ದ ಪಾಲಿಟಿಕ್

ಅಂಬೇಡ್ಕರ್ ಈಗ ಯಾರಿಗೂ ಬೇಡವಾಗಿರುವ ಅನಾಥ!

ದ ಪಾಲಿಟಿಕ್

ದ ಪಾಲಿಟಿಕ್

ಸ್ವಾತಂತ್ರ್ಯ ಬಂದು 75 ವರ್ಷಗಳಾದ ಈ ಹೊತ್ತಿನಲ್ಲಿ ದೇಶದ ಆತ್ಮವಾದ ಸಂವಿಧಾನವನ್ನು ಮತ್ತಷ್ಟು ಸದೃಢ ಪಡಿಸುವ ಸಂವಾದಗಳಾಗಬೇಕಿತ್ತು. ಆದರೆ ‘ಸಂವಿಧಾನವ ಉಳಿಸಿ’ ಎಂದು ಕೇಳಿಕೊಳ್ಳುವ ದೈನೇಸಿ ಪರಿಸ್ಥಿತಿ ನಿರ್ಮಾಣವಾಗಿದೆ. ಸಂವಿಧಾನ ಬರೆದ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ವಿಷಯ ಕೂಡ ಅಷ್ಟೇ. ವೈಚಾರಿಕವಾಗಿ ಎಲ್ಲರೆದೆಗೂ ಪದಕವಾಗಬೇಕಿದ್ದ ಅಂಬೇಡ್ಕರ್ ಈಗ ಯಾರಿಗೂ ಬೇಡವಾಗಿರುವ ಅನಾಥ. ರಾಜಕೀಯವಾಗಿ, ಬರಿ ಮಾತಿಗಾಗಿ, ಬರಿ ಮತಕ್ಕಾಗಿ ಎಲ್ಲರಿಗೂ ಬೇಕಿರುವ ಜಗನ್ನಾಥ!

ಪಂಡಿತ್ ಜವಹರಲಾಲ್ ನೆಹರೂ ಮತ್ತು ಮಹಾತ್ಮ ಗಾಂಧೀಜಿ ಅವರನ್ನು ಹೊತ್ತು ಮೆರೆಸುವ ಕಾಂಗ್ರೆಸ್ ಅಂಬೇಡ್ಕರ್ ಅವರನ್ನು ಎಂದೂ ಆಂತರ್ಯಕ್ಕೆ ಆಹ್ವಾನಿಸಲೇ ಇಲ್ಲ. ಇನ್ನೊಂದೆಡೆ ಬಿಜೆಪಿ ಪ್ರತಿದಿನವೂ ಅಂಬೇಡ್ಕರ್ ಬಗ್ಗೆ ಹೊಸ ಹೊಸ ಸುಳ್ಳುಗಳನ್ನು ಸೃಷ್ಟಿಸಿ ಅವರ ನಿಜವಾದ ವಿಚಾರಧಾರೆಯನ್ನು ತಿರುಚುತ್ತಿದೆ. ‘ಸಂವಿಧಾನ ಬರೆದದ್ದು ಅಂಬೇಡ್ಕರ್ ಒಬ್ಬರೇ ಅಲ್ಲ’ ಎಂದು ಹೇಳುವ ಮೂಲಕ ಅಂಬೇಡ್ಕರ್ ಅವರಿಗಿದ್ದ ಅಗಾಧ ಸಾಮರ್ಥ್ಯವನ್ನು ಓರೆಗಚ್ಚುತ್ತಿದೆ. ಅಷ್ಟೇಯಲ್ಲ, ‘ಸಂವಿಧಾನ ಬರೆದ ಹೆಚ್ಚುಗಾರಿಕೆ’ಯನ್ನು ಕಸಿಯುವ ಕುತಂತ್ರವನ್ನೂ ಮಾಡುತ್ತಿದೆ.

ಇಂದು ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಪರಿನಿರ್ವಾಣವಾದ ದಿನ. ಅಂಬೇಡ್ಕರ್ ಎನ್ನುವುದು ಎಂದೂ ನಂದದ ದೀಪವಾದರೂ ದೈಹಿಕವಾಗಿ ಅವರು ಇಲ್ಲವಾಗಿ ಇಂದಿಗೆ 68 ವರ್ಷ. ಇಂದಾದರೂ ಅವರ ಬಗ್ಗೆ, ಅವರ ಹೆಸರಿಗಾಗುತ್ತಿರುವ ಅಪಚಾರದ ಬಗ್ಗೆ, ಅಪಪ್ರಚಾರದ ಬಗ್ಗೆ ಚರ್ಚೆ ಮಾಡಬೇಕು. ಅವರಚ್ಚಿದ ಹಣತೆಯಲ್ಲಿ ಬೆಳಕು ಕಾಣುವ ಬದಲು ಕಾರ್ಮೋಡದ ಕಡೆಗೆ ಸಾಗುತ್ತಿರುವ ದೇಶವಾಸಿಗಳನ್ನು ಎಚ್ಚರಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಅಂಬೇಡ್ಕರ್ ಕೊಟ್ಟ ಸಂವಿಧಾನದ ಬಗ್ಗೆ, ಅವರು ಕಂಡ ಕನಸುಗಳಾದ ಜಾತಿನಾಶ, ಸಮಸಮಾಜ, ಸಂಪತ್ತಿನ ಸಮರ್ಪಕ ಹಂಚಿಕೆಗಳ ಬಗ್ಗೆ ಮಾತನಾಡಬೇಕು.

ನಮಗೆ ಆನೆಗಿರುವ ಎರಡು ಹಲ್ಲುಗಳು (ದಂತಗಳು) ಕಾಣುತ್ತವೆ. ಆದರೆ ಆನೆ ತಿನ್ನುವುದು ಬಾಯೊಳಗಿರುವ ಹಲ್ಲುಗಳಿಂದ. ಬಿಜೆಪಿ, ಆರ್‌ಎಸ್‌ಎಸ್ ಹಾಗು ಇನ್ನಿತರ ಸಂಘಪರಿವಾರದ ಸಂಸ್ಥೆಗಳ ಕಾರ್ಯವೈಖರಿ ಆನೆಯ ರೀತಿ. ಅವು ಹೇಳುವುದೊಂದು, ಮಾಡುವುದೊಂದು. ಸಂವಿಧಾನದ ವಿಷಯವನ್ನೇ ತೆಗೆದುಕೊಂಡರೆ, ನಿರಂತರವಾಗಿ ಸಂವಿಧಾನವನ್ನು ದುರ್ಬಲಗೊಳಿಸುತ್ತಿವೆ (ಹಿಂದೆ ಕಾಂಗ್ರೆಸ್ ಕೂಡ ಹಲವು ತಿದ್ದುಪಡಿಗಳ ಮೂಲಕ ಈ ಕೆಲಸ ಮಾಡಿದೆ). ಬಿಜೆಪಿಯ ಮಂತ್ರಿಯೊಬ್ಬರು ‘ನಾವು ಬಂದಿರುವುದೇ ಸಂವಿಧಾನ ಬದಲಿಸಲು’ ಎಂದು ಹೇಳುತ್ತಾರೆ, ‘ಸಂವಿಧಾನ ಬದಲಾಗಬೇಕು’ ಎಂದು ಆಗ್ರಹಿಸುತ್ತಾರೆ. ಅಷ್ಟೆಯೇಕೆ? ‘ಲೋಕಸಭಾ ಚುನಾವಣೆಯಲ್ಲಿ ಈ ಬಾರಿ 400ಕ್ಕೂ ಹೆಚ್ಚು ಸೀಟುಗಳು ಬಂದರೆ ಸಂವಿಧಾನ ಬದಲಿಸುತ್ತೇವೆ’ ಎಂದು ಬಿಜೆಪಿ ಬಹಿರಂಗವಾಗಿ ಘೋಷಿಸಿತ್ತು. ಇನ್ನೊಂದೆಡೆ ಇದೇ ಸಂಘ ಪರಿವಾರದ ಅಂಗಸಂಸ್ಥೆಗಳು ‘ಸಂವಿಧಾನ ಸನ್ಮಾನ ಅಭಿಯಾನ’ ಹಮ್ಮಿಕೊಳ್ಳುತ್ತವೆ. 

ಇಲ್ಲಿ, ‘ಸಂವಿಧಾನ ಸನ್ಮಾನ ಅಭಿಯಾನ’ ಎನ್ನುವುದು ತೋರ್ಪಡಿಕೆಯ ಕಾರ್ಯಸೂಚಿ, ‘ಸಂವಿಧಾನ ಬದಲಾಗಬೇಕು’ ಎನ್ನುವುದು ಆಂತರ್ಯದ ಅಜೆಂಡಾ. ಈ ಎರಡರ ಬಗ್ಗೆಯೂ ಎಚ್ಚರದಿಂದ ಇರಬೇಕು. ಮೊದಲನೆಯದಾಗಿ ‘ಸಂವಿಧಾನ ಸನ್ಮಾನ ಅಭಿಯಾನ’ದಡಿ ಎಂದಿನಂತೆ ಸಂವಿಧಾನ ಮತ್ತು ಅಂಬೇಡ್ಕರ್ ಇನ್ನೊಂದಷ್ಟು ಸುಳ್ಳುಗಳನ್ನು ಹೇಳಲಾಗುತ್ತದೆ. ಕಾಂಗ್ರೆಸ್ ಬಗ್ಗೆ, ಸಂವಿಧಾನದ ಬಗ್ಗೆ, ಸಮಾಜದ ಬಗ್ಗೆ, ನಿರ್ಧಿಷ್ಟವಾಗಿ ಹಿಂದೂ ಧರ್ಮದ ಬಗ್ಗೆ ಅಂಬೇಡ್ಕರ್ ಹೇಳಿದ್ದಾರೆ ಎನ್ನಲಾದ ಸುಳ್ಳುಗಳನ್ನು ಸೃಷ್ಟಿಸಲಾಗುತ್ತಿದೆ. 

ಸಂಘಪರಿವಾರದ ಮಾತೃ ಸಂಘಟನೆ ಆರ್‌ಎಸ್‌ಎಸ್ 100 ವರ್ಷ ಪೂರೈಸುತ್ತಿದ್ದು, ಈ ಹೊತ್ತಿನಲ್ಲಿ ಹಿಂದೂರಾಷ್ಟ್ರ ನಿರ್ಮಾಣದ ತನ್ನ ಅಜೆಂಡಾವನ್ನು ಹೇರಲು ಇನ್ನಿಲ್ಲದಂತೆ ಪ್ರಯತ್ನಿಸುತ್ತಿದೆ. ಈ ತೀವ್ರತೆಗೆ ಅನುಗುಣವಾಗಿ ಹುಸಿ ಸಂಕಥನಗಳು ಹುಟ್ಟಿಕೊಳ್ಳುತ್ತಿವೆ. ಅದರಿಂದಾಗಿ ಅಂಬೇಡ್ಕರ್ ಹಿಂದೂ ಧರ್ಮ ಮತ್ತು ಹಿಂದೂ ರಾಷ್ಟ್ರದ ಕಲ್ಪನೆಯ ಬಗ್ಗೆ ಏನು ಹೇಳಿದ್ದರು ಎನ್ನುವುದನ್ನು ಮನನ ಮಾಡಿಕೊಳ್ಳಲೇಬೇಕು.

‘ಹಿಂದೂ ರಾಷ್ಟ್ರ ಎನ್ನುವ ಕಲ್ಪನೆ ನಿಜವಾದರೆ ಅದು ದೇಶಕ್ಕೆ ಬಂದೊದಗುವ ಅತಿ ದೊಡ್ಡ ವಿಪತ್ತಾಗಿರುತ್ತದೆ. ಸ್ವಾತಂತ್ರ್ಯ, ಸಮಾನತೆ ಮತ್ತು ಬಂಧುತ್ವಕ್ಕೆ ಅಪಾಯವನ್ನು ಉಂಟುಮಾಡುವಂತಾದಾಗುತ್ತದೆ, ಎಲ್ಲಾ ರೀತಿಯಿಂದಲೂ ಹಿಂದೂರಾಷ್ಟ್ರ ಎಂಬ ಕಲ್ಪನೆ ನಿಜವಾಗದಂತೆ ತಡೆಯಬೇಕು’ ಎಂದು ಅಂಬೇಡ್ಕರ್ ಹೇಳಿದ್ದರೆನ್ನುವುದು ‘ಡಾ. ಬಾಬಾಸಾಹೇಬ್ ಅಂಬೇಡ್ಕರ್: ರೈಟಿಂಗ್ಸ್ ಅಂಡ್ ಸ್ಪೀಚಸ್’ನ 8ನೇ ಸಂಪುಟದಲ್ಲಿದೆ.

ಆರ್‌ಎಸ್‌ಎಸ್ ಮತ್ತು ಸಂಘಪರಿವಾರದ ಇತರೆ ಸಂಘಟನೆಗಳು ಅಂಬೇಡ್ಕರ್ ವಿರೋಧಿಯಾಗಿದ್ದವು ಎನ್ನುವುದಕ್ಕೆ ಹಲವು ಉದಾಹರಣೆಗಳಿವೆ. 1932ರಲ್ಲಿ ದಲಿತ ವಿರೋಧಿ ಪೂನ ಒಪ್ಪಂದಕ್ಕೆ ಹಿಂದೂ ಸಮಾಜದ ಪರವಾಗಿ ಲೋಕಮಾನ್ಯ ತಿಲಕರ ಕಟ್ಟಾ ಅನುಯಾಯಿ ಬಾಲಕೃಷ್ಣ ಶಿವರಾಮ್ ಮೂಂಜೆ ಸಹಿ ಹಾಕಿದ್ದರು. ಇದೇ ಬಾಲಕೃಷ್ಣ ಶಿವರಾಮ್ ಮೂಂಜೆ ‘ಅಂಬೇಡ್ಕರ್ ಮತ್ತು ಅಸ್ಪೃಷ್ಯರ ಮೇಲೆ ಹಣ ಖರ್ಚು ಮಾಡಿದರೆ ಹಾವಿಗೆ ಹಾಲೆರದಂತೆ. ಅವರ ಕಷ್ಟಗಳನ್ನು ಅವರೇ ಅನುಭವಿಸಲು ಬಿಟ್ಟುಬಿಡಬೇಕು’ ಎಂದು ಕಾರಿಕೊಂಡಿದ್ದರು.

ಹಿಂದೂ ಮಹಸಭಾ ಸೃಷಿಸಬಹುದಾದ ಅಪಾಯಗಳ ಬಗ್ಗೆ ಅತ್ಯಂತ ಸ್ಪಷ್ಟತೆ ಇದ್ದ ಅಂಬೇಡ್ಕರ್ ಆರಂಭದಿಂದಲೂ ಹಿಂದೂ ಧರ್ಮ, ಅದರ ಕಂದಾಚಾರಗಳು ಮತ್ತು ಜಾತಿ ಪದ್ದತಿಗಳ ವಿರುದ್ದ ನಿಲುವು ತೆಳೆದಿದ್ದರು. 1935ರಲ್ಲಿ ಅಂಬೇಡ್ಕರ್ ಅವರು ‘ಹಿಂದೂ ಧರ್ಮ ತೊರೆಯುತ್ತೇನೆ, ಇಸ್ಲಾಂ ಧರ್ಮವನ್ನು ಸೇರುವ ಬಗ್ಗೆ ಗಂಭೀರವಾದ ಚಿಂತನೆ ನಡೆಸಿದ್ದೇನೆ’ ಎಂದು ಹೇಳಿದಾಗ ಹಿಂದೂ ಮಹಾಸಭಾ ನಾಯಕರು ತೀವ್ರವಾದ ಆತಂಕಕ್ಕೀಡಾಗಿದ್ದರು. 

ಸಂಘಪರಿವಾರದ ದ್ವಿಮುಖ ನೀತಿಗೆ 1936ರಲ್ಲಿ ಲಾಹೋರ್‌ನಲ್ಲಿ ನಡೆದ ಜಾತಿ ವಿರೋಧಿ ಸಮಾವೇಶ ಇನ್ನೊಂದು ಸಾಕ್ಷಿ. ‘ಜಾತಿ ವಿನಾಶ’ದ ಹೆಸರಿನಲ್ಲೇ ಸಮಾವೇಶ ನಡೆಸುತ್ತಿದ್ದ ಹಿಂದೂ ಮಹಾಸಭಾ ನಾಯಕರು ಅಂಬೇಡ್ಕರ್ ಅವರಿಗೆ ‘ಅನಿಹಿಲೇಷನ್ ಆಫ್ ಕ್ಯಾಸ್ಟ್ (ಜಾತಿ ವಿನಾಶ)’ ಎಂಬ ಭಾಷಣ ಮಾಡಲು ನಿರಾಕರಿಸಿದರು. ಇದರಿಂದ ಜಾತಿ ವ್ಯವಸ್ಥೆ ಸದಾಕಾಲ ಜೀವಂತವಾಗಿರಬೇಕೆಂದು ಬಯಸುವ ಸಂಘ ಪರಿವಾರ ಹಿಂದೂ ಧರ್ಮದಲ್ಲಿರುವ ಜಾತಿಪದ್ದತಿಯ ಕಟು ವಿಮರ್ಶಕರಾಗಿದ್ದ ಅಂಬೇಡ್ಕರ್ ಅವರನ್ನು ಒಪ್ಪಲು ಎಂದಿಗೂ ಸಾಧ್ಯವಿಲ್ಲ ಎನ್ನುವುದು ಸಾಬೀತಾಗುತ್ತದೆ.

ಇಷ್ಟೆಲ್ಲಾ ಏಕೆ? ನಮ್ಮ ತಲೆಮಾರಿನಲ್ಲಿ ನಡೆದ ಮತ್ತೊಂದು ವೃತ್ತಾಂತ ಆರ್‌ಎಸ್‌ಎಸ್ ಮತ್ತು ಸಂಘಪರಿವಾರದ ಇತರೆ ಸಂಘಟನೆಗಳು ಅಂಬೇಡ್ಕರ್ ವಿರೋಧಿಯಾಗಿದ್ದವು ಎನ್ನುವುದನ್ನು ಇನ್ನಷ್ಟು ನಿಖರವಾಗಿ ಹೇಳುತ್ತವೆ. ಚುನಾವಣಾ ರಾಜಕೀಯ ಮತ್ತು ಸಾಂಸ್ಕೃತಿಕ ರಾಜಕೀಯ ಎರಡೂ ದೃಷ್ಟಿಯಲ್ಲಿ ಬಾಬರಿ ಮಸೀದಿ ಕೆಡವಿ ಅಲ್ಲಿ ಶ್ರೀರಾಮನ ದೇವಸ್ಥಾನ ಕಟ್ಟಬೇಕೆನ್ನುವ ತನ್ನ ಅಜೆಂಡಾವನ್ನು ಈಡೇರಿಸಿಕೊಳ್ಳಲು ಆರ್‌ಎಸ್‌ಎಸ್ ಮತ್ತು ಸಂಘಪರಿವಾರದ ಇತರೆ ಸಂಘಟನೆಗಳು ಆರಿಸಿಕೊಂಡಿದ್ದು ಅಂಬೇಡ್ಕರ್ ಪರಿನಿರ್ವಾಣ ದಿನವಾದ ಡಿಸಂಬರ್ 6 (1992) ಅನ್ನು.  ಅದು ಆಕಸ್ಮಿಕವಾಗಿರಲು ಸಾಧ್ಯವಿಲ್ಲ. ಎಲ್ಲವನ್ನೂ ಅತ್ಯಂತ ವ್ಯವಸ್ಥಿತವಾಗಿ ಮಾಡುವ ಸಂಘಪರಿವಾರ ಉದ್ದೇಶವಿಲ್ಲದೆ ಯಾವ ಮುಹೂರ್ತವನ್ನೂ ಇಡುವುದಿಲ್ಲ.

ಬಿಜೆಪಿ, ಆರ್‌ಎಸ್‌ಎಸ್ ಮತ್ತು ಸಂಘಪರಿವಾರದ ಅಂಗ ಸಂಸ್ಥೆಗಳು ನಿರಂತರವಾಗಿ ಅಂಬೇಡ್ಕರ್ ಹೆಸರನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದರೂ ಕಾಂಗ್ರೆಸ್ ಕಣ್ಣುಮುಚ್ಚಿ ಕುಳಿತಿದೆ. ಅದು ಜಾಣಕುರುಡೂ ಆಗಿರಬಹುದು. ಹಾಗಾಗಿ ಲೇಖನದ ಆರಂಭದಲ್ಲಿ ಹೇಳಿಂದಂತೆ ಅಂಬೇಡ್ಕರ್ ದೇಶದ ಎರಡು ದೊಡ್ಡ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಎರಡಕ್ಕೂ ಬೇಡವಾಗಿರುವ ಅನಾಥ. ‘ನಮ್ಮೆಲ್ಲಾ ಸಮಸ್ಯೆಗೆ ರಾಜಕೀಯ ಅಧಿಕಾರದಲ್ಲಿ ಪರಿಹಾರವಿದೆ’ ಎಂಬರ್ಥದ ಅಂಬೇಡ್ಕರ್ ಅವರ ಮಾತುಗಳ ಹಿನ್ನಲೆಯಲ್ಲಿ ಅವರನ್ನು ಎರಡು ರಾಜಕೀಯ ಪಕ್ಷಗಳು ನಡೆಸಿಕೊಳ್ಳುತ್ತಿರುವ ರೀತಿಯನ್ನು ಹೇಳಲಾಗಿದೆಯಷ್ಟೇ. ಉಳಿದಂತೆ ಬಾಬಾ ಸಾಹೇಬರ ಹೆಸರಿನಲ್ಲಿ ನಡೆಯುತ್ತಿರುವ ಅಪಪ್ರಚಾರವನ್ನು ತಡೆಯಲು ಮುಂದಾಗದಿದ್ದರೆ, ಸಂವಿಧಾನದ ರಕ್ಷಣೆಗೆ ಸೊಲ್ಲೆತ್ತದಿದ್ದರೆ ಅಂಬೇಡ್ಕರ್ ಅನುಯಾಯಿಗಳಿಗೂ ಕ್ಷಮೆ ಇರುವುದಿಲ್ಲ.

– ಧರಣೀಶ್ ಬೂಕನಕೆರೆ 

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!