ದ ಪಾಲಿಟಿಕ್

ಅಗಲಿದ ಬಂಡಾಯ, ಪ್ರತಿರೋಧದ ದಿಟ್ಟ ಧ್ವನಿ

ದ ಪಾಲಿಟಿಕ್

ದ ಪಾಲಿಟಿಕ್

ಭಾರತ ಸಾಮಾಜಿಕವಾಗಿ, ರಾಜಕೀಯವಾಗಿ, ಸಾಂಸ್ಕೃತಿಕವಾಗಿಯೂ ಸಂಕ್ರಮಣ ಕಾಲಘಟ್ಟದಲ್ಲಿದೆ. ಒಂದು ರೀತಿಯಲ್ಲಿ ಇಡೀ ಸಾಮಾಜಿಕ ಪ್ರಜ್ಞೆಯೇ ಕವಲು ಹಾದಿಯಲ್ಲಿ ನಿಂತಿದೆ. ವಿಶೇಷವಾಗಿ ಕರ್ನಾಟಕ ತನ್ನೆಲ್ಲಾ ಮೌಲ್ಯಗಳನ್ನು ಕಳೆದುಕೊಂಡು ಮತಾಂಧತೆಜಾತೀಯತೆಯ ನೆರಳಲ್ಲಿ ಬೆತ್ತಲಾಗುತ್ತಿದೆ. 1970-80 ದಶಕದಲ್ಲಿ ದಲಿತ ಚಳುವಳಿಗಳ ಗಟ್ಟಿ ದನಿಗೆ, ಬಂಡಾಯದ ಘರ್ಜನೆಗೆ ಮಣಿದು ತೆಪ್ಪಗಾಗಿದ್ದ ಜಾತಿ ಪೀಡಿತ ಮನಸುಗಳು, ಮತದ್ವೇಷದ ಕೋಮುವಾದಿ ಮನಸುಗಳು ಈಗ ಹೊಸ ರೂಪಾಂತರದೊಂದಿಗೆ ರಾಜ್ಯದಲ್ಲಿ ನೆಲೆ ಮಾಡುತ್ತಿವೆ. ಮತಾಂಧತೆ, ಕೋಮು ದ್ವೇಷ ಮತ್ತು ಜಾತಿ ತಾರತಮ್ಯಗಳು ಸಮಾಜವನ್ನು ಶತಮಾನಗಳಷ್ಟು ಹಿಂದಕ್ಕೆ ಕರೆದೊಯ್ಯುತ್ತಿದೆ. ಸಂಕ್ರಮಣದ ಕಾಲಘಟ್ಟದಲ್ಲಿ ನಮ್ಮ ನಡುವೆ ಇದ್ದ ಸಾಹಿತ್ಯಕಸಾಂಸ್ಕೃತಿಕಸಾಮಾಜಿಕ ಸಂಕ್ರಮಣದ ಗಟ್ಟಿ ಧ್ವನಿಯೊಂದು ಮರೆಯಾಗಿಹೋಗಿದೆ.

ಬಂಡಾಯದ ದನಿ ಸಂಕ್ರಮಣದ ಹರಿಕಾರ ಎಂದೇ ಗುರುತಿಸಲ್ಪಟ್ಟಿದ್ದ ಸಾಹಿತಿ, ಕವಿ, ನಾಟಕಕಾರ, ಸಂಘಟನಕಾರ, ಪತ್ರಿಕಾ ಸಂಪಾದಕ ಮತ್ತು ಅಪ್ರತಿಮ ಕನ್ನಡ ಹೋರಾಟಗಾರ, ನಲ್ಮೆಯಿಂದ ಚಂಪಾ ಎಂದು ಕರೆಯಲ್ಪಡುತ್ತಿದ್ದ ಪ್ರೊ ಚಂದ್ರಶೇಖರ ಪಾಟೀಲ್ ತಮ್ಮ 86ನೆಯ ವಯಸಿನಲ್ಲಿ ಅಂತಿಮ ವಿದಾಯ ಹೇಳಿದ್ದಾರೆ. ಚಂಪಾ ಅವರಿಗೆ ಹೇಗೆ ವಿದಾಯ ಹೇಳುವುದು ? ಅವರದೇ ಒಂದು ಪದ್ಯವನ್ನು ಉದ್ಧರಿಸುವುದಾದರೆ –ಅರ್ಧಸತ್ದ ಹುಡುಗಿ ಸಂಕಲನದಿಂದ- “ ಸತ್ತವರು ಎಲ್ಲಿ ಹೋಗುತ್ತಾರೆ,,,, ಇದ್ದವರ ನೆನಪಿನ ಗುದ್ದಿನಲ್ಲಿ ಗುದ್ದಲಿಯಾಗುತ್ತಾರೆ ” ಹಾಗೆ ಚಂಪಾ ನಮ್ಮ ನಾಡಿನ ಸಾಕ್ಷಿ ಪ್ರಜ್ಞೆಯಾಗಿ, ಬಂಡಾಯದ ದನಿಯ ಗಟ್ಟಿ ಪ್ರಜ್ಞೆಯಾಗಿ ನಮ್ಮೊಳಗೆ “ ನಮ್ಮ ಶ್ವಾಸೋಚ್ಛ್ವಾಸದ ಹಳ್ಳ ಕೊಳ್ಳಗಳಲ್ಲಿ ಹಾವಾಗಿ ಹರಿದಾಡುತ್ತಾರೆ. ” ಬಹುಶಃ ಚಂಪಾ ಅವರ ವಯೋ ಸಹಜ ಸಾವು ನಮ್ಮನ್ನು ದೃಢಿಗೆಡಿಸದಿರಲು ಈ ಪದ್ಯವೇ ಸ್ಫೂರ್ತಿಯಾಗಬೇಕೇನೋ !!

ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಹತ್ತೀಮತ್ತೂರಿನಲ್ಲಿ ಜೂನ್ 18 1836ರಂದು ಜನಿಸಿದ ಚಂಪಾ ಇಂಗ್ಲಿಷ್ ಎಂಎ ಪದವೀಧರರು.  ಬ್ರಿಟೀಷ್ ಕೌನ್ಸಿಲ್ ವಿದ್ಯಾರ್ಥಿವೇತನ ಪಡೆಯುವುದರ ಮೂಲಕ ಲೀಡ್ಸ್ ವಿಶ್ವವಿದ್ಯಾಲಯದಲ್ಲಿ ಭಾಷಾಶಾಸ್ತ್ರದ ಸ್ನಾತಕೋತ್ತರ ಪದವಿ ಗಳಿಸಿದ್ದರು. ಕರ್ನಾಟಕ ವಿಶ್ವವಿದ್ಯಾಲಯದ ಇಂಗ್ಲಿಷ್ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಲೇ ಕನ್ನಡ ಸಾರಸ್ವತ ಲೋಕವನ್ನು ಅಪ್ಪಿಕೊಂಡವರು ಚಂಪಾ. ಚಂಪಾ ಅವರ ಸಾಹಿತ್ಯ ಮತ್ತು ಸಾಮಾಜಿಕ ಚಟುವಟಿಕೆಗಳನ್ನು ಅಕ್ಷರಗಳಲ್ಲಿ ಕಾಣುವುದಕ್ಕಿಂತಲೂ ಹೆಚ್ಚಾಗಿ ಅವರ ದನಿಯಲ್ಲಿ ಕಾಣುವುದು ಸೂಕ್ತ. 1975ರ ತುರ್ತು ಪರಿಸ್ಥಿತಿಯ ವಿರುದ್ಧ ನಡೆದ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಸಂದರ್ಭದಲ್ಲೇ ಕರ್ನಾಟಕದ ಸಾಹಿತ್ಯ ವಲಯದಲ್ಲಿ, ಸಾಂಸ್ಕೃತಿಕ ಲೋಕದಲ್ಲಿ ನಡೆಯುತ್ತಿದ್ದ ವಿಪ್ಲವಕಾರಿ ಪಲ್ಲಟಗಳಿಗೆ ಸಾಕ್ಷಿಯಾಗಿ ನಿಂತವರು ಚಂಪಾ. ಹಾಗೆಯೇ ಬದಲಾದ ಸಂದರ್ಭದ ಅಗತ್ಯತೆ, ಅನಿವಾರ್ಯತೆಗಳಿಗನುಗುಣವಾಗಿ ತಮ್ಮ ಸಾಹಿತ್ಯದ ಮೂಲಕ ಪ್ರೇರಣೆ ನೀಡಿದವರೂ ಹೌದು.

1964ರಲ್ಲಿ ಚಂಪಾ ಆರಂಭಿಸಿದ ಸಂಕ್ರಮಣ ಸಾಹಿತ್ಯಕ ಪತ್ರಿಕೆ ಕೇವಲ ಅಕ್ಷರಗಳ ಆಗರವಾಗಿ ಉಳಿಯಲಿಲ್ಲ, ಇಂದಿಗೂ ಸಾಂಸ್ಕೃತಿಕ ಪ್ರತಿರೋಧದ ಅಕ್ಷರ ನೆಲೆಯಾಗಿಯೇ ಮುಂದುವರೆದಿದೆ. ಇಂದಿಗೂ ಸಹ ಸಂಕ್ರಮಣ ಕನ್ನಡ ಸಾಹಿತ್ಯ ಲೋಕದ ಮೇರು ಚುಕ್ಕೆಯಾಗಿ ಕಂಗೊಳಿಸುತ್ತಿದೆ ಎಂದರೆ ಅದಕ್ಕೆ ಕಾರಣ ಈ ಪತ್ರಿಕೆಯ ಪುಟಗಳನ್ನು ಅಲಂಕರಿಸುತ್ತಿದ್ದ, ಅಲಂಕರಿಸುತ್ತಿರುವ ಸಾಂಸ್ಕೃತಿಕ ದನಿಗಳು, ಪ್ರತಿರೋಧದ ಛಾಯೆಗಳು ಮತ್ತು ಸಾಮಾಜಿಕ ಕಳಕಳಿಯುಳ್ಳ ಪರಿವರ್ತನೆಯ ಆಶಯಗಳು. 1970-80ರ ದಶಕದಲ್ಲಿ ಕರ್ನಾಟಕ ದಲಿತ ಚಳುವಳಿಗಳಿಗೆ ಒಂದು ಹೊಸ ಸ್ಪರ್ಶ ನೀಡಿದ ಸಂದರ್ಭದಲ್ಲಿ, ನೋವುಂಡ ಜನತೆಗೆ ದನಿಯಾಗಿ, ಶೋಷಿತರ ದನಿಗೆ ಒಂದು ಕಾಯಕಲ್ಪವನ್ನು ಒದಗಿಸಿದವರಲ್ಲಿ ಚಂಪಾ ಪ್ರಮುಖರು. ವೈದಿಕಶಾಹಿಯ ಶೋಷಣೆ ಮತ್ತು ಶ್ರೇಣೀಕೃತ ಜಾತಿ ವ್ಯವಸ್ಥೆಯ ತಾರತಮ್ಯಗಳ ವಿರುದ್ಧ ದಲಿತ ಸಮುದಾಯದಲ್ಲಿ, ಶೋಷಿತ ವರ್ಗಗಳಲ್ಲಿ ಮೂಡಿದ ಪ್ರತಿರೋಧದ ದನಿಗಳಿಗೆ ಸಂಕ್ರಮಣ ಪತ್ರಿಕೆ ಅಕ್ಷರದ ಮೂಲಕ ದನಿಯಾದರೆ, ಚಂಪಾ ವ್ಯಕ್ತಿಗತವಾಗಿ ದನಿಯಾಗಿ ಮೂಡಿದ್ದರು.

ಕತೆ, ಕಾವ್ಯ, ನಾಟಕ, ಸಂಪಾದನೆ ಮತ್ತು ಅಂಕಣ ಬರಹ ಹೀಗೆ ಸಾಹಿತ್ಯ ಕೃಷಿಯ ಎಲ್ಲ ಆಯಾಮಗಳಲ್ಲೂ ತಮ್ಮ ಗಟ್ಟಿಧ್ವನಿಯನ್ನು ದಾಖಲಿಸುತ್ತಾ ನಡೆದ ಚಂಪಾ ಬಂಡಾಯ ಸಾಹಿತ್ಯ ಚಳುವಳಿಗೆ ಹೊಸ ಆಯಾಮವನ್ನು ದೊರಕಿಸಿಕೊಟ್ಟವರಲ್ಲಿ ಪ್ರಮುಖರು. ತುರ್ತುಪರಿಸ್ಥಿತಿಯ ಜೈಲುವಾಸದ ನಂತರ ಸಂಪೂರ್ಣವಾಗಿ ತಮ್ಮನ್ನು ಸಾಮಾಜಿಕ ಚಳುವಳಿಗಳಲ್ಲಿ ತೊಡಗಿಸಿಕೊಂಡಿದ್ದ ಚಂಪಾ ದಲಿತ ಚಳುವಳಿ ಉಚ್ಚ್ರಾಯ ಸ್ಥಿತಿಯಲ್ಲಿದ್ದ ಸಂದರ್ಭದಲ್ಲಿ ತಮ್ಮ ನಾಟಕಗಳ ಮೂಲಕ, ಕಾವ್ಯದ ಮೂಲಕ ಶೋಷಿತರ ದನಿಯಾಗಿ ಮೂಡಿಬಂದಿದ್ದಾರೆ. ಬಾನುಲಿ, ಮಧ್ಯಬಿಂದು, ಗಾಂಧಿ ಸ್ಮರಣೆ, ಹೂವು ಹೆಣ್ಣು ತಾರೆ, ಅರ್ಧಸತ್ಯದ ಹುಡುಗಿ (ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕೃತಿ), ಮುಂತಾದ ಕವನ ಸಂಕಲನಗಳು, ಕೊಡೆಗಳು, ಅಪ್ಪ, ಟಿಂಗರ ಬುಡ್ಡಣ್ಣ, ಕತ್ತಲರಾತ್ರಿ ಮುಂತಾದ ನಾಟಕಗಳು ಮತ್ತು ನನ್ನ ಹಾಡಿನ ಹಳ್ಳ, ಚಂಪಾದಕೀಯ, ನನ್ನ ಗುರು ಗೋಕಾಕ್, ಅಕ್ಷರ ಲೋಕದ ಆಕೃತಿಗಳು, ನಿತ್ಯ ವರ್ತಮಾನ ಮುಂತಾದ ಪ್ರಬಂಧಗಳ ಸಂಕಲನದ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಅಮೂಲ್ಯ ಕೊಡುಗೆ ಸಲ್ಲಿಸಿರುವ ಚಂಪಾ ಮೂಲತಃ ಪ್ರತಿರೋಧದ ದನಿಯಾಗಿ ಗುರುತಿಸಿಕೊಂಡವರು. ವ್ಯವಸ್ಥೆಯೊಡನೆ ರಾಜಿಯಾಗದ, ಬಂಡಾಯದ ದನಿಯಾಗಿಯೇ ಬದುಕಿದವರೂ ಸಹ.

1996ರಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಾರಥ್ಯ ವಹಿಸಿ, 2004ರಿಂದ ನಾಲ್ಕು ವರ್ಷಗಳ ಕಾಲ ಕನ್ನಡ ಸಾಹಿತ್ಯ ಪರಿಷತ್ತಿಗೆ ಮುಂದಾಳತ್ವ ನೀಡುವ ಮೂಲಕ ಕನ್ನಡದ ಯುವ ಲೇಖಕರಿಗೆ, ಕವಿ ಸಾಹಿತಿಗಳಿಗೆ ಉತ್ತೇಜನ ನೀಡುವಂತಹ ಕ್ರಮಗಳನ್ನು ಕೈಗೊಂಡಿದ್ದು ಚಂಪಾ ಅವರ ಹೆಗ್ಗಳಿಕೆ.  ಬಂಡಾಯ ಸಾಹಿತ್ಯದ ದನಿ ಕ್ಷೀಣಿಸುತ್ತಿದೆ ಎಂಬ ನೋವಿನೊಂದಿಗೇ ಮತ್ತೊಮ್ಮೆ ಚಿಗುರೊಡೆಯುತ್ತದೆ ಎಂಬ ಭರವಸೆಯನ್ನೂ ಹೊಂದಿದ್ದ ಚಂಪಾ ಶೋಷಿತರ, ದಮನಿತರ ಮತ್ತು ಅವಕಾಶವಂಚಿತರ  ಸಾಹಿತ್ಯಕ್ಕೆ ತಮ್ಮ ಸಂಕ್ರಮಣದ ಮೂಲಕ ಅಕ್ಷರಾವಕಾಶ ನೀಡಿದರೆ ತಮ್ಮ ಪ್ರಖರ ಉಪನ್ಯಾಸಗಳ ಮೂಲಕ, ಬರವಣಿಗೆಯ ಮೂಲಕ,  ಭಾಷಣಗಳ ಮೂಲಕ ಮುಕ್ತ ದನಿಯನ್ನೂ ನೀಡಿದ್ದಾರೆ. ತಮ್ಮ ಸಾಹಿತ್ಯಕ ಸೇವೆಯೊಂದಿಗೇ ಜನಪರ ಚಳುವಳಿಗಳಲ್ಲೂ ಸಕ್ರಿಯವಾಗಿದ್ದ ಚಂಪಾ ಗೋಕಾಕ್ ಚಳುವಳಿಯ ಮುಂಚೂಣಿಯಲ್ಲಿದ್ದವರು. ಮಂಡಲ್ ಚಳುವಳಿಗೆ ದನಿ ನೀಡಿದವರು. ಜಾತಿ ದೌರ್ಜನ್ಯಗಳ ವಿರುದ್ಧ ಪ್ರಖರ ದನಿ ಎತ್ತಿದವರು.

ಸಮಾಜದಲ್ಲಿ ಬೇರೂರಿದ್ದ ಕೋಮುವಾದ, ಮತಾಂಧತೆ, ಕೋಮು ದ್ವೇಷ, ಮತೀಯ ದ್ವೇಷ, ಜಾತಿ ದೌರ್ಜನ್ಯದ ಬೇರುಗಳನ್ನು ಕಿತ್ತೊಗೆಯಲು ಎಲ್ಲ ರೀತಿಯ ಪ್ರಗತಿಪರ ಚಳುವಳಿಗಳಲ್ಲೂ ಮುಂಚೂಣಿಯಲ್ಲಿರುತ್ತಿದ್ದ ಚಂಪಾ ಸಾಹಿತ್ಯವನ್ನು ಅಕ್ಷರಗಳಲ್ಲಿ ಬಂಧಿಸಿಟ್ಟವರಲ್ಲ. ಸಾಹಿತ್ಯದಿಂದ ಸಮಾಜ ಬದಲಾವಣೆ ಸಾಧ್ಯವಿಲ್ಲ, ನಾಟಕಗಳು ಸಮಾಜದಲ್ಲಿ ಪರಿವರ್ತನೆ ತರಲು ಸಾಧ್ಯವಿಲ್ಲ ಎಂಬ ವಿತಂಡವಾದ ತಾಂಡವಾಡುತ್ತಿರುವ ಇವತ್ತಿನ ಸಂದರ್ಭದಲ್ಲಿ ಚಂಪಾ ಅವರ ಧ್ವನಿ ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ. ಭಾಷಾ ಚಳುವಳಿಗಳಲ್ಲೂ ಮುಂದಾಳತ್ವ ವಹಿಸಿ ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಮಾಧ್ಯಮವನ್ನು ಅನುಷ್ಟಾನಗೊಳಿಸಲು ಅವಿರತ ಹೋರಾಡಿದ ಚಂಪಾ ಒಂದು ಹಂತದಲ್ಲಿ, ಕನ್ನಡ ಮಾಧ್ಯಮಕ್ಕಾಗಿ ಪರವಾನಗಿ ಪಡೆದು ಆಂಗ್ಲ ಮಾಧ್ಯಮದಲ್ಲಿ ನಡೆಸುತ್ತಿದ್ದ ಎರಡು ಸಾವಿರಕ್ಕೂ ಹೆಚ್ಚು ಶಾಲೆಗಳನ್ನು ಮುಚ್ಚಿಸುವುದರಲ್ಲಿ ಯಶಸ್ವಿಯಾಗಿದ್ದರು.

ಕರ್ನಾಟಕದ ಸಾಂಸ್ಕೃತಿಕ ರಾಜಕಾರಣ ಕೋಮುವಾದ-ಜಾತಿಶ್ರೇಷ್ಠತೆ-ಮತಾಂಧತೆಯ ಮಾಲಿನ್ಯದಿಂದ ಕಲುಷಿತವಾಗುತ್ತಿರುವ ಈ ಸಂದರ್ಭದಲ್ಲಿ ಚಂಪಾ ಮತ್ತು ಅವರ ಧ್ವನಿ ಹೆಚ್ಚು ಮೌಲಿಕ ಎನಿಸುತ್ತದೆ. ಸಾಹಿತ್ಯ ಪರಿಷತ್ತು, ಸಾಹಿತ್ಯ ಅಕಾಡೆಮಿ, ಪುಸ್ತಕ  ಪ್ರಾಧಿಕಾರ, ವಿಶ್ವವಿದ್ಯಾಲಯಗಳು ಹೀಗೆ ಬೌದ್ಧಿಕ ಜ್ಞಾನಾಭಿವೃದ್ಧಿಯ ಎಲ್ಲ ಆಕರಗಳಲ್ಲೂ ಮತಾಂಧ ಶಕ್ತಿಗಳು ತಾಂಡವಾಡುತ್ತಾ ಕನ್ನಡ ಸಾಹಿತ್ಯ ಲೋಕದ ಬೇರುಗಳನ್ನು, 1970-80ರ ದಶಕದಲ್ಲಿ ಬಿತ್ತಿದ ಪ್ರತಿರೋಧದ ಬೀಜಗಳನ್ನು ನಿಷ್ಕ್ರಿಯಗೊಳಿಸುತ್ತಿರುವ ಈ ಸಂದರ್ಭದಲ್ಲಿ ಚಂಪಾ ಹೆಚ್ಚು ಪ್ರಸ್ತುತವಾಗುವಷ್ಟೇ ಹತ್ತಿರವೂ ಆಗುತ್ತಾರೆ. ಗಟ್ಟಿಯಾಗುತ್ತಿರುವ ಜಾತಿ ಪ್ರಜ್ಞೆ, ಶಿಥಿಲವಾಗುತ್ತಿರುವ ಭ್ರಾತೃತ್ವದ ಸಂವೇದನೆ ಮತ್ತು ಕ್ಷೀಣಿಸುತ್ತಿರುವ ಸಮಾನತೆಯ ದನಿಗಳ ನಡುವೆ ಒಂದು ಪ್ರಖರ ಪ್ರತಿರೋಧದ ನೆಲೆಯಾಗಿ ಚಂಪಾ ನಮ್ಮ ನಡುವೆ ಇರಬೇಕಿತ್ತು ಎನಿಸುವುದು ಸಹಜ. ಆದರೆ ಬದುಕು ಅವಕಾಶ ನೀಡುವುದಿಲ್ಲ ಎನ್ನುವುದೂ ಅಷ್ಟೇ ವಾಸ್ತವ.

ಶೋಷಿತರ ದನಿಯಾಗಿ ಬದುಕುವ ಒಬ್ಬ ಸಾಹಿತಿ, ಕಲಾವಿದ “ ಅಜಾತಶತ್ರು ” ಆಗಿ ಬದುಕಲು ಸಾಧ್ಯವಿಲ್ಲ. ಅಗಲಿದ ನಂತರವೂ ಹಾಗೆ ಉಳಿಯಲು ಸಾಧ್ಯವಿಲ್ಲ. ಚಂಪಾ ಸಹ ಎಂದಿಗೂ ಅಜಾತಶತ್ರು ಆಗಿರಲಿಲ್ಲ. ಆದರೆ ಶೋಷಿತರ ಸಾಹಿತ್ಯಕ ದನಿಯಾಗಿ, ಸಾಂಸ್ಕೃತಿಕ ಪ್ರತಿನಿಧಿಯಾಗಿ, ಸಾಮಾಜಿಕ ವಕ್ತಾರರಾಗಿ, ಪ್ರಧಾನಿ ಮೋದಿ (ಅವಹೇಳನಕಾರಿಯಾಗಿ) ಹೇಳಿದಂತೆ “ ಆಂದೋಲನಜೀವಿ ”ಯಾಗಿ ಆರು ದಶಕಗಳಿಗೂ ಹೆಚ್ಚು ಕಾಲ ಕರ್ನಾಟಕದ ಸಾರಸ್ವತ ಲೋಕಕ್ಕೆ, ಸಾಹಿತ್ಯ ವಲಯಕ್ಕೆ, ಜನಪರ ಚಳುವಳಿಗಳಿಗೆ, ಶೋಷಿತರ ಪ್ರತಿರೋಧಗಳಿಗೆ ಧ್ವನಿಯಾಗಿ ನಿಂತ ಚಂದ್ರಶೇಖರ ಪಾಟೀಲರು ಶಾಶ್ವತವಾಗಿ ಸಂಕ್ರಮಣದ ಹರಿಕಾರರಾಗಿಯೇ ನಮ್ಮ ನಡುವೆ ಉಳಿಯಲಿದ್ದಾರೆ.

ಹೋಗಿ ಬನ್ನಿ ಚಂಪಾ !! ನೀವೇ ಹೇಳಿರುವಂತೆ :

“ ಹಕ್ಕಿಯಾಗಿ ರೆಕ್ಕೆ ಬಿಚ್ಚುತ್ತಾ ಚಿಕ್ಕೆಯಾಗಿ ಚಿಮುಕುತ್ತಾ ಇದ್ದವರ ನೆನಪಿನ ಗುದ್ದಿನಲ್ಲಿ ಗುದ್ದಲಿಯಾಗಿ ” ಇದ್ದುಬಿಡಿ.

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!