ದ ಪಾಲಿಟಿಕ್

ಬಿಳಿ ಬಟ್ಟೆ ತೊಟ್ಟು ಕೆಂಪು ಕನಸು ಕಂಡ ಹೋರಾಟಗಾರ

ದ ಪಾಲಿಟಿಕ್

ದ ಪಾಲಿಟಿಕ್

ಮಾರುತಿ ಮಾನ್ಪಡೆ, ಮೂಲತಃ ಒಬ್ಬ ರೈತ ಹೋರಾಟಗಾರರು. ಕಲಬುರ್ಗಿ ಜಿಲ್ಲೆಯ ಅಂಬಲಗಿ ಗ್ರಾಮದ ದಲಿತ ಕುಟುಂಬದಲ್ಲಿ ಹುಟ್ಟಿ ಬೆಳೆದ ಇವರು ಭಾರತ ಕಮ್ಯೂನಿಸ್ಟ್ ಪಕ್ಷ (ಎಂ)ದ ರಾಷ್ಟ್ರೀಯ  ಮುಖಂಡರಲ್ಲಿ ಒಬ್ಬರಾಗುವ ಹಿನ್ನಲೆಯಲ್ಲಿ ಅವರ ಸೈದ್ಧಾಂತಿಕ ಬದ್ಧ ಹೋರಾಟದ ಪಾತ್ರವೇ ಪ್ರಮುಖವಾದದ್ದು. ಜಾತಿ ಹಾಗೂ ರಾಜಕೀಯವಾಗಿ ಬಲಿಷ್ಠಗೊಂಡಿದ್ದ ಅರೆ ಊಳಿಗಮಾನ್ಯ ಶಕ್ತಿಗಳನ್ನು ಎದುರಿಸಿ ಜಿಲ್ಲೆಯಲ್ಲಿ ರೈತರನ್ನು ಸಂಘಟಿಸಿ ರಾಜಕೀಯ ಹೋರಾಟಗಳನ್ನು ರೂಪಿಸಿದ್ದು ಸಾಮಾನ್ಯ ಸಂಗತಿಯೇನಲ್ಲ. ಮಾನ್ಪಡೆಯವರು ತಮ್ಮ ಜಿಲ್ಲೆಗಷ್ಟೇ ಸೀಮಿತವಾಗದೇ ಕ್ರಮೇಣ ರಾಜ್ಯಾದ್ಯಂತ ಜನ ಚಳುವಳಿಗಳನ್ನು ಕಟ್ಟುವಲ್ಲಿ ಶ್ರಮಿಸಿದ್ದರು. ‘ಕ್ರೌರ್ಯವನ್ನೂ ಪ್ರಜಾಸತ್ತಾತ್ಮಕವಾಗಿಯೇ ಕೊನೆಗಾಣಿಸಬೇಕು’ ಎಂಬ ನಿಲುವಿನ ಈ ನಾಯಕ ಚುನಾವಣಾ ರಾಜಕಾರಣದಲ್ಲಿಯೂ ತೊಡಗಿಸಿಕೊಂಡಿದ್ದರು. ಪ್ರಜಾತಾಂತ್ರಿಕ ದಲಿತ, ಆದಿವಾಸಿ, ದೇವದಾಸಿ ಜನವಿಭಾಗಗಳನ್ನೂ ಸಂಘಟಿಸಿದ ನಾಡಿನ ಹಿರಿಯ ರೈತ ಮುಖಂಡ ಹೋರಾಟಗಾರ, ಸಿ.ಪಿ.ಐ.ಎಂ.ಪಕ್ಷದ ರಾಜ್ಯ ನೇತಾರ ಮಾರುತಿ ಮಾನ್ಪಡೆಯವರು ಧಿಡೀರ್ ಇಲ್ಲವಾದದ್ದು ತೀವ್ರ  ಆಘಾತಕರ.

ಈ ಸಂದರ್ಭದಲ್ಲಿ; ನಮ್ಮ ಪತ್ರಿಕೆಯ ಸಲಹಾ ಸಂಪಾದಕರಾದ ಪೀರ್ ಬಾಷ, ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ ವಿಶ್ವವಿದ್ಯಾಲಯ, (ನ್ಯಾಷನಲ್ ಲಾ ಸ್ಕೂಲ್ ಯೂನಿವರ್ಸಿಟಿ) ಕ್ಕಾಗಿ ಹಿಂದೊಮ್ಮೆ ಅವರೊಂದಿಗೆ ಆಪ್ತವಾಗಿ ನಡೆಸಿದ ಸಂದರ್ಶನವನ್ನು  ದ ಪಾಲಿಟಿಕ್ ಓದುಗರಿಗಾಗಿ ಒದಗಿಸಿದ್ದಾರೆ. ಇದನ್ನು ಪ್ರಕಟಿಸುವ ಮೂಲಕ ಜನತೆಯ ಸಂಗಾತಿ ಮಾರುತಿ ಮಾನ್ಪಡೆಯವರಿಗೆ ಪತ್ರಿಕೆ ತನ್ನ ಗೌರವವನ್ನು ಸಲ್ಲಿಸುತ್ತದೆ.

ಬಿ.ಪೀರ  ಬಾಷ : ಕಾಮ್ರೇಡ್, ಕಲಬುರ್ಗಿ ಜಿಲ್ಲೆಯ ಹಳ್ಳಿಯ ಮನುಷ್ಯರಾಗಿದ್ದ ನೀವು ಈಗ ರಾಜ್ಯದ ಪ್ರಮುಖ ರೈತ ನಾಯಕರಾಗಿ ರೂಪುಗೊಂಡಿದ್ದೀರಿ. ಬಡವರ ಮನೆಯ ಮಗನಾದ ನೀವು ಈ ‘ಊರ ಉಸಾಬರಿ’ಯನ್ನು ಹಚ್ಚಿಕೊಳ್ಳುವುದರ ಹಿಂದಿನ ಪ್ರೇರಣೆಗಳೇನು? ನಿಮ್ಮನ್ನ ಈ ಕಮ್ಯೂನಿಸ್ಟರ ಸಹವಾಸಕ್ಕ ಹಚ್ಚಿದವರು ಯಾರು ಅಂತ; 

ಮಾರುತಿ ಮಾನ್ಪಡೆ: ನಾನು ಇದನ್ನ ಶುರು ಹಚ್ಚಿಕೊಂಡಿದ್ದು ‘ಕರಿಲಿಂಗೇಶ್ವರ ಯುವಕ ರೈತ ಸಂಘ’ದ ಮೂಲಕ. ನಾನು ಆಗಷ್ಟೇ ಕಾಲೇಜು ಕಟ್ಟೆ ಹತ್ತಿದ ವಿದ್ಯಾರ್ಥಿ. ತಿಳಿವಳಿಕೆ ಮತ್ತು ನಾಯಕತ್ವದ ಗುಣಗಳನ್ನು ಗುರುತಿಸಿದ ಯಶವಂತ ಹಲಸೂರು ಎಂಬ ವಿದ್ಯಾರ್ಥಿ ಸಂಘಟನೆಯ ಮಿತ್ರ ನನ್ನಲ್ಲಿ ಕರ್ನಾಟಕ ಪ್ರಾಂತ ರೈತಸಂಘ ಕಟ್ಟುವ ಆಸಕ್ತಿಯನ್ನು ಮೂಡಿಸಿದ. ಆಗಲೆ ನನಗೆ ಆಗಿನ ಪ್ರಮುಖ ರೈತ ನಾಯಕ, ಕಮ್ಯೂನಿಸ್ಟ್ ಮುಖಂಡ ವಿ.ಎನ್.ಹಳಕಟ್ಟಿಯವರ ಸಂಪರ್ಕ ಬಂತು. ನನ್ನ ಉತ್ಸಾಹ, ಬದ್ಧತೆ ಗುರುತಿಸಿದ ಸಿ.ಪಿ.ಐ(ಎಂ)ಪಕ್ಷದ ಆಗಿನ ಜಿಲ್ಲಾ ಕಾರ್ಯದರ್ಶಿಯಾಗಿದ್ದ, ಮಹಮ್ಮದ್ಖಾನ್ ಕಮ್ಯೂನಿಸ್ಟ್ ಪಕ್ಷದ ಸದಸ್ಯತ್ವವನ್ನು ನೀಡಿದರು. ಹೀಗೆ ನಮ್ಮೂರಿನ ‘ಕರಿಲಿಂಗೇಶ್ವರ ಯುವಕ ಸಂಘ’ದ ಮೂಲಕ ನಾನು ಕಮ್ಯೂನಿಸ್ಟ್ ಪಕ್ಷಕ್ಕೆ ಬಂದೆ. ನಂತರ 1983ಮೇ 25-26. ಈ ಎರಡು ದಿನಗಳ ಕಾಲ ನಡೆದ ಪಕ್ಷದ ಅಧ್ಯಯನ ಶಿಬಿರದಲ್ಲಿ ಭಾಗವಹಿಸಿದಾಗ ನನಗೆ ರಾಜಕೀಯ ತಿಳಿವಳಿಕೆ ಇನ್ನಷ್ಟು ಹೆಚ್ಚಿತು. ಅಲ್ಲಿ ನನಗೆ ಪಕ್ಷದ ಹಿರಿಯ ನಾಯಕರಾದ ಗಂಗಾಧರ ನಮೋಶಿ, ಚಂದ್ರಶೇಖರ ಬಾಳೆ, ವಿ.ಎನ್.ಹಳಕಟ್ಟಿಯವರ ಒಡನಾಟ ಸಿಕ್ಕಿತು. ಕ್ರಮೇಣ ಇಡಿಯಾಗಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡೆ. 

–  ನೀವು ಹುಟ್ಟಿ ಬೆಳೆದ ಪರಿಸರ ಹೇಗಿತ್ತು?

ಮಾನ್ಪಡೆ: ನಮ್ಮೂರಾಗ ಸ್ಕೂಲು ಸೆವೆಂತ್ ಮಟ ಇತ್ತು. ನಮ್ಮೂರ ಪಕ್ಕದ ಇನ್ನೊಂದೂರಾಗ ನಾಲ್ಕನೇತ್ತ ಅಷ್ಟಾ ಇತ್ತು. ಅಲ್ಲಿ ಊರಾಗ ಸಾಲಿ ನಡೀಬಾರ್ದು ಅಂತಾ ಇದ್ದ ಗೌಡ. ನಾವು ಅದನ್ನ ಐದನೇತ್ತ ಮಾಡ್ರಿ ಅಂದ್ರ, ಅಂವ ಬ್ಯಾಡ ಅಂತಿದ್ದ. ಇರೋ ಸಾಲೀನೂ ನಡೀಬಾರ್ದು ಅನ್ನಾಂವ. ಬರೋ ಮೇಸ್ಟ್ರುಗಳನ್ನೂ ಕರ್ಕೊಂಡ್ಹೋಗ್ತಿದ್ದ, ಇಸ್ಪೀಟ್ ಆಡಾದಕ್ಕ. ನಾವು ಮೀಟಿಂಗ್ ಮಾಡಿ ಸ್ಕೂಲ್ ಸುಧಾರಿಸಬೇಕು, ಮೇಸ್ಟ್ರು ಪಾಠ ಮಾಡಬೇಕು ಅಂತೆಲ್ಲಾ ಮಾಡಿದ್ರ, ಊರು ಹಾಳ್ ಮಾಡಾಕ ಹತ್ಯಾರ ಇವ್ರು ಅಂತಿದ್ದ ನಮಗಾ. ಹಿಂಗ, ಸಾಲಿ ಓದಾಕ ಹೋದ್ರ ದನ ಕಾಯಾಕ ಹೋಗಾರ್ ಯಾರು, ಒಕ್ಕಲುತನಕ್ಕ ಹೋಗಾರು ಯಾರು ಅಂತಿದ್ರು. ಇವತ್ತು ಆ ಊರಾಗ ಆರುನೂರು ಹುಡುಗ್ರು ಅದಾವ ಶಾಲ್ಯಾಗ. ಅವೇರ್‍ನಸ್ ಬಂದಿದೆ. ಅಂಥಾ ಫ್ಯೂಡಲ್ ಸೊಸೈಟಿ ಇಲ್ಲೀದು.

–   ನಿಮ್ಮ ಕುಟುಂಬದ ಹಿನ್ನಲೆ ಏನು?

ಮಾನ್ಪಡೆ: ನಮ್ಮದು ಬುಟ್ಟಿ ನೇಯೋ ಫ್ಯಾಮಿಲಿ.

–  ಕೊರವರು? ಅಧ್ಯಯನದ ದೃಷ್ಟಿಯಿಂದ ಕೇಳ್ತಿದ್ದೇನೆ. ಮಾಹಿತಿಗಾಗಿ.

ಮಾನ್ಪಡೆ : ಹೌದು. ಊರಾಗ ಇನ್ಸಲ್ಟು ತುಂಬಾ.

–  ಕುಟುಂಬದ ಪರಿಸ್ಥಿತಿ ಹೇಗಿತ್ತು? 

ಮಾನ್ಪಡೆ : ಆರ್ಥಿಕ ಹಿನ್ನೆಲೆಯಲ್ಲಿ ನಿರ್ಗತಿಕರೇನಲ್ಲ. ಆದರೆ ‘ಬಡತನದ ಫ್ಯಾಮಿಲಿ’. ನಮ್ಮ ಕುಟುಂಬಕ್ಕೆ ಇದ್ದದ್ದು  ತಾತನ ಕಾಲದಿಂದ ಹದಿನೆಂಟು ಎಕ್ರೆ ಜಮೀನು. ಆದ್ರೂ ಕೂಡ ಊಟಕ್ಕ ಜ್ವಾಳ ಇರ್ತಿರ್ಲಿಲ್ಲ. ಸುತ್ತೆಲ್ಲಾ ನೀರಾವರಿ ಇದ್ರೂ, ಜಮೀನಿಗೆ ನೀರಾವರಿ ಸೌಕರ್ಯ ಪಡೆಯೋ ಶಕ್ತಿ ನಮಗೆ ಇರಲಿಲ್ಲ. ಹಾಗಾಗಿ ಆ ಜಮೀನಿನಿಂದ ಆದಾಯ ಬರ್ತಿರಲಿಲ್ಲ.

ಓದೋದ್ರಾಗ ನಾನು ಬುದ್ಧಿವಂತ ಹುಡುಗ. ಒಂದಿನ ನಮ್ಮ ಮೇಷ್ಟ್ರು ಚನ್ನಯ್ಯಸ್ವಾಮಿ ಅಂತಾ. ನಮ್ಮ ಮನೀಗೆ ಬಂದ್ರು. ಹುಡುಗ ಭಾಳಾ ಶಾಣ್ಯಾ ಅದಾನ ಹನ್ಮಂತಪ್ಪ. ಇವನಿಗೆ ಓದಿಸ್ರೀ, ಶಾಲಿ ಬಿಡಿಸಬ್ಯಾಡ್ರಿ ಅಂತಾ ನಮ್ಮ ಮುತ್ಯಾನಿಗೆ ಹೇಳಿದ್ದರಿಂದ ‘ಮೇಷ್ಟ್ರು ಮನೀತನಕ ಬಂದು ಹೇಳ್ಯಾನ’ ಅಂತಾ ನಮ್ಮ ಮುತ್ಯಾನಿಗೆ ಅನ್ಸಿತ್ತು.

ನಮ್ಮೂರಾಗ ಹೈಸ್ಕೂಲ್ ಓದಾಕ ಬ್ಯಾರೆ ಊರಾಗಿನ ನಮ್ಮ ಸಂಬಂಧಿಕರ ಮನೆಗೆ ಹೋದೆ. ಅದಾ ಕಾಲಕ್ಕ ಬರಗಾಲ ಬಂತು. ಅವರ ಮನ್ಯಾಗೂ ಇಟ್ಕೊಳ್ಳಾಕ ಆಗದಂಥಾ ಪರಿಸ್ಥಿತಿ. 72-73ರಲ್ಲಿ, ಅವಾಗ ಎಸ್ಸೆಸ್ಸೆಲ್ಸಿ ನಾನು. ಆಗ ನಾನು ಬ್ಯಾಲಹಳ್ಳಿ ಪ್ರೊಜೆಕ್ಟ್ನಲ್ಲಿ ಗುದ್ದಲಿಯಿಂದ ನೆಲ ಅಗೆಯೋ ಕೂಲಿ ಕೆಲಸ ಮಾಡಿದೆ. ಮನ್ಯಾಗ ಜ್ವಾಳ ಮುಗಿದಿದ್ವು. ಅದಕ್ಕ ಮೆಕ್ಕೆಜ್ವಾಳದ ರೊಟ್ಟಿ, ಬುತ್ತಿ ಕಟ್ಟಿ ನನಗೆ ಎಕ್ಸಾಮಿಗೆ ಕಳಿಸಿದ್ದು ನೆನಪಿದೆ. ಅಂತಾದ್ರಾಗ ನಾನು ಸೆಕೆಂಡ್ ಕ್ಲಾಸ್ನ್ಯಾಗ ಪಾಸಾದೆ. ಮನ್ಯಾಗ ಹೊಟ್ಟೆಪಾಡಿಗೆ ಬುಟ್ಟಿ ಹೆಣೀತಿದ್ರು.

–  ನೀವೂ ಬುಟ್ಟಿ ಹೆಣಿದೀರಾ?

ಮಾನ್ಪಡೆ : ಹೆಣಿದೀನ್ ನಾನು. ಅಪ್ ಟು ಎಸ್ಸೆಸ್ಸೆಲ್ಸಿ ಆ ಕೆಲ್ಸ ಮಾಡೀನಿ. ನನಗೆ ಮೇಲ್ಜಾತಿ ಗೆಳೆಯರ ಭಾಳಾ ಸಹವಾಸ ಇತ್ತು. ಆದ್ರೆ, ನಮ್ಮ ತಂದೆತಾಯಿ ನಮ್ಮನಿಗೆ ಅವರ್ನ ಕರ್ಕೊಂಡು ಬರಬೇಡ ಅಂತಾ ಹೇಳೋರು. ಅವ್ರ ಮನ್ಯಾಗ ಹೋದ್ರೂ ನನ್ನನ್ನ ಕರ್ಕೊಂಡು ಬರಬೇಡ ಅಂತಾ ಅವರ ತಂದಿತಾಯಿ ಹೇಳತಿದ್ರು. ಲಿಂಗಾಯತ್ರು ಮೇಲ್ಜಾತಿಯವ್ರು, ನಮ್ಮ ಮನೆಗೆ ಬಂದ್ರೆ ನಮಗೆ ಪಾಪ ಬರ್ತೈತಿ ಅಂತಿದ್ರು.

– ನಿಮಗೂ ಅಸ್ಪೃಶ್ಯತೆಯ ಅನುಭವ ಆಗಿರುವ ಉದಾಹರಣೆಗಳಿವೆಯಾ?

ಮಾನ್ಪಡೆ : ಆಗಿದೆ. ನಾನು 5ನೇ ಇಯತ್ತೆ ಓದ್ತಿದ್ದೆ. ಆಗ ನಾವು ಹತ್ತು ಹದಿನೈದು ಹುಡುಗ್ರು ಮೈಸಲಿಗೆಗೆ ನಾಟಕ ನೋಡಾಕ ಹೋಗಿದ್ವಿ. ಆ ಊರಾಗ ಒಂದು ಮನ್ಯಾಗ ನಮೀಗೆ ಊಟಕ್ಕ ಕರೆದ್ರು. ನಮ್ಮದರಾಗ ಒಬ್ಬ ಗೆಳೆಯನ ಸಂಬಂಧಿಕರ ಮನಿ ಅದು. ಎಲ್ಲರೂ ಮ್ಯಾಲ ಕುಂತು ಊಟ ಮಾಡಿದ್ರು, ಅದ್ರಾಗ ನನ್ನೊಬ್ಬನಿಗೇ ದನದ ಕೊಟ್ಟಿಗ್ಯಾಗ ಕುಂದ್ರಿಸಿ ಕಬ್ಬಿಣದ ಪುಟ್ಟಿಯೊಳಾಗ ಊಟಕ್ಕ ನೀಡಿದ್ರು. ನನಗೂ ಹಸಿವಾಗಿತ್ತು. ಊಟ ಮಾಡೋದು ಅನಿವಾರ್ಯವಾಗಿತ್ತು. ಆದ್ರ ಅವಮಾನ ಆಗ್ತಿತ್ತು. ಪೂರ್ತಿ ಉಣ್ಣಾಕ ಆಗ್ಲಿಲ್ಲ. ಅರ್ಧ ಉಂಡು ಎದ್ದು ಬಿಟ್ಟೆ. ನನಗೆ ಅಪಮಾನ ಅಗಿದ್ದು, ನಂಜೊತೆ ಬಂದ ಗೆಳೆಯರಿಗೂ ದುಃಖ ಆಗಿತ್ತು. ಅವರೂ ತಮ್ಮ ಸಂಬಂಧಿಕರಿಗೆ ಬೈದ್ರು ಖರೆ. ಆದ್ರೆ ಏನ್ಮಾಡ್ಲಿಕ್ಕಾಗ್ತದೆ? ಹುಡುಗ್ರು ಅವ್ರು, ರೆಸಿಸ್ಟ್ ಮಾಡೋ ಸ್ಥಿತೀಲಿ ಇರ್ಲಿಲ್ಲ.

ನಮ್ಮ ಊರಿನ ಹೋಟೆಲ್ನಲ್ಲಿ ನಮಗೆ ಚಾ ಕುಡಿಯಾಕ ಯಾರೂ ಕರೀತಿರಲಿಲ್ಲ. ನಮ್ಮನಿಗೆ ಯಾರರ ಬಂದ್ರ ನಮ್ಮನ್ಯಾಗಾ ಚಾ ಮಾಡ್ತಿದ್ವಿ. ಹೋಟೆಲ್ಲಿಗೆ ಹೋಗ್ತಿರಲಿಲ್ಲ. ಹೋಟೆಲ್ನ್ಯಾಗ ಹೊರಾಗ ಕಪ್ ಇಡ್ತಿದ್ರು. ಅದಕ್ಕ ನಮ್ಮ ಮುತ್ಯಾ ಅಲ್ಲಿಗೆ ಹೋಗಾದ ಬ್ಯಾಡ ಅಂತಾ ಬಿಟ್ ಬಿಟ್ಟಿದ್ದ. ದೇವಸ್ಥಾನಕ್ಕ ನಾವು ಹೋಗಂಗಿದ್ದಿಲ್ಲ.

ಸಿನಿಮಾ ಥೇಟರ್ನಲ್ಲಿ ದಲಿತ ಹುಡುಗ ಊರಿನ ಹುಡುಗಿಯ ಜೊತೆ ಮಾತಾಡಿದ ಎಂಬ ಒಂದು ಸಣ್ಣ ಘಟನೆ ಇಟ್ಕೊಂಡು ಊರಿನ ಎಪ್ಪತೈದು ದಲಿತರ ಗುಡಿಸಲುಗಳನ್ನು ಮೇಲ್ಜಾತಿಯವರು ಬೆಂಕಿ ಹಚ್ಚಿ ಸುಟ್ಟಿದ್ದರು. ಕಣ್ಣೆದುರೇ ಆ ಅಮಾಯಕರ ಗುಡಿಸಲುಗಳು ಸುಡುವುದನ್ನು ಕಂಡಿದ್ದೇನೆ. ಆ ಜನ ಕ್ಷಣಾರ್ಧದಲ್ಲಿ ಎಲ್ಲ ಕಳಕೊಂಡು ಅನಾಥರಂತಾದಾಗ ಅವರಿಗಾಗಿ ಜೋಳ, ಅಕ್ಕಿ, ಬಟ್ಟೆ, ಇತ್ಯಾದಿ ಸಂಗ್ರಹಿಸಿದ್ದೆವು. ಈ ದೌರ್ಜನ್ಯದ ವಿರುದ್ಧ ಪ್ರತಿಭಟಿಸಿದ್ವಿ. ಆದರೆ ಬೆಂಕಿ ಹಚ್ಚಿದವರಿಗೆ ಶಿಕ್ಷೆಕೊಡಿಸೋಕೆ ಆಗಲಿಲ್ಲ. ಸುಟ್ಟ ಮನೆಗಳಿಗೆ ಪ್ರತಿಯಾಗಿ ಪರಿಹಾರ ಕೊಡ್ತೀವಿ, ಮನೆ ಕಟ್ಟಿಸಿ ಕೊಡ್ತೀವಿ, ಅಂದದ್ದಕ್ಕ ಜನ ತಣ್ಣಗಾದ್ರು. ಹಣಬಲದ ಮೂಲಕ ಜಾತಿ ದೌರ್ಜನ್ಯವನ್ನು ಮುಚ್ಚಿಹಾಕುವಲ್ಲಿ ಮೇಲ್ಜಾತಿಯವರು ಸಕ್ಸಸ್ ಆದ್ರು. 

–  ಈ ಬಗೆಯಲ್ಲಿ ದಮನಿಸಿಯೂ ದಕ್ಕಿಸಿಕೊಂಡ, ಘಟನೆ ಹಿಂದಿನ ಶಕ್ತಿಯಾವುದು?

ಮಾನ್ಪಡೆ : ವೀರೇಂದ್ರ ಪಾಟೀಲರು.

–  ಜಾತಿಕಾರಣದ ದಮನಗಳು ನಡೆಯುತ್ತಿದ್ದಾಗ ಇದಕ್ಕೆ ನಿಮ್ಮ ಪ್ರತಿರೋಧ ಎಂಥದ್ದಾಗಿತ್ತು?

ಮಾನ್ಪಡೆ : ಬಸವಕಲ್ಯಾಣ ತಾಲೂಕಿನ ಚಿಕ್ಟಾ ಅನ್ನೋ ಊರು. ಊರ ಹುಡುಗ್ರು ಸಂಘ ಕಟ್ಟಿ, ಅಂಬೇಡ್ಕರ್ ಫೋಟೋ ಹಾಕಿದ್ರು. ಅದಕ್ಕ ಯಾರೋ ಸೆಗಣಿ ಹಾಕಿದ್ರು. ದಲಿತರು ದೂರು ನೀಡಿದ್ರು. ದೂರುದಾರರ ಮೇಲೆ ಊರಿನಲ್ಲಿ ಹಲ್ಲೆಯಾಯ್ತು. ಆನಂದ ಅನ್ನೋ ಹುಡುಗನ ಎರಡೂ ಕೈಕಾಲು ಕಟ್ಟಿ ರೋಡಿನ ಮೇಲೆ ಮಲಗಿಸಿ ಬಾಯಾಗ ಉಚ್ಚೀ ಒಯ್ದ್ರು. ಅವನಿಗೆ ಜೀವಂತ ಬೆಂಕಿ ಹಚ್ಚಬೇಕು ಅನ್ಕೊಂಡಿದ್ರು, ಆಗ್ಲಿಲ್ಲ. ಇದ್ರಿಂದ ಊರ ದಲಿತರೇ ಹೆದರಿ ಕಾಂಪ್ರಮೈಸ್ ಆದ್ರು. ಇಂತಹ ಸಂದರ್ಭದಲ್ಲಿ ದಲಿತರಲ್ಲಿ ಅತ್ಮವಿಶ್ವಾಸ ಮೂಡಿಸುವುದಕ್ಕಾಗಿ ಊರ ‘ಕಲ್ಲೇಶ್ವರ ದೇವಸ್ಥಾನ ಪ್ರವೇಶ’ಕ್ಕಾಗಿ ಹೋರಾಟ ಮಾಡಿದ್ವಿ. ಬಸವವಕಲ್ಯಾಣದ ಬಸವೇಶ್ವರ ದೇವಸ್ಥಾನದಲ್ಲಿ ದಲಿತರಿಂದಲೇ ದೇವರ ಮೂರ್ತಿಗೆ ಹಾರ ಹಾಕಿಸಬೇಕು ಅಂತಾ. ಬಸವಕಲ್ಯಾಣದಿಂದ ಪಾದಯಾತ್ರೆ ಆರಂಭಿಸಿ ಎರಡು ದಿನ ನಡೆದು, ಹಲ್ಲೆ ನಡೆದ ಗ್ರಾಮ ‘ಚಿಟ್ಟಾ’ವನ್ನು ತಲುಪುವುದು. ಆ ಊರ ಕಲ್ಲೇಶ್ವರ ದೇವಸ್ಥಾನವನ್ನು ದಲಿತರೊಂದಿಗೆ ಪ್ರವೇಶಿಸಿ, ಹಲ್ಲೆಗೀಡಾದ ಅದೇ ಹುಡುಗನಿಂದ ಮೂರ್ತಿಗೆ ಮಾಲೆ ಹಾಕಿಸಿದ್ವಿ. ಆ ಹುಡುಗ ಈಗ ಪಂಚಾಯತ್ ಸದಸ್ಯ.

– ಈ ಬಗೆಯ ಪ್ರತಿರೋಧದಲ್ಲಿ ದಲಿತ ಸಮುದಾಯದ ಬೆಂಬಲ ಮತ್ತು ಮೇಲ್ಜಾತಿ ಸಮುದಾಯಗಳ ಪ್ರತಿಕ್ರಿಯೆ ಹೇಗಿತ್ತು?

ಮಾನ್ಪಡೆ : ದಲಿತರ ಪರವಾಗಿ ನಾವು ಮಾಡಿದ ಈ ಹೋರಾಟಕ್ಕೆ ದಲಿತ ಸಂಘಟನೆಗಳ ಬೆಂಬಲ ಸಿಗ್ಲಿಲ್ಲ. ವ್ಯತಿರಿಕ್ತವಾಗಿ ಬಸವಕಲ್ಯಾಣದ ದಲಿತರನ್ನು ಕಾಂಪ್ರಮೈಸ್ ಮಾಡಿಸಲು ಪ್ರಯತ್ನಿಸಿದರು. ಮಾರುತಿರಾವ್ ಮಾಳೆ ಅಂತಾ ಎಂ.ಎಲ್.ಎ. ಸಂಧಾನಕ್ಕೆ ಒತ್ತಾಯ ಮಾಡಿದ್ರು. ನಾನು ಅವರ ಮಾತು ಕೇಳ್ಲಿಲ್ಲ. ಬಾಗೇವಾಡಿಯ ಎಂ.ಎಲ್.ಎ ದೇಸಾಯಿ, ಅಲಕೋಡು ಹನುಮಂತಪ್ಪ, ರಮೇಶ್ ಜಿಗಜಿಣಗಿ ಇವರೆಲ್ಲಾ ಕಾಂಪ್ರಮೈಸ್ ಮಾಡಿಸಲು ಮುಂದಾದ್ರು. 4 ಲಕ್ಷರೂ ರೊಕ್ಕ ಹಂಚಿದ್ರು. ನಮ್ಮ ಹೋರಾಟ ಮುರಿಯೋದಕ್ಕೆ. ಆದ್ರೂ ದಲಿತ ಜನ ನಮ್ಮ ಜೊತೆಗೇ ಬಂದ್ರು.

–  ವರ್ಗ ಚಳುವಳಿ ಕಟ್ಟೋದಕ್ಕೆ ಇಂತಹ ಹೋರಾಟ, ಇಶ್ಯೂಗಳು ಹೇಗೆ ಸಹಾಯವಾಗ್ತವೆ?

ಮಾನ್ಪಡೆ: ಎಲ್ಲಿವರೆಗೆ ಸಾಮಾಜಿಕ ಅಸಮಾನತೆಯನ್ನು ಕೈಗೆತ್ತಿಕೊಳ್ಳೋಕೆ ಆಗಲ್ವೋ…, ಆರ್ಥಿಕ ಅಸಮಾನತೆ ನಂತರದ ಪ್ರಶ್ನೆ. ಮನುಷ್ಯನಿಗೆ ಬದುಕುವ ಪ್ರಶ್ನೆ ಎದುರಾದಾಗ ಆರ್ಥಿಕ ಪ್ರಶ್ನೆ ಎಷ್ಟೇ ದೊಡ್ಡದಾಗಿದ್ರೂ ಕೂಡ, ಅವನ ಜಾತಿ ಪ್ರಶ್ನೆ ಪ್ರಧಾನವಾಗ್ತದೆ. ಅವನು ಸಾಮಾಜಿಕವಾಗಿ ಹೀನ ಸ್ಥಿತಿಯಲ್ಲಿರುತ್ತಾನೆ. ಅದರಿಂದ ಹೊರ ಬರಬೇಕಾದ್ರೆ ಸಾಮಾಜಿಕ ಸಮಸ್ಯೆಯನ್ನು ಹೊಡೆದು ಹಾಕಿದ ಮೇಲೆಯೇ ಆರ್ಥಿಕ ಪ್ರಶ್ನೆ ಯಶಸ್ವಿಯಾಗ್ತದೆ. ದಲಿತರಿಗೆ ಸಾಲ ಕೊಡಿಸೀವಿ, ಹೋಮ್ಸೈಟ್ ಕೊಡಿಸೀವಿ. ಅದರ ಜೊತೆಗೆ ಸಾಮಾಜಿಕ ಪ್ರಶ್ನೆ ಕೈಗೆತ್ತಿಕೊಳ್ಳದೇ ಹೋದ್ರೆ. ವರ್ಗಶೋಷಣೆ ಬಗ್ಗೆ ಸರಿಯಾದ ರೀತಿ ಅಪೀಲ್ ಮಾಡಕ್ಕಾಗಲ್ಲ.

–  ಆರ್ಥಿಕತೆ ತಳರಚನೆ, ಸಂಸ್ಕೃತಿ ಮೇಲ್ ರಚನೆ ಎನ್ನುತ್ತದೆ ಅಲ್ವಾ ಮಾರ್ಕ್ಸ್ ವಾದಿ ಸಿದ್ಧಾಂತ..?

ಮಾನ್ಪಡೆ: ದಲಿತರಿಗೆ ಭೂಮಿ ಪ್ರಶ್ನೆ ಅಂದರೆ ಸಾಮಾಜಿಕವೂ ಹೌದು. ಮಾರ್ಕ್ಸ್ ವಾದಿ ಜಾತಿ ಪ್ರಶ್ನೆಯನ್ನು, ಸಂಸ್ಕೃತಿ ಪ್ರಶ್ನೆಯನ್ನೂ ಗಂಭೀರವಾಗಿ ಪರಿಗಣಿಸಿದ್ದಾರೆ. ಪಿ.ಸುಂದರಯ್ಯ ಅವರ ಪೂರ್ಣ ಹೆಸರು ಸುಂದರರಾಮ ರೆಡ್ಡಿ ಅಂತ. ಜಾತಿಯಲ್ಲಿ ರೆಡ್ಡಿಗಳು. ದೊಡ್ಡ ಜಮೀಂದಾರರು. ಆದರವರು ಹೆಸರು ಬದಲಿಸಿಕೊಂಡು, ಬಡರೈತ ಕೂಲಿಕಾರರ ಜೊತೆ ಸೇರಿಕೊಂಡು ಆರ್ಮ್ ಸ್ಟ್ರಗಲ್ ಮಾಡಿದ್ರು. ಆಮ್ರ್ಸ್ ಹಿಡಿದದ್ದು ದಲಿತರು. ದಲಿತರಾಗಿ ಹಿಡಿಲಿಲ್ಲ, ಕೂಲಿಕಾರರಾಗಿ ಹಿಡಿದರು. ಎ.ಕೆ.ಗೋಪಾಲನ್ ಜಾತಿಪ್ರಶ್ನೆ ಎತ್ತಿಕೊಂಡಿದ್ದರಿಂದ ಮನೆಯಿಂದ ಹೊರಗೆ ಹಾಕಲ್ಪಟ್ಟರು. ಹಾಗಾಗಿ ಕಮ್ಯೂನಿಸ್ಟರು ಯಾವತ್ತೂ ಜಾತಿ ವಾಸ್ತವಗಳಿಗೆ ಕುರುಡಾಗಿಲ್ಲ. ಡಿ.ಎಸ್.ಎಸ್. ಕಟ್ಟಿದವರು ಕಮ್ಯೂನಿಸ್ಟರು. ಲೀಡರ್ಶಿಪ್ ತಗೊಂಡ ಕಮ್ಯೂನಿಸ್ಟ್ ಹುಡುಗ್ರು ಶಿಸ್ತಿನ ಕ್ರಮಕ್ಕೆ ಒಳಗಾದ್ರು. ಅವಾಗ ಸೋಷಲಿಸ್ಟರು ಮುಂದಾದ್ರು, ಕಮ್ಯೂನಿಸ್ಟರು ಹಿಂದಾದ್ರು.

ಆಲ್ ಇಂಡಿಯಾ ಲೆವೆಲ್ನಲ್ಲಿಯೂ 1976ರಿಂದಲೂ ನಮ್ಮ ಪಾರ್ಟಿಯಲ್ಲಿ ದಲಿತರ ಪ್ರಶ್ನೆ ಕುರಿತು ಚರ್ಚೆಗಳು ನಡೆದಿವೆ. 2006ರಲ್ಲಿ ಆಲ್ ಇಂಡಿಯಾ ಸಮಾವೇಶ ಆಗಿದೆ ಈ ಕುರಿತಂತೆ. ಅಲ್ಲಿ ದಲಿತ ಸಬ್ಕಮಿಟಿ ಆಗಿದೆ. ನಮ್ಮ ಪಕ್ಷದ 18ನೇ ಅಧಿವೇಶನ, 2004ರಲ್ಲಿ  ಈ ಬಗ್ಗೆ ಚರ್ಚಿಸಿದ್ದೇವೆ. ಆಂದ್ರಪ್ರದೇಶ ದಲ್ಲಿ, ತಮಿಳುನಾಡಿನಲ್ಲಿ ಜಾತಿ ವಿರೋಧಿ ಸಮಿತಿಯಾಗಿದೆ. ಕರ್ನಾಟಕದಲ್ಲೂ ಪ್ರಯತ್ನ ನಡೀತಿದೆ. ಉಡುಪಿಯಲ್ಲಿ ನಮ್ಮ ಅನುಭವ ಸರಿ ಅಂತಾ ತೋರಿಸಿದೆ. ಪಂಕ್ತಿಭೇದ, ಮಡೆಸ್ನಾನದ ವಿರುದ್ಧ ಅಚಲ ಹೋರಾಟ ಮಾಡ್ತಿದ್ದೇವೆ. ಒಂದೇನಂದ್ರೆ ಜಾತಿ ಹೋರಾಟಗಳಿಗಾಗಿ ಪ್ರತ್ಯೇಕ ಸಂಘಟನೆ ಅಗತ್ಯವಿಲ್ಲ. ಅದಕ್ಕಾಗಿ ಒಂದು ವೇದಿಕೆ ಇದೆ ಅಷ್ಟು ಸಾಕು. ಕೊರಗರ ನಡುವೆಯೂ ನಾವು ಕೆಲಸ ಮಾಡ್ತಿದ್ದೇವೆ. ಆದರೆ ಒಂದಂತೂ ಸ್ಪಷ್ಟ ನಾವು ಜಾತಿಯನ್ನು ಜಾತಿ ಕಣ್ಣೋಟದಿಂದ ನೋಡಿಲ್ಲ, ವರ್ಗ ಕಣ್ಣೋಟದಿಂದ ಕಂಡಿದ್ದೇವೆ.

–  ರೈತ ರೈತರನ್ನು ಸಂಘಟಿಸುವ ಸಂಧರ್ಭದಲ್ಲಿ ಜಾತಿ ಯಾವರೀತಿ ಪಾತ್ರವಹಿಸಿದೆ?

ಮಾನ್ಪಡೆ: ನಾನು ದಲಿತ ಆಗಿದ್ರೂ, ರೈತರನ್ನು ಸಂಘಟಿಸಲು ನನಗೆ ಇದು ಎಲ್ಲೂ ಅಡ್ಡಿಯಾಗಿಲ್ಲ. ಆದ್ರೆ, ಮೇಲ್ಜಾತಿಯವರಿದ್ದಾಗ ಮೇಲ್ಜಾತಿಯ ಎಷ್ಟು ಮಾಸ್ ಮೊಬಲೈಜ್ ಆಗತಿತ್ತೋ ಅಷ್ಟು ನನ್ನ ಚಟುವಟಿಕೆಯಿಂದ ಆಗ್ಲಿಲ್ಲ. ಹಾಗಂತ ಶ್ರೀರಾಮರೆಡ್ಡಿ, ಭಯ್ಯಾರೆಡ್ಡಿಯವರು ಕೋಲಾರದಲ್ಲಿ ಇದ್ರೂ ಅವರಿಗೂ ರೆಡ್ಡಿ ಸಮುದಾಯದ ರೈತರನ್ನು ಕರ್ಕೊಂಡು ಬರೋಕೆ ಆಗಿಲ್ಲ. ಪಂಪ್ಸೆಟ್ ಬಳಕೆದಾರರ, ತೊಗರಿ ಬೆಳೆಗಾರರ ಸಂಘಟನೆ ಸಂಧರ್ಭದಲ್ಲಿ ಇದು ಅಡ್ಡಿಯಾಗಿಲ್ಲ. ಆದರೆ ಚುನಾವಣೆಗಳಲ್ಲಿ ಅಡ್ಡಿಯಾಗಿದೆ. ನಮ್ಮಿಂದ ಅಲ್ಲದಿದ್ದರೂ ನಮ್ಮ ಪ್ರತಿಸ್ಪರ್ಧಿಗಳಿಂದ ಜಾತಿ ಬಳಕೆಯಾಗಿದೆ. ಆದರೆ ಜನಚಳುವಳಿಯ ಸಂದರ್ಭದಲ್ಲಿ ಅಡ್ಡಿಯಾಗಿಲ್ಲ. ಲಿಂಗಾಯತ ಕೂಲಿ ಕಾರ್ಮಿಕರೂ ನಮ್ಮ ಜೊತೆ ಬಂದಾರ. ನಮ್ಮ ಯಾವ ಕಾರ್ಯಕ್ರಮದಲ್ಲೂ ಎರಡು ಪಂಕ್ತಿಗಳಾಗಿಲ್ಲ. ಹಾಗೆ ನೋಡಿದ್ರೆ ನಮ್ಮಲ್ಲಿ ಮೆಜಾರಿಟಿ ಜನ ಲಿಂಗಾಯತ್ರು. ಆದ್ರೆ ಚುನಾವಣೆ ಸಂದರ್ಭದಲ್ಲಿ ಜಾತಿ ಶಕ್ತಿಯನ್ನು ನಾವು ಮೀರಕ್ಕಾಗಿಲ್ಲ. ನಾನು ಮೇಲ್ಜಾತಿಯವನಾಗಿದ್ರೆ ಬೇರೇನೆ ಆಗ್ತಿತ್ತು ಚುನವಣಾ ಫಲಿತಾಂಶ.

–  ಮುಖ್ಯವಾಗಿ ಈ ಪ್ರದೇಶ ದೊಡ್ಡ ರೈತರು ಅಥವಾ ಜಮೀಂದಾರರ ಪ್ರಾಬಲ್ಯವಿರುವಂಥಾದ್ದು. ಇಲ್ಲಿ, ರೈತ ಚಳುವಳಿ ಎದುರಿಸಿದ ಸವಾಲುಗಳು ಎಂಥವು? 

ಮಾನ್ಪಡೆ: ರೈತ ಹೋರಾಟ ಹೇಗೆ ಮುಂದುವರೆಸಬೇಕು ಅಂತಾ ಮಾತಾಡ್ತಾ ಕೂತಿದ್ದೆ, ರಸ್ತೆಪಕ್ಕ ಒಂದು ಮರದ ಕೆಳಾಗ. ಹತ್ತು ಹನ್ನೆರಡು ಮಂದಿ ರೈತರು, ರೈತ ಹೆಣ್ಣುಮಕ್ಕಳು ಮತ್ತು ನಾನು. ಇದ್ದಕ್ಕಿದ್ದಂಗ ಎದುರಿಗಿದ್ದ ತಾರಾಬಾಯಿ ಜೋರಾಗಿ ಒದರಿ ಓಡಿಬಂದು ನನಗ ದಬ್ಬಿ ಬಿಟ್ಲು. ಏನು, ಯಾಕ ಅಂತಾ ಯೋಚಿಸೋದ್ರಾಗ ನನ್ನ ತಲೀಮ್ಯಾಲ ಬೀಳಬೇಕಿದ್ದ ದೊಡ್ಡ ಸೈಜುಗಲ್ಲು ನೆಲಕ್ಕ ಬಿತ್ತು. ಏಳೆಂಟು ಮಂದಿ ಏರಿಬಂದ್ರು ನನಗ ಬಡಿಯಾಕ. ಆ ಹೆಣ್ಣುಮಗಳು ನನಗ ಅಡ್ಡ ನಿಂತ್ಲು. ಅಷ್ಟೊತ್ತಿಗೆ ಊರಮಂದೀನೂ ಸೇರಿದ್ರು, ಒಬ್ಬ ಕಾನ್ಸ್ಟೇಬಲ್ಲೂ ಬಂದ, ನೀವಿನ್ನು ಹೊಂಟುಬಿಡ್ರೀ ಅಂತಾ, ದಬ್ಬಿಕೊಂಡು ಬಂದು ಬಸ್ ಹತ್ತಿಸಿ ಕಳಿಸೇ ಬಿಟ್ರು. 

–   ಅಲ್ಲೇ ಇದ್ದಿದ್ರೆ ನಿಮಗೆ ಏನಾದ್ರೂ ಆಗಿಬಿಟ್ಟಿರಾದು!

ಮಾನ್ಪಡೆ: ಏನಾದ್ರೂ ಅನ್ನಾದೇನು, ತಾರಾಬಾಯಿ ಅನ್ನೋ ಹೆಣ್ಣುಮಗಳು ಅಡ್ಡಬಂದಿದ್ದಿಲ್ಲ ಅಂದ್ರೆ ನನ್ನ ಮರ್ಡರಾ ಆಗಿಬಿಡ್ತಿತ್ತು.

–  ಆ ಘಟನೆಯ ಹಿನ್ನೆಲೆ ಹೇಳಿ ಸ್ವಲ್ಪ?

ಮಾನ್ಪಡೆ: ಗುಲ್ಬರ್ಗಾ ಜಿಲ್ಲಾ ಚಿಂಚೋಳಿ ತಾಲೂಕಿನಲ್ಲಿ ಕೋಡ್ಲಿ ತಾಂಡಾ ಅಂತಾ ಒಂದು ಸಣ್ಣಗ್ರಾಮ. 1989 ಇರ್ಬೇಕು. ಅವಾಗ ವೀರೇಂದ್ರ ಪಾಟೀಲರು ಸಿ.ಎಂ.ಆಗಿದ್ರು. ಇದೇ ಜಿಲ್ಲೆಯವರು ಅವರು. ಆ ಗ್ರಾಮದ ಬಗರ್ ಹುಕುಂ ಸಾಗುವಳಿದಾರರ ಪ್ರಶ್ನೆ ಎತ್ತಿಕೊಂಡಿದ್ವಿ ಹೋರಾಟಕ್ಕ. ಆ ಗ್ರಾಮದ ಅರವತ್ತು ಜನರಿಗೆ ಪಾಣಿಯೊಳಗ ಅವರ ಹೆಸರಿದ್ವು. ಆದರೆ ಭೂಮಿ ಸಿಕ್ಕಿರಲಿಲ್ಲ. ನಮಗ ಆ ವಿಷಯ ತಿಳಿದು ಹೋರಾಟ ರೂಪಿಸಿ ನಾನೂರು-ಐನೂರು ಜನರನ್ನ ತಗಂಡು ಹೊಂಟ್ವಿ, ಭೂಮಿ ಬಡವ್ರಿಗೆ ಕೊಡಿಸ್ಬೇಕು ಅಂತಾ. ಆದ್ರ ಪೊಲೀಸರು, ತಹಸೀಲ್ದಾರ್ರು ಆ ಭೂಮಿ ಬಿಡಿಸಿಕೊಡ್ತೀವಿ ಅಂತಾ ಭರವಸೆ ಕೊಟ್ರು. ಹಂಗಾಗಿ ನಾವೂ ಒಪ್ಪಿದ್ವಿ. ಆ ನಂತರ ಆ ಮಂದಿಗೆ ಲೋನು, ಕೈಗಡ, ಇನ್ನೊಂದು, ಮತ್ತೊಂದು ಕೊಟ್ಟು ಭೂಮಿನ್ನ ಮಾತ್ರ ಕೇಳಬ್ಯಾಡ್ರಿ ಅಂತಾ ಬಿಗಿ ಮಾಡಿದ್ರು. ಆ ತಾಂಡಾದಾಗ ವೀರೇಂದ್ರ ಪಾಟೀಲರ ಬೆಂಬಲಿಗರಾ ಭಾಳಾ ಜನ. ಹಂಗಾಗಿ ಭರವಸೆ ಕೊಟ್ಟು ಹೋರಾಟಾನೂ ನಿಲ್ಲಿಸಿದ್ರು, ಭೂಮೀನೂ ಕೊಡ್ಲಿಲ್ಲ. ಮುಂದೇನು ಮಾಡ್ಬೇಕಂತಾ ಚರ್ಚೆ ಮಾಡಾಕ ಆ ತಾಂಡಕ್ಕ ಹೋಗಿ ಮಾತಾಡ್ತಾ ಕುಂತಾಗ, ಅವರ ಕಡೆಯವ್ರು ಕಲ್ಲು ಎತ್ತಿಹಾಕ್ಲಿಕ್ಕೆ ಬಂದಿದ್ದು.

–  ಆ ಘಟನೆಯ ನಂತರ ಹೋರಾಟ ಮತ್ತೆ ಯಾವ ತಿರುವು ಪಡೆಯಿತು?

ಮಾನ್ಪಡೆ: ಇಲ್ರೀ, ವೀರೇಂದ್ರ ಪಾಟೀಲನಂಥವ್ರು ಮುಖ್ಯಮಂತ್ರಿಯಾದ್ರೂ ಅವರು ಬಡವರ ಪರ ನಿಲ್ಲಲಿಲ್ಲ. ಉಳ್ಳವರ ಪರಾ ನಿಂತ್ರು. ಅಷ್ಟಾಅಲ್ಲ, ಮುಂದ ಹೋರಾಟ ಮಾಡ್ಬೇಕು ಅಂತಿದ್ದ ಆ ಗುಂಪನ್ನೂ ಒಡದಾಕಿದ್ರು, ಅವ್ರ ಕಡಿಯವ್ರು.

– ಕಡೀಗೆ ಅವರಿಗೆ ಭೂಮಿಯಾದ್ರೂ ಸಿಗ್ತೋ ಇಲ್ವೋ?

ಮಾನ್ಪಡೆ: ಎಲ್ರೀ? ಇವತ್ತಿಗೂ ಆ ಬಡವ್ರಿಗೆ ಭೂಮಿ ಸಿಕ್ಕಿಲ್ಲ.” ಕೊಡಲಿ ತಾಂಡಾದ ರೈತರಿಗೆ ಭೂಮಿ ಕೊಡಿಸೋದಿಕ್ಕೆ ಅಗಲಿಲ್ಲ, ನಿಜ. ಆದರೆ ಆ ವಿಫಲತೆಯನ್ನೇ ಸವಾಲಾಗಿ ಸ್ವೀಕರಿಸಿ ನಂತರ ರಾಜ್ಯಾದ್ಯಂತ ಬಗರ್ ಹುಕುಂ ಸಾಗುವಳಿದಾರರ ಭೂಮಿಯ ಹಕ್ಕಿನ ಹೋರಾಟವನ್ನು ಇನ್ನಷ್ಟು ಪ್ರಬಲವಾಗಿ ಮುನ್ನಡೆಸುವಂತೆ ಆ ಘಟನೆ ಪ್ರೇರೇಪಿಸಿತು. ಅಂತಹ ಹೋರಾಟದ ಫಲವಾಗಿ ಹತ್ತಾರು ಸಾವಿರ ರೈತರನ್ನು ಭೂಮಿಯಿಂದ ಒಕ್ಕಲೆಬ್ಬಿಸದಂತೆ ತಡೆಯುವಲ್ಲಿ ಸಫಲ ಆದ್ವಿ.

– ತೊಗರಿ ಬೆಳೆಗಾರರ ವಿಷಯದಲ್ಲಿ ಏನನ್ನು ಮಾಡಲು ಸಾಧ್ಯವಾಯ್ತು?

ಮಾನ್ಪಡೆ: ತೊಗರಿ ಬೆಳೆವ ರೈತರ ಸಮಸ್ಯೆಗಳ ಪರಿಹಾರಕ್ಕೆ ಮಾಡಿದ ಹೋರಾಟಗಳಿಗೆ ಲೆಕ್ಕವೇ ಇಲ್ಲ. 1988ರಲ್ಲಿ ಕರ್ನಾಟಕ ಪ್ರಾಂತ ರೈತಸಂಘದಿಂದ ರಾಜ್ಯ ಮಟ್ಟದ ತೊಗರಿ ಬೆಳೆಗಾರರ ಸಮಾವೇಶವನ್ನು ಸಂಘಟಿಸಿದ್ವಿ. ಈ ಬಗೆಯ ನಿರಂತರ, ಸ್ಥಿರ ಹೋರಾಟಗಳ ಫಲಿತವಾಗಿಯೇ ರಾಜ್ಯಮಟ್ಟದಲ್ಲಿ ತೊಗರಿ ಬೆಳೆಗಾರರ ಮಂಡಳಿಯನ್ನು ಸರಕಾರ ರಚಿಸಲು ಸಾಧ್ಯವಾಯ್ತು. 

ಮಾರುಕಟ್ಟೆ ಸಂಬಂಧ ದೋಷಗಳ ನಿವಾರಣೆಗೆ ಮಧ್ಯಪ್ರವೇಶಿಸಲು, ಬೆಲೆ ನಿಗದಿ ಸಂಬಂಧಿ ನೀತಿರೂಪಿಸಲು, ತೊಗರಿ ರಫ್ತಿಗೆ ಸುಂಕ ಹೆಚ್ಚಿಸಲು ಮೊದಲಾದ ಬೇಡಿಕೆಗಳು ಇನ್ನೂ ಈಡೇರಿಲ್ಲ, ಅಂತೆಯೇ ಈ ಬಗೆಯ ನಿರಂತರ ಹೋರಾಟಗಳನ್ನು ರೂಪಿಸಿ ಕೃಷಿಕ ವರ್ಗಕ್ಕೆ ಸ್ಪಂದಿಸಿದರೂ ನಮಗೆ ಇದೊಂದು ರಾಜಕೀಯ ಬೇಸ್ ಆಗ್ಲಿಲ್ಲ, ಆದರೆ ಒಂದಂತೂ ನಿಜ, ತೊಗರಿ ಬೆಳೆಗಾರನ್ನು ಒಂದು ನಿರ್ದಿಷ್ಟ ರಾಜಕೀಯ ವೇದಿಕೆಗೆ ತರಲಾಗಿಲ್ಲವಾದರೂ ರೈತ ಸಮೂಹದಲ್ಲಿ ಹೋರಾಟಪ್ರಜ್ಞೆ ಮೂಡಿಸುವಲ್ಲಿ ಇದರಿಂದ ಸಾಧ್ಯವಾಗಿದೆ. ಈ ಭಾಗದ ತೊಗರಿ ಉತ್ಪಾದನಾ ರಂಗವೇ ವ್ಯಾಪಾರಸ್ಥರ, ದಲ್ಲಾಳಿಗಳ ಹಿಡಿತದಲ್ಲಿದೆ. ಈ ವ್ಯಾಪಾರಿ ಆರ್ಥಿಕತೆಯು ತನ್ನ ಬಂಡವಾಳದ ಬಲದಿಂದ ಸ್ಥಳೀಯ ರಾಜಕಾರಣವನ್ನು ನಿರ್ಧರಿಸುತ್ತಿದೆ. ಶ್ರೀಮಂತ, ಜಮೀಂದಾರರಿಗೆ ಬದಲಾಗಿ ರೈತರಿಗೆ ಬ್ಯಾಂಕುಗಳು ಸಾಲಕೊಡಬೇಕೆಂದು ಒತ್ತಾಯಿಸಬೇಕಾಯಿತು. ರೈತರಿಗೆ ತಲಾ 10ಸಾವಿರದಂತೆ ಸಾಲ ನೀಡುವಂತೆ ಹೋರಾಟ ಮಾಡಿದ್ದರಿಂದಲೇ ಲಕ್ಷಾಂತರ ರೈತರಿಗೆ ಸಾಲ ಕೊಡಿಸಲು ಸಾದ್ಯವಾಯಿತು. ನಗದು ಯೋಜನೆ ವಿಸ್ತರಿಸಲು ಸಾಧ್ಯವಾಯ್ತು. ಮೊದಲಿಗೆ, ಸಾಲ ನೀಡಲು ನಿರಾಕರಿಸಿದ ಬ್ಯಾಂಕುಗಳೇ ಬಳಿಕ ಸಾಲಮೇಳಗಳನ್ನು ಮಾಡುವಂತಾಯ್ತು. ಸಾಲಮೇಳದಲ್ಲಿ ಸಾಲ ಪಡೆಯಲು ನಿರೀಕ್ಷೆಗೂ ಮೀರಿ ರೈತರು ಬಂದಿದ್ದರಿಂದ ನಿಯಂತ್ರಿಸಲು ಸಾದ್ಯವಾಗದೇ ಲಾಠಿಚಾರ್ಜ್ ಮಾಡೋ ಪರಿಸ್ಥಿತಿ ಬಂತು. ಗುಲ್ಬರ್ಗಾ ಜಿಲ್ಲೆಯಲ್ಲಿಯೇ 4ಲಕ್ಷ ರೈತರಿದ್ದು ಅವರ ಪೈಕಿ 1ಲಕ್ಷಕ್ಕೂ ಹೆಚ್ಚು ಬೆಳೆಗಾರರಿಗೆ ಸಾಲ ಕೊಡಿಸಲು ಸಾದ್ಯವಾಗಿದೆ. ಆದರೆ ಈ ರೈತವರ್ಗವನ್ನು ರಾಜಕೀಯ ಶಕ್ತಿಯಾಗಿ ಬೆಳೆಸೋಕ್ಕಾಗ್ಲಿಲ್ಲ, ಅದು ನಮ್ಮ ದೌರ್ಬಲ್ಯ.

–  ನೀರಾವರಿ ರೈತರ ಪರವಾಗಿ ಅಥವಾ ರೈತರಿಗೆ ನೀರಾವರಿ ಸೌಲಭ್ಯಕ್ಕಾಗಿ ಕ.ಪ್ರಾಂ.ರೈ.ಸಂಘದ ಅನುಭವವೇನು?

ಮಾನ್ಪಡೆ: ರೈತರು ಕೃಷ್ಣಾ ಮೇಲ್ದಂಡೆ ಯೋಜನೆಯ ಜಾರಿಗಾಗಿ ಮಾಡಿದ ಹೋರಾಟದ ಫಲವಾಗಿಯೇ ಕೃಷ್ಣಾ ಜಲಭಾಗ್ಯ ನಿಗಮ ರಚನೆಯಾದದ್ದನ್ನು ನಿರಾಕರಿಸುವಂತಿಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಜೀವರ್ಗಿ ಮತ್ತು ಷಹಪುರಗಳಿಗೆ ನೀರಾವರಿ ಕಾಲುವೆಗಳನ್ನು ವಿಸ್ತರಿಸುವಂತೆ ನಾವು ಆಗ್ರಹಿಸಿದ್ವಿ. ಈ ಬೇಡಿಕೆ ಈಡೇರಿಸಿಲು ಸರಕಾರದಲ್ಲಿ ಹಣ ಇಲ್ಲದ್ದರಿಂದ ವಿಶ್ವಬ್ಯಾಂಕ್ನಿಂದ ಸಾಲ ಪಡೆಯಬೇಕೆಂದು ಸರಕಾರ ಹೇಳಿದಾಗ ಕೆ.ಪಿ.ಆರ್.ಎಸ್, ಸಂಘಟನೆಯು, ಸರಕಾರವು ವಿಶ್ವಬ್ಯಾಂಕ್ನಿಂದ  ಸಾಲ ಪಡೆಯುವುದನ್ನು ವಿರೋಧಿಸಿ, ರೈತ ಸಮಾವೇಶವನ್ನೂ ಮಾಡಲಾಯಿತು.

–  ರೈತ ಚಳುವಳಿ ತೀವ್ರ ಸಂಘರ್ಷದ ಸ್ಥಿತಿ ತಲುಪಿದ ಸಂದರ್ಭ ಯಾವುದಾದರೂ ಇದೆಯೇ?

ಮಾನ್ಪಡೆ: ಕೃಷ್ಣಾ ಮೇಲ್ದಂಡೆ ಯೋಜನೆ ಜಾರಿಗಾಗಿ ಯಾದಗಿರಿ, ರಾಯಚೂರು, ಗುಲ್ಬರ್ಗಾ ಈ ಮೂರು ಜಿಲ್ಲೆಗಳ ಜನ ಬಹುಸಂಖ್ಯೆಯಲ್ಲಿ ನೆರೆಯುತ್ತಲೇ ನಿಯಂತ್ರಣ ತಪ್ಪಿದ ಪೊಲೀಸರು ಗೋಲಿಬಾರ್ ನಡೆಸಿದ್ರು. ಇದರಿಂದ ರೊಚ್ಚಿಗೆದ್ದ ಜನ ಇದಕ್ಕೆ ಕಾರಣನಾದ ಇನಸ್ಪೆಕ್ಟರನನ್ನೆ ಕೊಲೆ ಮಾಡುವಷ್ಟು ಆಕ್ರೋಶ ಗೊಂಡರು. ರೈತರ ಈ ಆಕ್ರೋಶವನ್ನು ನಿಯಂತ್ರಿಸುವ ಬದಲಾಗಿ ನನ್ನನ್ನೇ ಆ ಸಂದರ್ಭದಲ್ಲಿ ಬಂಧಿಸಲಾಯ್ತು. ಜಿಲ್ಲೆಯಲ್ಲಿ ಈ ಬಗೆಯಲ್ಲಿ ತೀವ್ರವಾದ ತ್ವೇಷಮಯ ಪರಿಸ್ಥಿತಿ ನಿಮಾಣಗೊಳ್ಳುತ್ತಲೇ ಕೆಂಡಾಮಂಡಲವಾಗಿ ಮುಖ್ಯಮಂತ್ರಿ ಧರ್ಮಸಿಂಗ್ “ರೋಡಿನ ಮ್ಯಾಲ ನಿಂತು ಕಿರಿಕಿರಿ ಮಾಡ್ತಿ. ಏನ್ಮಾಡ್ಬೇಕು ಹೇಳು? ವರ್ಡ್  ಬ್ಯಾಂಕ್ ನಿಂದ  ಲೋನ್ ತರಬ್ಯಾಡ್ರಿ ಅಂದ್ರ ಹೆಂಗ ಮಾಡಬೇಕು? ಎಂದು ಕೇಳುವಂತಾಯ್ತು.

ಅದಕ್ಕೆ ನಾನಂದೆ, “ಒಂದು ಕಾರ್ಪೋರೇಷನ್ ಮಾಡ್ರಿ, ಮಾರ್ಕೆಟ್ ದುಡ್ಡು ಎತ್ರಿ,  ಅದನ್ನ ಬಳಸ್ರೀ” ಅಂತಾ. ಹೀಗೆ ಹೇಳುವಾಗ ನನ್ನ ಕಣ್ಣೆದುರಿಗಿದ್ದ ಮಾದರಿ ಪಶ್ಚಿಮಬಂಗಾಳದ್ದು. ಅಲ್ಲಿ ಭಾಕ್ರೇಶ್ವರ ಥರ್ಮಲ್ ಪ್ಲಾಂಟನ್ನು, ಅಲ್ಲಿಯ ಸರಕಾರ ವಿಶ್ವಬ್ಯಾಂಕ್ ನೆರವನ್ನು ತಿರಸ್ಕರಿಸಿ, ಜನರಿಂದ ಸಾಲ ಪಡೆದ ಕೋಟ್ಯಾಂತರ ರೂ ಹಣದಿಂದ ಮಾಡಿಸಿತ್ತು. ಇಂತಹ ಸ್ಪಷ್ಟ ಕಣ್ಣೋಟದಿಂದ ಪರ್ಯಾಯ ಮಾದರಿಯನ್ನು ಕಣ್ಣೆದುರಿಗಿಟ್ಟುಕೊಂಡು ಮಾಡಿದ ಹೋರಾಟದ ಫಲವಾಗಿಯೇ ಕರ್ನಾಟಕ ಕೃಷ್ಣಾ ಜಲಭಾಗ್ಯ ನಿಗಮ ಎನ್ನುವುದು ನನ್ನ ಅಭಿಪ್ರಾಯ. ಕರ್ನಾಟಕ ಪ್ರಾಂತ ರೈತ ಸಂಘವು ಷಹಪುರ, ಭೀಮರಾಯನಗುಡಿ ಬೇಸ್ನಲ್ಲಿ ನಡೆಸಿದ ದಿಟ್ಟ ಹೋರಾಟದ ಪ್ರತಿಫಲ ಇದು. ನಾವು ಚರಿತ್ರೆ ಬರೀಲಿಲ್ಲ ಅಂದ ಕೂಡ್ಲೆ ಬೇರೆ ಯಾರೋ ಬರ್ಕೊಳ್ಳಾಕ್ಕ ಆಗಂಗಿಲ್ಲ. ನಮ್ಮ ಹೋರಾಟದ ಫಲವಾಗಿಯೇ ಕೃಷ್ಣಾ ಜಲಭಾಗ್ಯ ನಿಗಮ ಮಂಡಳಿ ರಚನೆಯಾಯ್ತು. ಈ ಮಂಡಲಿ ರಚನೆಯಾಗುತ್ತಲೇ 18{51d0c959441c8e0eef26c2196a69663ca39d84b255cc0a14db9dd347b066ef07} ಬಡ್ಡಿಯಂತೆ ಮಾರುಕಟ್ಟೆಯಲ್ಲಿ 15ಸಾವಿರ ಕೋಟಿ ರೂಪಾಯಿ ಹೂಡಿಕೆಯಾಗಿ ಆ ಹಣವನ್ನು ನೀರಾವರಿ ಯೋಜನೆ ಜಾರಿಗೊಳಿಸುವಲ್ಲಿ ಸರಕಾರ ಬಳಸಿಕೊಂಡಿತು. ಅಚ್ಚರಿ ಎನ್ನುವಂತೆ, ಆ ಬಳಿಕ ನಡೆದ ಚುನಾವಣೆಯಲ್ಲಿ ಧರ್ಮಸಿಂಗ್ ಸೋತರು!

 ಧರ್ಮಸಿಂಗ್ ಅವರಿಗೆ ನೀರಾವರಿ ಮಾಡಿಸಬೇಕೆಂಬ ಇಚ್ಛಾಶಕ್ತಿ ಇರಲಿಲ್ಲ. ಆದರೆ ನಮ್ಮ ಹೋರಾಟದ ಫಲವಾಗಿ ನೀರಾವರಿ ಯಾಯ್ತು. ನೀರಾವರಿ ಆದ್ರಿಂದ ರೈತರು ಬಡತನದಿಂದ ಮುಕ್ತರಾದರು. ಬಡತನ ಮುಕ್ತರಾದ್ದರಿಂದಲೇ ಧರ್ಮಸಿಂಗರನ್ನ ಸೋಲಿಸಲು ಸಾಧ್ಯವಾಯ್ತು. ಈ ಪ್ರದೇಶದ ಏಳಿಗೆಗೆ ಅನುಕೂಲ ಆಯ್ತು. ಇದರಿಂದ ಭೂಮಿಯನ್ನು ಹೊಂದಿದ ಕೃಷಿಕರಿಗೆ ನೀರಾವರಿಯಿಂದ ಲಾಭವಾಯ್ತೇ ಹೊರತು ಬಡವರಿಗೆ ಹೆಚ್ಚು ಅನುಕೂಲ ಆಗ್ಲಿಲ್ಲ. ಭೂ ರಹಿತ ಬಡವರಿಗೆ ಕೂಲಿ ಅವಕಾಶ ಹೆಚ್ಚಾಗಬಹುದಷ್ಟೇ. ಇಷ್ಟಾಗಿಯೂ ಭೂಮಿ, ನೀರಾವರಿ ಪ್ರಮಾಣ ಹೆಚ್ಚಾಗುವುದರಲ್ಲೇ ಕೃಷಿಕರ ಅಬಿವೃದ್ಧಿ ಇರುವುದು. ಹಾಗೆಂದೇ ಆಲಮಟ್ಟಿ ಆಣೆಕಟ್ಟು ಎತ್ತರಿಸಬೇಕೆಂದೂ ಆಲಮಟ್ಟಿಗೆ ಹೋಗಿ ಹಕ್ಕೊತ್ತಾಯ ಮಾಡಿದೆವು. ಇದಕ್ಕಾಗಿ ಗುಲ್ಬರ್ಗಾದಿಂದ ಆಲಮಟ್ಟಿವರೆಗೆ ಜಾಥಾ ಮಾಡಿದೆವು. ಹಿಪ್ಪರಿಗೆ ಬ್ಯಾರೇಜು ಕಟ್ಟಬೇಕೆಂದು, ಮುಳವಾಡ ಏತ ನೀರಾವರಿ ಯೋಜನೆ ಜಾರಿಯಾಗಬೇಕೆಂದು ತಿಂಗಳು ಎರಡು ತಿಂಗಳು ಸತ್ಯಾಗ್ರಹ ಹೂಡಿದೆವು.

–  ಕೃಷಿ ಸಂಬಂಧಿ ಉತ್ಪಾದನಾ ಕ್ಷೇತ್ರದ ಅಭಿವೃದ್ಧಿಯನ್ನು ಸಂಘಟನೆಯು ಮನಗಂಡಿತೇ?

ಮಾನ್ಪಡೆ: ಕೃಷಿ ಅವಲಂಬಿ ರೈತರ ಆರ್ಥಿಕತೆಯ ಸುಧಾರಣೆಗೆ ಗಮನಾರ್ಹ ಕೊಡುಗೆ ನೀಡಬಲ್ಲ ಕಿರುಉಧ್ಯಮ, ಹೈನುಗಾರಿಕೆ. ಇದನ್ನು ಮನಗಂಡು ಕರ್ನಾಟಕ ಪ್ರಾಂತ ರೈತ ಸಂಘವು, ಹಾಲು ಉತ್ಪಾದಕರನ್ನು  ಸಂಘಟಿಸುವ ಮೂಲಕ ಹಾಲಿನ ಬೆಲೆ ಕುಸಿತದ ವಿರುದ್ಧ, ಹಾಲಿನ ರಫ್ತಿನ ವಿರುದ್ಧ, ಮಾರುಕಟ್ಟೆ ವಿಸ್ತರಣೆಗಾಗಿ ಹೋರಾಟಗಳನ್ನು ರೂಪಿಸಿತು. ಹಾಲು ಉತ್ಪಾದಕರ ಹೋರಾಟದಲ್ಲಿ ಪೊಲೀಸ್ ಫೈರಿಂಗ್ ಕೂಡ ಆಯಿತು. ಸಾವಿರಾರು ಸಂಖ್ಯೆಯ ಎಮ್ಮೆಗಳನ್ನು ಕೆ.ಎಂ.ಎಫ್.ಒಳಗೆ ನುಗ್ಗಿಸಿದ್ದೆವು. ರೇಷ್ಮೆ ಬೆಳೆಗಾರರನ್ನು ರಾಜ್ಯಮಟ್ಟದಲ್ಲಿ ಸಂಘಟಿಸಿ, ರಾಷ್ಟ್ರಮಟ್ಟದಲ್ಲಿ ಹೋರಾಟಗಳನ್ನು ಮಾಡಲಾಯ್ತು. ರೇಷ್ಮೆ ಆಮದಿನಿಂದ ದೇಸಿ ರೇಷ್ಮೆ ಉತ್ಪಾದಕರ ಮೇಲೆ ದುಷ್ಪರಿಣಾಮವಾಗುವುದೆಂದು ಕೇಂದ್ರ ಸರಕಾರದ ಗಮನ ಸೆಳೆದು ರೇಷ್ಮೆ ಆಮದಿನ ಮೇಲೆ 15{51d0c959441c8e0eef26c2196a69663ca39d84b255cc0a14db9dd347b066ef07}ರಷ್ಟು ಆಮದು ಸುಂಕ ವಿಧಿಸುವ ನೀತಿ ರೂಪಿಸುವ ರಾಷ್ಟಮಟ್ಟದ ರೈತ ಹೋರಾಟಗಳ ಹಿಂದೆ ನಮ್ಮ ಸಂಘಟನೆಗಳು ಗಮನಾರ್ಹ ಪಾತ್ರ ವಹಿಸಿವೆ.  

–   ಗುಲ್ಬರ್ಗಾದ ಒಂದು ಗ್ರಾಮದಿಂದ ಮೂಡಿ ಬಂದ ನಾಯಕತ್ವ ರಾಷ್ಟ್ರಮಟ್ಟದಲ್ಲಿ ಬೆಳೆಯಿತೇನೋ ಸರಿ. ಆದರೆ ನಿಮ್ಮ ನಂತರದ ಎರಡನೇ ಪೀಳಿಗೆಯ ನಾಯಕತ್ವ ಹೊರಹೊಮ್ಮಿತೇ?

ಮಾನ್ಪಡೆ: ಇಷ್ಟೆಲ್ಲಾ ಮಾಡಲು ಸಾಧ್ಯವಾಗಿರುವುದೂ ನನ್ನೊಬ್ಬನಿಂದ ಅಲ್ಲ. ನನಗೆ ನೇತೃತ್ವ ನೀಡಿ ಮುನ್ನಡೆಸುತ್ತಿರುವ ಒಂದು ಸಂಘಟನೆಯಿಂದ. ನಾನು ಸಂಘಟನೆಯ ಒಬ್ಬ ಕಾರ್ಯಕರ್ತನಷ್ಟೆ. 

–   ಉತ್ತರ ಕರ್ನಾಟಕ ಎಂದರೆ ಊಳಿಗಮಾನ್ಯ ಧಣಿಗಳು ಎಂಬ ಅಭಿಪ್ರಾಯವಿದೆ. ಈ ಬಗೆಯ ಶಕ್ತಿಗಳನ್ನು ನೀವು ಎದುರಿಸಿದ ಅನುಭವವಿದೆಯೇ? 

ಮಾನ್ಪಡೆ: ವೆಂಕಟಪ್ಪ ನಾಯಕ ಸುರಪುರ ಪ್ರದೇಶದಲ್ಲಿ ದೊರೆ ಎಂದೇ ಕರೆಸಿಕೊಳ್ಳುವಂತಹ ಒಬ್ಬ ಧಣಿ, ರಾಜಕಾರಣಿ. ‘ರೈತಸಂಘ ಕಟ್ಟಲು ಯಾರಾದ್ರೂ ಬಂದ್ರೆ ಕಾಲು ಕಡಿದು ಬಾಯಾಗ ಕೊಡ್ತೀನಿ’ ಅಂತಿದ್ರಂತೆ. ಆ ಬೆದರಿಕೆಯನ್ನು ಸವಾಲಾಗಿ ಸ್ವೀಕರಿಸಿದ ನಾವು ‘ನೀವ್ಹೆಂಗ ಕಾಲ್ ಕಡೀತೀರೋ ನೋಡೇ ಬಿಡ್ತೀವಿ ನಾವು’ ಎಂದು ಷಹಪುರ, ಸುರಪುರಗಳಲ್ಲಿ ಸಂಘಟನೆ ಕಟ್ಟಲು ಮುಂದಾದ್ವಿ. ಆದರೆ ರೈತರು ಸಭೆ ಸೇರಬೇಕೆಂದರೂ ದೊರೆಗಳಿಗೆ ಕೇಳಿಯೇ ಮಾಡ್ಬೇಕು ಎನ್ನುವಂಥಾ ಪರಿಸ್ಥಿತಿಯಲ್ಲೂ ರೈತರಲ್ಲಿ ಧ್ಯೆರ್ಯ ತುಂಬಿ, ತಿಳುವಳಿಕೆ ನೀಡಿ ಸಂಘಟನೆ ಆರಂಭಿಸಿದ್ವಿ. ಮಾತ್ರವಲ್ಲ ಕಳಪೆ ಬಿತ್ತನೆ ಬೀಜದ ಹಗರಣವನ್ನು ಬಯಲಿಗೆಳೆದು ಅದರಲ್ಲಿ ಭಾಗಿಯಾದವರನ್ನು ಪತ್ತೆಹಚ್ಚಿ ಸುರಪುರ ಬಂದ್ ಮಾಡಿ ಪ್ರತಿಭಟನೆಯನ್ನೂ ಮಾಡಿದ್ವಿ. 

–  ನಿಮ್ಮ ಮೇಲೆ ಒಮ್ಮೆ ಪೊಲೀಸ್ ಹಲ್ಲೆಯಾಯಿತಲ್ಲ, ಅದರ ವಿವರಗಳೇನು?

ಮಾನ್ಪಡೆ: ಹೆಂಗಾಯ್ತಂದ್ರೆ, 2003ರ ಸುಮಾರಿಗೆ, ನಮ್ಜೊತೆ ಐದಾರು ಸಾವಿರ ಜನ. ಅದಾ ಸಂದರ್ಭ ಇಲ್ಲೊಬ್ಬ ರೌಡಿ ಇದ್ದ. ಅವಂಗೂ ಸರ್ಕಲ್ ಇನಸ್ಪೆಕ್ಟರ್ಗೂ ಕ್ಲ್ಯಾಶ್ ಆಗಿತ್ತು. ನಮ್ಮ ಜನ ಸೇರಿದ್ದ ಸಂದರ್ಭ ಬಳಸ್ಕೊಂಡು, ಆ ರೌಡಿ ತನ್ನ ಜನರನ್ನ ನುಗ್ಗಿಸಿ ಆ ಸರ್ಕಲ್ ಇನಸ್ಪೆಕ್ಟರನ್ನ ಹೊಡೆಸ್ದ. ಅವನ ಉದ್ದೇಶ, ರೈತರು ಹೊಡದಾರ ಅನ್ನೋಥರಾ ಆಗ್ಲೀ ಅಂತಾ ಇತ್ತು. ಹಾಗಾಗಿ ಗೂಂಡಾಗಳನ್ನು ಬಿಟ್ಟು ಹೊಡೆಸ್ದ. ಅ ಹೊಡೆತಕ್ಕ ಇನಸ್ಪೆಕ್ಟರ್ ತಲೀಗೆ ಪೆಟ್ಟು ಬಿತ್ತು. ತಲೆಗಾಯ ಅಯ್ತು.

ಅವತ್ತು ನಮ್ಮದು ಘೇರಾವ್ ಇತ್ತು. ನಮ್ಮ ಜನ ಗೆಸ್ಕಾಂಗೆ ನುಗ್ಗೋನ ನಡೀರಿ ಅಂತಾ ಹೊಂಟುಬಿಡ್ತು. ಅದು ನಮ್ಮ ಕೆ.ಪಿ.ಆರ್.ಎಸ್.ನ ರೈತರಂತಹ ಟ್ರೈನ್ಡ್ ಮಾಸ್ ಅಲ್ಲ. ಅವ್ರು ನಮ್ಮ ರೈತರಲ್ಲ. ‘ಪಂಪ್ಸೆಟ್ ಬಳಕೆದಾರರ ಸಂಘ’ ಅಂತಾ ಮಾಡಿದ್ವಿ ಆ ರೈತರು ಅವ್ರು. ಘೇರಾವೋ ಅಂತಾ ಇತ್ತಲ್ಲ. ನಾವು ನುಗ್ಗಾಕ ಹೋದ್ವಿ. ನನಗ ಪೊಲೀಸ್ರೂ ನೂಕಿದ್ರು. ಮಾನ್ಪಡೆಯವರಿಗೆ ಪೊಲೀಸ್ರು ಹೊಡೆದ್ರು ಅಂತಾ ಸುದ್ದಿ ಹಬ್ಬಿ ಬಿಟ್ತು. ಆ ಸುದ್ದಿ ಹರಡ್ತಿದ್ದಂಗೆ ಜನ ಕಲ್ಲು ತೂರಾಟ ಮಾಡಿದ್ರು. ಆಶ್ರುವಾಯು ಪ್ರಯೋಗ ಆಯ್ತು. ಪೊಲೀಸ್ರು ನನಗ ಹಿಡ್ಕಂಡು ಹೊಡೆದ್ರು. ‘ನೀನಾ ಹೇಳಿ ಇನಸ್ಪೆಕ್ಟರ್ನ ಹೊಡಿಸ್ದಿ. ಇದೆಲ್ಲಾ ನಿಂದಾ’ ಅಂತಾ. ಸಾಧಾರಣ ಹೊಡೆದ್ದದ್ದಲ್ಲ ನನಗ. ಸರೀಗೆ ಹೊಡೆದ್ರು. ಇಲ್ಲಿ ರೋಡಿನ ಮ್ಯಾಲ ಹೊಡೆದ್ರು, ಸ್ಟೇಶನ್ನಿನ್ಯಾಗೂ ಎಳ್ಕಂಡು ಹೋಗಿ ಭಾಳಾ ಹೊಡೆದ್ರು. ಮೈತುಂಬಾ ಗಾಯ ಆಗಿದ್ವು.

ಅವತ್ತು ಇಲ್ಲಿ ಖರ್ಗೆಯವರು ಇದ್ರು. ಖರ್ಗೆ ನಮ್ಹತ್ರ ಬರ್ಬೇಕು. ಅಂತಾ ಹಟ ಹಿಡಿದಿದ್ವಿ ನಾವು. ಅವ್ರು ಬರ್ಲಿಲ್ಲ. ಅವ್ರ ಅಳಿಯ ಡಿ.ಸಿ.ರಾಜಪ್ಪ ಅಂತಾ, ಪೊಲೀಸ್ ಅಧಿಕಾರಿ ಇದ್ರು. ಹಂಗಾಗಿ ಅವ್ರು ತಮ್ಮ ಅಳಿಯನಿಗೆ ಹೇಳಿ ಹೊಡೆಸಿದ್ರು ಅಂತಾ ಜನ ಮಾತಾಡಿಕೊಂಡ್ರು. ಆದ್ರ ನನಗ ಸ್ಪಷ್ಟ ಅನಿಸಿರಾದು ಆ ರೌಡಿ ಒಬ್ಬಾಂವ ಬಂದು ಇನಸ್ಪೆಕ್ಟರನಿಗೆ ಹೊಡೆದಿದ್ದರಿಂದ ಪರಿಸ್ಥಿತಿ ಉದ್ರಿಕ್ತಗೊಂಡು ನಮ್ಮ ಕೈ ತಪ್ತು. ಪೊಲೀಸರೂ ತಾಳ್ಮೆ ಕಳಕೊಂಡು ಹಂಗಾಯ್ತು ಅಂತಾ. ಆ ಘಟನೆ ನಡದು ಐದಾರು ಜನ ಅರೆಸ್ಟ್ ಆದ್ವಿ. ಅವತ್ತು. ಮರುದಿನಾನ ಸಹಜವಾಗಿ ಗುಲ್ಬರ್ಗಾ ಬಂದ್ ಆಯ್ತು.

–  ಚುನಾವಣಾ ರಾಜಕಾರಣದ ಅನುಭವವೇನು?

ಮಾನ್ಪಡೆ: ಉಪ ಆರೋಗ್ಯಕೇಂದ್ರದ ಬೇಸಿಕ್ ಹೆಲ್ತ್ ವರ್ಕರ್ ಆಗಿದ್ದ ನಾನು, ನೌಕರಿಗೆ 1986 ಡಿಸೆಂಬರ್ 4ರಂದು ರಾಜಿನಾಮೆ ನೀಡಿ, 1986 ಡಿಸೆಂಬರ್ 7ರಂದು ಜಿಲ್ಲಾ ಪಂಚಾಯತ್ ಸ್ಥಾನ ಸ್ಪರ್ಧಿಸಿ ನಾಮಪತ್ರ ಸಲ್ಲಿಸಿದ್ದು. 1983ರಿಂದಲೇ ಆ ಮತಕ್ಷೇತ್ರದಲ್ಲಿ ಸಂಘಟನೆ ಕೆಲಸ ಮಾಡಿದ್ದೆ. ಪರಿಣಾಮವಾಗಿ ಆ ಮತಕ್ಷೇತ್ರದ 20ಹಳ್ಳಿಗಳ ಪೈಕಿ 15ಹಳ್ಳಿಗಳಲ್ಲಿ ರೈತಸಂಘದ ಘಟಕಗಳಿದ್ದವು. ಆ ಕ್ಷೇತ್ರ ಪರಿಶಿಷ್ಟಜಾತಿಯ ಮೀಸಲು ಕ್ಷೇತ್ರವಾಗಿತ್ತು. ಚುನಾವಣೆಯಲ್ಲಿ ಗೆದ್ದು ಜಡ್.ಪಿ. ಮೆಂಬರ್ ಆದೆ. ನಾ ಗೆದ್ದ ಕೂಡ್ಲೆ ಊರತುಂಬಾ ಮೆರವಣಿಗೆ. ಹಳ್ಳಿ ಹಳ್ಯಾಗೆಲ್ಲ ಮೆರವಣಿಗೆ. ಕರ್ನಾಟಕದಲ್ಲೇ ಹೈಯೆಸ್ಟ್ ಲೀಡ್ನಲ್ಲಿ ಗೆದ್ದಿದ್ದೆ ಅಂತಾ ಪತ್ರಿಕೆಗಳು ಬರ್ದಿದ್ವು. 7877 ಮತಗಳ ಅಂತರವಿತ್ತು. ನನ್ನ ವಿರುದ್ಧ ಸ್ಪರ್ಧಿಸಿದ್ದ ಇಬ್ಬರೂ ತಲಾ ಮೂರು-ಮೂರು ಸಾವಿರ ಓಟು ತಗೊಂಡು ಠೇವಣಿ ಕಳ್ಕೊಂಡಿದ್ರು.

ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಕಾಂಗ್ರೆಸ್ ಮತ್ತು ಬಿ.ಜೆ.ಪಿ.ಗಳೆರಡೂ ಸಿ.ಪಿ.ಐ.ಎಂ ಪಕ್ಷದ ಈ ಅಭ್ಯರ್ಥಿಯ ಬೆಂಬಲ ಪಡೆಯಲು ಮುಂದಾದವು. ಸ್ವತ ಖರ್ಗೆಯವರೇ ಬೆಂಬಲ ಕೇಳಿದ್ರು. ಆದರೆ ಜನತಾದಳವನ್ನು ಬೆಂಬಲಿಸಿದೆ.

ಚುನಾವಣೆ ಮುಗಿದು ಜಿ.ಪಂ.ಸದಸ್ಯನಾಗಿ ಮೊದಲಬಾರಿ ಜಿ.ಪಂ.ಕಛೇರಿ ಪ್ರವೇಶಿಸುವ ಸಂದರ್ಭದಲ್ಲಿ, ತೆಳ್ಳನೆಯ, ಓಪನ್ ಷರ್ಟಿನ ಹುಡುಗ ನಾನು, ಜಿ.ಪಂ. ಸದಸ್ಯ ಇರಲಿಕ್ಕಿಲ್ಲ ಎಂದು ಪೊಲೀಸರು ಕಛೇರಿ ಒಳಕ್ಕೇ ಬಿಡಲಿಲ್ಲ. ಕೊನೆಗೆ ಯಾರೋ ಹೇಳಿದ ನಂತರ ಬಿಟ್ರು. ಅವತ್ತಾ ನಾನು ತೀರ್ಮಾನ ಮಾಡ್ದೆ, ಅವತ್ತಿನಿಂದ ಓಪನ್ ಷರ್ಟ್ ಬಿಟ್ಟೆ. ಬಿಳೀ ಬಟ್ಟೆ ಹಾಕ್ದೆ. ನನ್ನ ಡ್ರೆಸ್ ಚೇಂಜ್ ಆಯ್ತು.

– ಜಿ.ಪಂ ಸದಸ್ಯರಾಗಿ ಏನ್ ಮಾಡಿದ್ರಿ?

ಮಾನ್ಪಡೆ: ರಸ್ತೆ, ಕಟ್ಟಡ, ಕುಡಿಯುವ ನೀರು, ಇಂಥವೇ. ಹಾಸ್ಟೆಲ್, ಉರ್ದುಶಾಲೆ, ತಾಂಡಾಗಳಿಗೆ ಸರಕಾರಿಶಾಲೆ ಇವೆಲ್ಲಾ ಮಾಡಿಸಿದೆ. ಮಳೆ ಪರಿಹಾರವನ್ನು ನೀಡುವ ವಿಷಯದಲ್ಲಿ ಜಿ.ಪಂ.ನಲ್ಲಿ ನಡೆದ ಅವ್ಯವಹಾರವನ್ನು ಬಯಲಿ ಗೆಳೆದು ಸಿ.ಓ.ಡಿ. ತನಿಖೆಗೆ ನೀಡುವಂತಾದ್ದರಿಂದ ಆರೋಪಿಗಳ ಬಂಧನವಾಯ್ತು.

ನಮ್ಮ ಕ್ಷೇತ್ರದಲ್ಲಿ ಊರಿನ ದಲಿತರು ಜಮೀನು ಕೊಡಿಸ್ರೀ ಅಂದ್ರು. ಯಾರೂ ಇಲ್ಲದ ಮಠದ ಜಮೀನು ಎ.ಸಿ.ಯಿಂದ ದಲಿತರಿಗೆ ಕೊಡಿಸ್ದೆ. ಈ ವಿಷಯ ಸೆನ್ಸಿಟೈಜ್ ಆಗಿತ್ತು. ಅಷ್ಟೊತ್ತಿಗೆ ನನ್ನ ಜಡ್.ಪಿ. ಅವಧಿ ಮುಗೀತಾ ಬಂದಿತ್ತು.  ನಂತರ ಎಂ.ಎಲ್.ಎ ಎಲೆಕ್ಷನ್ಗೆ ನಾನು ಸ್ಪರ್ಧಿಸಿದಾಗ ಇದೇ ವಿಷಯ ಅಡ್ಡಪರಿಣಾಮ ಬೀರಿತು. ಜಂಗಮರು ಪ್ರಚಾರ ಮಾಡಿದ್ರು, ‘ಗೆದ್ದು ಬಂದ್ರೆ ಮಠದ ಜಮೀನು ಕಸ್ಕಂತಾನ’ ಅಂತಾ. ಅಲ್ಲೀ ತನಕ ನನ್ನ ಪರವಾಗಿದ್ದ ಲಿಂಗಾಯತ್ರು, ಈ ವಿಷಯ ಬಂದ ಕೂಡ್ಲೆ ನನ್ನಿಂದ ಹಿಂದಕ್ಕೆ ಸರಿದ್ರು.. ನನ್ನ ಸೋಲಿಗೆ ಈ ವಿಷಯ ಪ್ರಮುಖ ಕಾರಣ. ತ್ರಿಕೋನ ಸ್ಪರ್ಧೆ ನಡೆದು ಬರೀ 3ಸಾವಿರ ಓಟಿನಲ್ಲಿ ಸೋತೀನಿ. ಗೆದ್ದಿದ್ದು ಕಾಂಗ್ರೆಸ್ಸು.

89ರಲ್ಲಿ ನನಗೆ ನಿಲ್ಲು ಅಂತಾ ಜನ ಭಾಳಾ ಒತ್ತಾಯ ಮಾಡಿದ್ರು. ಆದ್ರ ನಮ್ಮ ಪಕ್ಷ ಆ ವರ್ಷ ಜೆ.ಡಿ.ಎಸ್ ಜೊತೆ ಚುನಾವಣಾ ಹೊಂದಾಣಿಕೆ ಮಾಡ್ಕೊಂಡಿತ್ತು. ಹಾಗಾಗಿ, ಹಾಗಾಗಿ ಗೆಲ್ಲಬಹುದಾಗಿದ್ದ 89ರಲ್ಲಿ ಸ್ಪರ್ಧಿಸಲಿಲ್ಲ. ಆದರೆ 94ರಲ್ಲಿ ಸ್ಪರ್ಧಿಸಿದೆ, ಗೆಲ್ಲಲಿಲ್ಲ. ಅದಕ್ಕೆ ಕಾರಣಗಳು ಇದ್ದವು. ಆ ಹೊತ್ತಿಗೆ ಜಿ.ಪಂ.ಅವಧಿ ಮುಗಿದು 3ವರ್ಷ ಆಗಿತ್ತು. ಅಷ್ಟೊತ್ತಿಗೆ ಹೋರಾಟಗಳ ಮೂಲಕ ಗುತ್ತಿಗೆ  ಮಾಫಿಯಾವನ್ನು ಎದಿರು ಹಾಕ್ಕೊಂಡೆ. ವಿರೋಧಿಗಳು ಹೆಚ್ಚಾಗಿದ್ದರು.

ಕಾನ್ಸ್ಟುಯೆನ್ಸಿ ಬೇಸ್ ಆಗಿ ನಾವು ಕೆಲಸ ಮಾಡಿದ್ರೆ ನಮಗೆ ಸೋಲಿಸೋದಕ್ಕೆ ಆಗ್ತಿರಲಿಲ್ಲ. ಆದ್ರೆ ನಾನು ಸಂಘಟನೆಯ ಜವಾಬ್ದಾರಿ ಹೆಚ್ಚಿಸಿಕೊಂಡು ರಾಜ್ಯದ ತುಂಬಾ ಓಡಾಡಬೇಕಿದ್ದರಿಂದ ಕ್ಷೇತ್ರಕ್ಕೇ ಸೀಮಿತವಾಗಿ ಹೆಚ್ಚಿನ ಲಕ್ಷ್ಯ ವಹಿಸಲಿಕ್ಕಾಗಲಿಲ್ಲ. ಚುನಾವಣಾ ಸಂದರ್ಭದಲ್ಲಿ ಜಾತಿ ಸಂಗತಿಯನ್ನು ನಾವು ಮೀರಕ್ಕಾಗಿಲ್ಲ. ನಾನು ಮೊದಲ ಸಲ ಸ್ಪರ್ಧಿಸಿದಾಗ ಗೆದ್ದಿದ್ರೆ ಸಾಕಿತ್ತು, ಮುಂದೆ ಐದು ಬಾರಿ ಎಂ.ಎಲ್.ಎಆಗಿರ್ತಿದ್ದೆ. ಹೋರಾಟಕ್ಕ ಎಷ್ಟು ಕಾನ್ಸಂಟ್ರೇಶನ್ ಮಾಡ್ತೀವಿ ಅಷ್ಟು   ಚುನಾವಣೆಗೆ ಕಾನ್ಸಂಟ್ರೇಶನ್ ಮಾಡ್ಲಿಕ್ಕೆ ಆಗ್ಲಿಲ್ಲ.

– ಎಷ್ಟು ಬಾರಿ ಜೈಲಿಗೆ ಹೋಗೀರಿ?, ಯಾವ್ಯಾವ ವಿಷಯಕ್ಕ?

ಮಾನ್ಪಡೆ: ಪ್ರಭುತ್ವ ವ್ಯವಸ್ಥೆಯನ್ನು ಎದುರಿಸಿ ಈ ತನಕ ಒಟ್ಟು 7 ಬಾರಿ ಜೈಲಿಗೆ ಹೋಗಿ ಬಂದೆ. ಪಂಪ್ಸೆಟ್ ಬಳಕೆದಾರರಿಗೆ ಸಂಬಂಧಿಸಿದಂತೆ ವಿಧ್ಯುತ್ ಇಲಾಖೆ ವಿರುದ್ಧ ನಡೆದ ಹೋರಾಟವೊಂದರಲ್ಲೇ 3ತಿಂಗಳು ಜೈಲಿನಲ್ಲಿದ್ದೆ. ಆ ಬಳಿಕದ ತೊಗರಿಬೆಳೆಗಾರರ ಬೇಡಿಕೆಗಳಿಗೆ ಕುರಿತಂತೆ ಒಂದು ತಿಂಗಳು ಜೈಲಿನಲ್ಲಿದ್ದೆ. ಗ್ಯಾಟ್ ವಿರೋಧಿ ಹೋರಾಟದಲ್ಲಿ 11ದಿನ, ಕನಿಷ್ಟಕೂಲಿಗೆ ಆಗ್ರಹಿಸಿ 15ದಿನ ಮತ್ತಿತರೆ ಸಂದರ್ಭಗಳಲ್ಲಿ ಜೈಲಿನಲ್ಲಿ ಕಳೆದ ದಿನಗಳನ್ನು ಒಟ್ಟು ಲೆಕ್ಕ ಹಾಕಿದರೆ 150 ದಿನಗಳಿಗೂ ಹೆಚ್ಚಾಗುತ್ತದೆ.

– ಕೊಲೆ ಬೆದರಿಕೆ ಅಂಥಾವು ಏನಾದ್ರೂ ಆಗಿರಬೇಕಲ್ಲಾ?

ಮಾನ್ಪಡೆ: ನಾನು, ‘ಎಂದೋ ಕೊಲೆಯಾಗಬೇಕಿತ್ತು’ ಎನ್ನುವವರೂ ಇದ್ದಾರೆ. ವಿಶೇಷವಾಗಿ ಮಾಧವರಾಯ ಧನ್ನೂರ ಕೊಲೆ ಸಂದರ್ಭದಲ್ಲಂತೂ ಯಾವ ಕ್ಷಣದಲ್ಲಾದರೂ ಮರಣಾಂತಿಕ ದಾಳಿ ನಡೆಯಬಹುದು ಅನ್ನೋ ಪರಿಸ್ಥಿತಿ ಇತ್ತು. ಗುಲ್ಬರ್ಗಾದಲ್ಲಿ ಸುಪಾರಿ ಕೊಲೆ ಪ್ರಕರಣಗಳು ನಡೀತಿದ್ವು. ಇಡೀ ಕರ್ನಾಟಕದಲ್ಲೇ ಗುಲ್ಬರ್ಗಾ ಹಾಟ್ಬೆಡ್ ಆಗಿದ್ದಂತಹ ಕಾಲ. ರಾಜಕಾರಣಿಗಳು ಗನ್ ಇಟ್ಕೊಂಡು ತಿರುಗುವಂಥಾ ದಿಗಳಿದ್ದವು. ಅಂತಹ ದಿನಗಳಲ್ಲೇ ವಿಠ್ಠಲ ಹೇರೂರ್ ಕೊಲೆಯಾದದ್ದು, ಎಂ.ವೈ.ಪಾಟೀಲ್ ಕೊಲೆಯಾದದ್ದು. ಅಂತಹ ಸಂದರ್ಭಗಳಲ್ಲಿ, ಪಾತಕ ಶಕ್ತಿಗಳನ್ನು ರಾಜಕೀಯವಾಗಿಯೂ ಎದುರಿಸಿ ದುರ್ಬಲಗೊಳಿಸಲು ಮತ್ತು ಕ್ರಿಮಿನಲ್ಗಳನ್ನು ಪ್ರಜಾಸತ್ತಾತ್ಮಕವಾಗಿ ದುರ್ಬಲಗೊಳಿಸಲು ರಾಜಕೀಯ ಹೋರಾಟ ಮಾಡಿದ್ವಿ. 

ಪೊಲೀಸರೇ ನನ್ನನ್ನು ಕೊಲ್ಲಿಸಬಹುದು ಎಂಬ ಬೆದರಿಕೆ ಇತ್ತು. ಗುತ್ತೇದಾರರ ಗುಂಡಾಗಿರಿ ನಮಗೆ ಬಲಿ ತಗೋಬಹುದು ಅನ್ಸಿತ್ತು. ಮಾಧೂರಾಯ ಧನ್ನೂರ ಕೊಲೆ ಆದಾಗ ಯಾವುದೇ ಕ್ಷಣ ನನ್ನ ಮೇಲೆ ಆಕ್ರಮಣ ಆಗಬಹುದು ಅನ್ಸಿತ್ತು. ಹೀಗೆ ಐದಾರು ವರ್ಷ ಬೆದರಿಕೆ ಇತ್ತು. ಆದ್ರೆ ಡೆಮಾಕ್ರೆಟಿಕ್ ವೇನಲ್ಲಿ ನಾವಿದ್ದಾಗ ನಮ್ಮ ಶತೃ ಕೂಡ ನಮ್ಮ ಮೇಲೆ ದಾಳಿ ಮಾಡಲು ಹಿಂಜರೀತಾನೆ. ಪ್ರಜಾಪ್ರಭುತ್ವದ ಕ್ರಮದಲ್ಲಿ ಹೋರಾಟ ಮಾಡೋ ವಿಧಾನ ಮತ್ತು ಜನರೇ ನಮ್ಮ ರಕ್ಷಣೆಗೆ ಇದ್ದ ಹಿನ್ನೆಲೆಯಲ್ಲಿ ನಾವು ಬದುಕುಳಿಯಲು ಸಾಧ್ಯವಾಯ್ತು. ಎಲ್ಲಿ ಹೋದ್ರೂ ಜನ ಜೊತೆಗಿರ್ತಿದ್ರು. ಕಾರ್ ಇರ್ಲಿಲ್ಲ. ಒಂದು ರಾಜಧೂತ್ ಸೈಕಲ್ ಮೊಟಾರ್ ಇತ್ತು. ದೌಜ್ಯನ್ಯವನ್ನೂ ಪ್ರಜಾಪ್ರಭುತ್ವದ ಚಳುವಳಿಯಿಂದಲೇ ಎದುರಿಸಬೇಕು. ಜನಾಭಿಪ್ರಾಯ ರೂಪಿಸಬೇಕು. ಹಾಗಾದಾಗ ಮಾತ್ರ ಅಂಥಾದ್ದನ್ನು ತಡೆಯೋಕೆ ಸಾಧ್ಯ.

ಸಂದರ್ಶಕರು – ಬಿ.ಪೀರ್ ಬಾಷ

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!