ದ ಪಾಲಿಟಿಕ್

ಅಂಬೇಡ್ಕರ್ ಮತ್ತು ಸಾಂಸ್ಥೀಕರಣ -ಪುರುಷೋತ್ತಮ ಬಿಳಿಮಲೆ

ದ ಪಾಲಿಟಿಕ್

ದ ಪಾಲಿಟಿಕ್

This image has an empty alt attribute; its file name is 94160cbe-0c2f-41aa-ba31-1d8c1ef40c71
PC :Telegraph India

20ನೇ ಶತಮಾನದ ಮಹಾವ್ಯಕ್ತಿಗಳಲ್ಲಿ ಡಾ. ಅಂಬೇಡ್ಕರ್ ಕೂಡಾ ಒಬ್ಬರು. ಅವರಷ್ಟು ಓದಿಕೊಂಡ ಇನ್ನೊಬ್ಬ ವಿದ್ವಾಂಸ ನಮಗೆ ಸಿಗುವುದಿಲ್ಲ. ರಾಜಕೀಯ ಶಾಸ್ತ್ರ, ಅರ್ಥಶಾಸ್ತ್ರ, ಮಾನವ ಶಾಸ್ತ್ರ, ತತ್ವಶಾಸ್ತ್ರ, ಇತಿಹಾಸ, ಸಮಾಜ ಶಾಸ್ತ್ರ, ಮತ್ತಿತರ ಜ್ಞಾನ ಶಾಖೆಗಳ ಮೇಲೆ ಅವರಿಗೆ ಅಪಾರ ಹಿಡಿತವಿತ್ತು. ಹಾಗೆ ನೋಡಿದರೆ ವಸಾಹತು ಕಾಲದ ಅಧ್ಯಯನಗಳು ಕೃತಕವಾಗಿ ಸೃಷ್ಟಿಸಿದ್ದ ಜ್ಞಾನದ ಗಡಿಗಳನ್ನು ಒಡೆದು ಅವರು ಮುಂದೆ ಸಾಗಿದ್ದರು. ತಮ್ಮ ಓದು ಒದಗಿಸಿಕೊಟ್ಟ ತಿಳಿವಳಿಕೆಗಳ ವಿಶ್ಲೇಷಣೆಗೆ ಅವರು ತಮ್ಮ ಅನುಭವಗಳನ್ನು ಆಧಾರವಾಗಿ ಬಳಸಿಕೊಳ್ಳುತ್ತಿದ್ದರು. ಹೀಗೆ ಅಧ್ಯಯನ ಮತ್ತು ಅನುಭವಗಳನ್ನು ಬಳಸಿ ಅವರು ಮಾತಾಡುತ್ತಿದ್ದ ಮತ್ತು ಬರೆಯುತ್ತಿದ್ದ ರೀತಿಗಳು ವಿಸ್ಮಯಕರವಾಗಿವೆ. ಹೆಚ್ಚಿನ ಭಾರತೀಯರಿಗೆ ಅವರೊಂದು ಮಾದರಿ.
ಸ್ವಾತಂತ್ರ್ಯೋತ್ತರ ಭಾರತದ ನೆಹರೂ ರಾಜಕಾರಣದ ಮಾದರಿಗಳು ಅಂಬೇಡ್ಕರ್ ಅವರನ್ನು ಮುಂಚೂಣಿಗೇನೂ ತಂದಿರಲಿಲ್ಲ. ಆದರೆ ಅದು ಅಂಬೇಡ್ಕರ್ ಕೊಡುಗೆಯಾದ ಸಂವಿಧಾನವನ್ನು ಗೌಣಗೊಳಿಸಿರಲಿಲ್ಲ.

70ರ ದಶಕದಲ್ಲಿ ಹುಟ್ಟಿಕೊಂಡ ಅನೇಕ ಚಳುವಳಿಗಳು ಅಂಬೇಡ್ಕರರನ್ನು ಮತ್ತೆ ಮುಂಚೂಣಿಗೆ ತಂದು ನಿಲ್ಲಿಸಿದುವು. ಮರಾಠಿಯಲ್ಲಿ ಹೇರಳವಾಗಿ ಪ್ರಕಟವಾದ ದಲಿತ ಆತ್ಮ ಕತೆಗಳು, ದೇಶದಾದ್ಯಂತ ಕಾಣಿಸಿಕೊಂಡ ದಲಿತ ಚಳುವಳಿಗಳು ಅಂಬೇಡ್ಕರ್ ಅವರ ಮಹತ್ವವನ್ನು ಜಗತ್ತಿಗೆ ಪರಿಚಯಿಸಿದವು. ಎಡ ಪಂಥೀಯ ಲೇಖಕರೂ ಕೂಡಾ ಅಂಬೇಡ್ಕರ್ ಪ್ರಾಮುಖ್ಯತೆಯನ್ನು ಮನಗಂಡು ಅಂಬೇಡ್ಕರ್ ಲೇಖನಗಳನ್ನು ಓದಲಾರಂಭಿಸಿದರು. ಚಳುವಳಿಗಳ ಭಾಗವಾಗಿ ಅಂಬೇಡ್ಕರ್ ಓದು ನಡೆಯುತ್ತಿದ್ದುದರಿಂದ ಅಂತ ಓದುಗಳಿಗೆ ಒಂದು ಬಗೆಯ ಕ್ರಿಯಾಶೀಲತೆಯೂ ಪ್ರಖರತೆಯೂ ಕಾಣಿಸಿಕೊಂಡಿತು. ಅಂಬೇಡ್ಕರ್ ಓದು ಯಾರಿಗೂ ಲಕ್ಸುರಿ ಆಗಿರಲಿಲ್ಲ.

ಅಂಬೇಡ್ಕರ್ ಅವರನ್ನು ಜೀವಂತವಾಗಿರಿಸುವುದೆಂದರೆ ಅವರ ವಿಗ್ರಹ ಮಾಡಿ ನಿಲ್ಲಿಸುವುದಲ್ಲ, ಬದಲು ಅವರನ್ನು ಹೋರಾಟದ ಭಾಗವಾಗಿ ಓದುವುದು.

ಆದರೆ 21ನೇ ಶತಮಾನದ ಮೊದಲ ದಶಕದ ಕೊನೆಯ ಹೊತ್ತಿಗೆ ಚಳುವಳಿಗಳು ಕ್ಷೀಣವಾದುವು. ಜಾಗತೀಕರಣದ ಪ್ರಭಾವಕ್ಕೆ ಒಳಗಾದ ತಲೆಮಾರಿಗೆ ಅಂಬೇಡ್ಕರ್ ಓದು ದಕ್ಕಿದ್ದು ಕಡಿಮೆಯೇ. ಅನೇಕ ದಲಿತ ವಿದ್ಯಾವಂತರಿಗೆ ಅಂಬೇಡ್ಕರ್ ಅವರ ಮಹತ್ವ ತಿಳಿದಿತ್ತು. ಆದರೆ ಅವರುಗಳು ಅಂಬೇಡ್ಕರನ್ನು ಒಂದು ಸಂಕೇತವಾಗಿ ಮಾತ್ರ ಗ್ರಹಿಸಿದರು. ಆಗ ಅಂಬೆಡ್ಕರ್ ಅವರ ಒಂದು ವಿಗ್ರಹ ಸ್ಥಾಪನೆ ಮಾಡಿಯೋ, ಮನೆಯೊಳಕ್ಕೆ ಅಂಬೇಡ್ಕರ್ ಅವರ ಭಾವ ಚಿತ್ರ ಇರಿಸುವಲ್ಲಿಗೋ ಹೋರಾಟ ಕೊನೆಗೊಳ್ಳುತ್ತಿತ್ತು. ಇದು ಮುಂದೆ ಅಂಬೇಡ್ಕರರ ಸಾಂಸ್ಥೀಕರಣ ಪ್ರಕ್ರಿಯೆಗೆ ನಾಂದಿ ಹಾಡಿತು. ಇದನ್ನು ಬಹಳ ಬೇಗ ಅರ್ಥಮಾಡಿಕೊಂಡ ಸರಕಾರಗಳು ವಿಗ್ರಹಗಳ ಸ್ಥಾಪನೆ ಮಾಡುತ್ತಾ ದಲಿತರ ನಿಜವಾದ ಸಮಸ್ಯೆಗಳಿಂದ ದೂರ ಸರಿಯಿತು. ಮೀಸಲಾತಿ ವಿರೋಧಿಗಳು ಕೂಡಾ ಇವತ್ತು ಅಂಬೇಡ್ಕರ್ ಹೆಸರು ಬಳಸುತ್ತಿರುವುದನ್ನು ಗಮನಿಸಿದರೆ ಹುನ್ನಾರ ಸ್ಪಷ್ಟ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ನಾವಿತ್ತು ಅಂಬೇಡ್ಕರರ ಸಾಂಸ್ಥೀಕರಣ ಪ್ರಕ್ರಿಯೆಗಳ ವಿರುದ್ಧ ಕೆಲಸ ಮಾಡಬೇಕಾಗಿದೆ

ಇದರ ಭಾಗವಾಗಿ ನಾವಿವತ್ತು ಮಾಡಬೇಕಾದ ಮುಖ್ಯ ಕೆಲಸವೆಂದರೆ, ಅಂಬೇಡ್ಕರ್ ಅವರನ್ನು ಗಂಭೀರವಾಗಿ ಓದುವುದು. ಅಂಬೇಡ್ಕರ್ ಲೇಖನಗಳು, ಭಾಷಣಗಳು ನಮಗಿವತ್ತು ನಮ್ಮ ಭಾಷೆಯಲ್ಲಿಯೇ ಕಡಿಮೆ ಬೆಲೆಗೆ ಓದಲು ಸಿಗುತ್ತವೆಯಾದ್ದರಿಂದ ಈ ವಿಷಯದಲ್ಲಿ ಹಿಂದೆ ಮುಂದೆ ನೋಡಬೇಕಾಗಿಲ್ಲ. ಬೇರೆಯವರು ಅಂಬೇಡ್ಕರ್ ಕುರಿತು ಹೇಳಿದ ಮಾತುಗಳ ಮೂಲಕ ನಾವು ಅಂಬೇಡ್ಕರರಿಗೆ ಪ್ರತಿಕ್ರಿಯಿಸಬೇಕಾಗಿಲ್ಲ. ಅಂಬೇಡ್ಕರ್ ಅವರ ಕುರಿತು ತಿಳಿದುಕೊಳ್ಳುವುದೆಂದರೆ, ಅದಕ್ಕೆ ಪೂರ್ವಭಾವಿಯಾಗಿ ಅಂಬೇಡ್ಕರ್ ಅವರ ಬರೆಹಗಳನ್ನು ಮೂಲದಲ್ಲಿಯೇ ಪೂರ್ತಿಯಾಗಿ ಓದುವುದು, ಆನಂತರ ಅವುಗಳ ಬಗ್ಗೆ ಬಂದಿರುವ ಪರ-ವಿರೋಧಗಳನ್ನು ಅಭ್ಯಾಸ ಮಾಡುವುದು, ವಿವಿಧ ವಿದ್ವಾಂಸರುಗಳ ಜೊತೆಗೆ ಅವುಗಳ ಬಗ್ಗೆ ಚರ್ಚಿಸುವುದು, ವಿಚಾರ ವಿಮರ್ಶೆ ಮಾಡುವುದು, ಮತ್ತು ಕೊನೆಯಲ್ಲಿ ಸಾಧ್ಯವಾದರೆ ಅಂಬೇಡ್ಕರ್ ಕುರಿತ ತನ್ನ ಓದಿನ ಅನುಭವಗಳ ಕುರಿತು ಒಂದು ಪ್ರಬಂಧವನ್ನು ಪ್ರಾಮಾಣಿಕವಾಗಿ ಬರೆಯುವುದು. ಈ ಪ್ರಕ್ರಿಯೆಯು ಅಂಬೇಡ್ಕರ್ ಅವರನ್ನು ಸಾಂಸ್ಥೀಕರಣಕ್ಕೆ ಒಳಪಡಲು ಬಿಡುವುದಿಲ್ಲ. ಜೊತೆಗೆ ಈ ಒಟ್ಟೂ ಕೆಲಸಗಳು ನಮ್ಮ ಓದುವ, ಪ್ರಶ್ನಿಸುವ ಸಾಮಥ್ರ್ಯವನ್ನು ವಿಶೇಷವಾಗಿ ಹೆಚ್ಚಿಸಿ, ಅಲೋಚನೆಗೆ ಅವಕಾಶ ಮಾಡಿಕೊಡುತ್ತದೆ.
ಈ ಪ್ರಕ್ರಿಯೆಯು ಸಾಮಾನ್ಯವಾಗಿ ಬಲಪಂಥೀಯರಿಗೆ ವಿಶೇಷವಾಗಿ ಅರ್ಥವಾಗುವುದಿಲ್ಲ. ಅವರಿಗೆ ಸಾಂಸ್ಥೀಕರಣದಲ್ಲಿಯೇ ವಿಶೇಷ ಆಸಕ್ತಿ. ದೇಶದಾದ್ಯಂತ ಹರಡಿಕೊಂಡಿದ್ದ ಶ್ರೀರಾಮನ ಕಲ್ಪನೆಯನ್ನು ಕೂಡಾ ಅವರು ಸಾಂಸ್ಥೀಕರಿಸಿ ಅಯೋಧ್ಯೆಯಲ್ಲೊಂದು ರಾಮ ದೇವಸ್ಥಾನ ಕಟ್ಟುವುದನ್ನು ನಾವು ಗಮನಿಸಿದ್ದೇವೆ. ಒಂದು ರೀತಿಯಿಂದ ಇದು ಸುಲಭದ ಮಾರ್ಗ. ಇದನ್ನು ಮಾಡಲು ನೀವು ರಾಮಾಯಣ ಓದಬೇಕಾಗಿಲ್ಲ. ಬದಲು ಕೈಯಲ್ಲೊಂದು ಇಟ್ಟಿಗೆ ಹಿಡಿದುಕೊಂಡರೆ ಸಾಕು.

ಪುರುಷೋತ್ತಮ ಬಿಳಿಮಲೆ

ದೆಹಲಿಯ ಜವಾಹರಲಾಲ ನೆಹರೂ ವಿಶ್ವವಿದ್ಯಾಲಯದಲ್ಲಿ ಮೀಸಲಾತಿಗೆ ವಿರೋಧಿಗಳಾಗಿದ್ದವರು ಕೂಡಾ ಅಂಬೇಡ್ಕರ್ ಹೆಸರನ್ನು ಗ್ರಂಥಾಲಯಕ್ಕೆ ಇಡಬೇಕೆಂದು ಕೂಗಾಡಿದ್ದರು. ನಮಗೆ ಬೇಕಾದುದು ಮೀಸಲಾತಿಯೆ ವಿನಾ ಬೇರೇನೂ ಅಲ್ಲ ಅಂತ ಕೂಗಿ ಹೇಳಬೇಕಾದವರೂ ಈ ಸಾಂಸ್ಥೀಕರಣ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಮುಖ್ಯ ಉದ್ದೇಶವನ್ನೇ ಮರೆತರು. ನಿರಂತರವಾಗಿ ನಡೆಯುತ್ತಿರುವ ಇಂಥ ವಿದ್ಯಾಮಾನಗಳಿಗೆ ನಿಜವಾದ ಅಂಬೇಡ್ಕರ್ವಾದಿಗಳು ಸಂಭ್ರಮಿಸಲಾರರು, ಸಂಭ್ರಮಿಸಕೂಡದು. ನಿಜವಾಗಲೂ ಇವು ಅಂಬೇಡ್ಕರರನ್ನು ಪರೋಕ್ಷವಾಗಿ ಅಪ್ರಸ್ತುತಗೊಳಿಸುವ ಕೆಲಸ ಎಂಬುದನ್ನು ಅರ್ಥಮಾಡಿಕೊಂಡಷ್ಟೂ ನಮಗೆ ಕ್ಷೇಮ. ಇದೇ ಜೆ ಎನ್ ಯುವಿನಲ್ಲಿ ನಡೆದ ನೇಮಕಾತಿಗಳಲ್ಲಿ ಮೀಸಲಾತಿ ನಿಯಮಗಳನ್ನು ಮೀರಿದ ಘಟನೆಗಳು ನಡೆದು, ಅವುಗಳ ಬಗ್ಗೆ ರಾಷ್ಟ್ರಪತಿಗಳಿಗೂ ದೂರು ಸಲ್ಲಿಸಲಗಿದೆ.

ಪ್ರತಿ ವರ್ಷವೂ ಅಂಬೇಡ್ಕರ್ ದಿನಾಚರಣೆಯನ್ನು ಸರಕಾರೀ ಅಧಿಕಾರಿಗಳ ಉಪಸ್ಥಿತಿಯಲ್ಲಿ ಭವ್ಯವಾಗಿ ನಡೆಸಲು ಪ್ರಯತ್ನಿಸಲಾಗುತ್ತಿದೆ. ಆದರೆ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಸಲ್ಲಬೇಕಾದ ಹಣವನ್ನು ನೀಡಲು ಅವರಲ್ಲಿ ವ್ಯವಸ್ಥೆಯಿಲ್ಲ. ಕರ್ನಾಟಕ ಸರಕಾರವಂತೂ ಲಿಂಗಾಯತ -ವೀರಶೈವರಿಗೇ ಮೀಸಲಾತಿ ನೀಡಲು ಯೋಚಿಸುತ್ತಿದೆ ಎಂದರೆ ಮೀಸಲಾತಿಯ ಪರಿಕಲ್ಪನೆ ಎಲ್ಲಿಗೆ ಬಂತು ನಿಂತಿತು? ನಿಜವಾಗಲೂ ಇವರಿಗೆ ಅಂಬೇಡ್ಕರ್ ಹೆಸರು ಹೇಳುವ ಯೋಗ್ಯತೆಯೂ ಇಲ್ಲ.
ಅಂಬೇಡ್ಕರ್ ಅವರನ್ನು ಇವತ್ತು ಒಂದು ಸ್ಥಿರ ಪಠ್ಯವಾಗಿ ಅಥವಾ ಸಾಂಸ್ಥಿಕ ಪಠ್ಯವಾಗಿ ಗ್ರಹಿಸುವ ವಿಧಾನವನ್ನು ನಾವು ಬಿಟ್ಟುಬಿಡಬೇಕು. ಅಂಬೇಡ್ಕರ್ ಅವರನ್ನು ಹೀಗೆಯೇ ಬೋಧಿಸಬೇಕೆಂದು ಯಾರೂ ಹೇಳಬಾರದು. ಅವರ ಕುರಿತಾದ ಪ್ರಶ್ನೆಗಳು ಹೇಗಿರಬೇಕೆಂದು ಯಾರೂ ಸೂಚಿಸಬಾರದು. ವಸ್ತುನಿಷ್ಟ ಮಾದರಿಯ ಡಿಜಿಟಲ್ ಸಂಕೇತಗಳಿಂದ ಅಂಬೇಡ್ಕರ್ ಅವರನ್ನು ದೂರ ಇಡುವುದು ಬಹಳ ಅಗತ್ಯ. ಈ ಬಗೆಯ ತಾತ್ವಿಕ ಅರಾಜಕತೆಯು ಅಂಬೇಡ್ಕರ್ ಅವರನ್ನು ಹೆಚ್ಚು ಹೆಚ್ಚು ಹತ್ತಿರ ತರುತ್ತದೆ ಎಂದು ನಾನಂತೂ ಭಾವಿಸುತ್ತೇನೆ.

ಅಂಬೇಡ್ಕರ್ ಅವರ ಕುರಿತಾದ ಒಂದು ಪ್ರಶ್ನೆಗೆ ನಿರ್ದಿಷ್ಟವಾದ ಒಂದೇ ಉತ್ತರ ಇರುತ್ತದೆ ಎಂದು ನಾವ್ಯಾಕೆ ನಂಬಬೇಕು? ಹೀಗೆ ಮಾಡಿದ ತಕ್ಷಣ ತಂತ್ರಜ್ಞಾನವು ಅಂಬೇಡ್ಕರ್ ಮೇಲೆ ನಿಯಂತ್ರಣ ಸಾಧಿಸಲಾರಂಭಿಸುತ್ತದೆ. ಸದ್ಯಕ್ಕೆ ಅಂಬೇಡ್ಕರರನ್ನು ಯಾರೂ ನಿಯಂತ್ರಿಸುವುದು ಬೇಡ. ‘ಅಂಬೇಡ್ಕರರ ಅತ್ಯಂತ ಗಹನವಾದ ಮತ್ತು ವಿಸ್ತಾರವಾದ ಓದನ್ನು ನಾನು ಜನರಿಂದ ಬಯಸುತ್ತೇನೆ’ ಎಂದು ಚಿಂತಕ ಪ್ರೊ.ವಿವೇಕ ಕುಮಾರ್ ಹೇಳುತ್ತಾರೆಯೇ ವಿನಾ, ‘ಇಲ್ಲಿ ಅಂಬೇಡ್ಕರ್ ಅವರ ವಿಗ್ರಹ ಸ್ಥಾಪಿಸಲು ಒತ್ತಡ ಹಾಕೋಣ’ ಎಂದು ಹೇಳುವುದೇ ಇಲ್ಲ. ‘ಬುದ್ದ ಮತ್ತು ಮಾರ್ಕ್ಸ್’ ನ ಕುರಿತ ಅಂಬೇಡ್ಕರ್ ಅವರ ವಿಚಾರಗಳನ್ನು ನಾವೆಲ್ಲರೂ ಓದುವ ಅಗತ್ಯವಿದೆ’ ಎಂದು ಬಿಹಾರದ ಚಳುವಳಿಗಾರ ಪ್ರೊ. ರಾಮಚಂದ್ರ ಅವರು ಹೇಳುತ್ತಾರೆ. ‘ ಅಂಬೇಡ್ಕರ್ ಅವರ ಬುದ್ದ ತತ್ವ ಮತ್ತು ಭಗವದ್ಗೀತೆ ಕುರಿತ ಗಾಂಧೀಜಿಯ ನಿಲುವುಗಳನ್ನು ತೌಲನಿಕವಾಗಿ ಓದಿ ನೋಡಿ’ ಎಂದು ಫ್ರೆಂಚ್ ವಿದ್ವಾಂಸ ಪ್ರೊ. ಅಜಿತ್ ಖನ್ನಾ ಅವರು ಕರೆನೀಡುತ್ತಾರೆ. ‘ರಾಜ್ಯಗಳ ಸ್ವಾಯತ್ತೆ ಮತ್ತು ರಾಜ್ಯ ಭಾಷೆಗಳ ಕುರಿತು ಅಂಬೇಡ್ಕರ್ ಹೇಳಿದ ವಿಚಾರಗಳನ್ನು ಇವತ್ತು ಮರುಪರಿಶೀಲನೆಗೆ ಒಳಪಡಿಸಬೇಕಾಗಿದೆ’ ಎಂದು ಬಹುಜನ ಪಕ್ಷದ ಚಿಂತಕ ಪ್ರೊ. ಕಾಜಲ್ ಅವರು ಹೇಳುತ್ತಾರೆ.

PC: Live Law

ಇದು ಅಂಬೇಡ್ಕರ್ ಅವರ ಕುರಿತಾದ ಸಕಾರಾತ್ಮಕ ಧೋರಣೆ ಎಂದು ನನ್ನಂಥವರು ಭಾವಿಸುತ್ತಾರೆ. ‘ಅಂಬೇಡ್ಕರ್ ಕುರಿತಾದ ಚರ್ಚೆಗಳು ನಮ್ಮನ್ನು ತತ್ವಶಾಸ್ತ್ರದ ಎತ್ತರದ ನೆಲೆಗಳಿಗೆ ಕೊಂಡೊಯ್ಯ ಬೇಕೆಂದು’ ಪ್ರೊ. ಅವಿಜಿತ್ ಪಾಠಕ್ ವಾದಿಸುತ್ತಾರೆ.ಚಾರಿತ್ರಿಕವಾಗಿ ಭಾರತದ ಶಿಕ್ಷಣ ವ್ಯವಸ್ಥೆಯು ಪರಾವಿದ್ಯೆಗೆ ಹೆಚ್ಚು ಮಹತ್ವ ನೀಡಿ ಬ್ರಾಹ್ಮಣ ಕೇಂದ್ರಿತವಾಗಿದ್ದುದನ್ನು ಅಂಬೇಡ್ಕರ್ ಅವರು ನಿಷ್ಠುರವಾದ ವಿಮರ್ಶೆಗೆ ಒಳಪಡಿಸಿದ್ದರು. ಬ್ರಾಹ್ಮಣ್ಯದ ಪರವಾಗಿ ಬಲವಾಗಿ ವಾದಮಂಡನೆ ಮಾಡುವ ಮನುಸ್ಮೃತಿಯನ್ನು ಅವರು ಬೆಂಕಿಗೆಸೆದಿದ್ದರು. ಮುಂದೆ ಅಂಬೇಡ್ಕರ್ ಅವರು ಭಾರತಕ್ಕೊಂದು ಸಂವಿಧಾನವನ್ನು ಬರೆದಾಗ ದಲಿತರು-ಹಿಂದುಳಿದವರು ಶಿಕ್ಷಣ ಪಡೆಯಬೇಕಾದ ಅಗತ್ಯಗಳನ್ನು ಪ್ರತಿಪಾದಿಸಿದ್ದರು. ಅಂಬೇಡ್ಕರ್ ಅವರ ಸಾರ್ವಜನಿಕ ಶಿಕ್ಷಣದ ಪರಿಕಲ್ಪನೆಗೆ ಎರಡು ಆಯಾಮಗಳಿದ್ದುವು-ಒಂದು, ಶಿಕ್ಷಣದ ಮೇಲಿನ ಮೇಲ್ಜಾತಿಗಳ ಹಿಡಿತವನ್ನು ಸಡಿಲಿಸುವುದು ಮತ್ತು ಎರಡು, ಬಡವರಿಗೂ ಉತ್ತಮ ಶಿಕ್ಷಣ ಸಿಗುವಂತೆ ಮಾಡುವುದು. ಆದರೆ ಸರಕಾರಗಳು, ಖಾಸಗೀ ಶಿಕ್ಷಣ ಸಂಸ್ಥೆಗಳು ಶುಲ್ಕ ಹೆಚ್ಚಿಸುವಾಗ ನಾವೇನು ಮಾಡಿದೆವು? ದೇಶದಲ್ಲಿ ಇನ್ನಷ್ಟು ರೋಹಿತ ವೇಮುಲಾರನ್ನು ಸಾಯಲು ನಾವು ಬಿಡಬಾರದಲ್ಲವಾ?

ಅಂಬೇಡ್ಕರ್ ಅವರನ್ನು ಜೀವಂತವಾಗಿರಿಸುವುದೆಂದರೆ ಅವರ ವಿಗ್ರಹ ಮಾಡಿ ನಿಲ್ಲಿಸುವುದಲ್ಲ, ಬದಲು ಅವರನ್ನು ಹೋರಾಟದ ಭಾಗವಾಗಿ ಓದುವುದು.

ಪುರುಷೋತ್ತಮ ಬಿಳಿಮಲೆ
ನವದೆಹಲಿ

Support thepolitic.in for independent and Fearless voice.

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!