀಸಲಾತಿ ವಿಷಯದಲ್ಲಿ ಸರ್ಕಾರ ಎಷ್ಟೇ ಅಳೆದು ತೂಗಿ ರಾಜಕೀಯ ಲೆಕ್ಕಾಚಾರ ಹಾಕಿ ಹೆಜ್ಜೆ ಹಾಕಿದರೂ ಅವರಿಗೆ ಮುಳುವಾಗುವ ಸಾಧ್ಯತೆಗಳಿವೆ. 

ಮೀಸಲಾತಿ, ಒಳಮೀಸಲಾತಿಯ ವಿಷಯದಲ್ಲಿ ಕಾಂಗ್ರೆಸ್ ಪಕ್ಷ ಬಿಜೆಪಿಯ ನಿಲುವೇನು ಎನ್ನುವುದು ಕಾದು ನೋಡುವ ತಂತ್ರದ ಮೊರೆ ಹೋಗಿದೆ. ಬಿಜೆಪಿ ಮೀಸಲಾತಿ ಎಂಬ ಜೇನು ಗೂಡಿಗೆ ಕೈಹಾಕಿದೆ. ಇದರ ಲಾಭ ಬಿಜೆಪಿ ಪಡೆಯುತ್ತದೆಯೋ ಅಥವಾ ಇದೇ ಅವರಿಗೆ ಮುಳುವಾಗಿ ಕಾಂಗ್ರೆಸ್ ಪಕ್ಷಕ್ಕೆ ವರವಾಗುತ್ತದೆಯೋ ಎನ್ನುವುದು ಸರ್ಕಾರ ಪಂಚಮಸಾಲಿಗರ ಮೀಸಲಾತಿಯಲ್ಲಿ ತೆಗೆದು ಕೊಳ್ಳುವ ನಿರ್ಣಯ ಮತ್ತು ಇದರಿಂದ ಅಧಿವೇಶನ ಮುಗಿದ ಮೇಲೆ  ಭುಗಿಲೇಳಬಹುದಾದ ಬೆಳವಣಿಗೆಗಳ ಮೇಲೆ ನಿರ್ಧಾರವಾಗುತ್ತದೆ.

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!