ಎಸ್‌ಸಿ ಮೀಸಲು ಕ್ಷೇತ್ರವಾದ ಚಿತ್ತಾಪುರ ಕಾಂಗ್ರೆಸ್ಸಿನ ಭದ್ರಕೋಟೆಯಾಗಿದೆ. ಈವರೆಗೆ ಕ್ಷೇತ್ರದಲ್ಲಿ ಒಂದು ಉಪಚುನಾವಣೆ ಸೇರಿ 13ಕ್ಕೂ ಹೆಚ್ಚು ಚುನಾವಣೆಗಳು ನಡೆದಿವೆ. ಇದರಲ್ಲಿ ಕಾಂಗ್ರೆಸ್ ಹತ್ತು ಸಲ ನಗೆ ಬೀರಿದರೆ, ಬಿಜೆಪಿ ಒಮ್ಮೆ ಮಾತ್ರ ಗೆದ್ದಿದೆ. ಅದು ಉಪಚುನಾವಣೆಯಲ್ಲಿ. ಇಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ನೇರಾನೇರ ಹಣಾವಣಿ ಏರ್ಪಟ್ಟು, ರಾಜ್ಯ- ದೇಶದಾದ್ಯಂತ ಸದ್ದು ಮಾಡುತ್ತಿದೆ.
ಸತತವಾಗಿ ಎರಡು ಸಲ ಗೆದ್ದು ಮೂರನೆ ಬಾರಿಗೂ ಗೆಲ್ಲುವ ಉಮೇದಿನಲ್ಲಿರುವ ಪ್ರಿಯಾಂಕ್ ಖರ್ಗೆಗೆ ಕಟ್ಟಿ ಹಾಕಲು ಬಿಜೆಪಿ ಹರಸಾಹಸ ಪಡುತ್ತಿದೆ. ಇಲ್ಲಿ ಬಿಜೆಪಿಯ ಮಣಿಕಂಠ ರಾಠೋಡ ಸ್ಪರ್ಧೆ ನೆಪ ಮಾತ್ರ. ಸಂಘಪರಿವಾರದ ನೂರಾರು ಕಾರ್ಯಕರ್ತರು ಖರ್ಗೆಗೆ ಸೋಲಿಸಲು ಚಿತ್ತಾಪುರದಲ್ಲಿ ಬಿಡು ಬಿಟ್ಟಿದ್ದಾರೆ. ಜಾರ್ಖಂಡ್ ಬಿಜೆಪಿ ಸಂಸದರಾದ ಆದಿತ್ಯ ಪ್ರಸಾದ್ ಸಾಹು, ನಿಶಿಕಾಂತ್ ದುಬೆ, ಸುನೀಲ್ ಕುಮಾರ್ ಸಿಂಗ್ ಕ್ಷೇತ್ರದಲ್ಲೇ ತಳವೂರಿದ್ದಾರೆ ಮತ್ತು ರಾಜ್ಯದ ವಿಧಾನ ಪರಿಷತ್ ಸದಸ್ಯರಾದ ಎನ್ ರವಿಕುಮಾರ್ ಅವರು ಕ್ಷೇತ್ರಾದ್ಯಂತ ಕಾಲಿಗೆ ಚಕ್ರ ಕಟ್ಟಿಕೊಂಡು ಕೋಲಿ ಸಮಾಜದ ಮತಗಳನ್ನು ಸೆಳೆಯಲು ಯತ್ನಿಸುತ್ತಿದ್ದಾರೆ.
ಇದು ಕಾಂಗ್ರೆಸ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಪಾಲಿಗೆ ಬಹುಮುಖ್ಯ ಕ್ಷೇತ್ರವಾಗಿದೆ. ಇದವರ ಸ್ವಕ್ಷೇತ್ರ. ಕಾಂಗ್ರೆಸ್ ಈ ಕ್ಷೇತ್ರ ಉಳಿಸಿಕೊಳ್ಳಲು ಸೋತರೆ ದೇಶದಾದ್ಯಂತ ಖರ್ಗೆ ಮೇಲೆ ದಾಳಿ ಮಾಡಲು ಬಿಜೆಪಿಗೆ ಒಂದು ಅಸ್ತ್ರ ಸಿಕ್ಕಂತಾಗುತ್ತದೆ. ಹಾಗಾಗಿಯೇ ಸಮಬಲದ ಹೋರಾಟ ನೀಡಬೇಕೆಂದು ರೌಡಿ ಶೀಟರ್ ಮಣಿಕಂಠ ರಾಠೋಡಗೆ ಇಲ್ಲಿ ಬಿಜೆಪಿ ಮಣೆ ಹಾಕಿದೆ. ಪಕ್ಷದ ಈ ನಡೆ ಬಿಜೆಪಿಗೆ ವರವಾಗುತ್ತದೆಯೋ ಅಥವಾ ಉರುಳಾಗುತ್ತದೆಯೋ ಎಂಬುವುದು ಫಲಿತಾಂಶದ ದಿನವೇ ಗೊತ್ತಾಗುತ್ತದೆ.
ಮಾಧ್ಯಮಗಳು ಬಿಜೆಪಿ ಅಭ್ಯರ್ಥಿಗೆ ರೌಡಿ ಶೀಟರ್ ಎಂದೇ ಸಂಬೋಧಿಸುತ್ತಿರುವುದು ಮತ್ತು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡುತ್ತಿರುವುದು ಬಿಜೆಪಿಗೆ ಅದರಲ್ಲೂ ಪ್ರಧಾನಿ ಮೋದಿಯವರಿಗೆ ಮುಜುಗರಕ್ಕೆ ದೂಡಿದಂತಾಗಿದೆ. ಪ್ರಧಾನಿ ಮಣಿಕಂಠ ರಾಠೋಡ ಪರ ಮತಯಾಚಿಸಲು ಕ್ಷೇತ್ರಕ್ಕೆ ಬರಲು ದಿನಾಂಕವೂ ನಿಗದಿಯಾಗಿತ್ತು. ಆದರೀಗ ಏಕಾಏಕಿ ರದ್ದು ಪಡಿಸಿದ್ದಾರೆ. ಇದು ಕಾಂಗ್ರೆಸ್ ಕಾರ್ಯಕರ್ತರಿಗೆ ನೈತಿಕ ಬಲ ತಂದುಕೊಟ್ಟಿದೆ. ರಾಠೋಡ ಅವರು ಕಳೆದ ಎರಡ್ಮೂರು ವರ್ಷಗಳಿಂದ ಕ್ಷೇತ್ರದ ಮೇಲೆ ಕಣ್ಣಿಟ್ಟು ಅನ್ನದಾಸೋಹ ಮಾಡುವುದು, ಕೆಲವು ಅಂಗವಿಕಲರಿಗೆ ದ್ವಿಚಕ್ರ ವಾಹನ ನೀಡುವುದು, ಎರಡ್ಮೂರು ಕಡೆ ಸ್ವಂತ ಹಣದಿಂದ ಬೋರವೆಲ್ ಹಾಕಿಸುವುದು… ಎಂಬಿತ್ಯಾದಿ ಕೆಲಸಗಳ ಮತ್ತು ಮುಖ್ಯವಾಗಿ ಪ್ರಿಯಾಂಕ್ ಖರ್ಗೆ ಮೇಲೆ ನೇರವಾಗಿ ವಾಕ್ಸಮರ ನಡೆಸುವ ಮೂಲಕ ಕ್ಷೇತ್ರದ ಜನರ ಗಮನ ಸೆಳೆದಿದ್ದಾರೆ. ಅವರಿಗೆ ಬಿಜೆಪಿ ಟಿಕೆಟ್ ನೀಡಲು ಇದೊಂದು ಕಾರಣವಾಗಿದೆ.
ಪ್ರಸಕ್ತ ಪ್ರಿಯಾಂಕ್ ಖರ್ಗೆ ಬಿಜೆಪಿ ಪಾಲಿಗೆ ಸಿಂಹಸ್ವಪ್ನವಾಗಿದ್ದಾರೆ. ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಸಾಲುಸಾಲು ಹಗರಣಗಳು ಮುನ್ನೆಲೆಗೆ ತರುವಲ್ಲಿ ಪ್ರಿಯಾಂಕ್ ಅವರ ಪಾತ್ರ ದೊಡ್ಡದಿದೆ. ಜತೆಗೆ ಮೋದಿಯವರಿಗೂ ಆಗಾಗ್ಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳುತ್ತಿದ್ದಾರೆ. ಇದು ಬಿಜೆಪಿ ಹೈಕಮಾಂಡ್ ಕಣ್ಣು ಕೆಂಪಾಗಿಸಿದೆ. ಹಾಗಾಗಿಯೇ ಅವರನ್ನು ಸೋಲಿಸಲು ಪಕ್ಷದ ಹೈಕಮಾಂಡ್ ತಂತ್ರಗಾರಿಕೆ ಹೆಣೆದಿದೆ.
ತನ್ನ ಕೈ ಹಿಡಿದ ಧರ್ಮಪತ್ನಿ ಮತ್ತು ಒಡಹುಟ್ಟಿದ ಸಹೋದರ ಗಂಭೀರ ಕಾಯಿಲೆಗೆ ತುತ್ತಾಗಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಇದು ಪ್ರಿಯಾಂಕ್ ಅವರಿಗೆ ಅಕ್ಷರಶಃ ಹಿಂಡಿ ಹಿಪ್ಪೆ ಮಾಡಿದೆ. ಹೀಗಿದ್ದರೂ ಅನಿವಾರ್ಯವಾಗಿ ಕ್ಷೇತ್ರದಲ್ಲಿ ಸುತ್ತಾಡುತ್ತಿದ್ದಾರೆ. ಇದು ಅವರಿಗೆ ಅನುಕಂಪವಾಗಿ, ಮತಗಳಾಗಿ ಪರಿವರ್ತನೆಯಾಗುವ ಸಾಧ್ಯತೆಯೂ ಇದೆ.
ಪ್ರಿಯಾಂಕ್ ಖರ್ಗೆ ತಕ್ಕಮಟ್ಟಿಗೆ ತಮ್ಮ ಕ್ಷೇತ್ರದಲ್ಲಿ ವಿಕಾಸ ಮಾಡಿದ್ದಾರೆ. ಅಂತಹ ಆಡಳಿತ ವಿರೋಧಿ ಅಲೆ ಕ್ಷೇತ್ರದಲ್ಲೇನು ಇಲ್ಲ. ಆದರವರು ಚಿತ್ತಾಪುರಕ್ಕಿಂತ ಹೆಚ್ಚಾಗಿ ಬೆಂಗಳೂರಿನ ಸದಾಶಿವ ನಗರದಲ್ಲೇ ಇರುತ್ತಾರೆಂಬ ಜನರ ಆರೋಪ ಅವರ ಮೇಲಿದೆ. ‘ಅಪರೂಪಕ್ಕೆ ಬಂದರೂ ಜನಸಾಮಾನ್ಯರ ಕೈಗೆ ಸಿಗುವುದಿಲ್ಲ. ಅವರ ಸುತ್ತ ಮುತ್ತಲೂ ಯಾವಾಗಲೂ ವೈಟ್ ಕಾಲರ್ ಜನರೆ ಸುತ್ತುವರೆದಿರುತ್ತಾರೆ’ ಎಂದು ಚಿತ್ತಾಪುರದ ಕಲ್ಯಾಣಿ ಅಂಬಲಗಿ ‘ದ ಪಾಲಿಟಿಕ್’ ಮುಂದೆ ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ.
ಚಿತ್ತಾಪುರ ಕ್ಷೇತ್ರದ ಸರ್ವಾಂಗೀಣ ವಿಕಾಸಕ್ಕಾಗಿ ನನ್ನನ್ನು ಗೆಲ್ಲಿಸಿ ಎಂದು ರಾಠೋಡ ಮತಯಾಚನೆ ಮಾಡುತ್ತಿದ್ದಾರೆ. ಆರೆಸ್ಸೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಪ್ರಿಯಾಂಕ್ ಹಿರಿಯರು – ಕಿರಿಯರು ಎನ್ನದೆ ಎಲ್ಲರಿಗೂ ಒರಟಾಗಿಯೇ ಮಾತನಾಡುತ್ತಾರೆಂದು ಹೇಳಿ ಮತದಾರರ ಮೇಲೆ ಅವರ ಬಗ್ಗೆ ನೆಗೆಟಿವ್ ಬಿತ್ತಲು ಯತ್ನಿಸುತ್ತಿದ್ದಾರೆ. ಇದು ನಿಜವೇ ಆಗಿದ್ದರೆ ಮೇಲ್ಜಾತಿಯ ಮತದಾರರ ಮೇಲೆ ಪರಿಣಾಮ ಬೀರಿ, ಅವರ ಮತಗಳು ಬಿಜೆಪಿ ಕಡೆಗೆ ವಾಲುವ ಸಾಧ್ಯತೆ ಇದೆ.
ಪ್ರಿಯಾಂಕ್ ಕ್ಷೇತ್ರದುದ್ದಕ್ಕೂ ಸುತ್ತಾಡಿ ‘ಕ್ಷೇತ್ರದಲ್ಲಿ ನನ್ನ ಅವಧಿಯಲ್ಲಿ ಆದಂತಹ ಅಭಿವೃದ್ಧಿ ನೋಡಿ ಮತ ನೀಡಿ’ ಎಂದು ಮತಯಾಚನೆ ಮಾಡುತ್ತಿದ್ದಾರೆ. ಜತೆಗೆ ಮಣಿಕಂಠ ರಾಠೋಡ ರೌಡಿ ಶೀಟರ್ ಎಂಬ ವಿಷಯ ಮುನ್ನೆಲೆಗೆ ತರಲು ಯತ್ನಿಸುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ‘ರೌಡಿ ಶೀಟರ್’ಎಂಬುದು ಚುನಾವಣಾ ವಿಷಯವೇ ಆಗಿಲ್ಲ. ಆದರವರ ಈ ಮಾತು ತಮ್ಮ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬುತ್ತಿದೆ. ಇಡೀ ಕಲಬುರ್ಗಿ ಜಿಲ್ಲೆಯ 9 ಮತ ಕ್ಷೇತ್ರದಲ್ಲಿ ಆಳಂದ ಹೊರತು ಪಡಿಸಿದರೆ ಚಿತ್ತಾಪುರದಲ್ಲೇ ಬಹಳ ವ್ಯವಸ್ಥಿತವಾಗಿ ಕಾಂಗ್ರೆಸ್ ಕಾರ್ಯಕರ್ತರು ಡೋರ್ ಟು ಡೋರ್ ಪ್ರಚಾರ ಮಾಡುತ್ತಿದ್ದಾರೆ. ಮಾಜಿ ಶಾಸಕ ವಿಶ್ವನಾಥ್ ಪಾಟೀಲ್ ಹೆಬ್ಬಾಳ ಮತ್ತು ಬಿಜೆಪಿ ಟಿಕೆಟ್ ಆಕಾಂಕ್ಷಿ ಅರವಿಂದ್ ರಾಠೋಡಗೆ ಬಿಜೆಪಿಯಿಂದ ಕಾಂಗ್ರೆಸ್ ಕಡೆಗೆ ಸೆಳೆದದ್ದು ಕಾಂಗ್ರೆಸಿಗೆ ಬಲ ತಂದು ಕೊಟ್ಟಿದೆ.
ಕ್ಷೇತ್ರದ ರಾವೂರು, ನಾಲವಾರ ಹೋಬಳಿಯಲ್ಲಿ ಬಿಜೆಪಿ ಹಾಗೂ ವಾಡಿ, ಚಿತ್ತಾಪುರದಲ್ಲಿ ಕಾಂಗ್ರೆಸ್ ಬಲವಾಗಿದ್ದರೆ, ಗುಂಡಗುರ್ತಿ ಹೋಬಳಿಯಲ್ಲಿ ಸಮಬಲದ ಫೈಟ್ ಇದೆ. ಕ್ಷೇತ್ರದಲ್ಲಿ ಕೋಲಿ ಮತ್ತು ಲಿಂಗಾಯತ ಸಮಾಜದ ಮತಗಳೆ ನಿರ್ಣಾಯಕವಾಗಿವೆ. ದಲಿತ ಸಮುದಾಯದ ಎಡಗೈ ಜತೆಗೆ ಬಲಗೈ ಸಮುದಾಯದ ಮತಗಳೂ ಪ್ರಿಯಾಂಕ್ ಜತೆ ಗಟ್ಟಿಯಾಗಿ ನಿಲ್ಲುವ ಸಾಧ್ಯತೆಯಿದೆ. ಲಿಂಗಾಯತ ಸಮುದಾಯದ ಮುಖಂಡರು ಪ್ರಿಯಾಂಕ್ ಜತೆ ಇದ್ದಾರೆ. ಇವರು ಎಷ್ಟು ಪ್ರಮಾಣದಲ್ಲಿ ತಮ್ಮ ಸಮುದಾಯದಿಂದ ಮತ ತರುತ್ತಾರೆಯೇ ಎಂಬುವುದರ ಮೇಲೆ ಹಾಗೂ ಕೋಲಿ ಸಮಾಜದ ಮತಗಳು ಯಾವ ಕಡೆ ವಾಲುತ್ತವೆ ಎಂಬುವುದರ ಮೇಲೆ ಅಭ್ಯರ್ಥಿಗಳ ಸೋಲು – ಗೆಲುವು ನಿರ್ಧಾರವಾಗುತ್ತದೆ. ‘ಆಪರೇಷನ್ ಹಸ್ತ’ ಮೂಲಕ ಮರಳಿ ಕಾಂಗ್ರೆಸ್ ಗೂಡಿಗೆ ಸೇರಿರುವ ಕೋಲಿ ಸಮಾಜದ ಪ್ರಭಾವಿ ನಾಯಕ ಬಾಬುರಾವ್ ಚಿಂಚನಸೂರ್ ಅಪಘಾತಕ್ಕೆ ತುತ್ತಾಗಿ ಮನೆ ಸೇರಿರುವುದು ಕಾಂಗ್ರೆಸ್ಸಿಗೆ ಚಿಂತೆಗೀಡು ಮಾಡಿದೆ.
ಬಿಜೆಪಿಗೆ ಲಂಬಾಣಿ ಹಾಗೂ ಲಿಂಗಾಯತ ಮತಗಳು ಸಾಲಿಡ್ ಆಗಿ ಅಲ್ಲದಿದ್ದರೂ ಬಹುತೇಕ ಮತಗಳು ಹೋಗುವ ಸಾಧ್ಯತೆಯಿದೆ ಕಾಂಗ್ರೆಸಿಗೆ ಲಂಬಾಣಿ ಸಮುದಾಯದ 20% ಮತಗಳು ಬರುತ್ತಿರುವುದು ಪ್ಲಸ್ ಪಾಯಿಂಟ್ ಆಗಿದೆ. ಜೆಡಿಎಸ್ ಅಭ್ಯರ್ಥಿ ಸುಭಾಶ್ಚಂದ್ರ ರಾಠೋಡ ಕಣದಲ್ಲಿ ಇದ್ದರೂ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ಒಂದುವೇಳೆ ಅವರು ತಮ್ಮ ಸಮುದಾಯದ ಮತಗಳು ಸೆಳೆಯುವಲ್ಲಿ ಯಶಸ್ವಿಯಾದರೆ ಅದು ಬಿಜೆಪಿಗೆ ದುಬಾರಿ ಆಗಬಹುದು.
ಸದ್ಯ ಸಮಬಲದ ಹೋರಾಟ ನಡೆಯುತ್ತಿದೆ. ಪ್ರಿಯಾಂಕ್ ವಿರುದ್ಧ ಆಡಳಿತ ವಿರೋಧಿ ಅಲೆ ಎಬ್ಬಿಸಲು ಎಷ್ಟೇ ಪ್ರಯತ್ನಿಸಿದರು, ಅದಾಗದಿರುವುದು ಬಿಜೆಪಿಗೆ ಇಕ್ಕಟ್ಟಿಗೆ ಸಿಲುಕಿಸಿದೆ. ದಿನದಿಂದ ದಿನಕ್ಕೆ ಮಣಿಕಂಠ ಸೋರಗುತ್ತಿದ್ದಾರೆ. ಬಿಜೆಪಿಯ ಅಬ್ಬರದ ಪ್ರಚಾರ ಮಣಿಕಂಠ ಕೈ ಹಿಡಿದರೆ, ಪ್ರಿಯಾಂಕ್ ರಾಜಕೀಯ ಭವಿಷ್ಯ ಅತಂತ್ರವಾಗಲಿದೆ.